ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ
ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)
[ ಕಡೆಯ ಬಾಗ ]
ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ ಹುಟ್ಟಿಸಬಲ್ಲದು ಅನ್ನಿಸಿತು. ನಂತರ ಕೇಳಿದ
"ಸರಿಯಪ್ಪ ಈಗ ಮುಂದೆ ಏನು ಮಾಡೋದು. ಅಲ್ಲಿ ನೋಡಿದರೆ ಶೇಖರನು ಅಡುಗೆ ಮಾಡಿಸಿರುವೆ ಊಟಕ್ಕೆ ಬಾ ಎಂದು ಕರೆದಿದ್ದಾನೆ , ಅಲ್ಲಿಗೆ ಹೋಗುವುದಾ , ನೀನು ಜೊತೆಗೆ ಬರುವೆಯಾ?" .
ಪ್ರಕಾಶ ಶಾಂತವಾಗಿ ಕುಳಿತಿದ್ದವನು ನುಡಿದ.
"ನೀನು ಇಷ್ಟಪಟ್ಟರೆ ಹೋಗೋಣ ವಿಶ್ವ. ನಾನಂತು ಬರುವೆ ಸಿದ್ಧ. ಆದರೆ ಅಲ್ಲಿಯೂ ನನಗೆ ಬಸವರಾಜುವಿನ ಮನೆಯಲ್ಲಿ ಸಿಕ್ಕ ಸ್ವಾಗತಕ್ಕಿಂತ ಭಿನ್ನವಾದ ಸ್ವಾಗತ ಸಿಗುವದೆಂದು ನಿರೀಕ್ಷಿಸುವಂತಿಲ್ಲ"
ವಿಶ್ವನು
"ಪ್ರಕಾಶ ನೀನು ಬೇಸರಪಡುವದಿಲ್ಲ ಅನ್ನುವದಾದರೆ ಒಂದು ಪ್ರಯತ್ನ ಪಡೋಣ. ಶೇಖರನ ಮನೆಗೆ ನೀನು ನನ್ನ ಜೊತೆ ಬಾ. ನಾನು ಎದುರಿಗೆ ಇರುವೆ ಎನ್ನುವ ಕಾರಣಕ್ಕಾದರು ನಿನ್ನ ಜೊತೆ ಮಾತನಾಡಬಹುದು. ಅಲ್ಲವೆ ?. ನಾನು ಗಮನಿಸಿದಂತೆ ಮಕ್ಕಳಿಲ್ಲ ಅನ್ನುವ ಕೊರಗು ಕಾಡುತ್ತಿರುವಂತಿದೆ ಅವನನ್ನು. ನೀನು ನನ್ನ ಜೊತೆ ಬಂದರೆ ಸಂತಸ ಆದರೆ ನಾನು ನಿನ್ನನ್ನು ಬಲವಂತ ಮಾಡುವದಿಲ್ಲ" ಎಂದ ವಿಶ್ವ .
ಅದಕ್ಕೆ ಪ್ರಕಾಶ.
"ಹೌದು ವಿಶ್ವ ನಾನು ಊಹಿಸಿದಂತೆ ಅವನು ಅದೇ ಕಾರಣಕ್ಕಾಗಿಯೆ ನನ್ನ ಮೇಲೆ ದ್ವೇಷ ಸಾಧಿಸುತ್ತಾನೆ ಅದು ಅಸೂಯೆಯಿಂದ ಜನ್ಯವಾದುದ್ದು ಅನ್ನಿಸುತ್ತೆ. ಹಾಗಾಗಿ ಯಾವ ಚಿಕ್ಕ ಕಾರಣ ಸಿಕ್ಕರು ಬಿಡದೆ ನನ್ನನ್ನು ಹಂಗಿಸುತ್ತಾನೆ ನಾನು ಮೌನವಾಗಿರುವದನ್ನೆ ಅಭ್ಯಾಸ ಮಾಡಿದ್ದೇನೆ."
"ಸಂಬಂಧಗಳು ಇಷ್ಟೊಂದು ಹದಗೆಡಲು ಕಾರಣವೇನಿರಬಹುದು ಪ್ರಕಾಶ" ಎಂದ ನೋವಿನಿಂದ ವಿಶ್ವ
"ವಿಶ್ವ ಯಾವಾಗ ಗಂಡಸರ ಸಂಬಂಧಗಳು ಹೆಂಗಸರ ನಿರ್ದೇಶನದಲ್ಲಿ ನಡೆಯುತ್ತದೆಯೊ, ಗಂಡಸರ ನಡೆನುಡಿಗಳು ಹೆಂಗಸರಿಂದ ನಿಯಂತ್ರಿಸಲ್ಪಡುತ್ತದೆಯೊ ಆಗ ಬಾಂಧವ್ಯದಲ್ಲಿ ಈ ರೀತಿ ಆಗುತ್ತದೆ ಅನ್ನಿಸುತ್ತೆ,...... ಸರಿ ನಡೆಯಪ್ಪ ಅಲ್ಲಿಯೂ ಹೋಗಿ ನೋಡಿಬಿಡೋಣ ಏನಾಗುತ್ತೆ ಎಂದು, ಅಥವ ನೀನು ಒಬ್ಬನೆ ಹೋಗಿಬರುವದಾದರೆ ಹೋಗಿ ಊಟ ಮುಗಿಸಿ, ಕಾಲ್ ಮಾಡು ನಾನು ಬಂದು ನಮ್ಮ ಮನೆಗೆ ಕರೆದೊಯ್ಯುತ್ತೇನೆ. ರಾತ್ರಿ ನಮ್ಮ ಮನೆಯಲ್ಲಿ ಇರುವಿಯಂತೆ. ನನ್ನ ಮಗಳು ಹಾಗು ಪತ್ನಿ ನೀನು ಬರುವದಾಗಿ ಕಾದಿದ್ದಾರೆ" ಎಂದ ಪ್ರಕಾಶ.
