ಸದ್ಯಕ್ಕೆ ತಪಸ್ಸೇ ಬ್ರಹ್ಮ
ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ, ತಪಸ್ಸಿನಿಂದಲೇ ನೀನು ಅವನನ್ನು ಅರಿತುಕೊಳ್ಳಬಹುದು. ಯಾವುದರಿಂದ ಜೀವಿಗಳು ಹುಟ್ಟಿವಿಯೋ, ಯಾವುದರಿಂದ ಬದುಕುತ್ತಿವಿಯೊ, ಕೊನೆಗೆ ಯಾವುದನ್ನು ಅವು ಸೇರುತ್ತವೆಯೊ ಅದೇ ಬ್ರಹ್ಮ, ಈ ಪರಿಜ್ಞಾನ ನಿನ್ನೊಂದಿಗಿರಲಿ" ಎಂದು ಹೇಳಿ ಗುರುವು ತೆರಳುತ್ತಾನೆ.
ಹಲವು ವರುಷಗಳ ತಪಸ್ಸಿನ ಬಳಿಕ ಒಂದು ದಿನ ನದಿ ತೀರದಲ್ಲಿ ಗುರುಗಳು ಕಾಣಸಿಗುತ್ತಾರೆ. ಬಾಲಕ ಗುರುಗಳೆಡೆಗೆ ಓಡಿ ಹೋಗಿ "ಹೇ ಗುರುವೆ, ಅನ್ನವೇ ಬ್ರಹ್ಮ ಅಲ್ಲವೆ, ಅನ್ನದಿಂದಲೇ ಪ್ರಾಣಿಗಳು ಹುಟ್ಟುತ್ತವೆ, ಅನ್ನದಿಂದ ಜೀವಿಸುತ್ತವೆ ಕೊನೆಗೆ, ಇನ್ನೊಂದು ಜೀವಿಗೆ ಅನ್ನವಾಗಿ ಅನ್ನವನ್ನೇ ಸೇರುತ್ತವೆ"
ಗುರು: "ಮಗು, ತಪಸ್ಸಿನಿಂದ ಬ್ರಹ್ಮವನ್ನು ತಿಳಿದುಕೊ ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ" ಎಂದು ಹೇಳಿ ಗುರುಗಳು ತೆರಳುತ್ತಾರೆ.
ಬ್ರಹ್ಮವನ್ನ ಅರಿಯಹೊರಟ ಬಾಲಕ ಯೌವನದ ಹೊಸ್ತಿಲಲ್ಲಿದ್ದಾನೆ. ಹೀಗೊಂದು ದಿನ ಯುವಕನಿಗೆ ಪುನಃ ಗುರುಗಳು ಕಾಣಸಿಗುತ್ತಾರೆ.
ಶಿಶ್ಯ: "ಪ್ರಾಣವೇ ಬ್ರಹ್ಮ ಪ್ರಾಣದಿಂದಲೇ ಜೀವಿಗಳು ಹುಟ್ಟುತ್ತವೆ, ಪ್ರಾಣದಿಂದ ಜೀವಿಸುತ್ತವೆ ಕೊನೆಗೆ, ಪ್ರಾಣವನ್ನೇ ಸೇರುತ್ತವೆ".
ಗುರು: "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ. ತಾಳ್ಮೆಯಿಂದ ಅರಿಯಲು ಪ್ರಯತ್ನಿಸು".
ಹೀಗೆ ಬ್ರಹ್ಮ ಜಿಜ್ಞಾಸುವಾದ ಬಾಲಕನಿಗೆ ಪ್ರೌಡಾವಸ್ಥೆ ಬರುತ್ತದೆ. ಗುರುಗಳ ಮೇಲೆ ಕೋಪ ಮತ್ತು ಇನ್ನೂ ಅರಿಯದೆ ಹೋದೆನಲ್ಲ ಎಂಬ ಸಂಕಟ ಉಂಟಾಗುತ್ತದೆ. ಒಂದು ದಿನ ಗುರುವಿನ ಬಳಿಹೋಗಿ "ಮನಸ್ಸಿನಿಂದಲೇ ಜೀವಿಗಳು ಹುಟ್ಟುತ್ತವೆ, ಮನಸ್ಸಿನಿಂದ ಜೀವಿಸುತ್ತವೆ ಕೊನೆಗೆ, ಮನಸ್ಸನ್ನೇ ಪ್ರವೇಶಿಸುತ್ತವೆ, ಮನಸ್ಸೇ ಬ್ರಹ್ಮ " ಎನ್ನುತ್ತಾನೆ. ಗುರುವು ಪುನಃ ಹಿಂದೆ ನೀಡಿದ್ದ ಸಲಹೆಯನ್ನೇ ಮತ್ತೊಮ್ಮೆ ನೀಡಿ. ಶಿಶ್ಯನನ್ನು ತಪಸ್ಸಿಗೆ ಕಳುಹಿಸುತ್ತಾನೆ.
ಶಿಶ್ಯ: "ವಿಜ್ಞಾನವೇ ಬ್ರಹ್ಮ ಅಲ್ಲವೇ ವಿಜ್ಞಾನದಿಂದಲೇ ಜೀವಿಗಳು ಹುಟ್ಟುತ್ತವೆ, ವಿಜ್ಞಾನದಿಂದ ಜೀವಿಸುತ್ತವೆ ಕೊನೆಗೆ, ವಿಜ್ಞಾನವನ್ನೇ ಸೇರುತ್ತವೆ". ಗುರುಗಳು ಮೌನವಾಗೇ ಅಸಮ್ಮತಿಸುತ್ತ "ತಪಸ್ಸೇ ಬ್ರಹ್ಮ ತಪಸ್ಸನ್ನು ಬಿಡಬೇಡ" ಎಂದು ಕಳುಹಿಸುತ್ತಾರೆ."ಗುರುಗಳ ದೇಹ ಕ್ಷೀಣಿಸುತ್ತಿದೆ ತನಗೆ ಇನ್ನಾದರೂ ಬ್ರಹ್ಮ ಜ್ಞಾನವನ್ನ ಹೇಳಬಾರದೆ ಏಕೆ ಈ ಮೌನ?" ಹೀಗೆ ಶಿಶ್ಯ ಪುನಃ ತಪೋ ಮಗ್ನನಾಗುತ್ತಾನೆ.
ಹಲವು ವರ್ಷಗಳ ತರುವಾಯ ಒಂದು ದಿನ, ಬಿಳಿ ಕೂದಲುಗಳ ವೃದ್ದನಾಗಿರುವ ಶಿಶ್ಯನಿಗೆ ತನ್ನ ಗುರುಗಳು ದೇವಾಲಯದ ನದಿಬದಿಯಲ್ಲಿ ಸಿಗುತ್ತಾರೆ, ಗುರುವು ಶಿಶ್ಯನ ಮುಖದ ಮೇಲೆ ಮಂದವಾದ ನಗು ಕಾಣುತ್ತಾನೆ. ಶಿಶ್ಯ ಪ್ರಷ್ನೆಯನ್ನ ಕೇಳುವುದನ್ನೇ ನಿಲ್ಲಿಸಿದ್ದ. ತನ್ನ ಶಿಶ್ಯ ಬ್ರಹ್ಮಜ್ಞಾನಿಯಾದನ್ನ ಅರಿತ ಗುರುವಿಗೆ ಎಲ್ಲಿಲ್ಲದ ಆನಂದ ಉಂಟಾಗುತ್ತದ್ದೆ.