ಗಣೇಶನಿಂದ ಮೂಡಿದ ವಿಚಾರ
ಗಣೇಶನ ಹಬ್ಬ ಬರುತ್ತಿದೆ, ಆಸ್ತಿಕರು ಹಬ್ಬದ ತಯಾರಿಯಲ್ಲಿದ್ದರೆ,ಇನ್ನೊಂದು ಗುಂಪು ಅಂದರೆ ಸ್ವಘೋಷಿತ ನ್ಯಾಯಧೀಶರುಗಳಾದ ಮಾಧ್ಯಮದವರು,ಕೆಲ ಬುರ್ನಾಸು ಜೀವಿಗಳು ನಮಗೆ ಹಬ್ಬ ಹೇಗೆ ಆಚರಿಸಬೇಕೆಂದು ಕಲಿಸಿಕೊಡುವ ಸಿದ್ಧತೆಯಲ್ಲಿದ್ದಾರೆ.ಇನ್ನು ಕೆಲವು ವಿಚಾರವಾದಿಗಳು ಅಂತ ಕರೆಸಿಕೊಳ್ಳುವವರು ಗಣೇಶ ದೇವತೆಯೇ ಅಲ್ಲ ಅಂತ ವಾದಿಸಿ ನಮ್ಮವರ ನಂಬಿಕೆಗೆ ಘಾಸಿ ಮಾಡಲು ನಿದ್ದೆ ಬಿಟ್ಟು ಕುಳಿತಿದ್ದಾರೆ. ಬೇರೆ ಧರ್ಮದವರು ಹಬ್ಬ ಆಚರಿಸುವಾಗ ನೆನಪಾಗದ ಪರಿಸರ ಕಾಳಜಿ ಇವರಿಗೆ ಧುತ್ತೆಂದು ಇನ್ನೇನು ನೆನಪಾಗಲಿದೆ.ವೈಚಾರಿಕತೆ ಎಂದರೆ ಕೇವಲ ಹಿಂದೂಧರ್ಮವನ್ನು ಹೀಯಾಳಿಸುವುದು ಎಂದು ತಿಳಿದವರು ಇವರು.
ಹಿಂದೆ ತಿಲಕರು ಜನರಲ್ಲಿ ರಾಷ್ಟ್ರಭಕ್ತಿ ಜಾಗ್ರತಗೊಳಿಸಲು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಪ್ರಾರಂಭಿಸಿದರು.ಒಂದು ಪವಿತ್ರ ಉದ್ದೇಶಕ್ಕಾಗಿ ಆರಂಭವಾದ ಇಂತಹ ಉತ್ಸವಗಳನ್ನು ನಮ್ಮ ಜಾತ್ಯತೀತ! ಸರ್ಕಾರ ಸುರಕ್ಷತೆ,ಪರಿಸರದ ನೆಪ ಒಡ್ಡಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೆ.ಪಾಪ,ಇವರಿಗೆಲ್ಲ ಹಿಂದೂಗಳೆಲ್ಲ ಇಂತಹ ಆಚರಣೆಯ ಮೂಲಕ ಒಗ್ಗಟ್ಟಾಗಿ ಎಲ್ಲಿ ತಮ್ಮ ಜಾತಿರಾಜಕಾರಣದ ಆಟಗಳನ್ನು ನಿಲ್ಲಿಸಬಹುದೆಂಬ ಭಯವಿರಬೇಕು.
ನಮ್ಮ ಧರ್ಮದವರನ್ನು ಉತ್ತರದಿಂದ ದಕ್ಷಿಣದವರೆಗೆ ಬೆಸೆದುಕೊಂಡಿರುವುದು ಇಂತಹ ಧಾರ್ಮಿಕ ಹಬ್ಬಗಳೇ.ನಮ್ಮನ್ನು ಒಡೆಯಬೇಕೆಂದರೆ ಮೊದಲು ನಮ್ಮ ಆಚರಣೆ, ಸಂಪ್ರದಾಯ,ಸಂಸ್ಕೃತಿಯನ್ನು ಒಡೆಯಬೇಕೆಂದು ಕೆಲ ರಾಜಕಾರಣಿಗಳಿಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ಈ ಕೆಲಸವನ್ನು ಬಿಸ್ಕತ್ ಹಾಕಿ ಕೆಲವು ಬುದ್ಧಿಜೀವಿಗಳಿಂದ ಮಾಡಿಸುತ್ತಾರೆ.
