ಅನಂತಮೂರ್ತಿ ....

ಅನಂತಮೂರ್ತಿ ....

ಅನಂತ ಮೌನಿ .... 

ಮೂರ್ನಾಲ್ಕು ದಿನಗಳ ಹಿಂದೆ , ಅನಂತಮೂರ್ತಿಯವರ ಭಾರತೀಪುರ ಕತೆಯನ್ನು ನನ್ನ ಹೆಂಡತಿ ಶೋಭಾಳಿಗೆ ವಿವರವಾಗಿ ಹೇಳಿ ಮುಗಿಸಿದ್ದೆ . ಅದೇ ಸಮಯದಲ್ಲಿ ಅನಂತಮೂರ್ತಿಯವರ ಕತೆಗಳ ಬಗ್ಗೆ , ಅವರ ಹೋರಾಟಗಳ ಬಗ್ಗೆ , ಅವರ ಸುತ್ತ ಹುಟ್ಟಿದ್ದ ವಿವಾದಗಳ ಬಗ್ಗೆ ನಾವಿಬ್ಬರು ಗಂಟೆಗಳ ಕಾಲ ಚರ್ಚಿಸಿದ್ವಿ . ಯಾರು ಏನು ಹೇಳಲಿ ಬಿಡಲಿ , ಯಾರು ಅವರನ್ನು ಒಪ್ಪಲಿ ಬಿಡಲಿ , ಅವರ ವಿಚಾರಧಾರೆಗಳು ಮತ್ತು ಯೋಚನೆಗಳು ನಮ್ಮನ್ನು ಪ್ರಭಾವಿಸದೆ ಬಿಡವು. ಅದೇ ರೀತಿಯಾಗಿ ಮೂರ್ತಿಯವರು ನನ್ನನ್ನು ಅನೇಕ ವಿಷಯಗಳಲ್ಲಿ ಪ್ರಭಾವಿಸಿದ್ದಾರೆ ಹಾಗು ನಾನು ಅವರಿಂದ ಸಾಹಿತ್ಯಿಕವಾಗಿ, ವೈಚಾರಿಕವಾಗಿ, ತಾತ್ವಿಕವಾಗಿ ಬಹುವಾಗಿ ಪ್ರೇರೇಪಿತಗೊಂಡಿರುವುದು ನಿಜ . 

                ದುರಾದೃಷ್ಟವಶಾತ್ ಪ್ರತಿದಿನದಂತೆ ನಾನು  ಮತ್ತು ನನ್ನ ಶೋಭ  ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ , ನಮ್ಮ  ಮನೆಯಲ್ಲಿ ಒಂದು ರೀತಿಯ ಮೌನ ಆವರಿಸಿತ್ತು . ನಮ್ಮ ಅಮ್ಮ ನನಗೆ ಮೂರ್ತಿಯವರ ಸಾವಿನ ಸುದ್ದಿ ಹೇಳಿದರು ,, ಸ್ನೇಹಿತರೆ ನನಗೇನು ಅವರು ಸ್ನೇಹಿತರಲ್ಲ , ಸಂಭಂದಿಯೂ ಅಲ್ಲ , ಆದರೂ  ಆ ಕ್ಷಣದಲ್ಲಿ ನನಗೆ ಭೂಮಿಯೇ ಕುಸಿದಂತಾಯಿತು , ಮೊನ್ನೆ ಮೊನ್ನೆ ಶಿವರುದ್ರಪ್ಪರನ್ನು ಕಳೆದುಕೊಂಡ ನಮಗೆ ಇದು ಮತ್ತೊಂದು ಆಘಾತ ಇದಾಗಿತ್ತು. ನಿಜವಾಗಿಯೂ ಅವರು ನನ್ನನ್ನು ಅತಿಯಾಗಿ ಆಕ್ರಮಿಸಿದ್ದರು ಅನೇಕ ವೈಚಾರಿಕ ವಿಷಗಳಲ್ಲಿ ಅವರ ನೇರ ಪ್ರಭಾವು ಇದೆ . ನಾನು ಇಷ್ಟಪಡುವ ಅನೇಕ ಲೇಖಕರಲ್ಲಿ ಇವರೂ  ಕೂಡ ಅಗ್ರ ಗಣ್ಯರು. 

