ಕಿರುಗತೆ : ಬೀಗ್ರೂಟ...

ಕಿರುಗತೆ : ಬೀಗ್ರೂಟ...

 

"ಮ್.... ಲೇ ಕೆಂದ, ನೆನುಸ್ಕೊಂಡ್ರೆ ಇಷ್ಟ್ ಖುಷಿಕೊಡುತ್ತಲ್ಲಾ ಇನ್ನೂ ಮಧ್ಯಾಹ್ನದ್ಮೇಲೆ ಊಟ ಬಾರಿಸ್ಬೇಕಾದ್ರೆ ಹೆಂಗ್ ಅನ್ನಿಸ್ಬೌದು?."  ಅಂತ ಹೇಳಿದ ಕರಿಯ ತನ್ನ ಉದ್ದ ಮೂತಿಯಿಂದ ಹೊರಗಿನ ಗಾಳಿಯನ್ನು ತನ್ನ ಶ್ವಾಸಕ್ಕೆ ಸೇರಿಸಿತು. ಕರಿಯನ ಮಾತಿಗೆ ಸಮ್ಮತಿಸಿದಂತೆ ಟಾಮಿ ತನ್ನ ಬಾಲ ಅಲ್ಲಾಡಿಸಿ  ಜೊಲ್ಲಿನ ಒಂದೆರಡು ಹನಿಗಳನ್ನು ನೆಲಮುಟ್ಟಿಸಿತು. ಅಡಿಗೆ ಪ್ರಾರಂಭವಾಗುವುದಕ್ಕೂ ಮುಂಚೆಯೇ ಅಡಿಗೆ ಮನೆಯಿಂದ ಮಸಾಲ ವಾಸನೆಯನ್ನು ಹೀರಲು ಪ್ರಯತ್ನಿಸುತ್ತಿದ್ದ ಕರಿಯನನ್ನು ನೋಡಿ "ಸೊಗಸಾದ ಕಲ್ಪನೆ, ಸೊಗಸಾದ ಕಲ್ಪನೆ! " ಎಂದು ಟಾಮಿ ಬಾಲವಲ್ಲಾಡಿಸಿ ತನ್ನ ಮೆಚ್ಚುಗೆ ಸೂಚಿಸಿತು. ಟಾಮಿ, ಗಂಡು ನಾಯಿ. 'ಇ' ಕಾರಾಂತವಾಗುವ ಹೆಸರುಗಳು ಸಾಮಾನ್ಯವಾಗಿ ಹೆಣ್ಣಿಗೇ ಮೀಸಲಿದ್ದರೂ, ಟಾಮಿ ಮಾತ್ರ ಅದಕ್ಕೆ ಅಪವಾದ!. ಬಣ್ಣದಲ್ಲಿ ಕೊಂಚ ಕೆಂಪು, ಎಮ್ಮೆಯ ಮೂಗುದಾರದ ಎರಡು ಪಟ್ಟಿರುವ ಅದರ ಸಣ್ಣಬಾಲ, ಅಷ್ಟೇನೂ ದಷ್ಟಪುಷ್ಟವಲ್ಲದ, ಸಣಕಲು ಕಾಲುಗಳ ಕಾಯ!, ಪಾಪ ಬಡಪ್ರಾಣಿ. ಆದರೆ ಅದರ ಯಜಮಾನ ಹೇಳಿಕೊಳ್ಳುವಷ್ಟೇನೂ ಬಡವನಲ್ಲ. ಆದರೂ ಉದಾರತೆಯಲ್ಲಿ ಕೊಂಚ ಬಡವನೆ.  ಕರಿಯನ ಹೆಸರು 'ಅ'ಕಾರಾಂತವಾಗಿದ್ದರೂ ಅದು ಗಂಡು ನಾಯಿಯಲ್ಲ. ಬದಲಿಗೆ ಟಾಮಿಯ ಗೆಳತಿ. ತನ್ನ ಯಜಮಾನನ ಮನೆಯಲ್ಲಿ ಏನೋ ಸಮಾರಾಧನೆ ಇರುವದನ್ನು ಮನಗಂಡಿದ್ದ ಟಾಮಿ, ಒಂದೆರಡು ಕೂಗು ಹಾಕಿ ಇನ್ನೂರ್ ಮೀಟರ್ ದೂರದಲ್ಲಿರುವ ರಾಮಪ್ಪನವರ ಮನೆ ನಾಯಿ ಕರಿಯನಿಗೆ ಶ್ರುತಿ ಸಂದೇಶ ಕಳಿಸಿತ್ತು.  ಔತಣದ ಸಂದೇಶ ಬಂದಿದ್ದೇ ತಡ, ಮನೆ ಬೆಕ್ಕಿನ ಜೊತೆ ತನ್ನ ವೈಷಮ್ಯವನ್ನು ಕಳೆದುಕೊಂಡು ಕರಿಯ ಟಾಮಿಯಿದ್ದೆಡೆಗೆ ದೌಡಾಯಿಸಿತ್ತು.

