ವಿಶಿಷ್ಠ ಗಣಪ

ವಿಶಿಷ್ಠ ಗಣಪ

ಗಣಪನ ಹಬ್ಬ ಹತ್ತಿರವಾಗುತ್ತಿರುವಂತೆ ಗಣಪನ ಮೂರ್ತಿಗಳು ಅಂಗಡಿಗಳಲೆಲ್ಲ ಕಾಣಿಸಿಕೊಳ್ಳತೊಡಗಿವೆ - ಸಿಂಗಪುರದ ಲಿಟಲ್ ಇಂಡಿಯದಲ್ಲೂ ಕೂಡ. ಗಣಪನ ವಿಶಿಷ್ಠತೆಯೆ ಅವನ ಹಲವಾರು ವಿಶೇಷ ಅಂಶಗಳನ್ನು ಒಂದುಗೂಡಿಸುವ ಅಪರೂಪದ ಸಂಗಮ ರೂಪವೆಂದರೆ ತಪ್ಪಾಗಲಾರದು. ಅವನ ಹುಟ್ಟೆ ವಿಶಿಷ್ಠವಾದದ್ದು - ತಾಯಿಯ ಮಾನಸಿಕ ಅಭಿಲಾಷೆಯನ್ನು ಮೂರ್ತರೂಪಾಗಿಸಿದ ಮೈಬೆವರಿನಿಂದುದ್ಭವಿಸಿದ ಪ್ರತಿಮೆಯಾದವನು. ಹಸುಗೂಸಾಗಿ, ಮಗುವಾಗಿ ಬೆಳೆದು ದೊಡ್ಡವನಾಗುವ ಬದಲು ಹುಟ್ಟುತಲೆ ಬೆಳೆದ ಬಾಲಕನಾದವನು, ಯಾವುದೆ ತರಬೇತಿಯ ಹಂಗಿಲ್ಲದೆ ಶೌರ್ಯ ಪ್ರದರ್ಶನಕ್ಕಿಳಿದು ತಂದೆಯನ್ನೆ ಎದುರಿಸಿದವನು, ಅವನಿಂದಲೆ ಸತ್ತು ಆನೆಯ ತಲೆಯೊಡನೆ ಮತ್ತೆ ಬದುಕಿದವನು - ಹೀಗೆ ಎಲ್ಲದರಲ್ಲು ಒಂದಲ್ಲ ಒಂದು ವಿಶಿಷ್ಠತೆಯನ್ನು ಕಾಣಬಹುದು ಗಣಪನಲ್ಲಿ - ಅವನ ಅಸಾಮಾನ್ಯ ರೂಪವು ಸೇರಿದಂತೆ. ಆ ವಿಶಿಷ್ಠತೆಯತ್ತ ಒಂದು ಇಣುಕು ನೋಟ ಈ ಕವನ, ಅವನ ಬರುವಿಕೆಯನ್ನು ಸ್ವಾಗತಿಸುತ್ತ - ನಾಗೇಶ ಮೈಸೂರು.

ವಿಶಿಷ್ಠ ಗಣಪ
_____________________

ಗಣೇಶನಿಗಾರೊ ತಾಯಿ ತಂದೆ 
ಅವನಿಗವನೆ ಸಿದ್ದಿ ಬುದ್ದಿಯ ಖುದ್ದೆ
ಮೈ ಬೆವರಿನಂಟು ಕೊಳೆಯಾ ಅರಿಶಿನದೆ
ಗೊಂಬೆಯಾದವನಿಗೆ ಹುಟ್ಟು ತಾನೆ ಎಲ್ಲಿದೆ ? ||

ಬುರ ಬುರನೆಂದು ಬೆಳೆಯದ ಬಾಲ
ಹುಟ್ಟಲೆ ಆರೇಳೆಂಟು ವರ್ಷ ಆಗಿತ್ತಲ್ಲ!
ಬೀಜ ಮೊಳಕೆ ಸಸಿ ಗಿಡ ಒಂದೆ ಏಟಿನಲೆಲ್ಲ
ಮೂಡಿಬಂದ ಉದ್ಭವ ಮೂರ್ತಿ ಅಪರೂಪದ ಫಲ ||

ಮೊಟ್ಟಮೊದಲ ಭೇಟಿ ತಡೆದ ಈಶನ 
ಜತೆ ಕದನಕಿಳಿದ ಹುಡುಗಾ ಸಾಮಾನ್ಯನ ?
ಕಲಿಕೆ ತರಬೇತಿಯಿರದೆ ಯುದ್ಧಕಲೆಯ ಸನ್ನದ್ಧನ
ಶಿವಗಣಗಳ ಧೂಳೀಪಟ ಓಡುವಂತೆ ಮಾಡಿದವನ ||

ಹುಟ್ಟಲೆ ಸಾವು ಕಂಡ ವಿಶಿಷ್ಠ 
ಸತ್ತು ಮಲಗಿದ ಕಾಯವು ಶ್ರೇಷ್ಠ
ತರಿದರೇನಂತೆ ಮೇಣದ ತಲೆ ಬಿಡು
ಗಜಾಸುರನ ತಲೆಯ ಜೋಡಿಸಿ ನೋಡು ||

ಗಜಾನನ ಲಂಬೋದರ ಸುರದೇಹಿ
ಹೊಂದಿಕೊಳ್ಳದ್ದೆಲ್ಲವನು ಒಂದುಗೂಡಿಸಿ  
ಸಂಯೋಜನೆಯಲು ಸಹಜತೆ ಗಣನಾಥ
ವಿನಾಯಕನಾಗಿ ವಿಘ್ನಗಳೆಲ್ಲವ ನಿವಾರಿಸುತ ||

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------