                 ಒಬ್ಬ ಲೇಖಕರಾಗಿ ಮೂರ್ತಿಯವರು ಕೊಟ್ಟ ಕೊಡುಗೆ ಅಪಾರ , ಸಾಹಿತ್ಯ ಅವರಿಗೆ  ಬರೀ  ಕತೆ ಕಟ್ಟುವುದು , ಭ್ರಮೆ ಸೃಷ್ಟಿಸುವುದು, ಕೇವಲ ತನ್ನ ಯೋಚನೆಗಳನ್ನು ಇತರರ ಮೇಲೆ ಏರುವುದಷ್ಟೇ ಆಗಿರಲಿಲ್ಲ , ಸಾಹಿತ್ಯ ಅವರಿಗೆ ಒಂದು ಬದುಕಾಗಿತ್ತು , ಸಾಹಿತ್ಯ ಅವರ ಹೋರಾಟಗಳಿಗೆ  ವೇದಿಕೆ ಆಗಿತ್ತು, ಪ್ರಸ್ತುತ ಬೆಳವಣಿಗೆಗಳೊಂದಿಗೆ ಸಾಹಿತ್ಯ ಅವರನ್ನು ಬೆಸೆಯುತ್ತಿತ್ತು. ತಮ್ಮ ನಿಜ ಚಿಂತನೆಗಳನ್ನು , ಸಮಾಜದಲ್ಲಿ ನಡೆಯುವ ಅನ್ಯಾಯ , ಮೂಡನಂಬಿಕೆ , ಗೊಡ್ಡು ಸಂಪ್ರದಾಯಗಳ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಲು ಅವರು ತಮ್ಮ ಸಾಹಿತ್ಯವನ್ನು ಸರಿಯಾಗಿ ,ಸ್ಪುಟವಾಗಿ ಉಪಯೋಗಿಸಿಕೊಂಡರು. ಸಂಸ್ಕಾರ, ಭವ , ಭಾರತೀಪುರ , ಸೂರ್ಯನಕುದುರೆ , ಮೌನಿ , ಆಕಾಶ ಮತ್ತು ಬೆಕ್ಕು , ಅವಸ್ತೆ , ಇವೆಲ್ಲ ನಾನು ಓದಿದ ಅವರ ಕೆಲವು ಪುಸ್ತಕಗಳು , ಇವು ಕೇವಲ ಕತೆಗಳು ಮಾತ್ರ ಆಗಿರಲಿಲ್ಲ ,  ನಿಜಕ್ಕೂ ಆ ಕೃತಿಗಳು ತತ್ವ , ಹೋರಾಟ , ವಿಡಂಬನೆ, ವಿಚಾರಗಳ ಕಣಜಗಳೆ ಆಗಿದ್ದವು . ಈ ಎಲ್ಲಾ ಕೃತಿಗಳು ನನ್ನ ಮೇಲೆ ಅದೆಷ್ಟು ಪರಿಣಾಮ ಬೀರಿದವೆಂದರೆ ನನಗೆ ಮೂರ್ತಿಯವರು ಅಂದಿನಿಂದ ಮಾನಸ ಗುರುಗಳೇ  ಆಗಿ  ಬಿಟ್ಟರು.
              ಒಬ್ಬ ಹೋರಾಟಗಾರನಾಗಿ ಮೂರ್ತಿಯವರು , ಸಾಹಿತ್ಯದಲ್ಲೂ ಹಾಗು ನಿಜ ಜೀವದಲ್ಲೂ ತಮ್ಮನ್ನು ತಮ್ಮದೇ ಆದ ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಸಿಕ್ಕ ಅವಕಾಶ, ವೇದಿಕೆಗಳನ್ನ ಅವರು ತಮ್ಮ ಹೋರಾಟಕ್ಕೆ ಸರಿಯಾಗಿಯೇ ಉಪಯೋಗಿಸಿಕೊಂಡರು , ಅರಣ್ಯ , ನದಿ ಒತ್ತುವರಿಗಳು , ಗಣಿ ಹೋರಾಟಗಳು  , ಸಮಾಜದಲ್ಲಿನ ಜಾತಿ ಪದ್ದತಿ , ರಾಜಕೀಯ ವ್ಯವಸ್ತೆ  ಹಾಗು ಸಮಾಜವಾದ ಚಳುವಳಿಗಳಲ್ಲೂ ಸಹ ಮೂರ್ತಿಯವರು ಸಕ್ರಿಯಾವಾಗಿ ತೊಡಗಿಸಿಕೊಂಡರು.
