ಪ್ರೀತಿಯು ಅದೊಂದು ಬೀಜವಾದರೆ ಮೂಲ : ಬಸು ಭಟ್ಟಾಚಾರ್ಯ ಅನು : ಲಕ್ಷ್ಮೀಕಾಂತ ಇಟ್ನಾಳ

ಪ್ರೀತಿಯು ಅದೊಂದು ಬೀಜವಾದರೆ ಮೂಲ : ಬಸು ಭಟ್ಟಾಚಾರ್ಯ ಅನು : ಲಕ್ಷ್ಮೀಕಾಂತ ಇಟ್ನಾಳ

 

ಪ್ರೀತಿಯು ಅದೊಂದು ಬೀಜವಾದರೆ
    ಮೂಲ : ಬಸು ಭಟ್ಟಾಚಾರ್ಯ
    ಅನು : ಲಕ್ಷ್ಮೀಕಾಂತ ಇಟ್ನಾಳ

ಅದೊಂದು ರೀತಿಯ  ಬೀಜವಿದು ಪ್ರೀತಿ
ಒಮ್ಮುಖವಾಗದು ಅದರ ನೀತಿ
ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ
ಒಬ್ಬಂಟಿ ಬದುಕಲು ಸಾಧ್ಯವಾಗದು ಅದಕೆ
ಬದುಕಿದರೆ ಇಬ್ಬರಲ್ಲೂ,
ಸತ್ತರೆ ಕೂಡಿಯೇ ಸಾಯುತ್ತವೆ

ಹರಿವ ಝರಿಯಿದು ಪ್ರೀತಿ
ದಂಡೆಗಳ ಕಟ್ಟಳೆಗಳ ಕೆರೆಯಲ್ಲವಿದು,
ದಂಡೆ ಕಾಣದ ಸಾಗರವೂ ಅಲ್ಲವಿದು,
ತೊರೆಯ ಬುಗ್ಗೆಯಿದು ಅಷ್ಟೆ, ಹರಿಯುತ್ತಿಹುದು

ನದಿಯ ಹಾಗೆ ಏರುವುದು, ಇಳಿಯುವುದು,
ಮಟ್ಟಗಳೆಲ್ಲವೂ ಒಂದೇ ಪರಿ-ಸರಿ, ಪ್ರೀತಿಯಲ್ಲಿ
ನೀರ ಗುಣವೇ ಅದು, ಕೆಳಮುಖ ಪಯಣ
ಕೆಳಗಿಂದ ಮತ್ತೆ ಊಧ್ರ್ವಕ್ಕೆ, ಏರುತ್ತದೆ ಮೇಲಕ್ಕೆ
ಮೋಡವಾಗಿ ಆಕಾಶದಲ್ಲಿ ಹರಿಯುತ್ತದೆ
ಬೀಸುಗಾಳಿಯ ತುಂಟಾಟಕೆ ಗುಡುಗುತ್ತ
ಹನಿ ಹನಿ ಬಿಂದುವಾಗಿ ಕರಗುವುದು

ಪ್ರೀತಿಯಿದು ಆದೇಶಕ್ಕೆ ತಲೆಬಾಗುವ ಸೂತ್ರ ಬಂಧಿಯಲ್ಲ
 ಮಂದಿರದ ಆರತಿಯಲ್ಲ, ಪೂಜೆಯಲ್ಲ
ಗಳಿಕೆ, ಲಾಭದಾಸೆ, ಇಲ್ಲಾ
ಲಾಭ ಹಾನಿಗಳ ಲೆಖ್ಖವೇ ಅಲ್ಲ

ಘೋಷಣೆ, ಉಪಕಾರ ಊಹೂಂ, ಯಾವ ಯುದ್ಧದ ಗೆಲುವೂ ಅಲ್ಲ
ಕೌಶಲ್ಯ, ಬಕ್ಷೀಸು,  ಪರಂಪರೆಯ ರೀತಿ ರಿವಾಜುಗಳಲ್ಲ
ಕರುಣೆಯಲ್ಲ, ದಾನವಲ್ಲ
ಇದೊಂದು ಬಿತ್ತುವ ಬೀಜವೂ ಅಲ್ಲ
ಪರಿಮಳವಿದು, ಪರಿಮಳದ ಪರಿಚಯವೂ ಅಲ್ಲ

ನೋವು, ಆಶ್ವಾಸನೆ,  ವಿಶ್ವಾಸ, ಉನ್ಮಾದದ,
ಜಾಗೃತ ಸಂಚಲನೆಯ, ಸ್ಪರ್ಶದ ಸ್ಪಂದನೆಯ
ಗರ್ಭದೊಳು ಕಟ್ಟುವುದು
 ಈ
ಪ್ರೀತಿ,
ಬಿಡಿಸದ ಬಂಧವಿದು, ಸಂಬಂಧವಿದು
ಎರಡು ಜೀವಗಳ, ಎರಡು ಆತ್ಮಗಳ ಕುರುಹಿದು,
ಹುಟ್ಟುವುದು, ಬೆಳೆಯುವುದು,
ಆದರೆ ಮುಪ್ಪಾಗದು
 ಈ
ಪ್ರೀತಿ