ಜೋಡಿಗಳು ನಿಮಿಷಕ್ಕೆ ನೂರಿಪ್ಪತ್ತು ಸಲ ಉಸಿರುಬಿಡುತ್ತ, ಉಸಿರು ಎಳೆಯುತ್ತ ತಮ್ಮ ಕನಸು ನನಸಾಗುವ ಪರಿಯನ್ನು ಎದುರು ನೋಡುತ್ತ ಸೈಲೆಂಟ್ ಆಗಿ ಕುಳಿತವು.

    ಆದರೂ ಕರಿಯನಿಗೆ ಯಾಕೋ ಅನುಮಾನ ಬಂದು "ಟಾಮಿ, ಮಾಹಿತಿ ಸರಿಯಾಗಿ ಸಿಕ್ಕಿದೆಯೋ!?" ಎಂದು ಕೇಳಿತು. ಕಾರಣ, ಯಾರಾದರೂ ಸಾಯದ ಹೊರತು, ಹಳ್ಳಿಯಲ್ಲಿ ಈ ರೀತಿಯ ಬಾಡೂಟದ ವ್ಯವಸ್ಥೆ ಆಗುತ್ತಿದ್ದದ್ದು ಅಪರೂಪವೇ!.

"ಮ್ಮ್ಮ್..ವೌ ವೋ.."  ಅನ್ನುತ್ತ ಟಾಮಿ "ಇವತ್ತು ಬಾಡೂಟ, ಇದ್ರೂ ಇರ್ಬಹುದು.." ಎಂದು ಸೂಚಿಸಿತು.

    ಕಾಳೇ ಗೌಡ್ರು ಮಗ ಸತೀಶನಿಗೆ ಹೊಳೆನರಸೀಪುರದಿಂದ ಮೊನ್ನೆ ತಾನೇ ಹೆಣ್ಣು ತರಲಾಗಿತ್ತು. ಮೊದಲನೇ ಬಾರಿಗೆ  ಬೀಗರು ಹೊಳೆನರಸಿಪುರದಿಂದ ಗೌಡ್ನಳ್ಳಿ ಗೆ  ಬರುತ್ತಿದ್ದರು.  ಆಗಿದ್ದಾಗ ಅದು ಭರ್ಜರಿ ಬೀಗ್ರೂಟ ಆಗಿರ್ಲೇ ಬೇಕು. ಹೊಳೆನರಸೀಪುರ ಅಂದ ಮೇಲಂತೂ ಆ ಬಿಗ್ರೂಟ ವೈಭವದ ಬಾಡೂಟ ಆಗುವ ಎಲ್ಲಾ ಲಕ್ಷಣಗಳನ್ನೂ ಒಳಗೊಂಡಿತ್ತು. ಅದೂ ಅಲ್ಲದೇ ಒಂದ್ ನಾಲ್ಕು ತಿಂಗಳ ಹಿಂದೆ ಕುರುಬ್ರಳ್ಳಿಯಿಂದ  ಕಾಳೇಗೌಡ್ರು ಒಂದ್ ಕಟ್ಟು ಮಸ್ತಾದ ಟಗರನ್ನು ತಂದು ಸಾಕಿದ್ರು. ತಂದ ನಾಲ್ಕೇ ದಿನಕ್ಕೆ ಟಗರು ತನ್ನ ಪೊಗರನ್ನು ತೋರಿಸಿತ್ತು. ತನ್ನ ಅಂಕುಡೊಂಕಾದ ಕೋಡಿನಿಂದ  ಟಾಮಿಯ ಬಲಗಾಲಿಗೆ ತಿವಿದಿತ್ತು. ಹುಟ್ಟಿನಿಂದಲೂ ತನ್ನ ಏಕಸ್ವಾಮ್ಯತೆಯನ್ನು ಉಳಿಸಿಕೊಂಡಿದ್ದ ಟಾಮಿಗೆ ಇದು ಸಹಿಸಲಾಗದ ಸಂಗತಿಯಾಗಿತ್ತು. "ಅದೆಷ್ಟು ದಿನ ಹಾರಾಡ್ತೀಯೋ ಹಾರಾಡು. ಊರ ಸಾಲುಣ್ಸೇ ಮರದಮ್ಮನ ಜಾತ್ರೆ ಬರ್ಲಿ,ಕೊಬ್ಬು ತಾನ್ ತಾನೇ ಇಳಿದು ಹೋಗತ್ತೇ?" ಅಂತ ಮನಸ್ಸಿನಲ್ಲಿಯೇ ಬೈದು ಕೊಂಡಿತ್ತು. ಇವತ್ತು ಬೀಗ್ರೂಟದ ಏರ್ಪಾಟಾಗಿದ್ದರಿಂದ, ಟಗರಿನ ಪೊಗರು ಇಳಿದಿರಬಹುದು ಎಂದು ಟಾಮಿ ಊಹಿಸಿತ್ತು. ಅಡಿಗೆ ಮನೆಯಲ್ಲೂ ಜನಗಳ ಓಡಾಟ ಬಿಡದೆ ಸಾಗಿತ್ತು. ಗಂ ಗಂ ವಾಸನೆ ಕೂಡ  ಕಾಫೀ ಗಿಡಗಳ ನಡುವಿನಿಂದ ಬಂದು ಟಾಮಿ ಕರಿಯರ ಮೂಗು ಬಡಿಯುತಿತ್ತು.

