ಕಥೆ: ಪರಿಭ್ರಮಣ..(29)
( ಪರಿಭ್ರಮಣ..28ರ ಕೊಂಡಿ - https://nageshamysore.wordpress.com/00218-%e0%b2%95%e0%b2%a5%e0%b3%86-%e... )
ತಿಂಗಳ ಕೊನೆಯ ಮೂರು ದಿನಗಳು ಹತ್ತಿರವಾದಂತೆಲ್ಲ ಶ್ರೀನಾಥನ ಎದೆ ಬಡಿತ ಹದ ತಪ್ಪಿದಂತೆ ಭಾಸವಾಗುತ್ತಿತ್ತು. ಸಿಸ್ಟಂ ಡೌನ್ ಆಗಬಹುದೆಂಬ ಊಹಾತ್ಮಕ ಅನಿಸಿಕೆಯ ಆಧಾರದ ಮೇಲೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡೇನೊ ಆಗಿದ್ದರೂ, ನೂರಕ್ಕೆ ನೂರು ಅಂದುಕೊಂಡಿದ್ದ ರೀತಿಯೆ ಘಟಿಸಬೇಕೆನ್ನುವ ಗ್ಯಾರಂಟಿಯೇನೂ ಇರಲಿಲ್ಲ. ಮನಸಿನ ಮತ್ತೊಂದು ಮೂಲೆಯಲ್ಲಿ ಇದೆಲ್ಲಾ ಕೇವಲ ತನ್ನ ಭ್ರಮಾತ್ಮಕ ಅನಿಸಿಕೆಯಷ್ಟೆ ಆಗಿದ್ದು, ನಿಜಕ್ಕೂ ಆ ರೀತಿಯ ದುಷ್ಕೃತ್ಯದ ಹವಣಿಕೆಯೇನು ಇರದಿರಬಹುದಾದ ಸಾಧ್ಯತೆಯೂ ಕೊರೆಯುತ್ತಿತ್ತು - ತನ್ನದೇನಾದರೂ ಅನಪೇಕ್ಷಿತ, ಅನುಚಿತ, ಆತುರದ ಪ್ರತಿಕ್ರಿಯೆಯಾಗಿಬಿಟ್ಟೀತೆ? ಎಂದು ಭೀತಿ ಹುಟ್ಟಿಸುತ್ತ. ಅದೆಲ್ಲವನ್ನು ಮೀರಿಸಿದ್ದ ಮತ್ತೊಂದು ಭೀತಿಯೆಂದರೆ, ಶ್ರೀನಿವಾಸ ಪ್ರಭುವೇನಾದರೂ ತಾನಂದುಕೊಂಡಿದ್ದಕ್ಕಿಂತ ವಿಭಿನ್ನವಾದ ದುರಾಲೋಚನೆಯನ್ನೇನಾದರೂ ರೂಪಿಸಿ ತನ್ನ ಪ್ರತ್ಯುಪಾಯವನ್ನು ಏಮಾರಿಸಿಬಿಡಬಹುದೇನೊ ಎಂಬ ಮತ್ತೊಂದು ಆತಂಕ. ಮತ್ತೊಂದೆಡೆ ಅವನ ಕುಯುಕ್ತಿಯ ಮನದ ಆಲೋಚನಾ ಪರಿಯನ್ನು ಚೆನ್ನಾಗಿ ಅರಿತಿರುವ ಕಾರಣ, ಅವನು ತಾನಂದುಕೊಂಡಂತೆ ಮಾಡೇ ತೀರಬಹುದೆಂಬ ಬಲವಾದ ಅಂಜಿಕೆ. ಹೀಗೆ ಗಳಿಗೆಗೊಂದು ರೀತಿಯ ಪರಸ್ಪರ ವಿರುದ್ಧ ಚಿಂತನೆಗಳೆ ಪೂರ್ತಿ ಮನವನ್ನಾಕ್ರಮಿಸಿಕೊಂಡು ಗೊಂದಲದಲ್ಲಿ ಕೆಡವಿಬಿಡುತ್ತಿದ್ದವು - ಒಂದೆಡೆ ಅಸೀಮ ಆತ್ಮವಿಶ್ವಾಸದ ಮೆರುಗು ಹಚ್ಚುತ್ತ, ಮತ್ತೊಂದೆಡೆ ಪಾತಾಳಕಿಳಿಸುವ ಆತಂಕದ ಅಳುಕು ತೀಡುತ್ತ. ಅದೆ ಮನಸ್ಥಿತಿಯಲ್ಲಿ ಅಂದು ಆಫೀಸಿಗೆ ಬರುವ ದಾರಿಯಲ್ಲಿ, ಎಂದಿನಂತೆ ಐದು ಬಾತ್ ಕೊಟ್ಟು ಬಿಸಿ ಬಿಸಿಯಾದ ಸೋಯಾಹಾಲು ಕೊಳ್ಳಲು ನಿಂತಿದ್ದಾಗ ಹಿಂದಿನಿಂದ ಯಾರೊ 'ಹಲೊ' ಎಂದದ್ದು ಕೇಳಿಸಿತ್ತು. ಆ ಚಿರಪರಿಚಿತ ದನಿಯ ಒಡೆಯ ಯಾರಿರಬಹುದೆಂದು ಹಿಂದಿರುಗಿ ನೋಡಿದರೆ ಮುಗುಳ್ನಗುವಿನೊಡನೆ ನಿಂತಿದ್ದ ಸೌರಭ್ ದೇವ್ ಕಣ್ಣಿಗೆ ಬಿದ್ದಿದ್ದ. ರಸ್ತೆ ಬದಿಯಲ್ಲಿ ಮಾರುತ್ತಾರೆಂಬ ಅಳುಕಿಗೆ ಅಂತಹದ್ದನ್ನೆಲ್ಲ ಕೊಳ್ಳಬಯಸದ ಹೊಸ ಜನರೇಷನ್ನಿನ 'ಹೈ - ಫೈ' ಹುಡುಗ ಸೌರಭ್ ಸಾಧಾರಣವಾಗಿ 'ಸ್ಟಾರ ಬಕ್ಸ್' ರೀತಿಯ ವಿಶೇಷ ಆಧುನಿಕ ತಾಣಗಳಿಂದ ಸ್ಟೈಲಾಗಿ ಕಾಫಿ ಹಿಡಿದು ಬರುವ ಜಮಾನಕ್ಕೆ ಸೇರಿದವನು. ಇಂದು ಶ್ರೀನಾಥನೆ ರಸ್ತೆ ಬದಿಯಲ್ಲಿ ಸೋಯಾಮಿಲ್ಕ್ ಕೊಳ್ಳುತ್ತಿದ್ದುದನ್ನು ಕಂಡು ಕುತೂಹಲದಿಂದ, ' ಇಲ್ಲಿ ಕ್ವಾಲಿಟೀ ಚೆನ್ನಾಗಿರುತ್ತಾ ಸಾರ್? ಇಸ್ ಇಟ್ ಸೇಫ್ ಟು ಡ್ರಿಂಕ್ ಹಿಯರ?' ಎಂದು ಕೇಳಿದ.
ಅವನ ಮಾತಿಗೆ ಮೆಲುವಾಗಿ ನಗುತ್ತ ಕೀಟಲೆಯ ದನಿಯಲ್ಲಿ, ' ನಿನಗಷ್ಟೊಂದು ಅನುಮಾನವಿದ್ದರೆ ಇಂತಹ ಜಾಗದಲ್ಲಿ ಕೊಳ್ಳಬೇಡ..ಸೈಕಾಲಜಿ ಪ್ಲೇಸ್ ಎ ಕೀ ರೋಲ್ ಹಿಯರ್.. ಇಂತದ್ದನ್ನು ತಿನ್ನುವುದೊ ಕುಡಿಯುವುದೊ ಮಾಡಿ ಅಕಸ್ಮಾತಾಗಿ ಕಾಕತಾಳೀಯವಾಗಿ ಹುಷಾರು ತಪ್ಪಿದರೆ, ಇದರಿಂದಲೆ ಆಯ್ತೇನೊ ಅನಿಸಿ ಮುಂದೆ ಮತ್ತೊಮ್ಮೆ ಪ್ರಯತ್ನಿಸಲು ಕೂಡಾ ಧೈರ್ಯವಾಗದಿರಬಹುದು' ಎಂದ.