"ಬೇಡ ಪ್ರಕಾಶ ನೋಡಿ ಬಿಡೋಣ ನನ್ನ ಜೊತೆ ನೀನು ಬಾ ಅವನಿಗೆ ಬುದ್ದಿಹೇಳಲು ಪ್ರಯತ್ನಿಸುವೆ "
ಎನ್ನುತ ವಿಶ್ವ ಎದ್ದು ನಿಂತ.
ಪ್ರಕಾಶ ಬಿಲ್ಲಿನ ಹಣ ಕೊಟ್ಟು ಹೊರಗೆ ನಿಂತಿದ್ದ ಬೈಕ್ ನತ್ತ ನಡೆದ.
ಪ್ರಕಾಶನ ಗಾಡಿ, ವಿಶ್ವನ ಮನೆ ಎದುರು ನಿಂತಾಗ ಶೇಖರ ಬಂದು ಬಾಗಿಲು ತೆರೆದ.
ವಿಶ್ವನ ಜೊತೆ ಪ್ರಕಾಶನ ಮುಖ ನೋಡುವಾಗಲೆ ಅವನ ಮುಖ ಬದಲಾಗಿತ್ತು.
"ಒಳಗೆ ಬಾ ವಿಶ್ವ" ಎನ್ನುತ್ತ ಒಳ ಹೊರಟ.
ಬಾಯಿ ಮಾತಿಗೂ ಅವನು ಪ್ರಕಾಶನನ್ನು ಬಾ ಅನ್ನಲಿಲ್ಲ. ಪ್ರಕಾಶ ವಿಶ್ವ ಇಬ್ಬರೂ ಒಳಬಂದರು. ಹಾಲಿನಲ್ಲಿಯ ಸೋಫ ಮೇಲೆ ಕುಳಿತಂತೆ, ಒಳಗಿನಿಂದ ಶೇಖರನ ಪತ್ನಿ ಹೊರಬಂದು ಪ್ರಕಾಶನನ್ನು ಕಂಡು ಏನು ಮಾತನಾಡದೆ ಒಳಗೆ ಹೊರಟು ಹೋದಳು.
ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ಶೇಖರ
"ಅದೇನೊ ಇಂದು ಲೆಕ್ಚರರ್ ಸಾಹೇಬರು ನಮ್ಮ ಮನೆಗೆ ಬಂದುಬಿಟ್ಟಿದ್ದಾರಲ್ಲ ಆಶ್ಚರ್ಯ" ಎಂದ ವ್ಯಂಗ್ಯವಾಗಿ
"ಇಲ್ಲಪ್ಪ ನಾನೆ ಬಲವಂತ ಮಾಡಿ ಕರೆತಂದೆ. ಅವರ ಮನೆಗೂ ಬಾ ಎಂದ ನಾನು ಹೇಳಿದೆ ನಿಮ್ಮಲ್ಲಿ ಊಟಕ್ಕೆ ಬರುವದಾಗಿ ತಿಳಿಸಿರುವೆ ಎಂದು, ಹಾಗಾಗಿ ನಿಮ್ಮಲ್ಲಿ ಊಟಮುಗಿಸಿ, ಪ್ರಕಾಶನ ಮನೆಯಲ್ಲಿ ಸ್ವಲ್ಪ ಇದ್ದು ಬೆಂಗಳೂರಿಗೆ ಹೊರಡೋಣ ಎಂದು" ಎಂದ ವಿಶ್ವ.
"ಓ ಹಾಗೆ ಅನ್ನು ನಾನು ಭಾವಿಸಿದೆ ಅದೇನು ದೊಡ್ಡ ದೊಡ್ಡವರೆಲ್ಲ ನಮ್ಮ ಮನೆಗೆ ಬಂದರಲ್ಲ ಆಶ್ಚರ್ಯ ಎಂದು. ಪಾಪ ಅವರಿಗೆ ನಮ್ಮಂತಹ ಬಡವರ ಮನೆ ಊಟ ರುಚಿಸಬೇಕಲ್ಲಪ್ಪ. ಅವರೇನು ಅವರ ಲೆವೆಲ್ ಏನು. ಮಗಳು ಈಗ ಡಾಕ್ಟರ್ ಬೇರೆ"
ಶೇಖರನ ದ್ವನಿಯಲ್ಲಿ ಅಸಹನೆ, ಅಸೂಯೆ ಎಲ್ಲ ದ್ವನಿಸುತ್ತಿತ್ತು.
"ಶೇಖರ ಅದೆಲ್ಲ ಈಗೇಕಪ್ಪ, ನಾನೇನು ಎಂದಿಗೂ ಆ ರೀತಿ ಹೇಳಿಲ್ಲ. ನನಗಾವ ಕೊಂಬು ಇಲ್ಲ " ಎಂದ ಪ್ರಕಾಶ ನೋವಿನಲ್ಲಿ.
