ಬೀದಿ ನಲ್ಲಿ ನೀರಿನ ಸರತಿಗೆ....

ಬೀದಿ ನಲ್ಲಿ ನೀರಿನ ಸರತಿಗೆ....

ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಕಂಗಾಲದ ರೈತರ ಹತಾಶೆಯ ಕಣ್ಣೀರು, ನೀರಿಲ್ಲದೆ ಒದ್ದಾಡುವ ಜನ ಜೀವಿಗಳ ಪಾಡು, ಬಿರುಕು ಬಿಟ್ಟು ಕಾತರಿಸಿ ಕಾದ ನೆಲದ ಹತಾಶೆ - ಇವೆಲ್ಲವೂ ನಿರಿನ ಬವಣೆಯ ವಿವಿಧ ರೂಪಗಳೆ ಸರಿ. ಆದರೆ ಬಾಲ್ಯದಿಂದಲೂ ನಾನು ನೋಡುತ್ತಿದ್ದ ಮತ್ತೊಂದು ಬಗೆಯ ನೀರಿನ ಬವಣೆ ನನಗೆ ಈಗಲೂ ಕಣ್ಣಿಗೆ ಕಟ್ಟಿದಂತೆ ಮನದಲ್ಲಿ ನಿಂತುಹೋಗಿದೆ. ಅದಕ್ಕೊಂದು ಮುಖ್ಯ ಕಾರಣ - ಈ ಬವಣೆ ಬರಿ ಮಳೆಗಾಲದ್ದು ಮಾತ್ರವಾಗಿರಲಿಲ್ಲ; ವರ್ಷದ ದಿನಂಪ್ರತಿ ಕಾಡುತ್ತಿದ್ದ ಯಾತನೆ. ಬೇಸಿಗೆಯಲೆಂದರೆ ಹೆಚ್ಚು ಕಾಡುವ ಕಂಟಕ. ಅದರಲ್ಲೂ ಹಬ್ಬ ಹರಿದಿನಗಳು ಬಂತೆಂದರೆ ಅದನ್ನು ಆಚರಿಸದಿದ್ದವರಿಗೂ ಹಬ್ಬವೆಂದು ತಿಳಿದುಹೋಗಬೇಕು ಅಷ್ಟರ ಮಟ್ಟಿಗೆ ಕರ್ತವ್ಯ ನಿಷ್ಠೆಯಿಂದ ಕಾಡಿಸುತ್ತಿದ್ದ ಪೀಡೆ. ಒಟ್ಟಾರೆ ಬಿಡುಗಡೆಯೆ ಇರದ ರೀತಿಯ ಈ ಜೀವನ ಶೈಲಿಯ ಪಠನೆ ಯಾವುದರ ಕುರಿತಾಗಿ ಎಂಬುದನ್ನು ನೀವೀಗಾಗಲೆ ಊಹಿಸಿರಬಹುದು - ಹೌದು, ಇದು ನಲ್ಲಿ ನೀರಿನ ಮಹಿಮೆಯ ಬಗೆಯೆ.

