ಧಾರಾವಾಹಿ
ಧಾರಾವಾಹಿ
ವಾಹಿನಿಯಲಿ ಹೊಸ ಧಾರಾವಾಹಿ ಆರಂಭಿಸಿದಾಗ
ವಾಹಿನಿ ನೋಡುಗರಿಗೆ ಕುತೂಹಲ, ಹೊಸ ಆಶಯ
ನೂತನ ಕಲ್ಪನೆಯ ಹೊಸತನ, ಭಿನ್ನತೆಯ ಸೊಗಸು
ಹೊಸ ಮುಖಗಳ ತಾಜಾತನ ತರುವುದು ಆಹ್ಲಾದತೆ
ದಿನಗಳೆದಂತೆ ತಾಜಾತನವು ಅಲ್ಲಿಯೇ ನಿಂತ
ನೀರಿನಂತಾಗಿ ನಿಧಾನಕೆ ಹುಳು ಉಪ್ಪಟೆಗಳ ತಾಣ
ನಿಂತಲ್ಲೇ ನಿಲ್ಲುವ ಧಾರಾವಾಹಿಯು ನಾರಲು ಶುರು
ಕ್ರಮೇಣವೆ ತಾಳ್ಮೆಯ ಕದ ತಟ್ಟುತಿದೆ ಹಳೆಯ ಚಾಳಿ
ಸರಳ ಸಮಸ್ಯೆಯನು ಪರಿಹರಿಸದ ಕಥೆಗಾರನಿಗೆ
ಧಾರಾವಾಹಿ ಅಂತ್ಯದ ಭಯ ಮೂಡಿ, ತನ್ನ ಸೃಜನತೆಗೆ
ತಾನೇ ಬೇಲಿ ಕಟ್ಟುತ, ಪ್ರಭುದ್ದವಾಗಬೇಕಾದ ಕಥೆಗೆ
ಮೊದ್ದುತನ ಪೇರಿಸಿ ಅದನ್ನೇ ನೀರಸಗೊಳಿಸುತಿಹನು
ಇಷ್ಟೆಲ್ಲಾ ನಡೆಯುತಿಹಲು ಮನೆಯಲ್ಲಿನ ಮಾನಿನಿಯರ
ತಾಳ್ಮೆ, ಸಹನೆಯ ಕಟ್ಟೆಯ ಒಡೆಯದೆ, ಅದೇ ನಿಂತ
ಕಥೆಯ ಒಳ್ಳೆಯ ಭವಿಷ್ಯದ ಸದಾಶಯದಿಂದ ವೀಕ್ಷಿಸಿ
ತಮ್ಮ ಸಹನಾಮಯತೆಯ ಪ್ರದರ್ಶನ ನೀಡುತಿಹರು
ಏಕಮುಖ ಮಾಧ್ಯಮದಿ ಪ್ರೇಕ್ಷಕ ಏನು ಮಾಡಿಯಾನು
ಎಂದರಿತು ನಿರ್ದೇಶಕ ಭೀಗಿದಂತೆ, ಜನರ ತಾಳ್ಮೆಯ
ಸಮಯವ ಹಾಳುಗೆಡಹುತ, ಸರಣಿ ನಿರಾಸೆಗಳ ಜನಕೆ
ನೀಡುತ ತಾನು ಮಾತ್ರ ಕಾಂಚಣವ ಪೇರಿಸುತಿಹನು
- ತೇಜಸ್ವಿ .ಎ.ಸಿ