"ಸರಿ ಕೊಂಬು ಇರುವುದು ನನಗೆ ಬಿಡು, ನನಗೆ ಈ ನಾಟಕವೆಲ್ಲ ಗೊತ್ತಿದೆ, ಎದುರಿಗೆ ಒಂದು , ಬೇರೆಯವರ ಕೈಲಿ ಮತ್ತೊಂದು ಮಾತು. ಈಗ ವಿಶ್ವ ಬಂದಿದ್ದಾನೆ ಎಂದು ಸೋಗು ಹಾಕಿ ನ್ಯಾಯವಂತನಂತೆ ಬಂದಿರುವೆ, ಹಿಂದೆ ಹೇಳುವಾಗ ಅವನ ಕೈಲಿ ನನ್ನ ಬಗ್ಗೆ ಏನು ಹೇಳುವೆ ಎಂದು ನನಗೆ ತಿಳಿದಿದೆ"
ನಿಷ್ಠೂರವಾಗಿ ನುಡಿದ ಶೇಖರ.
ಈಗ ವಿಶ್ವ ಬಾಯಿ ಹಾಕಿದ
"ಶೇಖರ ಈಗ ಹಳೆಯ ಮಾತೆಲ್ಲ ಏಕೆ ಬಿಡು, ನಾನು ಬೆಂಗಳೂರಿನಿಂದ ಬರುವಾಗಲೆ ನಿಮ್ಮನ್ನೆಲ್ಲ ಮಾತನಾಡಿಸಿ , ಜೊತೆಯಾಗಿ ಇದ್ದು ಹೋಗಬೇಕೆಂದು ಬಂದವನು. ಒಂದೇ ಊರಿನಲ್ಲಿ ಇರುವವರು ನೀವು ಒಬ್ಬರಿಗೊಬ್ಬರು ಆಗ ಬೇಕಲ್ಲವೆ,ಅದಲ್ಲದೆ ನಮ್ಮ ಬಾಲ್ಯವನ್ನು ನೆನೆದುಕೊ. ಒಟ್ಟಿಗೆ ಆಡುತ್ತ ಹಾಡುತ್ತ ಬೆಳೆದವರಲ್ಲವೆ ನಾವು. ಈಗೇಕೆ ಹೀಗೆ. ಏನು ಕೆಟ್ಟ ಗಳಿಗೆಯಲ್ಲಿ ಒಂದೆರಡು ಮಾತುಗಳು ಬಂದಿರುತ್ತವೆ, ಅದನ್ನೆಲ್ಲ ಮರೆತುಬಿಡು. ಅವನ ಜೊತೆ ಸ್ನೇಹದಿಂದ ಇರು" ಎಂದ.
"ಓಹೋ ಈ ಮಾತು ಹೇಳಲಿ ಎಂದು ನಿನ್ನನ್ನು ಜೊತೆಗೆ ಕರೆದುಕೊಂಡು ಬಂದನೋ ಇವನು ಸರಿಯಾಗಿ ನಾರದನ ಪಾರ್ಟ್ ಮಾಡುತ್ತಾನೆ ಬಿಡು. ಏನೊ ಇವನಿಗೆ ಮಾತ್ರ ಮಕ್ಕಳಿರುವ ಹಾಗೆ ಪ್ರಪಂಚಕ್ಕೆಲ್ಲ ಒಬ್ಬಳೇ ಡಾಕ್ಟರ್ ಆದ ಹಾಗೆ ಮೆರೆಯುತ್ತಾನೆ ನನ್ನ ಸಹವಾಸ ಅವನಿಗೆ ಬೇಡ. ಹಾಗೆ ನಮಗೂ ಅಷ್ಟೆ ಅವನ ಸಹವಾಸ ಬೇಡ. ನೀನು ಅಪರೂಪಕ್ಕೆ ಬಂದಿರುವೆ ಇಲ್ಲಿಯ ರಾಜಕೀಯವೆಲ್ಲ ನಿನಗೆ ಬೇಡ ವಿಶ್ವ ನಿನ್ನ ಕೆಲಸ ಮುಗಿಸಿ ಹೊರಡು" ಎಂದ ಶೇಖರ
ವಿಶ್ವನಿಗೆ ಏಕೊ ಬೇಸರ ಅನ್ನಿಸಿತು. ಇದೆಲ್ಲಿಯ ಸಂಗತಿ. ಬೆಂಗಳೂರಿನಲ್ಲಿ ಹಾಯಾಗಿದ್ದ ನಾನು ಯಾವುದೋ ಕನಸು ಹೊತ್ತು ಇಲ್ಲಿಗೆ ಬಂದೆ. ಇಷ್ಟು ವರ್ಷ ನನ್ನ ಮನಸಿನ ಕಲ್ಪನೆಯಲ್ಲಿ ಇದ್ದ ಊರು, ಸ್ನೇಹತರೆ ಬೇರೆ, ಈಗ ಇಲ್ಲಿರುವ ಊರು, ಸ್ನೇಹತರೇ ಬೇರೆ. ಆಗಿನಂತೆ ಈಗ ಯಾರು ಚಿಕ್ಕ ಮಕ್ಕಳಾಗಿ ಉಳಿದಿಲ್ಲ. ಯಾರ ಮಾತು ಯಾರು ಕೇಳುವುದು ಸಾದ್ಯವಿಲ್ಲ ಅನ್ನುವ ನೋವು ತುಂಬಿತು ಅವನ ಮನದಲ್ಲಿ.