ಆದರೆ ನಾನಿಲ್ಲಿ ಹೇಳ ಹೊರಟದ್ದು ನೀರೆ ಬರದಿರುವ ಅಥವ ಅಪರೂಪಕ್ಕೆ ಗೊರಗೊರನೆನ್ನುವ ಮನೆ ನಲ್ಲಿಗಳದ್ದಲ್ಲ. ಬದಲಿಗೆ ಬೀದಿಗಳಲ್ಲಿ ಪ್ರತಿಷ್ಠಾಪಿತವಾಗಿ ಇಡಿ ಬೀದಿ ಜನಗಳ ಜೀವನಾಧಾರವಾಗಿ ಅವರ ಜೀವನ ಶೈಲಿಯ ಗತಿ ಮತ್ತು ಜೀವನ ಧರ್ಮವನ್ನು ನಿರ್ಧರಿಸುತ್ತಿದ್ದ 'ಶ್ರೀಮಾನ್ ಬೀದಿ ನಲ್ಲಿ'ಯದು. ಅಂದ ಹಾಗೆ ನಾನಿಲ್ಲಿ ತಾಕತ್ತುಳ್ಳವರು ದುಡ್ಡು ಖರ್ಚು ಮಾಡಿ ಬೋರು ಕೊರೆಸಿ ತೆಗೆಸಿದ ನಲ್ಲಿಗಳ ಮಾತನ್ನು ಇಲ್ಲಿಂದ ತೆಗೆದುಬಿಡಬೇಕು. ಇದು ಬರಿ ಸರ್ಕಾರಿ ನಲ್ಲಿಯನ್ನು ನಂಬಿಕೊಂಡು, ಬೆಂಕಿಪೊಟ್ಟಣದಂತಹ ಬಾಡಿಗೆ ಮನೆಗಳಲ್ಲಿ ಬದುಕುತ್ತ, ಇಕ್ಕಟ್ಟಾದ ಗಲ್ಲಿ, ಬೀದಿಗಳೆಂಬ ಹೆಸರಿನ ಸಂದಿಗಳಲ್ಲಿ ಬದುಕು ಸಾಗಿಸುತ್ತ ಮನೆಯಲ್ಲಿರುವ ಲೋಟ, ಚೊಂಬು, ಬಿಂದಿಗೆ, ಬಕೆಟ್ಟು, ಹಂಡೆಗಳಲ್ಲೆಲ್ಲ ನೀರು ತುಂಬಿಸಿಕೊಂಡು ಇದ್ದಷ್ಟನ್ನೆ ಸ್ವಚ್ಛವಾಗಿರಿಸಿಕೊಂಡು ಬದುಕುವವರ ಪಾಡು. ಮನೆ ನಲ್ಲಿಯ ಅರೆಗಳಿಗೆಯ ಕೊಸರಾಟದಲ್ಲಿ ಬಂದಷ್ಟು ನೀರು ತುಂಬಿಕೊಂಡು, ಮಿಕ್ಕ ನೀರಿಗಾಗಿ ರಾತ್ರೊರಾತ್ರಿ ಬೀದಿನಲ್ಲಿಗಳಲ್ಲಿ ಸರತಿಗಾಗಿ ಕಾದು, ಜಗಳವಾಡಿ, ಬೈದಾಡಿಕೊಂಡು ಕೊನೆಗೆ ಸಿಕ್ಕಷ್ಟು ನೀರು ಹಿಡಿದುಕೊಂಡು ಶೇಖರಿಸಿ, ಅದರಲ್ಲೆ ಮಡಿ, ಮೈಲಿಗೆ, ಪೂಜೆ, ಪುನಸ್ಕಾರ, ಅಡಿಗೆ ಇತ್ಯಾದಿಗಳ 'ಸಕಲ ಕಾರ್ಯಾರ್ಥ ಸಿದ್ದಿರಸ್ತು' ಎನಿಸಿ ಸ್ನಾನ ಪಾನಾದಿಗಳನ್ನು ಮಾಡಿಕೊಂಡು ಬದುಕುವ ಭಯ ಭಕ್ತಿಯ ಸಾಮಾನ್ಯ ಜನರದು.  

ನಮ್ಮ ಭವ್ಯ ಭಾರತದ ಎಲ್ಲಾ ನಗರ, ಪಟ್ಟಣ, ಗ್ರಾಮಗಳಲ್ಲಿ ಇಂತಹ ಕೇರಿ, ಬೀದಿ, ಮಾಳಗಳು ಲೆಕ್ಕವಿಲ್ಲದಷ್ಟು. ಮೈಸೂರಿನ ಅಂತಹದ್ದೆ ಕೇರಿಯೊಂದರಲ್ಲಿ ಹುಟ್ಟಿ ಬೆಳೆದ ನನಗೆ ಆ ಜೀವನದ ಅವಿಭಾಜ್ಯ ಅಂಗವಾಗಿ ಅದು ಕೊಡುವ ಯಾತನೆ, ಮನರಂಜನೆ, ಹರ್ಷ, ವೇದನೆಯಾದಿಯಾಗಿ ಎಲ್ಲಾ ಭಾವ ಸಂಚಲನಗಳು ಪುಕ್ಕಟೆಯಾಗಿಯೆ ದೊರಕುತ್ತಿದ್ದವು. ದಿನ ನಿತ್ಯವೂ ಅದನ್ನೆ ನೋಡುತ್ತಿದ್ದ ನನಗೆ ಬಹುಶಃ ಬದುಕೆಂದರೆ ಅದೆ, ಎಲ್ಲೆ ಹೋದರೂ ಅದೆ ರೀತಿ ಇರುತ್ತದೆ ಎಂದೆ ನಂಬಿಬಿಟ್ಟಿದ್ದೆ. ದೈನಂದಿನ ಆಗುಹೋಗು, ಸಂಕಟ, ಸಂಘರ್ಷ, ಖುಷಿ, ಉತ್ಸಾಹ, ಉಲ್ಲಾಸಗಳೆಲ್ಲದರ ಮೊದಲ ತುಣುಕಿನ ಅನುಭವವಾಗಿದ್ದೆ ಈ ವಿಶ್ವವಿದ್ಯಾಲಯದಲ್ಲಿ. ಹಾಗೆಯೆ ಹೇಗೆ ಇವೆಲ್ಲಾ ನಡೆಗಳು ಮಾನವ ಬದುಕಿನ ಸಂಬಂಧಗಳನ್ನು ಸೂಕ್ಷ್ಮವಾಗಿ ಹೆಣೆದು ಪರಿಪರಿ ಸನ್ನಿವೇಶಗಳನ್ನು ಸೃಜಿಸಿ ಮಿತ್ರ -ಶತ್ರುಗಳೆಂಬ ವೈವಿಧ್ಯಮಯ ತಾಕಲಾಟಗಳನ್ನು ಸೃಜಿಸಿ, ನೀರಸವಾಗಬಹುದಿದ್ದ ಬದುಕನ್ನು ಹೇಗೆ ರಂಜನೀಯವಾಗಿಯೊ ಅಥವ ಅಸಹನೀಯವಾಗಿಯೊ ಇರುವಂತೆ ಪ್ರಭಾವಿಸುತ್ತಿತ್ತೆನ್ನುವುದು ಸೋಜಿಗವೆ ಸರಿ. ಆಗಿನ ವರ್ತಮಾನದಲ್ಲಿ ಅವೆಲ್ಲ ಸಾಧಾರಣ, ಸಹಜ ಪ್ರಕ್ರಿಯೆಗಳಂತೆ ಭಾಸವಾಗುತ್ತಿದ್ದರೂ ಈಗಿನ ಅನುಭವದ ಕನ್ನಡಿಯಲ್ಲಿ ಅವುಗಳನ್ನು ಪ್ರತಿಬಿಂಬಿಸಿ ನೋಡಿದಾಗಲಷ್ಟೆ ಅವುಗಳ ವಿಭಿನ್ನತೆ, ವೈವಿಧ್ಯದ ಅರಿವುಂಟಾಗುವುದು; ಜನಾಂಗದ ಭಾಗಶಃ ಸಂಸ್ಕೃತಿಯ ಪ್ರತಿನಿಧಿಯಾಗಿ ಅದರ ಕಾಣಿಕೆಯ ಮಹತ್ವದ ಮತ್ತು ಹಿರಿಮೆಯ ಪೂರ್ಣಾರ್ಥ ಸ್ಪುರಿಸುವುದು. ಅಂಥಹ ಒಂದು ತುಣುಕಿನ ವಿವರ ಈ ಕೆಳಗಿನ ಕವನದ ಸಾರದಲ್ಲಿದೆ. ಅದರ ಹಿನ್ನಲೆಯೇನು ಅಪರಿಚಿತವಾದುದಲ್ಲ; ಈ ಕೇರಿಗಳಲ್ಲಿ ಬದುಕಿಗಾಗಿ ಹೋರಾಡುತ್ತಲೆ ವಾಸಿಸುವ ಹೆಂಗಳೆಯರಿಬ್ಬರು ನೀರಿನ ದೆಸೆಯಿಂದಾಗಿ ಜಗಳವಾಡುವ ಸನ್ನಿವೇಶದ ಪುಟ್ಟ ನಿದರ್ಶನ. ಯಾವುದೊ ಹೊತ್ತಲ್ಲದ ಹೊತ್ತಲ್ಲಿ ಬರುವ ಬೀದಿ ನಲ್ಲಿಯ ನೀರಿಗಾಗಿ ಹಗಲಲ್ಲೆ ಖಾಲಿ ಬಿಂದಿಗೆಯಿಟ್ಟು 'ಸರತಿಯ ಮೀಸಲಾತಿ' ಮಾಡುವ ಹೆಣ್ಣು ಮಗಳೊಂದು ಕಡೆ; ಸಾಲಿನಲ್ಲಿಡಲು ಖಾಲಿ ಬಿಂದಿಗೆ ಇರದೆ ಇದ್ದುದ್ದಕ್ಕೊ ಅಥವಾ ಇಟ್ಟರೆ ಯಾರಾದರೂ ಕದ್ದೊಯ್ದರೆ ಎನ್ನುವ ಭೀತಿಗೊ ಬಳಿಯಲ್ಲಿದ್ದ ದಪ್ಪ ಕಲ್ಲೊಂದನ್ನಿಟ್ಟು 'ರಿಸರ್ವೇಶನ್' ಪೂರೈಸಿದ ಮತ್ತೊಬ್ಬ ಗೃಹಿಣಿ ಇನ್ನೊಂದು ಕಡೆ. ಇಲ್ಲಿ ಒಂದು ಕಲ್ಲು, ಒಂದು ಬಿಂದಿಗೆ ಸಾಂಕೇತಿಕವಷ್ಟೆ - ಒಂದು ರೀತಿ ಕ್ಯೂ ನಂಬರು ಇದ್ದ ಹಾಗೆ. ನೀರು ಬರುತ್ತಿದ್ದಂತೆ ಆ ಒಂದು ಬಿಂದಿಗೆಯ ಜಾಗದಲ್ಲಿ ಹತ್ತಾರು ಕೊಡ, ಬಕೆಟ್ಟು, ಚೊಂಬು, ಹಂಡೆಗಳ ಸಾಲೆ ಹಾಜರಾಗುತ್ತದೆ. ಆ ಕಲ್ಲಿನ ಕಥೆಯೂ ಅಷ್ಟೆ - ಅದರ ಹೆಸರಿನಲ್ಲಿ ಬೆನ್ನು ಹಿಡಿಯಲು ಸಾಲಾಗಿ ಕಾಯುತ್ತಿರುತ್ತವೆ ಎಲ್ಲಾ ಪಾತ್ರೆ, ಪಗಡಿಗಳು.

