ಅವಧೇಶ್ವರಿ : ಇಣುಕು ನೋಟ

ಅವಧೇಶ್ವರಿ : ಇಣುಕು ನೋಟ

ಚಿತ್ರ

ಅವಧೇಶ್ವರಿ : ಇಣುಕುನೋಟ

ಅದೇನು ಚಾಳಿಯೋ ಗೊತ್ತಿಲ್ಲಾ, ಪುಸ್ತಕದ ಮುಖಪುಟದ ವಿನ್ಯಾಸ ಆಕರ್ಷಕವಾಗಿರದಿದ್ದರೆ ಅದನ್ನು ಅಂಗಡಿಯಿಂದ ಕೊಂಡು ಓದುವ ಅಭ್ಯಾಸ ನನಗಿಲ್ಲ.  ಕಳೆದವಾರ ಭೈರಪ್ಪನವರ ಹೊಸ ಕಾದಂಬರಿಯನ್ನು ಕೊಂಡುಕೊಳ್ಳಲು ಸಪ್ನಾಗೆ ಹೋಗಿದ್ದೆ. ನಾನೇನೂ ಬೈರಪ್ಪನವರ ಅಭಿಮಾನಿಯೇನಲ್ಲ. ಕಾರಣ ಅವರ ಒಂದು ಕಾದಂಬರಿಯನ್ನೂ ಓದುವ ಅವಕಾಶ ನನಗೆ ಸಿಕ್ಕಿಲ್ಲ. ಆದರೂ ಈ ಕಾದಂಬರಿಯ ಬಗ್ಗೆ ಸ್ನೇಹಿತರು ಹೇಳಿದಾಗ  ಭೈರಪ್ಪನವರ ಲೇಖನಾವೈಖರಿಯನ್ನು ಓದಿ ಆನಂದಿಸುವ ಇಚ್ಛೆ ಆಯಿತು.  ಸಪ್ನಾ ಬುಕ್ ಹೌಸ್ ಗೆ ಹೋದಾಗ ಇದ್ದದ್ದು ಒಂದೇ ಪ್ರತಿ.  "ನನ್ನ ಅದೃಷ್ಟ!" ಎಂದು ಪುಸ್ತಕವನ್ನು ತೆಗೆದು ಕೊಂಡು ಹೊರಟು ಬರಲು ಮನಸಾಗಲಿಲ್ಲ. ಅದರ ಮುಖಪುಟದ ವಿನ್ಯಾಸ ನನಗಷ್ಟು ಇಷ್ಟ ಆಗಲಿಲ್ಲ. ಸಣ್ಣ ಮಕ್ಕಳ ಪುಸ್ತಕಕ್ಕೆ ವಿನ್ಯಾಸಗೊಳಿಸಿದಂತೆ ಯಾರೋ ವಿನ್ಯಾಸ ಮಾಡಿದ್ದಾರೆ. ಹಾಗಾಗಿ "ಇದು ಇಲ್ಲೇ ಇರಲೀ" ಎಂದು ಮತ್ತೆ ಕೆಲವು ಪುಸ್ತಕಗಳ ಕಡೆ ಗಮನ ಹಾಯಿಸಿದೆ. ಕಾದಂಬರಿಯ ವಿಭಾಗದ ಕಡೆ  ಹೋಗಿ ನಾನೆಂದೂ ಪುಸ್ತಕಗಳನ್ನು ನೋಡಿರಲಿಲ್ಲ.  ಹಾಗೇ ಕಣ್ಣು ಹಾಯಿಸಿದಾಗ ನನಗೆ "ಅವಧೇಶ್ವರಿ" ಪುಸ್ತಕ ಕಂಡಿತು.  ಶಂಕರ ಮೊಕಾಶಿ ಪುಣೇಕರರವರ  ಹೆಸರನ್ನು ನಾನು ಮೊದಲು ಕೇಳಿರಲಿಲ್ಲ.  ಆದರೆ ಕಾದಂಬರಿಯ ಮುಖಪುಟದ ವಿನ್ಯಾಸ ಸ್ವಲ್ಪ ಇಷ್ಟವಾಯಿತು. ಒಳಗಿನ ಪುಟಗಳೂ ಚೆನ್ನಾಗಿಯೇ ಕಂಡವು. ಪುಸ್ತಕದ ಮುಖಪುಟದಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಪುಸ್ತಕ ಎಂತಲೂ ನಮೂದಿಸಿದ್ದರು.  ನೋಡೋಣ! ಎಂದು,  ಲೇಖಕರು ಪುಸ್ತಕದ ಬಗ್ಗೆ ಬರೆದಿದ್ದ ಕೆಲವು ಸಾಲುಗಳನ್ನು ಓದಿದೆ. ಪುಸ್ತಕವು ವೇದಕಾಲೀನ ರಾಜಕೀಯ ವಸ್ತುವನ್ನು ಒಳಗೊಂಡಿದೆ ಎಂದು ಕೇಳಿದಾಗ ತುಂಬಾ ಖುಷಿಯಿಂದ ಎತ್ತಿಕೊಂಡು ಹೊರಗಡೆಬಂದೆ(Of course, I had paid money).