"ಸರಿಯಪ್ಪ ನಿನಗೆ ಅಷ್ಟೆ ಬೇಸರವಿದ್ದರೆ ನಾನು ಬಲವಂತ ಮಾಡುವದಿಲ್ಲ ನಿಮ್ಮ ನಿಮ್ಮ ಇಷ್ಟ. ಹಾಗಿದ್ದಲ್ಲಿ ಸರಿ ನಾನಿನ್ನು ಹೊರಡುತ್ತೇನೆ " ಎಂದ ವಿಶ್ವ.
ಅದಕ್ಕೆ ಶೇಖರ ಯಾವ ಉತ್ತರವನ್ನು ಕೊಡದೆ ಸುಮ್ಮನೆ ಕುಳಿತ.
ವಿಶ್ವ ನಿಧಾನವಾಗಿ ಎದ್ದು ರೂಮಿಗೆ ಹೋಗಿ ತನ್ನ ಬ್ಯಾಗನ್ನು ಹೊರತಂದ. ಹಾಲಿನಲ್ಲಿ ಬಂದು ನಿಂತಿದ್ದ ಶೇಖರನ ಪತ್ನಿಗೆ ,
"ಸರಿಯಮ್ಮ ನಾನು ಬರುತ್ತೇನೆ, ನೀವು ಶೇಖರನ ಜೊತೆ ಒಮ್ಮೆ ನಮ್ಮ ಮನೆಗೆ ಬನ್ನಿ ಬೆಂಗಳೂರಿಗೆ. ಅಲ್ಲಿ ನಮ್ಮ ಮನೆಯಲ್ಲಿದ್ದು ಬರಬಹುದು" ಎಂದ.
ಆಕೆ ಯಾವ ಭಾವವನ್ನು ತೋರದೆ ತಲೆಹಾಕಿದಳು.
ವಿಶ್ವ ಅಕೆಗೊಮ್ಮೆ ಕೈ ಮುಗಿದು. ಶೇಖರನತ್ತ ಪುನಃ ತಿರುಗಿ
"ಹಾಗಿದ್ದಲ್ಲಿ ನಾನು ಹೊರಡುವೆನಪ್ಪ" ಎಂದ. ಶೇಖರ ಯಾವ ಮಾತು ಆಡದೆ ತಲೆ ಆಡಿಸಿದ.
ವಿಶ್ವ ಹಾಗು ಪ್ರಕಾಶ ಅಲ್ಲಿಂದ ಹೊರಟು ಗೇಟಿನ ಬಳಿ ಬಂದರು , ಒಳಗೆ ಮಾತು ಕೇಳಿಸಿತು
"ಅಲ್ರಿ ಕಡೆಗೆ ಅವರಿಗೆ ಊಟ ಮುಗಿಸಿಹೋಗಿ ಎಂದು ಹೇಳುವದಲ್ಲವ ಮದ್ಯಾನ್ಹ ಊಟದ ಹೊತ್ತು" ಎಂದಳು.
"ಇರಲಿ ಬಿಡೆ ಅವರು ಹೊರಗೆ ಹೋಟೆಲ್ ನಲ್ಲಿ ತಿಂದೆ ಬಂದಿರುತ್ತಾರೆ, ಈಗ ಅವನು ಪ್ರಕಾಶನ ಮನೆಗೆ ಹೋಗುತ್ತಾನೆ ಅನ್ನಿಸುತ್ತೆ ಹೋಗಲಿ ಬಿಡು" ಎಂದ
ಪ್ರಕಾಶ ಹಾಗು ವಿಶ್ವ ಪರಸ್ಪರ ಮುಖನೋಡಿಕೊಂಡರು,. ಗೇಟನ್ನು ಮುಚ್ಚಿ ಹೊರಬಂದು ಬೈಕ್ ತೆಗೆದ ಪ್ರಕಾಶ. ಇಬ್ಬರ ನಡುವೆ ಮಾತು ನಿಂತು ಹೋಗಿತ್ತು.
ಪ್ರಕಾಶನೆಂದ
"ಸರಿ ನಮ್ಮ ಮನೆಗೆ ಹೋಗೋಣ ಅಲ್ಲಿಯೆ ಅಡುಗೆ ಮಾಡಿಸುತ್ತೇನೆ" ಎಂದ .
ಅದಕ್ಕೆ ವಿಶ್ವನೆಂದ
"ಬೇಡ ಪ್ರಕಾಶ ಅದೇಕೊ ಈ ಬಾರಿ ಸರಿ ಹೋಗಲಿಲ್ಲ, ನೀನು ತಪ್ಪು ತಿಳಿಯಬೇಡ. ನಿನ್ನ ಮನೆಗೆ ಮತ್ತೊಮ್ಮೆ ನಿಧಾನಕ್ಕೆ ಬರುತ್ತೇನೆ. ಈಗ ಮನೆ ಬೇಡ ಸರಿಹೋಗಲ್ಲ. ನನ್ನನ್ನು ಯಾವುದಾದರು ಉತ್ತಮ ಹೋಟೆಲಿಗೆ ಕರೆದೊಯ್ಯಿ, ಅಲ್ಲಿ ಊಟ ಮಾಡೋಣ" ಎಂದ.
ಪ್ರಕಾಶ ಎಷ್ಟೆ ಬಲವಂತ ಮಾಡಿದಾಗಲು ವಿಶ್ವ ಅವನ ಮನೆಗೆ ಹೋಗಲು ಒಪ್ಪಲೇ ಇಲ್ಲ, ಅವನ ಮನ ಕುದ್ದು ಹೋಗಿತ್ತು.
