ಕಥೆ: ಪರಿಭ್ರಮಣ..(56)
(ಪರಿಭ್ರಮಣ..55ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ನಿಜ ಹೇಳಬೇಕಾದರೆ ದ್ವಂದ್ವ ಸಿದ್ದಾಂತಕ್ಕೆ ಬೆಳಕನ್ನು ಮೀರಿಸಿದ ಮಾತ್ತೊಂದು ಸೂಕ್ತ ಉದಾಹರಣೆಯೆ ಇಲ್ಲವೆಂದು ಹೇಳಬೇಕು... ಈ ಬೆಳಕಿನ ಜತೆ ಜಿಜ್ಞಾಸೆಯ ಜಗಳಕ್ಕಿಳಿಯಬೇಕಾದರೆ, ಕತ್ತಲೆಯನ್ನು ಹೊರಗಿಟ್ಟು ಜೂಟಾಟವಾಡಲಿಕ್ಕೆ ಸಾಧ್ಯವೆ ಇಲ್ಲ. ಆದರೆ, ಕತ್ತಲು ಎನ್ನುವುದು ಬೆಳಕಿನ ಅವಿಭಾಜ್ಯ ಅಂಗವೇನೂ ಅಲ್ಲವಲ್ಲ? ನಿಜ ಹೇಳುವುದಾದರೆ ಬೆಳಕಿನಲ್ಲಿರುವುದು ಬರಿ ಬೆಳಕೆ ಹೊರತು ಕತ್ತಲಲ್ಲ. ಉರಿಯುವ ಸೂರ್ಯ ಮಂಡಲದ ಅಂತರಾಳದ ನಿಗಿನಿಗಿ ಕೆಂಡ ಹೊರದೂಡುವುದು ಬರಿ ಬೆಳಕಿನ ಅಚ್ಚೆಯೊತ್ತಿದ ಶಾಖವೆ ಹೊರತು ಕತ್ತಲಲ್ಲ. ಆದರೆ ಆ ಶಾಖ, ಬೆಳಕು ಭೂಮಿಯಂತಹ ಆಕಾಶ ಕಾಯದ ಮೇಲೆ ಬಿದ್ದು ಪಾರ್ಶ್ವದಲಷ್ಟೆ ಆವರಿಸಿಕೊಂಡಾಗ, ಆ ವಸ್ತುವಿನ ತನ್ನದೆ ಆದ ಪ್ರಕ್ಷೇಪಿತ ನೆರಳಷ್ಟೆ ಕತ್ತಲಾಗಿ ಬಿತ್ತರಗೊಳ್ಳುವುದಲ್ಲವೆ ? ಅದೊಂದು ರೀತಿ ಪೂರ್ತಿ ಕತ್ತಲಲಿದ್ದ ವಸ್ತು ಬೆಳಕಿನ ದೆಸೆಯಿಂದಾಗಿ ಜ್ಞಾನೋದಯವಾದಂತೆ ಹೊಳೆಯುವ ಪ್ರಭೆಯಾಗಿ ಪರಿವರ್ತಿತಗೊಂಡರೂ, ಆ ಬೆಳಕಿಗೂ ವಸ್ತುವಿನಂತರ್ಗತ ಕತ್ತಲನ್ನು ನುಂಗಲಾಗುವುದಿಲ್ಲ.. ಬದಲಿಗೆ ಅದನ್ನು ತನ್ನ ಪ್ರಭಾವ ಕ್ಷೇತ್ರದಿಂದ ಮತ್ತೊಂದು ಬದಿಗೆ ಓಡಿಸಲಷ್ಟೆ ಸಾಧ್ಯ. ಅದೂ ಸಹ ಕತ್ತಲ ಅಂಚು ಸದಾ ಅಂಟಿಕೊಂಡೆ ಇರುತ್ತದೆಯೆ ಹೊರತು ಧಿಕ್ಕರಿಸಿ, ದೂರತಳ್ಳಿ ಬಿಟ್ಟು ಹೋಗುವುದಿಲ್ಲ... ಬೆಳಕು ಮೆಲ್ಲಮೆಲ್ಲನೆ ಚಲಿಸುತ್ತ ಕತ್ತಲನ್ನು ನುಂಗಿ ಕಬಳಿಸುತ್ತ ಹೋದರೂ, ಮತ್ತೊಂದು ಕಡೆಯಿಂದ ಅದೇ ಕತ್ತಲು ಬೆಳಕಿನ ಹಿಡಿತ ಬಿಡಿಸಿಕೊಳ್ಳುತ್ತ ಹೋಗುತ್ತದೆ - ಹೀಗಾಗಿ ಕತ್ತಲು ಬೆಳಕಿನ ಅನುಪಾತ ನಿರಂತರವಾಗಿ ಒಂದೇ ಸಮವಾಗಿರುತ್ತದೆ. ಬರಿಯ ಜಾಗ ಬದಲಿಸುತ್ತ ಚಲನೆಯಲ್ಲಿ ಸ್ಥಿರಾಂತರಗೊಳ್ಳುವುದನ್ನು ಬಿಟ್ಟರೆ, ಅವೆರಡರ ವಿಸ್ತೀರ್ಣದ ವಿಸ್ತಾರಾನುಪಾತ ಹೆಚ್ಚು ಕಡಿಮೆ ಒಂದೆ ಇರುತ್ತದೆ. ಬಹುಶಃ ಸೃಷ್ಟಿಯ ಎಲ್ಲಾ ಅಸ್ತಿತ್ವಗಳಲ್ಲೂ ಈ ಅನುಪಾತ ಒಂದೆ ಸಮನಿರದೆ ಬೇರೆ ಬೇರೆಯ ಅಸಮ ಅನುಪಾತವಿರುವ ಸಾಮಾನ್ಯ ಪರಿಸರದಲ್ಲಿ, ಕೇವಲ ಈ ಬೆಳಕು ಮತ್ತು ಕತ್ತಲೆ - ಇವೆರಡರ ಅಸ್ತಿತ್ವ ಮಾತ್ರವೆ ಸರ್ವಸಮಾನುಪಾತದಲ್ಲಿ ವಿಭಜಿತವಾಗಿದೆಯೇನೊ ಅನಿಸುತ್ತದೆ.. ಇವೆರಡು ಮಾತ್ರವೆ ತಲಾ ಶೇಕಡಾ ಐವತ್ತರ ಸರಿಸಮ ಅನುಪಾತದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದರಿಂದ, ಎರಡು ಸಮಬಲದಲ್ಲಿಯೆ ತಮ್ಮ ಹೋರಾಟ ನಡೆಸಿ ಕಾರ್ಯ ನಿರ್ವಹಿಸುತ್ತಿವೆ - ಸರದಿಯಂತೆ ಹಗಲಲ್ಲಿ ಸೂರ್ಯನ ಬೆಳಕಿನ ಮೇಲುಗೈಯಾದರೆ ಇರುಳಲ್ಲಿ ಕತ್ತಲ ವಿಜೃಂಭಣೆ. ಇವೆರಡರ ಸರಿಸಮ ಸಮತೋಲನದ ಪರಿಸ್ಥಿತಿಯನ್ನು ಸಾಧ್ಯವಾಗಿಸಿರುವ ಸಮತೋಲನಕಾರಕ ಕೊಂಡಿಯೆಂದರೆ - ಅರ್ಧ ಬೆಳಕು ಅರ್ಧ ಕತ್ತಲಿನಿಂದಾದ ನೆರಳು.. ಅದು ಕೂಡ ನಿರಂತರವಾಗಿ ಕತ್ತಲು ಮತ್ತು ಬೆಳಕು ಎರಡನ್ನು ಹಿಡಿದಿಡಲಾಗಲಿ, ಬಿಡುಗಡೆಯಾಗಲಿ ಮಾಡಲಾಗದು - ಅದೆ ಸಮಬಲ ಗರ್ವದ ಕಾರಣದಿಂದ. ಬದಲಿಗೆ ಆ ಸಮಬಲರ ನಡುವಿರುವ ಸಣ್ಣ ದೂರವನ್ನು ತನ್ನ ನೆರಳಿನ ರೂಪದಲ್ಲಿ ಆವರಿಸಿ ಮುಚ್ಚಿಕೊಂಡು ಎರಡರ ನಡುವಿನ ಸೆರಗಿನ ಕೊಂಡಿಯಂತೆ ವರ್ತಿಸತೊಡಗುತ್ತದೆ.. ಅವೆರಡು ನೇರ ಗುದ್ದಾಡಲೂ ಬಿಡುವುದಿಲ್ಲ, ಬೇರ್ಪಡಿಸಿಕೊಂಡು ಹಾರಿ ಹೋಗಲೂ ತಾವೀಯುವುದಿಲ್ಲ. ಅವೆರಡರ ಸಮಬಲದಲ್ಲೂ, ಸಮತೋಲನದಲ್ಲೆ ಬದ್ದವಾಗಿರುವಂತೆ ಭೂಮಿಕೆ ನಿಭಾಯಿಸುತ್ತದೆ.. ಬೆಳಕೆಂಬ ರಾಜಸದ ಮತ್ತು ಕತ್ತಲೆಂಬ ತಾಮಸದ ನಡುವಿನ ತಿಕ್ಕಾಟವನ್ನು ಸಂತೈಸಿ ಸಮತೋಲದಲಿರಿಸುವ ಸಾತ್ವಿಕ ನೆರಳಾಟ...ವಾಹ್ಹ್ ! ಆದರದು ನಿಜವಾಗಿಯೂ ನೆರಳೊ ಅಥವ ಆ ರೂಪದಲ್ಲಿರುವ ಮತ್ತಿನ್ನಾವುದೊ ಸಾರವೊ? ಅದನ್ನೂ ಮಥನದ ಇನ್ನೂ ಆಳಕ್ಕಿಳಿದು ಹೊಕ್ಕು ನೋಡಿಯೆ ಗ್ರಹಿಸಿಕೊಳ್ಳಬೇಕೆನೊ?