 

"ಆದ್ರೂ, ಸಣ್ಣಪ್ಪನವರ ಮನೆ ಬಾಡೂಟದ ಹಾಗಿಲ್ಲ ಬಿಡು!" ಎಂದು ಕರಿಯ ಟಾಮಿಗೆ ಹೇಳಿತು. "ಕರೆದು ಔತಣ ಕೊಟ್ರೆ, ಸಿದ್ರಾಮಯ್ಯನ ಅಕ್ಕಿ ನಾನ್ ತಿನ್ನಲ್ಲ ಅಂತ ಹೇಳಿದ್ರಂತೆ.  ಆ ಥರ ಆಯ್ತು ಇವಳ್ ಕತೆ. ಕರೆದಿರೋದೆ ಬಿಟ್ಟಿ ತಿನ್ನೋಕೆ, ಈ ರಾಮಾಯಣ ಬೇರೆ" ಅಂತ ಟಾಮಿ ಮನಸ್ಸಿನಲ್ಲಿಯೇ ಅಂದುಕೊಂಡಿತು. ಆದರೂ ಟಾಮಿಗೂ ಅಂಥ ಹೇಳಿಕೊಳ್ಳುವ ವಾಸನೆ ಏನೂ ಅಡಿಗೆ ಮನೆಯಿಂದ ಬಂದಂತೆ ಕಾಣಲಿಲ್ಲ. ಆದರೆ ತನ್ನ ಯಜಮಾನ ಕಾಳೇಗೌಡ್ರ  ನೆಗೆಟಿವ್ ಉದಾರತೆ ಟಾಮಿಗೆ ಗೊತ್ತಿತ್ತು. ಹಾಗಾಗಿ ಏನೋ ಮಸಾಲೆ ಗಿಸಾಲೆ ಕಡಿಮೆ ಹಾಕಿರ್ಬೇಕು ಅಂದುಕೊಂಡಿತು. ಮಲೆನಾಡಿನಲ್ಲಿ ವಿಶೇಷವಾದ ಮಸಾಲೆಯ ಚಕ್ಕೆಯ ಮರಗಳು ತೋಟದಲ್ಲಿ ಬೆಳೆದುಕೊಂಡಿರುತ್ತವೆ. ಚಕ್ಕೆಗೇನೂ ಕೊರತೆ ಇರೋದಿಲ್ಲ. ಇದ್ದರೇ ಲವಂಗದ್ದೇ. ಬೆಳ್ಳುಳ್ಳಿ ಈರುಳ್ಳಿ, ಕೆಂಪುಮೆಣಸಿನ ಕಾಯಿಗಳು ಉತ್ತರ ಕರ್ನಾಟಕದ ಸರಕುಗಳಾಗಿದ್ದರಿಂದ  ಅವುಗಳನ್ನು ಅಡಿಗೆಗೆ ಬಳಸಲು ಕಾಳೇ ಗೌಡ್ರು ಜಿಪುಣತನ ತೋರಿಸಿರಬಹುದೇನೋ!. ಆದರೆ ಕೆಂಪು ಮೆಣಸಿನಕಾಯಿ ಬದಲು ಕರಿ ಕಾಳು ಮೆಣಸನ್ನು ಬಳಸಿ ಹೇಗೋ ಮ್ಯಾನೇಜ್ ಮಾಡಿ ಬಹುಶಃ ಅಡಿಗೆ ಕೆಡಿಸಿರಬಹುದೆಂದು ಟಾಮಿಗೆ ಅನ್ನಿಸಿತು.

