ಎಸಳು ಸಾಯುವ ಹೊತ್ತು
(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ)
ದಿನ ಅರಳಿ ಸಾಯುವ ಹೂವಿಗೆ ಎಸಳಿನ ಮಿಡಿತ
ಹೊಸ ದಿನದಿ ಹಸಿರು ಗಿಡ ಮತ್ತೊಮ್ಮೆ ಬಸಿರಾಗಿ
ಪ್ರಸವಿಸಿದ ಸಾವಿರ ಕಂಪಿನ ಪುಷ್ಪಗಳ ಸೆಳೆತ
ದಿನ ಸತ್ತ ಮಕ್ಕಳಿಗೆ ಗೋಳಾಡಿ ಅಳುವುದೇ ಗಿಡ ?
ಅತ್ತರೆ ಸೂರ್ಯ ನಕ್ಕಾನು ವಿಪುಲ ಬೆಳಕು ನೀಡಿದಾತ
ಸಾಯುವುದು ಸಹಜಧರ್ಮ, ಬದುಕುವುದು ಕರ್ಮ
ಬೇಗುದಿಗೆ ಸಿಕ್ಕ ಮನ ಬೆಪ್ಪಾಗಿ ಕಪ್ಪಾಗಿ ಕರಟಿ
ಕೊನೆಗೆ ಸುತ್ತಲಿನ ಮನುಜರಿಗೆ ನಡುಕ ಹುಟ್ಟಿಸಿ
ಬೆಟ್ಟವೇರುವ ತವಕ ಕಾಣುವುದು, ನಟ್ಟ ನಡುವೆಯಲಿ
ಕೊಟ್ಟ ದೇವನು ಕರೆಯುವ ಮುನ್ನವೇ ಕೈ ಚಾಚಿ
ಕಾಡಿರುಳು ಕಂಡ ಮನ ತನ್ನ ಸ್ವಂತದ್ದೇ ಆದರೂ
ಅರ್ಥವಾಗದೇ, ಬೇರೆ ಮನದ ತಪ್ಪನು ಕಂಡಾಗ
ಕೊತ ಕೊತ ಕುದಿದು ತನ್ನೊಳಗೆ ಮಗುಚಿ ಕಿವುಚಿ
ಬಾಷೆ ಮರೆತ ಮರ್ಕಟವಾಗಿ ಮಣ್ಣಿನ ಸ್ವಾದ ಅರಿಯದೇ
ಮೂರ್ಖತನದ ಮಾನವತೆಗೆ ಹಸಿರು ಗಿಡ ಸವಾಲು
ಕಾಮನೆಗೆ ಕಾವಿ ಕಾವಲು ಇಲ್ಲಿ, ಖದೀಮರಿಗೆ ಸ್ವರ್ಗ
ಕನಕಕ್ಕೆ ಕೋವಿಯ ಮದ್ದುಗುಂಡಿನ ಸತ್ತ ಮದರಂಗಿ
ಕಟಕಟೆ ಯಾವುದು? ಹೊಟ್ಟೆಗಾಗಿ ಕದ್ದ ಬಡವನಿಗೆ
ರಟ್ಟೆ ಕುಟ್ಟಿ ಪುಡಿಮಾಡಿ ಗೇಯ್ದವ ಗಾಂಪರೆನಿಸಿಕೊಂಡ
ಸಿಕ್ಕ ಸಿಕ್ಕ ದೇಶದ ತುಂಡನ್ನು ಮಾರಿದವ ಸೊಂಪಾದ
ಸೆರೆ ಸಿಕ್ಕ ಮನದ ಹಂತಕನನ್ನು ಹಿಡಿದು ಬಡಿದು
ಏಕೆ ಹೀಗೆ ಮಾಡಿದೆ ಎಂದರೆ, ಬದುಕಲು ಎನ್ನುತ್ತಾನೆ.
ನಿಂತ ಮರ, ಬಾಗುವ ಬಳ್ಳಿ, ಬದುಕಲು ಆಮ್ಲಜನಕವಿತ್ತರೂ
ಬೀಗುವುದಿಲ್ಲ ಏರಿ ಏಗುವುದಿಲ್ಲ, ಬದುಕುತ್ತವೆ ಭಾಷ್ಪವಾಗಿ.
ಏನು ಮಾಡದೆ, ಕಾಣುವುದೆಲ್ಲವ ತನ್ನದೆನ್ನುವವ ಮನುಜ
ಮದಿಸಿದಷ್ಟು ಅಮೃತ ಸಿಗಬಹುದೆಂದು ಕುಲುಕಿಹರು
ವಾಸ್ತವದಲ್ಲಿ ಸತ್ತು, ಭವಿಷ್ಯ ರೂಪಿಸುವ ಹುನ್ನಾರ
ಕತ್ತಲೆಗೆ ಕೃತಕ ಬೆಳಕು ಕಟ್ಟಿ, ತಂಪಿಲ್ಲದೇ ತರಗುಟ್ಟಿ
ಕನಸು ಸತ್ತು, ದಾರಿ ಸವೆದು, ಗುರಿ ಮರೆತು ನಡುಗಿ
ಮಧ್ಯ ರೋಡಿನಲಿ ಮಾನವಿಲ್ಲದೆ ಕಾಯುವರು ಗಂಟೆಗಟ್ಟಲೇ
ಮರೆತ ಮಾತೃಭಾಷೆ, ಅರ್ಧಕಲಿತ ಪರಭಾಷೆ ಪ್ರಯೋಗ
ಅದುರಿದ ನಾಟಕ ರಂಗ, ಬಂಗಲೆಯಲಿ ತಾಳ್ಮೆಇರದ ಶ್ರೀಬಡವರು
ದುಡ್ಡಿಗೆ ಸಿಕ್ಕ ಪಾಠ, ದಡ್ಡನನ್ನಾಗಿಸಿತೇ? ಹೆಡ್ಡನನ್ನಾಗಿಸಿತೇ?
ಒಗ್ಗರಣೆ ಮಾತಿಗೆ ಕಿಟಾರನೆ ಕಿರುಚಿದ ಕಪ್ಪು ಮಗು ಬೆಳೆದು
ಕೆಂದುಟಿಯ ಹೆಣ್ಣಿಗೆ ಮಾರುಹೋಗಿ ಮಸಣಸೇರಿತೆ?
ದೇವರ ಗುಡಿಯ ಗಂಟೆ ಅಲ್ಲಾಡಿಸಿ ದೇವನ ಗೆದ್ದೆನೆಂದು
ಸಾಸಿವೆ ಕಣ್ಣಿನಲಿ ಕಂಡುದೆಲ್ಲವ ತನ್ನದೆಂದು ಕಬಳಿಸಿ
ಸುಖಕ್ಕೆ ತಕ-ತೈ ಕುಣಿದು, ಮರಳಿ ಮುದುಡಿ ಬೈದು
ನಾಕು ಕಾಲಿನ ಬುದ್ದಿ ಎರಡರಲ್ಲೆ ಹಿಸಿದು ತೋರ್ಪಡಿಸಿ
ಪಟಕ್ಕನೇ ಯಾರಿಗೂ ಹೇಳದೇ ಪರಾರಿ ಮನುಜ ಶವವಾಗಿ
ಎಲ್ಲದಕೂ ಸತ್ತ ಎಸಳು ಸಾಕು, ತಾನು ಸತ್ತಿಲ್ಲ
ಹಿಂದೆ ಬದುಕಿದ್ದೆ ಎಂದು ಹೇಳಲು ಮೌನವಾಗಿ.
ಸವಾಲು ಎಸೆಯುವ ಎಸಳಿಗೆ ಉತ್ತರಿಸಿ ಆರ್ಭಟಿಸು ನೋಡೊಣ
ಕೆಚ್ಚು ಎನ್ನುವುದು ಅಹಂ ಶೂನ್ಯವಾಗುವುದರಲ್ಲಿರಬೇಕು
ಕಡೆವರೆಗೆ ಬದುಕಿದರೂ ಗಿಡವಾಗಲಾರೆ ಎಲೆ ಮಹಾಮನುಜ
--ನವೀನ್ ಕುಮಾರ್ ಜೀ ಕೇ