00218. ಕಥೆ: ಪರಿಭ್ರಮಣ..(28)

00218. ಕಥೆ: ಪರಿಭ್ರಮಣ..(28)

(ಪರಿಭ್ರಮಣ..27ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಅಲ್ಲೇನೊ ವ್ಯವಸ್ಥೆ ಮಾಡಿ ಮಿಕ್ಕ ಆಫೀಸಿನ ಗಡಿಬಿಡಿಯತ್ತ ಗಮನವೀಯುವುದರ ನಡುವೆಯೆ ಒಂದು ದಿನ ಅಕೌಂಟಿಗ್ ಡಿಪಾರ್ಟ್ಮೆಂಟಿನಲ್ಲಿದ್ದ ಕುನ್. ವಂಚಾಯ್ ನ ವಯಸಾಗಿದ್ದ ತಂದೆ ತೀರಿಕೊಂಡರೆಂದು ಗೊತ್ತಾಗಿ, ಒಂದು ದಿನ ಮಧ್ಯಾಹ್ನ ಎಲ್ಲರೂ ಅಲ್ಲಿಗೆ ಭೇಟಿಯಿತ್ತು ಬರಲು ಹೋಗಬೇಕಾಗಿ ಬಂದಿತ್ತು. ಥಾಯ್ ಚೈನಿಗಳ ಗುಂಪಿಗೆ ಸೇರಿದ್ದ 'ಥಾಯ್ಚು' ಜನಾಂಗದವರಾದ ಕಾರಣ ಸಹಜವಾಗಿ ಅವರ ನಡೆ ನುಡಿಗಳು ಬಹುತೇಕ ಚೀನಿ ರೀತಿ ನೀತಿಗಳನ್ನೆ ಹೋಲುತ್ತಿದ್ದವು. ಸತ್ತಾಗ ಅನುಕರಿಸುವ ಪದ್ದತಿಗಳಲ್ಲಿ ಶ್ರೀನಾಥನಿಗೆ ಕಂಡು ಬಂದಿದ್ದ ಮೊಟ್ಟ ಮೊದಲ ದೊಡ್ಡ ವ್ಯತ್ಯಾಸವೆಂದರೆ ಅವರು ಸತ್ತ ಶವವನ್ನು ಕಾಪಿಡಲು ಬಳಸುತಿದ್ದ ವಿಧಿ, ವಿಧಾನಗಳು. ಸುಮಾರು ಐದು ದಿನಗಳವರೆಗು ಶವಪೆಟ್ಟಿಗೆಯೊಳಗಿಟ್ಟ ಶವವನ್ನು ಸಾರ್ವಜನಿಕ ದರ್ಶನಕ್ಕೆ ಅನುಕೂಲವಾಗಲೆಂದು ಯಾವುದಾದರೂ ಸೂಕ್ತ ಹಾಗೂ ಗೊತ್ತಾದ ಸ್ಥಳದಲ್ಲಿ ಇರಿಸುತ್ತಿದ್ದರು. ಇಟ್ಟ ಕಡೆಯಲ್ಲೇನೂ ಸತ್ತವನ ಮುಖ ಕಾಣಲಾಗುತ್ತಿರಲಿಲ್ಲವಾದರೂ, ಆ ಪೆಟ್ಟಿಗೆಯ ಸುತ್ತ ಮುತ್ತಲೆಲ್ಲ ಏನೇನೊ ಅಲಂಕರಣಗಳನ್ನು ಜತೆಗಿಟ್ಟು ಹೂ ಗುಚ್ಛ ಮತ್ತಿತ್ತರ ಸಲಕರಣೆಗಳಿಂದ ಅಲಂಕರಿಸಿ ಅವುಗಳ ನಡುವಲ್ಲಿ ವ್ಯಕ್ತಿಯ ಭಾವ ಚಿತ್ರವನ್ನಿಟ್ಟಿರುತ್ತಿದ್ದರು. ಶವಪೆಟ್ಟಿಗೆಯನ್ನು ಆ ಜಾಗದಲ್ಲಿಟ್ಟಿರುವ ತನಕ ಯಾರು ಬೇಕಾದರೂ ಬಂದು ಮೃತರಿಗೆ ಗೌರವ ಸಲ್ಲಿಸಿ ಹೋಗಬಹುದಿತ್ತು - ದೊಡ್ಡ ಗಜಗಾತ್ರದ ಉದಿನ ಕಡ್ಡಿಗಳನ್ನು ಕೈಲ್ಹಿಡಿದು ಮೇಲಕ್ಕು ಕೆಳಕ್ಕೂ ಲಂಬ ರೇಖೆಯಲ್ಲಿ ಆಡಿಸುತ್ತ, ಕೈ ಜೋಡಿಸಿ ನಮಿಸುತ್ತ. ಸಾಮಾನ್ಯವಾಗಿ, ಇಡಿ ಆವರಣವನ್ನು ತಾತ್ಕಾಲಿಕವಾದ ಮರೆಗಳಿಂದ  ಮುಚ್ಚಿ, ಖಾಸಗಿತನವನ್ನು ನಿಭಾಯಿಸುತ್ತಿದ್ದರು. ಆದರೆ ಆ ಶವಪೆಟ್ಟಿಗೆಯನ್ನು ಇಟ್ಟ ತಾಣ ಮೊದಲೆ ಸಹಜ ಕೌಂಪೌಂಡಿನಿಂದಾವೃತ್ತವಾಗಿದ್ದರೆ ಮರೆಯ ಅವಶ್ಯಕತೆ ಬೀಳುತ್ತಿರಲಿಲ್ಲ. ಹೀಗೆ ಮೇಲೆ ಮೇಲೆ ಅಷ್ಟಿಷ್ಟು ವಿವರ ಗೊತ್ತಿದ್ದರು ಥಾಯ್ಲ್ಯಾಂಡಿನಲ್ಲಿ ಸತ್ತಾಗ ಹೇಗೆ ನಿಭಾಯಿಸುತ್ತಾರೆಂಬ ಸ್ಪಷ್ಠ ಅರಿವಿರಲಿಲ್ಲ ಶ್ರೀನಾಥನಿಗೆ. ಕುನ್.