ಬೆಟ್ಟದ ಚಿಟ್ಟೆಯ ಕನಸು
ಬೆಟ್ಟದ ಮೇಲಿನ ಚಿಟ್ಟೆಯ ಕನಸು
ಬಟ್ಟೆ ಹೊಲಿಯುವವಳ ಮಗಳಿಗೆ
ದಿನವೂ ತಾನು ಬೆಟ್ಟ ನೋಡುತಾ
ಹೊಲಿಯುವಳು, ದಾರವ ಪೋಣಿಸಿ
ಮುಂದೊಂದು ದಿನ ಬೆಟ್ಟದ ಎತ್ತರದಲ್ಲಿ
ಚಿಟ್ಟೆಯ ಹಿಡಿದು ಕುಳಿತರೆ, ಸಾರ್ಥಕ,,
ಬಣ್ಣ ಬಣ್ಣದ ಬಟ್ಟೆಯ ಮೇಲ್ಮೈ ಮೇಲೆ,
ಚಿಟ್ಟೆಯದೇ ಚಿತ್ತಾರ, ಕನಸಿನಲಿ,
ಆಕೆ ಬೆಳೆದಳು,ಜೊತೆಗೆ ಬೆಟ್ಟದ ಕನಸೂ
ಅದೊಂದು ಮುಂಜಾನೆ ಬಣ್ಣದ ಬಟ್ಟೆಯ
ಉದ್ದ ಕೂದಲಿನವನ ಜೊತೆ ಹಾರಿದಳು
ಬೆಟ್ಟಕ್ಕೆ, ಮನಸಲ್ಲೇ ಚಿಟ್ಟೆ ಕಾಣುತಾ.
ಸಂಜೆ
ಬೆಟ್ಟವೇರಿದ ಆಕೆಗೆ ಚಟ್ಟ ಏರಿದ ಅನುಭವ
ಬೆಟ್ಟದಲಿ ಬರಿಯ ಮನೆಗಳ ರಾಶಿ,
ಚಿಟ್ಟೆಗಿರಲಿ, ಹಾಕಿದ ಬಟ್ಟೆಗೂ ಜಾಗವಿಲ್ಲ.
ಕದಡಿತು ಮನ, ಮರುಗಿ ಮುದುಡಿತು
ಬರಿಯ ಜನ ಜಾತ್ರೆ, ಸುತ್ತಲೂ ಹಲವು
ಬಣ್ಣ ಬಣ್ಣದ ಮಾತಿನಲಿ, ಬಣ್ಣ ಕಟ್ಟಿ ರೋಡಿನಲ್ಲೂ
ನರ್ತಿಸುತಾ, ಬದುಕಿನ ಛಾಯೆಯನ್ನೇ
ಬದುಕೆಂದುಕೊಂಡ ಜನ, ಬದುಕುತ್ತಿದ್ದಾರೆ,
ತಾನು ಜೊತೆಗೆ ಬಂದ, ಬಣ್ಣದ ಬಟ್ಟೆಯವನೂ
ದಿನವೂ ಒಂದೊಂದು ಬಣ್ಣ ಕಟ್ಟುವವ, ಅಬ್ಬಾ
ಬಟ್ಟೆ ಹೊಲಿಯುವವಳ ಮಗಳು ಬೆಚ್ಚಿದಳು
ಬೆಟ್ಟವೆಂದರೆ ದೂರದಿಂದಾ ನುಣ್ಣಗೆ,
ಆಕೆಯ ಕೌತುಕದ ಕಣ್ಣು, ಸತ್ತಾಗಿತ್ತು ಹಳಸಿ
ಬೆಂದು ಹಿಂತಿರುಗಿ ಬಂದಳು, ಹೆತ್ತವಳೇ ಎನ್ನುತಾ!!
ಇನ್ನೆಲ್ಲಿ ಹೆತ್ತವಳು?? ಬಣ್ಣವಿರದ ಬಿಳಿ ಬೆಟ್ಟೆಯಲಿ
ಸುತ್ತಿಟ್ಟ ಹೆತ್ತವಳ ಶವ ಆಕೆಯನು ಸ್ವಾಗತಿಸಿತು,,,
Comments
ಉ: ಬೆಟ್ಟದ ಚಿಟ್ಟೆಯ ಕನಸು
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವುದು ನಿಜ. ಕವನದ ಅಂತ್ಯದ ರೀತಿ ಮಗಳ ಕನಸಿನ ಅಂತ್ಯ ಅಂದುಕೊಳ್ಳುವುದು ಕಷ್ಟ.
In reply to ಉ: ಬೆಟ್ಟದ ಚಿಟ್ಟೆಯ ಕನಸು by kavinagaraj
ಉ: ಬೆಟ್ಟದ ಚಿಟ್ಟೆಯ ಕನಸು
ನೀವು ಹೇಳಿದ್ದು ಸರಿ ಕವಿಗಳೇ, ಮನುಜನ ಕನಸಿಗೆ (ಆಸೆಗೆ) ಕೊನೆ ಎಲ್ಲಿದೆ ? ಪ್ರತಿಕ್ರಿಯೆಗೆ ಧನ್ಯವಾದಗಳು...