ಆದರೆ ಈ ಬೆಳಕು-ಕತ್ತಲೆಯಂತಹ ಯೂನಿವರ್ಸಲ್ - 'ವಿಶ್ವ, ಬ್ರಹ್ಮಾಂಡ ವ್ಯಾಪಿ' ಅಸ್ತಿತ್ವಗಳಿಗೆ ಕೇವಲ ಗ್ರಹ ತಾರೆಗಳೆರಡರ ಸಂಬಂಧದ ಪರಿಧಿಯೊಳಗಡೆಯೆ ವ್ಯಾಖ್ಯೆ ಬರೆಯಲ್ಹೊರಡುವುದು ಪೂರ್ತಿ ಸಂಮಂಜಸವೆನಿಸಲಾರದೇನೊ? ಬಹುಶಃ ಅದರ ಮೂಲ ಅಗಾಧತೆಯಲ್ಲಿ, ವೈಶಾಲ್ಯತೆಯಲ್ಲಿ ಮತ್ತು ಬೃಹತ್ಪ್ರಭಾವಿ ನೆಲೆಗಟ್ಟಿನ ಮಸೂರದಲ್ಲಿ ನೋಡಬೇಕು. ಮೊದಲಿಗೆ, ಏನೀ ಕತ್ತಲು ಬೆಳಕೆಂದರೆ? ಏನಿದರ ಮೂಲ ಅಸ್ತಿತ್ವದ ನಿಜವಾದ ಗುಟ್ಟು? ಇದು ಉದ್ಭವಿಸಿದ್ದೆಲ್ಲಿಂದ, ಹುಟ್ಟಿಕೊಂಡು ಬಂದುದಾದರೂ ಎಲ್ಲಿಂದ ? ಮಸಲಾ, ಇವು ಹುಟ್ಟಿದ್ದೆ ನಿಜವಾದರೆ ಯಾರು ಮೊದಲು ಬಂದವರು - ಬೆಳಕೊ, ಕತ್ತಲೆಯೊ? ಒಂದೂ ಉತ್ತರಗಾಣದ ದೊಡ್ಡ ಪ್ರಶ್ನಾರ್ಥಕವೆ ಆಗುತ್ತದೆಯೆ ಹೊರತು ನಿಚ್ಛಳ ಪರಿಹಾರದ ಬೆಳಕೆ ಕಾಣಿಸುವುದಿಲ್ಲ - ಯಾವುದಾದರು ತಾರೆಗಳಂತಹ ಮೂಲದಿಂದ ಬೆಳಕಿನ ನಿಷ್ಪತ್ತಿಯಾಗಿ ಕಾಲಯಾನದಲ್ಲಿ ಹೊರಟು ಬರುವುದೆನ್ನುವುದನ್ನು ಸುಲಭದಲ್ಲಿ ಗ್ರಹಿಸುವುದನ್ನು ಬಿಟ್ಟರೆ... ಹಾಗೆ ಹೊರಟು ಬಂದ ಗಳಿಗೆಯಿಂದ ಮುಂದಕ್ಕೆ, ಸ್ವಲ್ಪ ವಿವರಿಸಲು 'ಅರೆ-ಬರೆ' ಸಾಧ್ಯತೆ ಕಾಣಿಸುವುದಾದರೂ, ಆ ವಿವರಣೆಯೆ 'ಸರ್ವಾಂತಿಮ ಸತ್ಯ' ಎನಬಹುದಾದಂತಹ ಅಂತಿಮ ತೀರ್ಪಿನ ಹಂತಕ್ಕೆ ತಲುಪಲಾಗುವುದಿಲ್ಲ. ಉದಾಹರಣೆಗೆ ಬೆಳಕು ಸೂರ್ಯನಿಂದ (ಅಥವಾ ಅಂತಹ ತಾರೆಯಿಂದ) ಹುಟ್ಟಿ ಶಕ್ತಿ ಪ್ರಸರಣದ ರೂಪದಲ್ಲಿ ಹೊರಟಿದ್ದು ಅಂದುಕೊಂಡ ತಕ್ಷಣ, ಕತ್ತಲೆಯ ವಿವರಣೆ ತುಸು ಆರಾಮವಾಗಿಬಿಡುತ್ತದೆ - ಆ ಕತ್ತಲನ್ನುಂಟು ಮಾಡುವ ಬೆಳಕಿನ ಶಕ್ತಿಯಿಂದಾಗಿ. ಆದರೆ ಅದಕ್ಕೂ ಒಂದು ಹೆಜ್ಜೆ ಹಿಂದಿಟ್ಟು ಆ ತಾರೆಗಳನ್ನು ಬೆಳಕಿನ ಗೋಲಗಳನ್ನಾಗಿಸಿದ ಪ್ರಕ್ರಿಯೆಯನ್ನು ದಾಟಿ ಹಿಂದಿನ ಮೂಲಕ್ಕೆ ಹೋದರೆ, ಬೆಳಕೆ ಸೃಷ್ಟಿಯ ಮೂಲವಸ್ತುವೆ ? ಎಂಬ ದೊಡ್ಡ ಅನುಮಾನ ಉದ್ಭವಿಸಿಬಿಡುತ್ತದೆ. ಯಾಕೆಂದರೆ ಮೊದಲಿಗೆ, ಅದರಲ್ಲೂ ಈಗಿನ ವಿಜ್ಞಾನವು ಒಪ್ಪಿರುವ 'ಬಿಗ್ ಬ್ಯಾಂಗ್ - ಬೃಹತ್ಸ್ಪೋಟ' ಸಿದ್ದಾಂತದನುಸಾರ ಆ ಮಹಾನ್ ಸ್ಪೋಟವಾಗುವ ಮೊದಲು ಈ ವಿಶ್ವದಲ್ಲಿ, ಇಡೀ ಬ್ರಹ್ಮಾಂಡದಲ್ಲಿ ಏನೂ ಇರಲಿಲ್ಲ - ಕಟ್ಟ ಕರಿಯ ಕತ್ತಲ ರಾಜ್ಯದ ಹೊರತು. ಸ್ಪೋಟವಾದಾಗಲಷ್ಟೆ ತಾನೆ ಗ್ರಹ, ತಾರೆ, ನಿಹಾರಿಕೆಗಳ ಚದುರಿ ಚೆಲ್ಲಾಡಿದ ಸೃಷ್ಟಿಯಾಗಿ, ಅದರಿಂದುತ್ಪನ್ನವಾದ ಪುಡಿಸೃಷ್ಟಿಯ ಸರಪಳಿ ಕ್ರಿಯೆ ನಿರಂತರಗೊಂಡು ಈಗಿರುವ ಸೃಷ್ಟಿಯ ಅಸ್ತಿತ್ವಕ್ಕೆ ಚಾಲನೆ ನೀಡಿದ್ದು ? ಆ ಬೃಹತ್ ಸ್ಪೋಟದ ಹುಡುಗಾಟದಲ್ಲಿ ಮೂಗು ತೂರಿಸಿ ಅಲೆದಾಟಕ್ಕೆ ಹೊರಟರೆ, ಬೆಳಕಿಗೂ ಮೊದಲೆ ಅಸ್ತಿತ್ವದಲ್ಲಿ ಇದ್ದುದು ಕತ್ತಲೆಯಲ್ಲವೆ? ಎನ್ನುವ ಸಂಶಯ ಉದ್ಭವಿಸುತ್ತದೆ.. ಅಲ್ಲಿಗೆ ಬೆಳಕು ಕತ್ತಲೆಯ ಮೂಲ ಎನ್ನುವ ವಾದಕೂ ಕಲ್ಲು ಬಿದ್ದಂತಾಯ್ತಲ್ಲ? ಬೆಳಕು ಮೊದಲ - ಕತ್ತಲೆ ಮೊದಲಾ?
ಬಹುಶಃ ಬೆಳಕು-ಕತ್ತಲೆ ಎನ್ನುವ ಜಿಜ್ಞಾಸೆಗೆ ಹೊರಡುವುದಕ್ಕಿಂತ ಅದಕೂ ಮೀರಿದ ಮತ್ತೇನೊ ಶಕ್ತಿಮೂಲ ಅವೆರಡರ ಮೂಲದಲ್ಲಿ ಇರಬೇಕೆಂದುಕೊಂಡು ಹೊರಡುವುದೆ ವಿಹಿತವೇನೊ? ವೈಜ್ಞಾನಿಕ ದೃಷ್ಟಿಕೋನದಲ್ಲಿ ಅವಲೋಕಿಸಿದರೆ, ಬೃಹತ್ಸ್ಪೋಟವಾದಾಗ ದಿಕ್ಕಾಪಟ್ಟೆ ಹರಿದು ಹಂಚಿ ಹೋಗಿದ್ದು ಆ ವಿಶ್ವ ಚಿತ್ತದೊಳಗಡಗಿದ್ದ ಅಪಾರ ಶಕ್ತಿಯ ಮೊತ್ತ. ಅಂದರೆ ಸ್ಪೋಟದ ಮುಂಚಿನ ಆ ಹೊತ್ತಿನಲ್ಲಿದ್ದುದು ಅಪಾರ ಕೇಂದ್ರೀಕೃತ ಸಾಂದ್ರತೆಯ, ಅಸೀಮ ಶಕ್ತಿ ಸಂಚಯ ಕೋಶವೆನ್ನಬಹುದಾದ, ಮಹಾನ್ ಶಕ್ತಿಯ ಬೃಹತ್ ಚೆಂಡು; ಅದೇನು ಪ್ರಕಟ ಶಕ್ತಿಯಾಗಿ ಕಣ್ಣಿಗೆ ಕಾಣಿಸುವಂತಾದ್ದಾಗಿತ್ತೊ ಅಥವಾ ಅದೃಶ್ಯವಾಗಿ ಕಣ್ಣಿಗೆ ಕಾಣಿಸದೆಲೆ ನಿಗೂಢ ಅಸ್ತಿತ್ವದಲ್ಲಿರುವ 'ಸ್ವಯಂ ಸ್ವಗತ' ತತ್ವ ಪ್ರೇರೇಪಿತವಾದದ್ದಾಗಿತ್ತೊ ಹೇಳಬಲ್ಲವರಾರು? ಅಸೀಮ ಬಲದ ಸ್ವ-ಗುರುತ್ವ, ಇಡೀ ಶಕ್ತಿ ಕಾಯವನ್ನೆ ತನ್ನಲ್ಲೆ ಕುಸಿದು ಬೀಳುವಂತೆ ಮಾಡಿ 'ಕೃಷ್ಣ ಕಾಯ' ಅಥವಾ 'ಕಪ್ಪು ಬಿಲ'ಗಳಂತಹ ಕೌತುಕ ಪೂರ್ಣ ಕಾಯಗಳನ್ನುಂಟು ಮಾಡುವುದು ನಮ್ಮ ಬ್ರಹ್ಮಾಂಡ ವ್ಯೋಮದಲ್ಲಿ ಅಪರೂಪದ ಸಂಭವಿಸುವಿಕೆಯೇನಲ್ಲವಲ್ಲ? 'ಕೃಷ್ಣ ಕಾಯ' ತನ್ನಲ್ಲೆ ಕುಸಿದು ಸಾಯುವ ತಾರೆಗಳ ಮಟ್ಟಿಗೆ ಗಮನಿಸಿದ, ನಿಜವೆಂದು ಗೊತ್ತಿರುವ ವಿಷಯವಾದರೂ, ಬ್ರಹ್ಮಾಂಡದ ಲೆಕ್ಕಾಚಾರದಲ್ಲಿ ಅದೇ ರೀತಿಯ ಅಥವಾ ಅದಕ್ಕೂ ಮೀರಿದ ಪ್ರಕ್ರಿಯೆಗಳು ರಾಜ್ಯವಾಳುತ್ತ, ಶಕ್ತಿಮೊತ್ತದ ಸಮತೋಲನೆಯನ್ನು ತಮ್ಮದೆ ಆದ ಚಾತುರ್ಯದಲ್ಲಿ ಹೇಗೆ ನಿಭಾಯಿಸಿಕೊಂಡಿದೆಯೊ ಅರಿತು ಹೇಳುವವರಾರು? ಆ ಅತಿ ನಿಖರತೆಯ ಹಾದಿ ಬಿಟ್ಟು, ನಮ್ಮ ವೇದವೇದಾಂತ, ಉಪನಿಷದ್, ಪುರಾಣಗಳ ಮೂಲದಲ್ಲಿ ಕೆದಕಿ ನೋಡಿದರೆ ಸಿಗುವ ಸೊಗಸಾದ 'ಹಿರಣ್ಯ ಗರ್ಭ' ದ ವಿವರಣೆಯ ಉಲ್ಲೇಖದಲ್ಲಡಗಿರಬಹುದಾದ ಆ 'ಸಂಗ್ರಹಿತ' ಶಕ್ತಿ ಸಂಚಯ ಇದೇ ಇರಬಹುದೆ? ಆ ವಿವರಣೆಯನ್ನು 'ಸೂಕ್ತ ಆರಂಭಿಕ ವಾದವಾಗಿ' ಒಪ್ಪಿಕೊಳ್ಳುವುದಾದರೆ, ಅದಕ್ಕೆ ಪೂರಕ ತತ್ವ, ಸಿದ್ದಾಂತ, ತಾರ್ಕಿಕ ವಿವರಣೆ - ಎಲ್ಲವೂ ಕೈ ಹಾಕಿದೆಡೆಯೆಲ್ಲ ದೊರಕುತ್ತದೆ ನಮ್ಮ ವೇದಪುರಾಣಗಳ ಬೃಹತ್ ಜ್ಞಾನಕೋಶದಲ್ಲಿ.. ಆದರೆ ನಾವಿಲ್ಲಿ ನೋಡಲ್ಹವಣಿಸುತ್ತಿರುವ ಆಧುನಿಕ ದೃಷ್ಟಿಕೋನದಲ್ಲಿ ಇದನ್ನು ವಿವರಿಸುವುದು ಹೇಗೆ? ಒಟ್ಟಾರೆ, ಬೃಹನ್ಮೂಲದಲ್ಲಿ ಪ್ರಸ್ತುತವಿದ್ದ ಆ ಯಾವುದೊ ಮಹಾನ್ ಶಕ್ತಿಯ ಅಸ್ತಿತ್ವವನ್ನು, ಆರಂಭಿಕ ವಾದದ ಅಂಶವಾಗಿ ಎಲ್ಲರೂ ಒಪ್ಪಿಕೊಳ್ಳಬೇಕೆಂದು ಕಾಣುತ್ತದೆ - ಆದರೆ ಆ ಶಕ್ತಿಮೂಲದ ಮೂಲ ಕತೃ ಯಾರಿರಬಹುದೆಂಬ ಮತ್ತೊಂದು ವಿವಾದಾತ್ಮಕ ವಾದಕ್ಕೆ ಕೈ ಹಾಕದಿದ್ದರೆ ಮಾತ್ರ...
