ಮಹಾನ್ ಚೇತನ ಭಗತ್

ಮಹಾನ್ ಚೇತನ ಭಗತ್

ಇನ್ಕ್ವಿಲಾಬ್ ಜಿಂದಾಬಾದ್. ....
ಕ್ರಾಂತಿ ಚಿರಾಯುವಾಗಲಿ.....

'ಭಗತ್ ಸಿಂಗ್',ನೀವು ಭಾರತದ ಇತಿಹಾಸವನ್ನು ಸರಿಯಾಗಿ ಓದಿದ್ದರೆ ಖಂಡಿತವಾಗಿಯೂ ಈ ಹೆಸರು ಕೇಳಿದಾಗ ರೋಮಾಂಚಿತರಾಗುತ್ತೀರಿ..ಭಾರತಾಂಬೆಯ ವೀರಪುತ್ರನಾತ.ತಾನು ಆತ್ಮಾರ್ಪಣೆ ಮಾಡಿಕೊಂಡು ಆ ಮೂಲಕ ಸಾವಿರಾರು ದೇಶಭಕ್ತರಿಗೆ ಪ್ರೇರಣೆಯಾದವ.ಇಂದಿಗೆ ಅಂತಹ ಮಹಾನ್ ಚೇತನ ಹುಟ್ಟಿ ೧೦೭ ವರ್ಷಗಳಾಗುತ್ತದೆ.ಹೀಗಾಗಿ ಭಗತ್ ಸಿಂಗ್ ನ ಜೀವನದಲ್ಲಿ ನಡೆದ ೩ ಘಟನೆಗಳನ್ನು ನಿಮಗೆ ನೆನಪಿಸುತ್ತೇನೆ.

ಘಟನೆ ೧-

ಭಗತ್ ಸಿಂಗ್ ೧೨ ವರ್ಷದವನಿದ್ದಾಗ ಜಲಿಯನ್ ವಾಲಾಬಾಗ್ ಹತ್ಯಾಕಾಂಡವಾಗುತ್ತದೆ.ಘಟನೆ ನಡೆದ ಮರುದಿನ ಭಗತ್ ನೇರವಾಗಿ ಅಲ್ಲಿಗೆ ಹೋಗಿ ಹುತಾತ್ಮರಾದ ದೇಶಭಕ್ತರ ರಕ್ತದ ಕಲೆಗಳಿಂದ ತುಂಬಿದ್ದ ಸೀಸೆಯನ್ನು ತೆಗೆದುಕೊಂಡು ಮನೆಗೆ ಬರುತ್ತಾನೆ.ತನ್ನ ಅಕ್ಕನನ್ನು ಕರೆದು,'ಇದನ್ನು ನೋಡು,ಆಂಗ್ಲರು ಕೊಂದ ನಮ್ಮವರ ರಕ್ತ ಇದು.ಇದಕ್ಕೆ ನಮಸ್ಕಾರ ಮಾಡು' ಎಂದು ಹೇಳುತ್ತಾನೆ.

ಘಟನೆ ೨-

ಭಗತ್ ಸಿಂಗ್ ನ ಅಜ್ಜಿ ಆತನನ್ನು ಬಲವಂತದಿಂದ ಮದುವೆ ನಿಶ್ಚಿತಾರ್ಥಕ್ಕೆ ಒಪ್ಪಿಸಿ ದಿನ ಗೊತ್ತು ಮಾಡುತ್ತಾಳೆ.ಆದರೆ ಭಗತ್ ನಿಶ್ಚಿತಾರ್ಥಕ್ಕೆ ಒಂದು ದಿನ ಇರಬೇಕಾದರೆ ತಾನು ಸದಸ್ಯನಾಗಿದ್ದ ಕ್ರಾಂತಿ ಪಕ್ಷದ ನಾಯಕನಾಗಿದ್ದ ಶಚೀಂದ್ರನಾಥ ಸನ್ಯಾಲ್ ಕರೆಗೆ ಓಗೊಟ್ಟು ಮನೆ ಬಿಟ್ಟು ಲಾಹೋರ್ಗೆ ಹೋಗುತ್ತಾನೆ.ಹೋಗಬೇಕಾದರೆ ಒಂದು ಕಾಗದದಲ್ಲಿ, 'ನನ್ನ ಜೀವನದ ಗುರಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು.ನನಗೆ ಈ ಲೋಕಕ್ಕೆ ಸಂಬಂಧಿಸಿದ ಸುಖಗಳು ಬೇಕಾಗಿಲ್ಲ. ನನ್ನ ಚಿಕ್ಕಪ್ಪ ಅಜಿತ್ ಸಿಂಗರು ನಾನು ಈ ದೇಶಕ್ಕಾಗಿ ತ್ಯಾಗ ಮಾಡಬೇಕು ಎಂದು ಮಾತು ತೆಗೆದುಕೊಂಡಿದ್ದರು.ಅದರಂತೆ ಈಗ ನಾನು ದೇಶದ ಹಿತಕ್ಕಾಗಿ ಸ್ವಂತ ಸುಖ ತೊರೆದು ಹೋಗುತ್ತಿದ್ದೇನೆ' ಎಂದು ಬರೆದಿದ್ದ.

