ಹೂವಿನ ಬುಟ್ಟಿಯ ಕನಸು

ಹೂವಿನ ಬುಟ್ಟಿಯ ಕನಸು

ಕುಳಿತು ಕಟ್ಟಿದ ಹೂವಿನ ಸ್ವಾದವಷ್ಟೇ ಆಕೆಗೆ, ಆ ಹೂ 
ಯಾರ ಗಂಡನ ಹೆಡತಿಯ ತುರುಬು ತುಂಬುವುದೋ ?

ಗಂಡ ಸತ್ತರೂ, ಅವನು ಇತ್ತ ನಾಲ್ಕಾಣೆ ನೆನಪು,
ಇನ್ನೊಂದೆರಡು ಬಡಕಲು ಶರೀರದ ಮಕ್ಕಳು,
ಇವಿಷ್ಟೇ ಅವಳ ಬದುಕಿನಲ್ಲಿ, ಅದೆಷ್ಟೋ ವರ್ಷಗಳಿಂದಾ,
ಆದರೂ ಅನ್ಯರ ಕಾಸಿನ ಕಡೆಗೆ ಕಣ್ಣೆತ್ತಿಯೂ ನೋಡದವಳು

ಮಳೆಯ ಆರ್ಭಟದಲ್ಲಿ, ತಾನು ನೆನೆದು, ಹೂ ಕೊಳೆಯಬಾರದೆಂದು
ಹೂವಿಗೆ ಕೊಡೆಯ ಹಿಡಿದು ಕಾದು ಕಾದು ಕಾಯುತ್ತಲೇ ಇರುವಾಗ 
ಬಂಡಿ ಎಳೆಯುವ ಬಂಡನೊಬ್ಬ ಕಾದ ಕಣ್ಣಿನಲಿ ನೋಡಿದರೆ,
ಕೆಂಪಾಗುವ ಆಕೆಯ ಕಣ್ಣಿನ ಪಾತಿವ್ರತ್ಯಕ್ಕೆ ಪತಿ ಸತ್ತಲ್ಲೇ ಕಣ್ಣೀರಿಟ್ಟ,

ಹೆತ್ತವಕೆ ತುತ್ತಿನ ಚೀಲ ತುಂಬಿಸಿ, ಶಾಲೆಗೆ ಕಳುಹಿಸುವ ಕನಸು ಕಾಣುತಾ 
ಜೋಪಡಿಯ ದೀಪದ ಕತ್ತಲಲ್ಲಿ, ಉಪವಾಸ ಮಲಗುವ ಆಕೆಯ 
ಮಡಿಲಿನ ಮಮತೆಗೆ, ಸಾಟಿ ಯಾವುದು? ಸರಿಯಾಗಿ ನಿಲ್ಲಲು ?

ಹೂವಿನ ಬುಟ್ಟಿಯೊಳಗೆ ಆಕೆಯ ಕನಸು ದಿನವೂ ಹುಟ್ಟುವುದು,
ಬಸ್ಸಿನ ಮುಂದಿನ ಗಾಜಿನಲ್ಲಿ, ಕಾಯುವುದು ಎಲ್ಲರನೂ ತೂಗುತ್ತಾ
ದೇವರ ಮುಖದ ಮೇಲೆ, ಆಕೆಯದೇ ಪವಿತ್ರ ಹೂ ಬಂಡಾರ 
ಆಕೆಯ ಕನಸನು ಕಾದಂಬರಿಯಾಗಿಸಿದರೆ, ಓದಬಲ್ಲನೇ ದೇವನು??

ನಿದ್ದೆ ಬರದ ರಾತ್ರಿಯಲಿ, ಕಳೆದ ಮಧುರ ಸ್ಮೃತಿಗಳು ಹೆಚ್ಚೆಂದರೆ 
ಎರಡೋ ಮೂರೋ, ಅದೇ ಗಂಡನ ಪುಂಡಾಟಿಕೆಯಿಂದಾ ಪುಟಿದದ್ದು 
ಮುಖ ಮುಚ್ಚಿ ಅಳುವಳೇ ಅವಳು? ಅಳು ತಿಳಿಯದು ಆಕೆಗೆ, 
ವಾಸ್ತವದ ನಿರ್ವಾತದಲಿ ದಿನವೂ ಬದುಕು ಕಟ್ಟುವುದಷ್ಟೇ ಆಕೆಗೆ ಸತ್ಯ,,,

ದೊಡ್ಡವರ ಮನೆಯ ಹೆಣ್ಣು ನಾಯೊಂದು, ಮರಿ ಜಾಸ್ತಿ ಹಾಕಿ, ಅವರು 
ಸಾಕಲಾಗದೆ ಬೀದಿಯಲಿ ಬಿಟ್ಟಾಗ, ಅವಕ್ಕೆ ವಣ ರೊಟ್ಟಿಯ ಮಮತೆ ಹರಿಸಿ,
ಸಾಕಿ ದೊಡ್ದದು ಮಾಡುವವಳು ಇವಳೇ, ಮತ್ತೆ ಯಾರೋ ಹಿಡಿದು ಕೊಲ್ಲುವವರೆಗೂ

ಒಂದು ಹೂವಿನ ಬುಟ್ಟಿಯಲಿ, ಅದೆಷ್ಟು ಕನಸುಗಳು ?
ಆದರೂ ಆಕೆ ಹೂ ಮುಡಿಯಲಾರಳು,,, ಎಲ್ಲರಿಗೂ ಸೌಭಾಗ್ಯ ಹರಿಸುವವಳೂ,,,,,

Comments

Submitted by naveengkn Fri, 06/20/2014 - 14:12

In reply to by kavinagaraj

ಹೌದು ಕವಿಗಳೇ,,, ಯಾರ್ಯಾರ ಕನಸು ಎಲ್ಲಿ ಅಡಗಿಹುದೋ,,,,,, ನೀವು ಹೇಳಿದಂತೆ, ಅದೇ ಬೆಂಬಲ,,, ಅದೇ ರಕ್ಷೆ,,,,,ಅದೇ ಬದುಕು ಕೂಡ,,,, ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೇ,,,,,, ಜೀ ಕೇ ನ‌,