ಮಣ್ಣೊಳಾವಿರ್ಭಿತ ನೋವೊಂದರ ತಣ್ಣನೆಯ ಕಾವಿನಡಿಯಲ್ಲಿ
ಪಾಲನೆ, ಪೋಷಣೆಯ ನವಿರು ಫಲದ ಕಟಾವದು
ಹಂಚಲಾಗದು,
ಹಂಚುವುದು ಹೇಗೆ,  ಅದನ್ನು?

ಮಣ್ಣು, ನೀರು, ಮತ್ತೆ ಗಾಳಿ, ತುಸು ಬೆಳಕು ಹಾಗೂ ಅಂಧಕಾರ ತುಸು
ಬೀಜದ ಕಣ್ಣಲ್ಲಿ ಹಣಿಕಿಕ್ಕಲು,
ಸಸಿಯಿದು ಕತ್ತನ್ನು ಮೇಲೆತ್ತಿ
ಮುಖ ಮೂಗು ದೃಷ್ಟಿಗಳ ತೋರುವುದು

ಚಿಗುರು ಸಸಿಯ ಎಲೆ ಎಲೆಗಳಲ್ಲೂ
ಕೆಲ ಪ್ರಶ್ನೆಗಳಿವೆ, ಹಲ ಉತ್ತರಗಳೂ!

ಯಾವ ಮಣ್ಣಿನ ಗರ್ಭವಾಗಿತ್ತೋ!
ಯಾವ ಋತುವದು, ಪಾಲಿಸಿ ಪೋಷಿಸಿತೋ
ಮತ್ತೆಲ್ಲಿ ದಿನಕರನೊಂದಿಗೆ ಸರಸವಾಡಿತೊ
ಯಾವ ರೆಂಬೆಗಳು ನಾಚಿ ಮುದುರಿದವೋ
ಹೀಗೊಮ್ಮೆ ಮೂಡಿಬಿಟ್ಟಿತು ಅದು,
 ಪ್ರೀತಿ!

ಎಲೆಗಳ  ಕೆಲ ಮುಖಗಳು ತಲೆಯೆತ್ತಿ ನೋಡುತ್ತಿವೆ
ಆಕಾಶದಲ್ಲಿ ಜೋಡಿಸಿದ ಆಸನಗಳಂತೆ
ಕೆಲ ನೇತಾಡುತಿಹವು, ಉದಾಸವೆನಿಸಿದರೂ ಕೆಲವು
ರೆಂಬೆಗಳ ನರಗಳಲ್ಲಿ ಹರಿವ ಜಲದೊಂದಿಗೆ ಸಂಬಂಧ ಹೊಂದಿಹವು
ಮಣ್ಣಿನಡಿಯಲ್ಲಿ ಬೀಜವೊಂದಕ್ಕೆ ವಿಳಾಸ ಕೇಳುವವು
ನಾವು ನೀವಾಗೆವು,
ಆದರೆ ಕೇಳುವವು,
ನೀವು ನಮ್ಮಿಂದ, ಇಲ್ಲವೆ ನಾವು ನಿಮ್ಮಿಂದ!

ಪ್ರೀತಿಯು, ಅದೊಂದು ಬೀಜವಾದರೆ,
ಅದು ಪ್ರಶ್ನೆಯೂ ಹೌದು
ಉತ್ತರವೂ ಹೌದು!

Rating
No votes yet

Comments

Submitted by ಗಣೇಶ Sun, 07/27/2014 - 21:14

"ಪ್ಯಾರ್ ವೊ ಬೀಜ್.." ಸುಂದರ ಕವನ. ಅಷ್ಟೇ ಚೆನ್ನಾಗಿ ಅನುವಾದಿಸಿದ್ದೀರಿ ಇಟ್ನಾಳರೆ. ಗುಲ್ಜಾರ್ ಕವನ(ಅವಸರದಲ್ಲಿ ಬಸು ಅಂದು ಬರೆದಿರಬಹುದೇ?)ದ ಕೊಂಡಿ ( http://www.youtube.com/watch?v=K5m9lIwfXNY ) ಓಪನ್ ಮಾಡಿ ಕೇಳುತ್ತಾ, ಈ ಇಟ್ನಾಳರ ಕವನ ಓದಿ. ಸೂಪರ್ ಇಟ್ನಾಳರೆ.

