ನಿನ್ನದೇ ನೆನಪಲ್ಲಿ ನಾನೆಂದೆ !
ನಿನ್ನದೇ ನೆನಪಲ್ಲಿ ನಾನೆಂದೆ, ಎಡಬಿಡದೆ ಸುರಿವ ಈ ಮಳೆಯಲ್ಲಿ
ಅಂದು ಮಳೆ ನೀರಿನ ಕಾಲುವೆಯ ಬಳಿ
ಕಣ್ಣೀರ ಕಾಲುವೆ ಹರಿಸಿ ನೀನೆಂದೆ
ತಂಪನೆರೆವ ಈ ಮಳೆ, ಜಾತಿಯ ಸುಡು ಬಿಸಿ ತಣಿಸದು
ದೇಹದ ಬಿಸಿ ಆರಿ, ದೇಹಕೆ ಬಿಸಿ ತಾಕಿದ ಮೇಲೂ ನೀಗದು
ನಾ ಪರಿಸ್ಥಿತಿಯ ಕೈಸೆರೆ, ಇದೇ ನಮ್ಮ ಭೇಟಿಯ ಕೊನೆ ಅಂಕ
ನಮ್ಮ ಭೇಟಿಯೋ ಆಕಸ್ಮಿಕ, ಕಳೆದ ನೆನಪುಗಳು ಆಮರಣಾಂತಕ
ರೂಪ, ವಿದ್ಯೆ, ಗುಣ ಮೇಳೈಸಿರೋ ನೀನೊಂದು ಬೊಂಬೆ
ಹುಡುಗಿಯರು ಬೀಳುವರು ಖರೆ ನಿನ್ನ ಹಿಂದೆ-ಮುಂದೆ
ನಿನ್ನ ಸುಖಕ್ಕಾಗಿ ನಾ ನಿನ್ನ ಮನೆಯಂಗಳದಿ ಹೆಜ್ಜೆಯ ಊರಲಾರೆ
ಎನ್ನೆದೆಯಲಿ ನೀ ಊರಿದ ಹೆಜ್ಜೆ ಅಳಿಸಲಾರೆ, ನಾನೀ ಊರಲ್ಲಿರಲಾರೆ
ಹಾ? ನಮ್ಮಿಬ್ಬರ ಪ್ರೇಮಪರ್ವದಲ್ಲಿನ ಮಾತೇ ಇದು?
ಇಲ್ಲ, ಜಾತಿ ಮತವೆಂಬ ಪರ್ವತಗಳ ಮಾರ್ದನಿಯದು
ಎನ್ನ ಸುಖ ಸಂತೋಷ ಬಯಸಿ ನೀ ಮರೆಯಾದೆ
ಆದ್ರೆ ನಿನ್ನದೇ ನೆನಪಿನ ಬಲೆಯಲಿ ನಾ ಬಂದಿಯಾದೆ
ನನ್ನನ್ನೇ ಅವಲಂಬಿಸಿದ ಸೋದರಿಯರನ್ನು ನಾ ಕಳಿಸಿಕೊಟ್ಟು
ಒಂಟಿಯಾಗಿ ಇರುವಲ್ಲೇ ಇದ್ದುಬಿಟ್ಟೆ ಆಲದಂತೆ ಬಿಳಲು ಬಿಟ್ಟು
ಅಂದಿನಿಂದ ಇಂದಿನವರೆಗೂ ಮೀಯುವುದೇ ಆಯ್ತಿಲ್ಲಿ
ಮಳೆಯಲಿ, ನೆನಪಲಿ, ಬೆವರಲಿ, ಬವಣೆಯಲಿ ಈ ಭವದಲಿ
ಅಂದು ನೀ ನುಡಿದಿದ್ದೊಂದು ಭವಿಷ್ಯ ನಿಜವಾಗಿದೆ ಇಂದು
ಇಹುದು ಹುಡುಗಿಯರ ದಂಡೋ ದಂಡು ನನ್ ಹಿಂದು-ಮುಂದು
ಬಲಿತ ಮನಗಳ ಜೊತೆಗಿನ ಅಂಟು-ನಂಟು ಬಂಧನಗಳ ದೂರವಿಕ್ಕಿ
ಎಳೆಯ ಮನದ ಅಂಗಳದಿ ಆಡಿಕೊಂಡಿರುವ ನಾ ಸ್ವಚ್ಚಂದದ ಒಂಟಿಹಕ್ಕಿ
ನಾನಿಂದೂ ಪ್ರಾಥಮಿಕ ತರಗತಿಯ ಮಕ್ಕಳ ನೆಚ್ಚಿನ ಮಾಸ್ತರ
ಮುಗ್ದ ನಗೆಯ ಹೆಂಗಳು ಕಳೆದಿಹರು ಬೊಚ್ಚು ಬಾಯವನ ದುಸ್ತರ
ನಿನ್ನದೇ ನೆನಪಲ್ಲಿ ನಾನೆಂದೆ, ಸುರಿವ ಮಳೆಯದು ನೆವ ಅಷ್ಟೇ !