ವಂಚಾಯ್ ತಂದೆ ಸತ್ತಾಗ ಆಫೀಸಿನ ಪರವಾಗಿ ಅಲ್ಲಿನ ಭೇಟಿಗೆ ಹೊರಡುವ ಮುನ್ನ ಶ್ರೀನಾಥನಲ್ಲಿಗೆ ಬಂದಿದ್ದ ಕುನ್. ಪಿಂಕ್, ಸಹೋದ್ಯೋಗಿಗಳೆಲ್ಲ ಮರುದಿನ ಸಂಜೆ ಶವ ಪೆಟ್ಟಿಗೆಗೆಯಿಟ್ಟಿರುವ ಜಾಗಕ್ಕೆ ಭೇಟಿ ನೀಡುವ ಯೋಜನೆ ಹಾಕಿದ್ದಾರೆಂದು, ಅವನಿಗೆ ಆಸಕ್ತಿಯಿದ್ದರೆ ಯಾರಾದರೊಬ್ಬರ ಜತೆಯಾಗಿ ಕಾರಿನಲ್ಲಿ ಹೋಗಿ ಬರಬಹುದೆಂದು ಹೇಳಿದಾಗ ಏನುತ್ತರಿಸಬೇಕೆಂದು ಗೊತ್ತಾಗಿರಲಿಲ್ಲ ಶ್ರೀನಾಥನಿಗೆ - ಹೋಗುವುದು ಸರಿಯೊ ತಪ್ಪೊ ಎನ್ನುವುದು ಸ್ಪಷ್ಟವಾಗದೆ ಗೊಂದಲದಲ್ಲಿ ಬಿದ್ದಿತ್ತು ಅವನ ಮನಸು.  ಸ್ಥಳೀಯ ಆಚಾರ ವಿಚಾರಗಳಂತೆ ಹೋಗದಿದ್ದರೆ ತಪ್ಪಾಗಿ ಅರ್ಥೈಸಬಹುದೇನೊ, ಸಲ್ಲದ ವರ್ತನೆಯಾಗಿ ಪರಿಭಾವಿಸಬಹುದೇನೊ ಎಂಬ ಆತಂಕ, ಅನುಮಾನವಿದ್ದ ಕಾರಣ ಏನು ಉತ್ತರಿಸುವುದೆಂದು ಗೊತ್ತಾಗದೆ, 'ಆಫೀಸಿನಿಂದ ಎಲ್ಲರೂ ಬರುತ್ತಿದ್ದಾರೆಯೆ?' ಎಂದು ಅವಳನ್ನೆ ಕೇಳಿದಾಗ, ಅವಳು ಸಕಾರಾತ್ಮಕವಾಗಿ ತಲೆಯಾಡಿಸಿದ್ದಳು. ಈ ಸಾವಿನ ಸಂದರ್ಭದಲ್ಲಿ ಎಲ್ಲರೂ ಹೊರಟಾಗ ತಾನು ಮಾತ್ರ ಹೋಗದಿದ್ದರೆ ಸರಿಯಿರದೆಂದೆಣಿಸಿ ತಾನೂ ಕೂಡ ಜತೆಗೆ ಬರುವುದಾಗಿ ಒಪ್ಪಿಗೆ ಸೂಚಿಸಿದ್ದ. ಹಾಗೆ ಅವನು ಒಪ್ಪಿಗೆ ಸೂಚಿಸಿದ ಆ ತಕ್ಷಣವೆ ಅವಳೊಂದು ಬರುವವರೆಲ್ಲರ ಹೆಸರಿನ ಪಟ್ಟಿಯಿದ್ದ ಕಾಗದದ ಕವರನ್ನು ಕೈಗಿಕ್ಕುತ್ತ, 'ಇದರೊಳಗೆ ನಿನ್ನ ಹೆಸರು, ವಿಭಾಗವನ್ನು ಬರೆದು ಪಕ್ಕದಲ್ಲಿ ನೀನೆಷ್ಟು ಹಣ ಕೊಡಬೇಕೆಂದು ಬಯಸುತ್ತಿಯೊ ಅಷ್ಟನ್ನು ದಾಖಲಿಸು..' ಎಂದಾಗ 'ಓಹೊ! ಸತ್ತವರನ್ನು ನೋಡಲು ಹೋಗುವಾಗ, ಇಲ್ಲಿ ಕೈಲಾದಷ್ಟು ಹಣ ನೀಡುವ ಪದ್ದತಿಯೂ ಇದೆ' ಎಂದುಕೊಂಡು ಆ ಕವರನ್ನು ತೆರೆದು ನೋಡಿದ್ದ. ಐವತ್ತು, ನೂರರಿಂದ ಹಿಡಿದು ಐನೂರರವರೆಗೆ ವಿಧವಿಧವಾದ ಮೊತ್ತವನ್ನು ಸಾಲಾಗಿ ಬರೆದಿದ್ದ ಆ ಕಾಗದಲ್ಲಿ ಬಹುತೇಕ ಮ್ಯಾನೇಜರರು ನೂರು ಬಾತು ಕೊಟ್ಟಿರುವುದಾಗಿ ನಮೂದಿಸಿದ್ದು ಕಂಡು, ತನ್ನ ಹೆಸರನ್ನು ಬರೆದು ಪಟ್ಟಿಗೆ ಸೇರಿಸುತ್ತಾ ತಾನೂ ನೂರು ಬಾತುಗಳನ್ನು ನಮೂದಿಸಿದ್ದ. ಆ ನಂತರ ಪರ್ಸಿನಿಂದ ನೂರರ ನೋಟನ್ನು ತೆಗೆದು ಅವಳ ಕೈಗೀಯುತ್ತಿದ್ದಂತೆ, 'ವೆಜಿಟೇರಿಯನ್ನಾ? ನಾನ್ ವೆಜಿಟೇರಿಯನ್ನಾ?' ಎಂದವಳು ಕೇಳಿದಾಗ ತಕ್ಷಣ ಏನೆಂದು ಅರ್ಥವಾಗದೆ ತಬ್ಬಿಬ್ಬಾಗಿ ಅವಳ ಮುಖವನ್ನೆ ನೋಡಿದ್ದ. ಆಗವಳಿಗೆ ಇವನು ಅಲ್ಲಿಯವನಲ್ಲವೆಂದು, ಅಲ್ಲಿನ ಪದ್ದತಿ, ರೀತಿ,ರಿವಾಜುಗಳು ಗೊತ್ತಿಲ್ಲವೆಂದರಿವಾಗಿ ಕೊಂಚ ವಿವರಣೆ ನೀಡುತ್ತ, 'ಭೇಟಿ ನೀಡುವವರೆಲ್ಲರು ಬಂದು ಸಂತಾಪ ಸಲ್ಲಿಸಿದ್ದಕ್ಕೆ ಕೃತಜ್ಞತೆಯ ಕುರುಹಾಗಿ ಹಾಗೆ ಬಂದುಹೋದವರಿಗೆಲ್ಲ ಊಟ ಹಾಕಬೇಕು... ಅದಕ್ಕೆಂದೆ ಐದು ದಿನವೂ ಬೇರೆ ಬೇರೆ ತರದ ಅಡುಗೆ ಮಾಡಿಸಿರುತ್ತಾರೆ..' ಎಂದಿದ್ದಳು. 