ಆ 'ಮೂಲದಮೂಲ ಕತೃ' ಸಿದ್ದಾಂತವನ್ನು ಸದ್ಯಕ್ಕೆ ಬದಿಗಿಟ್ಟು ಬರಿಯ ಈ ಬೃಹತ್ ಸ್ಪೋಟದ ಶಕ್ತಿಯ ಮೂಲದತ್ತ ಗಮನ ಕೇಂದ್ರೀಕರಿಸುವುದಾದರೆ - ಮತ್ತು ಆ ಶಕ್ತಿರೂಪದ ಅಸ್ತಿತ್ವವೆ ಈ ಬ್ರಹ್ಮಾಂಡದಿರುವಿಕೆಯ ಆರಂಭಿಕ ನಿಜವೆಂದಂದುಕೊಂಡಲ್ಲಿ, ಅದು - ಈಗ ನಾವು ನೋಡುತ್ತಿರುವ ಬೆಳಕು ಮತ್ತು ಕತ್ತಲೆಯೆಂಬ ಎರಡರ ಅಸ್ತಿತ್ವದ ಬೇರನ್ನು, ಅದರ ಮೂಲ ಬೀಜವನ್ನು ಗರ್ಭದಲ್ಲಿಯೆ ಹೊತ್ತುಕೊಂಡಿದ್ದ ಶಕ್ತಿ ರೂಪವಾಗಿದ್ದಿರಬೇಕು. ಅದು ನೋಡಲು ಬೆಳಕಂತಿತ್ತೊ , ಕತ್ತಲಂತಿತ್ತೊ ಅಥವಾ ಅವೆರಡೂ ಅಲ್ಲದ ಮತ್ತಾವುದೊ ಮೂರನೆಯ ರೂಪಾಗಿ ಅಸ್ತಿತ್ವದಲ್ಲಿತ್ತೊ ಎನ್ನುವುದು ಮತ್ತೊಂದು ಚರ್ಚೆಯ ವಿಷಯವೇ ಆದೀತು. ಬೆಳಕಿನ ಮೂಲಕ್ಕೆ ಏನನ್ನಾದರೂ ಮರೆ ಹಿಡಿದರೆ, ಅದು ಬೆಳಕನ್ನೆಲ್ಲ ಕುಡಿದು ಕತ್ತಲೆಯೆ ಎಲ್ಲೆಡೆ ಆವರಿಸಿಕೊಳ್ಳುವ ಪ್ರಕ್ರಿಯೆ ಗಮನಿಸಿದರೆ, ಆ ಮೂಲ ಅನುಪಾತದಲ್ಲಿ ಬಹುಶಃ ಕತ್ತಲೆಯದೆ ದೊಡ್ಡ ಗಾತ್ರವಿತ್ತೇನೊ ಅನಿಸುತ್ತದೆ - ಹೆಚ್ಚು ಕಡಿಮೆ ಅದರ ರೂಪವೆ ಎಲ್ಲೆಡೆಗೂ ಪಸರಿಸಿಕೊಂಡು. ಅದೇನೆ ಇದ್ದರೂ ಆ ಶಕ್ತಿ ಸಂಚಯವೆ ಇವೆಲ್ಲ ಸೃಷ್ಟಿಯ ಮೂಲವಸ್ತುವಾಗಿತ್ತು ಎನ್ನುವುದು ಸೂಕ್ತ ಆರಂಭಿಕ ಸಿದ್ದಾಂತ. ಈ ಅದೃಶ್ಯ ಶಕ್ತಿಸಾರ ಬಹುಶಃ 'ಇಂದ್ರೀಯ ಗ್ರಾಹ್ಯಕ್ಕೆ ನಿಲುಕುವ' ಯಾವುದೆ ತೂಕ ಅಥವ ದ್ರವ್ಯರಾಶಿಯ ಸ್ವರೂಪದಲ್ಲಿ ಇರಲಿಲ್ಲವೆಂದು ಕಾಣಿಸುತ್ತದೆ. ಶಕ್ತಿ-ದ್ರವ್ಯರಾಶಿ ಸಿದ್ದಾಂತದನುಸಾರ ದ್ರವ್ಯರಾಶಿ ಶಕ್ತಿಯ ರೂಪದಲ್ಲಿ ಪ್ರಸ್ತುತವಾಗಬಹುದು - ಎನ್ನುವುದರ ಪರ್ಯಾಯವಾಗಿ ಶಕ್ತಿ ದ್ರವ್ಯರಾಶಿಯಾಗಿ ರೂಪಾಂತರಿಸಿಕೊಂಡು ಮರುಪ್ರಕಟವಾಗಬಹುದು - ಮಾರ್ಪಡಿಸುವ ಪರಿ ತಿಳಿದಿದ್ದರೆ. ಅರ್ಥಾತ್ ಶಕ್ತಿಯನ್ನು ರೂಪಾಂತರಿಸಿ ವಸ್ತು ದ್ರವ್ಯರಾಶಿಯಾಗಿಸಬಹುದು ಅಥವಾ ವಸ್ತುವಿನ ದ್ರವ್ಯರಾಶಿಯನ್ನು ರೂಪಾಂತರಿಸಿ ಶಕ್ತಿಯಾಗಿಸಬಹುದು. ಬಾಂಬಿನಂತಹ ವಸ್ತು ದ್ರವ್ಯರಾಶಿಯ ರೂಪದಲ್ಲಿ ತನ್ನ ಶಕ್ತಿಯನ್ನಡಗಿಸಿಟ್ಟುಕೊಂಡು, ಪೂರಕ ಪ್ರಕ್ರಿಯೆಗೊಳಪಟ್ಟು ಆಸ್ಪೋಟಿಸಿ ಸಿಡಿದಾಗ ಬಿಡುಗಡೆಯಾಗುವ ವಿಧ್ವಂಸಕ ಶಕ್ತಿಯ ಹಾಗೆ. ಹೀಗೆ ಬೃಹತ್ ಸ್ಪೋಟಕ್ಕೂ ಮುನ್ನ ಇದ್ದ ಆ ಅಪಾರ ಶಕ್ತಿ ಸಾಂದ್ರ, ಯಾವುದೊ ಕಾರಣಕ್ಕೆ - ಆಯಾಚಿತವಾಗಿಯೊ ಅಥವಾ ಯಾವುದೊ 'ಮಹಾನ್ ವಿಜ್ಞಾನಿ ಗಣದ' ಪ್ರಯೋಗ ಸೂಚನೆಯನುಸಾರವೊ - ಪಟ್ಟನೆ ಸ್ಪೋಟಿಸಿದಾಗ, ಆ ಸಾಂದ್ರ ಶಕ್ತಿಯ ಸಿಡಿದ ತುಣುಕುಗಳೆ ದ್ರವ್ಯರಾಶಿಯ ಗುಪ್ಪೆಗಳಾಗಿ ಗ್ರಹ, ತಾರೆ, ನಿಹಾರಿಕೆಗಳ ಬೃಹತ್ ಬ್ರಹ್ಮಾಂಡವಾಗಿ ಕದಡಿ ಹೋದವು. ಅಲ್ಲಿಗೆ ಆ ಶಕ್ತಿಯ ಚೂರುಗಳೆ ಎಲ್ಲೆಡೆಗೂ, ಎಲ್ಲರಿಗು - ಈ ಸೃಷ್ಟಿಯ ಪ್ರತಿ ಚರಾಚರ ಅಸ್ತಿತ್ವಕ್ಕೂ ಹಂಚಿಹೋದವೆನ್ನಲು ಅಡ್ಡಿಯಿಲ್ಲವಲ್ಲವೆ? ಮುಂದೆ ಜೀವ ಸೃಷ್ಟಿಯಾದಾಗ ಸಹ ಇದೇ ಶಕ್ತಿಯ ತುಣುಕುಗಳ-ತುಣುಕುಗಳು ಪ್ರತೀ ಜೀವಿಯಲ್ಲೂ ಯಾವುದೋ ರೀತಿಯಲ್ಲಿ ಹಂಚಿಹೋಗಿರಬೇಕು... ನಾವು ನೋಡುತ್ತಿರುವ ಈ ಕತ್ತಲು, ಬೆಳಕು ಸಹ ಆ ಮೂಲಶಕ್ತಿಯ ಭಾಗಾಂಶವಾಗಿ ಅಸ್ತಿತ್ವಕ್ಕೆ ಬಂದ ಮೂಲ ತುಣುಕುಗಳಾಗಿರಬೇಕು... ಆ ತುಣುಕುಗಳಾದರೊ, ಅಸಂಖ್ಯಾತ ಕಣಾದಿಕಣ ಗಾತ್ರದ ತುಣುಕುಗಳ ಶಕ್ತಿಯ ಒಟ್ಟುಗೂಡಿಸಿದ ಸಮಗ್ರ ಸಮಷ್ಟಿತ ರೂಪವೆ ಇರಬೇಕು - ಬೇಕೆಂದಾಗ ಅಗತ್ಯಕ್ಕೆ ತಕ್ಕಂತೆ ಒಟ್ಟುಗೂಡಿಕೊಂಡು ಅಸೀಮ ಸಾಮರ್ಥ್ಯವನ್ನು ಪ್ರದರ್ಶಿಸಲಾಗಲಿ, ಬೇಡೆಂದಾಗ ಒಟ್ಟುಗೂಡದ ಬೇರ್ಪಟ್ಟ ಸ್ಥಿತಿಯಲ್ಲಿರುತ್ತ, ಎಷ್ಟು ಬೇಕೊ ಅಷ್ಟು ಮಾತ್ರ ವ್ಯಯಿಸುವ, ಉದ್ದೇಶಕ್ಕೆ ಬೇಕಾಗುವಷ್ಟು ಶಕ್ತಿಯನ್ನು ಮಾತ್ರವೆ ಸಂಕಲಿಸಿ ಬಳಸಿಕೊಳ್ಳುವ ಸಾಮಾನ್ಯ ಪರಿಜ್ಞಾನವನ್ನು ಸಹಜವಾಗಿಯೆ ಪ್ರದರ್ಶಿಸುತ್ತ.
