ಕಥೆ: ಪರಿಭ್ರಮಣ..(27)

ಕಥೆ: ಪರಿಭ್ರಮಣ..(27)

( ಪರಿಭ್ರಮಣ..26ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಆ ಮಾತಿಗೆ ಬದಲಾಡದೆ ತುಸು ಹೊತ್ತು ಮೌನವಾಗಿದ್ದ ಕುನ್. ಸೋವಿ, ' ವಿಚಿತ್ರವೆಂದರೆ ಕಸ್ಟಮರನಾದ ನನ್ನ ಬಳಿ ಎಲ್ಲಾ ಅದ್ಭುತವಾಗಿ, ಅಮೋಘವಾಗಿ ನಡೆಯುತ್ತಿದೆಯೆಂದು ತೋರಿಸಿಕೊಳ್ಳಬೇಕು.. ಬದಲಿಗೆ ನಾವು ದೋಷಗಳನ್ನು ಹುಡುಕಿ ಎತ್ತಿ ತೋರಿಸಲಿಲ್ಲವೆಂದು ನನ್ನನ್ನೆ ದೂರುತ್ತಿದ್ದಂತಿತ್ತು!' ಎಂದ ತುಸು ಅಚ್ಚರಿಗೊಂಡ ದನಿಯಲ್ಲಿ.

ಕುನ್. ಸೋವಿ ದಿನವಿಡಿ ಅವನದೇ ಆದ ಕಸ್ಟಮರರುಗಳ ಜತೆಗೆ ಹೆಣಗಾಡುವವ; ಆ ಗ್ರಾಹಕ - ವರ್ತಕ ಒಡನಾಟದ ಸೂಕ್ಷ್ಮಜ್ಞತೆಯನ್ನೆಲ್ಲ ಸಹಜವಾಗಿಯೆ ಅರೆದು ಕುಡಿದಿದ್ದವ.  ಹೀಗಾಗಿ ಪ್ರಭುವಿನ ನಡೆಯಲ್ಲಿನ ಅಸಹಜ ಭಾವ ಬಲು ಸುಲಭವಾಗಿಯೆ ಅವನ ಗಮನಕ್ಕೆ ಬಂದುಬಿಟ್ಟಿತ್ತು. ಆದರೂ ಅವನ ಅನಿಸಿಕೆಯನ್ನು ಕಡೆಗಣಿಸದಂತೆ ಸನ್ನಿವೇಶವನ್ನು ತಿಳಿಯಾಗಿಸಲು, 'ದೊಡ್ಡ ಮ್ಯಾನೇಜರರಾಗಿ ಪ್ರಾಜೆಕ್ಟಿನಲ್ಲಿ ಆಳದಲ್ಲಿ ಏನಾದರೂ ಸರಿಯಿಲ್ಲದ್ದನ್ನು ಕಂಡು ಹಿಡಿಯಲು ಆ ಟೆಕ್ನಿಕ್ ಬಳಸಿರಬಹುದೇನೊ.. ಯಾಕೆಂದರೆ ಅವರ ಪ್ರಾಜೆಕ್ಟ್ ಮ್ಯಾನೇಜರುಗಳು ಅವರಿಗೆ ಎಲ್ಲಾ ಸಂಗತಿಗಳನ್ನು ತಿಳಿಸಿರುತ್ತಾರೆ ಎಂಬ ಗ್ಯಾರಂಟಿಯಿರುವುದಿಲ್ಲವಲ್ಲಾ?' ಎಂದು ರಾಗವೆಳೆದವನನ್ನೆ  ತುಟಿಯಂಚಿನ ಕೊಂಕ ನಗುವಿನಲ್ಲೆ ದಿಟ್ಟಿಸುತ್ತ ಕುನ್. ಸೋವಿ ನುಡಿದಿದ್ದ, 'ನನಗೆ ಪೂರ್ತಿಯಾಗಿ ಮಾಹಿತಿಯಿರದಿದ್ದರೂ ಸಿಂಗಪುರದ ಪ್ರಾಜೆಕ್ಟಿನಲ್ಲಿ ಏನಾಯಿತೆಂದು ಕೇಳಿದ್ದೇನೆ.. ನಿನ್ನನ್ನು ಕಂಡರೆ ನಿನ್ನ ಮ್ಯಾನೇಜರನಿಗೆ ಸ್ವಲ್ಪ ಹಾಗೆಯೆ ಎಂದು ಗಾಳಿ ಸುದ್ದಿ ಬೇರೆ ಕೇಳಿದ್ದೆ.....' ಎಂದು ಅರ್ಧಕ್ಕೆ ನಿಲ್ಲಿಸಿ ಅರ್ಥಗರ್ಭಿತವಾಗಿ ಶ್ರೀನಾಥನತ್ತ ನೋಡಿದ್ದ. 

ಆ ಮಾತು ಕೇಳಿ ಶ್ರೀನಾಥನಿಗೆ ನಿಜಕ್ಕೂ ವಿಸ್ಮಯವಾಗಿತ್ತು, ಈ 'ಗಾಳಿ ಸುದ್ದಿ' ಇವನ ತನಕ ತಲುಪಿತ್ತಾದರೂ ಹೇಗೆ? ಎಂದು. ಬಾಯ್ಬಿಟ್ಟು ಕೇಳದಿದ್ದರೂ ಅವನ ಪ್ರಶ್ನೆಯನ್ನರಿತವನಂತೆ ಕುನ್. ಸೋವಿ ತಾನೆ ಮುಂದುವರೆಸುತ್ತ, 'ಇದು ನನಗೆ ಹೇಗೆ ಗೊತ್ತೆಂದು ಆಶ್ಚರ್ಯ ಬೇಡ.. ಪ್ರತಿ ವರುಷ ನಾವೆಲ್ಲ ರೀಜನಲ್ ವೇರ್ಹೌಸ್ ಮ್ಯಾನೇಜರುಗಳು ನಡೆಸುವ ವಾರ್ಷಿಕ ಸೆಮಿನಾರಿನಲ್ಲಿ ಪ್ರತಿ ದೇಶದಲ್ಲಿ ಆಗಿರುವ ಬದಲಾವಣೆ, ಪ್ರಗತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ... ಹಾಗೆ ಭೇಟಿಯಾದಾಗ ಡಿನ್ನರಿನಲ್ಲೊ ಡ್ರಿಂಕ್ಸಿನಲ್ಲೊ ಬೇರೆಲ್ಲ ಲಘು ವಿಷಯಗಳು ಅದರಲ್ಲೂ ಗಾಸಿಪ್ಸ್, ರೂಮರ್ಸ್ ಅನಧಿಕೃತವಾಗಿ ಚರ್ಚೆಯಾಗುವುದು ಸಹಜ...ಆ ರೀತಿಯ ಚರ್ಚೆಯಲ್ಲಿ ನಮ್ಮ ಸಿಂಗಪುರದ ವೇರ್ಹೌಸಿನ ಮ್ಯಾನೇಜರು ಪ್ರಾಜೆಕ್ಟ್ ಅನುಭವದ ಕೆಲವು 'ರೋಚಕ' ಕಥೆಗಳನ್ನು ಹಂಚಿಕೊಂಡಿದ್ದ.. ಆಗ ಈ ಕೆಲವು ಕಥೆಗಳು ಹೊರಗೆ ಬಂದಿತ್ತು.. ಆ ಹಿನ್ನಲೆ ಗೊತ್ತಿದ್ದೆ ಅವನ ಜತೆ ನಾನು ಸ್ವಲ್ಪ ಜೋರಾಗಿ ವರ್ತಿಸಿದ್ದು...'