ನಂಬಿಕೆ ಅಂದರೆ ಏನು, ಹಬ್ಬಗಳನ್ನು ಹೇಗೆ ಆಚರಿಸಬೇಕೆಂದು ಇವರಿಂದ ಕಲಿಯುವ ಕರ್ಮ ನಮಗೆ ಬಂದಿಲ್ಲ.ನಂಬಿದವರಿಗೆ ಗಣೇಶ ಆಗಲಿ ಅಥವಾ ಇನ್ನಿತರ ದೇವದೇವತೆಗಳಾಗಲಿ ಶಕ್ತಿ ಸ್ವರೂಪ, ನಂಬದವರಿಗೆ ಕೇವಲ ಕಾಲ್ಪನಿಕ. ಸಮಸ್ಯೆಯೇ ಇರುವುದು ಇಲ್ಲಿಯಲ್ಲ. ನಾಸ್ತಿಕತೆ,ವೈಚಾರಿಕತೆ ಸೋಗಿನಲ್ಲಿ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸುವುದರಲ್ಲಿ.ಒಬ್ಬ ವ್ಯಕ್ತಿಯ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.ನಾನು ನೋಡುವ ಕಣ್ಣುಗಳಲ್ಲಿಯೇ ಎಲ್ಲರೂ ನೋಡಬೇಕೆಂದುಕೊಳ್ಳುವವ ಮೂರ್ಖನಾಗುತ್ತಾನೆ.
ಇವರಿಗೆ ಗಣೇಶನನ್ನು ದೇವತೆಯೆಂದು ಗೌರವಿಸಲು ಕಷ್ಟವಾದರೆ,ಮೌಲ್ಯಸೂಚಕನೆಂದು ತಿಳಿದು ಗೌರವಿಸಲಿ ಸಾಕು.ಗಣೇಶನ ದೇಹದ ಒಂದೊಂದು ಭಾಗವು ಒಂದೊಂದು ಸದ್ಗುಣವನ್ನು ಕಲಿಸಿಕೂಡುತ್ತದೆ.ಉದಾಹರಣೆಗೆ ಗಣೇಶನ ಅಗಲವಾದ ಕಿವಿಗಳು ಎಲ್ಲರ ಮಾತುಗಳನ್ನು ಸರಿಯಾಗಿ ಆಲಿಸಿ ಎಂದು ಸೂಚಿಸಿದರೆ,ಅವನ ದೊಡ್ಡ ಹೊಟ್ಟೆ ಅಪಥ್ಯ ಮಾತುಗಳನ್ನು ಹೊಟ್ಟೆಗೆ ಹಾಕಿಕೊಳ್ಳಿ ಎಂದು ಹೇಳುತ್ತದೆ.ಹಾಗೆಯೇ ಸೊಂಡಿಲು ಅಡ್ಡವಾಗಿರುವ ಅವನ ಬಾಯಿ ಮಾತು ಹಿತಮಿತವಾಗಿರಲಿ ಎಂಬುದನ್ನು ತಿಳಿಸುತ್ತದೆ. ದೋಷ ಇಲ್ಲದ ಕಣ್ಣುಗಳಿಂದ ನೋಡಿ ನಂಜು ಇಲ್ಲದ ಮನಸ್ಸಿನಿಂದ ಯೋಚಿಸಿದರೆ ಗಣೇಶನ ಹಬ್ಬ ಯಾಕೆ ಆಚರಿಸಬೇಕೆಂಬುದು ಅರ್ಥವಾಗುತ್ತದೆ.
-ಎಸ್.ಕೆ