' ಅದು ನಿಜ.. ಆ ಭೀತಿಯಿಂದಲೆ ಅಗ್ಗವಾಗಿದ್ದರೂ ಯಾವತ್ತು ಕೊಂಡು ಕುಡಿಯಲು ಪ್ರಯತ್ನಿಸಲಿಲ್ಲ.. ನೀವು ಮಾತ್ರ ದಿನ ಕೊಂಡು ತರುವುದನ್ನು ನೋಡಿದಾಗ ಅಚ್ಚರಿಯೂ ಆಗುತ್ತಿತ್ತು.. ಎಲ್ಲರೂ ಅದರ ಕುರಿತೆ ಮಾತನಾಡಿಕೊಳ್ಳುತ್ತಿದ್ದರೂ ಮೊದ ಮೊದಲಲ್ಲಿ..' ಎಂದ ತುಸು ನಾಚಿಕೆಯ ದನಿಯಲ್ಲಿ.
' ಏನು ಜುಗ್ಗ, ಜಿಪುಣ, ರಸ್ತೆ ಬದಿಯ ಅಗ್ಗದ ಮಾಲು ತಿನ್ನುತ್ತಾನೆ, ಕುಡಿಯುತ್ತಾನೆಂದು ಲೇವಡಿ ಮಾಡುತ್ತಿದ್ದರೇನೊ?' ಎಂದ ಶ್ರೀನಾಥ ಮತ್ತೆ ನಗುತ್ತ.
ಕೆಲವರು ಹಿನ್ನಲೆಯಲ್ಲಿ ಹಾಗೆ ಆಡಿಕೊಂಡಿದ್ದು ನಿಜವಾಗಿದ್ದ ಕಾರಣ ಸೌರಭ್ ದೇವ್ ಅದಕ್ಕುತ್ತರಿಸದೆ ಮಾತನ್ನು ಬೇರೆಡೆಗೆ ತಿರುಗಿಸುತ್ತಾ, ' ಆಶ್ಚರ್ಯವೆಂದರೆ ನೀವು ದಿನಾ ಇದನ್ನು ಕೊಂಡು ಕುಡಿದರು ನಿಮಗೇನೂ ಆಗಿಲ್ಲವಲ್ಲ? ಏನಿದರ ಗುಟ್ಟು ಎಂದು ಕುತೂಹಲ ಅಷ್ಟೆ..'
ಅವನ ಅನುಮಾನ ಅರ್ಥವಾದಾಗ ಶ್ರೀನಾಥ ಸ್ವಲ್ಪ ಹೆಚ್ಚೆ ವಿವರಣೆಯಿತ್ತು ವಿವರಿಸಿದ್ದ; 'ಇದೆಲ್ಲ ತುಂಬ ಸರಳ ತತ್ವ ಸೌರಭ್..ನೀನು ಗಮನಿಸಿದ್ದಿಯೋ ಇಲ್ಲವೊ ಗೊತ್ತಿಲ್ಲ.. ಈ ರೀತಿಯ ಕೊಳ್ಳುವಿಕೆಯಲ್ಲಿ ನಾನೊಂದು ಸರಳ ಸೂತ್ರವನ್ನು ತಪ್ಪದೆ ಪರಿಪಾಲಿಸುತ್ತೇನೆ.. ಬೇಕೆಂದರೆ ಅದನ್ನು ಕಾಮನ್ ಸೆನ್ಸ್ ಅನ್ನು...'
'ಸರಳ ಸೂತ್ರವೆ?...ಏನದು ಸರಳ ಸೂತ್ರ ?'
' ನಾನು ಸಿಕ್ಕ ಸಿಕ್ಕ ಜಾಗಕ್ಕೆಲ್ಲ ಹೋಗಿ ಸಿಕ್ಕಿದ್ದನ್ನೆಲ್ಲಾ ಗೊತ್ತು ಗುರಿಯಿಲ್ಲದೆ ತಿನ್ನುವುದಿಲ್ಲ...'
' ಹೌದೌದು..ಅದನ್ನಂತೂ ನಾನೂ ಗಮನಿಸಿದ್ದೇನೆ ಶ್ರೀನಾಥ್ ಸಾರ್... ಈ ಅಂಗಡಿಯ ಸೋಯಾ ಹಾಲು ಮತ್ತು ಆ ಮೂಲೆಯವನಿಂದ ಹೆಚ್ಚಿದ ಹಣ್ಣು ಕೊಳ್ಳುವುದನ್ನು ಬಿಟ್ಟರೆ ಮತ್ತೇನನ್ನು ನೋಡಿದ ಹಾಗೆ ನೆನಪಿಲ್ಲ... ಅಂದರೆ....ಅದರಲ್ಲೆ ಟ್ರಿಕ್ ಇರುವುದು ಎನ್ನುತ್ತಿರಾ..?'
'ಪರವಾಗಿಲ್ಲವೇ, ನನ್ನ ಚಲನವಲನ ದೈನಂದಿನ ಅಭ್ಯಾಸಗಳನ್ನೆಲ್ಲ ಚೆನ್ನಾಗಿ ಸ್ಟಡಿ ಮಾಡಿರುವಂತಿದೆ' ಎಂದುಕೊಳ್ಳುತ್ತಲೆ ಉತ್ತರಿಸಿದ ಶ್ರೀನಾಥ, 'ಹೌದು ಮತ್ತು ಅಲ್ಲ...ಹೌದು ಯಾಕೆಂದರೆ, ನೀನಂದಂತೆ ಬಹುತೇಕ ಆ ಎರಡು ಜಾಗಗಳಲ್ಲೆ ಖರೀದಿಸುವುದು ನಿಜ..ಅಲ್ಲ ಏಕೆಂದರೆ, ಆ ಎರಡೆ ಅಂಗಡಿಯಂತೇನೂ ಇಲ್ಲ, ಬೇರೆ ಕಡೆಯೂ ಕೊಳ್ಳಲು ನನಗೆ ಅಭ್ಯಂತರವೇನೂ ಇರದು..'
' ನನಗರ್ಥವಾಗಲಿಲ್ಲ ಶ್ರೀನಾಥ್ ಸರ್..ಸ್ವಲ್ಪ ಬಿಡಿಸಿ ಹೇಳಿ...ಐ ಯ್ಯಾಮ್ ರಿಯಲಿ ಕ್ಯೂರಿಯಸ್...ನೀವು ದಿನ ಕೊಡುವ ಇಪ್ಪತ್ತು ಪಟ್ಟು ತೆತ್ತು ನಾನು ಕಾಫಿ ತರುತ್ತೇನೆ.. ನಿಮ್ಮ ಸೀಕ್ರೇಟ್ ಗೊತ್ತಾದರೆ ನಾನೂ ಈ ಮೆತೆಡ್ ಟ್ರೈಮಾಡಬಹುದು ಮತ್ತು ದುಡ್ಡೂ ಉಳಿಸಬಹುದು..!'
' ಅದರಲ್ಲೇನು ಹೆಚ್ಚುಗಾರಿಕೆಯಿಲ್ಲ ಸೌರಭ್.. ನೀನು ನಾನು ಸೋಯಾ ಕುಡಿಯುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದಿಯಾ? ನಾನು ಸದಾ ಬರಿ ಬಿಸಿಯ ಸೋಯಾಹಾಲು ಕುಡಿಯುತ್ತೇನೆಯೆ ಹೊರತು ತಣ್ಣಗಿನದನ್ನಲ್ಲ'
' ನಿಜ..ತೀರಾ ಹತ್ತಿರದಿಂದ ಪ್ರತಿನಿತ್ಯ ಗಮನಿಸದಿದ್ದರೂ ನಾನು ನೋಡಿದಾಗೆಲ್ಲ ಇದೆ ಫಾರ್ಮುಲ ಅನ್ನೋದಂತೂ ನಿಜ' ಎಂದು ನಕ್ಕಿದ್ದ ಸೌರಭ.