ಅದೇ ತರ್ಕದ ಬೆನ್ನೇರಿ ನಡೆದರೆ ಈ ಸೃಷ್ಟಿಯ ಪ್ರತಿಯೊಂದು ಚರಾಚರ, ಭೌತಿಕಾಭೌತಿಕ ಅಸ್ತಿತ್ವವು ಈ ಮೂಲ ಶಕ್ತಿಯ ತುಣುಕಿನ-ತುಣುಕಿನ-ತುಣುಕು ಚೂರಾಗಿರಬೇಕು. ಹೌದು, ತಾರ್ಕಿಕವಾಗಿ ಅದೇ ಸರಿಯಾದ ತೀರ್ಮಾನ. ಮೂಲದಲ್ಲಿದ್ದ ಶಕ್ತಿ ವಿಸ್ಪೋಟದಲ್ಲಿ ಆ ಶಕ್ತಿ ನಿಶ್ಚಿತ ಗತಿ ಮತ್ತು ದಿಕ್ಕಿನಲ್ಲಿ ಚೆದುರಿ ಚೆಲ್ಲಾಪಿಲ್ಲಿಯಾದರು, ಆ ಶಕ್ತಿಯ 'ಕಳೆದುಕೊಳ್ಳುವಿಕೆ' ಸಂಭವಿಸಿ ನಷ್ಟವಾಗುವುದಂತೂ ಸಾಧ್ಯವಿಲ್ಲವಲ್ಲಾ? ಶಕ್ತಿಯ ಮೂಲ ಸಿದ್ದಾಂತವೆ 'ಅದನ್ನು ಸೃಜಿಸಲೂ ಆಗದು, ವಿನಾಶಗೊಳಿಸಲೂ ಆಗದು..ಬರಿ ಒಂದು ಪ್ರಕಟ (ಅಪ್ರಕಟ) ಅಸ್ತಿತ್ವದಿಂದ ಮತ್ತೊಂದು ಪ್ರಕಟ (ಅಪ್ರಕಟ) ಅಸ್ತಿತ್ವಕ್ಕೆ ರೂಪಾಂತರಿಸಬಹುದಷ್ಟೆ..'... ಅಂದ ಮೇಲೆ ಪ್ರಾಥಮಿಕ ಶಕ್ತಿ ಮೂಲವಾಗಿ, ಊಹನಾತೀತ - ಅಭೂತಪೂರ್ವ ಗುರುತ್ವ ಸಾಂದ್ರತೆಯ ಹಿರಣ್ಯಗರ್ಭ ರೂಪದಲ್ಲಿದ್ದ ಈ ಶಕ್ತಿಯ ಮೂಲರೂಪ, ಬಹುಶಃ ವಿಶ್ವಚಿತ್ತದ ಬುದ್ದಿಮತ್ತೆಯ ಚತುರತೆ, ಚಮತ್ಕಾರದೊಂದಿಗೆ, ಅಪಕ್ವ ಹೊರನೋಟಕ್ಕೆ ಅನಿಯಂತ್ರಿತ ವಿಸ್ಪೋಟದಂತೆ ಕಾಣಿಸಿದರೂ, ನೈಜದಲ್ಲಿ ಯಾವುದೋ ಪೂರ್ವಯೋಜಿತ ಲೆಕ್ಕಾಚಾರದನುಸಾರ ಸಿಡಿದು ಚೂರಾಗಿ ಚೆಲ್ಲಾಪಿಲ್ಲಿ ಹರಡಿಕೊಂಡ ಮೂಲಶಕ್ತಿಯ ತುಣುಕುಗಳಿರಬೇಕು - ಕೆಲವು ಸಣ್ಣವು, ಕೆಲವು ದೊಡ್ಡವು ಮತ್ತೆ ಕೆಲವು ಮಧ್ಯಮ ಗಾತ್ರದವು. ಒಟ್ಟು ಮೊತ್ತದಲ್ಲಿ ತನ್ನೊಡಲಿನ ಶಕ್ತಿಯೆಂಬ ಆಸ್ತಿಯನ್ನು ಹಂಚಿ ಹರಡಿದ ಈ ಪ್ರಕ್ರಿಯೆಯೆ ಬ್ರಹ್ಮಾಂಡದ ಸೃಷ್ಟಿಯ ಮೂಲ ಧಾತುವೆನ್ನಬಹುದೇನೊ? ಬಹುಶಃ ಈ ಶಕ್ತಿಸ್ಪೋಟದಲ್ಲಿ ಉತ್ಪಾದನೆಯಾದ ಉಪವಸ್ತುಗಳು ಅಥವಾ ರೂಪಾಂತರಗೊಂಡ ಅನೇಕಾನೇಕ ಉಪವಸ್ತುಗಳಲ್ಲಿ ಕತ್ತಲೆ-ಬೆಳಕು ಮತ್ತು ಶಬ್ದ-ನಿರ್ವಾತಗಳಂತಹ ಅನೇಕಾನೇಕ ಉತ್ಪನ್ನಗಳಿರಬೇಕು; ಪ್ರಾಯಶಃ ಬೆಳಕು ಮತ್ತು ಶಕ್ತಿ ಇವೆರಡೂ ಶಕ್ತಿಯ ಬೇರೆ ಬೇರೆ ಸ್ವರೂಪದ ಪರಸ್ಪರ ಸಂವಾದಿ ರೂಪಗಳಾಗಿರುವುದರಿಂದ, ಅಂತಹ ಒಂದು ಉಪ ಉತ್ಪನ್ನವೆ ಸದ್ದು ಮಾಡದ ಸೌಮ್ಯ ರೂಪಿ ಬೆಳಕಾಗಿಯೊ, ನಿಗೂಢ ತಾಮಸ ರೂಪಿ ಕತ್ತಲಾಗಿಯೊ ಅಸ್ತಿತ್ವಗೊಂಡು ಹಂಚಿ ಹೋಗಿರಬೇಕು. ಸಾರಾಂಶದಲ್ಲಿ ಸಮೀಕರಿಸಿದರೆ, ಮೂಲ ಸಮಷ್ಟಿ ಶಕ್ತಿ - ಬಹುಶಃ ಸಾರಾಸಗಟು 'ಅಭೌತಿಕ-ಅಲೌಕಿಕ' ರೂಪದಲ್ಲಿದ್ದುದು, ವಿಸ್ಪೋಟವಾಗುತ್ತಿದ್ದಂತೆ ಅದರ ವಿದಳಿತ ಸ್ವರೂಪ, ಬಹುರೂಪಿ ಭೌತಿಕಾಭೌತಿಕ ಶಕ್ತಿರೂಪದಲ್ಲಿ ಅಸ್ತಿತ್ವವನ್ನು ಪಡೆದುಕೊಂಡು ಗಾಳಿ, ಬೆಳಕು, ಶಬ್ದಗಳ ರೀತಿ ಶಕ್ತಿಯ ವಿವಿಧ ರೂಪಾಗಿ ರೂಪಾಂತರಗೊಳ್ಳುತ್ತಿರಬಹುದು. ಇದನ್ನೆ ವೇದಾಂತಿಕವಾಗಿ ಹೇಳುವುದಾದರೆ ಆ ಮೊದಲ ಹಂತದಲ್ಲಿ ಪ್ರಕಟವಾದ ಶಕ್ತಿಗಳನ್ನೆ 'ಪಂಚ ಭೂತ' ಗಳೆಂದು ಕರೆಯಬಹುದೆ? ಸೃಷ್ಟಿಯೆಲ್ಲಾ ಅಸ್ತಿತ್ವಗಳಿಗೆ ಈ ಪಂಚಭೂತಗಳೆ ಮೂಲಧಾತು ಎನ್ನುವ ಸಿದ್ದಾಂತವಿರುವುದರಿಂದ ಆ ಪಂಚಭೂತಗಳೆ ಬೃಹತ್ ಸ್ಪೋಟದ ಫಲಿತವಾಗಿ ರೂಪುಗೊಂಡ ಶಕ್ತಿಯ ಉಪಸಂಚಯಗಳೆನ್ನಲು ಪ್ರೇರಣೆ ಸಿಕ್ಕಂತಾಗುತ್ತದೆ. ಪಂಚಭೂತವಾದರೂ ಅನ್ನಲಿ, ಬೃಹತ್ ಸ್ಪೋಟದ ಚಕ್ಕೆ-ಚೂರೆಂದಾದರೂ ಕರೆಯಲಿ - ಒಟ್ಟಿನಲ್ಲಿ ಈ ಮೂಲಧಾತುವಿನ ಮುಖೇನ ಶಕ್ತಿಯ ಮೂಲ ತನ್ನಂತಾನೆ ಪಸರಿಸಿಕೊಂಡು, ತನ್ನ ವಿದಳನ ಕ್ರಿಯೆಯನ್ನು ಸರಪಳಿಯಂತೆ ತಲೆಯಿಂದ ಬುಡದತನಕ ಕಾರ್ಯಗತಗೊಳಿಸುತ್ತ, ಈ ವಿಶ್ವದ ಮೂಲರೂಪಿನ ಸೃಷ್ಟಿಗೆ ಕಾರಣವಾಯ್ತೆಂದು ವಾದ ಮಂಡಿಸುತ್ತ ಮೂಲ ಸಿದ್ದಾಂತವನ್ನು ತಾರ್ಕಿಕವಾಗಿಯೆ ವಿಸ್ತರಿಸಬಹುದು...