ಬೇಕಿದ್ದೊ ಬೇಡದೆಯೊ ಕುನ್. ಸೋವಿಗೂ ಈ ಹಿನ್ನಲೆ ಗೊತ್ತಿದ್ದುದು ಸರಿಯೊ ತಪ್ಪೊ ಎಂದು ತಲೆ ಕೆಡಿಸಿಕೊಳ್ಳುವ ಬದಲು ಈ ಅವಕಾಶವನ್ನು ಬಳಸಿಕೊಂಡು ಕುನ್. ಸೋವಿಯ ಪೂರ್ಣ ಸಹಕಾರವನ್ನು ಪಡೆಯಲೆತ್ನಿಸುವುದು ಉಚಿತವೆನಿಸಿತ್ತು ಶ್ರೀನಾಥನಿಗೆ. ಆ ಆಲೋಚನೆ ಬರುತ್ತಿದ್ದ ಹಾಗೆಯೆ ಅದನ್ನು ಕಾರ್ಯಗತಗೊಳಿಸಲು ಪೀಠಿಕೆ ಹಾಕುವವನಂತೆ ಕುನ್ . ಸೋವಿಯನ್ನೆ ದಿಟ್ಟಿಸಿ ನೋಡುತ್ತ ನುಡಿದಿದ್ದ -

' ಕುನ್. ಸೋವಿ.. ನನಗೆ ಪ್ರಾಜೆಕ್ಟಿನಲ್ಲಿ ರಾಜಕೀಯ ಮಾಡಲು ಬರುವುದಿಲ್ಲ.. ನನಗೆ ಮುಖ್ಯ ಅಂದರೆ ಪ್ರಾಜೆಕ್ಟು ಚೆನ್ನಾಗಿ ಸಾಗಬೇಕು .. ಕಸ್ಟಮರರಿಗೆ ಎಲ್ಲಾ ಸುಸೂತ್ರವಾಗಿ ನಡೆದು ಸುಗಮವಾಗಿ ವ್ಯವಹಾರ ನಡೆಸಲು ಅನುಕೂಲವಾಗುವಂತಿರಬೇಕು...'

' ಅದು ನನಗೂ ಗೊತ್ತು..ಈ ಕೆಲವು ದಿನಗಳಲ್ಲಿ ನಾನೆ ಕಣ್ಣಾರೆ ಕಂಡೆನಲ್ಲಾ? ಅಬ್ಬಾ ! ಆ ಕಡೆಗಳಿಗೆ ಬದಲಾವಣೆ ಮಾಡದಿದ್ದರೆ ನಾವೀಗ ಹೀಗೆ ಕೂತು ಮಾತನಾಡಲು ಸಾಧ್ಯವಿತ್ತೆ?'

' ಆದರೆ ಆ ಫಾರಂಗಳ ಕಥೆಯ ಹಾಗೆ ಪ್ರಾಜೆಕ್ಟಿನ ಎಲ್ಲಾ ಹತೋಟಿ ನನ್ನ ಕೈಲಿರುವುದಿಲ್ಲ... ಉದಾಹರಣೆಗೆ ಸಿಸ್ಟಮ್ಮಿನ ನಿರಂತರ ಕೆಲಸ ಮಾಡುವಿಕೆ ಕಂಪ್ಯೂಟರ ಸರ್ವರಿನ ಸತತ ಓಡುವಿಕೆಯ ಮೇಲವಲಂಬಿಸಿರುತ್ತದೆ ... ಉದಾಹರಣೆಗೆ ಆ ಸರ್ವರಿಗೆ ಏನಾದರೂ ಆಗಿ ಸಿಸ್ಟಂ ಡೌನ್ ಆದರೆ ನಾನು ಪ್ರಾಜೆಕ್ಟಿನ ಪರಿಮಿತಿಯಲ್ಲಿ ಏನು ಮಾಡಲಾಗದು - ಸಿಂಗಪುರದಿಂದ ಅದನ್ನು ಸರಿಪಡಿಸಿ ಸಿಸ್ಟಂ ಅನ್ನು ಮತ್ತೆ ಒದಗಿಸುವತನಕ......'

' ಆಹಾ !..ನನಗೆ ಈ ಸರ್ವರ ಬಗೆ ಏನೂ ಗೊತ್ತಿರದಿದ್ದರೂ ಕೇಳಿದ್ದೇನೆ.. ಯಾಕೆಂದರೆ ಆಗಾಗ ನಮ್ಮ ಇ ಮೇಯ್ಲಿಗೆ ಏನಾದರೂ ತೊಂದರೆಯಾದಾಗ ಇ ಮೆಯಿಲ್ ಸರ್ವರ ಡೌನ್ ಎಂದು ಮೆಸೇಜು ಕಳಿಸುತ್ತಾರೆ.. '

' ಕರೆಕ್ಟ್.. ಇಲ್ಲಿ ಇ ಮೇಲ್ ಬದಲು ನಮ್ಮ ಸಿಸ್ಟಂ ಡೌನ್ ಆಗಬಹುದಾದ ಸಾಧ್ಯತೆಯನ್ನು ಉದಾಹರಣೆಯಾಗಿ ಬಳಸುತ್ತಿದ್ದೇವೆ ಅಷ್ಟೇ.. ಅದರಲ್ಲು ತಿಂಗಳ ಕೊನೆಯಲ್ಲಿ ಈ ತೊಂದರೆ ಸಂಭವಿಸಿದರಂತೂ ಇನ್ನು ದೊಡ್ಡ ಏಟೆ.... ಆ ಹೊತ್ತಲ್ಲೆ ಹೆಚ್ಚು ವರ್ಕ್ ಲೋಡಿರುವ ಕಾರಣ ಆ ಆಘಾತದ ಪರಿಣಾಮವೂ ತೀವ್ರವಾಗಿಯೆ ಇರುತ್ತದೆ... '

' ಹಾಗೇನಾದರೂ ಆಗಬಹುದೆಂದು ನಿನಗನುಮಾನವಿದೆಯೆ?' ಏನೋ ವಾಸನೆ ಹಿಡಿದವನಂತೆ ಚಕ್ಕನೆ ಕೇಳಿದ್ದ ಕುಂ. ಸೋವಿ.

' ಆಗುವುದೊ ಬಿಡುವುದೊ ಗೊತ್ತಿಲ್ಲ ... ಯಾರದೆ ಒಳಸಂಚಿರಲಿ, ಬಿಡಲಿ ಇದು ಸ್ವಾಭಾವಿಕವಾಗಿ  ಘಟಿಸುವ ಅಥವಾ ತಾನಾಗಿಯೆ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ' 

ಅವನ ಮಾತು ಕೇಳಿ ಚಿಂತಾಕ್ರಾಂತನಾಗಿ ತಲೆ ತಗ್ಗಿಸಿ ನುಡಿದಿದ್ದ ಕುನ್. ಸೋವಿ, ' ತಿಂಗಳ ಕೊನೆಯಲ್ಲೇನಾದರೂ ಸಿಸ್ಟಮ್ ಇಲ್ಲವೆಂದಾದರೆ ನಮಗೆ ಸಾಕಷ್ಟು ಹೊಡೆತ ಬೀಳುತ್ತದೆ.. ಅದರಲ್ಲೂ ಹೊಸ ಸಿಸ್ಟಮ್ಮಿನಲ್ಲಿ...'

