ಡಾ|| ಯು.ಅರ್.ಅನಂತಮೂರ್ತಿ ಅವರಿಗೆ ನಮನ‌

ಡಾ|| ಯು.ಅರ್.ಅನಂತಮೂರ್ತಿ ಅವರಿಗೆ ನಮನ‌

ಡಾ|| ಯು.ಆರ್.ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ, ಚರ್ಚೆ ಹಾಗೂ ವಾಗ್ವಾದಗಳ ವೇದಿಕೆಗೆ, ಮೋಡಿಗೊಳಿಸುವ ಮಾತುಗಾರನ ಮಾತುಗಳನ್ನು ಕೇಳುವ ಕಿವಿಗಳಿಗೆ ನಿಜಕ್ಕೂ ತುಂಬಲಾರದ ಹಾನಿಯಾಗಿದೆ. ಹಾನಿಯಾಗಿದ್ದು ಸತ್ಯ, ಆದರೆ ಅದನ್ನು ಈಗಿನ ಹಂತದಲ್ಲಿ ಅರಗಿಸಿಕೊಳ್ಳುವುದು ಕಷ್ಟ ಎಂದೆನಿಸಿದರೂ, ಮುಂದಿನ ದಿನಗಳಲ್ಲಿ ಅವರ ಸಾಹಿತ್ಯ ಕೃತಿಗಳು, ಗಳಿಸಿದ ಅನುಭವ, ಸಲ್ಲಿಸಿದ ಸೇವೆಗಳು,ಹಿರಿಮೆ-ಗರಿಮೆ, ಪಡೆದುಕೊಂಡ ಪ್ರಶಸ್ತಿಗಳು, ಚಳುವಳಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿ, ಮೂಗಿನ ನೇರಕ್ಕೆ ಮಾತನಾಡುವ ಛಲ, ಹೇಳಬೇಕೆನ್ನುವ ವಿಷಯವನ್ನು ಯಾವುದೇ ಫಿಲ್ಟರ ಮಾಧ್ಯಮಕ್ಕೆ ಒಳಪಡಿಸದೇ ಹೇಳಿಕೆಗಳನ್ನು ದಾಖಲಿಸುತ್ತಿದ್ದ ಪರಿ, ಹೀಗೆ ಇವುಗಳ ಕುರಿತಾಗಿ ಆರೋಗ್ಯಕರ ವಿಮರ್ಶೆ, ಸೆಮಿನಾರ, ಕನ್ನಡಕ್ಕೊಂದು ಗೌರವ ಗಳಿಸಿಕೊಟ್ಟವನಿಗಾಗಿ ಉಪಕಾರ ಸ್ಮರಣೆ, ಹೀಗೆ ಅರ್ಥಪೂರ್ಣ ಕೃತಜ್ಞತೆಯನ್ನು ನಾವು ಅವರಿಗೆ ಸಲ್ಲಿಸಬಹುದು. ವ್ಯಕ್ತಿಯ ಒಟ್ಟು ಚಿತ್ರಣಗಳನ್ನು ನಾವು ಗಮನಿಸುತ್ತ ಹೊರಟರೆ (ನನ್ನನ್ನು ಹಿಡಿದುಕೊಂಡೇ) ಗುಣ, ಅವಗುಣಗಳು ಸಂಗಮದಂತೆ ನಮ್ಮ ಕಣ್ಣೆದುರು ಹೋಗುತ್ತವೆ. ನಿಧನರಾದಾಗ ಆ ವ್ಯಕ್ತಿಯನ್ನು, ಬದುಕಿದ್ದಾಗ ವೈರಿಯಂತೆ ಕಾಣುತ್ತಿರುವವರೆಲ್ಲರೂ ಕಣ್ಣೀರು ಸುರಿಸಿ ನುಡಿ ನಮನ ಸಲ್ಲಿಸುತ್ತಾರೆ, ಇದೊಂದು ವಾಡಿಕೆ. ವೈರಿಯಂತೆ ಅಂದರೆ ಅವರ ವಿರುದ್ಧ ವೈರತ್ವ ಸಾಧಿಸುವುದು ಎಂದಲ್ಲ. ವೈಚಾರಿಕ ಭಿನ್ನತೆಗಳನ್ನು ಹೇಳುವ ಭರದಲ್ಲಿ ಅತಿರೇಕ ಪದಗಳ ಬಳಕೆಯಿಂದಾಗಿ ಉಂಟಾದ ಒಂದು ಘಟನೆ ಎನ್ನಬಹುದು (ಒಮ್ಮೊಮ್ಮೆ ಘಟನೆಗಳು ನಿರಂತರವಾಗಿ ಘಟಿಸಿ ವ್ಯಕ್ತಿಗತ ಸಂಬಂಧಗಳು ಹಳಸಿದ ಉದಾಹರಣೆಗಳೂ ಇವೆ). ವ್ಯಕ್ತಿಯ ವಿಚಾರಗಳ ತೆಗಳಿಕೆಯಲ್ಲಿ,ಆತನ ಸಂಪೂರ್ಣ ಜೀವಮಾನ ಸಾಧನೆಯನ್ನು ಕಟು ವಿಮರ್ಶೆಗಳ ಹೊದಿಕೆಯಲ್ಲಿ ಮುಚ್ಚಿಹಾಕಲಾಗದು. ಅನಂತಮೂರ್ತಿಯವರ ಬದುಕು ತೆರೆದಿಟ್ಟ ಪುಸ್ತಕದಂತೆ. ಮುನ್ನುಡಿಯಲ್ಲಿ ಒಂದಿಷ್ಟು ಹೀಗಿರಬೇಕಿತ್ತು ಎಂದು ಹೇಳಿದ್ದೂ ಇದೆ, ಲೇಖಕನೋರ್ವ ಹೇಳಬೇಕಿದ್ದನ್ನು ಬರೆದಿರುವೆ ಎಂದು ಬರೆದದ್ದೂ ಇದೆ, ಸಹಕರಿಸಿದವರಿಗೆ ಕೃತಜ್ಞತೆಗಳ ಹೇಳಿದ್ದೂ ಇದೆ, ಒಳಗಡೆ ವಿಮರ್ಶೆಯೆಂಬ ಮೂಸೆಯೊಳಗೆ ಹೋಗಲು ಸಿದ್ಧವಾದ ಲೋಹವಿದೆ, ಬೆನ್ನುಡಿಯಲ್ಲಿ ಲೇಖಕನನ್ನು ವರ್ಣಿಸಿದ್ದೂ ಇದೆ. ಒಟ್ಟಿನಲ್ಲಿ ಅವರ ಜೀವನವು ವಿಮರ್ಶೆಗೆ ಒಳಪಡಿಸಿದ ಹೊತ್ತಿಗೆಯಂತಾಗಿತ್ತು. ಕಾಲನು ಬರುವ ಹೊತ್ತಿಗೆ, ಹೊತ್ತಿಗೆಗಳನ್ನು ಕನ್ನಡಮ್ಮನ ಉಡಿಯಲ್ಲಿ ಹಾಕಿ ಅನಂತದಲ್ಲಿ ಲೀನವಾದ ಅವರಿಗೊಂದು ನುಡಿ ಭಾಷ್ಪಾಂಜಲಿ...ಅನಂತಾನಂತ ಶೃದ್ಧಾಂಜಲಿ.