ಅಷ್ಟೆ ಸಾಕು ಜಗಳದ ಮೂಲಕ್ಕೆ. ಮೊದಲಿಗೆ ಕಲ್ಲಿಟ್ಟರೆ ಸಾಕೆ , ನೀರು ತುಂಬುವ ಕೊಡದಂತದ್ದನೆ ಇಡಬೇಕೆ ಎನ್ನುವ ಭಯಂಕರ ಜಿಜ್ಞಾಸೆ ಆ ಹೆಂಗಳೆಯರ ಜ್ಞಾನ ಪರಿಧಿಯೊಳಗಿರುವ ತರ್ಕ, ಕುತರ್ಕಗಳ ಸಹಯೋಗದೊಂದಿಗೆ ಆರಂಭವಾಗಿಬಿಡುತ್ತದೆ. ಅದರ ಸರಿ, ತಪ್ಪುಗಳ ವಾದ ವಿವಾದಗಳ ಕದನ ಮಾತಿನಲ್ಲೆ ಆರಂಭವಾದರೂ ನಿಧಾನವಾಗಿ ಸುತ್ತಲಿನ ಜನ ಒಂದಲ್ಲ ಒಂದು ಪಕ್ಷ ಹಿಡಿಯುತ್ತಿದ್ದಂತೆ ಮತ್ತಷ್ಟು ತಾರಕಕ್ಕೇರಿ, ಯಾರು ಜಗಳದ ಬೈದಾಟದಲ್ಲಿ ಹೆಚ್ಚಿನ ಪರಿಣಿತಿಯುಳ್ಳವರು, ಹೆಚ್ಚು ಶಬ್ದಕೋಶದ ಸ್ವಾಧೀನತೆ ಹೊಂದಿರುವವರು, ಎಷ್ಟು 'ಕಲಾತ್ಮಕ' ವಾಗಿ ಬೈಯಬಲ್ಲ ತಾಕತ್ತಿರುವವರು, ಎಷ್ಟು ಜೋರಾಗಿ ದನಿಯೇರಿಸಿ ದಬಾಯಿಸಬಲ್ಲವರು - ಹೀಗೆ ಎಲ್ಲಾ ತರದ ಜೀವಂತ ಕಲಾಪ್ರದರ್ಶನಕ್ಕೆ ಪ್ರತ್ಯಕ್ಷ ನಿದರ್ಶನವಾಗಿಬಿಡುವ ಹೊತ್ತಿನಲ್ಲೆ, ಯಾರದಾದರೊಬ್ಬರ ಸಹನೆ ಮೀರಿತೆಂದರೆ ಕೈ ಕೈ ಮಿಲಾಯಿಸುವ ಹಂತಕ್ಕೂ ನೆಗೆದುಬಿಡುತ್ತದೆ. ಜುಟ್ಟು ಹಿಡಿದುಕೊಂಡು, ಸೀರೆಯನ್ನು ತುಸು ಮೇಲೆತ್ತಿ ಸೆರಗಿನಂಚಿನ ಜತೆ ಸೊಂಟದ ಸುತ್ತಿಗೆ ಸಿಕ್ಕಿಸಿಕೊಂಡು ವೀರ ಒನಕೆ ಓಬವ್ವರ ಹಾಗೆ ಕೊಡ ಕೊಡವೆತ್ತಿ ವಾಗ್ಯುದ್ಧದಿಂದ ಆಯುಧಪೂರ್ಣ ಧರ್ಮಯುದ್ಧಕ್ಕಿಳಿದರೆಂದರೆ, ಬರಿ ಮೌನ ವೀಕ್ಷಕರಾಗಿ ದೂರದಲ್ಲಿದ್ದ ಗಂಡಂದಿರು ಮತ್ತಿತರ ಬಂಧುಗಳು ಬಂದು ಜತೆಗೂಡಿದರೆ ಬಚಾವ್; ಇರದಿದ್ದರೆ ಈ ಬಾಹ್ಯ ಜಗಳದ ತರುವಾಯ ಸಚ್ಚರಿತಾವಾಚನದ ಮತ್ತೊಂದು ಯುದ್ಧಕಾಂಡಕ್ಕೆ ತಯರಾಗಿರಬೇಕಾಗುತ್ತದೆ, ಮನೆಯೊಳಗೆ.  ಹೀಗೆ ಜಗಳಗಳು ಒಮ್ಮೊಮ್ಮೆ ಹದ ಮೀರಿ ದಾರಿ ತಪ್ಪಿದಾಗ ನೀರಿಗಿಂತ ಜಗಳವೆ ಮುಖ್ಯವಾಗಿ, ನೀರು ಬಂದು ಸುರಿದು ನಿಂತು ಹೋದ ಮೇಲೂ ಜಗಳ ಮಾತ್ರ ಮುಂದುವರೆದೆ ಇರುತ್ತದೆ. ಇನ್ನೂ ಹತಾಶ ಸ್ಥಿತಿಯೆಂದರೆ ಆ ಜಗಳದ ತಾರಕ ಸ್ವರ ಆ ದಿನವನ್ನೂ ದಾಟಿ ದಿನ, ವಾರ, ತಿಂಗಳುಗಟ್ಟಲೆಯ ಮುನಿಸಾಗಿ ಮುಂದುವರೆದುಕೊಂಡೆ ಹೋಗಿಬಿಟ್ಟಿರುತ್ತದೆ - ಮೊನ್ನೆ ಟೆಂಟಿನ ಸಿನಿಮಾಗೆ ಒಟ್ಟಾಗಿ ಹೋಗಿ ಬಂದ ಗೆಳತಿಯರು ಇವರಿಬ್ಬರೇನಾ? ಎಂದು ಮೂಗಿನ ಮೇಲೆ ಬೆರಳಿಡುವಷ್ಟು. 