' ಅಂದರೆ..?'

' ಹಳೆ ಸಿಸ್ಟಮ್ಮಿನಲ್ಲಿ ಎಲ್ಲಾ ಕೆಲಸ ಸಿಸ್ಟಮ್ಮಿನಲ್ಲೆ ಮಾಡುವ ಅಗತ್ಯವಿರಲಿಲ್ಲ.. ಸುಮಾರು ಕೆಲಸ ಸಿಸ್ಟಮ್ಮಿನಿಂದ ಹೊರಗೆ ಮಾಡಬೇಕಾಗಿತ್ತು..ಹೀಗಾಗಿ ಸಿಸ್ಟಮ್ ಡೌನ್ ಆದರೂ ಅಷ್ಟು ಹೊಡೆತ ಬೀಳುತ್ತಿರಲಿಲ್ಲ...ಆದರೆ ಹೊಸ ಪ್ರೊಸೆಸ್ಸಿನಲ್ಲಿ ಸಿಸ್ಟಮ್ಮಿರದಿದ್ದರೆ ಏನೂ ಮಾಡಲಾಗುವುದಿಲ್ಲ..'

ಆ ಮಾತಿನಿಂದ ಪೂರ್ತಿ ನಿರಾಶೆಯಾಗಿ ಖೇದದಿಂದ ಜೋಲು ಮೊರೆ ಹಾಕಿಕೊಂಡ ಶ್ರೀನಾಥನನ್ನೆ ತದೇಕವಾಗಿ ದಿಟ್ಟಿಸುತ್ತ, ' ಅದನ್ನು ನಿಭಾಯಿಸಲೊಂದು ದಾರಿ ಕಾಣಿಸದಿದ್ದರೆ, ಅಂತಹ ಸಂದರ್ಭದಲ್ಲಿ ಬಲು ದೊಡ್ಡ ತೊಡಕಿಗೆ ಸಿಕ್ಕಿಕೊಳ್ಳುವುದಂತೂ ಸತ್ಯ..'

' ನನಗೂ ಹಾಗೆ ಅನಿಸಿತು .. ಆದ ಕಾರಣವೆ ಹಾಗೇನಾದರೂ ನಡೆದಲ್ಲಿ ಏನು ಮಾಡಬೇಕೆಂದು ನಿನ್ನೊಡನೆ ಸಮಾಲೋಚಿಸಲೆಂದೆ ನಿನ್ನ ಬಳಿ ಬಂದಿದ್ದು...'

ಈಗ ತಲೆ ಕೆರೆದುಕೊಳ್ಳುವ ಸರದಿ ಕುನ್. ಸೋವಿಯದಾಗಿತ್ತು. ಹೊಸ ಸಿಸ್ಟಮ್ಮಿನಲ್ಲಿ ಎಲ್ಲವೂ ಅವನಿಗೂ ಹೊಸತು.. ಅದರಲ್ಲೇನಾದರೂ ವಿಶೇಷವಾದದ್ದನ್ನು ಮಾಡಬೇಕೆಂದರೆ ಶ್ರೀನಾಥನೆ ಏನಾದರೂ ಉಪಾಯ ಹೇಳಬೇಕಷ್ಟೆ ಹೊರತು ಅವನೇನೂ ಮಾಡಲು ಸಾಧ್ಯವಾಗದು....

' ನಾನೂ ಈ ಸಿಸ್ಟಮ್ಮಿಗೆ ಹೊಸಬ..ಇದರಲ್ಲೆ ಏನಾದರೂ ಮಾಡಬಹುದೆಂದು ನೀನು ಐಡಿಯಾ ಕೊಟ್ಟರೆ ನಾನದನ್ನು ಫಾಲೊ ಮಾಡಬಹುದಷ್ಟೆ...ನನಗಿನ್ನೂ ಅದರ ಹಿಡಿತ ಸಿಕ್ಕಿಲ್ಲ '

' ಕುನ್. ಸೋವಿ, ಎಲ್ಲೆಲ್ಲಿ ಏನೇನು ಅಡೆತಡೆ ಅಥವಾ ತೊಡಕು ಬರಬಹುದೆಂಬ ಒಂದು ಸ್ಥೂಲ ಕಲ್ಪನೆ ನನಗೂ ಇದೆ.. ಅದಕ್ಕೆಲ್ಲ ಏನು ಪರಿಹಾರ ಸಾಧ್ಯವೆಂದು ನಿನಗೆ ಹೇಳಿಕೊಡಲೂಬಹುದು - ಆದರೆ ಈ ಒಂದೆ ಒಂದು ಸಿಸ್ಟಂ ಡೌನಿನ ದೊಡ್ಡ ತೊಡಕೊಂದನ್ನು ಹೊರತಾಗಿಸಿ..'

' ನೀವೆಲ್ಲಾ ಈ ಪ್ರಾಜೆಕ್ಟಿಗೆ ಎಷ್ಟೊಂದು ಕಷ್ಟ ಪಡುತ್ತಿದ್ದೀರಿ ಎಂದು ನನಗೆ ಗೊತ್ತು...ನನ್ನ ಕಡೆಯಿಂದ ನಾನಂತೂ ಇಷ್ಟು ಗ್ಯಾರಂಟಿ ಕೊಡಬಲ್ಲೆ..ನನ್ನ ಕೈಲಾದ ಎಲ್ಲಾ ಸಹಾಯ ಮಾಡಲು ನಾನು ಸದಾ    ಸಿದ್ದ...ಏನು ಮಾಡಬೇಕೆಂದು ಮಾತ್ರ ನೀವುಗಳೆ ಹೇಳಬೇಕಷ್ಟೆ...'

'ನನಗಷ್ಟು ಭರವಸೆ ಕೊಟ್ಟರೆ ಸಾಕು...ಮಿಕ್ಕಿದ್ದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ...ಆದರೂ ಇದೊಂದು ಸಾಧ್ಯತೆಯ ಬಗ್ಗೆ ಮಾತ್ರ ಏನು ಮಾಡಬೇಕೊ ಇನ್ನು ಸ್ಪಷ್ಟವಾಗಿ ಗೊತ್ತಿಲ್ಲ...'

' ಏನು ಮಾಡಿದರೆ ಅದರ ತೀವ್ರತೆಯನ್ನು ಕುಗ್ಗಿಸಬಹುದೆಂದು ಏನಾದರೂ ಉಪಾಯ ಇದೆಯಾ?'

' ಉಪಾಯಾ ಎಂದರೆ ಸಿಸ್ಟಮ್ಮಿನ ಕಡೆಯಿಂದ ಬೇರೇನೂ ಇಲ್ಲ... ತೀರಾ ಸುಲಭ ಹಾಗೂ ಸೂಕ್ತ ದಾರಿ ಎಂದರೆ ಎರಡು ಮೂರು ದಿನಕ್ಕೆ ಮೊದಲೆ ಎಲ್ಲಾ ಇನ್ವಾಯ್ಸಿಂಗ್ ಮುಗಿಸಿಕೊಳ್ಳಲು ಸಾಧ್ಯವಾದರೆ ಕೊನೆಯಲ್ಲಿ ಸಿಸ್ಟಮ್ ಇರದಿದ್ದರೂ ಹೊಡೆತವೇನೂ ಬೀಳುವುದಿಲ್ಲ... ಆದರೆ ಆ ಸಾಧ್ಯತೆಯಂತೂ ಇಲ್ಲವಲ್ಲಾ? ಕೊನೆಯ ದಿನಗಳಲ್ಲಿ ತಾನೆ ಹೆಚ್ಚಿನ ವಹಿವಾಟು ನಡೆಯುವುದು...?' 