'ಓಹ್! ಸತ್ತವರನ್ನು ನೋಡಲು ಬರುವವರಿಗೆ ಊಟವೆ - ನಮ್ಮಲ್ಲಿ ತಿಥಿಗೆ ಮಾಡುವ ಹಾಗೆ?' ಇದೊಂದು ಮುಯ್ಯಿ ಹಾಕಿ ಮದುವೆ ಮನೆ ಊಟಕ್ಕೆ ಹೋಗುವ ಸಂಭ್ರಮದ ಕಾರ್ಯಕ್ರಮದಂತೆ ಕಾಣಿಸಿತೆ ಹೊರತು ವಿಷಾದ, ದುಃಖ, ಸಂಕಟಗಳು ಲೇಪಿಸಲ್ಪಟ್ಟ ಮಸಣಯಾತ್ರೆಯ ಹಾಗೆ ಅನಿಸಲಿಲ್ಲ... ಬಹುಶಃ ಇದೊಂದು ಅಂತಿಮ ಯಾತ್ರೆಯಲ್ಲು ಸಂಭ್ರಮದಿಂದ ಪರಂಧಾಮಕ್ಕೆ ಕಳಿಸಿಕೊಡುವ ಸ್ಥಳೀಯ ಪದ್ದತಿಯ ರೀತಿಯಿರಬಹುದೆಂದು ಅಂದುಕೊಳ್ಳುತ್ತಾ ಅಲ್ಲಿ ತಾನು ಊಟ ಮಾಡುವುದಿಲ್ಲವೆಂದು ಹೇಳಿದಾಗ, ಅಲ್ಲೇನಾದರೂ ಸೇವಿಸಲೇ ಬೇಕಾದ್ದು ಪದ್ದತಿ, ಇಲ್ಲದಿದ್ದರೆ ಆ ಸನ್ನಿವೇಶಕ್ಕದು ಅಸಭ್ಯ ನಡುವಳಿಕೆ ಅಂದಿದ್ದಳು. ಏನಿಲ್ಲವೆಂದರೂ ಕನಿಷ್ಠ ಯಾವುದಾದರೂ ಹಣ್ಣು ಮತ್ತು ಪೇಯವನ್ನಾದರೂ ಸ್ವೀಕರಿಸಲೇಬೇಕೆಂದು ಹೇಳಿದಾಗ ಬಾಳೆಹಣ್ಣು ಮತ್ತು ಚಹಾ ಸಾಕೆಂದಿದ್ದ ಶ್ರೀನಾಥ. ಆ ಹೊತ್ತಿನಲ್ಲೆ, ಈ ರೀತಿಯ ಸಂದರ್ಭಗಳಲ್ಲಿ ಇನ್ನೇನೇನು ಪಾಲಿಸಬೇಕಾದ ರೀತಿ, ನೀತಿ, ಪದ್ಧತಿಗಳಿವೆಯೊ ಎಂಬ ಪ್ರಶ್ನೆಯೂ ಮೂಡಿದಾಗ ಮತ್ತೆ ಅವಳನ್ನೆ ಪ್ರಶ್ನಿಸಿದ್ದ ಶ್ರೀನಾಥ.