ಹೋಟೆಲಿನಲ್ಲಿ ಇಬ್ಬರೂ ಕುಳಿತು ಊಟ ಮುಗಿಸಿದರು, ಹೋಟೆಲಿನ ವಾತಾನುಕೂಲಿ ಗಾಳಿ ವಿಶ್ವನನ್ನು ಸ್ವಲ್ಪ ತಂಪಾಗಿಸಿತ್ತು. ಹಾಲಿನಲ್ಲಿ ಇಬ್ಬರನ್ನುಳಿದು ಬೇರೆ ಯಾರು ಇರಲಿಲ್ಲ. ಹಾಗೆ ಮಾತನಾಡುತ್ತ ಕುಳಿತರು.
ವಿಶ್ವ ಕೇಳಿದ
"ಪ್ರಕಾಶ ಅದೇನು ಅಷ್ಟೊಂದು ದ್ವೇಷ ಎಲ್ಲರ ನಡುವೆ. ನಾನು ಅಲ್ಲಿಂದ ಬರುವಾಗ ಊಹಿಸಲೂ ಇಲ್ಲ ಹೀಗೆ ಇರಬಹುದೆಂದು. ನೀನು ನನಗೆ ಮೊದಲೆ ಇದರ ಸುಳಿವೂ ತಿಳಿಸಿರಲು ಇಲ್ಲ" ಎಂದ
"ಆಗಲೆ ಹೇಳಿದೆನಲ್ಲ ವಿಶ್ವ, ಪ್ರೀತಿ ಪ್ರೇಮಕ್ಕೆ ಹೇಗೆ ಕಾರಣ ಬೇಡವೋ ದ್ವೇಷಕ್ಕು ಅಷ್ಟೆ. ಕಾರಣವಿರುವದಿಲ್ಲ. ನಮ್ಮೆಲ್ಲರ ನಡುವೆ ಪ್ರೀತಿ ಪ್ರೇಮಗಳೆಲ್ಲ ಇದ್ದಾಗ ನಾವೆಲ್ಲ ಚಿಕ್ಕ ಮಕ್ಕಳು. ಆಗ ಒಬ್ಬರಿಗೊಬ್ಬರು ಬೆರೆತೆವು. ಯಾವ ಕಲ್ಮಶವು ಇರಲಿಲ್ಲ. ದೊಡ್ದವರಾಗುತ್ತ ಹೋದಂತೆ ಊರು ತನ್ನ ಸ್ವರೂಪ ಬದಲಿಸಿಕೊಂಡಂತೆ, ನಮ್ಮ ಜೀವನ ತನ್ನ ಸ್ವರೂಪ ಬದಲಿಸಿಕೊಂಡಂತೆ ನಮ್ಮ ವ್ಯಕ್ತಿತ್ವಗಳು ಬದಲಾಗುತ್ತ ಹೋಯಿತೇನೊ. ಯಾವುದೋ ಕ್ಷಣದಲ್ಲಿ ಹತ್ತಿಕೊಂಡ ದ್ವೇಷದ ಹೊಗೆ ಬೆಂಕಿ ಅದು ಬೆಳೆಯುತ್ತಲೇ ಹೋಗುತ್ತಿದೆ, ನಾನು ಹೊಂದಿಕೊಳ್ಳಲು ಹೇಗೊ ಪ್ರಯತ್ನಿಸುತ್ತಲೆ ಇದ್ದೀನಿ ಆದರೆ ಇಲ್ಲಿ ಅದು ಆಗುತ್ತಿಲ್ಲ. ನನಗೆ ಒಮ್ಮೆ ಅನ್ನಿಸುತ್ತೆ ಒಮ್ಮೆ ನೀನು ಬೆಂಗಳೂರಿಗೆ ಹೋಗದೆ ಇದೇ ಊರಿನಲ್ಲಿ ಬೆಳೆದು ನೆಲೆಸಿದ್ದರೆ , ನೀನು ಸಹ ಇದೆ ದ್ವೇಷದ ಒಂದು ಬಾಗವಾಗುತ್ತಿದ್ದೆ ಅಂತ. ಅದಕ್ಕೆ ಕಾರಣ ಏನು ಬೇಕಿಲ್ಲ"ಎನ್ನುತ್ತ ನಕ್ಕ.
ವಿಶ್ವನು ಸಪ್ಪಗೆ ನಕ್ಕ
ಪ್ರಕಾಶ ಮತ್ತೆ ಹೇಳುತ್ತಿದ್ದ
"ನನಗೆ ಏನೇನೊ ಕಲ್ಪನೆ ತೋರುತ್ತದೆ ವಿಶ್ವ. ಈ ಪ್ರೀತಿ ಅನ್ನುವುದು ಅತ್ಯಂತ ಉತ್ತುಂಗದಲ್ಲಿರುವುದು ಅಂದರೆ ಸ್ವರ್ಗ ಅಂದುಕೋ. ಅದೆ ದ್ವೇಷ ಅನ್ನುವುದು ಪಾತಾಳದಲ್ಲಿರುವುದು ನರಕಕ್ಕೆ ಸಮಾನ. ಉತ್ತುಂಗದಲ್ಲಿರುವಾಗ ಸಂಭ್ರಮದಲ್ಲಿರುತ್ತೇವೆ ಸ್ವಲ್ಪ ಜಾರಿದೆವು ಅಂದುಕೋ ದ್ವೇಷದ ಕೂಪಕ್ಕೆ ಬಿದ್ದುಬಿಡುತ್ತೇವೆ. ಪ್ರೀತಿಯ ಶೃಂಗದಲ್ಲಿ ಎಚ್ಚರದಲ್ಲಿಯೇ ಇರಬೇಕು ಕಾಲು ಜಾರಬಾರದು. ಒಮ್ಮೆ ನರಕಕ್ಕೆ ಜಾರಿದೆವು ಅಂದರೆ ಅಲ್ಲಿಂದ ಮೇಲೆರುವುದು ಸಾದ್ಯವೆ ಇಲ್ಲ . ಆ ದ್ವೇಷ ರೋಷ ಅಸೂಯೆಗಳೆ ನಮಗೆ ಆಪ್ತ ಭಾವವಾಗಿಬಿಡುತ್ತವೆ" ಎಂದ.
ವಿಶ್ವ ಮತ್ತೆ ಕೇಳಿದ
"ಅಂದರೆ ನೀನನ್ನುವುದು ಆ ದ್ವೇಷದಿಂದ ಮತ್ತೆ ಪ್ರೀತಿಗೆ ಹೊಂದಾಣಿಕೆಯ ಭಾವಕ್ಕೆ ತಿರುಗುವುದು ಸಾದ್ಯವೆ ಇಲ್ಲವೆ?"
"ಸಾದ್ಯ ಅದು ಚಿಕ್ಕ ಮಕ್ಕಳಲ್ಲಿ ಆದರೆ ಸುಲುಭ. ಬೇಗ ತಮ್ಮ ಸಿಟ್ಟು ಸೆಡವುಗಳನ್ನೆಲ್ಲ ಮರೆತು ಒಂದಾಗಿಬಿಡುತ್ತವೆ. ದೊಡ್ಡವರಲ್ಲಿ ಅದು ಸಾದ್ಯವಿಲ್ಲ. ಅವರಲ್ಲಿ ಬಿಗುಮಾನ, ಅಹಂಕಾರ , ಈಗೋಗಳೆಲ್ಲ ಪ್ರಭಲವಾಗಿರುತ್ತವೆ, ಅವರು ಮತ್ತೆ ಒಂದಾಗಬೇಕೆಂದರೆ ಆ ದ್ವೇಷಕ್ಕಿಂತ ಲಾಭಕರವಾದುದ್ದು ಏನಾದರು ಇರಬೇಕು. ಈಗ ನೋಡು ನೀನು ಒಬ್ಬಬ್ಬರಿಗೂ ಒಂದು ಕೋಟಿ ರೂಪಾಯಿ ಹಣಕೊಡುತ್ತೇನೆ ಜಗಳವಾಡದೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಹೇಳಿದೆ ಎನ್ನು. ಆಗ ನಿನ್ನ ಹಣದ ಲೋಭಕ್ಕೆ ಬಿದ್ದು ಎಲ್ಲರೂ ಒಟ್ಟಿಗೆ ಇರುವರು. ಆಗಲೂ ಅಷ್ಟೆ ಹೊರಗೆ ನಗುತ್ತ ಜೊತೆಯಲ್ಲಿರುವಂತೆ ಇದ್ದರೂ ದ್ವೇಷ ಬೀಜರೂಪದಲ್ಲಿ ಇದ್ದೆ ಇರುತ್ತದೆ ಅಂದುಕೋ" ಎಂದ.
ಅವನು ಕೊಟ್ಟ ಉಪಮೆಯಿಂದ ವಿಶ್ವನಿಗೆ ಸ್ವಲ್ಪ ನಗು ಬಂದಿತು. ಇವರೆಲ್ಲರ ಜಗಳ ತಪ್ಪಿಸಲು ತಾನು ತಲಾ ಒಂದು ಕೋಟಿ ರುಪಾಯಿ ಕೊಡಬೇಕು , ಒಂದೆ ವೇಳೆ ಕೊಡುವಷ್ಟು ಸಾಮರ್ಥ್ಯ ತನ್ನಲ್ಲಿ ಇದ್ದಿದ್ದರೆ ಕೊಡಬಹುದಿತ್ತೇನೊ. ಅಂದುಕೊಳ್ಳುತ್ತ ಚಿಂತಿಸುತ್ತ ಕುಳಿತಿದ್ದ. ಮತ್ತೆ ಪ್ರಕಾಶ ಹೇಳಿದ
"ನೀನು ಇಷ್ಟು ವರ್ಷಗಳ ಕಾಲ ಯಾವುದೋ ಒಂದು ಕನಸನ್ನು ಹೊತ್ತು ಇಲ್ಲಿಗೆ ಬಂದೆ ವಿಶ್ವ. ನಿನ್ನ ಕಲ್ಪನೆಯ ಆ ಪ್ರಪಂಚದಲ್ಲಿ ಅದೆ ಹಳೆಯ ಹಿರಿಯೂರು, ಅದೇ ನಿನ್ನ ಬಾಲ್ಯ ಮಿತ್ರರು ಪ್ರತಿಷ್ಠಾಪನೆಗೊಂಡಿದ್ದರು. ಆದರೆ ಇಲ್ಲಿಗೆ ಬಂದನಂತರ ನಿನ್ನ ಕಲ್ಪನೆ ಭ್ರಮೆಗಳೆಲ್ಲ ಕರಗಿ ಹೋಯಿತು. ನಿನ್ನ ಕನಸಿನ ಸುಂದರ ಚಿನ್ನದ ಜಿಂಕೆ ಕನಸಿನಂತೆ ಕರಗಿಹೋಯಿತು. ನಿನ್ನ ಬಾಲ್ಯದ ಹಿರಿಯೂರು ಈಗ ಇಲ್ಲ. ಆ ಸ್ಥಳಗಳೆಲ್ಲ ಮಾಯವಾಗಿವೆ, ಆ ಮನೆಗಳು ಹಿತ್ತಲು, ಗಿಡಮರ ತೋಟ ಬಾವಿ ಕೆರೆಗಳು ಎಲ್ಲವೂ . ಹಾಗೆಯೆ ನಿನ್ನ ಮನದಲ್ಲಿ ನೆಲೆಮಾಡಿದ್ದ ಗೆಳೆಯರು ಎಂತದೋ ಸುಂದರ ಭಾವ ಕನಸು ಅಪ್ತತೆ ಆರ್ದ್ರತೆ ಎಲ್ಲವೂ ತನ್ನ ಹಸಿಯನ್ನ ಕಳೆದುಕೊಂಡಿದೆ ಅಲ್ಲವೆ.