ಘಟನೆ ೩-

ಸೆರೆಮನೆಯಲ್ಲಿ ನೇಣಿನ ಕುಣಿಕೆಗೆ ಕೊರಳೊಡ್ಡಿ ಹುತಾತ್ಮನಾಗಲು ತುದಿಗಾಲಲ್ಲಿ ನಿಂತಿದ್ದ ಭಗತ್ ನನ್ನು ನೋಡಲು ಅವನ ತಾಯಿ ವಿದ್ಯಾವತಿದೇವಿ ಬರುತ್ತಾರೆ. ಬಂದವರೆ ಮಗನನ್ನು ನೋಡಿ ಕಣ್ಣೀರು ಸುರಿಸುತ್ತಾರೆ.ಮಗನನ್ನು ಕುರಿತು,ನಿನ್ನನ್ನು ಬಿಡುಗಡೆ ಮಾಡುವಂತೆ ಆಂಗ್ಲರಲ್ಲಿ ಕಣ್ಣೀರಿಟ್ಟು ಬೇಡಿಕೊಳ್ಳುತ್ತೇನೆಂದು ಹೇಳುತ್ತಾರೆ.ಆಗ ಭಗತ್ ಹೇಳುತ್ತಾನೆ, 'ಅಮ್ಮಾ, ನೀನು ಆಂಗ್ಲರ ಮುಂದೆ ಕಣ್ಣೀರಿಟ್ಟರೆ ಅವರು ಅದನ್ನೆ ಬಂಡವಾಳ ಮಾಡಿಕೊಂಡು ನೋಡಿ ಭಗತ್ ಸಿಂಗ್ ನ ತಾಯಿ ಅಸಹಾಯಕಳಾಗಿ ಕಣ್ಣೀರು ಇಡುತ್ತಿದ್ದಾಳೆ ಎಂದು ಪತ್ರಿಕೆಗಳಲ್ಲಿ ಪ್ರಕಟ ಮಾಡುತ್ತಾರೆ.ಹೀಗಾದರೆ ಮುಂದೆ ಯಾವ ತಾಯಿಯು ತನ್ನ ಮಕ್ಕಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಳುಹಿಸಲಾರರು.ಇದರಿಂದ ಭಾರತಾಂಬೆಯನ್ನು ಬಂಧಮುಕ್ತಗೊಳಿಸುವ ಕಾರ್ಯಕ್ಕೆ ಹಿನ್ನಡೆಯಾಗಬಹುದು'ಎಂದು ಹೇಳುತ್ತಾನೆ. ಅಲ್ಲದೆ ತನ್ನ ತಾಯಿಯಲ್ಲಿ ಒಂದು ತೊಟ್ಟು ಕಣ್ಣೀರು ಸುರಿಸಬಾರದೆಂದು ವಾಗ್ದಾನವನ್ನು ತೆಗೆದುಕೊಳ್ಳುತ್ತಾನೆ.

ಇದನ್ನು ಓದಿದ ಮೇಲೆ ಖಂಡಿತ ನಿಮಗೆ ಭಗತ್ ನ ಮಹಾನ್ ವ್ಯಕ್ತಿತ್ವದ ಪರಿಚಯವಾಗಿರುತ್ತದೆ.ಬನ್ನಿ, ಅ ಅಪರೂಪದಲ್ಲಿ ಅಪರೂಪವಾದ ಚೇತನಕ್ಕೆ ನಮನಗಳನ್ನು ಸಲ್ಲಿಸೋಣ.....

ಜೈಹಿಂದ್..........

-@ಯೆಸ್ಕೆ