ನಾಟಕ - ಲಕ್ಷ್ಮೀಕಾಂತ ಇಟ್ನಾಳ
ನಾಟಕ
ಮಿಂಚು ಕೇಳದು ಗುಡುಗಿನಾರ್ಭಟ,
ಗುಡುಗು ಕಾಣದು ಮಿಂಚಿನ ಓಟ
ಮುಖ ನೋಡದ, ಮಥನದ ಅವಳಿಗಳಿವು,
ಒಂದೇ ನಾಣ್ಯದ ಮುಖಗಳಿವು
ಮಿಂಚುಗಳು ಮೋಡಗಳ ಎದೆಯೆಲ್ಲ ಹರಗುವವು
ಗುಡುಗುತ್ತ ಮೇಘಗಳು ಇಳೆ ಮಡಿಲ ಬಿತ್ತುವವು
ಆಕಳಿಸಿ,ಏಳುವವು ಟೋಪಿಗಳ ಸಹಿತ, ಬೀಜ ಕಣ್ಣು ಬಿಡುತ
ನಿಲ್ಲವುವು ಕೈಚಾಚಿ ಸೂರ್ಯನೆಡೆ, ಹಸಿರುಡುಗೆ ನೇಯುತ
ಗುಡ್ಡ ಬೆಟ್ಟಗಳಿಗೆ ಹಸಿರು ತೋರಣಗಳ ಮಾಲೆಗಳ
ಸೂರ್ಯ ರಶ್ಮಿಗಳ ನೆನೆಹಾಕಿ ಇಳಿಬಿಡುತ ಜಡೆಗಳ
ದಂಡೆ ಬಿರಿವಂತೆ ಕೆರೆ ಕಟ್ಟೆ ನದಿಗುಣಿಸಿ, ಹಾಡಿ ಜೋಗುಳ
ಸಾಗುವುವು ಹಂಚುತ್ತ ಮುಂಗಾರಿನ ಗೌರವದ ಪಾಸುಗಳ
ಗಾಳಿಗೂ ಮೂಡುವುವು ಚಿಗುರುಗಳು, ನಿರೀಕ್ಷೆಗಳಿಗೂ ಬಲಿಯುವುವು ಕಾಲುಗಳು
ಕೊರಡುಗಳ ಎದೆಯಲ್ಲೂ ನವಿಲು ಕುಣಿತಗಳು, ಅರಳುವುವು ಮನದಲ್ಲೂ ಉಲ್ಲಾಸದ ರೆಕ್ಕೆಗಳು
ಅತ್ತಿತ್ತ ತೂಗುತ್ತ, ಎತ್ತೆತ್ತೊ ಓಲುತ್ತ, ತೆನೆಗಳೇನೊ ಗಾಳಿಯಲಿ ಬರೆಯುತಿಹವು
ಚಿಟ್ಟೆಗಳ ಕಚಗುಳಿಗೆ ನಸುನಕ್ಕು ಅದರತ್ತ ಜೊತೆ ನಾವೂ ಬರುವೆವೆಂದು ಉಸಿರುತಿಹವು
ತೆನೆ ತೆನೆಗೆ ಮುತ್ತಿಡುತ ಕನಸುಗಳ ಕಟ್ಟಿಹವು, ಮನದಲಿ ಅರಳಿದ ನಗು ಮುಗುಳುಗಳು
ಬೆವರ ಮುತ್ತಿನ ಹನಿಯೇ ತೆನೆಯಾಗಿ ನಿಂದಿಹವು, ಮುಗಿಲಿಗೆ ನಮಿಸಿವೆ ಧನ್ಯತೆಯ ಕೊರಳುಗಳು
ಜೀವೋನ್ಮಾದ ಸೊಕ್ಕಿ, ನಗುವು ಕಿಲ ಕಿಲ ಉಕ್ಕಿ, ಮಂದಾರ ನಗುವುದು ಹಸಿರ ನೆಕ್ಕಿ ನೆಕ್ಕಿ
ಮಳೆರಾಯ ತಾನೊಮ್ಮೆ ಆಡದಿರೆ ನಾಟಕವನು, ಜಗವೆ ಅಳುವುದು ನೋಡು, ಬಿಕ್ಕಿ ಬಿಕ್ಕಿ
Comments
ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ
ಗೆಳೆಯರೆ, ಈ ಸಾಲುಗಳನ್ನು ದ್ವಿಪದಿಗಳಲ್ಲಿ ಬರೆದಿದ್ದು, ಹಾಗೆಯೇ ಓದಲು ಕೋರುವೆ.
ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ, ಚತುರ್ಪಾದಿಯಾಗಿಯೆ ಓದಿದರೂ ಅಭಾಸವಾಗದಂತೆ ಇದೆ - ಮಿಂಚು ಮಳೆ ಗುಡುಗು ಸಿಡಿಲಾದಿಗಳ ಜಗನ್ನಾಟಕ, ಓದುತ್ತಲೆ ಮಳೆಯಲ್ಲೆ 'ನೆನೆದ' ಅನುಭವವಾಗುವಂತೆ :-)
In reply to ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ನಾಗೇಶ್ ಜಿ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು, ತಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.
ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ
ಈಗ ಮಳೆ ಬರುತ್ತಿರುವ ರೀತಿ ನೋಡಿದರೆ ಮಳೆರಾಯ ನಾಟಕವಾಡುತ್ತಿದ್ದಾನೆ ಎನಿಸುತ್ತಿದೆ. ಅವನ ನಾಟಕಕ್ಕೆ ಕಾರಣ 'ಅವನು'!
In reply to ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ನಾಟಕ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಕವಿನಾಗರಾಜ್ ಸರ್ ಜಿ ರವರೇ, ತಾವಂದಂತೆ ಈ ನಾಟಕದ ಸೂತ್ರಧಾರ ನಿಜಕ್ಕೂ 'ಅವನೇ', ಮಳೆರಾಯ ನೆಪಕ್ಕೆ ಮಾತ್ರ. ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು ಸರ್ ಜಿ..