ಈ ಕಾದಂಬರಿಯಬಗ್ಗೆ ನನ್ನ ಪ್ರಾಮಾಣಿಕವಾದ ವಿಮರ್ಶೆಯನ್ನಷ್ಟೇ ನಿಮ್ಮ ಮುಂದಿಡಲು ಬಯಸುತ್ತೇನೆ. ಮೊದಲನೆಯದಾಗಿ ವೇದಕಾಲೀನ ಸಮಾಜದ ಕಲ್ಪನೆ ಬಂದಾಗ ನಮಗೆ ಕಾಣುವುದು ವೇದಗಳು ಮತ್ತು ಅವುಗಳ ಆಚಾರವಿಚಾರಗಳನ್ನು ತಮ್ಮ ಜನಜೀವನದಲ್ಲಿ ಅಳವಡಿಸಿಕೊಂಡ ಭಾರತದ ಒಂದು ವರ್ಗದ  ಜನರು. ಈ ಅಂಶವನ್ನು ಲೇಖಕರು ನಿರಾಯಾಸವಾಗಿ ತಮ್ಮ ಕೃತಿಯಲ್ಲಿ ಚಿತ್ರಿಸಿದ್ದಾರೆ. ಆದರೆ ಸಾಕಷ್ಟು ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ ಎಂದು ಹೇಳುವುದು ಅಷ್ಟು ಸಮಂಜಸವಾಗಿಲ್ಲ. ಈ ಕೃತಿಯನ್ನು ರಚಿಸುವಾಗ ಕೆಲವು ಅಂಶಗಳನ್ನು ಕಲ್ಪಿಸಿ, ಅವುಗಳನ್ನು ಆಧಾರವಾಗಿಟ್ಟುಕೊಂಡು ಇದನ್ನು ರಚಿಸಲಾಗಿದೆ ಅವುಗಳಲ್ಲಿ ಪ್ರಮುಖವಾದ ಅಂಶಗಳು,

೧. ಆರ್ಯರು ಈಜಿಪ್ಟ್ ನ ಮೂಲದವರು.

೨. ತಮ್ಮ ರಾಜಮನೆತನದ ಪರಿಶುದ್ಧ ಪೀಳಿಗೆಗಾಗಿ ಸಹೋದರ ಸಹೋದರಿಯರ ವಿವಾಹದ  ಕಲ್ಪನೆ.

೩. ವೇದಕಾಲೀನ ಸ್ತ್ರೀ ಸ್ವಾತಂತ್ರ್ಯದ ಉತ್ಪ್ರೇಕ್ಷೆ.

೪. ಭೌಗೋಳಿಕ ಪ್ರದೇಶಗಳ ಇತಿಮಿತಿ ಇಲ್ಲದ ಸಂಪರ್ಕ.

೫. ಶಂಬರ ಎಂಬ ಅಸುರನ ಇತಿಹಾಸ.

೬. ಮದ್ದುಗುಂಡುಗಳ ಬಳಕೆ.

೭. ಆ ಕಾಲದ ಅನೈತಿಕ ಸಂಬಂಧಗಳು.

 

ನನ್ನ ವೈಯಕ್ತಿಕ ಅಭಿಪ್ರಾಯದಂತೆ ಕೃತಿಯನ್ನು ಅದ್ಭುತವೆಂದು ಕರೆಯಲು ಸಾಧ್ಯವಿಲ್ಲ. ಅತೀ ಉತ್ತಮ ಎಂದೂ ಹೇಳಲಾಗುವುದಿಲ್ಲ. ಆದರೂ ಒಬ್ಬ ಲೇಖಕನ ಪ್ರತಿಭೆಯ ಅನಾವರಣವೆಂದಷ್ಟೇ ಹೇಳಬಹುದು. ಆದರೇ ಆ ಪ್ರತಿಭೆಯನ್ನೂ ಅಸಮಾನ್ಯವೆಂದು ಹೇಳಲು ಅಸಾಧ್ಯ.

 

ಮೊಕಾಶಿಯವರ ಕೃತಿಗೆ ಮುಖ್ಯ ಪ್ರೇರಣೆ, ಋಗ್ವೇದ ಹಾಗೂ ಸಿಂಧೂ ನಾಗರೀಕತೆಯ ಕಾಲದಲ್ಲಿ ದೊರೆತ ಕೆಲವು ಸೀಲುಗಳು. ಅವು ಸೀಲುಗಳೋ ಅಥವಾ ಮತ್ತೇನೋ ಎಂಬುದು ಕಾಲನಿಗೇ ಗೊತ್ತು. ಅವುಗಳನ್ನು ತಮ್ಮ ಕೃತಿಯಲ್ಲಿ ಸಮೀಕರಿಸಲು ಲೇಖಕರು ಹೊರಟಿದ್ದಾರೆ ಎಂಬುದಷ್ಟೇ ಸತ್ಯ.

 

ಋಗ್ವೇದದಲ್ಲಿ ಪುರುಕುತ್ಸ ಹಾಗೂ ಪುರುಕುತ್ಸಾನಿ ಎಂಬ ಪದಬಳಕೆ ಕೆಲವು ಕಡೆ ಆಗಿದೆ.  ಪುರುಕುತ್ಸಾನಿ ಎಂಬ ಪದಬಳಕೆ ಆಗಿರುವುದು ಬಹಳ ಕಡಿಮೆ ಕಡೆ.  ಪುರುಕುತ್ಸಾನಿ ಎಂಬುದರ ನಿಜವಾದ ಅರ್ಥ ಪುರುಕುತ್ಸನ ರಾಣಿ ಎಂದಷ್ಟೇ ಆಗಿದೆ. ಆದರೆ ಲೇಖಕರ ಪ್ರಕಾರ 'ಪುರುಕುತ್ಸನ ತಂಗಿಯೇ ಆಗಿದ್ದಾಳೆ',( ಏಕೆಂದರೆ ಅಣ್ಣ ತಂಗಿಯರ ಹೆಸರು ಒಂದೇ ರೀತಿಯದ್ದಾಗಿದೆ(ಪುರುಕುತ್ಸ ಹಾಗೂ ಪುರುಕುತ್ಸಾನಿ).)