ಆ ಮಾತು ಕೇಳಿದ ಕುನ್. ಸೋವಿ ಸ್ವಲ್ಪ ಹೊತ್ತು ಮಾತಾಡದೆ ಏನೊ ಯೋಚಿಸುತ್ತ ಕುಳಿತುಬಿಟ್ಟ - ಯಾವುದೊ ಫೈಲು ತೆಗೆದಿಟ್ಟುಕೊಂಡು.. ಅದೆ ಹೊತ್ತಿಗೆ ಸೌರಭ್ ದೇವನೂ ಕಂಪ್ಯೂಟರಿನ ರೂಮಿನಿಂದ ವಾಪಸ್ಸು ಬಂದು ಪಕ್ಕದ ಸೀಟಿನಲ್ಲಿ ಆಸೀನನಾದ. ಅರೆ ಗಳಿಗೆಯ ನಂತರ ಫೈಲಿನಿಂದ ತಲೆಯೆತ್ತಿ ನುಡಿದಿದ್ದ ಕುನ್. ಸೋವಿ - ' ಬೇರೆ ತಿಂಗಳುಗಳಲ್ಲಾದರೆ ಇದು ಸಾಧ್ಯವಿತ್ತೊ ಇಲ್ಲವೊ ಗೊತ್ತಿಲ್ಲ.. ಆದರೆ ಈ ತಿಂಗಳಲ್ಲಿ ಒಂದು ಸಾಧ್ಯತೆ ಕಾಣುತ್ತಿದೆ.. ಆದರೆ ಅದು ಸಂಪೂರ್ಣ ಹಾಗು ಪರಿಪೂರ್ಣ ಪರಿಹಾರದ ದಾರಿಯಂತೆ ಕಾಣುತ್ತಿಲ್ಲ...'

ಅವನು ದಾರಿಯೊಂದಿದೆ ಎಂದಿದ್ದೆ ತಡ ತಟ್ಟನೆ ಏನೊ ಆಶಾಭಾವನೆಯೊಂದು ಉದಿಸಿದಂತಾಗಿ, 'ಅದಾವ ದಾರಿ?' ಎಂದ ಶ್ರೀನಾಥ ಅರೆ ಉತ್ಸಾಹದಿಂದ.

' ಹೊಸ ಸಿಸ್ಟಮ್ಮಿನಲ್ಲಿ ಈಗ ಕೆಲಸಗಳೆಲ್ಲ ಮೊದಲಿಗಿಂತ ವೇಗವಾಗಿ ಆಗುವ ಕಾರಣ ಮಾಮೂಲಿಗಿಂತ ಹೆಚ್ಚು ಇನ್ವಾಯ್ಸಿಂಗ್ ಮಾಡುತ್ತಿದ್ದೇವೆಂದು ಹೇಳಿದ್ದು ನೆನಪಿದೆಯೆ?'

' ಹೌದು ಮೊದಲಿನೆರಡು ವಾರದಲ್ಲು ಆ ಪ್ರಗತಿ ಈಗಾಗಲೆ ನೋಡಿದ್ದೇವಲ್ಲಾ?'

' ಅದನ್ನೆ ಈಗ ತಾನೆ ಪರಿಶೀಲಿಸುತ್ತಿದ್ದೆ.. ಇಲ್ಲಿಯ ತನಕ ಆಗಲೆ ಶೇಕಡ ಐವತ್ತು ಅರವತ್ತರ ಮಟ್ಟಕ್ಕೆ ಗುರಿ ತಲುಪಿಯಾಗಿದೆ..'

' ಆಹಾ....!'

' ಸ್ವಲ್ಪ ಮನಸು ಮಾಡಿದರೆ ಮಿಕ್ಕ ನಲ್ವತ್ತು-ಐವತ್ತು ಶೇಕಡ ವಹಿವಾಟಿನ ಬಹುಪಾಲನ್ನು ಈ ವಾರದಲ್ಲೆ ಮುಗಿಸಿಬಿಡಬಹುದು - ಬೇಕಿದ್ದರೆ ಓವರ್ ಟೈಮ್ ಕೂಡ ಹಾಕಿಕೊಂಡು..'

ವಾಹ್! ಅದೊಂದು ಅದ್ಭುತ ಯೋಚನೆ ಅನಿಸಿತು ಶ್ರೀನಾಥನಿಗೆ. ಸಿಸ್ಟಮ್ ಡೌನ್ ಆಗುವ ಮೊದಲೆ ಟರ್ನೋವರಿನ ಗುರಿ ತಲುಪಿಬಿಟ್ಟರೆ ಮ್ಯಾನೇಜ್ಮೆಂಟಿನ ಕಡೆಯಿಂದಂತೂ ತಕರಾರು ಬರುವುದಿಲ್ಲಾ...ತೊಡಕೇನೆ ಆದರೂ ಹೆಚ್ಚುವರಿ ವಹಿವಾಟಿನ ಗುರಿಗೆ ಏಟು ಬೀಳಬಹುದಷ್ಟೆ.. ಆದರಿದು ಸಾಧ್ಯವೇ? ಅದೂ ಹೊಸ ಸಿಸ್ಟಮ್ಮಿನ ಮೊದಲ ತಿಂಗಳಲ್ಲೆ ?  

' ಆದರೆ ಈ ಬಾರಿ ರೆಕಾರ್ಡ್ ಟರ್ನೋವರ್ ಮಾಡಬೇಕೆಂಬುದು ನನ್ನ ಗುರಿ ..ಅಂದರೆ ಕಡೆಯ ವಾರದಲ್ಲಿ ತಿಂಗಳ ಗುರಿಯ ಕನಿಷ್ಠ ಶೇಕಡ ಮೂವತ್ತರಷ್ಟಾದರೂ ಹೆಚ್ಚು ವಹಿವಾಟು ಆಗುವಂತೆ ನೋಡಿಕೊಳ್ಳಬೇಕು..'

' ಅರ್ಥವಾಯ್ತು ಕುನ್. ಸೋವಿ... ಅಂದರೆ ಆ ಕೊನೆಯ ವಾರದಲ್ಲೆ ಸಿಸ್ಟಮ್ ಡೌನ್ ಆದರೆ ಹೆಚ್ಚುವರಿ ಟರ್ನೋವರ್ ಸಾಧ್ಯವಾಗುವುದಿಲ್ಲ...'

' ಹೌದು ... ನಿಜ ಹೇಳಬೇಕೆಂದರೆ ಮೊದಲ ತಿಂಗಳೆ ದಾಖಲೆ ಟರ್ನೋವರ್ ಆದರೆ ಈ ಬಾರಿಯಾದರೂ ನನ್ನ  ಪ್ರಮೋಶನ್ನು ಆಗುವುದೆಂದು ಆಸೆ....'

ಅವನ ಆ ಗುರಿಯ ಧ್ಯೇಯದಲ್ಲಿ ಕೆರಿಯರಿನ್ನ ಪ್ರಶ್ನೆಯೂ ಅಡಗಿರುವುದು ಕಂಡು ನಿಜಕ್ಕೂ ಚಿಂತಾಕ್ರಾಂತನಾದ ಶ್ರೀನಾಥ.. ಆ ರೀತಿಯ ವೇರ್ಹೌಸ್ ಲಾಜಿಸ್ಟಿಕ್ಕಿನ ಕೆಲಸದ ವಾತಾವರಣದಲ್ಲಿ ಪ್ರಮೋಶನ್ನುಗಳು ಸಿಗುವುದು ತುಸು ತ್ರಾಸದಾಯಕವೆ.. ಭೌತಿಕವಾಗಿ ಕಠಿಣತರದ ಕೆಲಸವಾದರೂ ಕಂಪನಿಯ ಸ್ಥಾನಮಾನದ ದೃಷ್ಟಿಯಿಂದ ಹುಲುಸಾದ ಫಸಲು ತರುವಂತದ್ದಲ್ಲ. ಈ ರೀತಿಯ ವಿಶೇಷ ಪ್ರಾಜೆಕ್ಟಿನ ಸಂದರ್ಭಗಳಲ್ಲಿ ಏನಾದರೂ ಹೆಚ್ಚುಗಾರಿಕೆ ತೋರಿಸಿ ಮ್ಯಾನೇಜ್ಮೆಂಟಿಗೆ ಮೆಚ್ಚುಗೆಯಾಗುವಂತೆ ಶಹಭಾಸ್ ಗಿರಿ ಗಳಿಸಿದರೆ, ಅದರ ಫಲವಾಗಿ ಪ್ರಮೋಶನ್ನು ಸಿಗುವ ಸಾಧ್ಯತೆ ಹೆಚ್ಚು.. ತಮಗೆಲ್ಲ ಇಷ್ಟೊಂದು ಸಹಾಯ ಮಾಡಿದವನಿಗೆ ಅಷ್ಟಾದರೂ ಉಪಕಾರ ಮಾಡಲೆಬೇಕು.. ಆದರೆ ಕೊನೆಯ ವಾರದಲ್ಲಿ ಸಿಸ್ಟಮ್ ಡೌನ್ ಆದರೆ ಆ ಗುರಿ ಮುಟ್ಟಲು ಖಂಡಿತ ಸಾಧ್ಯವಾಗುವುದಿಲ್ಲ... ಏನು ಮಾಡುವುದು? ಎಂದು ಚಿಂತಿಸುತ್ತಲೆ ಸೌರಭ್ ದೇವನತ್ತ ಯಾವುದೆ ಉದ್ದೇಶವಿಲ್ಲದೆ ದಿಟ್ಟಿಸಿದ್ದ ಶ್ರೀನಾಥ..

ತನ್ನನ್ನು ಅಕಾರಣವಾಗಿಯಷ್ಟೆ ದಿಟ್ಟಿಸಿ ನೋಡುತ್ತಿರುವುದರ ಅರಿವಿದ್ದು, ತುಸು ಅನುಮಾನದ ದನಿಯಲ್ಲಿ ' ಸಾರ್..ಹೀಗೆ ಮಾಡಬಹುದೆ?' ಎಂದ..

ಅವನ ದನಿಯಲ್ಲಿ ಅನುಮಾನವಿದ್ದರೂ, ಐಡಿಯಾ ಬರುವುದೆಂದರೆ ಅದನ್ನು ತಡೆಯದೆ ಪರಾಮರ್ಶಿಸಿ ತೂಗಿ ನೋಡುವುದು ಶ್ರೀನಾಥನ ಸುಗುಣಗಳಲ್ಲಿ ಒಂದು. ಆ ಭಾವದಲ್ಲೆ ಅವನನ್ನು ಉತ್ತೇಜಿಸುತ್ತ, 'ಹೇಳು ಪರವಾಗಿಲ್ಲ..ಕೆಲವೊಮ್ಮೆ ನಮಗೆ ಹೊಳೆಯದ ಐಡಿಯಾಗಳು ನಿನಗೆ ಹೊಳೆಯಬಹುದು..ಅನುಮಾನಿಸದೆ ಹೇಳು ' ಎಂದು ಪ್ರೋತ್ಸಾಹಿಸಿದ..

' ಸಾರ್.. ಕೊನೆಯಲ್ಲಿ ಮಾಡುವ ಪ್ರಿಂಟಿಂಗೊಂದನ್ನು ಬಿಟ್ಟರೆ ಮಿಕ್ಕೆಲ್ಲಾ ಕೆಲಸವನ್ನು ಮೊದಲೆ ಮಾಡಿಟ್ಟುಕೊಳ್ಳುವ ಸಾಧ್ಯತೆ ಇದೆ ಸಿಸ್ಟಮ್ಮಿನಲ್ಲಿ..'

'ಅಂದರೆ...?'

' ನಮಗೆ ಹೇಗೂ ಈ ತಿಂಗಳಿಗೆ ಯಾವ ಆರ್ಡರುಗಳನ್ನು ಕಳಿಸಬೇಕೆಂದು ಚೆನ್ನಾಗಿ ಗೊತ್ತು...ಡೆಲಿವರಿ ಡೇಟ್ ಆಧಾರದ ಮೇಲೆ ಆ ಬೇಕಾದ ಎಲ್ಲಾ ಆರ್ಡರುಗಳ ಒಂದು ಲಿಸ್ಟ್ ತೆಗೆಯುವುದೇನೂ ಕಷ್ಟವಾಗುವುದಿಲ್ಲ..'

ಅವನ ಯೋಚನೆಯ ಜಾಡು ಮಸುಕಾಗಿ ಹೊಳೆದರೂ ಪೂರ್ತಿ ಗೊತ್ತಾಗದೆ, 'ಅದೇನೊ ನಿಜವೆ.. ಆದರೆ ಅದರಿಂದೇನು ಪ್ರಯೋಜನ?' ಎಂದು ಪ್ರಶ್ನಿಸಿದ..

' ಸಾರ್... ಈ ಒಂದು ಬಾರಿಗೆ ತುಸು ಪ್ರೊಸೆಸ್ ಅಡ್ಜೆಸ್ಟು ಮಾಡಿಕೊಂಡರೆ ಪರಿಸ್ಥಿತಿಯನ್ನು ಹೇಗೊ ನಿಭಾಯಿಸಬಹುದೆಂದು ಕಾಣುತ್ತದೆ.... ಸಾಮಾನ್ಯವಾಗಿ ಡೆಲಿವರಿ ಜೆನರೇಟ್ ಮಾಡಿದ ನಂತರ ಹೇಗೂ, ಬೇಕಾದ ಡಾಕ್ಯುಮೆಂಟುಗಳೆಲ್ಲ ಪ್ರಿಂಟಾಗಿ ಹೋಗುತ್ತವೆ...'

'ಹೌದು...?'

' ಈಗ ಪ್ರತಿ ದಿನ ಆಯಾ ದಿನದ ಡೆಲಿವರಿ ಮಾತ್ರ ಜೆನರೇಟ್ ಮಾಡುತ್ತಾರೆ... ಅದರ ಬದಲಿಗೆ..ಇಡೀ ತಿಂಗಳ ಕೊನೆಯ ತನಕ ಇರುವ ಎಲ್ಲಾ ಆರ್ಡರುಗಳ ಡೆಲಿವರಿಗಳನ್ನು ಒಂದೆ ಸಾರಿಗೆ ಜೆನರೇಟ್ ಮಾಡಿಬಿಟ್ಟರೆ...?'