ಆದರೆ ಇದಕ್ಕೆಲ್ಲ ಮೂಲ ಕಾರಣರಾದ ಜಲಮಂಡಳಿಗಳ ರೀತಿಯ ನೌಕರ ಶಾಹಿ, ಅಧಿಕಾರ ಶಾಹಿ, ರಾಜಕೀಯ ಶಾಹಿ ವರ್ಗಗಳು ತಮಗೇನೂ ಆಗದ ರೀತಿ, ತಮಗೇನು ಸಂಬಂಧಿಸದ ರೀತಿ ತಮ್ಮ ಎಂದಿನ ಕಾಯಕದಲ್ಲಿ ನಿರತರಾಗಿರುತ್ತವೆ, ಯಥಾರೀತಿ. ತಾವೇನೂ ಮಾಡದೆ ನೇರ ಭಾಗವಹಿಸದೆ ಪರೋಕ್ಷವಾಗಿಯೆ ಜನಜೀವನದಲ್ಲಿ ಇಷ್ಟೊಂದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಕ್ಷುಬ್ದತೆ, ಗದ್ದಲವೆಬ್ಬಿಸಿ ಹೆಚ್ಚುಕಡಿಮೆ ಅವರ ಜೀವನ ಗತಿಯನ್ನು ನಿರ್ದೇಶಿಸುವ ಈ ಪ್ರಭೃತಿಗಳ ಅಪಾರ ಸಾಮರ್ಥ್ಯಕ್ಕೆ ನಮಿಸಿ ದೂರ ಸರಿಯಬೇಕೊ, ಹೋರಾಡಿ ಕಳೆದುಹೋಗಬೇಕೊ ಅಥವ ನಿರ್ಲಿಪ್ತತೆಯಿಂದ ವೀಕ್ಷಿಸುವ ಆಲಿಪ್ತ ನೀತಿ ಅನುಸರಿಸಬೇಕೊ ಗೊತ್ತಾಗುವುದಿಲ್ಲ. ಅದೇನೆ ಇರಲಿ ಈ ಮಹಾನುಭಾವರ ಕೃಪಾಕಟಾಕ್ಷ ನಿರಂತರವಾಗಿರುವ ತನಕ ನಮ್ಮ 'ಸುಪನಾತಿಯರ ಬೀದಿ ನಲ್ಲಿ ಜಗಳ' ಮಾತ್ರ ನಿಲ್ಲುವುದಿಲ್ಲ. ಆ ಜಗಳದ ಸಾರದ ಒಂದು ತುಣುಕಿನ ಕವನದ ರೂಪ ಈ ಕೆಳಗಿದೆ - ತಮ್ಮ ಆಸ್ವಾದನೆಗಾಗಿ :-)

ಸುಪನಾತಿಯರ ಬೀದಿ ನಲ್ಲಿ ಜಗಳ..!
___________________________

ಸುಮ್ಮನಿರೆ ಸುಪನಾತಿ
ಬಿಂಕ ಬಿಡೆಲೆ ನನ್ ಸವತಿ
ಕಾಲ್ತೆಗೆಯೆ ನಾನೆ ಮೊದಲು
ನೀರಿಗೆ ಕಲ್ಲಿಟ್ಟು ಹೋದವಳು ||

ವಾರೆವ್ಹಾ! ಭಲೆ ಗಂಡುಭೀರಿ
ಜಗಳಗಂಟಿ ಮಾತಲೆ ನಿಗುರಿ
ಮೆರೆಯಬೇಡ್ವೆ ಕಲ್ಲ್ಯಾವ ಲೆಕ್ಕ
ಬೀದಿ ನೀರಿಗೆ ಬಿಂದಿಗೆ ಬೇಕ ||

ಸಾಕು ಮುಚ್ಚೆ ಬಾಯಿ ಗರತಿ
ರಾತ್ರಿಯೆಲ್ಲ ಇಡಬೇಕು ಭರ್ತಿ
ಬೀದಿ ನಲ್ಲಿ ಬಿಂದಿಗೆ ಕದಿಯೊ 
ಹುಚ್ಮುಂಡೇರ ಸಾವಾಸದ ಕೈಯೊ ||

ಇರದಿದ್ರೂ ಹಿತ್ತಾಳೆ ಚಲಿಗೆ
ಇಡಲಿಲ್ವೆ ನಾ ಪ್ಲಾಸ್ಟಿಕ್ ಬಿಂದಿಗೆ?
ನಂದೇನೆ ಸಾಲಲ್ಲಿ ಮೊದುಲು
ಏನ್ ತಕ್ರಾರು ಇಲ್ಲಿಂದ ಕದಲು! ||

ಜುಟ್ಟಿಗ್ ಜುಟ್ಟು ಸೆರಗಿಗೆ ಸೆರಗು
ಸೀರೆಗೆ ಸೀರೆ ಗಂಟಾಗಿ ಬೆರಗು
ಜಗಳ ಮುಗಿಯೊ ಹೊತ್ತಿಗೆ ನೀರೆ
ನಿಂತು ಹೋಗಿ ನಲ್ಲಿ ಖಾಲಿ ದರ್ಬಾರೆ ! |

-------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------
 

Comments

Submitted by ಗಣೇಶ Fri, 06/27/2014 - 23:43

ನೀರೆಯರ ನೀರಿನ ಜಗಳದ ಕವನ ಚೆನ್ನಾಗಿದೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ಇಂತಹ ಕದನ ದಿನಾ ನೋಡುತ್ತಿದ್ದೆ. ಪಾಪ, ಹೆಂಗಳೆಯರು ಹಗಲೆಲ್ಲಾ ಕೆಲಸ ಮಾಡಿ, ರಾತ್ರಿ ಯಾವಾಗ ನೀರು ಬರುವುದೋ ಎಂದು ಅರೆಬರೆ ನಿದ್ರೆ ಮಾಡಿಕೊಂಡು ನೀರು ಬಂದ ಕೂಡಲೇ ಓಡಿ ಜಗಳಾಡಿ ನೀರು ತಂದು.. ಬೆಳಗ್ಗೆ ನಾಲ್ಕೋ ಐದು ಗಂಟೆಗೋ ಸ್ವಲ್ಪ ಮಲಗಿ, ಪುನಃ ದೈನಂದಿನ ಕೆಲಸಕ್ಕೆ ಏಳಬೇಕು.
>>ಆದರೆ ಇದಕ್ಕೆಲ್ಲ ಮೂಲ ಕಾರಣರಾದ ಜಲಮಂಡಳಿಗಳ ರೀತಿಯ ನೌಕರ ಶಾಹಿ, ಅಧಿಕಾರ ಶಾಹಿ, ರಾಜಕೀಯ ಶಾಹಿ ವರ್ಗಗಳು ತಮಗೇನೂ ಆಗದ ರೀತಿ, ತಮಗೇನು ಸಂಬಂಧಿಸದ ರೀತಿ ತಮ್ಮ ಎಂದಿನ ಕಾಯಕದಲ್ಲಿ ನಿರತರಾಗಿರುತ್ತವೆ, ಯಥಾರೀತಿ...
-ಈ ವರ್ಗಗಳನ್ನು ಕುಡಿಯಲು ತೊಟ್ಟು ನೀರು ಸಿಗದ ಕಡೆಗೆ ವರ್ಗ ಮಾಡಬೇಕು.

