ಗುರು ಪೂರ್ಣಿಮೆಯ ನೆಪದಲ್ಲಿ ಹಿಡನ್ ಅಜೆಂಡಾ

ಗುರು ಪೂರ್ಣಿಮೆಯ ನೆಪದಲ್ಲಿ ಹಿಡನ್ ಅಜೆಂಡಾ

 

ದೇಶದಲ್ಲಿ ಹಲವಾರು ಕ್ಷೇತ್ರಗಳಿವೆ, ಅದರಲ್ಲಿ ಶೈಕ್ಷಣಿಕ ಕ್ಷೇತ್ರವು ಬಹಳ ವಿಶೇಷವಾದದ್ದು ಹಾಗಾ ಶ್ರೇಷ್ಠವಾದದ್ದು ಎಂದು ಭಾವಿಸಲಾಗಿತ್ತು ಆದರೆ ಇಂದು ಹುಸಿಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಪ್ರಸ್ತುತದಲ್ಲಿ ಶಾಲೆಗಳು ಧಾರ್ಮಿಕ ಕೇಂದ್ರಗಳಾಗಿವೆ, ಒಂದು ಕೋಮುವಿನ ಸಂಸ್ಕೃತಿಗೆ ಕಟ್ಟು ಬಿದ್ದು ಮತ್ತೊಂದು ಕೋಮುವಿನ ಮಕ್ಕಳ ಭಾವನೆಗೆ ಧಕ್ಕೆ ತರುವ ಅಜೆಂಡಾಗಳಿಗೆ ಪುಷ್ಠಿ ನೀಡುವ ವಿರುದ್ದ ಸಂಸ್ಕೃತಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಹುಚ್ಚೆದ್ದು ಕುಣಿಯುತ್ತಿವೆ.

ಬಹಳ ಹಿಂದೆ ಶಾಲೆಗಳಲ್ಲಿ ಸರಸ್ವತಿ ಪೂಜೆ ಹಾಗೂ ಗಣೇಶ ವಿಸರ್ಜನೆ ಮಾತ್ರ ನಡೆಯುತ್ತಿದ್ದವು.ಅವು ಇಂದಿಗೂ ಕೂಡ ತಡೆಯಲಾಗಿಲ್ಲ ಮುಂದುವರೆದುಕೊಂಡೆ ಬರುತ್ತಿವೆ. ಸರಸ್ವತಿ ಮತ್ತು ಗಣೇಶ ಇಬ್ಬರನ್ನು ಪೂಜಿಸಿದರೆ ವಿದ್ಯೆ ಲಭಿಸುತ್ತದೆ ಎನ್ನುವ ಮನೋಭಾವನೆಗಳನ್ನು ಭಿತ್ತಿ ಆ ಮೂಲಕ ತಮ್ಮ ಪರಂಪರೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸರಸ್ವತಿ ಹಾಗೂ ಗಣೇಶ ಹಿಂದೂ ಧರ್ಮದ ಪ್ರತೀಕವಾದ ಮೇಲೆ ಒಂದು ಕೋಮುವಿನ ದೈವತ್ವವನ್ನು ಆಚರಿಸಬಹುದೇ? ಶಾಲೆಯಲ್ಲಿ ಮುಸಲ್ಮಾನ, ಕ್ರೈಸ್ತ, ಬೌದ್ದ, ಸಿಖ್ ಮುಂತಾದ ಕೋಮುವಿನ ವಿದ್ಯಾರ್ಥಿಗಳು ಇದ್ದರೆ ಅದು ಅವರಿಗೆ ಧಾರ್ಮಿಕ ಚ್ಯುತಿ ಅಲ್ಲವೆ? ಅದನ್ನರಿಯದೆ ನಿಮ್ಮ ಧಾರ್ಮಿಕ ಆಚರಣೆಗಳನ್ನು ಶಾಲೆಗೆ ತಂದು ಮಕ್ಕಳ ಮೇಲೆ ಏಕೆ ಏರಲು ಪ್ರಯತ್ನಿದುತ್ತಿದ್ದೀರಿ? ಶಿಕ್ಷಣವಂತರೆ ಹೀಗೆ ಮಾಡಿದರೆ ಅನಕ್ಷರಸ್ಥರ ಗತಿ ಏನು? ಹೀಗೆ ಮಾಥನಾಡಿದರೆ ನಾಸ್ತಿಕ, ಎಡಪಂಥಿಯ ಎಂದು ಏನೇನೋ ಕರೆಯುತ್ತೀರಿ.