ತರ್ಕದ ಆಳ ವಿಸ್ತಾರಕ್ಕಿಳಿದಂತೆ ಶ್ರೀನಾಥನಿಗೆ ಇದ್ದಕ್ಕಿದ್ದಂತೆ ವಿಷಯ ಗಹನತೆಯ ವ್ಯಾಪ್ತಿ ತನ್ನ ಸಾಮಾನ್ಯ ಬುದ್ಧಿಗೆ ಸುಲಭದಲ್ಲಿ ನಿಲುಕದ್ದಲ್ಲವೆಂಬ ಭಾವನೆ ಬಲವಾಗುತ್ತ ಗಾಬರಿಯ ಮಟ್ಟ ಹೆಚ್ಚಾಗಿ ತಳಮಳ ಆರಂಭವಾಯಿತು - ತಾನೇನು ಸರಿಯಾದ ಹಾದಿಯಲ್ಲಿರುವೆನೆ ಅಥವಾ ಅಡ್ಡಾದಿಡ್ಡಿಯಾಗಿ ಅನಗತ್ಯ ದಿಶೆಯಲ್ಲಿ, ಹಿಂದೆ ಮುಂದೆ ನೋಡದೆ ನುಗ್ಗಿರುವೆನೆ ಎಂಬ ಅನುಮಾನದ ಸುಳಿಯಲ್ಲಿ. ನಿಜಕ್ಕೂ ತೊಡಕಿದ್ದುದು ಅವನ ಆಲೋಚನಾ ಸಾಮರ್ಥ್ಯದಲ್ಲಾಗಲಿ, ವಸ್ತು-ವಿಷಯ ಆಯ್ಕೆಯಲ್ಲಾಗಲಿ ಆಗಿರಲಿಲ್ಲ. ಅವನಾವ ಆಲೋಚನೆಯ ವಿಷಯವನ್ನು ತಾನಾಗೆ ಆರಿಸಿ ಮೇಲೆಳೆದುಕೊಳ್ಳುತ್ತಲೂ ಇರಲಿಲ್ಲ. ಆ ಮೇಲ್ನೋಟಕ್ಕೆ ಅಪರಿಚಿತವಾಗಿ ಕಾಣುವ ವಿಷಯಗಳು ತಾವಾಗಿಯೆ ಬಂದು ಅವನಾಲೋಚನೆಯ ಪಟಲದ ಮೇಲೆ ಮೂಡಿ ಮರೆಯಾಗುತ್ತಿದ್ದವು. ಅದರಲ್ಲೂ ಕೆಲವು ವಿಷಯಗಳ ಅಲೌಕಿಕ ಗಹನತೆ, ಗ್ರಾಹ್ಯದಳವಿಗೆ ಮೀರಿದ ಪ್ರೌಢತೆ ಮತ್ತು ತಾನು ಹುಡುಕಿಕೊಂಡು ಹೊರಟ ವಿಷಯಕ್ಕೂ ಆ ಆಲೋಚನೆಗಳಿಗೂ ನೇರ ಸಂಬಂಧ ಕಟ್ಟಲಾಗದ, ಮಸುಕಾಗಿ, ಪರೋಕ್ಷವಾಗಿ ಕಾಣುವ ಅನುಬಂಧತೆ - ಎಲ್ಲವೂ ಸೇರಿ ಆ ಗೊಂದಲಮಯ ಸನ್ನಿವೇಶಕ್ಕೆ ನೀರೆರೆದು ಮತ್ತಷ್ಟು ಗಲಿಬಿಲಿಗೊಳಿಸಿಬಿಟ್ಟಿದ್ದವು. ಎಲ್ಲಿಯ ಬೃಹತ್ ಸ್ಪೋಟ? ಎಲ್ಲಿಯ ಶಕ್ತಿಮೂಲ? ಅದಕ್ಕೂ ತನ್ನನ್ನು ವೈಯಕ್ತಿಕವಾಗಿ ಕಾಡುತ್ತಿರುವ ಸಮಸ್ಯೆಗೂ ಯಾವ ರೀತಿಯ ನಂಟು? ಎಂದೆಲ್ಲಾ ಚಿಂತಿಸಿ ವಿಭ್ರಾಂತನಾಗುವ ಹೊತ್ತಲ್ಲೆ ಮತ್ತೆ ಮತ್ತೆ ಮಾಂಕ್ ಸಾಕೇತರ ನುಡಿಗಳ ನೆನಪಾಗಿ, ಏನಾದರೂ ಸರಿ, ಮನದಲ್ಲಿ ಮೂಡುವ ಆಲೋಚನೆಗಳನ್ನು ಅವು ತಾವಾಗಿಯೆ ಮಾಯವಾಗುವತನಕ ಅಥವಾ ಅವುಗಳ ತಾರ್ಕಿಕ ಅಂತಿಮ ತೀರ್ಮಾನವನ್ನು ತಲುಪಿಸುವ ತನಕ, ಮಂಥನವನ್ನು ನಿಲ್ಲಿಸದೆ ಮುಂದುವರೆಸುವುದೆ ಸರಿಯೆಂದು ಹೇಳುತ್ತಿತ್ತು ಮನದ ಮತ್ತೊಂದು ಮೂಲೆ. ಬಹುಶಃ ಒಂದು ಕಡೆ ಗಹನತೆಯ ಉನ್ನತಾಲೋಚನೆಯ ಸ್ತರದ ಮಥನದಲ್ಲೆ ಸಾಗುವಾಗ, ಸಮಾನಾಂತರದಲ್ಲಿ ಲೌಕಿಕದ, ವಾಸ್ತವಿಕ ಸ್ತರದ ಸಂಗತಿಗಳ ಪ್ರಕ್ಷೇಪಿತ ಮಥನವೂ ಬೆರೆತು, ಅವೆರಡೂ ಮುಖಾಮುಖಿಯಾಗಿ ಸಂಧಿಸುವ ಬಿಂದುವೊಂದಕ್ಕೆ ಎರಡೂ ತಲುಪಿದಾಗ, ಅವೆರಡಕ್ಕಿರುವ ಸಂಬಂಧ ಮತ್ತು ಅದರಿಂದುಂಟಾಗುವ ಪರಿಣಾಮ ಹೆಚ್ಚು ನಿಚ್ಛಳವಾಗಬಹುದೆಂದು ತೋರುತ್ತದೆ. ಅದರಿಂದಾಗಿಯೆ ಕೆಲವೊಮ್ಮೆ ಗಹನತೆಯ ಸೂಕ್ಷ್ಮಗಳು ಮನ ತಟ್ಟುತ್ತಿದ್ದಂತೆ, ಆಗೀಗೊಮ್ಮೆ ಲೌಕಿಕ ವಾಸ್ತವಗಳ ನೆನಪಿನ ಓಣಿಯೂ ತೆರೆದುಕೊಳ್ಳುತ, ಹೊಂದಿಕೆ-ಸಂಬಂಧವೆ ಇರದಿದ್ದ ಸಂಗತಿಗಳೆಲ್ಲ ಸೃತಿಪಟಲದಿಂದೆದ್ದು ಪ್ರಕಟವಾಗುತ್ತಿವೆ. ಅದೇನೆ ಇದ್ದರೂ, ಈ ಪ್ರಕ್ರಿಯೆಯ ನಡುವೆ ಸಿಲುಕಿ, ಈಗಾಗಲೆ ಅದರ ಭಾಗವಾಗಿ ಹೋಗಿರುವ ಕಾರಣ, ಈ ನಡುಗಳಿಗೆಯಲ್ಲಿ 'ಟ್ರ್ಯಾಕ್' ಬದಲಿಸಿ ಹೊಸ ಹಾದಿ ಹಿಡಿಯುವುದು ಕೂಡ ಕ್ಷೇಮಕರವೇನಲ್ಲ.. ಈ ಆಲೋಚನೆ ಬರುತ್ತಿದ್ದಂತೆ, ಮತ್ತೆ ತನ್ನೆಲ್ಲ ಅನುಮಾನಗಳನ್ನು ಬದಿಗಿರಿಸಿ, ತನ್ನ ಅದೇ ಚಿಂತನಾ-ಮಥನ ಲೋಕಕ್ಕೆ ಮತ್ತೆ ಜಾರಿಹೋದ ಶ್ರೀನಾಥ.