ನಿನ್ನ ಬಾಲ್ಯದ ಗೆಳೆಯರು ಈಗ ಅದೇ ಹುಡುಗರಾಗಿಲ್ಲ ಎಲ್ಲರೂ ನಿನ್ನಷ್ಟೆ ದೊಡ್ಡವರಾಗಿದ್ದಾರೆ ಆದರೆ ನಿನ್ನಷ್ಟು ಬೆಳೆದಿಲ್ಲ. ಬದಲಿಗೆ ಯಾವುದೋ ಕೊಳಕು ಲೋಕದಲ್ಲಿದ್ದಾರೆ. ನಿನಗೆ ಒಮ್ಮೆಲೆ ಇದು ಶಾಕ್ ತರ ಆಗಿದೆ ಎಂದು ಗೊತ್ತು ಇದಕ್ಕೆ ನಾನು ಸಹ ಕಾರಣ. ನೀನು ಪತ್ರಗಳಲ್ಲಿ ಎಲ್ಲರ ಹೆಸರಿನ ಪ್ರಸ್ತಾಪ ಮಾಡುತ್ತಿದ್ದಾಗ ನಾನು ಹೇಗೆ ಇಲ್ಲಿಯ ದ್ವೇಷದ ಕತೆಯನ್ನು ಹೇಳುವುದು ಎನ್ನುವ ಸಂಕೋಚದಲ್ಲಿ ಸುಮ್ಮನಾಗಿಬಿಡುತ್ತಿದೆ. ನೀನು ವೃತ್ತಿಯಲ್ಲಿ , ಹಾಗೆ ಕಲ್ಪನೆಯಲ್ಲಿ ವಿಶಾಲ ಆಗಸದಲ್ಲಿ ವಿಹರಿಸುತ್ತಿದ್ದೆ, ನಾವೆಲ್ಲ ಇಲ್ಲಿ ಬಾವಿಯ ಕಪ್ಪೆಗಳಂತೆ ಎಂದು ತೋರಿತು. ಹಾಗಾಗಿ ನಿನಗೆ ತಿಳಿಸಲು ಹೋಗಲಿಲ್ಲ."
ವಿಶ್ವ ಸ್ವಲ್ಪ ಕಾಲ ಸುಮ್ಮನೆ ಕುಳಿತಿದ್ದ .
ಹೋಟೆಲಿನ ಸರ್ವರ್ ಮತ್ತೆ ಬಂದಾಗ ವಿಶ್ವ ಎರಡು ಕಾಫಿ ತರುವಂತೆ ಅವನಿಗೆ ತಿಳಿಸಿದ.
"ಸರಿ ಪ್ರಕಾಶ , ಪ್ರಪಂಚ ಹಾಗೆ ವೈವಿಧ್ಯಮಯ ನಮ್ಮ ನಿರೀಕ್ಷೆಯಂತೆ ಇರಲ್ಲ. ಹೋಗಲಿ ಬಿಡು. ನಾನೀಗ ಹೊರಟುಬಿಡುವೆ. ಯಾವುದೆ ಬಸ್ಸು ಹತ್ತಿದರು ರಾತ್ರಿ ಹನ್ನೊಂದರ ಒಳಗೆ ಬೆಂಗಳೂರು ತಲುಪುವೆ." ಎಂದ
ಪ್ರಕಾಶ ಸಂಕೋಚದಿಂದ ಮತ್ತೆ ಕೇಳಿದ.
"ಹಾಗಿದ್ದರೆ ನನ್ನ ಮನೆಗೆ ಬರಲ್ಲವೆ?"
"ಬೇಡ ಪ್ರಕಾಶ ಬೇಸರಪಡಬೇಡ ಅದೇನೊ ನನಗೆ ಈಗ ಬರುವುದು ಬೇಡ ಎಂದೆ ಅನಿಸುತ್ತಿದೆ. ನಿನ್ನ ಪತ್ನಿ ಹಾಗು ಮಗಳಿಗೆ ಹೇಳು ಬೇಸರಬೇಡವೆಂದು. ನಾನು ಮತ್ತೊಮ್ಮೆ ಬರುವೆ. ಒಂದು ಕೆಲಸ ಮಾಡು ಹೇಗೂ ಮುಂದಿನ ತಿಂಗಳಿಗೆ ನಿನ್ನ ಕಾಲೇಜಿಗೆ ಪರೀಕ್ಷೆಗಳೆಲ್ಲ ಮುಗಿದು ರಜಾ ಅಲ್ಲವಾ? . ನೀನು ಸಂಸಾರ ಸಮೇತ ನಮ್ಮ ಮನೆಗೆ ಬಂದುಬಿಡು. ನಾನು ಬರಲಿಲ್ಲ ಎಂದು ನೀನು ಹಾಗೆ ಮಾಡುವುದು ಬೇಡ? ಸರಿಯಾ?" ಎಂದ ವಿಶ್ವ.