ಹೋಗಲಿ ಕಾಲ ಕ್ರಮೇಣ ಇವೆಲ್ಲಾ ಸರಿ ಹೋಗುತ್ತವೆ ಎಂದು ಕೊಂಡರೆ ಅವು ಸರಿ ಹೋಗುವ ಲಕ್ಷಣಗಳು ಕಾಣುತಿಲ್ಲ. ಬದಲಾಗಿ ಹೊಸ ಹೊಸ ರೀತಿ ಧಾರ್ಮಿಕ ಆಚರಣೆಗಳು ತಲೆ ಎತ್ತುತ್ತಿವೆ. ಇಂದು ಗುರು ಪೂರ್ಣಿಮೆಯೆಂದು ಮತ್ತೊಂದು ಆಚರಣೆ ಆರಂಭಗೊಂಡಿದೆ, ಆ ದಿವಸ ಎಲ್ಲಾ ಶಿಕ್ಷಕರನ್ನು ಕೂರಿಸಿ ಪಾದಗಳಿಗೆ ಮಕ್ಕಳಿಂದ ಪಾದ ಪೂಜೆ ಮಾಡಿಸುವ ಸಂಸ್ಕೃತಿಯೊಂದನ್ನು ಮರಿಚಯಿಸುವ ಮೂಲಕ ಅವರದೇ ಪರಂಪರೆಗೆ ಪರೋಕ್ಷ ನಾಂದಿಯ ಹವಣಿಕೆ ಎದ್ದು ಕಾಣುತ್ತಿದೆ.

ಯಾವುದೇ ಶಾಲೆಯಲ್ಲಿ ಒಂದು ಧರ್ಮಕ್ಕೆ  ಸೀಮಿತವಾದ ಚಡುವಡಿಕೆಗಳು ನಡೆಯುವಂತಿಲ್ಲ ಅದು ಕಾನೂನು ಬಾಹಿರವೂ ಕೂಡ, ಆದರೂ  ಇವು ನಡೆಯುತ್ತಲೇ ಇವೆ. ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳು ಹಣೆಕೆ ಕುಂಕುಮ ಹಿಡಲೇ ಬೇಕು, ಹೆಣ್ಣು ಮಕ್ಕಳು ಕೈಗೆ ಬಳೆ ತೊಡಲೇ ಬೇಕು, ಹೀಗೆ ಕಡಾ ಕಂಡಿತವಾದ ಬಲವಂತಿಕೆಯ ತಾಕಲಾಟಗಳ ಷರತ್ತುಗಳಿವೆ. ಹಾಗೆಯೆ ಶಿಕ್ಷಕರು ಕೂಡ ಅದನ್ನು ಚಾಚು ತಪ್ಪದೆ ಪಾಲಿಸಲೇ ಬೇಕು ಎಂಬ ಕಟ್ಟು ನಿಟ್ಟುಗಳಿವೆ, ಶಿಕ್ಷಕರು ಸಂಬಳಕ್ಕಾಗಿ ಏನನ್ನು ಬೇಕಾದರು ಮಾಡಲು ತಯಾರಿರುವುದರಿಂದ ಇವರು ಗುಲಾಮಿ ಸಂತತಿಯ ವಂಶಸ್ಥರಾಗಿ ಹೋಗಿದ್ದಾರೆ.

