ಯಶೋಧೆ ರಾಧೆಯರ ಜತೆ.......

ಯಶೋಧೆ ರಾಧೆಯರ ಜತೆ.......

ಜನ್ಮಾಷ್ಟಮಿಯ ಅಗಮನದೊಂದಿಗೆ ಕೃಷ್ಣನ ಬಾಲ ಲೀಲೆಯ ಜತೆ ಜತೆಯಲ್ಲೆ ನೆನಪಾಗುವುದು ಯಶೋಧೆಯ ಅಗಾಧ ಪುತ್ರ ವಾತ್ಸಲ್ಯ, ಪ್ರೇಮ. ತನ್ನ ಬಾಲ್ಯದ ತುಂಟತನಗಳೆಲ್ಲ ಯಶೋಧೆಯ  ಬಳಿಗೆ ದೂರುಗಳಾಗಿ ಹೋಗುವುದೆಂದು ಗೊತ್ತಿದ್ದೂ ಕೃಷ್ಣ ತನ್ನ ತುಂಟಾಟಗಳನ್ನು ಬಿಡದೆ ಕಾಡಿಸುತ್ತ ಆಟವಾಡಿಸುವುದು ಬಹುಶಃ ಅವಳ ಮೇಲಿರುವ ಅಪರಿಮಿತ ವಿಶ್ವಾಸದಿಂದಲೆ ಇರಬೇಕು - ಏನಾದರೂ ನೆಪ ಹುಡುಕಿ ತನ್ನನ್ನು ಕಾಪಾಡುತ್ತಾಳೆಂದು. ಬ್ರಹ್ಮಾಂಡವನ್ನೆ ಬಾಯಲ್ಲಿ ತೋರಿದ ಬ್ರಹ್ಮದ ಮೇಲೆ ಯಾರಾದರೂ ಆರೋಪ ಹೊರಿಸಲುಂಟೆ? ದೂರು ಹೇಳಲು ಬರುತ್ತಿರುವರೆಂದು ಗೊತ್ತಾಗುತ್ತಿದ್ದಂತೆಯೆ ಅವರ ಕಣ್ಣಿಗೆ ಬೀಳದಂತೆ ಅವನನ್ನು ಅಡಗಿಸಿಬಿಟ್ಟು, ಬಂದವರನ್ನೆ ದಬಾಯಿಸಿ ವಾಪಸ್ಸು ಕಳಿಸಿಬಿಡುವವಳು. ಭೂಭಾರದಿಂದ ಮುಕ್ತಿಯನ್ನು ದೊರಕಿಸಲು ಬಂದವನ ತಾಯಾದುದೆ ತನ್ನ ಭಾಗ್ಯವೆಂದುಕೊಂಡ ತಾಯಿ ಜೀವವದು. ಬ್ರಹ್ಮವನ್ನಪ್ಪಿ ಬ್ರಹ್ಮಾಂಡವೆ ತಾನಾದವಳ ಹಿಗ್ಗು ಅವಳದು. ಹೆತ್ತ ದೇವಕಿಯಲ್ಲದೆ, ಸಾಕಿದ ಯಶೋಧೆಯ ಜತೆಗೆ ದೂರು ಹೇಳಬಂದ ನೂರಾರು ತಾಯಿಯರು ಆ ಗೊಲ್ಲರ ಗೊಲ್ಲನಿಗೆ. ಅಂತೆಯೆ ಮತ್ತೊಬ್ಬ ರಾಧೆ - ಅವಳೊ ಅಸೂಯೆಯೆ ಇಲ್ಲದ ಅನಸೂಯೆ. ಎಷ್ಟೆ ಗೋಪಿಯರ ಜತೆಗಿದ್ದರೂ ತಕರಾರಿಲ್ಲದ ಅವ್ಯಾಜ ಪ್ರೇಮ. ಇವರೆಲ್ಲರನ್ನು ತನ್ನ ಮಧುರ ಮುರುಳಿ ಗಾನದಿಂದ ರಮಿಸಿ, ತಣಿಸಿ ತನು ಮನವನೆಲ್ಲ ಧನ್ಯವಾಗಿಸುವ ಮನ ಮೋಹನ - ಶ್ರೀ ಕೃಷ್ಣ. ಇದೆಲ್ಲ ಭಾವಗಳ ಪದ್ಯರೂಪ ಈ ಕೆಳಗಿನ ಕವನ. 