' ಯಾರು ಎಲ್ಲೆ ತಯಾರಿಸಲಿ, ಹೇಗೆ ತಯಾರಿಸಲಿ, ಹೆಚ್ಚು ಕಟ್ಟುನಿಟ್ಟಿಲ್ಲದೆಯೆ ಸಿದ್ದ ಮಾಡಲಿ -ಕೊತಕೊತ ಕುದಿಯುವಂತೆ ಸ್ವಚ್ಛವಾದ ಪಾತ್ರೆಯಲಿಟ್ಟು ಬೇಯಿಸುವಾಗ ಮತ್ತು ಈ ರೀತಿಯ ಡಿಸ್ಪೋಸಬಲ್ ಫುಡ್ ಗ್ರೇಡ್ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಕೊಡುವಾಗ ಅದನ್ನು ಧೈರ್ಯವಾಗಿ ಕಣ್ಮುಚ್ಚಿಕೊಂಡು ಕುಡಿಯಬಹುದೆನ್ನುವುದು ನನ್ನ ಥಿಯರಿ...ತಳ್ಳೊ ಗಾಡಿಯಲ್ಲಿ ಅಥವಾ ದೋಸಾ ಕ್ಯಾಂಪುಗಳಲ್ಲಿ ನಿಂತ ನಿಲುಕಲ್ಲೆ ರೆಡಿ ಮಾಡಿಕೊಡುವ ಬಿಸಿ ಬಿಸಿ ಇಡ್ಲಿ, ದೋಸೆ ತಿನ್ನುವ ಹಾಗೆ...'
' ಐ ಸಿ....ಆ ಬಿಸಿಯಲ್ಲಿ ಎಲ್ಲವೂ ಸೇಫಾಗೆ ಇರಬೇಕು ಅಂತ ತಾನೆ ? ಹಾಗೆ ಈ ದೃಷ್ಟಿಕೋನದಿಂದ ನೋಡಿದರೇನೊ ಇಟ್ ಲುಕ್ಸ್ ವೆರಿ ಲಾಜಿಕಲ್...' ರಾಗವೆಳೆದಿದ್ದ ಸೌರಭ ಇನ್ನು ಕೊಂಚ ಅರೆಬರೆ ನಂಬಿಕೆಯ ದನಿಯಲ್ಲಿ.
' ಇನ್ನು ಹೆಚ್ಚಿದ ಹಣ್ಣಿನ ವಿಷಯಕ್ಕೆ ಬಂದರೆ, ಅಲ್ಲಿ 'ಬಿಸಿಬಿಸಿ'ಯ ಥಿಯರಿ ಕೆಲಸ ಮಾಡುವುದಿಲ್ಲ.. ಆದರೆ ಪ್ರತಿ ಬಾರಿಯೂ ನಾನು ಕೊಳ್ಳಲು ಹೋದಾಗ ಅವನು ಹೊಸದಾದ ಹಣ್ಣನ್ನು ಕಣ್ಮುಂದೆಯೆ ಹೆಚ್ಚಿಕೊಡಲು ಕೇಳುತ್ತೇನೆ. ಇನ್ನು ಕೆಲವೆಡೆ ಹೆಚ್ಚಿದ ತಕ್ಷಣ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಮಾರುತ್ತಾರೆ - ಸೊಳ್ಳೆ ನೊಣಗಳ್ಯಾವುದು ಕೂರದ ಹಾಗೆ.. ಸಾಲದ್ದಕ್ಕೆ ಚೀಲವನ್ನು ಸಹ ತೆರೆದು ಗಾಳಿಯಲ್ಲಿ ಹೊರಗಿಡದೆ ಗಾಜಿನ ಪೆಟ್ಟಿಗೆಗಳೊಳಗಿಡುತ್ತಾರೆ.. ಅಂತದ್ದನ್ನು ನೋಡಿಯೆ ಕೊಳ್ಳುತ್ತೇನಷ್ಟೆ..'
ಅವನ ಮಾತಿನಿಂದ ಅವನ ಮೇಲೆ ಇತ್ತೀಚಿಗೆ ಮೂಡಿದ್ದ ಮೆಚ್ಚುಗೆ ಇನ್ನಷ್ಟು ವೃದ್ಧಿಸಿದಂತಾಗಿ, ಅಲ್ಲೆ ಆಗಲೆ ತಾನೂ ಒಂದು ಬಿಸಿ ಸೋಯಾಹಾಲಿಗೆ ಆರ್ಡರು ಮಾಡಿದ್ದ ಸೌರಭ ದೇವ. ಪ್ಲಾಸ್ಟಿಕ್ಕಿನ ಪುಟ್ಟ ಚೀಲವೊಂದರಲ್ಲಿ ತುಂಬಿ ಪಾನಗೊಳವೆಯೊಂದನ್ನು ಜತೆಗಿತ್ತು, ಕೈಯಲ್ಲಿ ಹಿಡಿದುಕೊಳ್ಳಲು ಅನುವಾಗುವಂತೆ, ತುದಿಯಲ್ಲಿ ಕೂರಿಸಿದ್ದ ಪ್ಲಾಸ್ಟಿಕ್ ದಾರದಲ್ಲಿ ಬೆರಳು ತೂರಿಸುತ್ತ ಆ ಅಂಗಡಿಯವ ಕೊಟ್ಟಿದ್ದ ಬಿಸಿ ಸೋಯಾಹಾಲನ್ನು ಕೈಗೆತ್ತಿಕೊಂಡು 'ಚಿಯರ್ಸ್' ಹೇಳುವವನ ಹಾಗೆ ಮೇಲೆತ್ತಿ ಹಿಡಿದು, 'ಇನ್ ಆಂಟಿಸಿಪೇಶನ್ ಆಫ್ ದಿ ಅಪ್ಕಮಿಂಗ್ ಸಿಸ್ಟಮ್ ಗ್ಲಿಚ್ ..' ಎಂದ ತಮಾಷೆಯ ಧಾಟಿಯಲ್ಲಿ. ಅವನು ಹಾಗನ್ನುತ್ತಿದ್ದ ಹಾಗೆ ಅದುವರೆಗೆ ಮರೆತು ಹೋದಂತಿದ್ದ ಸಮಸ್ಯೆಯ ಮಹಾಪೂರ ಮತ್ತೆ ಕಣ್ಮುಂದೆ ಧುತ್ತನೆ ಬಂದು ನಿಂತಂತಾಗಿ, 'ಸೌರಭ್.. ಮಾತಿನಲ್ಲಿ ಮರೆತೆಬಿಟ್ಟಿದ್ದೆವು ನೋಡು..ಗೆಸ್ ವಿ ಶುಡ್ ಡಿಸ್ಕಸ್ ದಿಸ್ ನವ್...ಯಾವುದಾದರೂ ಮೀಟಿಂಗ್ ರೂಮ್ ತಕ್ಷಣ ಬುಕ್ ಮಾಡು..ಲೆಟ್ ಬೊಥ್ ಆಫ್ ಅಸ್ ಬ್ರೈನ್ ಸ್ಟಾರ್ಮ್ ..ವೀ ರಿಯಲಿ ಹ್ಯಾವ್ ಓನ್ಲಿ ಫೀವ್ ಹವರ್ಸ್ ಲೆಫ್ಟ್ ' ಎಂದವನೆ ಸರಸರನೆ ಹೆಜ್ಜೆಯಿಕ್ಕತೊಡಗಿದ ಆಫೀಸಿನತ್ತ.