' ಅಲ್ಲಿ ಹೋಗುವಾಗ ಮತ್ತೇನಾದರೂ ರೂಲ್ಸುಗಳನ್ನು ಪಾಲಿಸಬೇಕಿದ್ದರೆ ಈಗಲೆ ಹೇಳಿಬಿಡು..ಅದೊಂದು ಗೊತ್ತಿರದ ನನಗೆ ಅಲ್ಲಿ ಹೋಗಿ ಪರದಾಟವಾಗಬಾರದು' ಎಂದಾಗ ಅವಳಿದ್ದುಕೊಂಡು,

' ಇಲ್ಲ ಬೇರೇನೂ ಇಲ್ಲ ..ಅಲ್ಲಿ ಹೋದಾಗ ಬೇರೆಯವರು ಏನು ಮಾಡುತ್ತಾರೊ ಅದನ್ನೆ ನೀನು ಸುಮ್ಮನೆ ಅನುಕರಿಸಿದರೆ ಸಾಕು...ಹಾಂ..ಮರೆತೆಬಿಟ್ಟಿದ್ದೆ.. ಒಂದೆ ಒಂದು ಪಾಲಿಸಬೇಕಾದ  ವಿಷಯವಿದೆ, ತುಂಬ ಮುಖ್ಯವಾದದ್ದು...'

'ಏನು ವಿಷಯ ?'

' ಸತ್ತವರನ್ನು ನೋಡಲು ಹೋಗುವಾಗ ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಹೋಗಬಾರದು...'

' ಮತ್ತೆ?'

' ಬರಿ ಕಪ್ಪು ಮತ್ತು ಬಿಳಿ ಉಡುಪು ಮಾತ್ರ ಧರಿಸಬೇಕು.. ಸೂಟಿನ ಟೈ ಕೂಡ ಆ ರೀತಿಯದೆ ಹೊಂದಾಣಿಕೆ ಇರಬೇಕು...'

ಅದು ಬಹಳ ಮುಖ್ಯವಾದ ಮಾಹಿತಿಯಾಗಿತ್ತು.. ಎಲ್ಲಾ ಕಪ್ಪು ಬಿಳಿ ಧರಿಸಿ ಬಂದವರ ನಡುವೆ ಇವನು ಮಾಮೂಲಿ ಬಣ್ಣದ ದಿರಿಸಿನಲ್ಲಿ ಹೋಗಿದ್ದರೆ ಎಲ್ಲರ ನಡುವೆ ಎದ್ದು ಕಾಣುವುದಷ್ಟೆ ಅಲ್ಲದೆ, 'ಸನ್ನಿವೇಶದ ಸೂಕ್ಷ್ಮಗಳನ್ನರಿಯದ ಒರಟುತನದ' ಮುಜುಗರಕ್ಕೆ ಒಳಗಾಗಬೇಕಿತ್ತು. ಇಂತಹದ್ದನ್ನೆಲ್ಲ ಮೊದಲೆ ಹೇಳದೆ ತಾನು ಕೇಳಿದ ಮೇಲಷ್ಟೆ ಬಾಯಿಬಿಡುತ್ತಿರುವಳಲ್ಲ ಎಂದು ತುಸು ಕೋಪ ಬಂದರೂ, ಪಾಪ, ತಮ್ಮ ದೇಶದ ಹಾಗೆ ಎಲ್ಲಾ ಕಡೆಯೂ ಅದೇ ಪದ್ಧತಿ ಅಂದುಕೊಂಡಿರಬಹುದೆಂಬ ಅನಿಸಿಕೆಯೂ ಮೂಡಿ ಸುಮ್ಮನಾಗಿದ್ದ. ಒಟ್ಟಾರೆ ಮರುದಿನ ತನ್ನಲ್ಲಿರುವ ಕಪ್ಪು ಪ್ಯಾಂಟು ಮತ್ತೆ ಅಪರೂಪಕ್ಕೆ ತೊಡುವ ಬಿಳಿ ಅರ್ಧ ತೋಳಿನ ಶರಟು ಧರಿಸಿಕೊಂಡೆ ಆಫೀಸಿಗೆ ಬಂದರಾಯ್ತು, ಮತ್ತೆ ಬದಲಿಸುವ ಅಗತ್ಯವಿರುವುದಿಲ್ಲ ಎಂದು ನಿರ್ಧರಿಸಿಕೊಂಡವನಿಗೆ ಟೈ ಹಾಕಲೇಬೇಕೆ , ಇಲ್ಲವೆ ಎಂದು ಗೊಂದಲ ಶುರುವಾಗಿತ್ತು. ಯಾಕೆಂದರೆ ಅವನಲ್ಲಿ ಕಪ್ಪಿನದಾಗಲಿ, ಬಿಳಿಯದಾಗಲಿ - ಆ ಬಣ್ಣದ ಹೊಂದಾಣಿಕೆಯುಳ್ಳ ಟೈಗಳು ಇರಲಿಲ್ಲ. ಕೊನೆಗೆ ತಾನು ಓಡಾಡುವ ಹಾದಿಯಲ್ಲಿ ಪುಟ್ಪಾತಿನ ಬದಿಯಲ್ಲಿ ಐದು ಹತ್ತು ಬಾತಿಗೆಲ್ಲ ಮಾರುವ 'ಟೈ'ಗಳು ನೆನಪಾಗಿ ಅಲ್ಲಿಂದ ಒಂದು ಬಿಳಿಯದೊ, ಕರಿಯದೊ ಹುಡುಕಿ ಜತೆಗೊಯ್ಯುವುದು ಎಂದು ನಿರ್ಧರಿಸಿದ್ದ. ಅಲ್ಲಿ ಹೋಗುವಾಗ ಎಲ್ಲಾ ಧರಿಸಿದ್ದರೆ ತಾನು ಧರಿಸುವುದು ಇಲ್ಲವಾದರೆ ಹಾಗೆ ಜೇಬಿನಲ್ಲಿ ಎತ್ತಿಟ್ಟುಕೊಂಡರಾಯ್ತು ಎಂದುಕೊಂಡಾಗ ಮತ್ತಷ್ಟು ನಿರಾಳವಾಯ್ತು. ಈ ರೀತಿಯ ಸ್ಥಳೀಯ ಪದ್ದತಿ, ನಡುವಳಿಕೆ, ಸಂಪ್ರದಾಯ, ಸಾಂಸ್ಖೃತಿಕ ಹಿನ್ನಲೆಗಳ ಅರಿವಿಲ್ಲದೆ ಪರದಾಡುವುದು ಹೊಸತೇನೂ ಅಲ್ಲವಾದರೂ ಆ ರೀತಿಯ ಸನ್ನಿವೇಶಗಳೆ ಅವುಗಳನ್ನು ಅರಿಯುವ ಅವಕಾಶ ಮಾಡಿಕೊಡುತ್ತಿದ್ದುದು ಅಷ್ಟೆ ನಿಜವಾಗಿತ್ತು. ತಂಡದ ಇತರರೆಲ್ಲ ಇಂತಹ ಸಂದರ್ಭಗಳಲ್ಲಿ ಭಾಗವಹಿಸದೆ ದೂರವುಳಿದು ಬಿಡುತ್ತಿದ್ದರಾಗಿ ಆ ಒಂದು ಕಲಿಕೆಯ ಅವಕಾಶದಿಂದಲೂ ವಂಚಿತರಾಗಿಬಿಡುತ್ತಿದ್ದರು. ಶ್ರೀನಾಥ ಮಾತ್ರ ಅದರಿಂದುಂಟಾಗುವ ಮುಜುಗರಗಳನ್ನೆ ಕಲಿಕೆಯ ಹಂತವೆಂದು ಭಾವಿಸಿ ಮುನ್ನಡೆಯುತ್ತಿದ್ದ ಕಾರಣ, ಅಲ್ಲಿನವರೂ ಸಹ ಅವನನ್ನು ಇತರರಿಂದ ಬೇರೆಯಾಗಿಸಿ ವಿಭಿನ್ನವಾಗಿಯೆ ನೋಡುತ್ತಿದ್ದರು.

ಬಂದ ಹೊಸತರಲ್ಲಿ ಇಂತಹದ್ದೆ ರೀತಿಯ ಹಲವಾರು ಆಚಾರ, ವಿಚಾರ, ಪದ್ದತಿಗಳ ಕುರಿತಾದ ತಪ್ಪು ಅಥವಾ ಅರೆಬರೆ ತಿಳುವಳಿಕೆಯಿರುವುದು ಸರ್ವೇಸಾಮಾನ್ಯ ಸಂಗತಿಯೂ ಆಗಿತ್ತು. ಒಂದೊಮ್ಮೆ ಆಫೀಸಿನ ಬಹುತೇಕ ಜನರು, ಅದರಲ್ಲೂ ಹೆಂಗಸರು ಆಫೀಸಿನಲ್ಲಿರುವ ಹೊತ್ತಿನಲ್ಲಿ ಬರಿಗಾಲಿನಲ್ಲೆ ಓಡಾಡುವುದನ್ನು ಕಂಡು ಶ್ರೀನಾಥನಿಗೆ ಅಚ್ಚರಿಯಾಗಿತ್ತು - 'ಇದೇನು ಇಷ್ಟು ಕ್ಯಾಶುವಲ್ ಆಗಿ ಇರುತ್ತಾರಲ್ಲಾ' ಎಂದು. ಆದರೆ ಆ ನಡುವಳಿಕೆಯ ಹಿಂದಿನ ಗುಟ್ಟನ್ನು ಯಾರೊ ಸಂಸ್ಕೃತಿ, ಸಂಪ್ರದಾಯದ ಹಿನ್ನಲೆಯಲ್ಲಿ ವಿವರಿಸಿದಾಗ ಅದಕ್ಕಿಂತಲೂ ಹೆಚ್ಚಿನ ವಿಸ್ಮಯವುಂಟಾಗಿತ್ತು - 'ಥಾಯ್ ಜನರು ಆಫೀಸಿನಲ್ಲಿ ಚಪ್ಪಲಿ ಶೂಸಿಲ್ಲದೆ ಬರಿಗಾಲಲ್ಲೆ ಓಡಾಡುವರೆಂದರೆ ಅರ್ಥ ಅವರು ಆಫೀಸಿನಲಿ ತುಂಬಾ ಹೊಂದಿಕೊಂಡು ಬಿಟ್ಟಿದ್ದಾರೆ ಎಂದು; ಆ ಆಫೀಸಿನ ವಾತಾವರಣವನ್ನು ಮನೆಯಷ್ಟೆ ಗಾಢವಾಗಿ ಪ್ರೀತಿಸುತ್ತ, ಅಪ್ಯಾಯಮಾನವಾಗಿ ಪರಿಗಣಿಸುವ ಕಾರಣ ಮನೆಯಲ್ಲಿ ಬರಿಗಾಲಿನಲ್ಲಿ ಓಡಾಡಿದಂತೆ ಆಫೀಸಿನಲ್ಲೂ ಆರಾಮವಾಗಿ ಬರಿಗಾಲಿನಲ್ಲಿ ಓಡಾಡುತ್ತಾರೆ.. ಹಾಗೆ ಉದ್ಯೋಗಿಗಳು ಬರಿಗಾಲಲ್ಲಿ ಓಡಾಡುತ್ತಿದ್ದಾರೆಂದರೆ ಅಂತಹವರು ಆ ಕೆಲಸವನ್ನು ಹೆಚ್ಚು ಪ್ರೀತಿಸುವ ಕುರುಹು ಮತ್ತು ಅವರು ಆ ಕೆಲಸವನ್ನು ತ್ಯಜಿಸುವ ಅಥವಾ ಬಿಟ್ಟು ಹೋಗುವ ಸಾಧ್ಯತೆ ತೀರಾ ಕಡಿಮೆ ಎಂಬುದರ ಸುಳಿವು' ಎಂದು ಹೇಳಿದ್ದನ್ನು ಕೇಳಿ, ಬಂದ ಒಂದೆರಡು ತಿಂಗಳು ಪೂರ್ತಿ ತನ್ನ ಪ್ರಾಜೆಕ್ಟಿನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಸಹೋದ್ಯೋಗಿಗಳು ಬರಿಗಾಲಲ್ಲಿ ಓಡಾಡುತ್ತಾರೊ ಇಲ್ಲವೊ ಎಂದು ಅವರ ಪಾದಗಳನ್ನೆ ಗುಟ್ಟಾಗಿ ಗಮನಿಸುತ್ತಿದ್ದ - ಅದರ ಮೂಲಕ ಅವರು ತನ್ನಂತಹ ಅಪರಿಚಿತನ ನಾಯಕತ್ವದ ಪ್ರಾಜೆಕ್ಟಿನಲ್ಲಿ ಆರಾಮವಾಗಿ ಹೊಂದಿಕೊಂಡಿರುವರೆ ಇಲ್ಲವೆ ಎಂದು ತೂಗಿ ನೋಡಲು! ಆದರೆ ಅವನಿಗೆ ನಿರಾಶೆಯಾಗುವಂತೆ ಅಷ್ಟು ದಿನವೂ ಒಬ್ಬರೂ ಕೂಡ ಕಣ್ಣಿಗೆ ಬಿದ್ದಿರಲಿಲ್ಲ - ಹಾಗೆ ಬರಿಗಾಲಲ್ಲಿ ಓಡಾಡುವರು. ಕೊನೆಗೆ ಬೇಸತ್ತು ಹೋಗಿ ಗಮನಿಸುವುದನ್ನೆ ನಿಲ್ಲಿಸಿಬಿಟ್ಟಿದ್ದ ಆ ವಿಷಯದ ಆಯಾಮವನ್ನೆ ಮರೆತವನಂತೆ. ಮತ್ತೆ ಹಲವಾರು ತಿಂಗಳ ಬಳಿಕವಷ್ಟೆ ಆಕಸ್ಮಿಕವಾಗಿ ಅವರ ಪಾದಗಳನ್ನು ಗಮನಿಸಿದಾಗ ಅವರೆಲ್ಲ ಬರಿಗಾಲಲ್ಲೆ ಓಡಾಡುವುದು ಕಂಡು - ' ಓಹ್ ! ಪ್ರಾಜೆಕ್ಟಿನಲ್ಲಿ ಆ ನಿರಾಳತೆಯ ಮಟ್ಟ ತಲುಪಲು ಹೆಚ್ಚು ಕಾಲ ಹಿಡಿದಿರಬೇಕು' ಎಂದು ಸಮಾಧಾನಪಟ್ಟುಕೊಂಡಿದ್ದ. ಇದೆ ರೀತಿಯಲ್ಲಿ ಸಂಪ್ರದಾಯಗಳ ಕುರಿತು ಅಲ್ಲಿನವರೊಡನೆ ಮಾತನಾಡುತ್ತಿದ್ದಾಗ ಎರಡು ದೇಶಗಳ ಮದುವೆಗಳ ವಿಷಯವೂ ಚರ್ಚೆಗೆ ಬಂದಿತ್ತು. ಅಲ್ಲಿನ ಬಹುತೇಕ ಮಹಿಳಾ ಸಹೋದ್ಯೋಗಿಗಳು ಭಾರತದಲ್ಲಿ ವರದಕ್ಷಿಣೆಯ ಪದ್ದತಿಯೆಂದು ಕೇಳಿ ತೀರಾ ಬೇಸರ ವ್ಯಕ್ತಪಡಿಸಿದ್ದರು. ಅದಕ್ಕೇನು ಕಾರಣವೆಂದು ಆಳವಾಗಿ ನೋಡಿದರೆ - ಥಾಯ್ಲ್ಯಾಂಡಿನಲ್ಲಿ ವಧುದಕ್ಷಿಣೆ ಪದ್ದತಿ ಅನುಸರಿಸುತ್ತಾರೆಂದು ಗೊತ್ತಾಗಿತ್ತು! ತಂಡದಲ್ಲಿ ಕೆಲವರು 'ಎಲಿಜಿಬಲ್' ಬ್ರಹ್ಮಚಾರಿಗಳಿದ್ದ ಕಾರಣ, ಮದುವೆಗೆ 'ಬಾಯ್ ಫ್ರೆಂಡ್' ಗಳನ್ನು ಹುಡುಕುತಿದ್ದ ಕೆಲವು ಲಲನಾಮಣಿಗಳಿಗಂತೂ ಇದರಿಂದ ತೀವ್ರ ನಿರಾಶೆಯಾಗಿದ್ದೂ ನಿಜವೆ. ಅದೃಷ್ಟವಶಾತ್ ಪ್ರಾಜೆಕ್ಟಿನ ತಂಡದಲ್ಲಿದ್ದ ಬಹುತೇಕ ಸಹೋದ್ಯೋಗಿಗಳೆಲ್ಲ ಅಷ್ಟೊತ್ತಿಗಾಗಲೆ ಮದುವೆಯಾಗಿ ಮಕ್ಕಳು ಮರಿಯಿದ್ದವರಾದ ಕಾರಣ ಪ್ರಾಜೆಕ್ಟು ನಡೆಸುವ ಹೊತ್ತಿನಲ್ಲಿ ಇದರಿಂದ ಯಾವುದೆ ತೊಡಕುಂಟಾಗದೆ ಮುನ್ನಡೆಯಲು ಸಾಧ್ಯವಾಯ್ತೆಂದು ತಂಡದವರ ನಡುವಲ್ಲೆ ಆಗಾಗ ತಮಾಷೆಗೆ ಪರಸ್ಪರರನ್ನು ಛೇಡಿಸುವುದು ನಡೆದೆ ಇತ್ತು.

