ಕಥೆ: ಪರಿಭ್ರಮಣ..(59)

ಕಥೆ: ಪರಿಭ್ರಮಣ..(59)

( ಪರಿಭ್ರಮಣ..58ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

ಕಾಲದ ಕಾಲು ಚೀಲ ತೊಟ್ಟೆ ಹುಟ್ಟುವ ಜೀವಿಗೆ ಹುಟ್ಟು ಸಾವು ಎಂಬುದು ಕಾಲದೆರಡು ತುದಿಗಳಲ್ಲಿರುವ ಆದ್ಯಾಂತಿಮ ಮೈಲಿಗಲ್ಲುಗಳಾದರು ಎರಡರ ನಡುವಿನ ಪಯಣಕ್ಕೆ ಈ ಕಾಲದ ಕಾಲುಚೀಲವೆ ಮೂಲಶಕ್ತಿ ದ್ರವ್ಯ. ಅದನ್ನು ರಾಜಸ-ತಾಮಸ-ಸಾತ್ವಿಕ ಸಮತೋಲನದಡಿ ವಿಭಾಗಿಸಿ, ಬೇಕಿದ್ದೆಡೆಯೆಲ್ಲ ಮತ್ತಷ್ಟು ಮರು ವಿಭಾಗಿಸಿ ಕಾಲದ ಹಾಸಿನ ಮೇಲೆ ಮುನ್ನಡೆಸಿದೆ ಸೃಷ್ಟಿ ನಿಯಮ. ಹುಟ್ಟಿಂದಲೆ ಬಂದಿತೊ, ಅಥವಾ ಬೆಳೆಯುತ್ತಾ ಅಳವಡಿಸಿಕೊಂಡಿತೊ ಒಟ್ಟಾರೆ ರಾಜಸ-ತಾಮಸ-ಸಾತ್ವಿಕ ಶಕ್ತಿಗಳ ಸಂಯೋಜನೆ ನಮ್ಮ ಪ್ರಕಟ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿವೆ. ರಾಜಸ ಮತ್ತು ಸಾತ್ವಿಕ ಅಂಶ ಹೆಚ್ಚಿದ್ದರೆ ಧನಾತ್ಮಕತೆಯತ್ತ, ತಾಮಸ ಮತ್ತು ರಾಜಸ ಅಂಶ ಹೆಚ್ಚಿದ್ದರೆ ಋಣಾತ್ಮಕತೆಯತ್ತ ಸಮತೋಲದ ಸ್ಥಿತಿಯನ್ನು ಜರುಗಿಸಿ ಅದರಂತೆ ಗುಣಾವಗುಣವನ್ನು ನಿರ್ದೇಶಿಸುತ್ತಿದೆ. ಅಂದರೆ ಅಜ್ಞಾನದ ಅಂಶ ಹೆಚ್ಚಾದರೆ ಅವಗುಣದತ್ತ ಸುಜ್ಞಾನದ ಅಂಶ ಹೆಚ್ಚಾದರೆ ಸುಗುಣದತ್ತ ತಕ್ಕಡಿಯನ್ನು ವಾಲಿಸುತ್ತ ಮುನ್ನಡೆಸುತ್ತಿದೆ. ಒಂದು ಹೊತ್ತಿನಲ್ಲಿ ನಾವೆಸಗುವ ಕಾರ್ಯದ ಗುಣಲಕ್ಷಣಚಹರೆ, ಆ ಹೊತ್ತಿನಲ್ಲಿ ಯಾವ ಗುಣಾಂಶ ಹೆಚ್ಚು ಪ್ರಭಾವ ಬೀರುತ್ತಿತ್ತು ಎನ್ನುವುದರ ಮೇಲೆ ಅವಲಂಬಿಸಿರಬೇಕು. ರಾಜಸ-ಸಾತ್ವಿಕತೆ ಧನಾತ್ಮಕ ಪ್ರತಿಕ್ರಿಯೆಗೆ ಪ್ರೇರೇಪಿಸುವ ಹೊತ್ತಲ್ಲೆ, ಋಣಾತ್ಮಕತೆಯತ್ತ ಪ್ರಲೋಭಿಸುವ ತಾಮಸ-ಸಾತ್ವಿಕತೆ, ಒಟ್ಟು ಶಕ್ತಿಯಲ್ಲಿ ರಾಜಸ-ಸಾತ್ವಿಕತೆಯನ್ನು ಅಧಿಗಮಿಸುವಷ್ಟು ಬಲಶಾಲಿಯಾಗಿದ್ದರೆ ಸಾಕು - ಅದೇ ಆ ಹೊತ್ತಲ್ಲಿ ವಿಜೃಂಭಿಸಿ ನಿರ್ಧಾರದ ಮೇಲೆ ತನ್ನ ಛಾಪನ್ನು ಒತ್ತಿಬಿಡುತ್ತದೆ. ತನಗೆ ಕುನ್. ಸು ಒಡನಾಟದ ಪ್ರಲೋಭನೆ ನೈತಿಕವಾಗಿ ತಪ್ಪೆಂದು ರಾಜಸ-ಸಾತ್ವಿಕತೆ ಮೂಲೆಯಲೆಲ್ಲೊ ಹೇಳುತ್ತಿದ್ದರೂ, ಅದನ್ನು ಬಲವಾಗಿ ಹತ್ತಿಕ್ಕಿದ ಅನೈತಿಕ ಪ್ರಲೋಭನೆ - ತಾನು ಕೈಲಾಗದ ಬಲಹೀನ, ದುರ್ಬಲ, ಹೇಡಿಯೆಂಬ ಪಟ್ಟದ ಸಂಕೋಲೆಯಿಂದ ಹೇಗಾದರೂ ಹೊರಬೀಳುವ 'ಅಡ್ಡದಾರಿ'ಯನ್ನು ಹಿಡಿಯಲು ಪ್ರೇರೇಪಿಸುತ್ತಿದ್ದ ತಾಮಸ-ಸಾತ್ವಿಕತೆ. ಅದು ಹಿಡಿಸಿದ ಹಾದಿ ಅನೈತಿಕವಾದರೂ, ಆ ಪ್ರಲೋಭನೆ ಗೆದ್ದ ಕಾರಣಕ್ಕೆ ತಾನು ದುರ್ಬಲನಾಗಿ, ಆ ಸೋಲಿನ ಗಳಿಗೆಯಿಂದ ಮುಂದಕ್ಕೆ ಜಾರುತ್ತಲೆ ಹೋಗಬೇಕಾಯಿತು ಮೆಟ್ಟಿಲು ಮೆಟ್ಟಿಲಾಗಿ. ಆ ಜಾರುವ ಹೊತ್ತಲ್ಲಿ ಎಲ್ಲಿಂದಾದರೂ ತುಸು ಧನಾತ್ಮಕ ಪ್ರೇರಣಾಶಕ್ತಿ ಉದ್ಭವಿಸಿ ಜಡತ್ವದಲ್ಲಿದ್ದ ನಿರ್ಲಿಪ್ತ ಶಕ್ತಿಯನ್ನು ರಾಜಸ-ಸಾತ್ವಿಕದತ್ತ ಹರಿಸಿದ್ದರೆ ಆಗ ತಕ್ಕಡಿ ಏರುಪೇರಾಗಿ ತಾಮಸ-ಸಾತ್ವಿಕವನ್ನು ಅಧಿಗಮಿಸಲು ಸಾಧ್ಯವಾಗುತ್ತಿತ್ತೊ ಏನೊ? (ಉದಾಹರಣೆಗೆ 50:30:20 ಇದ್ದ ರಾಜಸ-ತಾಮಸ-ಸಾತ್ವಿಕತೆ ಅನುಪಾತ, 50:20:30 ಆದ ಹಾಗೆ; ಹಾಗಾಗುವ ಪ್ರಕ್ರಿಯೆಯಲ್ಲಿ ರಾಜಸ-ಸಾತ್ವಿಕದ ಒಟ್ಟು ಮೊತ್ತ ರಾಜಸ-ತಾಮಸದ ಒಟ್ಟು ಮೊತ್ತವನ್ನು ಅಧಿಗಮಿಸುವಂತಾಗಿ ಅದೆ ಪ್ರಕಟ ರೂಪದಲ್ಲಿ ಹೆಚ್ಚು ಪ್ರಾಬಲ್ಯವನ್ನು