ಮೂಲೆಯಲ್ಲಿ ಖಾಲಿಯಿದ್ದ ಪುಟ್ಟ ಮೀಟಿಂಗು ರೂಮೊಂದನ್ನು ಹುಡುಕಿ ವ್ಯವಸ್ಥೆ ಮಾಡುವಷ್ಟರಲ್ಲೆ ಅರ್ಧ ಗಂಟೆ ಕಳೆದುಹೋಗಿತ್ತು ಸೌರಭನಿಗೆ. ಅಂತೂ ಕಡೆಗಾದರೂ ಸಿಕ್ಕಿತಲ್ಲಾ ಎಂದುಕೊಂಡು ಶ್ರೀನಾಥನನ್ನು ಅಲ್ಲಿಗೆ ಬರಲು ಪೋನ್ ಮಾಡಿ ಕಾದು ಕುಳಿತಿದ್ದ ಸೌರಭ್ ದೇವನಿಗೆ ಈಗ ಚರ್ಚೆಯಾಗಲಿರುವ ವಿಷಯ ಯಾವುದೆಂದು ಚೆನ್ನಾಗಿ ಅರಿವಿತ್ತು. ಹೀಗಾಗಿ ಬೇರಾರನ್ನು ಕರೆಯದೆ, ಬೇರೆ ಯಾರಿಗೂ ಸಂಶಯಕ್ಕೆ ಆಸ್ಪದವೀಯದಂತೆ ತಾವಿಬ್ಬರೆ ಖಾಸಗಿಯಾಗಿ ಕೂರಲು ಅನುಕೂಲವಾಗುವ ರೀತಿ ಆ ದೂರದ ಮೂಲೆಯಲ್ಲಿ ಅಡಗಿಕೊಂಡಂತಿದ್ದ ರೂಮನ್ನೆ ಹುಡುಕಿದ್ದ. ಆ ವೇಳೆಯಲ್ಲಿ ಅಲ್ಲಿ ನಡೆಯುತ್ತಿದ್ದ ಬೇರೊಂದು ಮೀಟಿಂಗಿನ ತಂಡವನ್ನು ಸ್ಥಳಾಂತರಿಸಿ, ಬೇರೆ ರೂಮಿಗೆ ಕಳಿಸುವುದರಲ್ಲಿ ಅಷ್ಟೊಂದು ಕಾಲಹರಣವಾಗಿ ತಡವಾಗಿ ಹೋಗಿತ್ತು. ಶ್ರೀನಾಥನೂ ತನ್ನ ಲ್ಯಾಪ್ ಟಾಪ್ ಹಿಡಿದು ಅಲ್ಲಿಗೆ ಬಂದ ಕೂಡಲೆ ಮತ್ತಷ್ಟು ಹೆಚ್ಚು ಕಾಲ ವ್ಯಯಿಸಲಿಚ್ಚಿಸದೆ ನೇರ ವಿಷಯಕ್ಕೆ ಬಂದಿದ್ದ..
' ಸೌರಭ್ ... ಇವತ್ತು ಸೇರಿ ಇನ್ನು ಮೂರು ದಿನ ಬಾಕಿಯಿದೆ ತಿಂಗಳ ಕೊನೆಗೆ. ನನಗೇನೊ ಇವತ್ತು ನಾಟಕದ ಮೊದಲ ಅಂಕ ಆರಂಭವಾಗುತ್ತದೆ ಅನಿಸುತ್ತಿದೆ...'
' ಹೌದು ಸಾರ್... ಏನೆ ನಡೆದರೂ ಇವತ್ತಿನ ನಂತರವೆ ನಡೆಯಬೇಕು.... ಎಲ್ಲಾ ತಿಂಗಳ ಕೊನೆಯ ಹೆಚ್ಚಿದ ಕಾರ್ಯಭಾರದಲ್ಲಿ ನಿರತರಾಗಿರುವ ಸಮಯ... ಏಟು ಬಿದ್ದರೆ ಸರಿಯಾಗಿ ಬೀಳಬಲ್ಲ ಸಮಯ ಈಗಿನಿಂದಲೆ ಶುರು...'
' ಈಗ ಇಲ್ಲಿಗೆ ಬರುವ ಮೊದಲೆ ಸಿಸ್ಟಮ್ ಚೆಕ್ ಮಾಡಿ ನೋಡಿದೆಯಾ? ರನ್ನಿಂಗಿನಲ್ಲಿತ್ತೊ ಡೌನ್ ಆಗಿತ್ತೊ?'
' ನಾನೆ ನೇರ ಪರಿಶೀಲಿಸಲಾಗಲಿಲ್ಲ ಸಾರ್.. ಮೀಟಿಂಗ್ ರೂಮು ಹುಡುಕುತ್ತಿದ್ದೆ..ಆದರೆ ಬರುವಾಗ ಒಂದೆರಡು ಯೂಸರುಗಳ ಸೀಟಿನ ಪಕ್ಕದಲ್ಲೆ ಹಾದು ಬಂದ ಕಾರಣ ಅವರ ಕಂಪ್ಯೂಟರಿನ ಪರದೆ ಕಣ್ಣಿಗೆ ಬಿದ್ದಿತ್ತು.. ಅದರ ಅನುಸಾರ ಹೇಳುವುದಾದರೆ ಸಿಸ್ಟಮ್ ಕೆಲಸ ಮಾಡುತ್ತಿದ್ದಂತೆ ಕಂಡಿತು..'
'ನನಗೇನೊ ಇಟ್ ಇಸ್ ಸ್ಟಿಲ್ ದಿ ಕ್ವೆಶ್ಚನ್ ಆಫ್ ಟೈಮ್... ಇವತ್ತು ಖಂಡಿತ ಡೌನ್ ಆಗಿಯೆ ತೀರುತ್ತದೆಂಬ ಖಚಿತ ನಂಬಿಕೆಯಿದೆ ನನಗೆ...'
' ಅದು ನನಗೂ ಅನಿಸುತ್ತಿದೆ..ಇವತ್ತು ಇಲ್ಲವೆ ನಾಳೆ.. ಆದರೆ...'
'ಆದರೆ? ನಿನಗೇನೊ ಇನ್ನು ಸ್ವಲ್ಪ ಅನುಮಾನವಿರುವಂತಿದೆಯಲ್ಲಾ?'
' ಅನುಮಾನದ ವಿಷಯವಲ್ಲ ಸಾರ್.. ನಮ್ಮ ಲಾಜಿಕ್ಕೇನೊ ಸರಿಯಾಗಿಯೆ ಇರುವಂತಿದೆ... ಆದರೆ ಸ್ವಲ್ಪ ಪ್ರಾಕ್ಟಿಕಲ್ಲಾಗಿ ಯೋಚಿಸಿದಾಗ ಕೆಲವು ಬೇರೆ ಆಯಾಮಗಳೂ ಇರುವಂತೆನಿಸಿತು..?'
' ಕ್ಯಾನ್ ಯು ಪ್ಲೀಸ್ ಎಲಾಬೊರೇಟ್...?'
' ಸಾರ್ ಉದಾಹರಣೆಗೆ... ಈ ನಮ್ಮ ಸಿಸ್ಟಮ್ ಸರ್ವರ ಹಾರ್ಡ್ವೇರು ಸಿಂಗಪೂರದಲ್ಲಿದೆ ಎಂದಿರಿ...'
'ಹೌದು..?'
'ಇದೆ ಸಿಸ್ಟಮ್ಮನ್ನೆ ಸುತ್ತ ಮುತ್ತಲ ದೇಶಗಳ ಆಫೀಸಿನಲ್ಲೂ ಬಳಸುತ್ತಿದ್ದಾರಲ್ಲವೆ? ಐ ಮೀನ್ ಸಿಂಗಪುರ, ಮಲೇಶಿಯಾ.....'
' ಹೌದು.. ಸದ್ಯಕ್ಕೆ ಮೂರು ದೇಶಗಳಲ್ಲಿ..' ಮತ್ತೇನನ್ನೊ ಯೋಚಿಸುತ್ತ ನುಡಿದಿದ್ದ ಶ್ರೀನಾಥ.
' ಅಂದ ಮೇಲೆ ಸಿಸ್ಟಮ್ಮನ್ನ ಡೌನ್ ಮಾಡಬೇಕಾದರೆ ಮೂರು ದೇಶಗಳಲ್ಲೂ ಒಟ್ಟಾಗಿ ಮಾಡಬೇಕಲ್ಲವೆ? ಬರೀ ಥಾಯ್ಲ್ಯಾಂಡ್ ದೇಶಕ್ಕೆ ಮಾತ್ರ ಅನ್ವಯವಾಗುವಂತೆ ಮಾಡಲು ಸಾಧ್ಯವಿಲ್ಲ ಅಲ್ಲವೆ?'
ಹೌದು..ಸೌರಭನ ಮಾತು ನಿಜವಲ್ಲವೇ? ಥೈಲ್ಯಾಂಡಿಗಿದು ಹೊಸತಾದರೂ ಉಳಿದೆರಡು ದೇಶಗಳಲ್ಲಿ ಈಗಾಗಲೆ ರನ್ನಿಂಗ್ ಇರುವ ಸಿಸ್ಟಮ್ ಇದು... ಅಲ್ಲಿಯೂ ತಿಂಗಳ ವಹಿವಾಟಿನ ದೊಡ್ಡ ಪಾಲು ತಿಂಗಳ ಕೊನೆಯ ವಾರದಲ್ಲೆ ಆಗುವುದರಿಂದ, ತಿಂಗಳ ಕೊನೆಯಲ್ಲಿ ಎರಡು ಮೂರು ದಿನ ಸಿಸ್ಟಮ್ ಮುಚ್ಚಿ ಬಿಟ್ಟರೆ ದೊಡ್ಡ ಗಲಾಟೆಯೆ ಆಗಿಬಿಡುತ್ತದೆ...ಸ್ವಲ್ಪ ಕಾಲವಷ್ಟೆ ಡೌನ್ ಆದರೆ ನಿಭಾಯಿಸಬಹುದಷ್ಟೆ ಹೊರತು ಎರಡು ಮೂರು ದಿನದವರೆಗೆ ಸಿಸ್ಟಮ್ ಇಲ್ಲವಾಗಿಸಲು ಸಾಧ್ಯವಾಗುವುದಿಲ್ಲ. ಶ್ರೀನಿವಾಸ ಪ್ರಭು ಈ ಹಾದಿ ಹಿಡಿದರೆ ಅವನು ಅಂದುಕೊಂಡ ಉದ್ದೇಶ ಸಾಧಿಸುವುದು ಕಷ್ಟ.. ಮೂರು ದಿನದ ಸತತ ನಿರ್ಬಂಧವಂತೂ ಖಚಿತವಾಗಿ ಆಗದ ಮಾತು..