ಒಂದರೆಗಳಿಗೆ ಅವಾಕ್ಕಾಗಿ ಅವನನ್ನೆ ನೋಡುತ್ತಾ ಕುಳಿತುಬಿಟ್ಟ ಶ್ರೀನಾಥ... ಅವನ ತರ್ಕದ ಹಾದಿಯಲ್ಲಿ ಹಾಗೆ ಮುಂದುವರೆಯುತ್ತ ಆಲೋಚಿಸುತ್ತಿತ್ತು ಅವನ ಒಳ ಮನಸ್ಸು.. ಹೀಗೆ ಒಂದೆ ಬಾರಿಗೆ ಪ್ರಿಂಟು ಹಾಕಿ ಇಟ್ಟುಕೊಂಡು ಬಿಟ್ಟಿದ್ದರೆ ಸಿಸ್ಟಮ್ ಇರಲಿ ಬಿಡಲಿ, ವೇರ್ಹೌಸಿನ ಪಿಕ್ಕಿಂಗ್, ಪ್ಯಾಕಿಂಗ್ ಇತ್ಯಾದಿ ಕೆಲಸಗಳಿಗೆ ಅಡೆತಡೆಯಾಗುವುದಿಲ್ಲ. ಪ್ರಿಂಟಾಗಿದ್ದನ್ನು ದಿನಾಂಕದನುಸಾರ ಜೋಡಿಸಿಟ್ಟುಕೊಂಡರೆ ಸರಿ. ಕೆಲವು ಕೇಸುಗಳಲ್ಲಿ ಸ್ಟಾಕು ಇರದಿದ್ದ ಕಡೆ ಸ್ವಲ್ಪ ತೊಡಕಾಗಬಹುದಷ್ಟೆ - ಅದನ್ನು ಹೇಗೊ ನಿಭಾಯಿಸಬಹುದು... ಮಿತಿ ಮೀರಿದ ಸಂದರ್ಭದಲ್ಲಿ ಆ ಡೆಲಿವರಿ ಕ್ಯಾನ್ಸಲ್ ಮಾಡಿದರೂ ಆಯ್ತು...ಹೀಗೆ ಮಾಡಿದರೆ ಸಿಸ್ಟಮ್ಮಿನಲ್ಲಿ ಮಾಡಬೇಕಾದ ಒಂದೆ ಒಂದು ಕೊನೆಯ ಸ್ಟೆಪ್ ಮಾತ್ರ ಬಾಕಿಯಿರುತ್ತದೆ.. ಆದರೆ ಬೇರೆಲ್ಲ ಭೌತಿಕ ಕಾರ್ಯಗಳೆಲ್ಲ ಮುಗಿದು ಸಿದ್ದವಾಗಿದ್ದರೆ ಆ ಕೊನೆಯ ಸ್ಟೆಪ್ಪಿಗೆ  ಒಂದೆರಡು ಗಂಟೆ ಸಿಸ್ಟಮ್ ಸಿಕ್ಕಿದರೂ ಸಾಕು....ದಿನಗಟ್ಟಲೆ ಇರದಿದ್ದರೂ ಆಳವಾಗಿ ಕಚ್ಚುವುದಿಲ್ಲ 'ಬ್ರಿಲಿಯಂಟ್ ಐಡಿಯಾ..' ಹೆಚ್ಚು ಕಡಿಮೆ ಚೀರಿದ್ದ ಶ್ರೀನಾಥ. 

' ಕೊನೆಯ ಸ್ಟೆಪ್ಪನ್ನು ಬೇಕಾದರೆ ಮಾಸ್ ಪ್ರೋಸೆಸಿಂಗಿನಲ್ಲಿ ನಿಭಾಯಿಸಿಕೊಳ್ಳಬಹುದು ಸಾರ್..ಸಿಸ್ಟಮ್ಮು ಎರಡು ದಿನ ಇರದಿದ್ದರೂ ತೊಂದರೆಯಾಗುವುದಿಲ್ಲ...ಸಿಸ್ಟಮ್ಮು ಇದ್ದ ದಿನವೆಲ್ಲ ಮಾಮೂಲಿನಂತೆ ಕೆಲಸ ಮುಂದುವರೆಸುತ್ತಿದ್ದರೆ ಸರಿ...'

ಅವನತ್ತ ಆಳವಾದ ಮೆಚ್ಚುಗೆಯಲೊಮ್ಮೆ ದಿಟ್ಟಿಸುತ್ತ ಕುನ್. ಸೋವಿಯತ್ತ ತಿರುಗಿ 'ಹೇಗೆ?' ಎನ್ನುವಂತೆ ತಲೆಯಾಡಿಸಿದ..

' ಐಯಾಂ ರೆಡಿ... ನಾನೀವತ್ತಿಂದಲೆ ಪ್ರಿಂಟು ಹಾಕಿ ಸಿದ್ದ ಮಾಡಿಟ್ಟುಕೊಳ್ಳಲು ಆರಂಭಿಸಿಬಿಡಬಲ್ಲೆ... ಕೊಂಚ ಟ್ರಾಕಿಂಗ್ ಕೇರುಪುಲ್ಲಾಗಿ ಮಾಡಬೇಕು ..ಅದನ್ನು ನಾನು ನಿಭಾಯಿಸಿಕೊಳ್ಳಬಲ್ಲೆ...ಹೇಳಿ ಕೇಳಿ ಮೈ ಪ್ರಮೋಶನ್ ಇಸ್ ಅಟ್ ಸ್ಟೇಕ್ ' ಎಂದು ನಗೆಯಾಡಿದ್ದ.

ಅವನ ಮಾತಿಗೆ ತಾನು ನಗುತ್ತಾ ಶ್ರೀನಾಥ,' ಅದರೊಂದು ರಿಕ್ವೆಸ್ಟ್.. ಯಾವುದೆ ಕಾರಣಕ್ಕೂ ಈ ವಿಷಯ ನಮ್ಮ ಮೂವರಿಗೆ ಬಿಟ್ಟು ಯಾರಿಗೂ ಗೊತ್ತಾಗಬಾರದು..'

ಇಬ್ಬರು ಸರಿಯೆನ್ನುವಂತೆ ತಲೆಯಾಡಿಸಿದ್ದರು..

'ಕುನ್. ಸೋವಿ ಮತ್ತೊಂದು ವಿಷಯ ...ಒಂದು ವೇಳೆ ಸಿಸ್ಟಮ್ ಡೌನ್ ಆದರೆ ನೀನು ಸ್ವಲ್ಪ ಅಗತ್ಯಕ್ಕಿಂತ ಹೆಚ್ಚು ಗಲಾಟೆ ಮಾಡಬೇಕು...ಸಿಂಗಪುರದ ತನಕ ಕೇಳಿಸುವ ಹಾಗೆ...ಯಾವ ಕಾರಣಕ್ಕೂ ಇಲ್ಲಿ ಎಲ್ಲಾ ಸರಿಯಿದೆಯೆನ್ನುವ ಭಾವನೆಗೆ ಅವಕಾಶ ಕೊಡಬಾರದು...'

'ನೋ ವೇ... ನಾನೆ ಮೇಯಿಲು ಬರೆಯುತ್ತೇನೆ ಎಲ್ಲರಿಗೂ ಕಾಪಿ ಹಾಕುತ್ತಾ..' ಎಂದಿದ್ದ ಕುನ್.ಸೋವಿ ಕಣ್ಣು ಮಿಟುಕಿಸಿ ನಗುತ್ತ.