ಗಳಿಸುವ ಹಾಗೆ). ಅದು ಆಗಲಿಕ್ಕೆ ಸಾಧ್ಯವಾಗಗೊಡದಂತೆ ಆವರಿಸಿಕೊಂಡಿದ್ದ ಮಾಯೆ (ಅಂದರೆ ತಾಮಸಿ ಶಕ್ತಿಯ ರೂಪ ), ಅಜ್ಞಾನದ ತಾಮಸದಲ್ಲಿ ಅದ್ದಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಬಿಟ್ಟಿತ್ತು. ಅನೈತಿಕತೆಯತ್ತ ವಿಚಲಿತನಾಗದಂತೆ ತಡೆವ ಶಕ್ತಿ ಅಲ್ಲಿ ಇದ್ದಿದ್ದರೆ ಬಹುಶಃ ಋಣಾತ್ಮಕತೆಯತ್ತ ವಾಲುತ್ತಿದ್ದ ಜಡತ್ವದ ಶಕ್ತಿಯನ್ನು ಧನಾತ್ಮಕದತ್ತ ದೂಡಲು ಆಗುತ್ತಿತ್ತೇನೊ? ವ್ಯಕ್ತಿಯೊಬ್ಬ ಭೌತಿಕವಾಗಿ ತನ್ನಾಳಕ್ಕಿಳಿದು ಈ ರೀತಿಯ ಧನಾತ್ಮಕ ಪ್ರಚೋದನೆಯನ್ನಂತೂ ನೇರ ಮಾಡಲು ಅಸಾಧ್ಯ - ಅದು ಮನಸಿನ ಮಾನಸಿಕ ಸ್ತರದಲ್ಲಷ್ಟೆ ಸಾಧ್ಯ. ಆದರೆ ಆ ಮನಸಿಗೆ ಸೂಚನೆ ರವಾನಿಸುತ್ತ ಅದನ್ನು ಶಕ್ತಿ-ಪಲ್ಲಟ ಪ್ರಕ್ರಿಯೆಯಾಗಿ ರೂಪಾಂತರಗೊಳ್ಳುವಂತೆ ಮಾಡುವ ಅಥವ ಆಗಗೊಡಿಸುವ ಭೌತಕ್ರಿಯೆಯೊಂದರ ಸಹಾಯವಿಲ್ಲದೆ ಅದನ್ನು ನಿಯಂತ್ರಿಸಿ, ನಿಭಾಯಿಸುವುದು ಹೇಗೆ? ಅದೂ ಅದೊಂದು ತೋರಿಕೆಯ ಸಂಜ್ಞೆಯಂತಿರದೆ ನಿಜಾಯತಿಯ, ಪ್ರಾಮಾಣಿಕತೆಯ ಸೂಚನೆಯಾಗಿ ರವಾನೆಯಾಗಿ ಒಳಗೆಲ್ಲೊ ಅಡಗಿದ ಆ ಅಂತರಿಕ ತ್ರಿಗುಣ ಶಕ್ತಿ ಸಮೀಕರಣವನ್ನು ಮುಟ್ಟಿ ಮಾರ್ಪಾಡಾಗಲಿಕ್ಕೆ ಪ್ರೇರೇಪಿಸುವಂತಿರಬೇಕು - ಧನಾತ್ಮಕವಾಗಿ...

ಅಂದಹಾಗೆ ತಾತ್ವಿಕವಾಗಿ ಈ ಗುಣತ್ರಯಗಳನ್ನು ಸಾತ್ವಿಕ-ರಾಜಸ-ತಾಮಸ ಎಂದೇನೊ ಗುರುತಿಸಿಬಿಡುವುದು ಸುಲಭವಾದರು ಅದನ್ನು ವೈಜ್ಞಾನಿಕ ದೃಷ್ಟಿಕೋನದ ಪರಿಕಲ್ಪನೆಯಲ್ಲಿ ವಿವರಿಸುವುದು ಹೇಗೆ ? ಅವು ಅಮೂರ್ತಗಳಂತೆ ಅಸ್ತಿತ್ವದಲ್ಲಿದ್ದರು ಅವುಗಳ ಪ್ರಕಟರೂಪ ಅವುಗಳಿಂದ ಹೊರಬಿದ್ದ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುವುದರಿಂದ ಅವು ಯಾವುದಾದರೊಂದು ಮೂಲರೂಪದ ಅಸ್ತಿತ್ವದಲ್ಲಿ ಒಳಗೆಲ್ಲೊ ನೆಲೆಸಿರಬೇಕಲ್ಲವೆ? ಅವುಗಳ ಗುಣ ಸ್ವಭಾವದ ಪ್ರಕಟಣೆ ಇಡಿ ದೇಹಕ್ಕೆ ಅಥವಾ ಯಾವುದಾದರು ಅಂಗಕ್ಕೆ ಸಂಬಂಧಿಸಿರುವುದರಿಂದ ಅವು ದೇಹದೊಳಗಡೆಯೆ ಇರಬೇಕೆನ್ನುವುದೇನೊ ನಿರ್ವಿವಾದ. ಆದರೆ ಅವುಗಳ ಸೂಕ್ಷ್ಮರೂಪಿನ ಕಾರಣದಿಂದ ಮತ್ತು ಅವುಗಳು ತ್ರಿಗುಣಗಳೆ ಆದರೂ ಶಕ್ತಿಯ ಮೂಲದಿಂದುತ್ಪನ್ನವಾದ ಶಕ್ತಿಯ ತುಣುಕುಗಳೆ ಆದ ಕಾರಣ, ಅವನ್ನು ಜೀವಕೋಶಗಳ ಮಟ್ಟದಲ್ಲಿ ಇರುವ ಸತ್ವಗಳೆಂದು ಊಹಿಸುವುದೆ ಸಮಯೋಚಿತ ಮತ್ತು ತಾರ್ಕಿಕ. ಅಂದರೆ ಜೀವಕೋಶಗಳೆಂಬ ಕಾರ್ಖಾನೆಯಲ್ಲಿ, ನ್ಯೂಕ್ಲಿಯಸ್ಸಿನ ಕೇಂದ್ರ ಭಾಗದಲ್ಲಿರುವ ಕ್ರೋಮೊಸೋಮುಗಳೆಂಬ ಕತ್ತರಿಯಾಕಾರದ ನೂಲಿನುಂಡೆಯಲ್ಲಿ ಅಡಗಿಕೊಂಡಿರುವ ಡಿ.ಎನ್.ಎ ಗಳೆಂಬ ಜೀವ ಜಾತಕ ಪಟ್ಟಿಯಲ್ಲಡಗಿಕೊಂಡ ಅಸಂಖ್ಯಾತ 'ವಂಶವಾಹಿ' ಜೀನ್ಸುಗಳ ರೂಪದಲ್ಲೊ ಅಥವಾ ವಂಶವಾಹಿಯಲ್ಲದೆ ಕ್ರೋಮೋಸೋಮಿನಲ್ಲಿ ಬಿದ್ದು ಒದ್ದಾಡುತ್ತಿರುವ ಮತ್ತಾವುದೆ ಸೂಕ್ಷ್ಮಕಣದ ರೂಪದಲ್ಲೊ ಈ ತ್ರಿಗುಣಗಳ ಜಾತಕವೂ ಬರೆಯಲ್ಪಡುತ್ತಿರಬೇಕು. ಒಟ್ಟಾರೆ ಈ ತ್ರಿಗುಣ ಶಕ್ತಿಯೆ ಯಾವುದೊ ಹೆಸರು ಗೊತ್ತಿಲ್ಲದ ಪ್ರೋಟಿನೊಂದರ ರೂಪದಲ್ಲಿ ಜೀವಕೋಶದಲ್ಲಿ ಸಂಗ್ರಹಿತವಾಗುತ್ತಿರಬೇಕು. ಉದಾಹರಣೆಗೆ ಮೂಲದಲ್ಲಿ ಸಾತ್ವಿಕ-ರಾಜಸ-ತಾಮಸ ಗುಣಶಕ್ತಿಗಳ ತುಣುಕುಗಳು ಒಂದೆ ಮೂಲವಸ್ತುವಿನಿಂದಾದ ಶುದ್ದ ಶಕ್ತಿಯೆಂದಿಟ್ಟುಕೊಂಡರೆ, ತಾಮಸದಲ್ಲಿ ಸೇರಿಕೊಂಡ ಯಾವುದೊ ಕೇಡಿ ಪ್ರೋಟಿನೊಂದು (ಅಥವಾ ಅದರಂತಹುದೆ ಪ್ರಭಾವವಿರುವ ಯಾವುದೊ ರಾಸಾಯನಿಕ) ಅದರ ತಾಮಸಿ ಗುಣಕ್ಕೆ ಕಾರಣವಾಗಿ, ಆ ಪ್ರೋಟೀನು ಹೆಚ್ಚಿದಂತೆಲ್ಲ ತಾಮಸಿ ಗುಣದ ಪ್ರಭಾವವೂ ಹೆಚ್ಚುತ್ತ ಹೋಗಬಹುದು. ಉದಾಹರಣೆಗೆ ವ್ಯಕ್ತಿಯೊಬ್ಬ ಕೋಪಗೊಂಡಾಗಲೊ , ಅಥವಾ ಯಾವುದಾದರು ದುಷ್ಕೃತ್ಯಕ್ಕಿಳಿದಾಗಲೊ, ಕುಟಿಲತನದಿಂದ ವರ್ತಿಸಿದಾಗಲೊ - ಆ ಪ್ರಕ್ರಿಯೆಯೆ ಯಾವುದೊ ರಾಸಾಯನಿಕವನ್ನು ಪ್ರಚೋದಿಸಿ ಈ ಪ್ರೋಟೀನಿನ ಉತ್ಪತ್ತಿಗೆ ಕಾರಣವಾದರೆ, ಆ ಉತ್ಪತ್ತಿಯಾದ ವಸ್ತು ಕೊಬ್ಬು ಶೇಖರವಾಗುವಂತೆ ಕೋಶದಲೆಲ್ಲೊ ಸೂಕ್ಷ್ಮರೂಪದಲ್ಲಿ ಜಮೆಯಾಗುತ್ತಿರಬೇಕು. ಅದು ಜಮೆಯಾಗುತ್ತ ಆಗುತ್ತ ಅದರ ಸಂಖ್ಯೆ ಅಥವ ಮೊತ್ತ ಹೆಚ್ಚಾದಷ್ಟೂ, ತಾಮಸಿ ಪ್ರಭಾವ ಹೆಚ್ಚುತ್ತ ಹೋಗುತ್ತಿರಬೇಕು. ಅದೇ ರೀತಿಯಾಗಿ ರಾಜಸ ಗುಣಕ್ಕೆ ಮತ್ತೊಂದು ಪ್ರೋಟೀನ್ ಅಥವಾ ರಾಸಾಯನಿಕ ಕಾರಣವಾಗಿರಬಹುದು. ಇನ್ನು ಮಿಕ್ಕುಳಿದ ಸಾತ್ವಿಕ - ಶುದ್ಧ ಮೂಲರೂಪದ ಶಕ್ತಿಯ ತುಣುಕಾಗಿರಬಹುದು - ಯಾವ ರಾಸಾಯನಿಕದ ಪ್ರಭಾವಕ್ಕೂ ಒಳಗಾಗದೆ. ಅಂದರೆ ಈ ಸಾತ್ವಿಕ ಶುದ್ದಶಕ್ತಿಯ ಗುಣ , ರಾಜಸದ ರಾಸಾಯನಿಕ ಪ್ರಚೋದನೆಯಾದಾಗ ತನ್ನು ಮೂಲ ಸಾತ್ವಿಕದಿಂದ ರಾಜಸವಾಗಿ ರೂಪಾಂತರವಾಗುತ್ತಿರಬಹುದು; ತಾಮಸದ ರಾಸಾಯನಿಕದ ಪ್ರಚೋದನೆಯಾದಾಗ ಅದೇ ಸಾತ್ವಿಕ ತಾಮಸವಾಗಿ ರೂಪಾಂತರವಾಗುತ್ತಿರಬಹುದು. ಬಹುಶಃ ನಮ್ಮ ಆಧುನಿಕ ವೈದ್ಯ ವಿಜ್ಞಾನ 'ಬ್ಲಡ್ ಪ್ರೆಷರನ್ನು' ಅಳೆದು ನೋಡಿದಾಗ ಅದು ತೋರಿಸುವ ರೀಡಿಂಗುಗಳು ಈ ತಾಮಸ-ರಾಜಸದ ಅಳತೆಗಳಿಂದ ಪ್ರೇರಿತವಾದವುಗಳೆ ಇರಬೇಕೇನೊ - ಸದಾ ಕೋಪಗೊಳ್ಳುತ್ತಿದ್ದರೆ (ಅಥವಾ ಆಹಾರ ಶೈಲಿಯಿಂದಾಗಿ) ಹೆಚ್ಚಿದ ತಾಮಸಿ ಗುಣಕ್ಕೆ ಬ್ಲಡ್ ಪ್ರೆಷರು ಹೆಚ್ಚುಕಡಿಮೆಯಾಗುವ ಹಾಗೆ... ಇದೆ ವಾದದ ಲಹರಿಯಲ್ಲಿ ಹೊರಟರೆ ತ್ರಿಗುಣದ ಮೂಲಗಳಾದ ಜ್ಞಾನ-ಇಚ್ಛಾ-ಕ್ರಿಯಾ ತ್ರಿಶಕ್ತಿಗಳು ಸಹ ಒಂದೆ ಮೂಲಶುದ್ಧ ಶಕ್ತಿಯಿಂದ ಉತ್ಪನ್ನವಾದರೂ, ಅದರಲ್ಲಿ ಪ್ರೇರೇಪಿತಗೊಂಡ ರಾಸಾಯನಿಕದಿಂದಾಗಿ ಅದಕ್ಕೆ ಜ್ಞಾನದ-ಇಚ್ಛೆಯ-ಕ್ರಿಯೆಯ ಪ್ರಚೋದನೆ ಬರುತ್ತಿರಬೇಕು. ಅದನ್ನೆ ತ್ರಿಗುಣ-ತ್ರಿಶಕ್ತಿಗಳ ಸಂಯೋಜಿತ ನಡುವಳಿಕೆಗೆ ವಿಸ್ತರಿಸಿದರೆ, ಬಹುಶಃ ಜ್ಞಾನಶಕ್ತಿಯ ರಾಸಾಯನಿಕ ಸ್ರವಿಸಿಕೊಳ್ಳದ ಹಾಗೆ ತಾಮಸದ ರಾಸಾಯನಿಕ ಹೋಗಿ ಆ ಜ್ಞಾನಶಕ್ತಿಯ ತುಣುಕನ್ನು ಆವರಿಸಿಕೊಂಡು ಬಿಟ್ಟಿದ್ದರೆ, ತಾತ್ವಿಕ ಭಾಷೆಯಲ್ಲಿ ಅದನ್ನೆ 'ಮಾಯೆಯ ಮುಸುಕಿನಲ್ಲಡಗಿದ ಜ್ಞಾನ' ಅಥವಾ 'ಅಜ್ಞಾನ' ಎಂದು ಕರೆಯುತ್ತೇವೇನೊ? ಮಾಯೆಯ ಮುಸುಕು ಸರಿಯಿತೆಂದರೆ ಅರ್ಥ ಈ ಆವರಿಸಿ ಮುಚ್ಚಿಕೊಂಡಿದ್ದ ತಾಮಸದ ರಾಸಾಯನಿಕ ಕರಗಿ ಜ್ಞಾನಶಕ್ತಿಯ ಅನಾವರಣವಾಗಲಿಕ್ಕೆ ತೆರೆಯಂತೆ ಸರಿದು ದಾರಿ ಮಾಡಿಕೊಟ್ಟಿತು ಎಂದು ಅರ್ಥೈಸಬಹುದು. ಇಡೀ ಜೀವಕೋಶದ ಮಟ್ಟದಲ್ಲಿ ನಡೆಯುವ ಆಟಗಳೆಲ್ಲ ಈ ರೀತಿಯ ರಾಸಾಯನಿಕಗಳ ಹುನ್ನಾರವೆ ಆಗಿರುವುದರಿಂದ ಇಡೀ ಶಕ್ತಿಯೆ ಒಂದು ರಾಸಾಯನಿಕ ಪ್ರಕ್ರಿಯೆಯ ಪ್ರೇರಕ ಅಥವಾ ಫಲಿತ ಎಂದೆ ಹೇಳಬಹುದು ಕನಿಷ್ಠ ಜೀವಿಗಳ ಮಟ್ಟಿಗೆ. ಅಲ್ಲಿಗೆ ತ್ರಿಗುಣ-ತ್ರಿಶಕ್ತಿಗಳಿಗು ಒಂದು ತಾತ್ವಿಕ-ಭೌತಿಕ ಮೂಲರೂಪ ಸಿಕ್ಕಂತಾಯಿತಲ್ಲ ?