ಮಕ್ಕಳು ಪಾದ ಪೂಜೆ ಯಾಕೆ ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆ? ಅದರಿಂದ ಯಾವ ಪ್ರಯೋಜನವಿದೆ? ಹೋಗಲಿ ಪಾದ ಪೂಜೆ ಮಾಡಿಸಿಕೊಳ್ಳುವಷ್ಟು ಯೋಗ್ಯತೆ ಇವತ್ತಿನ ಶಿಕ್ಷಕರಿಗಿದೆಯೆ? ಈಗಷ್ಟೆ ಖಾಸಗಿ ಶಾಲೆಯೊಂದರಲ್ಲಿ ೬ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಣ್ಣ ಮಗುವಿಗೆ ಚಾಕಲೇಟ್ ಆಸೆ ತೋರಿಸಿ ದೈಹಿಕ ಶೀಕ್ಷಕನೊಬ್ಬ ಅತ್ಯಾಚಾರವೆಸಗಿದ್ದಾರೆ. ಇಂತಹ ನೈತಿಕತೆ ಇಲ್ಲದ ಶಿಕ್ಷಕರಿಗೆ ಪಾದ ಪೂಜೆ ಬೇಕೆ?

ಇಷ್ಟಕ್ಕೂ ಪಾದ ಪೂಜೆ ಎಂಬುದು ಎಷ್ಟು ಪೂರಕ ಹಾಗೂ ಮಾರಕವೆಂಬುದು ಪರಿಣಾಮಕಾರಿಯಾಗಿ ಚರ್ಚೆಯಾಗ ಬೇಕಾಗಿರುವ ವಿಚಾರವಾಗಿದೆ. ಶಾಲಾ ಮಕ್ಕಳಲ್ಲಿ ಯಾವುದೇ ರೀತಿಯ ಜಾತಿ ಕಿನ್ನತೆಯಾಗಲಿ ಅಥವಾ ಧರ್ಮ ಕಿನ್ನತೆಯಾಗಲಿ ಇರುವುದಿಲ್ಲ ಅವೆಲ್ಲಾ ಖಾಲಿ ತಲೆಗಳಾಗಿರುತ್ತವೆ. ಏನನ್ನೆ ಬೇಕಾದರು ತುಂಬ ಬಹುದು ಎಂಬ ಮನೋ ಸಿದ್ದಾಂತಗಳ ಆಧಾರದ ಮೇಲೆ ಕೆಲವರು ಶಾಲಾ ದಿನಗಳಲ್ಲಿಯೆ ಧರ್ಮದ ಅಫೀಮನ್ನು ತಿನ್ನಿಸಲು ಮುಂದಾಗುತ್ತಿರುವುದು ಸಮಾಜಕ್ಕೆ ಮುಂದೆ ಮಾರಕ ತೊಡಕಾಗುತ್ತದೆ. ಎಲ್ಲಾ ಕೋಮುವಿನ ಮಕ್ಕಳು ಒಂದೇ ವೇದಿಕೆಯಲ್ಲಿ ಪರಸ್ಪರ ಮುಖ ತಿರುಚಿಸುವ ಹವಣಿಕೆ ಶಾಲಾ ದಿನದಿಂದಲೆ ತರುವ ಹುನ್ನಾರ ಇದರ ಹಿನ್ನೆಲೆಯಾಗಿದೆ. ಮಗು ಬೆಳೆದು ನಿಂತಾಗ ಸರಿ ತಪ್ಪುಗಳನ್ನು ಗ್ರಹಿಸಿ ಬಿಡುತ್ತದೆ ಎಂದು ಅದರ ಮೆದುಳನ್ನು ಸಣ್ಣ ವಯಸ್ಸಿನಲ್ಲೆ ಹೊಡೆಯುವ ಹಾಗೂ ಇಡೀ ಸಮಾಜವನ್ನು ಕತ್ತರಿಸುವ ರಣ ತಂತ್ರಗಳು ಮರೆಯಲ್ಲಿ ಅಡಗಿ ಕುಳಿತಿವೆ. ಯಾವುದೇ ಆಚರಣೆಯನ್ನು ತಂದರು ಅದಕ್ಕೆ ಸಂಸ್ಕೃತಿಯ ಬಣ್ಣ ಕಟ್ಟಿ ಬಾಯಿ ಮುಚ್ಚಿಸುತ್ತಾರೆ. ಸರಸ್ವತಿ, ಗಣೇಶ ಪೂಜೆಯ ಮುಂದುವರಿದ ಭಾಗವಾಗಿ ಇಂದು ಗುರು ಪೂರ್ಣಿಮೆ ಪ್ರಾರಂಭಿಸಿದ್ದಾರೆ, ಪಾದ ಪೂಜೆಯ ಮೂಲಕ ಮಕ್ಕಳ ನಿರ್ಮಲ ಮನಸ್ಸನ್ನು ಕಲಕಲು ಉದ್ದೇಸ ಪೂರ್ವಕವಾಗಿ ಇದು ಹಿಡುತ್ತಿರುವ ಹಿಡನ್ ಅಜೆಂಡಾ ಎನ್ನದೆ ಮತ್ತೇಗೆ ಕರೆಯಬೇಕು.