"ಸರಿಯಪ್ಪ ನನಗೇನು ಬೇಸರವಿಲ್ಲ. ಮುಂದಿನ ತಿಂಗಳು ನಿಮ್ಮ ಮನೆಗೆ ಬರುವೆ ಬಿಡು. ಈಗ ನಿನ್ನನ್ನು ಬಸ್ ಹತ್ತಿಸುತ್ತೇನೆ ಹೊರಡು" ಎಂದು ಎದ್ದು ನಿಂತ.
ಬಸ್ ಚಲಿಸುತ್ತಿರುವಂತೆ ಊರಿನ ಬಗ್ಗೆ ಸ್ನೇಹಿತರ ಬಗ್ಗೆ ಯೋಚಿಸಿದ ವಿಶ್ವ ಈಗ ಅದೇನೊ ಕಣ್ಣ ಮುಂದೆ ಹಳೆಯ ಹೆಂಚಿನ ಮನೆಗಳು, ರಸ್ತೆಗಳು, ಮರ, ಹೂವಿನಗಿಡಗಳು ಹಿತ್ತಲು, ತೋಟ , ಕೆರೆ , ಶಾಲೆ ,ಗೆಳೆಯರು ಯಾರು ಯಾವುದು ಕಣ್ಣೆದಿರು ಬರುತ್ತಲೇ ಇರಲಿಲ್ಲ. ತಲೆಯನ್ನು ಹಿಂದೆ ಒರಗಿಸಿ ಕಣ್ಣು ಮುಚ್ಚಿದ ಕನಸುಗಳೆಲ್ಲ ಕರಗಿಹೋಗಿ ನಿದ್ರೆ ಹತ್ತಿತ್ತು.
- ಮುಗಿಯಿತು
Comments
ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ
ಪಾರ್ಥಾ ಸಾರ್, ಸಂಬಂಧಗಳ ಸೂಕ್ಷ್ಮಗಳು ನಿರೀಕ್ಷೆಗಳ ಹಂಗಿಲ್ಲದ ಎಳೆಯ ಮನಗಳ ನಿಷ್ಕಳಂಕ ಸ್ತರದಿಂದ ಪ್ರಬುದ್ಧರೆನಿಸಿಕೊಂಡ ವಯಸ್ಕರ ಸ್ತರಕ್ಕೇರಿದಾಗ ಹೇಗೆ ಕಾರಣವಿರದೆಯೂ ಕಳಂಕಿತ ಸ್ವರೂಪವನ್ನು ಆರೋಪಿಸಿಕೊಳ್ಳುತ್ತವೆನ್ನುವುದನ್ನು ಬಿಡಿಸಿಟ್ಟ ಕಥೆ, ಚೆನ್ನಾಗಿದೆ.
In reply to ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ by nageshamysore
ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ
ನಿಜ ನಾಗೇಶರೆ ಚಿಕ್ಕವಯಸಿನ ಸಂಬಂಧಗಳಲ್ಲಿ ಯಾವುದೇ ನಿರೀಕ್ಶ್ಹೆಯಿರಲ್ಲ, ವಯಸ್ಕರ ಸ್ತರಕ್ಕೇರಿದಾಗ ಅಂತಹ ಸಂಬಂಧಗಳು ಬೇರೆ ಬೇರೆ ಮೂಲಗಳಿಂದ ನಿರ್ದೇಶಿಸಲ್ಪಡುತ್ತದೆ !
In reply to ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ by nageshamysore
ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ
ನಿಜ ನಾಗೇಶರೆ ಚಿಕ್ಕವಯಸಿನ ಸಂಬಂಧಗಳಲ್ಲಿ ಯಾವುದೇ ನಿರೀಕ್ಶ್ಹೆಯಿರಲ್ಲ, ವಯಸ್ಕರ ಸ್ತರಕ್ಕೇರಿದಾಗ ಅಂತಹ ಸಂಬಂಧಗಳು ಬೇರೆ ಬೇರೆ ಮೂಲಗಳಿಂದ ನಿರ್ದೇಶಿಸಲ್ಪಡುತ್ತದೆ !
ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ
ಶತ್ರುಗಳು ಒಂದೊಮ್ಮೆ ಆತ್ಮೀಯರಾಗಿದ್ದವರೇ! ಶತ್ರುತ್ವಕ್ಕೆ ಆ 'ಮಾಯವ್ವ' ನೀರೆರೆಯುತ್ತಾಳೆ.
In reply to ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ by kavinagaraj
ಉ: ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ
ಹೌದು ! ನಾಗರಾಜಸರ್ , ಪ್ರೀತಿ ಎನ್ನುವುದು ಉತ್ತುಂಗ ಆದರೆ ಅಲ್ಲಿ ನಮ್ಮ ಭಾವನೆಯನ್ನು ಸ್ಥಿರವಾಗಿ ಉಳಿಸಿಕೊಳ್ಳುವುದು ಕಷ್ಟ ಹಾಗಾಗಿಯೆ ಶತ್ರುತ್ವ ಎನ್ನುವ ಕಂದಕದಡೆ ಜಾರಿಬಿಡುತ್ತೇವೆ