ಮುಂದಿನ ದಿನ ಕಪ್ಪು ಬಿಳಿಯುಡುಗೆ ತೊಟ್ಟು ಕಪ್ಪು ಶೂ ಟೈ ಜತೆ ಸಹೋದ್ಯೋಗಿಯೊಬ್ಬರ ಕಾರನ್ನೇರಿದ್ದ ಶ್ರೀನಾಥನಿಗೆ ಹೋಗಬೇಕಿದ್ದ ಸ್ಥಳ ತಲುಪುತ್ತಿದ್ದಂತೆ ಅಚ್ಚರಿಯೊಂದು ಕಾದಿತ್ತು. ಅದೊಂದು ಮಾಮೂಲಿ ಜಾಗದಂತೆ ಇರದೆ ದೊಡ್ಡ ಬೌದ್ದ ದೇವಾಲಯದಂತೆ ಕಾಣುತ್ತಿತ್ತು - ಬಹುಶಃ ನಮ್ಮಲ್ಲಿ ಮದುವೆಯ ಹಾಲ್ ಗಳಿರುವಂತೆ, ಅಲ್ಲಿ ಈ ರೀತಿಯ ಐದು ದಿನದ ಕಾರ್ಯಕ್ರಮಕ್ಕೆ ಸೂಕ್ತವಾಗುವ ಜಾಗಗಳಾಗಿದ್ದವೊ ಏನೊ? ಅಲ್ಲಿ ಮುಖ್ಯ ಹಜಾರದಲ್ಲಿದ್ದ ದೊಡ್ಡ ಬುದ್ದನ ಪ್ರತಿಮೆಯ ಮುಂದಿರುವ ಆವರಣದಲ್ಲೆ ಶವ ಪೆಟ್ಟಿಗೆಯನ್ನು ಇರಿಸಲಾಗಿತ್ತು.  ಸುತ್ತ ಮುತ್ತಲೆಲ್ಲ ಬರಿ ಕಪ್ಪು ಬಿಳುಪು ಉಡುಗೆಯವರೆ ತುಂಬಿದ್ದು ಕಂಡು ತಾನು ಅದೆ ರೀತಿ ಬಂದುದ್ದಕ್ಕೆ ಸಮಾಧಾನದ ನಿಟ್ಟುಸಿರಿಡುತ್ತ ಅವರ ಜತೆಗೆ ಹೋಗಿ ಖಾಲಿಯಿದ್ದ ಕುರ್ಚಿಯೊಂದರಲ್ಲಿ ಕುಳಿತುಕೊಂಡಿದ್ದ ಶ್ರೀನಾಥ. ಆ ಹೊತ್ತಿನಲ್ಲಿ ಯಾವುದೊ ವಿಶೇಷ ಪೂಜೆ ಕೈಗೊಂಡವರಂತೆ ಆರೇಳು ಜನ ಬೌದ್ಧ ಪುರೋಹಿತರು, ತಮ್ಮ ವಿಶಿಷ್ಠವಾದ ಕೇಸರಿ ಮಿಶ್ರಿತ ಕೆಂಬಣ್ಣದ ನಿಲುವಂಗಿಯ ದಿರಿಸಿನಲ್ಲಿ ಕೂತು ಯಾವುದೊ ಮಂತ್ರಗಳನ್ನು ಜೋರಾಗಿ ಪಠಿಸುತ್ತಿದ್ದರೆ , ಅದಕ್ಕೆ ಸಂವಾದಿಯಾಗುವಂತೆ ಲಯಬದ್ದವಾಗಿ ಮರದ ಹಲಗೆ ಮಣೆಯೊಂದರ ಮೇಲೆ ಕೋಲೊಂದರಿಂದ ಬಡಿಯುತ್ತಿರುವ ಸದ್ದು ಹಿನ್ನಲೆಯಲ್ಲಿ ಕೇಳಿಸುತ್ತಿತ್ತು. ಸುಮಾರು ಹತ್ತು ಹದಿನೈದು ನಿಮಿಷ ಹಾಗೆ ಕೂತಿದ್ದ ಹೊತ್ತಿನಲ್ಲಿ ಯಾರೊ ಬಂದು ಪಾನೀಯವನ್ನು ಕೈಗಿತ್ತು ಹೋಗಿದ್ದರು. ಅದನ್ನು ಗುಟುಕರಿಸಿ ಮುಗಿಸುತ್ತಿದ್ದ ಹಾಗೆ ಜತೆಗೆ ಬಂದಿದ್ದ ಸಹ್ಯೋದ್ಯೋಗಿಗಳೆಲ್ಲ ಒಬ್ಬೊಬ್ಬರಾಗಿ ಮೇಲೇಳುತ್ತಿದ್ದುದು ಕಂಡು ತಾನೂ ಮೇಲೆದ್ದಿದ್ದ ಶ್ರೀನಾಥ ಅವರನ್ನೆ ಅನುಕರಿಸುವ ಸಲುವಾಗಿ. ಅವರೆಲ್ಲ ಒಬ್ಬೊಬ್ಬರಾಗಿ ಎದ್ದು ಮೃತದೇಹವಿಟ್ಟಿದ್ದ ಶವಪೆಟ್ಟಿಗೆಯತ್ತ ಸಾಗಿ, ಅದರ ಮುಂದೆ ಮಂಡಿಯೂರಿ ಕುಳಿತು, ಎರಡೂ ಕೈಯಲ್ಲಿ ಊದುಬತ್ತಿಯನ್ನು ಹಿಡಿದುಕೊಂಡು ಕೈ ಜೋಡಿಸುತ್ತ, ಮೇಲೆ ಕೆಳಗೆ ಆಡಿಸುತ್ತ ತಲೆ ಬಾಗಿ ಅಂತಿಮ ನಮನಗಳನ್ನು ಸಲ್ಲಿಸುತ್ತಿರುವುದನ್ನು ಕಂಡು, ಅದೆ ಸಾಲಿನಲ್ಲಿ ನಿಂತಿದ್ದ ಶ್ರೀನಾಥನಿಗೆ ವಿದೇಶಿಯನಾದ ತಾನು ಅದನ್ನು ಯಥಾವತ್ತಾಗಿ ಅನುಕರಿಸಬೇಕೆ ? ಅಥವಾ ಯಥಾರೀತಿ ನಕಲು ಮಾಡದೆ ಬರಿ ಕೈಜೋಡಿಸಿ ನಮಿಸಿ ಬಂದುಬಿಡಬಹುದೆ? ಎಂದು ನಿರ್ಧರಿಸಲಾಗದೆ ತೊಳಲುತ್ತಿದ್ದಾಗ, ಅಲ್ಲಿ ಹೋದ ಪ್ರತಿಯೊಬ್ಬರು ಅದೆ ರೀತಿಯಲ್ಲಿ ನಮನ ಪ್ರಕ್ರಿಯೆ ಮಾಡುತ್ತಿರುವುದನ್ನು ಗಮನಿಸಿ, ತಾನೂ ಅದನ್ನೆ ಅನುಕರಿಸುವುದು ಒಳಿತೆಂದೆನಿಸಿತ್ತು. ಅಲ್ಲದೆ ಸಾಲಿನ ನಡುವಲ್ಲಿ ಈಗಾಗಲೆ ಹೋಗಿ ನಿಂತುಬಿಟ್ಟಿದ್ದ ಕಾರಣ, ಸಾಲು ತ್ಯಜಿಸಿ ಹೊರಬರಲು ಯತ್ನಿಸಿದರೂ ಎಲ್ಲರ ಗಮನ ಸೆಳೆದುಬಿಡುತ್ತಿತ್ತು. ಸಾಲದ್ದಕ್ಕೆ ದೂರದಿಂದ ವೀಡಿಯೊ ಗ್ರಾಹಕನೊಬ್ಬ ಎಲ್ಲವನ್ನು ಚಿತ್ರೀಕರಿಸುತ್ತಿದ್ದನ್ನು ಕಂಡು ಅಲ್ಲಿ 'ಸೀನ್' ಕ್ರಿಯೇಟ್ ಮಾಡುವುದು ಅಪ್ರಬುದ್ಧತೆ, ಅಪಕ್ವತೆಯ ಪ್ರದರ್ಶನವಾಗುತ್ತದೆಂದು ಅರಿವಾಗಿ ತೆಪ್ಪಗೆ ಇತರರಂತೆ ತಾನೂ ನಮನ ಸಲ್ಲಿಸಿ ಬಂದಿದ್ದ. ಆದರು ಹಾಗೆ ಯಾರೊ ಗೊತ್ತಿಲ್ಲದ ಮೃತವ್ಯಕ್ತಿಗೆ ನಮಿಸಿ ಬರುವುದೆ ವಿಚಿತ್ರವಾಗಿ ಕಂಡಿತ್ತಲ್ಲದೆ, ಕೊನೆಯಲ್ಲಿ ತಲೆಯನ್ನು ನೆಲಕ್ಕೆ ತಗುಲಿಸಿ ನಮಸ್ಕರಿಸುವ ಪ್ರಕ್ರಿಯೆ ತೀರಾ ವಿಚಿತ್ರವಾದ ಅಪರಿಚಿತ ಮುಜುಗರದ ಅನುಭೂತಿಗೆ ಕಾರಣವಾಗಿತ್ತು. ಅದನ್ನು ಮುಗಿಸಿದವರೆಲ್ಲ ನೇರ ಡಿನ್ನರ ಟೇಬಲಿನತ್ತ ನಡೆಯುತ್ತಿದ್ದನ್ನು ಕಂಡು ಅವರನ್ನು ತಾನೂ ಹಿಂಬಾಲಿಸಿದರೂ, ಕೊನೆಗೊಂದಷ್ಟು ಏನೊ ಕುಡಿದ ಶಾಸ್ತ್ರ ಮಾಡಿ ಹೊರಬಿದ್ದಿದ್ದ, ಸಾವಿನ ಮನೆಯ ವಾತಾವರಣದಲ್ಲಿ ವಿಷಾದ ಸೂಚಿಸಲು ಹೋಗಿ ತಿಂದು ಬರುವುದು ಹೇಗೆ ಸಾಧ್ಯವೆಂದು ಅರಿವಾಗದೆ; ತಿನ್ನದೆ ಬರುವುದು ಬಹುಶಃ ಮೃತಾತ್ಮದ ತೃಪ್ತಿಗೆ ಪೂರಕವಿರದೆಂಬ ನಂಬಿಕೆಯೂ ಕಾರಣವಾಗಿರಬಹುದೆಂದು ಅನಿಸಿತ್ತು. ಈ ರೀತಿಯ ಸಂಪ್ರದಾಯದ ತಾಕಲಾಟಗಳು ವಿದೇಶಿ ಜೀವನದಲ್ಲಿ ಆಗ್ಗಾಗೆ ಕಾಡುತ್ತಿದ್ದರೂ, ಅವುಗಳ ಅರಿವಿನ ಪ್ರಜ್ಞೆ ಸ್ಥಳೀಯ ಜನರ ಜತೆ ಒಡನಾಟಕ್ಕೆ, ಅರ್ಥಪೂರ್ಣ ಸಾಂಗತ್ಯಕ್ಕೆ ಸಹಕಾರಿಯಾಗುತ್ತಿದ್ದುದರಿಂದ ಅಸಹನೀಯವಾದರೂ ಅನಿವಾರ್ಯವೆಂಬಂತೆ ತನ್ನನ್ನೆ ತೊಡಗಿಸಿಕೊಳ್ಳುತ್ತಿದ್ದ ಶ್ರೀನಾಥ - ಸಾಧ್ಯವಾಗುವಷ್ಟರಮಟ್ಟಿಗೆ. 