            ಸಾಂಪ್ರದಾಯಿಕ ಸಾಹಿತಿಗಳಂತೆ ಒಂದೇ ಸಿದ್ದಾಂತ , ಒಂದೇ ಯೋಚನೆ , ಒಂದೇ ನಿಲುವುಗಳಿಗೆ ತಮ್ಮನ್ನು ತಾನು ಎಂದೂ ಅಂಟಿಸಿಕೊಳ್ಳದ ಮೂರ್ತಿಯವರು , ಹೊಸ ಹೊಸ ಚಿಂತನೆಗಳಿಗೆ , ಹೊಸ ಯೋಚನೆಗಳಿಗೆ , ಹೊಸ ವಿಚಾರಗಳಿಗೆ  ಬಹುವಾಗಿ ಸ್ಪಂದಿಸುತ್ತಿದ್ದರು. ಒಳ್ಳೆಯ ವಿಷಯಗಳನ್ನು ಸದಾ ಒಪ್ಪುತ್ತಿದ್ದರು, ಕೆಲವನ್ನು ಸಿದ್ದಾಂತಗಳನ್ನು ಕಟುವಾಗಿ ಖಂಡಿಸಿ, ವಾದ ವಿವಾದಗಳ ನಂತರ ಅದೇ ವಿಷಯವನ್ನು ಒಪ್ಪುತಿದ್ದರು. ಮನಸ್ಸಿನ್ನಲ್ಲಿರುವುದನ್ನೇ ತಾವು ಸದಾ ಮಾತಾಡುತ್ತಿದ್ದರು.  ಒಳಗೊಂದಾಗಲಿ-ಹೊರಗೊಂದಾಗಲಿ ಎಂದು ಅವರು ಮಾತನಾಡುತ್ತಿರಲಿಲ್ಲ. ಯಾವುದೇ ವಿಷಯಗಳನ್ನು ಚಿಂತನ-ಮಂಥನಗಳಿಲ್ಲದೆ ಒಪ್ಪಿಕೊಳ್ಳುವ ಮನಸ್ಸು ಕೂಡ ಅವರದ್ದಾಗಿಲಿಲ್ಲ .
            ಒಬ್ಬ ದೊಡ್ಡ ಮಾನವತವಾದಿಯಾಗಿ, ಸಮಜಾವಾದಿಯಾಗಿ,  ಬರಹಗಾರನಾಗಿ , ನಮ್ಮವರೇ ಆಗಿ,  ಮೂರ್ತಿಯವರು ನಮ್ಮನ್ನು ಒಂದಲ್ಲ ಒಂದು ರೀತಿಯಾಗಿ ಯೋಚನೆಗಳಿಗೆ ತಳ್ಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಅವರು ಪ್ರಭಾವಿಸಿದ್ದಾರೆ ಕೂಡ. ಕನ್ನಡಕ್ಕೆ ಅಪಾರ ಹೆಸರು ತಂದಿದ್ದಾರೆ . ಕನ್ನಡ ಹಾಗು ಸಾಹಿತ್ಯಕ್ಕೆ ದುಡಿದಿದ್ದಾರೆ. ಇಂತಹ ವ್ಯಕ್ತಿ ನಮ್ಮನ್ನು ಅಗಲಿರುವುದು ನಿಜಕ್ಕೂ ಒಂದು ದುಃಖದ ಸಂಗತಿ. ಇಂಥವರು ಇನ್ನುಮುಂದೆ ನಮ್ಮೊಂದಿಗೆ ಇರುವುದಿಲ್ಲ ಎಂಬುದು ಎಷ್ಟು ಕಹಿ ಸತ್ಯವೋ , ಅವರ ಚಿಂತನೆಗಳು, ಆಲೋಚನೆಗಳು ಮಾತ್ರ ಸಮಾಜದಿಂದ ದೂರವಾಗುವುದಿಲ್ಲವೆಂಬುದು ಒಂದು ಸಿಹಿ ಸತ್ಯ .  ದೇವರು ಆಅನಂತ ಮೌನಿಯ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ , ನನ್ನ ಮಾನಸು ಗುರುವಿಗೆ ನನ್ನ ಅನಂತ ನಮನಗಳು..... 
ನಿಮಗಾಗಿ 
ನಿರಂಜನ್