ರಾಜಸ-ತಾಮಸ-ಸಾತ್ವಿಕಗಳ ಸಮತೋಲನೆ ವಿಚಲಿತವಾಗುವುದು ಮಾಯೆಯಿಂದ (ತಾಮಸ), ಅದರಿಂದಲೆ ತಪ್ಪೆಸಗಿಸುವ ಕಾರ್ಯ ನಡೆಯುವುದು. ಮಾಯೆಯ ಮುಸುಕು ಇದನ್ನು ಹೇಗೆ ಸಾಧ್ಯವಾಗಿಸುತ್ತದೆ? ಪ್ರಲೋಭನೆ, ಆಸೆ, ಅತೃಪ್ತಿ ಇತ್ಯಾದಿಗಳಂತಹ ನೆಗಟೀವ್ ಶಕ್ತಿಗಳ ಪ್ರೇರೇಪಣೆಯಿಂದ ಇರಬೇಕಲ್ಲವೆ? ಅಂದರೆ ಯಾವಾಗ ಬಾಹ್ಯದಲ್ಲಿ ಈ ಆಸೆ ಆಕಾಂಕ್ಷೆಗಳು ತಲೆದೋರುತ್ತ ಪ್ರಕಟವಾಗುತ್ತವೊ, ಬಾಹ್ಯೇಂದ್ರಿಯಗಳ ಮುಖೇನ ಅದನ್ನು ಸಂಗ್ರಹಿಸಿದ ಮನಸು ಅದನ್ನು ಇಚ್ಛಾಶಕ್ತಿಯಾಗಿಸಿ ಗ್ರಹಿಸಿಕೊಳ್ಳುತ್ತಿರುತ್ತದೆ. ಉದಾಹರಣೆಗೆ ಇದೊಂದು ಅನುಚಿತ ಅಥವಾ ಅನೈತಿಕ ಇಚ್ಛೆಯೆಂದೆ ಇಟ್ಟುಕೊಳ್ಳೋಣ. ಒಂದು ವೇಳೆ ಅಲ್ಲಿ ಶೇಖರವಾದ ತಾಮಸದ ಶಕ್ತಿಯೆ ಸಾತ್ವಿಕಕ್ಕಿಂತ ಹೆಚ್ಚಾಗಿದ್ದು, ಹೆಚ್ಚು ಪ್ರಭಾವಿರುವಂತದ್ದಾಗಿದ್ದರೆ ಆ ಇಚ್ಛಾಶಕ್ತಿಯ (ಅರ್ಥಾತ್ ಆ ಸಂಬಂಧಿ ರಾಸಾಯನಿಕದ) ಪ್ರಲೋಭನೆಯನ್ನೆ ಬಂಡವಾಳವಾಗಿಸಿಕೊಂಡ ಅಜ್ಞಾನದ ಮಾಯೆಯ ಮುಸುಕು (ಅರ್ಥಾತ್ ತಾಮಸದ ರಾಸಾಯನಿಕ) ಆ ಇಚ್ಛೆಯ ನೈತಿಕಾನೈತಿಕತೆಯನ್ನು ವಿಶ್ಲೇಷಿಸುವ ಜ್ಞಾನಶಕ್ತಿಗೆ (ಅರ್ಥಾತ್ ಸಾತ್ವಿಕಕೆ) ತಾವೀಯದೆ ತಾನೆ ಪ್ರಭಾವ ಬೀರಿ ತಪ್ಪು ಹೆಜ್ಜೆಯಿಡಲು ಪ್ರಚೋದಿಸುತ್ತದೆ - ತನ್ನ ಪ್ರಭಾವದ ರಾಸಾಯನಿಕವನ್ನು ಹೆಚ್ಚಾಗಿ ಸ್ರವಿಸುವ ಮೂಲಕ, ತಾಮಸದತ್ತ ನಡೆಯೆ ಸರಿಯೆನ್ನುವ ನಂಬಿಕೆ ಬರುವ ಹಾಗೆ. ಒಂದು ವೇಳೆ ಇದೇ ಅನುಚಿತ ಆಸೆಯ ಬದಲು ಸಂಯಮದ, ನಿರ್ಲಿಪ್ತಭಾವದ ಬಾಹ್ಯಕ್ರಿಯೆ ಪ್ರಕಟವಾಗಿದ್ದರೆ ಅದು ಅನೈತಿಕ ಇಚ್ಛಾಶಕ್ತಿಯಾಗಿ ಮನಸಿನಲ್ಲಿ ಮೂಡುವ ಬದಲು, ಮೊದಲು ಸಂಯಮದ ಜ್ಞಾನಶಕ್ತಿಯಾಗಿ ಪ್ರಕಟವಾಗಿ (ಅರ್ಥಾತ್ ಆ ತಾಮಸದ ರಾಸಾಯನಿಕವನ್ನು ಕರಗಿಸುವ ರಾಸಾಯನಿಕವಾಗಿ) ಮಾಯೆಯ ಮುಸುಕನ್ನು ಸುಲಭದಲ್ಲಿ ಬೇಧಿಸುತ್ತಿತ್ತೇನೊ? ಅದಾದಾಗ ಏಮಾರಿಸಲಾಗದ ಮಾಯೆ ಜ್ಞಾನಶಕ್ತಿಗೆ ದಾರಿ ಕೊಟ್ಟು ನೈತಿಕತೆಯ ನಿರ್ಧಾರಕ್ಕೆ ಒತ್ತುಗೊಡಬೇಕಾಗುತ್ತಿತ್ತು. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೆ ಪ್ರತಿ ಬಾರಿಯ ಸತ್ಕರ್ಮ, ಸತ್ ಚಿಂತನೆ ಮನಸಿನಲ್ಲಿ ಜ್ಞಾನಶಕ್ತಿಯಾಗಿ ರವಾನೆಯಾಗುತ್ತ (ಅರ್ಥಾತ್ ಸಾತ್ವಿಕದ ರಾಸಾಯನಿಕದ ಶೇಖರಿತ ಮೊತ್ತ ನಿರಂತರವಾಗಿ ಹೆಚ್ಚಿ, ತಾಮಸ ಶೇಖರಣೆಯನ್ನು ಸತತವಾಗಿ ಅಧಿಗಮಿಸುತ್ತ), ಅದರ ಪರಿಣಾಮವಾಗಿ ಬರಿ ಶುದ್ಧ ಸಾತ್ವಿಕ ತೀರ್ಮಾನಾಲೋಚನೆಗಳನ್ನು ಮರಳಿ ಪ್ರತಿಕ್ರಿಯೆಯಾಗಿ ಪಡೆಯುತ್ತದೆಂದು ಆಯ್ತಲ್ಲವೆ? ಅಂದರೆ ಪೂರಕ ಬಾಹ್ಯ ಕ್ರಿಯೆಗಳಿಂದ ಬರಿಯ ಸುಗುಣ ರಾಸಾಯನಿಕಗಳೆ ಉತ್ಪಾದನೆಯಾಗಿ ಶೇಖರವಾಗುತ್ತ, ಆ ಕಾರಣದಿಂದ ಸಾತ್ವಿಕತೆಯನ್ನೆ ಹೆಚ್ಚು ಪ್ರೇರೇಪಿಸುವ ಹಾಗೆ.. ಇದೊಂದು ರೀತಿ 'ಗುಡ್ ಕೊಲೆಸ್ಟರಾಲ್, ಬ್ಯಾಡ್ ಕೊಲೆಸ್ಟರಾಲ್' ಸಿದ್ದಾಂತವಿರುವ ಹಾಗೆ ಭಾಸವಾಗುತ್ತಿದೆಯಲ್ಲ ? ಇದೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರಕ್ರಿಯೆಯನ್ನು ಬರಿಯ ಆಲೋಚನೆ, ಅನಿಸಿಕೆಗೆ ಮಾತ್ರ ಸೀಮಿತವಾಗಿಸದೆ, ಬಾಹ್ಯದಲ್ಲಿ ಮಾಡುವ ಭೌತಿಕ ಕರ್ಮಗಳೂ ಸಹ ಅದೆ ರೀತಿ ಮನಸಿಗೆ ಸಂದೇಶ ಕೊಡುತ್ತಿರಬೇಕೆಂದೂ ಊಹಿಸಬಹುದಲ್ಲವೆ - ಅಂತಿಮವಾಗಿ ಅದೇ ರಾಸಾಯನಿಕಗಳ ಬಳಕೆ, ಶೇಖರಣೆಯಲ್ಲಿ ಪರ್ಯಾವಸಾನವಾಗುತ್ತ ? ಅಂದರೆ ಆಲೋಚನೆಯಲ್ಲಾಗಲಿ, ಕ್ರಿಯೆಯಲ್ಲಾಗಲಿ ಏನೇ ಮಾಡಿದರೂ ಅದರನುಸಾರವೆ ಈ ತ್ರಿಗುಣಶಕ್ತಿಗಳು ಬೆರೆತು ಅದರ ಸಾಂದ್ರತೆಯನುಸಾರದ ಪ್ರತಿಕ್ರಿಯೆಯಾಗಿ ಮಾರ್ನುಡಿಯುತ್ತವೆ - ನಿರ್ಧಾರ, ತೀರ್ಮಾನಗಳ ರೂಪದಲ್ಲಿ. ನಮ್ಮ ಕರ್ಮ, ಚಿಂತನೆ ಸರಿಯಿದ್ದರೆ ಅವೆಲ್ಲವೂ ಗುಣಾತ್ಮಕ ಸಂದೇಶದ (ಪಾಸಿಟಿವ್ ಸಜೆಶನ್ನಿನ) ರೂಪದಲ್ಲಿ ಕಾರ್ಯ ನಿರ್ವಹಿಸುತ್ತವೆ. ಅದು ಒಟ್ಟಾರೆ ಒಳಗಿರುವ ರಾಜಸ-ಸಾತ್ವಿಕ ಮೊತ್ತವನ್ನು ಬಲಪಡಿಸುತ್ತ ತಾಮಸ-ಸಾತ್ವಿಕ ಮೊತ್ತವನ್ನು ಕುಗ್ಗಿಸುತ್ತ ಸಾಗುತ್ತದೆ. ಅಂದರೆ ಒಳಿತಿನ ಕೆಲಸ, ಒಳಿತಿನ ಚಿಂತನೆ, ಒಳಿತಾಗಿಸುವ ಶಕ್ತಿಯನ್ನು ಪ್ರಚೋದಿಸುವ ಹಾಗೆ; ಅದೇ ತರ್ಕದಲ್ಲಿ ಕುಯುಕ್ತಿಯ ಕೆಲಸ, ಕುಯುಕ್ತಿಯ ಚಿಂತನೆ ಅದರ ವಿರುದ್ಧ ಸ್ತರದಲ್ಲಿ ವರ್ತಿಸುವ ಬಗೆಯನ್ನು ಊಹಿಸಬಹುದು. ಇದು ತಾತ್ವಿಕ ಮಟ್ಟದ ವಿವರಣೆಯಾದರೆ, ಭೌತಿಕ ಮತ್ತು ವೈಜ್ಞಾನಿಕ ಪರಿಧಿಯಲ್ಲಿ ಮತ್ತೆ ರಾಸಾಯನಿಕಗಳ ಉತ್ಪಾದನೆ ಮತ್ತು ಬಿಡುಗಡೆಯ ಪ್ರಕ್ರಿಯಗಳಾಗಿ ವಿವರಿಸಬಹುದು, ಹಿಂದಿನ ಕೆಲವು ಉದಾಹರಣೆಗಳಲ್ಲಿ ನಿರೂಪಿಸಿದಂತೆ. ಅಂದರೆ ಬಾಹ್ಯದ ಕರ್ಮದಲ್ಲಿ ನಿರಂತರ ಸತ್ಕಾರ್ಯ, ಚಿಂತನೆಗಳಿದ್ದರೆ ಸಾಕೆ - ಅದು ತನ್ನಷ್ಟಕ್ಕೆ ತಾನೆ ಪಂಡಿತ, ಪಾಮರರೆನ್ನದೆ ಎಲ್ಲರೊಳಗಿನ ಶುದ್ಧಿಯನ್ನು ನಡೆಸುವ ಸರಳ ಆಯುಧದಂತೆ ಕಾರ್ಯವನ್ನೆಸಗುವುದೆ? ಒಳ್ಳೆಯತನ, ಕೆಟ್ಟತನವೆನ್ನುವುದು ಆಸ್ತಿ-ಅಂತಸ್ತುಗಳ, ಬಡವ-ಬಲ್ಲಿದರೆಂಬ ಗೊಡವೆಯಿಲ್ಲದೆ ಎಲ್ಲರಲ್ಲು ಹಂಚಿಹೋಗಿರುವ ಪ್ರಕ್ರಿಯೆಯ ಹಿನ್ನಲೆಗೆ ಇದೆ ಮೂಲಕಾರಣವೆ? ಇದೊಂದು ರೀತಿಯ ಕರ್ಮ ಸಿದ್ದಾಂತದ , 'ಧರ್ಮದನುಸಾರ ನಿನ್ನ ಕರ್ಮ ನೀ ಮಾಡು' ಎನ್ನುವ ಮಾತಿಗೆ ಹತ್ತಿರವಾದಂತೆ ಕಾಣುವುದಲ್ಲಾ ? ನಮ್ಮ ಧರ್ಮ-ಕರ್ಮ ಸಿದ್ದಾಂತಗಳೆಲ್ಲ ಯುಗಯುಗದಿಂದ ಇದೇ ಸಿದ್ದಾಂತವನ್ನು ಬೋಧಿಸುತ್ತ ಬಂದಿದ್ದರೂ, ನಾವೆ ಅದನ್ನು ಸೂಕ್ತವಾಗಿ ಗ್ರಹಿಸದೆ ನಿರ್ಲಕ್ಷಿಸುತ್ತಾ ಬಂದಿದ್ದೇವಾ? ಜಗದೆಲ್ಲ ಸಂಕೀರ್ಣತೆಯುತ್ತರ ಈ ಸರಳ ಕರ್ಮ ಸಿದ್ದಾಂತದಲ್ಲೆ ಪಾಪ ಪುಣ್ಯಗಳೆಂಬ ಧರ್ಮಸೂಕ್ಷ್ಮದಡಿಯಲ್ಲೆ ಸಂಕ್ಷಿಪ್ತವಾಗಿ ಅಡಕವಾಗಿಬಿಟ್ಟಿದೆಯಾ? ಅದರ 'ಕಣ್ಣಿಗೆ ನೇರವಾಗಿ ಕಾಣದ' ಕೊಂಡಿಯಿಂದ , ಅಥವಾ ವೇದಾಂತ, ಪುರಾಣ ಸಾರದಂತೆ 'ಮಾಯೆಯ ಮುಸುಕಿನ ದೆಸೆಯಿಂದ' ಅವ್ಯಾವುದು ಅರಿವಾಗದ ಮಂಕು ಕವಿದುಕೊಂಡುಬಿಟ್ಟಿದೆಯೆ?