Submitted by nageshamysore Sat, 06/28/2014 - 05:14

In reply to by ಗಣೇಶ

ಗಣೇಶ್ ಜಿ, ನನ್ನ ಬಾಲ್ಯವೆಲ್ಲ ಇಂತಹ ಬೀದಿ ಜಗಳಗಳನ್ನು ನೋಡಿಕೊಂಡೆ ಬೆಳೆದಿದ್ದು. ಆಗೆಲ್ಲ ವಿಸ್ಮಯವಾಗುತ್ತಿದ್ದುದು ಆ ಜನರ ಜಗಳವಾಡುವ ಶಕ್ತಿಯನ್ನು ಕಂಡು. ಹೇಗಾದರೂ ಸರಿ ನೀರು ಬೇಕೆಂಬ ತಪನೆ ಅವರನ್ನು ಯಾವ ಮಟ್ಟಕ್ಕಾದರು ಇಳಿಸಲು ಸಿದ್ದವಿರುತ್ತಿತ್ತು! ಬೈದಾಡುವುದು ಕೂಡ ಒಂದು ಕಲೆ ಎಂದು ಅರಿವಾಗಿದ್ದು ಬಹುಶಃ ಆಗಲೆ ಎಂದು ಕಾಣುತ್ತದೆ - ಅದರಲ್ಲೂ ಕಲಾತ್ಮಕತೆ ಇದೆ, ಜಾಣ್ಮೆ, ಕೌಶಲ್ಯಗಳ ಅಗತ್ಯವಿರುತ್ತದೆ ಎಂದು ಗೊತ್ತಾಗಿದ್ದು ಕೂಡ ಪುಟ್ಟ ಜಗಳವೊಂದರಲ್ಲಿ ನೆಟ್ಟಗೆ ಎರಡು ಮಾತಾಡಲು ಆಗದೆ ಸೋತು ಹೋದಾಗ. ತುಸು ಬುದ್ಧಿ ಬಂದ ಮೇಲೆ ತಮಾಷೆಗೆ ಹೇಳುತ್ತಿದ್ದೆ - ಈ ರೀತಿಯ ಜಗಳಗಳು ಬಹುಶಃ ಒಂದು ರೀತಿಯಲ್ಲಿ ಕಮ್ಯುನಿಕೇಷನ್ ಸ್ಕಿಲ್ಸ್ ಇಂಪ್ರೂವ್ ಮಾಡಿಕೊಳ್ಳುವ ವಿಧಾನ ಎಂದು!  :-)

Submitted by kavinagaraj Sun, 06/29/2014 - 07:17

ಈಗಲೂ ಹಾಸನದಲ್ಲಿ ಇಂತಹ ಬೀದಿನಲ್ಲಿ ಆಶ್ರಿತರ ಆಕ್ರಂದನ ಕಂಡುಬರುತ್ತದೆ - ಮಾಜಿ ಪ್ರಧಾನಿಗಳ ಜಿಲ್ಲೆಯಲ್ಲಿ, ಹೇಮಾವತಿಯ ಬದಿಯಲ್ಲಿ!!

Submitted by nageshamysore Sun, 06/29/2014 - 18:09

In reply to by kavinagaraj

ಕವಿಗಳೆ , ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅನ್ನುವ ಹಾಗೆ ಯಾರೆ ಅಧಿಕಾರಕ್ಕೆ ಬರಲಿ, ಮಾಜಿ ಪ್ರಧಾನಿಗಳ ಊರೆ ಆಗಲಿ, ಮಳೆ ಬಂದು ಹೊಳೆ ತುಂಬಿ ಹರಿಯಲಿ, ನಮ್ಮ ಗಣೇಶ್ ಜಿ ಹೇಳಿದ ಹಾಗೆ ನಲ್ಲಿ ನೀರಿನ ಬವಣೆ ತಪ್ಪುವಂತಿಲ್ಲವೆಂದು ಕಾಣುತ್ತದೆ! ಅಚ್ಚೆ ದಿನ್ ಬಂದಾದ ಮೇಲೇನಾದರೂ ಬದಲಾಗುತ್ತದೆಯೆ ಕಾದು ನೋಡೋಣ !