"ಥೂ, ಮಗನ ಮದ್ವೇಗಾದ್ರೂ ಸ್ವಲ್ಪ ಜಿಪುಣತನ ಬಿಡಬಾರ್ದೇ" ಅಂತ ಟಾಮಿ ಮನಸ್ಸಿನಲ್ಲಿಯೇ ಅಂದು ಕೊಂಡಿತು.

 

ಗಂಟೆ ಒಂದಾಯಿತು. ಅಡುಗೆ ಮನೆಯಲ್ಲಿ ಭರ್ಜರಿ ಓಡಾಟ ನಡೆದಿತ್ತು.  ಕಾಳೇ ಗೌಡ್ರು ಮಗ ಸತೀಶ ತನ್ನ ನವ ವಧು ಧನಲಕ್ಷ್ಮಿಗೆ ತಮ್ಮ ತೋಟ ತೋರಿಸ್ಕೊಂಡು ಬರೋದಕ್ಕೆ ಹೋಗಿದ್ದ. ಬೀಗ್ರು ಹೊಳೆನರಸೀಪುರದಿಂದ ಹೊರಟು ಬೇಲೂರ್  ಮುಟ್ಟೋದ್ರೊಳ್ಗೆ ತಮ್ಮ ಗಾಡಿ ಕೆಡಿಸ್ಕೊಂಡಿದ್ರು. ಹಗರೆ ಮತ್ತು ಬೇಲೂರ್ ಮಧ್ಯೆ ಸಿಕ್ಕ್ ಹಾಕ್ಕೊಂಡಿದ್ದ ಗಾಡೀನ ರಿಪೇರಿ ಮಾಡೋದಕ್ಕೆ ಬೇಲೂರಿಗೆ ಹೋಗಿ ಮೆಕ್ಯಾನಿಕ್ ಫಯಾಝ್ ನ ಕರೆದ್ಕೊಂಡು ಬಂದಿದ್ರು. ಒಂದು ಗಂಟೇಲಿ ಗಾಡಿ ರಿಪೇರಿ ಮಾಡಿ ಫಯಾಜ್ ನಾನೂರ್ ರೂಪಾಯಿ ದುಡ್ಡ್ ಕಿತ್ಕೊಂಡಿದ್ದ. ಆ ಸಿಟ್ಟು ಬೀಗ್ರು ನಂಜೇಗೌಡ್ರುನ ಇನ್ನೂ ಬಿಟ್ ಹೋಗಿರ್ಲಿಲ್ಲ. ಆದ್ರೂ ಪರ್ವಾಗಿಲ್ಲ, ಇವತ್ತು ಒಳ್ಳೇ ಬಿಗ್ರೂಟವಲ್ವೇ ಅಂತ ತಮಗೆ ತಾವೆ ಸಮಾಧಾನಪಟ್ಕೊಂಡಿದ್ರು.   ಅಂತೂ ಗಾಡಿ ಎರಡೂವರೆ ಗಂಟೆಗೆ ಗೌಡ್ನಳ್ಳಿಗೆ ಬಂತು.  ಬಂದ ಗಾಡಿಯಲ್ಲಿ ಮಕ್ಕಳು ಮರಿಗಳನ್ನು ಹೊರತುಪಡಿಸಿ  ಏನಿಲ್ಲವೆಂದರೂ ಒಂದೈವತ್ತು ಜನ ಕಿಕ್ಕಿರಿದಿದ್ದರು. ಗಾಡಿಯ ಮೇಲೆ  "ಗೌಡ್ರು ಗೂಳಿ" ಅಂತ ದೊಡ್ಡದಾಗಿ ಬರೆಸಿದ್ರು. ಹಿಂದಕ್ಕೆ ಒಂದು ಗಣಪತಿ ಚಿತ್ರವನ್ನೂ ಬಿಡಿಸಲಾಗಿತ್ತು. ಕಲರ್ ಕಲರ್ ಗಾಡಿ!.