ದೊಡ್ಡ ಹೊರೆಯೊಂದು ಇಳಿದ ನಿರಾಳತೆಯಲ್ಲಿ ಬೇರೆ ಏನೇನು ಮುಂಜಾಗರುಕತಾ ಕ್ರಮ ಕೈಗೊಳ್ಳಬೇಕಾದೀತೆಂದು ವಿವರಿಸತೊಡಗಿದ್ದ ಶ್ರೀನಾಥ ಮತ್ತೆ ಮೊದಲಿನ ಉತ್ಸಾಹದಿಂದ. ಈ ಬಾರಿಯೂ ಗೆಲುವು ಸಾಧಿಸಬಹುದೆಂಬ ಆತ್ಮವಿಶ್ವಾಸ ಆ ದನಿಯಲ್ಲೀಗ ಎದ್ದು ಕಾಣುತ್ತಿತ್ತು. ಮತ್ತೊಮ್ಮೆ ತನ್ನ ಉಪಾಯ ಪ್ರಯೋಜನಕ್ಕೆ ಬಂದ ಖುಷಿಯಲ್ಲಿ ಕಾಫಿ ಮಾಡಿಕೊಂಡು ತರುತ್ತೇನೆಂದು ಎದ್ದು ಹೊರಗೆ ಹೊರಟಿದ್ದ ಸೌರಭ್ ದೇವ್.

ಸೌರಭ್ ದೇವ್ ಮೂರು ಕಪ್ಪುಗಳಲ್ಲಿ ಕಾಫಿ ಹಿಡಿದು ಜತೆಗೆ ಮೂರು ಕ್ರೀಮರು ಮತ್ತು ಸಕ್ಕರೆಯ ಸ್ಯಾಷೆ ಹಿಡಿದು ಬರುವಷ್ಟರ ಹೊತ್ತಿಗೆ ಹೆಚ್ಚು ಕಡಿಮೆ ಕುನ್. ಸೋವಿಗೆ ಹೇಳಬೇಕಾದ್ದೆಲ್ಲ ಹೇಳಿ ಮುಗಿಸಿಯಾಗಿತ್ತು. ಅವನ ಮತ್ತಿತರ ಪ್ರಶ್ನೆಗಳಿಗೆ ಉತ್ತರಿಸುವಾಗ ಬಹುಶಃ ಇನ್ನು ಅನೇಕ ಪ್ರಸ್ತುತ ಗೊತ್ತಿರದ ಪ್ರಶ್ನೆಗಳು ಬರಬಹುದೆಂದೆನಿಸಿ, ಎರಡು ದಿನಕೊಮ್ಮೆ ಒಂದೊಂದು ಗಂಟೆಯ ಮೀಟಿಂಗಿನಲ್ಲಿ ವಿವರಗಳನ್ನೆಲ್ಲ ಪರಾಮರ್ಶಿಸಿ ನೋಡುವುದೆಂದು ನಿರ್ಧರಿಸಿಕೊಂಡಿದ್ದರು. ಅದನ್ನು ಚರ್ಚಿಸಿ ಮುಗಿಸುವ ಹೊತ್ತಿಗೆ ಸರಿಯಾಗಿ ಕಾಫಿ ಹಿಡಿದ ಸೌರಭ್ ದೇವನ ಪ್ರವೇಶವಾದಾಗ ಅದನ್ನು ನೋಡುತ್ತಿದ್ದಂತೆ ಬೆಳಗಿನಿಂದ ಕಾಫಿ ಕುಡಿಯದ ನೆನಪಾಗಿ, ಸ್ವಪ್ರೇರಣೆಯಿಂದ ನುಡಿದಿದ್ದ ಶ್ರೀನಾಥ , ' ವಾಹ್! ಐ  ಬ್ಯಾಡ್ಲಿ ನೀಡೆಡ್ ಎ ಕಪ್ ಆಫ್ ಕಾಫಿ! ಥ್ಯಾಂಕ್ಸ್ ಸೌರಭ್ :-)'. ಅದನ್ನು ಕೇಳಿಸಿಕೊಂಡ ಕುನ್.ಸೋವಿ ತನ್ನ ಕಪ್ ಕೈಗೆತ್ತಿಕೊಂಡು ನಗುತ್ತ,

' ದಿಸ್ ಇಸ್ ನಾಟ್ ಗುಡ್ ಕಾಫಿ - ಜಸ್ಟ್ ದ ಬೆಸ್ಟ್ ಯು ಕ್ಯಾನ್ ಗೆಟ್ ಇನ್ ವೇರ್ಹೌಸ್..ಆಲ್ ರೆಡಿ ಮೇಡ್ ವಿಥ್ ಹಾಟ್ ವಾಟರ್ ...ಯು ಗೆಟ್ ಬೆಟರ್ ಕಾಫಿ ಇನ್ ಆಫೀಸ್ ' ಎಂದಿದ್ದ.

ಅವನು ಹಾಗನ್ನುತ್ತಿದ್ದಂತೆ ದಿನವೂ ಕಾಫಿ ಸರಬರಾಜು ಮಾಡುತ್ತಿದ್ದ ಕುನ್.ಸು ಕಳೆದ ವಾರಪೂರ್ತಿ ಮತ್ತೆ ಪತ್ತೆಯಿಲ್ಲವೆಂದು ನೆನಪಾಗಿ, 'ಅವಳಲ್ಲಿ ಮಾತಾಡಿ ಕ್ಷಮೆ ಕೇಳಲು ಇನ್ನು ಆಗಲೆ ಇಲ್ಲವಲ್ಲ' ಎಂಬ ವಿಷಾದಭರಿತ ಖೇದದಲ್ಲೆ, ' ಕುನ್. ಸೋವಿ, ಹೋದ ವಾರವೆಲ್ಲ ಒಳ್ಳೆ ಆಫೀಸಿನ ಕಾಫಿಗೂ ಸೊನ್ನೆ...ಯಾಕೊ, ಕುನ್.ಸು ವಾರಪೂರ್ತಿ ರಜೆ ಹಾಕಿದ್ದರಿಂದ ಸರಿಯಾದ ಕಾಫಿಯೇ ಕುಡಿಯಲಾಗಿಲ್ಲ..' ಎಂದಿದ್ದ. 

ಅದನ್ನು ಕೇಳುತ್ತಿದ್ದಂತೆ ತುಸು ಅಚ್ಚರಿಗೊಂಡಂತೆ ಕಂಡ ಕುನ್. ಸೋವಿ ಸೀಟಿನಿಂದ ತುಸು ಮುಂದೆ ಬಾಗಿದವನೆ, 'ಒಹ್! ನಿಮಗೆ ವಿಷಯ ಗೊತ್ತಿಲ್ಲವೆಂದು ಕಾಣುತ್ತದೆ' ಎಂದ. 

ಯಾವುದರ ಕುರಿತು ಹೇಳುತ್ತಿರುವುದೆಂದು ಸ್ಪಷ್ಟವಾಗಿ ಅರಿವಾಗದೆ, 'ಯಾವ ವಿಷಯ?' ಎಂದಿದ್ದ ಶ್ರೀನಾಥನತ್ತ ನೋಡುತ್ತಾ ಆಚೀಚೆ ವೇರ್ಹೌಸಿನವರಾರೂ ಇಲ್ಲವೆಂದು ಖಚಿತಪಡಿಸಿಕೊಂಡು, ಮತ್ತಷ್ಟು ಮುಂದೆ ಬಾಗಿ ಪಿಸುದನಿಯಲ್ಲಿ ನುಡಿದಿದ್ದ ಕುನ್. ಸೋವಿ - 'ಅದೆ ಕುನ್.ಸು ವಿಷಯ... ಪಾಪ! ಅವರೆಲ್ಲ ತಾತ್ಕಾಲಿಕ ಕಾಂಟ್ರ್ಯಾಕ್ಟಿನ ಮೇಲೆ ಕೆಲಸ ಮಾಡುವವರು.. ಅದೇನಾಯ್ತೊ , ಯಾಕಾಯ್ತೊ ಯಾರಿಗೂ ಗೊತ್ತಿಲ್ಲ.. ಅವಳನ್ನ ಹೋದ ವಾರದಿಂದ ಕೆಲಸದಿಂದ ತೆಗೆದುಬಿಟ್ಟಿದ್ದಾರೆ.. ಶಿ ಹ್ಯಾಸ್ ಬೀನ್ ಫೈರ್ಡ್ ಆನ್ ಡಿಸಿಪ್ಲಿನರಿ ಗ್ರೌಂಡ್ಸ್ ...'