ತ್ರಸದಸ್ಯುವನ್ನು ಋಗ್ವೇದದಲ್ಲಿ ಕೆಲವುಕಡೆ ಪುರುಕುತ್ಸನ ಮಗನೆಂದೂ ಮತ್ತೊಂದು ಕಡೆ ಪುರುಕುತ್ಸಾನಿಯ ಮಗನೆಂದೂ ಹೇಳಿರುವ ಅಂಶವು ಲೇಖಕರ ವಿಚಿತ್ರ ಕಲ್ಪನೆಗೆ ಕಾರಣವಾಗಿದೆ. ಈ ಆಧಾರದ ಮೇಲೆ ಲೇಖಕರು ಪುರುಕುತ್ಸ-ಪುರುಕುತ್ಸಾನಿಯರು ಸಹೋದರ ವರ್ಗದವರೂ ಹಾಗೂ ಪತಿ-ಪತ್ನಿಯರೂ ಆಗಿದ್ದಾರೆ ಎಂದು ತಮ್ಮ ಕಾದಂಬರಿಯನ್ನು ಹೆಣೆದಿದ್ದಾರೆ. ಋಗ್ವೇದದಲ್ಲಿ ಪುರುಕುತ್ಸನನ್ನು ಗೌರವಿಸಿ ಹೊಗಳಲಾಗಿದೆ. ಆತನನ್ನು ಮಹಾ ಚಕ್ರವರ್ತಿಯೆಂದೂ, ಧರ್ಮಿಷ್ಟನೆಂದೂ ಹೇಳಲಾಗಿದೆ. ಆತನನ್ನೂ ಎಲ್ಲಿಯೂ ನಿಷ್ಕೃಷ್ಟತೆಯಿಂದ ಕಾಣಲಾಗಿಲ್ಲ. ಆದರೇ ಲೇಖಕರ ನಿಲುವು ಈ ವಾಸ್ತವಕ್ಕೆ ಸಂಪೂರ್ಣ ವಿರುದ್ಧವಾಗಿದ್ದೂ, ಆತನನ್ನು ಒಬ್ಬ ಕಾಮುಕನನ್ನಾಗಿ ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೆ ಆತನದು ಕಾದಂಬರಿಯ ಅತೀ ಸಾಮಾನ್ಯ ಪಾತ್ರಗಳಲ್ಲಿ ಸಾಮಾನ್ಯವಾದ ಪಾತ್ರ. ಆತನ ಕಾಲಾಳು, ಸಾರಥಿಗೆ ಕೊಟ್ಟಿರುವ, ಅಥವಾ ಒಬ್ಬ ಅಡವಿಯ ಪಾಳೇಗಾರನಿಗೆ ಕೊಟ್ಟಿರುವ ಪ್ರಾಮುಖ್ಯತೆಯನ್ನೂ ಲೇಖಕರು ಆತನಿಗೆ  ಕರುಣಿಸಿಲ್ಲ. ಇದು ವಿಷಾದದ ಸಂಗತಿ.