 

ಗಾಡಿ ಅಂಕುಡೊಂಕಿನ ಹಾದಿಯಲ್ಲಿ ಸಾಗಿ ಕಾಳೇ ಗೌಡ್ರು ಮನೆ ಮುಂದೆ ಬಂದು ನಿಂತಿತು. ಗಾಡಿಯೂ, ಅಂತೂ ತನಗೂ ಮೋಕ್ಷ ಸಿಕ್ಕಿತೇನೋ ಅನ್ನುವಂತೆ ಉಸ್ಸ್ ಎಂದು ಶಬ್ದ ಮಾಡುತ್ತ ನಿಂತು ಕೊಂಡಿತು. ಫುಟ್ ಬೋರ್ಡ್ನಲ್ಲಿ ತೂಗಾಡ್ಕೊಂಡ್ ಬರುತ್ತಿದ್ದ ಒಂದಿಬ್ರೂ ಕಪ್ಪು ಹುಡುಗ್ರು ಛಂಗನೆ ಕೆಳಕ್ಕೆ ನೆಗೆದ್ರು, ಅವರಲ್ಲಿ ಒಬ್ಬ, ಕರಿಯನಿಗೆ 'ಅಚ್ಚಾ.." ಎಂದು ಓಡಿಸೋದಕ್ಕೆ ಕಲ್ ತಗೊಂಡ. ತನ್ನ ಗೆಳತಿ 'ಕರಿಯ'ಳಿಗೆ ಸಪ್ಪೋರ್ಟಿವ್ ಆಗಿ ಟಾಮಿ ಒಂದೆರಡು ಸಲ ಬೊಗಳಿ ಅತ್ತ ಕಡೆ ಸರಿದು ಕುಳಿತುಕೊಂಡಿತು. ತನ್ನ ಸ್ವಾಮ್ಯತೆಯನ್ನು ಕಿತ್ತುಕೊಳ್ಳುವರನ್ನು ಕಂಡರೆ ಟಾಮಿಗೆ ಅಷ್ಟಕ್ಕಷ್ಟೇ!

 