ಯಶೋಧೆ ರಾಧೆಯರ ಜತೆ.......
____________________________

ತೋಳ ತೆರೆದು ಕಣ್ಣಲೆ ಕರೆದು ಕೃಷ್ಣನ 
ಲಾಲಿಸುತಲೆ ಅಪ್ಪಿದಳು ಚಿತ್ತ ಚೋರನ
ಅಪ್ಪಲಾದೀತೆ ಬ್ರಹ್ಮಾಂಡವೆ ಶಿಶುವಲ್ಲಿ
ಅಪ್ಪಿಕೊಂಡಂತೆ ಬ್ರಹ್ಮವೆ ಅವಳ ತೋಳಲ್ಲಿ ||

ದೂರುಗಳನ್ಹೊತ್ತು ಗೋಪಿಯರು ಬರುವ ಹೊತ್ತು
ಧಾರಾಕಾರವಾಗುವ ಮೊದಲೆ ಅಪ್ಪಿಬಿಡು ಅವಿತು
ಸರಿ ತಪ್ಪು ದಂಡನೆಗಳೆಲ್ಲಾಮೇಲೆ ಅಡಗಿಕೊ ಇಲ್ಲೆ
ನನ್ನೆದೆಯ ಬೆಚ್ಚನೆ ಪ್ರೀತಿ ಸೆರಗಿನ ಮರೆಯಲೆ ಲಲ್ಲೆ ||

ನೀನದ್ಭುತವಂತೆ ನರ ಜನ್ಮದ ಪಾಪಗಳಾಗಿಸೆ ಮುಕ್ತಿ
ನೀಡಲೆ ಜನಿಸಿದೆ ಮಾಡೆ ಭೂಭಾರಕೀಯಲೆ ಸದ್ಗತಿ
ನೀ ದೇವಕಿ ಹಚ್ಚಿದ ಪ್ರಣತಿ, ನಾನುರಿಸಿದರು ಜ್ಯೋತಿ
ನನದೆಂಥ ಭಾಗ್ಯ ಜಗದೆ ಹೆಸರಾಗಿ ಯಶೋಧೆ ಪ್ರೀತಿ ||

ಅಪ್ಪಿದಳು ತಪ್ಪಿಹೋಗದಂತೆ ಜಗದೋದ್ದಾರಕ ಲೀಲೆ
ಅಪ್ಪಿಕೊಂಡವ ಆಪ್ಪಿಸಿಕೊಂಡವ ತಾನಾಗಿಹ ತನ್ನಲ್ಲೆ
ಯಾರನಪ್ಪಿ ಯಾರಿಗೆ ಏನನಿತ್ತನೊ ಗೋವಿಂದ ಚಿತ್ತ
ಗೋವ್ಗಳ ನಡುವೆ ಕೊರಳೂದುತ್ತ ಅಮಾಯಕ ನಿಂತ ||

ತಾಯಿಗಳು ನೂರಾರು ಯಶೋಧೆ ದೇವಕಿಯರು
ಗೋಪಿಯರು ಹಲವಾರು ರಾಧೆಗಿಲ್ಲ ತಕರಾರು
ನವಿಲ ಗರಿಯ ಬಣ್ಣಕುಡಿಸಿ ಎಲ್ಲರ ಗೆದ್ದ ಗಾನ
ತನುಮನ ಧ್ಯಾನ ಚಿಲುಮೆ ತಾನಾದ ಮನಮೋಹನ ||

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------