ಋಗ್ವೇದದ ಒಂದು ಶ್ಲೋಕದಲ್ಲಿ ಪುರುಕುತ್ಸನ ಮಗನಾದ ತ್ರಸದಸ್ಯುವನ್ನು ದೇವಮಾನವನೆಂದು ಹೇಳಲಾಗಿದೆ. (ಪಾಶ್ಚಾತ್ಯರ ಭಾಷೆಯಲ್ಲಿ Demi god, ಅಂದರೆ ಮಾನವ ಸ್ತ್ರೀಯಲ್ಲಿ ದೇವತೆಗೆ ಜನಿಸಿದ ಪುತ್ರ ಎಂದು.) ಅದೂ ಅಲ್ಲದೇ ಅದೇ ಶ್ಲೋಕದಲ್ಲಿ ಇಂದ್ರ ಹಾಗೂ ವರುಣರನ್ನು ಸ್ತುತಿಸಿರುವುದರಿಂದ, ತ್ರಸದಸ್ಯುವು ನಿಯೋಗ ಪದ್ಧತಿಯಿಂದ ಹುಟ್ಟಿದವನೆಂದು ಲೇಖಕರು ಭಾವಿಸಿದ್ದಾರೆ.(ಉದಾಹರಣೆಗೆ ಯಮನಿಂದ ಯುಧಿಷ್ಠಿರ, ವಾಯುವಿನಿಂದ ಭೀಮ ಹೇಗೆ ಹುಟ್ಟಿದರೋ ಹಾಗೆ!).  ಇಲ್ಲಿ ನಿಯೋಗಪದ್ಧತಿಯನ್ನು ವೈಜ್ಞಾನಿಕವಾಗಿ ನಿರೂಪಿಸುವತ್ತ ಲೇಖಕರು ಗಮನ ಹರಿಸಿದಂತಿದೆ. ಆದರೆ ಅದೂ ಅಧ್ವಾನವಾಗಿದೆ. ಒಂದುವೇಳೆ ನಿಯೋಗ ಪದ್ಧತಿಯು ಆ ಕಾಲದಲ್ಲಿ ರೂಢಿಯಲ್ಲಿದ್ದರೆ ಅದು ಜನರಿಂದ ಸ್ವೀಕೃತವಾಗಿಯೇ ಇರುತ್ತಿತ್ತು ಅದನ್ನು ಅಶ್ಲೀಲವಾಗಿ ಜನ ಭಾವಿಸುವ ಅಗತ್ಯವಿರುತ್ತಿರಲಿಲ್ಲ. ಅದನ್ನು ಸಾರ್ವತ್ರಿಕವಾಗಿ ಸಮಾಜ ಒಪ್ಪುತ್ತಿತ್ತು.  ಆದರೆ ಲೇಖಕರಿಗೆ ಅದು ಒಪ್ಪಿಗೆ ಇದ್ದಂತೆ ಕಾಣಲಿಲ್ಲ. ಇಲ್ಲಿ ನಿಯೋಗ ವೃತ್ತಾಂತವೂ  ಕದ್ದು ಮುಚ್ಚಿ ನಡೆಸಿದ ಸಂಸಾರದಂತೆಯೇ ಚಿತ್ರಿತವಾಗಿದೆ.  ರಾಜ ಪುರುಕುತ್ಸನನ್ನು ಸಂಪೂರ್ಣ ಕಾಮುಕನನ್ನಾಗಿ ಚಿತ್ರಿಸಿದ ಲೇಖಕರು ಅಷ್ಟಕ್ಕೇ ಸುಮ್ಮನಾಗಿಲ್ಲ. ರಾಣಿ ಪುರುಕುತ್ಸಾನಿಗೂ ಕೊನೆಗೆ ಅದೇ ಗತಿ ಒದಗಿಸಿದ್ದಾರೆ.

