ಆರುವ ದೀಪ ಮತ್ತೆ ಬೆಳಗಿದಾಗ...

ಆರುವ ದೀಪ ಮತ್ತೆ ಬೆಳಗಿದಾಗ...

ಈ ಜಯ ಅಂತಿಂಥ ಜಯ ಅಲ್ಲ. ಜೀವನದ ಅತಿ ದೊಡ್ಡ ಜಯ. ನಮ್ಮೆಲ್ಲರ ಮೆಚ್ಚಿನ ಮೈಕೆಲ್ ಶುಮಾಕರ್ ಕಳೆದ ಆರು ತಿಂಗಳುಗಳಿಂದ ನಡೆಸುತ್ತಿದ್ದ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಗೆಲುವು ಪಡೆದಿದ್ದಾರೆ. ಸದಾ ಸರ್ವದಾ ಲವಲವಿಕೆಯಿಂದಿರುವ ಕ್ರೀಡಾಪಟುವೊಬ್ಬ ಹೀಗೆ ನಿಶ್ಚೇಷ್ಟಿತನಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗುವ ಪ್ರಮೇಯವೇ ಒಂದು ಹಿಂಸೆ. ಅದೂ 6 ತಿಂಗಳುಗಳ ಕಾಲ ಅಂದ್ರೆ ಅದು ತಮಾಷೆಯಲ್ಲ. ನಮಗೆ, ಒಂದು ದಿನ, ಅಷ್ಟೇಕೆ ಕನಿಷ್ಠ ಅರ್ಧ ದಿನ ಆಸ್ಪತ್ರೆಯಲ್ಲಿ ಮಲಗುವ ಸಂದರ್ಭ ಬಂದರೆ ಹೇಗಿರುತ್ತೆ ಅಲ್ವಾ ? ಇದನ್ನೆಲ್ಲಾ ಯೋಚಿಸಿದರೆ ಶುಮಿ (ಮೈಕೆಲ್ ಶುಮಾಕರ್)ದು ಎಷ್ಟೊಂದು ದೊಡ್ಡ ಗೆಲುವು ಅಲ್ವಾ ? ಅವರಿಗೆ ಇದು ಪುನರ್ಜನ್ಮ. ಗಾಳಿಗೆ ಸಿಲುಕಿ, ಆರುವ, ಬೆಳಗುವ ಹೊಯ್ದಾಟದಲ್ಲಿದ್ದ ಹಣತೆಯೊಂದರ ದೀಪ, ಮತ್ತೆ ಪ್ರಜ್ವಲಿಸಿದಂತೆ ಆಗಿದೆ ಶುಮಾಕರ್ ಜೀವನ.

ಚಿಕ್ಕಂದಿನಿಂದಲೂ ಮೋಟರ್ ಸ್ಪೋರ್ಟ್ಸ್ ಕಡೆಗೆ ಆಕರ್ಷಿತರಾಗಿದ್ದ ತನ್ನ ನಾಲ್ಕನೆ ವಯಸ್ಸಿಗೇ ಕಾರು ಓಡಿಸುವ ಚಪಲ ಮೈಗೂಡಿಸಿಕೊಂಡಿದ್ದ. ಚಿಕ್ಕ  ವಯಸ್ಸಿನಲ್ಲೇ ಕಾರು ಓಡಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದ ಶುಮಿಗಾದರೋ ಆದಷ್ಟು ಬೇಗನೆ ರೇಸ್ ಟ್ರ್ಯಾಕ್ ಗೆ ಇಳಿಯಬೇಕು ಅನ್ನೋ ತವಕ. ಆದ್ರೆ ಜರ್ಮನಿಯಲ್ಲಿನ ಮೊಟಾರ್ ಸ್ಪೋರ್ಟ್ಸ್ ನಿಯಮಗಳ ಪ್ರಕಾರ ಈ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಕನಿಷ್ಠ 14 ವರ್ಷ ವಯಸ್ಸಾಗಿರಬೇಕಿತ್ತು. ಈ ಕಾರಣಕ್ಕಾಗಿಯೇ, ತನ್ನಲ್ಲಿದ್ದ ಎಲ್ಲ ಉತ್ಸಾಹವನ್ನು ಹಿಡಿದಿಟ್ಟುಕೊಂಡಿದ್ದ ಶುಮಿ, ರೇಸ್ ಪ್ರಪಂಚಕ್ಕೆ ಕಾಲಿಟ್ಟ ನಂತರ ಅದ್ಭುತ ಎನಿಸುವಂಥಾ ಸಾಧನೆಗಳನ್ನು ಮಾಡಿದ. ಇಡೀ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ. ಒಂದಲ್ಲ, ಎರಡಲ್ಲ... ಏಳು ಬಾರಿ (1994, 1995, 2000, 2001, 2002, 2003, 2004) ವಿಶ್ವ ಚಾಂಪಿಯನ್ ಆಗುವುದು ಸಣ್ಣ ಸಾಧನೆಯೇನಲ್ಲ. ಅದಕ್ಕಾಗಿಯೇ ಶುಮಿಗೆ ‘ಲೆಜೆಂಡ್’ ಅಂತ ಕರೆಯೋದು. ಆತ ‘ಲೆಜೆಂಡ್’ ಎಂಬ ಕಾರಣಕ್ಕಾಗಿಯೇ ಆತ ಆಸ್ಪತ್ರೆಯಲ್ಲಿದ್ದಾಗ ಇಡೀ ವಿಶ್ವದಲ್ಲಿನ ಆತನ ಅಭಿಮಾನಿಗಳು ಆತನಿಗಾಗಿ ಪ್ರಾರ್ಥಿಸಿದ್ದು. ಇಷ್ಟೊಂದು ಹರಕೆ, ಆಶೀರ್ವಾದ, ಪ್ರೀತಿಯ ಪ್ರಾರ್ಥನೆಗಳು ಕೊನೆಗೂ ಫಲ ನೀಡಿದವು. ಜೀವನ ಪೂರ್ತಿ ಕೊಮಾದಲ್ಲೇ ಇರಬಹುದು, ಅವರು ಬದುಕುಳಿಯುವ ಅವಕಾಶ ತೀರಾ ಕಡಿಮೆ ಎಂದಿದ್ದ ಫ್ರೆಂಚ್ ಆಸ್ಪತ್ರೆಯ ವೈದ್ಯರ ಮಾತನ್ನೂ ಮೀರಿ, ಶುಮಿ ಇಂದು ಬದುಕುಳಿದಿದ್ದಾರೆ.

ಶುಮಿ ಈ ವಿಷಯದಲ್ಲಿ ತುಂಬಾ ಅದೃಷ್ಟವಂತ. ಯಾಕೆಂದ್ರೆ , 1993ರಲ್ಲಿ ಬಾಲಿವುಡ್ ನಟಿ ದಿವ್ಯಾ ಭಾರತಿ ಹೀಗೆ ಕೋಮಾಗೆ ಜಾರಿದ್ದಾಗಲೂ ಆಕೆಯ ಆಭಿಮಾನಿಗಳು ಆಕೆಗಾಗಿ ಪ್ರಾರ್ಥಿಸಿದ್ದರು. ಆದರೆ, ಅದು ಫಲಿಸಿರಲಿಲ್ಲ. ಲೆಕ್ಕ ಹಾಕಿದರೆ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ಆದ್ರೆ ಶುಮಿ ವಿಚಾರದಲ್ಲಿ ಹಾಗಾಗಲಿಲ್ಲ್ಲಅನ್ನುವುದೊಂದೇ ಸಮಾಧಾನದ ಸಂಗತಿ.

ಶುಮಾಕರ್ ನ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.