ಪ್ರೀತಿಯ ಗೆಳೆಯ ಗಣೇಶ ಜಿ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು. ತಮ್ಮ ಕಾಳಜಿಗೆ ನಮನ. ಹೌದು, ಅದು ಗುಲ್ಜಾರರದು ಎಂದೇ ನಾನೂ ಕೂಡ ತಿಳಿದಿದ್ದೆ. ಹಾಗೂ ನನ್ನ ಅನುವಾದ ಸಂಗ್ರಹದಲ್ಲಿ ಸೇರಿಸಿಯೂ ಬಿಟ್ಟಿದ್ದೆ, ಮೊನ್ನೆ ನನ್ನ ಗುರು ಗುಲ್ಜಾರರಿಂದ ಕರೆ ಬಂದಿತ್ತು, ನನ್ನೊಂದಿಗೆ ಅರ್ಧದಿನ ಪ್ರೀತಿಯಿಂದ ಕಳೆದರು. ನನ್ನ ಅನುವಾದಗಳನ್ನು ಒಂದಿಡೀ ಅರ್ಧ ದಿನ ಕುಳಿತು ಆಲಿಸಿ, ತಿದ್ದಿ, ಸಲಹೆ ಸೂಚನೆಗಳನ್ನು ಪ್ರೀತಿಯಿಂದ ನೀಡುತ್ತ ಹೋದರು. ಆ ಸಂದರ್ಭದಲ್ಲಿ ಈ ಹಾಡು ಬರೆದದ್ದು 'ಬಸು ಭಟ್ಟಾಚಾರ್ಯರು' ನಾನು 'ಆಸ್ಥಾ' ದಲ್ಲಿ ರಿಸೈಟ್ ಮಾಡಿದ್ದೇನೆ ಅಷ್ಟೆ ಎಂದು ಹೇಳಿ ನನ್ನ ಸಂಕಲನದಲ್ಲಿ ಅವರದೆಂದು ಹಾಕಿದ್ದನ್ನು ದಯಮಾಡಿ ತೆಗೆಯಿರಿ ಎಂದು ಹೇಳಿ, ಉಳಿದಂತೆ ಎಲ್ಲಾ 108 ಕವನಗಳನ್ನು ತುಂಬ ಮೆಚ್ಚಿ ಆಶೀರ್ವದಿಸಿ, ಅನುಮತಿ ನೀಡಿದ್ದು ಮರೆಯಲಾರೆ. ಈ ಹಾಡು ಮಾತ್ರ ಅದು ತಮ್ಮದಲ್ಲ ಎಂದು ಪ್ರೀತಿಯಿಂದ ಹೇಳಿ ನನಗೆ ಆಶೀರ್ವದಿಸಿ ಕಳುಹಿಸಿದರು. ಅಂತಹ ಮಹಾನ್ ಚೇತನದೊಂದಿಗೆ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಕಳೆದದ್ದು ನನ್ನ ಪುಣ್ಯ ಗಣೇಶ್ ಜಿ. ಅದೇ ಹಾಡನ್ನು ಈಗ ಸಂಪದಿಗರೊಂದಿಗೆ ಹಂಚಿಕೊಂಡೆ ಅಷ್ಟೆ. ತಮ್ಮ ಕಾಳಜಿ, ಕಳಕಳಿಗೆ ಧನ್ಯ. ಮತ್ತೊಮ್ಮೆ ವಂದನೆಗಳು.

ಇಟ್ನಾಳರೆ, ಹೀಗೇ ಗುಲ್ಜಾರ್ ಜತೆ ಕಳೆದ ಅವಿಸ್ಮರಣೀಯ ಸಮಯದ, ಅವರ ಸಲಹೆ ಸೂಚನೆಗಳ ವಿವರವನ್ನು ತಮಗೆ ಸಮಯವಾದಾಗ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಈ ಹಾಡಿನ ಅನುವಾದ ನನಗೆ ಬಹಳ ಹಿಡಿಸಿತು. ಹಾಗೆ ಹಿಂದಿಯಲ್ಲಿ ಬರೆದ ಬಸು ಭಟ್ಟಾಚಾರ್ಯರ ಕವನವನ್ನೂ ಓದೋಣ ಅಂತ ಹುಡುಕಿದೆ. ಸಿಗಲಿಲ್ಲ. ಗುಲ್ಜಾರ್ ರಿಸೈಟ್ ಮಾಡಿದ್ದು ಸಿಕ್ಕಿತು. ನಿಮ್ಮ ಕವನದ ಜತೆ ಸೇರಿದಾಗ ಖುಷಿಯಾಯಿತು. ಉಳಿದ ಸಂಪದಿಗರಿಗೂ ಆ ಅನುಭವವಾಗಲಿ ಎಂದು ಕೊಂಡಿ ಕೊಟ್ಟೆನು. ಧನ್ಯವಾದಗಳು.

ಕವಿ ಲೇಖಕರು ಹಿರಿಯರು ಕವೆಂನಾ ಸರ್ ಜಿ, ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯ. ವಂದನೆಗಳು