Comments

Submitted by anand33 Mon, 07/21/2014 - 15:36

ಶಾಲಾ ಮಕ್ಕಳ ಕೈಯಿಂದ ಶಿಕ್ಷಕರ ಪಾದ ತೊಳೆಸುವ ಆಚರಣೆ ಖಂಡನೀಯ. ಇದು ಗುಲಾಮಗಿರಿಯ ಸಂಕೇತವೂ ಹೌದು. ಸಂಬಳ ತೆಗೆದುಕೊಂಡು ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಪಾದ ಪೂಜೆ ಮಾಡಿಸಿಕೊಳ್ಳುವ ಯೋಗ್ಯತೆ ಇಲ್ಲ. ಹಿಂದೆ ಗುರುಕುಲದಲ್ಲಿ ಸಂಬಳಕ್ಕೆ ಆಸೆಪಡದೆ ಸೇವೆಯ ರೂಪದಲ್ಲಿ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದ ಗುರುಗಳಿಗೆ ಅಂಥ ಯೋಗ್ಯತೆ ಇದ್ದಿರಬಹುದು. ಉತ್ತಮ ಹಾಗೂ ವಿಚಾರವಂತ ಲೇಖನ ಕೊಟ್ಟದ್ದಕ್ಕಾಗಿ ತಮಗೆ ಧನ್ಯವಾದಗಳು.

Submitted by modmani Mon, 07/21/2014 - 15:52

ನಿಮ್ಮ ಮಾತನ್ನು ಒಪ್ಪಿದೆ. ಆದರೆ ಅದೇ ಸಮಯದಲ್ಲಿ, ಬಳೆ ಹಾಕುವುದನ್ನು ನಿರ್ಭಂದಿಸುವ, ಬಿಂದಿ ಇಡುವುದನ್ನು ನಿಷೇಧಿಸುವ, ಕೆಲವು ಕೋಮಿನ ಪ್ರಾರ್ಥನೆಗಳನ್ನು ಕಡ್ಡಾಯಗೊಳಿಸುವ ಶಾಲೆಗಳ ಬಗ್ಗೆ ಏನು ಹೇಳುತ್ತೀರಾ..?
ನಮ್ಮ ಮುಂದಿನ ಪೀಳಿಗೆಯ ಮಂದಿ ಹೇಗಿರಬೇಕೋ ಹಾಗೆ ತಯಾರು ಮಾಡುವುದೇ ಶಿಕ್ಷಣವಲ್ಲವೇ..?