ಮೊದಲ ತಿಂಗಳ-ಕೊನೆಗೆ ಹತ್ತಿರ ಹತ್ತಿರವಾಗುತ್ತಿದ್ದಂತೆ ಒಂದೆಡೆ ಮೊದಲ ತಿಂಗಳ-ಕೊನೆಯ ಯಶಸ್ಸಿಗೆ ಬೇಕಿದ್ದ ಸಿದ್ದತೆಯತ್ತ ಗಮನ ಹರಿದು ಸಂಪೂರ್ಣ ಬಿಜಿಯಾಗಿಬಿಟ್ಟಿದ್ದ ಶ್ರೀನಾಥ; ಮತ್ತೊಂದೆಡೆ ಕುನ್. ಸು ಕೆಲಸ ಕಳೆದುಕೊಂಡ ಸುದ್ದಿಯ ಆಘಾತದಿಂದ ಹೊರಗೆ ಬರಲು ಕೆಲ ಸಮಯವೆ ಹಿಡಿಯುವಂತೆ ಕಂಡರೂ, ತಿಂಗಳ ಕೊನೆಯಾಗಲಿಕ್ಕೆ ಮಿಕ್ಕುಳಿದ ಕೆಲವೆ ದಿನಗಳಲ್ಲಿ ಮುಗಿಸಬೇಕಾದ ಅಗಾಧ ಕಾರ್ಯಭಾರದಿಂದಾಗಿ ಆ ಕಡೆಗೆ ಗಮನವೀಯಲೂ ಸಾಧ್ಯವಾಗದಷ್ಟು ಕೆಲಸಗಳು ಸಾಲುಗಟ್ಟಿ ನಿಂತುಬಿಟ್ಟಿದ್ದವು. ಕುನ್. ಸೋವಿಯ ಜತೆ ಮಾತನಾಡಿದ್ದಂತೆ ಎಲ್ಲಾ ಯೋಜನೆಗನುಸಾರ ಸಾಗುತ್ತಿದೆಯೆ ಇಲ್ಲವೆ ಎಂದು ಪ್ರತಿದಿನದ ಕೊನೆಗೆ ಮಾಹಿತಿ ಸಂಗ್ರಹಿಸಿ, ಅದರಲ್ಲೇನಾದರೂ ತೊಡಕು ಕಂಡರೆ ಅದನ್ನು ಕುನ್. ಸೋವಿ ಮತ್ತು ಸೌರಭ್ ದೇವನೊಡನೆ ಚರ್ಚಿಸಿ, ನಿವಾರಣ ಕ್ರಮ ಕೈಗೊಳ್ಳುವಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸ್ವತಃ ತಾನೇ ಮಾಡಬೇಕಾದ ಕಾರ್ಯಗಳು ಅಷ್ಟಾಗಿರದಿದ್ದರು, ಅದನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೆ ಇಲ್ಲವೆ ಎಂದು ಪರಾಮರ್ಶಿಸಿ ನೋಡಿ, ಮೇಲುಸ್ತುವಾರಿಕೆ ನಡೆಸಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಅಂದುಕೊಂಡಿದ್ದಂತೆ ಒಂದು ವಾರದ ಒಳಗೆ ಬೇಕಿದ್ದ ಎಲ್ಲಾ ಆರ್ಡರುಗಳನ್ನು ಸೋಸಿ, ಬೇಕಿದ್ದ ಡಾಕ್ಯುಮೆಂಟುಗಳನ್ನೆಲ್ಲ ಪ್ರಿಂಟು ಹಾಕುವ ಕೆಲಸವನ್ನು ಸ್ವಲ್ಪ ಓವರ ಟೈಮಿನ ಸಹಾಯದಿಂದ ಮುಗಿಸಿಕೊಳ್ಳುತ್ತಿದ್ದ ಕುನ್. ಸೋವಿ. ಹೀಗಾಗಿ ಸಿಸ್ಟಮ್ಮಿನ ಅವಲಂಬನೆಯಿಲ್ಲದೆ ವೇರ್ಹೌಸಿನ ಭೌತಿಕ ಕಾರ್ಯಾಚರಣೆ ನಡೆಸಲು ಇದ್ದ ಅಡೆತಡೆಯಂತೂ ಪರಿಹಾರವಾದಂತಾಗಿತ್ತು. ಆ ಕೊನೆಯ ಹಂತದಲ್ಲೊಮ್ಮೆ ಒಟ್ಟಾರೆ ಒಗ್ಗೂಡಿಸಿರುವ ಆರ್ಡರುಗಳ ಮೊಬಲಗಿನ ಮೊತ್ತ ನೋಡಿದಾಗ ತಿಂಗಳ ಗುರಿಗಿಂತ ಶೇಕಡಾ ನಲವತ್ತರಷ್ಟು ಹೆಚ್ಚು ವಹಿವಾಟಿನ ಸಾಧ್ಯತೆಯನ್ನು ತೋರಿಸಿತ್ತು. ಚಾಣಕ್ಷ್ಯ ಕುನ್. ಸೋವಿ ತಾನು ಸಮಯಕ್ಕೆ ಮೊದಲೆ ಪ್ರಿಂಟು ಹಾಕಿದ್ದರಲ್ಲಿ ಕೆಲವಾದರೂ ಸ್ಟಾಕಿಲ್ಲದೆಯೊ, ಅಥವಾ ಮತ್ತಾವುದೊ ಕಾರಣಕ್ಕೊ ಪೂರ್ಣಗೊಳಿಸಿಕೊಳ್ಳಲಾಗದ ಅಥವಾ ಸರಕು ಕಳಿಸಲಾಗದ ತೊಡಕಿಗೆ ಸಿಕ್ಕಿಕ್ಕೊಳ್ಳಬಹುದೆಂದು ಮೊದಲೆ ಊಹಿಸಿ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೆ ಆರ್ಡರುಗಳನ್ನು ಸಿದ್ದ ಮಾಡಿಟ್ಟುಕೊಂಡುಬಿಟ್ಟಿದ್ದ. ಹೀಗಾಗಿ ಆಯ್ಕೆಯ ನಿಖರತೆಯಲ್ಲಿ ಸ್ವಲ್ಪ ಎಡವಟ್ಟಾಗಿ ಸ್ವಲ್ಪ ತಾರುಮಾರಾದರೂ, ಅವನ ಶೇಕಡ ಮೂವತ್ತರ ಅಧಿಕ ಗುರಿಗೆ ಏಟು ಬೀಳದಂತೆ ನೋಡಿಕೊಂಡಿದ್ದ. ಸಾಲದ್ದಕ್ಕೆ ಆ ವಾರದಿಂದಲೆ ಪ್ರತಿದಿನವೂ ಮಾಮೂಲಿಗಿಂತ ಸ್ವಲ್ಪ ಹೆಚ್ಚಿನ ಸರಕನ್ನೆ ಕಳಿಸುತ್ತಾ ದೈನಂದಿನ ಕೆಲಸದ ಹೊರೆಯಲ್ಲೆ ಅಧಿಕಾಂಶದ ಗುರಿಯನ್ನು ಸ್ವಲ್ಪ ಸ್ವಲ್ಪವಾಗಿ ಬೆರೆಸಿ ತಿಂಗಳ ಕೊನೆಯ ಉಬ್ಬರವನ್ನು ಆದಷ್ಟು ಸಮತಟ್ಟಾಗಿರುವಂತೆ ನಿಭಾಯಿಸಿ, ಹೆಚ್ಚುವರಿ ವಹಿವಾಟಿನ ಕಾರ್ಯಭಾರ ಭೌತಿಕ ಸ್ತರದಲ್ಲೂ ನಿರ್ವಹಿಸಲಾಗದ ಹೆಚ್ಚುವರಿ ಹೊರೆಯಾಗದಂತೆ ನೋಡಿಕೊಂಡಿದ್ದ. ತಿಂಗಳ ಕೊನೆಗೆ ಮೂರೆ ದಿನಗಳಿವೆಯೆನ್ನುವಾಗ ಹೆಚ್ಚುಕಡಿಮೆ ಶೇಕಡ ಎಂಬತ್ತು-ತೊಂಬತ್ತರಷ್ಟು ವೇರ್ಹೌಸ್ ಸಿದ್ದತೆ ಮುಗಿದು ಸರಕು ಅಂತಿಮ ಸಾಗಾಣಿಕೆಗೆ ಸಿದ್ದವಾಗಿ ನಿಂತಿದ್ದನ್ನು ಕಂಡು, ಯಾವುದೆ ಪರಿಸ್ಥಿತಿಯಲ್ಲೂ ಗುರಿ ಮುಟ್ಟಲು, ಬಾಕಿಯುಳಿದ ಮೂರು ದಿನಗಳಲ್ಲಿ ಕೇವಲ ಅರ್ಧ ದಿನ ಸಿಸ್ಟಮ್ಮಿದ್ದರೂ ಸಾಕೆನ್ನುವ ಮಟ್ಟಕ್ಕೆ ಮುಟ್ಟಿತ್ತು - ಎಲ್ಲವು ಅಂದುಕೊಂಡ ಲೆಕ್ಕಾಚಾರದಂತೆ ನಡೆದರೆ...