ಅ ಸುದ್ದಿ ಕೇಳುತ್ತಲೇ ಸ್ತಂಭೀಭೂತನಾದವನಂತೆ ಮರಗಟ್ಟಿ ಕೂತ ಶ್ರೀನಾಥ, ತಕ್ಷಣವೆ ತುಸು ಸಾವರಿಸಿಕೊಂಡು, 'ಒಹ್ ಗಾಡ್! ಯಾಕಂತೆ ...ಯಾವ ಕಾರಣಕ್ಕೆಂದು ಗೊತ್ತಾಯ್ತೆ?' ಎಂದು ಕೇಳಿದ್ದ ಕಾಫಿ ಕುಡಿಯುತ್ತಿದ್ದರು ಒಣಗಿದಂತೆ ಭಾಸವಾಗುತ್ತಿದ್ದ ತುಟಿಯನ್ನು ಒರೆಸಿಕೊಳ್ಳುತ್ತ. 

' ನೋ ಬಡಿ ನೋವ್ಸ್ ವೈ...ಕಾಂಟ್ರಾಕ್ಟ್ ಟರ್ಮಿನೇಟ್ ಮಾಡಿ ಕಳಿಸಿಬಿಟ್ಟಿದ್ದಾರೆ... ಮ್ಯಾನೇಜ್ಮೆಂಟ್ ಡಿಸಿಷನ್.. ಕಾಸ್ಟ್ ಕಟ್ಟಿಂಗೊ ಏನೊ ಗೊತ್ತಿಲ್ಲ...ಪಾಪ ಒಬ್ಬಂಟಿ ಹೆಣ್ಣು ಈಗ ತಿರುಗಿ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಅಲೆದಾಡಬೇಕು...'

'ಒಬ್ಬಂಟಿ...?'

'ಹೌದು... ಗಂಡ ಸತ್ತ ಮೇಲೆ ಅವಳೊಬ್ಬಳೆ ನಿಭಾಯಿಸಬೇಕಲ್ಲ? ನನ್ನ ಮನೆ ಹತ್ತಿರವೆ ಅವಳೂ ಇರುವುದು.. ಇದ್ದೊಬ್ಬ ಮಗಳಿಗೆ ಮದುವೆಯಾದ ಮೇಲೆ ಒಬ್ಬಳೆ ಇರದೆ, ಒಂದು ನಾಲ್ಕು ಅನಾಥ ಮಕ್ಕಳನ್ನು ಜತೆಯಲ್ಲಿಟ್ಟುಕೊಂಡು ಸಾಕುತಿದ್ದಾಳೆ.. ಈಗ ಕೆಲಸವೂ ಇಲ್ಲವೆಂದರೆ ಹೇಗೆ ಏಗುತ್ತಾಳೊ...'

ತುಸು ಹೊತ್ತು ಬಾಯಿಂದ ಮಾತೆ ಹೊರಡದೆ ಸುಮ್ಮನೆ ಕೂತುಬಿಟ್ಟಿದ್ದ ಶ್ರೀನಾಥನನ್ನು ನಿವೇದಿಸಿಕೊಳ್ಳುವವನಂತೆ, 'ಪ್ಲೀಸ್ ಡೊಂಟ್ ಆಸ್ಕ್ ಆರ ಟೆಲ್ ಏನಿಬಡಿ ಇನ್ ದಿ ಆಫೀಸ್.. ಇಟ್ ಇಸ್ ಎ ಪರ್ಸನಲ್ ಮ್ಯಾಟರ್..' ಎಂದಿದ್ದ.

ವೇರ್ಹೌಸಿನಿಂದ ಆಫೀಸಿನ ತನಕದ ಹಾದಿಯ ಪೂರ್ತಿ ಮಾತಾಡದೆ ಮೌನವಾಗಿ ಕುಳಿತುಬಿಟ್ಟಿದ್ದ ಶ್ರೀನಾಥ. ಅವನಿಗೆ ಪ್ರಾಜೆಕ್ಟಿನ ಹೊಸ ತೊಡಕು ಖಚಿತವಾಗಿ ಪರಿಹಾರವಾದೀತೆಂಬ ಆಶಾವಾದಕ್ಕೆ ಖುಷಿಪಡಬೇಕೊ ಅಥವಾ ಕೆಲಸ ಕಳೆದುಕೊಂಡ ಕುನ್. ಸುವನ್ನು ಮತ್ತೆ ನೋಡಲಾಗದೆಂಬ ಖೇದಕ್ಕೆ ವಿಷಾದಿಸಬೇಕೊ ಅರಿಯದ ಗೊಂದಲದಲ್ಲಿ ತಾನೆ ಕಳುವಾದಂತೆ ಚಿಂತೆಯಲ್ಲಿ ಮುಳುಗಿಹೋಗಿದ್ದ. ಟ್ಯಾಕ್ಸಿಯಲ್ಲಿ ಸಾಧಾರಣ ಮಾತಿಗಿಳಿಯುವ ಶ್ರೀನಾಥ, ಅಂದೇಕೊ ಅನ್ಯಮನಸ್ಕತೆಯಿಂದ ಮೌನವಾಗಿ, ಸೀರಿಯಸ್ಸಾಗಿರುವುದನ್ನು ಕಂಡು ಮಾತನಾಡಿಸುವ ಧೈರ್ಯ ಸಾಲದೆ ಪ್ರಯಾಣದುದ್ದಕ್ಕೂ ತಾನೂ ಮೌನವ್ರತ ಹಿಡಿದವನಂತೆ ಬಾಯೇ ಬಿಚ್ಚದೆ ಸುಮ್ಮನೆ ಕುಳಿತುಕೊಂಡೆ ಬಂದಿದ್ದ ಸೌರಭ್ ದೇವ್.

(ಇನ್ನೂ ಇದೆ)
__________
 

Comments

Submitted by nageshamysore Sun, 06/29/2014 - 17:51

In reply to by kavinagaraj

ಕವಿಗಳೆ, ಪ್ರತಿಕ್ರಿಯೆಗೆ ಮತ್ತೆ ಧನ್ಯವಾದಗಳು <<ಸುಖಾಂತ್ಯವಾಗುವ ಹಾದಿಯಲ್ಲಿ ->> ಅನ್ನುವುದೇನೊ ನನ್ನ ಕಲ್ಪನೆಯ ಮೂಸೆಯಲ್ಲಿರುವ ಹಾದಿಯೂ ಹೌದು. ಆದರೆ ಸಾಧ್ಯವಿರುವ ಹಾದಿ ಮಾತ್ರ ಸರಳದ್ದೇನಿಸುತ್ತಿಲ್ಲ - ಕಾದು ನೋಡೋಣ! :-)