ಅಂದರೆ ತಾನಂದುಕೊಂಡ ಹಾದಿಯನ್ನು ಬಿಟ್ಟು ಮತ್ತ್ಯಾವುದೊ ರೀತಿಯ ತರಲೆ ಮಾಡುವ ಸಾಧ್ಯತೆಯಿದೆಯೆ? ಆ ಅನಿಸಿಕೆ ಬರುತ್ತಿದ್ದಂತೆ ಮತ್ತೆ ಎದೆ ಧಸಕ್ಕೆಂದಿತು ಶ್ರೀನಾಥನಿಗೆ...
'ಸೌರಭ್ ...ನಿನ್ನ ಮಾತು ನಿಜ... ನಾನು ಸ್ವಲ್ಪ ಏಮಾರಿಬಿಟ್ಟೆ ಲೆಕ್ಕಾಚಾರದಲ್ಲಿ ಅನಿಸುತ್ತಿದೆ.. ಮೂರು ದೇಶಗಳೂ ಒಂದೆ ಸರ್ವರ ಬಳಸುತ್ತಿರುವುದರಿಂದ, ನಾವು ಊಹಿಸಿರುವ ಸ್ಥಿತಿ ನೀನೆಣಿಸಿದಂತೆ ಕೆಲ ಗಂಟೆಗಳ ಕಾಲ - ಹೆಚ್ಚೆಂದರೆ ಅರ್ಧದಿನ ಮಾತ್ರವಿರಬಹುದೆ ಹೊರತು ಸತತ ಮೂರು ದಿನಗಳವರೆಗೆ ಸಾಧ್ಯವಿಲ್ಲ...' ಎಂದ ತನ್ನ ಪ್ರತ್ಯುಪಾಯದ ಕಾರ್ಯ ಯೋಜನೆಯೆಲ್ಲ ಅಸಫಲವಾಗಿ, ತನ್ನ ಮುಂಜಾಗರೂಕತಾ ಸಿದ್ದತೆಯೆಲ್ಲ ಎಲ್ಲಿ ಫಲಕಾರಿಯಾಗದೆ ಬುಡಮೇಲಾಗುವುದೊ ಎಂಬ ಆತಂಕ ತಂದ ಖೇದದಲ್ಲಿ...
' ಹೌದು ಸಾರ್...ಆದರೆ ಆ ಪರಿಸ್ಥಿತಿಯಲ್ಲಿ ನಾವು ಹೇಗಿದ್ದರೂ ಸೇಫ್ ಅಲ್ಲವೆ? ಮೂರು ದಿನದ ಬದಲು, ಬರಿ ಅರ್ಧದಿನದ ಹೊಡೆತ ಮಾತ್ರ ಬೀಳುತ್ತದೆಯಾದರೆ, ನಾವು ಚಿಂತಿಸುವ ಹಾಗೆ ಇಲ್ಲವಲ್ಲ? ನಾವು ಹೇಗೂ ಮೂರು ದಿನದ ಹೊಡೆತದ ಲೆಕ್ಕ ಹಾಕಿದ್ದಲ್ಲವೆ?'
' ಅಲ್ಲೆ ಕ್ಯಾಚ್ ಇರುವುದು ಸೌರಭ್...ಒಂದು ವೇಳೆ ಅವನು ಅರ್ಧ ದಿನವಷ್ಟೆ ಈ ದಾರಿಯಲ್ಲಿ ಸಾಗಲಿಕ್ಕೆ ಸಾಧ್ಯ ಎನ್ನುವುದಾದರೆ, ಮಿಕ್ಕ ದಿನಗಳಿಗಾಗಿ ಅವನು ಬೇರಿನ್ನೇನೊ ಉಪಾಯ ಹುಡುಕುವುದು ಗ್ಯಾರಂಟಿ.. ಅದರೆ ಅದ್ಯಾವ ದಾರಿಯೆಂದು ನಮಗೆ ಗೊತ್ತಿಲವೆನ್ನುವುದೆ ಆತಂಕಕಾರಿ ವಿಷಯ...! ಈಗ ಉಳಿದಿರುವ ಅಲ್ಪ ಸಮಯದಲ್ಲಿ ಏನಾಗಬಹುದೆಂಬ ಸಾಧ್ಯತೆಯ ಅರಿವೇ ಇರದಿದ್ದರೆ, ಪ್ರತ್ಯುಪಾಯವನ್ನು ಯೋಜಿಸಲಾದರೂ ಹೇಗೆ ಎನ್ನುವುದೇ ನನ್ನ ಚಿಂತೆ? '
'ಸನ್ನಿವೇಶ ಹಾಗಿದ್ದರೂ ನಾವು ಸೇಫ್ ಎಂದೆ ನನಗನಿಸುತ್ತದೆ ಸರ್..'
' ಅದು ಹೇಗೆ ಸೌರಭ್ ?'
' ಅವರೇನೆ ದಾರಿ ಹುಡುಕಿಕೊಂಡರೂ ಅದೆಲ್ಲದರ ಗುರಿ ಒಂದೆ ಅಲ್ಲವೆ ಸಾರ್ - ವ್ಯವಹಾರ ಸುಗಮವಾಗಿ ನಡೆಯದಂತೆ ಅಡ್ಡಗಾಲು ಹಾಕುವುದು, ಅರ್ಥಾತ್ ಟರ್ನೋವರಿನ ಗಮ್ಯವನ್ನು ಸಾಧಿಸಲು ಬಿಡದಿರುವುದು? ನಾವೀಗಾಗಲೆ ಆ ಗಮ್ಯದ ರಕ್ಷಣೆಗೆ ಮುಂಚೆಯೆ ಮುಂಜಾಗರೂಕತಾ ವ್ಯವಸ್ಥೆ ಮಾಡಿದ್ದಿವಲ್ಲಾ?'
ಅರೆ, ಹೌದಲ್ಲ? ಸೌರಭನ ಮಾತಿನಲ್ಲೂ ಸತ್ಯವಿದೆ.. ಅವನು ಯಾವುದೆ ದಾರಿ ಹಿಡಿದು ಆತಂಕ ಒಡ್ಡಲ್ಹೊರಟರೂ ಅದೆಲ್ಲದರ ಉದ್ದೇಶ ಮಾತ್ರ ಒಂದೆ - ಹೇಗಾದರೂ ಸರಿ, ಉತ್ತಮ ಫಲಿತಾಂಶ ಬರಲು ಆಗದಿರುವ ಹಾಗೆ ನೋಡಿಕೊಳ್ಳುವುದು.. ತಮ್ಮೀ ಪ್ರಾಜೆಕ್ಟಿನಲ್ಲಿ ಬಿಲ್ಲಿಂಗಿನಲ್ಲಿ ಕಡಿತವಾಗುವಂತೆ ಮಾಡಿದರೆ ಸಾಕು, ಆ ತಿಂಗಳ ಟರ್ನೋವರಿನ ಗುರಿಗೆ ಏಟು ಬೀಳುತ್ತದೆ. ಅಷ್ಟಾದರೆ ಸಾಕು ಅವರ ಉದ್ದೇಶ ಈಡೇರಿದಂತೆಯೆ ಲೆಕ್ಕ. ಅಂದರೆ ಅವರಿಗೆ ಆ ಉದ್ದೇಶ ಸಾಧಿಸಲು ಹಲವಾರು ದಾರಿಗಳಿರಬಹುದಾದರೂ, ತಮಗೆ ರಕ್ಷಿಸಬೇಕಾದ ಗಮ್ಯ ಮಾತ್ರ ಒಂದೆ.. ಈಗ ಟರ್ನೋವರಿನ ರಕ್ಷಣೆಗೆ ತಾವ್ಹಿಡಿದಿರುವ ದಾರಿಯಲ್ಲಿ, ಅವರು ಯಾವ ಯೋಜನೆ, ಉಪಾಯ ಹಾಕಿದರು ಎಂದು ಚಿಂತಿಸುವ ಅಗತ್ಯವಿಲ್ಲ; ಏನೆ ಯೋಜನೆ ಹಾಕಿದ್ದರು ತಮ್ಮ ಇದೊಂದೆ ಪರಿಹಾರ ಎಲ್ಲದಕ್ಕು ಪ್ರತ್ಯುತ್ತರವಾಗಿಬಿಡುತ್ತದೆ - ರಾಮಬಾಣದಂತೆ. ಅವರ ಕಣ್ಣೆಲ್ಲ ತಿಂಗಳ ಕೊನೆಯ ಗುರಿಯ ಮೇಲೆ ಕೇಂದ್ರೀಕೃತವಾಗಿದ್ದರೆ, ಅವರಿಗರಿವಾಗದಂತೆ ತಿಂಗಳ ಕೊನೆಗೂ ಮೊದಲೆ ತಮ್ಮ ಗುರಿ ಮುಟ್ಟಿಬಿಡುವ ಯೋಜನೆ ಹಾಕಿಕೊಂಡಿರುವ ಕಾರಣ ಅವರು ಯಾವ ಯೋಜನೆ ಹಾಕುತ್ತಿದ್ದಾರೆಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಮ್ಮ ಈ ಉಪಾಯ ಎಲ್ಲಾ ಸನ್ನಿವೇಶವನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾಗುತ್ತದೆ ಅನ್ನುವುದು ನಿಜವಲ್ಲವೆ?
' ರೈಟ್ ಸೌರಭ್...ನಿನ್ನ ಮಾತು ನಿಜ. ಹಾಗೆ ಆಲೋಚಿಸಿದರೆ ನಮ್ಮ ಉಪಾಯ ಅವರೆಲ್ಲಾ ತರತರದ ತಂಟೆಗಳನ್ನು ನಿಭಾಯಿಸುವ ಸರ್ವಶಕ್ತಾಯುಧ ಅನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಅವರ ಕುಟಿಲೋಪಾಯದ ಅನೇಕಾನೇಕ ಸಾಧ್ಯತೆಗಳನ್ನು ಕುರಿತು ವಿವರದ ಮಟ್ಟದಲ್ಲಿ ಚಿಂತಿಸುವ ಅಗತ್ಯವಿಲ್ಲವೆಂದೆನಿಸಿ, ಈಗ ಸ್ವಲ್ಪ ಸಮಾಧಾನವಾಗುತ್ತಿದೆ. ಆದರೂ, ನಿನ್ನ ದೃಷ್ಟಿಯಲ್ಲಿ ಬೇರೆ ತರದ ಯಾವುದಾದರೂ ರಿಸ್ಕು ಕಾಣಿಸುತ್ತಿದೆಯೆ? ನಾವಿದುವರೆಗೂ ಆಲೋಚಿಸದೆ ಇದ್ದ ಇತರೆ ಸಾಧ್ಯತೆಗಳು..? '
ಅವನ ಮಾತಿಗೆ ತುಸು ಹೊತ್ತು ಗಾಢವಾಗಿ ಚಿಂತಿಸಿ ನಂತರ ತಾನೂ ಅದೆ ಅಭಿಪ್ರಾಯಕ್ಕೆ ಸಹಮತದಲ್ಲಿರುವನೆಂಬಂತೆ ತಲೆಯಾಡಿಸುತ್ತ, 'ನನಗೂ ಹಾಗೆಯೆ ಅನಿಸುತ್ತಿದೆ ಸಾರ್..ಇಡಿ ಸನ್ನಿವೇಶದಲ್ಲಿ ಇರುವ ಒಂದೆ ಒಂದು 'ರಿಸ್ಕು' ಎಂದು ಹೇಳುವುದಾದರೆ ನಾವು ಯೋಜಿಸಿರುವ ಉಪಾಯ ಏನೆಂದು ಅವರಿಗೂ ಗೊತ್ತಾಗಿ ಅಥವಾ ಸ್ಥೂಲವಾಗಿ ಊಹಿಸಲು ಸಾಧ್ಯವಾಗಿ, ಅದಕ್ಕವರು ಪ್ರತ್ಯುಪಾಯ ಹೂಡುವುದಷ್ಟೆ... ನಾವೇನೊ ಎಲ್ಲಾ ಗುಟ್ಟಿನಲ್ಲೆ ನಿಭಾಯಿಸುತ್ತಿದ್ದರೂ ಇಲ್ಲಿರುವ ತಂಡದ ಇತರರಿಗೆ ಏನಾದರೂ ಸುಳಿವು ಸಿಕ್ಕಿರಲುಬಹುದು... ಅದು ಸಿಂಗಪುರಿಗೆ ಸುಳಿವಿನ ರೂಪದಲ್ಲೆ ರವಾನೆಯಾಗಿರಲೂಬಹುದು...'
ಕ್ಷಣಕಾಲ ಕಣ್ಣು ಮುಚ್ಚಿಕೊಂಡು ತೋರುಬೆರಳಿನಿಂದ ಕಣ್ಣಿನ ಸುತ್ತ ತೀಡುತ್ತ ಆಲೋಚನೆಗಿಳಿದ ಶ್ರೀನಾಥ. ಹೌದು ಇಲ್ಲಿಯೂ ಪ್ರಭುವಿನ ಚೇಲಾಗಳಿರುವುದರಿಂದ, ಅದೊಂದೆ ತಮ್ಮ ಯೋಜನೆಯಲ್ಲಿರುವ ಕಂದಕ... ಆದರೆ ಅದನ್ನು ನಿಜಕ್ಕೂ ಗುರುತಿಸುವ ಮತ್ತು ಕಂಡುಹಿಡಿಯುವ ಸಾಧ್ಯತೆ ಶ್ರೀನಿವಾಸ ಪ್ರಭುವಿಗಿದೆಯೆ? ತಾಂತ್ರಿಕ ಲೋಕದಲ್ಲಿ ಅವನಿಗಿರುವ ಅಪಾರ ಛಾತಿಯ ಬಗ್ಗೆ ಅನುಮಾನವಿಲ್ಲವಾದರೂ ಅವನ ಬಿಜಿನೆಸ್ಸಿನ ದೃಷ್ಟಿಕೋನ ಮತ್ತು ಚಾತುರ್ಯ ಖಂಡಿತ ಆ ಮಟ್ಟದಲ್ಲಿಲ್ಲವೆಂದು ಖಚಿತವಿತ್ತು ಶ್ರೀನಾಥನಿಗೆ. ತಮ್ಮ ಯೋಜನೆಯನ್ನು ಅಸ್ಪಷ್ಟವಾಗಿ ಊಹಿಸಿದ್ದರೂ ಸಹ ತಾಂತ್ರಿಕ ಸೀಮಾಕ್ಷೇತ್ರದ ಹೊರತಾಗಿ,ತಾವು ಹೊರಗಿನ ವಾಣಿಜ್ಯ ಪ್ರಕ್ರಿಯೆಗಳ ಮಟ್ಟದಲ್ಲಿ ಉತ್ತರ ಹುಡುಕಿರಬಹುದೆಂದು ಅವನಿಗೆ ಗೊತ್ತಾಗುವ ಸಾಧ್ಯತೆ ಕಡಿಮೆಯೆ... ಒಂದು ವೇಳೆ ಊಹಿಸಿದ್ದನೆಂದೆ ಅಂದುಕೊಂಡಿದ್ದರೂ, ಆ ವಿಧಾನದಲ್ಲಿ ಕಾರ್ಯ ಸಾಧಿಸಲು ಶ್ರೀನಾಥನೊಬ್ಬನಿಂದಲೆ ಸಾಧ್ಯವಿಲ್ಲವಾಗಿ, ಜತೆಗೆ ಬಿಜಿನೆಸ್ ಡಿಪಾರ್ಟ್ಮೆಂಟುಗಳ ಜನರ ಸಹಕಾರವೂ ಬೇಕಿರುವ ಕಾರಣ ಅದು ಶ್ರೀನಾಥನಿಗೆ ಅಸಾಧ್ಯವೆಂಬ ತೀರ್ಮಾನಕ್ಕೆ ಬಂದಿರುತ್ತಾನೆ. ತಮಗೂ ಕುನ್. ಸೋವಿಗೂ ನಡುವೆ ಉಂಟಾಗಿರುವ ಗಾಢ 'ವೃತ್ತಿ ಸಂಬಂಧ'ದ ಧನಾತ್ಮಕ ಪ್ರಭಾವ ಅವನಿಗೆ ಗೊತ್ತಾಗಿರುವ ಸಾಧ್ಯತೆಯಂತೂ ಇಲ್ಲವೆ ಇಲ್ಲ...