ಗಾಡಿಯಿಂದ ಕೆಳಗಿಳಿದ ಬೀಗರ ಪರಿವಾರದಲ್ಲಿ ಕೆಲವರು ತೋಟದ ಕಡೆ ಜಲಬಾಧೆ ತೀರಿಸಿಕೊಳ್ಳಲು ಹೊರಟರು. ಬೀಗ್ರು ನಂಜೇಗೌಡ್ರು ತಂಗಿ ಸುಮಿತ್ರಮ್ಮ ತನ್ನ ದೊಡ್ಡ ಕಪ್ಪು ಕಾಯದ ಜೊತೆ ಮೊದಲು ಅಡಿಗೆ ಮನೆಯಕಡೆ ನಡೆದಳು. ಬಸ್ಸಿನಿಂದ ಇಳಿದಾಗಲೇ ಆಕೆಗೆ ಏನೋ ಸಂದೇಹ ಬಂದಿತ್ತು. ಅಡಿಗೆ ಮನೆಯಿಂದ ಹುಬ್ಬುಗಂಟಿಕ್ಕಿಕೊಂಡು ಬಂದವಳೇ "ಅಣ್ಣಾ, ಇಂತವರ್ ಮನೇಗಾ  ಹೆಣ್ಣ್ ಕೊಡೋದು?, ಸ್ವಲ್ಪನಾದ್ರೂ ನಮ್ ಮೇಲೆ ಮರ್ಯಾದೆ ಬೇಡ್ವಾ?, ಬೀಗ್ರೂಟ ಅಂದ್ರೇನು ಆಟ ಅಂತ ತಿಳ್ಕೊಂಡಿದ್ದಾರ" ಅಂತ ಅಣ್ಣನಿಗೆ ಹೇಳಿದಳು.  ಅಣ್ಣನಿಗೂ ಆ ಹೊತ್ತಿಗಾಗಲೇ ಬೀಗರ ಔತಣದ ಪಟ್ಟಿ ತಲುಪಿತ್ತು. ಹುಡುಗಿಯ ಅಣ್ಣ ಕುಮಾರ "ಏನಪ್ಪಾ, ಪುಳಿಯೊಗ್ರೆ, ಮಸ್ರನ್ನ  ತಿನ್ನಾಕ್ ಇಲ್ಲಿವರ್ಗೂ ಬರ್ಬೇಕಿತ್ತೇ?" ಅಂತ ಹೊಳೆನರ್ಸೀಪುರದ ಭಾಷೆಯಲ್ಲಿ ಕೇಳಿಯೇ ಬಿಟ್ಟ.  ನಂಜೇಗೌಡ್ರು ಪರಿವಾರದಲ್ಲಿ ಕೆಲವರು ರೊಚ್ಚಿಗೆದ್ದರು. ಪಾಪ ಅವರ ತಲೆಯಲ್ಲಿ ಏನೇನೋ ಕಲ್ಪನೆಗಳಿದ್ದವು. ದೊಡ್ಡ ಜಗಳವೇ ನಡೆಯಿತು. ಆದರೂ ಹಸಿದಿದ್ದ ಹೊಟ್ಟೆ ಕೇಳಬೇಕೆ?, ಕೊನೆಗೂ ಸಂಜೆ ನಾಲ್ಕು ಗಂಟೆಯ ಮೇಲೆ ನಿಪ್ಪಟ್ಟು, ಹಪ್ಪಳ, ಕೋಸಂಬರಿ, ಸೌತೆ ಪಲ್ಯ, ಪಲಾವ್, ಪಾಯಸ , ಮಸಾಲ ವಡೆಗಳನ್ನ ತಿಂದು ತಮ್ಮ ಹೊಟ್ಟೆ ತುಂಬಿಸಿಕೊಂಡರು. ಕಾಳೇಗೌಡ್ರೂ, ಮುಂದಿನ ಸಾಲುಣ್ಸೇ ಮರದಮ್ಮನ ಜಾತ್ರೆಯಲ್ಲಿ ಖಂಡಿತಾ ಒಳ್ಳೆಯ ಬಾಡೂಟದ ಏರ್ಪಾಟು ಮಾಡುತ್ತೇನೆಂದು ಹುಸಿ ಭರವಸೆಯನ್ನು ಕೊಟ್ಟರು. ಸಂಜೆಯಾದರೂ ಟಾಮಿ ಮತ್ತೆ ಕರಿಯರಿಗೆ ತಮ್ಮ ಇಂದಿನ ಭೋಜನ, ಬಾಡೂಟದ ಭೋಜನ ಎಂಬ ಕಲ್ಪನೆ ತಲೆಯಿಂದ ಹೋಗಿರಲಿಲ್ಲ. ಎಲ್ಲರ ಊಟ ಮುಗಿದಾದ ಮೇಲೆ ಮುತ್ತುಗದ ಎಲೆಯಲ್ಲಿ ಮಾಂಸದ ಚೂರುಗಳನ್ನು ಕಾಣಲು ಹೋದ ಕರಿಯ, ಟಾಮಿಗೆ ಕೋಸಂಬರಿ, ಉಪ್ಪಿನಕಾಯಿ ಹಪ್ಪಳದ ಚೂರುಗಳು ಸಿಕ್ಕವು.  ಅಷ್ಟರಲ್ಲೇ ಗಂಟೆಯ ಜಣಜಣ ಶಬ್ಧ ಟಾಮಿಗೆ ಕೇಳಿತು. ತಿರುಗಿ ನೋಡಿದಾಗ ಟಗರು ತನ್ನ ಕೊರಳಿಗೆ  ಕಟ್ಟಿದ್ದ ಗಂಟೆಯನ್ನು ಅಲ್ಲಾಡಿಸಿಕೊಂಡು ನಿಂತಿತ್ತು.