ಹೀಗೆಂದು ಮತ್ತೆ ಜಾರಿದ ಮನ ಮತ್ತದೆ ಮಹಾನ್ ಶಕ್ತಿ ವಿತರಣೆಯ ಸಮೀಕರಣದ ಸುತ್ತ ಸುತ್ತತೊಡಗುತ್ತ ಅದರ ತಾರ್ಕಿಕಾಂತ್ಯವನ್ನು ತಲುಪಲಾಗದ ಅಸಂತೃಪ್ತಿಯನ್ನು ಸಂತೃಪ್ತಿಯತ್ತ ತಿರುಗಿಸಲು ಸನ್ನದ್ಧವಾಗತೊಡಗಿತ್ತು - ಕನಿಷ್ಠ ವಾದದ ಮಟ್ಟಿಗಾದರು. ಅಂತೂ ಮೂಲ ಬೃಹತ್ ಸ್ಪೋಟದ ತರುವಾಯ ಮೂಲದಲ್ಲಿದ್ದ ಬೃಹತ್ ಶಕ್ತಿ, ಯಾವುದೋ ಸಮೀಕರಣದನುಸಾರ ವಿತರಣೆಯಾಗಿ ಹಂಚಿಹೋಯ್ತು. ಬ್ರಹ್ಮಾಂಡದ, ವಿಶ್ವದ ಸೃಷ್ಟಿಯ ಅವತಾರವೂ ನಡೆದು ಹೋದಂತಾದ ಮೇಲೆ ಎಲ್ಲಾ ಪರಿಸಮಾಪ್ತವಾದಂತೆ ಲೆಕ್ಕ... ಆದರಿದು ಬರಿ ಸೃಷ್ಟಿ ಕ್ರಿಯೆ ಒಗಟಿನ ಅರ್ಧ ಭಾಗ ಮಾತ್ರವಲ್ಲವೆ? ಆಗ ಸೃಷ್ಟಿಕ್ರಿಯೆಯ ಅರ್ಧ ಒಗಟನ್ನು ಮಾತ್ರ ಬಿಚ್ಚಿಟ್ಟಂತಾಯ್ತಲ್ಲವೆ? ಸೃಷ್ಟಿಯಾದ ಮೇಲೆ ಅದು ನಿರಂತರವಾಗಿ, ಸುಸೂತ್ರವಾಗಿ ನಡೆಯುವ 'ಉಸ್ತುವಾರಿ' ಕ್ರಿಯೆಯ ಬಗೆಯೆಂತು ? ಅಲ್ಲಿ ಶಕ್ತಿಯ ಬಳಕೆಗಿಟ್ಟ ಸೂತ್ರವಾದರೂ ಏನು ? ಹಾಂ..ಇಲ್ಲಿ ಮೂಲ ಸ್ಪೋಟದ ಶಕ್ತಿಮೊತ್ತ ಮತ್ತೆ ಬಳಕೆಯಾಗುವಂತಿಲ್ಲ - ಅದಾಗಲೆ ಹಂಚಿ ಹೋಗಿದೆ ಚರಾಚರ ಜಗತ್ ಸೃಷ್ಟಿಯಲ್ಲಿ. ಆದರೆ ಸೃಷ್ಟಿಯಾದ ಜಗ ಮುನ್ನಡೆಯಲು ಮತ್ತೆ ಶಕ್ತಿಯ ನಿರಂತರ, ಅವಿರತ ಆಸರೆಯೆ ಬೇಕಲ್ಲವೆ ? ಉದಾಹರಣೆಗೆ ಈಗಾಗಲೆ ಶಕ್ತಿಯನ್ನು ಪಡೆದು ಅಸ್ತಿತ್ವಕ್ಕೆ ಬಂದ ವಸ್ತುಗಳು ಅದನ್ನು ಮತ್ತೆ ಮುಂದಿನ ಪೀಳಿಗೆಗೆ ಹಂಚುತ್ತ ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಹೋಗುವುದು ಒಂದು ವಿಧಾನ. ಇದರಲ್ಲಿರುವ ಒಂದೆ ಒಂದು ನ್ಯೂನತೆಯೆಂದರೆ ಈ ಕ್ರಿಯೆ ನಿರಂತರವಾಗಿ ಅನಂತದವರೆಗೆ ನಡೆಯುತ್ತಿರಲು ಸಾಧ್ಯವಿಲ್ಲ. ತನ್ನನ್ನೆ ಹಂಚುತ್ತಾ ಹೋದರೆ ಒಂದಲ್ಲಾ ಒಂದು ಕಾಲಘಟ್ಟದಲ್ಲಿ ತಾನೆ ಖಾಲಿಯಾಗಿ, ಮುಂದೇನು ಹಂಚಲು ಉಳಿಯದೆ ತನ್ನ ಅಸ್ತಿತ್ವವನ್ನೆ ನಾಶಗೊಳಿಸಿಕೊಳ್ಳುವ ಆತ್ಮಹತ್ಯಾ ಪ್ರಕ್ರಿಯೆಗೆ ಸಮನಾದಂತಾಗುವುದಿಲ್ಲವೆ (ಶಕ್ತಿ ಸಂಚಯ ಆನಂತವಾಗಿರದೆಂಬ ಹಿನ್ನಲೆಯಲ್ಲಿ)? ಆ ಕಾರಣದಿಂದಲೆ ಇದೊಂದು ಪ್ರಕ್ರಿಯೆ ಮಾತ್ರವನ್ನೆ ನಿಶ್ಚಿತ ಪರಿಣಾಮಕಾರಿ 'ಉಸ್ತುವಾರಿ ಅಥವ ಸ್ಥಿತಿಕಾರಕ' ಪ್ರಕ್ರಿಯೆಯೆಂದು ಕರೆಯುವುದು ಅಶಕ್ಯ.. ಬಹುಶಃ ಕೆಲವು ಅಸ್ತಿತ್ವಗಳ ಮಟ್ಟಿಗೆ ಇದು ನಿಜವೆ ಇರಬಹುದಾದರೂ ಇದನ್ನೆ ಸಾಮಾನ್ಯೀಕರಿಸಿ ಎಲ್ಲದರ ಉಸ್ತುವಾರಿಗೂ ಇದೆ 'ಮಾದರಿ ಸಿದ್ದಾಂತ' ಎಂದು ಅಂತಿಮ ತೀರ್ಮಾನ ಕೊಡಲು ಸಾಧ್ಯವಿಲ್ಲ. ಅಂದರೆ ಇದಲ್ಲದೆ ಬೇರೆ ಪ್ರಕ್ರಿಯೆಯೂ ಸೃಷ್ಟಿಯಲ್ಲಿ ಸಹಜವಾಗಿಯೆ ಅಸ್ತಿತ್ವದಲ್ಲಿರಬೇಕು. ನಿಜ ಹೇಳುವುದಾದರೆ ಆ ಪ್ರಕ್ರಿಯೆ ಈ ಮೊದಲಿನದಕ್ಕಿಂತ ಮುಖ್ಯವಾಗಿ ಹೆಚ್ಚು ಚಾಲನೆಯಲ್ಲಿರುವ ಪ್ರಕ್ರಿಯೆಯಾಗಿರಬೇಕು..