' ಇಲ್ಲಾ ಸೌರಭ್... ನಮ್ಮ 'ಸ್ನೇಹಿತ' ಆ ಮಟ್ಟಕ್ಕೆ ಆಲೋಚಿಸಲಾರ - ಅದೂ ವ್ಯವಹಾರಿಕ ಮಟ್ಟದಲ್ಲಿ. ಅವನದೇನಿದ್ದರೂ ತಾಂತ್ರಿಕ ಕುಶಲತೆಯ ಹಾದಿಯೆ ಅನ್ನುವುದು ಗ್ಯಾರಂಟಿ.. ಹೀಗಾಗಿ ಆ ರಿಸ್ಕು ತೀರಾ ದೂರದ್ದೆ ಎನ್ನಬಹುದು.. ವಾದಕ್ಕಾಗಿ ಅದು ಘಟಿಸುವುದು ಎಂದೆ ಇಟ್ಟುಕೊಂಡರೂ, ಆ ರಿಸ್ಕಿನಿಂದ ನಾವೀಗಾಗಲೆ ಸಾಕಷ್ಟು ದೂರವಾಗಿದ್ದೇವೆನಿಸುತ್ತಿದೆ... ಅಂದ ಹಾಗೆ ಇಲ್ಲಿಯತನಕ ಎಷ್ಟು ಟರ್ನೋವರ್ ಮುಗಿದಿದೆಯೆಂದು ಗೊತ್ತಾಯಿತೆ...? ಇನ್ನು ಎಷ್ಟು ಬಾಕಿಯಿದೆ ಈಗಾಗಲೇ ರಿಲೀಸ್ ಮಾಡಿರುವ ಆರ್ಡರುಗಳ ಪ್ರಕಾರ? ಆಗ ನಾವೆಷ್ಟು ಆಳದ ಕೆಸರಲ್ಲಿ ಮುಳುಗಿದ್ದೇವೆಂಬ ಅಂದಾಜಾದರೂ ಸಿಗುತ್ತದೆ.. ಕನಿಷ್ಠ ಸಮಸ್ಯೆಯಿಂದ ಎಷ್ಟರಮಟ್ಟಿಗೆ ಹೊರಬಿದ್ದಿದ್ದೇವೆಂದಾದರೂ ಸ್ಥೂಲವಾಗಿ ತಿಳಿಯುತ್ತದೆ...'
' ನಿನ್ನೆ ಸಂಜೆಯವರೆಗಿನ ಸಿಸ್ಟಮ್ ಪೋಸ್ಟಿಂಗ್ಸ್ ನೋಡಿದರೆ ಮತ್ತು ಮಿಕ್ಕುಳಿದ ವರ್ಕ್ ಇನ್ ಪ್ರೊಗ್ರೆಸ್ಸ್ ಜತೆ ಸಮೀಕರಿಸಿದರೆ ಕುನ್. ಸೋವಿಯ ಗುರಿಯಾದ ಶೇಕಡ ಮೂವತ್ತು ಹೆಚ್ಚುವರಿ ಗುರಿ ತಲುಪುವುದು ಕಷ್ಟವೇನಿಲ್ಲವೆಂದೆ ಕಾಣುತ್ತಿದೆ ಶ್ರೀನಾಥ್ ಸಾರ್..'
ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದ ಶ್ರೀನಾಥ..ಶ್ರೀನಿವಾಸ ಪ್ರಭುವೇನಾದರೂ ಆಗಲೆ ಸಿಸ್ಟಮ್ಮಿನಲ್ಲಿ ಟರ್ನೋವರನ್ನು ಪ್ರತಿದಿನವೂ ಗಮನಿಸುತ್ತಿರಬಹುದೆ? ಹಾಗೇನಾದರೂ ಆದಲ್ಲಿ ಅವನಿಗೆ ತಮ್ಮ ಯೋಜನೆಯ ಸುಳಿವು ಸಿಕ್ಕಿಬಿಡಬಹುದಲ್ಲವೆ?
'ಸೌರಭ್, ಸಿಸ್ಟಮ್ಮಿನ ಟರ್ನೋವರ್ ರಿಪೋರ್ಟನ್ನು ಅವರೂ ನೋಡುತ್ತಿದ್ದರೆ ನಮ್ಮ ಉಪಾಯ ಅವರ ಕಣ್ಣಿಗೆ ಬೀಳುವುದಿಲ್ಲವೆ?' ಎಂದು ಕೇಳಿದ ಆತಂಕದ ದನಿಯಲ್ಲಿ.
ಆ ಮಾತಿಗೆ ಸೌರಭ್ ನಗುತ್ತ, ' ಇಲ್ಲಾ ಸಾರ್..ಅದು ಸಿಸ್ಟಮ್ಮಿನಲ್ಲಿ ಕಾಣುವುದಿಲ್ಲ..ಯಾಕೆಂದರೆ ಕುನ್. ಸೋವಿ ಪ್ರೊಸೆಸ್ಸಿನ ಎಲ್ಲಾ ಹಂತ ಮುಗಿಸಿದ್ದರೂ ಕೊನೆಯ ಪೋಸ್ಟಿಂಗನ್ನು ಆಯ ದಿನಕ್ಕೆಷ್ಟು ಬೇಕೊ ಅಷ್ಟು ಮಾತ್ರ ಮಾಡುತ್ತಿದ್ದಾನೆ.. ಆ ಕೊನೆಯ ಪೋಸ್ಟಿಂಗ್ ಆಗುವ ತನಕ ಸಿಸ್ಟಮಿನಲ್ಲಿ ಟರ್ನೋವರ್ ರೆಕಾರ್ಡ್ ಆಗುವುದಿಲ್ಲ...ಈಗ ನಾನು ಹೇಳುತ್ತಿರುವುದು ಬರಿ ಪ್ರೊಜೆಕ್ಟೆಡ್ ಫಿಗರ್ಸ್ ಅಷ್ಟೆ...ಹೆಕ್ಕಿಕೊಂಡ ಆರ್ಡರಿನನುಸಾರ ಪೈಪ್ ಲೈನಿನಲ್ಲಿರುವ, ಪ್ಯಾಕಿಂಗ್ ಆಗಿರುವ ಡೆಲಿವರಿಗಳನ್ನೆಲ್ಲ ಸೇರಿಸಿ ಲೆಕ್ಕ ಹಾಕಿದ್ದು...ಅಂದಾಜಿನಲ್ಲಿ'
ಅದನ್ನು ಕೇಳಿ ನಿರಾಳಗೊಂಡ ಶ್ರೀನಾಥನಿಗೂ ಪ್ರತಿ ದಿನ ಸ್ವಲ್ಪಸ್ವಲ್ಪವೆ ಹೆಚ್ಚಿನ ಪ್ರಗತಿ ತೋರಿಸುತ್ತಿದ್ದ ಅಂಕಿ ಅಂಶಗಳು ನೆನಪಾಗಿ, 'ಅಲ್ಲಿಗೆ ಕೊನೆ ಗಳಿಗೆಯಲ್ಲಿ ಪೈಪ್ ಲೈನಿನಲ್ಲಿ ಮಿಕ್ಕಿದ್ದೆಲ್ಲವನ್ನು ಪೂರ್ತಿಯಾಗಿ ಪೋಸ್ಟ್ ಮಾಡಲು ಆಗುವಷ್ಟು ಸಮಯ ಸಿಕ್ಕಿದರೆ ಸಾಕು ಎಂದಾಯ್ತು.. ಸರಿ ನೋಡೋಣ ಸದ್ಯಕ್ಕೆ ತೀವ್ರ ಎಚ್ಚರದ ನಿಗಾ ಇಡುವುದಲ್ಲದೆ ಬೇರೇನೂ ಮಾಡಲು ಸಾಧ್ಯವಿಲ್ಲವೆನಿಸುತ್ತಿದೆ. ಕೀಪ್ ಎ ಕ್ಲೋಸ್ ವಾಚ್ ಅಂಡ್ ಕೀಪ್ ಮೀ ಅಪ್ಡೇಟೆಡ್..' ಎಂದಿದ್ದ.
