ಕಿರುಗತೆ : ಕೈಲಾಸ ಪ್ರಸಂಗ
“ಅಪ್ಪ ನನ್ನ ಬೆಲ್ಟ್ ನೋಡಿದೆಯ?, ಇಲ್ಲೇ ಆಡಿಕೊಂಡಿರು ಎಂದು ಬಿಟ್ಟಿದ್ದೆ ಕಾಣುತ್ತಲೇ ಇಲ್ಲವಲ್ಲ” ಎಂದು ಗಣಪ ಶಿವನನ್ನು ಕೇಳಿದ. ಸರಿಯಾಗಿ ಹುಡುಕಪ್ಪಾ ಅಲ್ಲೇ ಎಲ್ಲೋ ಇರ್ಬೇಕು ಎಂದು ಶಿವ ಉತ್ತರಿಸಿದ. ಗಣಪನಿಗೆ ಏಕೋ ಸಂದೇಹ ಬಂದು, "ನಿನ್ನ ಕತ್ತಿನಲ್ಲಿರುವ ಹಾವು ನನ್ನದಲ್ಲ ತಾನೆ" ಎಂದು ಮತ್ತೊಮ್ಮೆ ಕೇಳಿದ. ಎಲ್ಲಿ ಈತ ನನ್ನನ್ನೆ ತಾತ್ಕಾಲಿಕ ಸೊಂಟದ ಪಟ್ಟಿಯಾಗಿ ಧರಿಸುತ್ತಾನೋ ಎಂದು ಹೆದರಿ ಶಿವನ ಕೊರಳನ್ನು ಅಲಂಕರಿಸಿದ್ದ ಹಾವು ಶಿವನ ಬೆನ್ನ ಹಿಂದೆ ಸರಿಯಿತು. ಶಿವನಿಗೂ ಕೋಪ ನೆತ್ತಿಗೇರಿತು "ಏನು ಗಣಪ ನಿನ್ನ ಗಲಾಟೆ, ನನ್ನನ್ನು ಸುಮ್ಮನೆ ಧ್ಯಾನ ಮಾಡಲೂ ಬಿಡುವುದಿಲ್ಲವಲ್ಲ" ಎಂದು ಶಿವ ಗೊಣಗಿದ. "ಏನದು ಗಲಾಟೆ, ದಿನಾ ಅಪ್ಪ ಮಕ್ಕಳದು ಇದೇ ಆಯ್ತಲ್ಲ" ಎಂದು ಪಾರ್ವತಿ ಒಳಗಿನಿಂದ ಅನ್ನದ ಸೌಟನ್ನು ತಂದಳು. "ಆಹಾ!, ಅನ್ನಪೂರ್ಣೆಗೆ ನಮೋ ನಮಃ" ಎನ್ನುವುದರೊಂದಿಗೆ ನಮ್ಮ ಗಲಾಟೆ ಮೇಕರ್ ನಾರದರ ಆಗಮನವೂ ಆಯಿತು. ನಾರದರಿಗೆ ಶಿವಸಮೇತ ಪಾರ್ವತಿ ಗಣಪರು ಪ್ರತಿವಂದಿಸಿದರು. ನಂತರ ವೈಕುಂಠದ ಸುದ್ಧಿಸಮಾಚಾರಗಳನ್ನು ನಾರದರಿಂದ ತಿಳಿದು ಮತ್ತೆ ತಮ್ಮ ಕುಟುಂಬದ ಗಲಾಟೆಯ ಬಗ್ಗೆ ಗಮನ ಹರಿಸಿ "ಏನಾಯ್ತು ಗಣಪ, ಒಂದೇ ಸಮನೇ ಅದೇನನ್ನೋ ಹುಡುಕುತ್ತಿದ್ದೆಯಲ್ಲ" ಎಂದು ಪಾರ್ವತಿ ಕೇಳಿದಳು. "ನನ್ನ ಸೊಂಟಕ್ಕೆ ಸುತ್ತಿದ್ದ ಸರ್ಪವಮ್ಮ, ಅದಿಲ್ಲದೆ ನಾನು ಭೂಲೋಕಕ್ಕೇ ಹೇಗೆ ಹೋಗಲಿ, ನನ್ನ ಮರ್ಯಾದೆಯ ಪ್ರಶ್ನೆಯೇನು?" ಎಂದು ಗಣಪ ಹೇಳಿದ. "ಭೂಲೋಕವೇ!!, ನಿನ್ನ ಹಬ್ಬ ಇನ್ನೂ ಒಂದು ತಿಂಗಳಿದೆಯಲ್ಲ, ನಿನಗೆ ಅಷ್ಟು ಆತುರವೇ" ಎಂದು ಶಿವ ಕೇಳಿದ. "ಹಬ್ಬವೆಂದರೆ ಮಕ್ಕಳಿಗೆ ಖುಷಿಯಲ್ಲವೇ, ಹೋಗಿಬರಲಿ ಬಿಡಿ ಶಿವ" ಎಂದು ಹೇಳಿ, ನಾರದರು ಗಣಪನನ್ನುದ್ದೇಶಿಸಿ "ಆದರೆ ಗಣಪ, ಹೀಗಿನ ಜನರಿಗೆ ಹಬ್ಬ ಹರಿದಿನಗಳಲ್ಲಿ ಅಷ್ಟೊಂದು ಆಸಕ್ತಿ ಇಲ್ಲ, ಮೊದಮೊದಲು ಗಣಪತಿ ಹಬ್ಬದ ಆಚರಣೆಗೆ ಹದಿನೈದು ದಿನ ಮುಂಚಿತವಾಗಿಯೇ ಎಲ್ಲಾ ಸಿದ್ಧತೆಗಳು ನೆಡೆಯುತ್ತಿದ್ದವು, ಈಗ ಹಬ್ಬದ ಒಂದೆರಡು ದಿನ ಮುಂಚಿತವಾಗಿ ಎಲ್ಲಾ ಸಿದ್ಧತೆಗಳು ಶುರುವಾಗುವುವು, ಎಂಥಾ ವಿಪರ್ಯಾಸ" ಎಂದು ಹೇಳಿದರು. "ನೀವೇನಾದರೂ ಹೇಳಿ, ನಾನು ಭೂಲೋಕಕ್ಕೇ ಹೋಗುವನೇ ಸೈ, ಕೈಲಾಸದಲ್ಲಿದ್ದು ಇದ್ದು ಜೀವನ ಕಪ್ಪು ಬಿಳುಪಾಗಿದೆ, ಸ್ವಲ್ಪದಿನವಾದರೂ ಬಣ್ಣದ ಜಗತ್ತನು ನೋಡಿ ಬರುತ್ತೇನೆ" ಎಂದು ಗಣಪ ಹೇಳಲು, ಪಕ್ಕದಲ್ಲಿದ್ದ ಶಿವಗಣಗಳು "ಗಣಪನಿಗೆ ಜೈ, ಗಣಪನಿಗೆ ಜೈ" ಎಂದು ಜೈಕಾರ ಹಾಕಿದರು. ಹೀಗೆ ಜೈಕಾರ ಹಾಕುವವರ ಮಧ್ಯೆದಲ್ಲೊಬ್ಬ "ಗೋಲ್ಡನ್ ಸ್ಟಾರ್ ಗೆ ಜೈ" ಎಂದನು. ಶಿವನಿಗೂ ಗಾಬರಿಯಾಯಿತು, ಇದ್ಯಾವ ಹೊಸ ಸಂಭೋದನಾಕ್ರಮ, ಇದೇನಿದು ಗೋಲ್ಡನ್ ಸ್ಟಾರ್" ಎಂದು ಶಿವ ತನ್ನ ಗಣಕ್ಕೆ ಕೇಳಿದನು. ಅದರಲ್ಲೊಬ್ಬ ಕೊಂಚ ಹೆದರಿ " ಮನ್ನಿಸಬೇಕು, ಪ್ರಭುಗಳೆ ಕೊನೆಯಬಾರಿ ಭೂಲೋಕಕ್ಕೆ ಹೋದಾಗ, ಗಣೇಶನ ಯಾವುದೋ ಸಿನೆಮಾ ಬಂದಿದೆ ಎಂದು ಜನ ಮಾತನಾಡಿಕೊಳ್ಳುವುದನ್ನು ಕೇಳಿದೆ. ತನಗೇ ಗೊತ್ತಿಲ್ಲದಾಗೆ ನಿಮ್ಮ ಮಗರಾಯ ಯಾವ ಸಿನೆಮಾದಲ್ಲಿ ಅಭಿನಯಿಸಿರುವರೋ ಎಂದು ಅರಿಯಲಷ್ಟೆ ಚಿತ್ರಮಂದಿರಕ್ಕೆ ಹೋದೆ, ನಮ್ಮ ಗಣೇಶ ಅಲ್ಲೆಲ್ಲೂ ಕಾಣಲಿಲ್ಲ. ಆದರೆ, ಆಹಾ ಅದೊಂದು ಅದ್ಭುತ ಲೋಕ, ಮರೆಯಲಾರೆ, ಕೊಟ್ಟ ದುಡ್ಡೀಗಂತೂ ಮೋಸ ಇಲ್ಲ" ಎಂದು ನಾಚಿಕೆ ಬಿಟ್ಟು ಹೇಳಿದ. ಶಿವನಿಗೆ ಕೋಪ ನೆತ್ತಿಗೇರಿತು, " ಇದೇನನ್ನು ಹೇಳುತ್ತಿರುವೆ ಶತಾಯುಷಿ ಸಿದ್ಧತುಂಗಾ ಮಠದ ಗುರುಗಳ ಆರೋಗ್ಯ ವಿಚಾರಿಸಿಕೊಂಡು ಬಾ ಎಂದು ನಿನ್ನನ್ನು ಭೂಲೋಕಕ್ಕೆ ಅಟ್ಟಿದರೆ, ಸಿನೇಮಾ ನೋಡಿಕೊಂಡು ಬಂದಿದ್ದೇಯಾ, ಛಿ!, ನಾಚಿಕೆಯಾಗಬೇಕು" ಎಂದು ಶಿವ ಬೈದುದನ್ನು ಕೇಳಿ ಪಾರ್ವತಿ ತನ್ನ ಸೌಟಿನ ಕೈಯ್ಯನ್ನು ಸೊಂಟದ ಮೇಲಿರಿಸಿ "ಪಾಪ ಆತನನ್ನು ಯಾಕೆ ಬಯ್ಯುವಿರಿ, ಯಥಾ ರಾಜ ತಥಾ ಪ್ರಜಾ, ಬೇಡರ ಕಣ್ಣಪ್ಪ ಸಿನೇಮಾ ಬಂದಾಗ ನನ್ನನ್ನೂ ಬಿಟ್ಟು ನಂದಿಯನ್ನು ಕರೆದುಕೊಂಡು ಹೋಗಿದ್ದಿರಲ್ಲಾ!!, ಆ ಸ್ವಭಾವವೇ ನಿಮ್ಮ ಗಣಗಳಿಗೂ ಬಂದಿದೆ, ಅದರಲ್ಲೇನು ವಿಶೇಷ" ಎಂದು ಮುಖ ತಿರುವಿದಳು. ನಂದಿ ಅದನ್ನು ಕೇಳಿ, ಏನೋ ನೆನಪಿಸಿಕೊಂಡವನಂತೆ ಮಾಡಿ ಬೆಚ್ಚಿ ಬಿದ್ದ. ಶಿವನೂ ತಡವರಿಸುತ್ತಾ, "ಆ ವಿಷಯದ ಬಗ್ಗೆ ನಾವೀಗಾಗಲೇ ಅನೇಖ ಬಾರಿ ಮಾತನಾಡಿದ್ದೇವೆ, ಇನ್ನೂ ಏಕೆ ಅದನ್ನು ಮುಂದುವರಿಸುವೇ ಪಾರ್ವತಿ!, ಆ ನಟಸಾರ್ವಭೌಮ ರಾಜಕುಮಾರನೆಲ್ಲಿ, ಇತ್ತೀಚಿಗೆ ಹುಟ್ಟಿಕೊಂಡ ಈ ಗೋಲ್ಡನ್ ಸ್ಟಾರ್ ಗಣೇಶನೆಲ್ಲಿ?, ಕೈಲಾಸದ ಮೇರು ಪರ್ವತಕ್ಕೂ, ಚಾಮುಂಡಿ ಬೆಟ್ಟಕ್ಕೂ ಹೋಲಿಕೆ ಮಾಡಲಾದೀತೆ" ಎಂದು ಹೇಳಿದ. "ಹಾಞ್.. ಏನೆಂದಿರಿ, ಚಾಮುಂಡಿ ಬೆಟ್ಟದ ಹಿರಿಮೆಯನ್ನು ಹೀಯಾಳಿಸಿ ನುಡಿಯುತ್ತಿರುವಿರೇನು, ನನಗಿರುವಷ್ಟು ಭಕ್ತರು ನಿಮಗಿದ್ದಾರೆಯೋ?, ಚಾಮುಂಡಿ ಬೆಟ್ಟಕ್ಕಿಂತ ನಂಜನಗೂಡಿಗೆ ಹೋಗುವರ ಸಂಖ್ಯೆ ಅಧಿಕವೋ?.. ಈ ರೀತಿ ಸುಳ್ಳಾಡಲು ನಿಮಗೆಷ್ಟು ಧೈರ್ಯ" ಎಂದು ಪಾರ್ವತಿ ಕುಪಿತ ಗೊಂಡಳು. "ಅಲ್ಲಾ ಮಾರಾಯ್ತಿ, ಗಾತ್ರದಲ್ಲಿ ಮೇರುವಿಗೂ ನಿನ್ನ ಬೆಟ್ಟಕ್ಕೂ ಹೋಲಿಕೆ ಮಾಡಲಾಗುವುದಿಲ್ಲವೆಂದಷ್ಟೇ ಹೇಳಿದೆ, ನಿನ್ನ ಹಿರಿಮೆಯ ಬಗ್ಗೆ ಮಾತನಾಡೀದೆನೆ, ಛೆ!, ಬೆಳಗ್ಗೆ ಬೆಳಗ್ಗೆಯೇ ಅಮ್ಮ ಮಗನಿಂದ ನನ್ನ ಮನೋವೃತ್ತಿಯೇ ಹಾಳಾಯ್ತು" ಎಂದು ಶಿವ ತಲೆಕೆಡಿಸಿಕೊಂಡ. ಆಮೇಲೆ ನಾರದರ ಕಡೆ ತಿರುಗಿ "ಮಾನವರಂತೆ ದೇವರಿಗೂ ವಿಚ್ಚೇದನವಿದ್ದಿದ್ದರೇ ಚೆನ್ನಾಗಿತ್ತಲ್ಲವೇ" ಎಂದು ಮೆಲ್ಲನೆ ಕೇಳಿದ. "ನನಗೆ ಸಂಸಾರ ಸುಖದ ಕಲ್ಪನೆಯಿಲ್ಲದ ಕಾರಣ ನಿನ್ನ ಮಾತಿಗೆ ನಾನು ಉತ್ತರಿಸಿ ದೇವಿಯ ಕೋಪಕ್ಕೆ ಗುರಿಯಾಗಲಾರೆ, ಕ್ಷಮಿಸ ಬೇಕು ಶಿವ" ಎಂದು ಹೇಳಿ ನಾರದರು "ನಾರಾಯಣ!ನಾರಾಯಣ" ಎಂದು ಹೇಳಿ ಶಿವನ ಪ್ರಶ್ನೆಯಿಂದ ನುಣುಚಿಕೊಂಡರು. ಆದರೆ ಪಾರ್ವತಿಗೆ ಕೋಪ ಇನ್ನೂ ಇಳಿದಿರಲಿಲ್ಲ. "ಚಾಮುಂಡಿ ಬೆಟ್ಟದ ಬದಲು ತಿರುಪತಿಯ ಬೆಟ್ಟವೆಂದೂ ಹೇಳಬಹುದಿತ್ತಲ್ಲ. ಅದೇಕೆ ಚಾಮುಂಡಿ ಬೆಟ್ಟವನ್ನೇ ಕೈಲಾಸಪರ್ವತದೊಂದಿಗೆ ತುಲನೆ ಮಾಡಿದಿರಿ. ನಿಮಗೆ ನಿಮ್ಮ ನೆಂಟ ವಿಷ್ಣುವಿನಲ್ಲಿರುವಷ್ಟು ಗೌರವವೂ ನಿಮ್ಮ ಮಡದಿಯ ಮೇಲಿಲ್ಲವಲ್ಲ, ಛೆ!" ಎಂದು ಬೇಸರಗೊಂಡಳು. "ನೋಡಮ್ಮ ಪಾರ್ವತಿ, ಭಾರತದಲ್ಲಿ ಗಂಡನ ಆಸ್ತಿಗೆ ಹೆಂಡತಿ ಸಮಪಾಲುದಾರಳು, ಹಾಗಾಗೀ ಕೈಲಾಸವೂ ನಿನ್ನದೇ ಚಾಮುಂಡಿ ಬೆಟ್ಟವೂ ನಿನ್ನದೇ, ವೃಥಾ ಜಗಳವೇಕೆ?" ಎಂದು ನಾರದರೂ ಪಾರ್ವತಿಯನ್ನು ಸಮಾಧಾನಗೊಳಿಸಿದರು. ಕತ್ತಿಗೆ ಹಾವು ಸುತ್ತಿಕೊಳ್ಳುವ ಗಂಡ, ಸೊಂಟಕ್ಕೆ ಹಾವು ಸುತ್ತಿಕೊಳ್ಳುವ ಮಗ ಇವರಿಂದ ನನ್ನ ಜೀವನವೇ ನರಕವಾಯಿತು, ದಿನಾ ಬೆಳಗ್ಗೆ ಇವರದ್ದು ಇದೇ ಗೋಳು" ಎಂದು ಪಾರ್ವತಿ ನಾರದರಿಗೆ ಹೇಳಿದಳು. "ನಾನಿದನ್ನು ಬೇಕೆಂದು ಕತ್ತಿಗೆ ಸುತ್ತಿಕೊಂಡೆನೆ, ಜನರೇ ನನ್ನನ್ನು ಹಾವು ಸುತ್ತಿಕೊಂಡವನಂತೆ ಭಾವಿಸಿದರು, ಭಕ್ತರಿಗಾಗಿಯೇ ಭಗವಂತನ ಸಾಕಾರ ರೂಪಲ್ಲವೇ?, ಅದಕ್ಕಾಗಿಯೇ ನನ್ನ ಕೊರಳಿನಲ್ಲಿ ಹಾವಿದೆ, ಒಂದುವೇಳೆ ಜನ ನನ್ನ ಕೊರಳಿನಲ್ಲಿ ಹಾವನ್ನು ಬಿಟ್ಟು ಚಿನ್ನದ ಸರವನ್ನು ಭಾವಿಸಿಕೊಂಡರೆ ಅದನ್ನೇ ಆ ಕ್ಷಣ ಧರಿಸಿಕೊಂಡಿರುತ್ತೇನೆ. ಈ ವಿಷಯ ನಿನಗೆ ತಿಳಿಯದೋ ಪಾರ್ವತಿ?, ಹಿಮದಿಂದ ಪ್ರತಿಫಲಿತವಾಗಿ ಜಗತ್ತನ್ನೇ ಆಕರ್ಷಿಸುವ ನಿನ್ನ ಗೌರ ವರ್ಣಕ್ಕೂ ಮಸಿ ಬಳಿದು, ನಿನ್ನನ್ನು ಜನ ಕಾಳಿಯೆಂದು ಕರೆಯಲಿಲ್ಲವೇ, ನೀನು ಕಪ್ಪಗಿರುವೆ ಎಂದು ನಾನೆಂದಾದರೂ ಮೂದಲಿಸಿದ್ದೇನೆಯೆ" ಎಂದು ಶಿವ ಪಾರ್ವತಿಯನ್ನು ಸಮಾಧಾನಗೊಳಿಸಿದ, ಹಿಂದೆ ನಿಂತಿದ್ದ ಶಿವಗಣಗಳಲ್ಲೊಬ್ಬ "ಹೌದು ಮಹಾದೇವ, ಈ ವಿಷಯವಾಗಿ ಕನ್ನಡದ ಕಣ್ಮಣಿ ಕುವೆಂಪುರವರು ತಮ್ಮ 'ಜಲಗಾರ' ಎಂಬ ನಾಟಕದಲ್ಲಿ ಹೇಳಿರುವರು" ಎಂದು ನುಡಿದನು. ಗಣಗಳಲ್ಲಿ ಮತ್ತೊಬ್ಬನು " 'ಜಲಗಾರ' ಎಂಬ ನಾಟಕವೇ!!, ಇದರ ಬಗ್ಗೆ ನಾವು ಕೇಳಿಯೇ ಇಲ್ಲವಲ್ಲ, ಇದರ ಕಥೆಯನ್ನು ನಮಗೆ ತಿಳಿಸುವನಂತವನಾಗು" ಎಂದು ತನ್ನ ಗಣ ಮಿತ್ರನಿಗೆ ಭಿನ್ನವಿಸಿಕೊಂಡನು, ಶಿವನಿಗೆ ಸಿಟ್ಟು ಬಂತು "ಎಲವೋ!, 'ಜಲಗಾರ' ನಾಟಕದ ಬಗ್ಗೆ ಅರಿವಿಲ್ಲವೇ? ಕಳೆದ ತಿಂಗಳು ಅಮಿಶನ 'ಮೆಲೂಹ' ಪುಸ್ತಕವನ್ನು ಓದಿಕೊಂಡು ಬಂದು ನನ್ನ ಇತಿಹಾಸದ ಬಗ್ಗೆ ನನಗೇ ತಲೆಕೆಡಿಸಿದವನು ನೀನು!. ಅಂಥದ್ದರಲ್ಲಿ 'ಜಲಗಾರ' ನಾಟಕದ ಬಗ್ಗೆ ಅರಿವಿಲ್ಲವೇ" ಎಂದು ಶಿವ ಹೇಳಿದನು. ನಾರದರಿಗೂ 'ಜಲಗಾರ'ನ ವಿಷಯಗೊತ್ತಿರಲಿಲ್ಲವಾದ್ದರಿಂದ ಉಪಾಯವಾಗಿ "ಹೋಗಲಿ ಬಿಡು ಶಿವ, ಏನೋ ಗೊತ್ತಿಲ್ಲವಂತೆ. ನೀನು ಕಥೆ ಹೇಳುವಂತವನಾಗು" ಎಂದು ಶಿವಗಣದಲೊಬ್ಬನಿಗೆ ಹೇಳಿದರು. ಅಂತೆಯೆ ಅಪ್ಪಣೆ ಪಡೆದು ಗಣನು ಕಥೆ ಆರಂಭಿಸಿದನು "ಜಲಗಾರ ಎಂದರೆ ಜಾಡಮಾಲಿಯೆಂದು. ಅವನ ನಿತ್ಯದ ಕೆಲದ ಬೀದಿ ಗುಡಿಸುವುದು, ಅದೊಂದು ದಿನ ಶಿವನ ಜಾತ್ರೆಯ ಸಲುವಾಗಿ ಬೇರೆಬೇರೆ ಊರಿನಿಂದ ಜನರೆಲ್ಲರೂ ಬಂದು ಸೇರುವರು. ಎಲ್ಲರೂ ಶಿವನ ಬಗ್ಗೆ ಮಾತನಾಡುವರು, ಪ್ರತಿಯೊಬ್ಬರೂ ಶಿವನ ರೂಪನ್ನು ಹೊಗಳಿ ಆಡುವರು, ಆದರೆ ಜಲಗಾರನಿಗೆ ಇದಾವುದರ ಅರ್ಥವೂ ಆಗುವುದಿಲ್ಲ. ಆತ ಸುಮ್ಮನೆ ತನ್ನ ಕಸಗುಡಿಸುವ ಕಾಯಕದಲ್ಲಿ ನಿರತವಾಗುವನು. ಕೊನೆಗೆ ಶಿವ ಆತನ ನಿಷ್ಕಾಮ ಕರ್ಮಕ್ಕೆ ಬೆರಗಾಗಿ ಬಂದು ಆತನಿಗೆ ದರ್ಶನ ನೀಡುವನು, ಆದರೆ ಶಿವ ಅತ್ಯಂತ ಸ್ಫುರದ್ರೂಪಿಯಾಗಿದ್ದು ಆತನ ಬಳಿಯಲ್ಲಿ ಹಾವಾಗಲೀ, ಬೂದಿಬಳಿದ ಶರೀರವಾಗಲೀ ಇರಲಿಲ್ಲ. ಹಾಗಾಗಿ ಜಲಗಾರನಿಗೆ ಆತನನ್ನು ಗುರುತಿಸಲು ಕಷ್ಟವಾಗುತ್ತದೆ. ಶಿವ ತಾನು ಶಿವನೆಂದು ಹೇಳಿದಾಗ ಜಲಗಾರನು "ಶಿವ ನಿನ್ನ ಹಾವೆಲ್ಲಿ, ಬೂದಿಬಳಿದ ನಿನ್ನ ಶರೀರವೆಲ್ಲಿ ಎಂದು ಕೇಳುತ್ತಾನೆ" ಅದಕ್ಕೆ ಶಿವ, "ಕ್ರೂರಜನರು ನನ್ನ ಕುತ್ತಿಗೆಗೆ ಹಾವನ್ನು ಸುತ್ತಿದರು, ಅರಿಯದ ಜನರು ನನ್ನ ಮುಖಕ್ಕೆ ಬೂದಿಯನ್ನು ಬಳಿದರು. ಆದರೆ ಜಲಗಾರ ನೀನೊಬ್ಬ ಶುದ್ಧಭಕ್ತ ನನ್ನನ್ನು ನೀನು ಈ ರೀತಿಯಾಗಿಯೇ ಧ್ಯಾನಿಸಿದೆ ಆಕಾರಣದಿಂದ ನಾನು ನಿನಗೆ ಈ ರೂಪಿನಿಂದ ಕಾಣಿಸಿಕೊಂಡೆನು" ಎಂದು ಹೇಳುತ್ತಾನೆ. ಜಲಗಾರನಿಗೆ ಶಿವನೂ ಜಾಡಮಾಲಿಯಾಗಿ ತೋರುತ್ತಾನೆ, ಅವನ ನಿತ್ಯದ ಕರ್ಮವು ಜಗತ್ತನ್ನು ಶುದ್ಧಗೊಳಿಸುವಂತೆ ಕಂಡು ಬರುತ್ತದೆ.." ಎಂದು ತನ್ನ ಕಥೆಯನ್ನು ಸಂಕ್ಷಿಪ್ತವಾಗಿ ಮುಗಿಸುತ್ತಾನೆ. ಎಲ್ಲರೂ ಶಿವನ ಜೈಕಾರ ಮಾಡುತ್ತಾರೆ. ಅಷ್ಟರಲ್ಲೇ ಗಣಪತಿಯ ವಾಹನವಾದ ಇಲಿಯನ್ನು ಓಡಿಸಿಕೊಂಡು ಗಣಪತಿಯ ಸೋಂಟದ ಹಾವು ಸರಸರನೆ ಬಂದಿತು. ಗಣಪ ಸಿಟ್ಟಿನಲ್ಲಿ ಅವೆರಡನ್ನೂ ಸುಮ್ಮನಿರ ಹೇಳಿ, "ನಿಮ್ಮನ್ನು ನಾನು ಭೂಲೋಕಕ್ಕೆ ಕರೆದುಕೊಂಡು ಹೋಗಲಾರೆ" ಎಂದು ಹೇಳಿದನು. ಅದಕ್ಕೆ ಬದಲಾಗಿ ಶಿವನಿಗೆ ನಂದಿಯನ್ನು ತನ್ನೊಡನೆ ಕಳಿಸಬೇಕೆಂದು ಭಿನ್ನವಿಸಿಕೊಂಡನು. ನಂದಿ ಅದಕ್ಕೆ ತನ್ನ ಸಮ್ಮತವಿಲ್ಲವೆಂದು ಕೋಡೆರಡನ್ನು ಅತ್ತ ಇತ್ತ ಅಲ್ಲಾಡಿಸಿತು. ನಾರದರು "ಏಕೆ ನಂದಿ ಏನಾಯಿತು, ಭೂಲೋಕ ನಿನಗೆ ಪ್ರಿಯವಲ್ಲವೇ" ಎಂದು ಕೇಳಿದರು. ಅದಕ್ಕೆ ನಂದಿ, "ಇಲ್ಲಿಗಿಂತಲೂ ಹುಲ್ಲು ಜಾಸ್ತಿ ಬೆಳೆಯುತ್ತದೆ ಎಂಬ ಕಾರಣಕ್ಕೆ ಪ್ರಿಯವೇನೋ ಹೌದು ಸ್ವಾಮಿ, ಆದರೆ ಕಳೆದ ಬಾರಿ ಶಿವನೊಂದಿಗೆ ಭೂಲೋಕಕ್ಕೆ ಹೋದಂದು ಪಟ್ಟ ಪಾಡು ಅಷ್ಟಿಷ್ಟಲ್ಲ." ಎಂದು ಹೇಳಿ ತನ್ನ ಕಥೆಯನ್ನು ಮುಂದುವರಿಸಿತು. "ಬೇಡರ ಕಣ್ಣಪ್ಪ ಸಿನೆಮಾಗೆ ಶಿವ ನನ್ನನು ಭೂಲೋಕಕ್ಕೆ ಕರೆದುಕೊಂಡು ಹೋಗಿದ್ದ ಸಮಯ!, ಕೊಡಿದ್ದ ಕಾರಣ ಸಿನೇಮಾ ಮಂದಿರದಲ್ಲಿ ನನ್ನನು ಒಳಗೆ ಬಿಡಲಿಲ್ಲ. ಈ ಶಿವನೋ ನನ್ನನ್ನು ಲೈಟ್ ಕಂಬವೊಂದಕ್ಕೆ ಕಟ್ಟಿ ಹಾಕಿ ಸಿನೆಮಾ ನೋಡಲು ಒಳಗೆ ಹೋದ.. ಬಿಟ್ಟಿ ಸಿಕ್ಕ ನನ್ನನು ಜನ ಸುಮ್ಮನೆ ಬಿಡುತ್ತಾರೆಯೇ?, ಹಸುವಾಗಿದ್ದರೆ ಅಲ್ಲಿಯೇ ಹಾಲುಕರೆದುಕೊಂಡು ಬಿಡುತ್ತಿದ್ದರೇನೋ, ದುರದೃಷ್ಟವಷಾತ್ ನಾನು ಹೋರಿಯಾದ ಕಾರಣ ಕಸಾಯಿ ಖಾನೆಯವರೆಗೂ ನನ್ನನ್ನು ಕರೆದೊಯ್ದಿದ್ದರು. ಹೇಗೋ ಶಿವನ ಆಶಿರ್ವಾದದಿಂದ ನಿಮ್ಮಮುಂದೆ ಇವತ್ತು ನಿಂತಿದ್ದೇನೆ" ಎಂದು ತನ್ನ ಪೂರ್ವ ವೃತ್ತಾಂತವನ್ನು ನೆನಪಿಸಿಕೊಂಡಿತು. ಗಣಪತಿಗೆ ತನ್ನ ಇಲಿಯನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. ಇನ್ನೂ ಸ್ವಲ್ಪಹೊತ್ತು ಇಲ್ಲಿ ನಿಂತುಕೊಂಡರೆ ನನ್ನ ಭೂಲೋಕ ಯಾತ್ರೆಗೆ ಇವರೆಲ್ಲರೂ ಅಡ್ಡಿಪಡಿಸುವರೆಂದು ತನ್ನ ಮನಸ್ಸಿನಲ್ಲಿಯೇ ಅಂದುಕೊಂಡು ತನ್ನ ಸೊಂಟಕ್ಕೆ ಕಟ್ಟಿಕೊಳ್ಳುವ ಹಾವಿಗೂ ತನ್ನ ವಾಹನ ಇಲಿಗೂ ರಾಜಿ ಮಾಡಿಸಿ ಭೂಲೋಕಕ್ಕೆ ಕರೆದುಕೊಂಡು ಹೊರಟೇ ಬಿಟ್ಟ. ನಾರದರೂ "ನಾರಾಯಣ, ನಾರಾಯಣ" ಎಂದುಕೊಳ್ಳುತ್ತಾ ಮುಂದಿನ ಕಲಹವನ್ನು ಹುಡುಕಿಕೊಂಡು ಹೊರಟರು..
Comments
ಉ: ಕಿರುಗತೆ : ಕೈಲಾಸ ಪ್ರಸಂಗ
ವಂದನೆಗಳು. ತುಂಬ ಮುದಪೂರಿತ ವಿಡಂಬನಾತ್ಮಕ ಕಥಾನಕ. ಎಲ್ಲಾ ಪರಿಚಿತ ಪಾತ್ರಗಳೇ ಆದರೂ ಪ್ರಸಂಗಗಳು ನಗೆ ತರಿಸಿದವು. ಮನಕ್ಕೆ ಮುದನೀಡಿದವು. ಧನ್ಯವಾದಗಳು.
ಉ: ಕಿರುಗತೆ : ಕೈಲಾಸ ಪ್ರಸಂಗ
:))