ಅಂದರೆ ಈ ಪ್ರಕ್ರಿಯೆ ತನ್ನಷ್ಟಕ್ಕೆ ತಾನೆ ಆತ್ಮಹತ್ಯಾಕಾಂಡಕ್ಕಿಳಿಸಿಕೊಳ್ಳದ ಮತ್ತೊಂದು ವಿಧಾನ ಅನುಸರಿಸುತ್ತಿರಬೇಕು..ಅದು ಸಾಧ್ಯವಿರುವ ಒಂದೆ ವಿಧಾನವೆಂದರೆ - ಬಹುಶಃ ಪುನರ್ಸೃಷ್ಟಿ ಅಥವ ಸ್ವಯಂ ಮರುಸೃಷ್ಟಿ ಪ್ರಕ್ರಿಯೆ? ಕನಿಷ್ಠ ಜೀವವಿರುವ ವಸ್ತುಗಳಲ್ಲಾದರು ಈ ಪ್ರಕ್ರಿಯೆ ನಡೆಯುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಇಲ್ಲಿ ಅಸ್ತಿತ್ವವು ತನ್ನ ಶಕ್ತಿಯನ್ನು ಪೂರ್ಣವಾಗಿ ವ್ಯಯಿಸದೆ ಅದನ್ನು ಬೀಜರೂಪದಲ್ಲಿ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತ, ಆ ಬೀಜರೂಪ ಹೇಗೆ ತನ್ನ ಶಕ್ತಿಯನ್ನು ಸ್ವಯಂ-ಸಚೇತನಗೊಳಿಸಬೇಕೆನ್ನುವ ಬೀಜಾಕ್ಷರವನ್ನು ಕೂಡ ಅದರೊಳಗೆ ಇಟ್ಟು, ನಿರಂತರ ಸೃಷ್ಟಿ ತಂತಾನೆ ಆಗುವಂತೆ ನೋಡಿಕೊಳ್ಳುತ್ತಿದೆ, ನಿಯತಿ. ಈ ವಿಧಾನದಲ್ಲಿ ಕೂಡ, ಸೃಷ್ಟಿ ಅನಿಯಂತ್ರಿತವಾಗಿ ನಡೆದು, ಕೊನೆಗೆ ಹತೋಟಿಯಿಡಲಾಗದಷ್ಟು ಹದ್ದು ಮೀರಬಾರದಲ್ಲಾ ? ಬಹುಶಃ ಆ ಕಾರಣಕ್ಕೆ ಆ ಮರುಸೃಷ್ಟಿ ಕ್ರಿಯೆಯನ್ನೆ ವಿಭಜಿಸಿ ಇಬ್ಬಾಗವಾಗಿಸಿ, ಪ್ರಕೃತಿ-ಪುರುಷ ರೂಪದಲ್ಲಿ ಬೇರಾಗಿಸಿಟ್ಟು, ಅವುಗಳ ಮಿಲನ ಮಾತ್ರದಿಂದಷ್ಟೆ ಸೃಷ್ಟಿ ಕ್ರಿಯೆ ನಡೆಯುವಂತೆ ಸೃಜಿಸಿದ್ದು ಆ ವಿಶ್ವ ಚಿತ್ತದ ಬುದ್ದಿಮತ್ತೆಗೆ ನಿದರ್ಶನ. ಆದರೆ ಇದೇನು ಶಕ್ತಿ ವಿಭಜನೆಯ 'ಸರ್ವ-ಪರಿಪೂರ್ಣ ಕ್ರಿಯೆ'ಯೆಂದು ಹೇಳಲಾದೀತೆ? ಬಹುಶಃ ಇರಲಾರದು; ಮೊದಲಿನ, 'ಸ್ವಯಂ-ವಿಭಜನೆಯಾಗುವ' ತತ್ವದ ಸಿದ್ದಾಂತದಲ್ಲಿ ಹುಟ್ಟುವ ಶಕ್ತಿಯ ಗುಣಮಟ್ಟ ಮೂಲಶಕ್ತಿಯ ಗುಣಮಟ್ಟಕ್ಕೆ ಸಮನಾಗಿರುತ್ತದೆ. ಅಂದರೆ ಅಸ್ತಿತ್ವದಿಂದಾದ ಸೃಷ್ಟಿಗು, ಮೂಲಕ್ಕೂ ಯಾವುದೆ ವ್ಯತ್ಯಾಸವಿರದಂತಹ ಸಮರೂಪಿ ಸೃಷ್ಟಿಯಾಗುವ ಪ್ರಕ್ರಿಯೆಯದು. ಆದರೆ ಎರಡನೆಯ 'ಮರುಸೃಷ್ಟಿ ಸಿದ್ದಾಂತ' ಹಿಡಿದ ಪರೋಕ್ಷ ಹಾದಿಯಲ್ಲಿ, ನೇರ ವಿಭಜನೆಯಾಗದೆ ಕವಲು ದಾರಿ ಹಿಡಿದು ನಿರಂತರತೆಯನ್ನು ಕಾಪಾಡಿಕೊಳ್ಳುವ ಯತ್ನವೆ ಮಿಗಿಲಾಗಿ, ಕಾರ್ಯಕ್ಷಮತೆ ಮತ್ತು ದಕ್ಷತೆಯಲ್ಲಿ ಮೂಲಕ್ಕಿಂತ ಕುಂದು ಅಥವಾ ದೋಷವಿರುವುದು ಸಹಜ.. ಒಂದು ವೇಳೆ ಕುಂದಾಗಲಿ, ದೋಷವಾಗಲಿ ಇರದಿದ್ದರೂ ಮೂಲಕ್ಕೆ ಸರ್ವಸಮನಾಗಿಯಂತೂ ಇರಲಾರದು. ಜತೆಗೆ ಆ ಹವಣಿಕೆಯಲ್ಲಿ ಮೂಲದಿಂದ ಬೇರೆಯೆ ಆದ ವಿಭಿನ್ನ ಸೃಷ್ಟಿಯೂ ಹುಟ್ಟಿಕೊಳ್ಳಬಹುದು - ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಸಹ. ಅದೆಲ್ಲ ಹೊಂದಾಣಿಕೆಗಳ ನಡುವೆಯೂ ಸಂತತಿ ಮಾತ್ರ ಶಕ್ತಿಯ ನಿರಂತರ ವರ್ಗಾವಣೆಯೊಂದಿಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಲ್ಪಡುತ್ತದೆ - ಅದರ ಗಾತ್ರ ವಿಸ್ತಾರದಲ್ಲಿ ಹೆಚ್ಚುವರಿ ಪರಿಮಾಣ ಕಾಣಬೇಕಾದಾಗೆಲ್ಲ ನಿಸರ್ಗದಲ್ಲಡಗಿರುವ ಮತ್ತಾವುದೊ ಶಕ್ತಿಮೂಲವನ್ನು ತನ್ನ ಪರಿಕರವನ್ನಾಗಿ ಬಳಸಿ ಪರಿವರ್ತಿಸಿಕೊಳ್ಳುತ್ತ. ಒಂದು ರೀತಿ ಹೇಳುವುದಾದರೆ ಇಡೀ ಸೃಷ್ಟಿಕ್ರಿಯೆಯೆ ಶಕ್ತಿಯನ್ನು ನಿರಂತರವಾಗಿ ಪ್ರವಹಿಸಿ, ಕಾಲದ ಭೂಪಠದಲ್ಲಿ ನಿರಂತರ ವರ್ಗಾಯಿಸುವಂತೆ ನೋಡಿಕೊಳ್ಳುವ ಮಹಾನ್ ಪ್ರಕ್ರಿಯೆಯೆನ್ನಬಹುದೇನೊ ? ಅದನ್ನೆಲ್ಲ ಬದಿಗಿಟ್ಟು ಮತ್ತೆ ಶುದ್ಧ ಮೂಲಶಕ್ತಿಯ ವಿಷಯಕ್ಕೆ ಬಂದರೆ, ಇದೆಲ್ಲ ಪ್ರಕ್ರಿಯೆಗಳ ಸಾರವೇನೆಂದರೆ - ಬೃಹತ್ ಸ್ಪೋಟದಿಂದಾದ ರೂಪಾಂತರ ಕ್ರಿಯೆಯಲ್ಲಿ, ಶಕ್ತಿಯನ್ನು ವಸ್ತು ರೂಪಿ ಅಸ್ತಿತ್ವವಾಗಿ ಪರಿವರ್ತಿಸಿ (ಅರ್ಥಾತ್ ದ್ರವ್ಯರಾಶಿ ರೂಪದಲ್ಲಿ ಅಥವಾ ಸಮಾನಸ್ತರದ ಭೌತಿಕಾಭೌತಿಕ ರೂಪದಲ್ಲಿ) ವರ್ಗಾಯಿಸುತ್ತ ನಡೆದಿದೆ ಪ್ರಕೃತಿ ನಿಯಮ. ಕತ್ತಲೆ-ಬೆಳಕು-ಗಾಳಿ-ನೀರು-ಶಬ್ದಗಳ ತರದ ವಸ್ತು ಮೊತ್ತವಾಗಿ, ಈ ಶಕ್ತಿ ಹೀಗೆ ಎಲ್ಲರಲ್ಲೂ, ಎಲ್ಲದರಲ್ಲೂ ಹಂಚಿಕೆಯಾಗುತ್ತ ಹೋಗಿದೆ. ಆದರೆ ಹಂಚಿಹೋದ ಪ್ರಮಾಣ ಮಾತ್ರ ಬೇರೆ ಬೇರೆಯಷ್ಟೆ...
(ಇನ್ನೂ ಇದೆ)
__________