ಕಾದಂಬರಿಯನ್ನು 'ಮುಂದೇನಾಗಬಹುದು' ಎಂದು ಓದುವುದಕ್ಕಿಂತಲೂ, 'ಮುಂದಾದರೂ ಕತೆ ಸರಿಯಾಗಿದೆಯೇ' ಎಂದು ಕೆಲವೊಮ್ಮೆ ಓದುವಂತಾಗುತ್ತದೆ.  ಕತೆಯಲ್ಲಿ ಬರುವ ಇಬ್ಬರು ಬ್ರಾಹ್ಮಣರಲ್ಲಿ ಭೀಮ ಭಟ್ಟನ ಸಂಗತಿಗಳಾದರೂ ಇಂದಿನ ಟಿವಿ ಧಾರಾವಾಹಿಗಳ ಕುಹಕಿಗಳ ಪಾತ್ರದಂತೆಯೇ ಚಿತ್ರಿತವಾಗಿದ್ದು ಕತೆಯ ನೈಜತೆಯನ್ನು ಮತ್ತಷ್ಟು ಹಾಳುಗೆಡವಿದೆ. ನೈಜತೆ ಇಲ್ಲದಿದ್ದರೂ ಇದೊಂದು ಅತೀ ಪ್ರಮುಖವಾದ ಪಾತ್ರ. ಸೇನಾಪತಿ ತಾರ್ಕ್ಷ್ಯನ ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಡಲಾಗಿದೆ. ಇಡೀ ಕತೆಯನ್ನು ಸಮಗ್ರವಾಗಿ ಆವರಿಸಿಕೊಳ್ಳುವ ಈ ಪಾತ್ರವು ರಾಜ್ಯಕ್ಕೆ ಮಂತ್ರಿಯಾಗಿ, ದೊರೆಗೆ ರಕ್ಷಕನಾಗಿ, ಸೈನ್ಯಕ್ಕೆ ನಾಯಕನಾಗಿ, ಪಂಡಿತರಿಗೆ ವಿದ್ವಾಂಸನಾಗಿ, ವಯಸ್ಕ ರಾಣಿಗೆ ಸೇವಕನಾಗಿ, ಪ್ರಿಯಕರನಾಗಿ ಕತೆಯ ತುಂಬೆಲ್ಲಾ ಕಾಣಿಸಿಕೊಳ್ಳುತ್ತದೆ. ಸಂಶೋಧನೆಯ ಕೂಸೆಂದು ಹೇಳುವ ಕ್ರಿ ಪೂ ೧೫೦೦ಕ್ಕೂ ಹಿಂದಿನ ಈ ಕಥಾಕಾಲದಲ್ಲಿ  ಮೂರನೇ ಶತಮಾನದ ವಾತ್ಸಾಯನನ ಹೆಸರನ್ನು ಲೇಖಕರು  ನೆನಪಿಸಿದ್ದಾರೆ. ಸ್ಪೋಟಕಗಳ ಆವಿಷ್ಕಾರವು ಹತ್ತನೇ ಶತಮಾನಕ್ಕಿಂತಲೂ ಹಳೆಯದೇನಲ್ಲ. ಇಲ್ಲಿ ಲೇಖಕರು, ಕ್ರಿ.ಪೂ ೧೫೦೦ ರ ಕಾಲದಲ್ಲಿ ಶಂಬರ ಎಂಬ ಮ್ಲೇಚ್ಛನಿಂದ ಸ್ಪೋಟಕಗಳ ಬಳಕೆಯನ್ನು ಕೃತಿಯಲ್ಲಿ ಕಾಣಿಸಿದ್ದಾರೆ. ಸ್ಪೋಟಕಗಳ ತಯಾರಿಕೆಯು ಮೊಟ್ಟಮೊದಲಿಗೆ ಆದದ್ದು ಚೈನಾ ದೇಶದಲ್ಲಿ . ಚೈನಿಗಳನ್ನು ಮ್ಲೇಚ್ಛರೆಂದು ಕರೆಯಲಾಗುವುದಿಲ್ಲ.  ಯೂರೋಪಿಯನ್ ಮೂಲದ ಜನಾಂಗವನ್ನಷ್ಟೇ ಮ್ಲೇಚ್ಛರು ಎಂದು ಪರಿಗಣಿಸಲಾಗುವುದು. ಆದರೂ ೩೫೦೦ ವರ್ಷಗಳ ಹಿಂದೆ  ಯೂರೋಪಿಯನ್ ಜನರು ಭಾರತದಲ್ಲಿ ಸ್ಫೋಟಕಗಳನ್ನು ಬಳಸಿದ್ದರೆಂಬುದು ಅಷ್ಟು ಸಮಂಜಸವಾಗಿಲ್ಲ. ಈ ಕಾದಂಬರಿಯ ಕಥಾವಸ್ತು ಓದುಗರಿಗೆ ಇಷ್ಟವಾಗಬಹುದು. ಒಮ್ಮೆ ಓದಬಹುದಾದ ಪುಸ್ತಕ.

 

 

Rating
No votes yet