'ಯೆಸ್ ಸರ್.. ವರ್ಸ್ಟ್ ಕೇಸೆಂದರೂ ಕೊನೆಗೆ ಹತ್ತು ಹದಿನೈದು ನಿಮಿಷ ಸಿಸ್ಟಂ ಸಿಕ್ಕರೂ ಸಾಕು..ವೇರ್ಹೌಸಿನವರು ಪೋಸ್ಟ್ ಮಾಡಬೇಕಿರುವ ಮಿಕ್ಕಿದ್ದೆಲ್ಲಾ ಎಂಟ್ರಿಗಳನ್ನು ಒಟ್ಟಾಗಿ ಸೇರಿಸಿ 'ಮಾಸ್ ಪೋಸ್ಟ್' ಮಾಡುವ ಕ್ವೈರಿಯೊಂದನ್ನು ಸಿದ್ದ ಮಾಡಿಟ್ಟಿದ್ದೇನೆ.. ಜತೆಗೆ ಅವರು ಪೈಪ್ ಲೈನಿನಲ್ಲಿಟ್ಟಿರುವುದನ್ನು ದಿನಕ್ಕೆ ಮೂರು ಸಾರಿ ಎಕ್ಸೆಲ್ ಫೈಲಿನಲ್ಲಿ ಡೌನ್ಲೋಡ್ ಮಾಡಿಡುತ್ತಿದ್ದೇನೆ. ತೀರಾ ಅನಿವಾರ್ಯವಾದರೆ, ಅದನ್ನೆಲ್ಲಾ ಸೇರಿಸಿ ಕೊನೆಗೊಂದು ನೈಟ್ ಜಾಬ್ ರನ್ ಮಾಡಿ ಪೋಸ್ಟ್ ಮಾಡಿಬಿಡಬಹುದು ಮಂತ್ ಎಂಡಿನ ರನ್ ಆಗುವ ಮೊದಲೆ...ಐ ಮೀನ್ ಯಾವುದೇ ಕಾರಣದಿಂದ ಕುನ್. ಸೋವಿಯ ಸಿಬ್ಬಂದಿ ಆ ಕೊನೆಯ ಪೋಸ್ಟಿಂಗ್ ಮಾಡಲು ಸಾಧ್ಯವೇ ಆಗದಿದ್ದರೆ.. ವೀ ಜಸ್ಟ್ ನೀಡ್, ನಾಟ್ ಮೋರ್ ದ್ಯಾನ್ ಟೆನ್ ಟು ಫಿಪ್ಟೀನ್ ಮಿನಿಟ್ಸ್ ಆಫ್ ಸಿಸ್ಟಂ ಟೈಮ್ - ದಟ್ಸ್ ಆಲ್... ಮಂತ್ ಎಂಡ್ ಪ್ರೋಗ್ರಾಮಂತೂ ಹೇಗೂ ರನ್ನಾಗಲೇ ಬೇಕು..ಅದು ರನ್ನಾಗಲು ಸಿಸ್ಟಂ ಅಪ್ ಇರಲೇಬೇಕು.. ನಮ್ಮ 'ಜಾಬ್' ಸರಣಿಯಲ್ಲಿ 'ಮಂತ್ ಎಂಡಿಗೆ' ಮುಂಚೆಯೆ ಬರುವುದರಿಂದ ಮತ್ತು 'ಮ್ಯಾಂಡೆಟರಿ ಜಾಬ್' ಆದ ಕಾರಣ ಅದು ಕೆಲಸ ಮಾಡಿಯೇ ತೀರುತ್ತದೆಂದು ನನಗೆ ನಂಬಿಕೆಯಿದೆ..ದಟ್ ಇಸ್ ಅವರ ಲಾಸ್ಟ್ ಅಂಡ್ ಅಲ್ಟಿಮೇಟ್ ಇನ್ಶ್ಯೂರೆನ್ಸ್ ಐ ಬಿಲೀವ್..'
'ಗ್ರೇಟ್..! ದೆನ್ ವೀ ಆರ್ ವೆಲ್ ಕವರ್ಡ್ ಐ ಗೆಸ್... ಲೆಟ್ ಅಸ್ ಸೀ ವಾಟ್ ಹ್ಯಾಪೆನ್ಸ್ ' ಎಂದು ಮೀಟಿಂಗ್ ಮುಗಿಸಿ ಮೇಲೆದ್ದಿದ್ದ ಶ್ರೀನಾಥ. ಆಗವನ ಮನದಲ್ಲುಳಿದುಕೊಂಡಿದ್ದುದು ಒಂದೆ ಆಲೋಚನೆ ಮತ್ತು ಚಿಂತನೆಯಾಗಿತ್ತು ; ಈಗ ಏನಿದ್ದರೂ ಕನಿಷ್ಠ ಒಂದೆರಡು ಗಂಟೆಯಾದರೂ ಸಿಸ್ಟಮ್ ಇರುವ ಹಾಗೆ ನೋಡಿಕೊಳ್ಳಬೇಕಷ್ಟೆ - ಕನಿಷ್ಠ ಕೊನೆಯ ದಿನವಾದರೂ; ಅಷ್ಟಾದರೆ ಗೆದ್ದ ಹಾಗೆ ಲೆಕ್ಕ !
(ಇನ್ನೂ ಇದೆ)
__________
Comments
ಉ: ಕಥೆ: ಪರಿಭ್ರಮಣ..(29)
ಅಡ್ಡಿಗಿಂತ ಆತಂಕಗಳೇ ಹೆಚ್ಚಿನ ತೊಂದರೆ ಕೊಡುತ್ತವೆ ಎಂಬುದರ ಸಮರ್ಥ ವಿವರ . . . ಧನ್ಯವಾದಗಳು.
In reply to ಉ: ಕಥೆ: ಪರಿಭ್ರಮಣ..(29) by kavinagaraj
ಉ: ಕಥೆ: ಪರಿಭ್ರಮಣ..(29)
ನಿಜ ಕವಿಗಳೆ, ನಿಜವಾದ ಅಡ್ಡಿಗಳಿಗಿಂತ ಅವುಗಳುಂಟು ಮಾಡುವ ಆತಂಕ ಚಿಂತನೆಗಳೆ ಹೆಚ್ಚು ಮಾರಕ. ಕೆಲವೊಮ್ಮೆ ಏನೇನೊ ಆಗಬಹುದೆಂದು ಅನಿಸಿಕೆಯಲ್ಲೊ, ಊಹೆಯಲ್ಲೊ ಪದೇ ಪದೇ ಅಂದುಕೊಳ್ಳುತ್ತಲೆ, ಒಂದು ಘಟ್ಟದಲ್ಲಿ ಅದು ನಿಜವೆಂದೆ ಅನಿಸತೊಡಗುತ್ತದೆ. ಆಗ ಕಂಡಿದ್ದೆಲ್ಲವು ಅದಕ್ಕೆ ಪೂರಕವಾಗಿಯೆ ಇರುವ ಸಾಕ್ಷ್ಯದಂತೆ ಭಾಸವಾಗತೊಡಗುತ್ತವೆ.. ಆ ಮನಶ್ಯಕ್ತಿಯ ಮನಸ್ಥಿತಿ ವಾಸ್ತವನ್ನೆ ಧಿಕ್ಕರಿಸುವ ಕಸುವುಳ್ಳದ್ದು. ಶ್ರೀನಾಥನ ವಿಷಯದಲ್ಲಿ - ಇದು ಬರಿ ಅವನ ಭ್ರಮೆಯೊ ಅಥವಾ ಅದರಲ್ಲಿ ಹುರುಳಿದೆಯೊ,ಮ್ಕಾದು ನೋಡೋಣ. ನಿಮ್ಮ ನಿರಂತರ ಉತ್ತೇಜನಕ್ಕೆ ಮತ್ತೆ ಧನ್ಯವಾದಗಳು ಕವಿಗಳೆ :-)