ಆ ಅಂತಿಮ ಹಂತದಲ್ಲಿ ತೀವ್ರ ಸಿದ್ದತೆಯ ಹೊರತಾಗಿಯೂ, ಏನಾದರೂ ವೈಪರೀತ್ಯ ಸಂಭವಿಸಿ ತಮ್ಮ ಯೋಜನೆ ಹಳಿ ತಪ್ಪಿದರೆ? - ಎನಿಸಿ ಆ ಅಂತಿಮ ಕ್ಷಣದಲ್ಲೂ ಒಳಗಿಂದ ಹೊರಗಿನ ತನಕ ನಡುಕವುಂಟಾಗಿ, ಮೈಯೆಲ್ಲ ಒಮ್ಮೆಗೆ ಝಿಲ್ಲನೆ ಬೆವರಿ ತೋಯ್ದು ಹೋಗಿತ್ತು ಶ್ರೀನಾಥನಿಗೆ ! 

(ಇನ್ನೂ ಇದೆ)
__________
 

Comments

Submitted by kavinagaraj Mon, 06/30/2014 - 09:31

ನಾಗೇಶರೇ, ಥಾಯ್ ಸಂಪ್ರದಾಯಗಳ ಪರಿಚಯವನ್ನೂ ಮಾಡಿಸುತ್ತಾ ಕಥೆ ಮುಂದುವರೆಸಿರುವ ರೀತಿ ಚೆನ್ನಾಗಿದೆ. ಕುತೂಹಲಕಾರಿ ಘಟ್ಟದಲ್ಲಿ. . . .ಬ್ರೇಕ್ ಹಾಕಿರುವಿರಿ. ಮುಂದುವರೆಯಲಿ.

Submitted by nageshamysore Tue, 07/01/2014 - 18:24

In reply to by kavinagaraj

ಹೌದು ಕವಿಗಳೆ, ಕಥಾನಕದ ಜತೆಜತೆಗೆ ಅನುಭವಕ್ಕೆ ಬಂದ ಅಥವಾ ನಾನು ಗಮನಿಸಿದ್ದ ಪದ್ದತಿ, ಸಂಪ್ರದಾಯಗಳನ್ನು ನೆನಪಿನ ಶಕ್ತಿ ಸಹಕರಿಸಿದಷ್ಟು ದಾಖಲಿಸಲು ಯತ್ನಿಸಿದ್ದೇನೆ. ಸುಮಾರು ಹತ್ತು ಹನ್ನೆರಡು ವರ್ಷದ ಹಿಂದಿನ ನೆನಪಾದರೂ, ಪುಣ್ಯಕ್ಕೆ ಸಾಕಷ್ಟು ಸುಲಭದಲ್ಲೆ ನೆನಪಿಗೆ ಬರುತ್ತಿದೆ. ಬರಿ ಪದ್ದತಿ ಸಂಪ್ರದಾಯವನ್ನು ಸಪ್ಪೆಯಾಗಿ ಹೇಳುವ ಬದಲು ಕಥಾನಕದ ಹಂದರಕ್ಕೆ ತೂರಿಸಲು ಯತ್ನಿಸಿದ್ದೇನಷ್ಟೆ :-)