ಒಂದು ಬಾರಿ ಈ ತಾತ್ವಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳ ನಡುವಣ ಸಂಬಂಧ ಹೇಗೆ ಆ ಹೊತ್ತಿನ ಗುಣಾವಗುಣ ನಡುವಳಿಕೆಗಳನ್ನು ನಿರ್ದೇಶಿಸುತ್ತದೆ ಎಂದರಿವಾದ ಮೇಲೆ, ಅದನ್ನು ಬಳಸಿ ಪರಿಸ್ಥಿತಿ ಮತ್ತೆ ಹದಗೆಡದಂತೆ (ಅರ್ಥಾತ್ ಮತ್ತಷ್ಟು ತಾಮಸ ರಾಸಾಯನಿಕದ ಶೇಖರಣೆ ಹೆಚ್ಚಾಗದಂತೆ) ನೋಡಿಕೊಳ್ಳಬಹುದಾದರೂ, ಈಗಾಗಲೆ ವರ್ಷಾಂತರಗಳಿಂದ ಸೇರಿಕೊಂಡು ದಪ್ಪನೆ ಚರ್ಮವಾಗಿ ಕೂತ ತಾಮಸದ ಕಥೆಯೇನು? ಕೊಬ್ಬು ಕರಗಿಸುವಂತೆ ಅದನ್ನು ಕರಗಿಸಬೇಕಾದ ಅಗತ್ಯವಿರುತ್ತದೆಯಲ್ಲ? ಅಲ್ಲಿಂದ ಮುಂದಕ್ಕೆ ಹದಗೆಡದಂತೆ ನೋಡಿಕೊಳ್ಳುವುದೇನೊ ದಿನನಿತ್ಯದಲ್ಲಿ ಪಾಪಪುಣ್ಯದ ಭೀತಿಯಲ್ಲಿ ಎಲ್ಲರೂ ಮಾಡಬಹುದಾದ ಕರ್ಮಾಚಾರ ಎಂದರೂ, ಇದು ಮತ್ತಷ್ಟು ಕೆಡುಕೇನೂ ಆಗದಂತಹ 'ತಡೆಯೊಡ್ಡುವ' ಪ್ರಿವೆಂಟಿವ್ ಅಪ್ರೋಚ್ ಆಗುವುದೆ ಹೊರತು, ಈಗಾಗಲೆ ಮಾಡಬಾರದ್ದೆಲ್ಲ ಮಾಡಿ ಪಾಪದ ಮೂಟೆಯನ್ನು ಸಾಕಷ್ಟು ಹೆಗಲೇರಿಸಿಕೊಂಡಿರುವ ಜೀವಿಗೆ ಯಾವ ತರದಲ್ಲೂ ಸಹಾಯಕವಾಗುವುದಿಲ್ಲವಲ್ಲ? ಅಥವಾ ಇದೆ ಪ್ರಕ್ರಿಯೆಯ ಮತ್ತೊಂದು ಅಂಗವಾಗಿ ಅದೂ ಕೂಡ ಸಾಧ್ಯವಾಗುವ ಯಾವುದಾದರು ದಾರಿಯಿದೆಯೆ? ಪಾಪವೆಂದರೆ ತಾಮಸದ ನಿವ್ವಳ ಮೊತ್ತ, ಪುಣ್ಯವೆಂದರೆ ಸಾತ್ವಿಕದ ನಿವ್ವಳ ಮೊತ್ತ ಎಂದಂದುಕೊಂಡರೆ (ಪಾಪಪುಣ್ಯಗಳೆಂಬ ಅಮೂರ್ತ ಕಲ್ಪನೆಯ ಭೌತಿಕ ರೂಪ ಈ ಸಾತ್ವಿಕ-ತಾಮಸ ರಾಸಾಯನಿಕಗಳ ರೂಪವಾಗಿ ಅಸ್ತಿತ್ವದಲ್ಲಿವೆಯೆಂಬ ವಾದದೊಂದಿಗೆ), ಪ್ರತಿ ಚಿಂತನೆ, ಕ್ರಿಯಾ, ಕರ್ಮದ ಮೂಲಕ ಇವೆರಡರ ಬುಟ್ಟಿಗೂ ನಾವು ಪಾಪಪುಣ್ಯಗಳನ್ನು (ಸಾತ್ವಿಕ-ತಾಮಸ ರಾಸಾಯನಿಕಗಳ ರೂಪವಾಗಿ) ಸೇರಿಸುತ್ತ ಹೋಗುತ್ತೇವೆಂದು ಅರ್ಥವಲ್ಲವೆ? ಪಾಪಕರ್ಮಗಳು ತಾಮಸವನ್ನು ಹೆಚ್ಚಿಸಿ ಅದರ ಬದಲಿಗೆ ರಾಜಸ ಮತ್ತು ಸಾತ್ವಿಕವನ್ನು ಆಪೋಶೀಸುತ್ತ ಹೋಗುತ್ತವೆ. ಪುಣ್ಯ ಕರ್ಮಗಳು ಹೆಚ್ಚಾದರೆ ಅವು ಸಾತ್ವಿಕವನ್ನು ಹಿಗ್ಗಿಸಿ ತಾಮಸವನ್ನು ಕುಗ್ಗಿಸಲು ಪ್ರವೃತ್ತವಾಗುವುದರಿಂದ ರಾಜಸ-ಸಾತ್ವಿಕ ಪ್ರವೃತ್ತಿ ಪ್ರಬಲವಾಗುತ್ತ ಹೋಗುತ್ತದೆ. ಅದೆ ಈಗಾಗಲೆ ಪಾಪದ ಕಾರ್ಯಗಳಿಂದ ತಾಮಸ ಪ್ರವೃತ್ತಿಯೆ ಪ್ರಧಾನವಾಗಿರುವ ವ್ಯಕ್ತಿಯಲ್ಲೂ ಸಹ - ತಡವಾಗಿಯಾದರೂ ಸತ್ಕರ್ಮ, ಸತ್ಕಾರ್ಯಕ್ಕಿಳಿದರೆ ಅದರ ಧನಾತ್ಮಕ ಸಂದೇಶ ರವಾನೆಯಾಗುವ ಪರಿಣಾಮ, ಸಾತ್ವಿಕತೆ ಹೆಚ್ಚುತ್ತಾ ಹೋಗಿ ವಿಪರೀತವಾಗಿರುವ ಪಾಪಿ ತಾಮಸಿಕತೆಯೂ ಕರಗುತ್ತಾ ಹೋಗಲೇಬೇಕಲ್ಲವೆ? ತಾಮಸ ಹೆಚ್ಚಾದಾಗ ಅದು ಅಜ್ಞಾನದ ಪ್ರತೀಕವಾದ ಕಾರಣ ಏನೇ ಮಾಡಿಸಿದರೂ ಅದರಲ್ಲಿ ಸಂತೃಪ್ತಿಯಿಲ್ಲದ ಅತೃಪ್ತಿ, ಅಡ್ಡಾದಿಡ್ಡಿ ಪ್ರವೃತ್ತಿ ಧಾರಾಳವಾಗಿ ಕಾಣಿಸುತ್ತದೆ (ಭೌತಿಕವಾಗಿ ಅದು ಆ ರಾಸಾಯನಿಕದ ಗುಣ). ಅಲ್ಲದೆ ತಾಮಸಿ ಪ್ರವೃತ್ತಿಯ ಸಹಜ ಗುಣದಿಂದಲೆ ಯಶಸ್ಸು ಕೂಡ ಯಶಸ್ಸಾಗಿ ಕಾಣಿಸದ ಅಹಂಮಿಕೆ, ದರ್ಪ, ಖೇದ, ಅನುಮಾನ, ಸಂಶಯಗಳೆಲ್ಲದರ ಕಲಸು ಮೇಲೋಗರವಾಗಿ, ಯಶಸ್ಸಿಗೆ ಆಗಬೇಕಾಗಿದ್ದ ಸಾತ್ವಿಕ ಆನಂದ, ಸಂತೋಷ, ಪ್ರಶಾಂತತೆಯ ಬದಲು ಏನೊ ಅಸಹನೆ, ಅಸಂಪೂರ್ಣತೆ, ಖಾಲಿತನ, ಕಳವಳ, ಪಿಚ್ಚೆನಿಸುವ ಭಾವ ಕಾಡುತ್ತದೆ. ಬಹುಶಃ ಇದಕ್ಕೆ ಕಾರಣ ತಾಮಸ ಶಕ್ತಿಯೆಂದರೆ ಕೇವಲ ಋಣ ಚಿಹ್ನೆಗಳ ಕಣಗಳೆ ತುಂಬಿರುವ ನೇತ್ಯಾತ್ಮಕ ರಾಸಾಯನಿಕ ಶಕ್ತಿಯಿರಬೇಕು (ನೆಗಟೀವ್ ಚಾರ್ಜ ಪಾರ್ಟಿಕಲ್ಸ್ ವಿತ್ ನೆಗಟೀವ್ ಎನರ್ಜಿ). ಅದರಿಂದಲೆ ಆ ಶಕ್ತಿ ಬರಿಯ ಕೆಡುಕನ್ನೆ ಪ್ರಕ್ಷೇಪಿಸುತ್ತ ಸಾಗಲಿಕ್ಕೆ ಹವಣಿಸುವುದೇನೊ ? ತನ್ನ ವಿಷಯದಲ್ಲೂ ಪ್ರಾಜೆಕ್ಟಿನ ಯಶಸ್ಸಾಗಲಿ ಮತ್ತೊಂದು ಜಯವಾಗಲಿ ಸುಲಭದಲಂತೂ ಬರಲಿಲ್ಲ.. ಬಂದರೂ ಅದನ್ನು ಆಸ್ವಾದಿಸಲು ಎಡೆಯೆ ಇರಲಿಲ್ಲ ಆ ತಾಮಸ ಪ್ರೇರಿತ ಪರಿಸ್ಥಿತಿಯಲ್ಲಿ. ಆದರೂ ನಡುನಡುವೆ ಜಯಗಳು, ಗೆಲುವುಗಳು ಸಿಕ್ಕಿದ್ದಕ್ಕೆ, ಪ್ರಾಯಶಃ ಜತೆಯಲಿದ್ದ ಪುಣ್ಯದ ಸಂಚಿಯ ಸಾತ್ವಿಕಶಕ್ತಿಯೂ ಕಾರಣವಾಗಿರಬೇಕು - ಅದರ ಧನ ಚಿಹ್ನೆಗಳ ಧನಾತ್ಮಕ ಶಕ್ತಿಯನ್ನು ಅಂಧಕಾರಕಗಳ ನಡುವೆಯೂ ಪ್ರಕ್ಷೇಪಿಸುತ್ತ.. ಆದರೆ ಅದು ತಾಮಸವನ್ನು ಸಂಪೂರ್ಣ ನುಂಗಿ ಪ್ರತಿಬಂಧಿಸುವ ಮಟ್ಟದಲ್ಲಿ ಇರಲಿಲ್ಲವಾಗಿ ಗೆಲುವು, ಸೋಲು, ಗೊಂದಲಗಳ ನಿರಂತರ ತಾಡನ ಜತೆಯಲ್ಲೆ ಸಾಗಿತ್ತು ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತ. ಅಂದರೆ ಮಾಡುತಿದ್ದ ಕಾರ್ಯಗಳಿಗನುಸಾರವಾಗಿ ಎರಡು ಬಗೆಯ ರಾಸಾಯನಿಕಗಳ ಉತ್ಪಾದನೆ ಯಾ ಪ್ರಚೋದನೆಯಾಗಿ ಎರಡರ ಪ್ರಭಾವವೂ ಬೀರುತಿದ್ದ ಕಾರಣ ಎರಡರ ಫಲಿತಗಳೂ ಪ್ರಕಟವಾಗಿ ತೋರಿಕೊಂಡು ಗೊಂದಲದಲ್ಲಿ ಕೆಡವುತ್ತಿದ್ದಿರಬೇಕು - ವೈಜ್ಞಾನಿಕ ಪರಿಭಾಷೆಯಲ್ಲಿ ಹೇಳುವುದಾದರೆ. ಅಂದ ಮೇಲೆ ಈಗ ಸತ್ಕರ್ಮಕ್ಕಿಳಿದರೆ ಅದು ತಾಮಸಿ ಅಥವಾ ಅಸುರಿ ಶಕ್ತಿಯನ್ನು ಕುಗ್ಗಿಸಬಹುದಾದರೂ ಅದು ಪೂರ್ತಿ ಕರಗಲೂ ಇಡೀ ಆಯಸ್ಸು ಮುಗಿಯುವ ತನಕ ಕಾಯಬೇಕಾಗಬಹುದೇನೊ ? ಅಥವಾ ಈಗಾಗಲೆ ಶೇಖರಿಸಿಕೊಂಡಿರುವುದನ್ನೆಲ್ಲ ಕ್ಷಿಪ್ರವೇಗದಲ್ಲಿ ಕರಗಿಸಲು ಸಾಧ್ಯವಿರುವ ಯಾವುದಾದರು 'ತುಂಡಾದ ಬಳಸು ದಾರಿಯಂತಹ ಶಾರ್ಟ್ಕಟ್' - ಅದನ್ನು ತೀವ್ರವಾಗಿ ಸಾಧಿಸುವ ವಿಧಾನವೇನಾದರೂ ಇರಬಹುದೆ ? ಉದಾಹರಣೆಗೆ ಯಾವುದೊ ತಾಮಸೀ ಕಾರ್ಯವನ್ನು ಮಾಡಿ ತಗಲಿಸಿಕೊಂಡ ಪಾಪ ಕರ್ಮವನ್ನು ಅದೇ ಕರ್ಮದ ವಿರುದ್ಧಾರ್ಥಕವಾದ ಸಾತ್ವಿಕ ಕಾರ್ಯ ಮಾಡಿ (ಅಥವಾ ಕನಿಷ್ಠ ಬಹುತೇಕ ಹತ್ತಿರವಾದ ಸಾತ್ವಿಕ ಕರ್ಮದಿಂದ) ನಿವಾರಿಸಿಕೊಳ್ಳಲು ಸಾಧ್ಯವಿರಬಹುದೆ? ಭೌತಿಕವಾಗಿ ಕಡೆಗದೆಲ್ಲ ಕೇವಲ ಸರಿಯಾದ ಮಟ್ಟದಲ್ಲಿ ನಡೆಸಬೇಕಾದ ರಾಸಾಯನಿಕ ಕ್ರಿಯೆಗಳಾದ ಕಾರಣ, ನಡೆಸುವ ಸಾಧ್ಯತೆಯಂತೂ ವೈಜ್ಞಾನಿಕವಾಗಿಯೂ ಇರಬೇಕಲ್ಲವೆ? ಇದೊಂದು ರೀತಿ ನಮ್ಮ ಶಾಸ್ತ್ರ, ಪದ್ದತಿಗಳಲ್ಲಿ ಯಾವುದೊ ಶಾಂತಿ ಮಾಡಿಸಿ ಕಾಡುತ್ತಿರುವ ಪೀಡೆಯ ( ಅರ್ಥಾತ್ ಕುಟಿಲ ರಾಸಾಯನಿಕದ) ಪರಿಹಾರ ಕಂಡುಕೊಂಡ ಹಾಗೆ ಇದ್ದರೂ, ಅದೆ ಸೂಕ್ತ ಮತ್ತು ಕ್ಷಿಪ್ರ ವಿಧಾನವೊ ಏನೊ? ಅಂದರೆ ತಾನೂ ಕೂಡ ತನ್ನ ಪೂರ್ವಾಶ್ರಮದ ತಾಮಸಿ ಸಂಗತಿಗಳನ್ನೆಲ್ಲ ಹುಡುಕುತ್ತ ಸಾಧ್ಯವಿರುವೆಡೆಯೆಲ್ಲ ಅದರ ಪರಿಹಾರಿಕ ಕರ್ಮ ನಡೆಸುತ್ತ ಹೋದರೆ ಋಣಾಂಶಗಳನ್ನು ವೇಗದಲ್ಲಿ ಹೀರಿಹಾಕುತ್ತ, ಧನಾಂಶಗಳನ್ನು ಕಳೆದುಕೊಂಡ ವೇಗದಲ್ಲೆ ಮತ್ತೆ ಪ್ರಕ್ಷೇಪಿಸಬಹುದೆ ? ಆ ಕಾರಣಕ್ಕಾಗಿಯೆ ಮಾಂಕ್ ಸಾಕೇತ್ ಹಳೆಯದನ್ನೆಲ್ಲ ನೆನಪಿಸಿಕೊಳ್ಳಲು ಪ್ರಚೋದಿಸಿದ್ದರೆ? ಇದರ ಸತ್ಯಾಸತ್ಯತೆಯನ್ನು ಅವರಲ್ಲೆ ಚರ್ಚಿಸಿ ಖಚಿತ ಪಡಿಸಿಕೊಳ್ಳಬೇಕು, ಮುಂದಿನ ಭೇಟಿಯಲ್ಲಿ..!

ಇಲ್ಲಿ ತ್ರಿಗುಣಗಳ ಪ್ರಭಾವ, ಗುಣ ಲಕ್ಷಣಗಳೆ ಹೆಚ್ಚು ಎದ್ದು ಕಾಣುತ್ತಿದ್ದರು, ಮೂಲತಃ ಈ ತ್ರಿಗುಣಗಳ ಸೃಷ್ಟಿಯಾಗಿದ್ದು ತ್ರಿಶಕ್ತಿಗಳ ಮೂಲದಿಂದ ಎನ್ನುವುದನ್ನು ಮರೆಯುವಂತಿಲ್ಲ. ಮೂಲಶಕ್ತಿ ತನ್ನ ಜ್ಞಾನಶಕ್ತಿಯನ್ನು ಬಳಸಿ ತ್ರಿಗುಣಗಳಾಗಿ ರೂಪಾಂತರಿಸಿಕೊಳ್ಳುವ ಅರಿವನ್ನು ಪ್ರಕ್ಷೇಪಿಸಿಕೊಂಡರೆ, ಅದನ್ನು ಕ್ರಿಯಾಶಕ್ತಿಯ ಮಟ್ಟಕ್ಕೊಯ್ಯಲು ಸಾಧ್ಯವಾಗಿಸುವುದು ಇಚ್ಛಾಶಕ್ತಿಯ ಬಲದಿಂದ. ಜ್ಞಾನದಿಂದ ಇಚ್ಛೆ ಮತ್ತು ಕ್ರಿಯೆಯುದ್ಭವಿಸಿ, ತನ್ನ ಸುತ್ತಲ ರಾಸಾಯನಿಕ ಪ್ರಭಾವಕ್ಕನುಗುಣವಾಗಿ ಸಾತ್ವಿಕ-ರಾಜಸ-ತಾಮಸಗಳಾಗಿ ರೂಪಾಂತರಗೊಂಡು ಪ್ರಸ್ತುತವಾಗುವುದು... ಹೀಗೆ ಪ್ರತಿ ಸ್ತರದಲ್ಲೂ ತ್ರಿಶಕ್ತಿಗಳ ರೂಪಾಂತರ, ತ್ರಿಗುಣಗಳ ಪ್ರಾಧಾನ್ಯತೆಯಲ್ಲಿ ನಾಲ್ಕು ಅಂತಃಕರಣಗಳ (ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ) ಮೇಲೆ ಪ್ರಭಾವ ಬೀರಿ ಕಾರ್ಯ ನಿರ್ವಹಿಸುತ್ತವೆ - ಒಟ್ಟು ಒಂಭತ್ತು ವಿಕಲ್ಪಗಳ ಸಾಧ್ಯತೆಯ ರೂಪದಲ್ಲಿ (ಪ್ರತಿ ಶಕ್ತಿಯ ರೂಪವೂ ಮೂರು ತ್ರಿಗುಣಗಳ  ರೂಪಾಗಿ ಪ್ರಕಟವಾದಾಗ, ಮೂರು ಶಕ್ತಿಯಿಂದಾಗಿ ಒಂಭತ್ತು ಸಾಧ್ಯತೆಗಳು ಉಂಟಾಗುತ್ತ). ಹೀಗಾಗಿ ಯಾವುದೆ ಸಂಧರ್ಭದಲ್ಲಿ ವ್ಯಕ್ತಿಯೊಬ್ಬನ ನಡುವಳಿಕೆ, ಈ ಒಂಭತ್ತು ಜೋಡಿಗಳಲ್ಲಿ ಯಾವ ಜೋಡಿಗಳು ಒಟ್ಟು ಸೇರಿಕೊಳ್ಳುವುದೆನ್ನುವುದರ ಮೇಲೆ, ಯಾವ ಜೋಡಿ ಸಕ್ರೀಯವಾಗಿ ಕಾರ್ಯಾಚರಣೆಗಿಳಿಯುವುದೆಂಬುದರ ಮೇಲೆ ಆ ಹೊತ್ತಿನ ನಡುವಳಿಕೆ ನಿರ್ಧಾರವಾಗುತ್ತದೆ ಮತ್ತು ಕಾರ್ಯಗತವಾಗುತ್ತದೆ. ಅಂತೆಯೆ ಕೆಲವು ಕಾರ್ಯಕ್ಕೆ ಕೆಲವು ಜೋಡಣೆಗಳೆ ಅತಿ ಸೂಕ್ತವಿದ್ದರೆ ಮತ್ತೆ ಕೆಲವು ಸೂಕ್ತವಲ್ಲ. ಉದಾಹರಣೆಗೆ ಕ್ರಿಯಾಶಕ್ತಿಯಲ್ಲಿ-ರಾಜಸ ಪ್ರಧಾನಗುಣವಿರುವ 'ಅಹಂ' ವ್ಯಕ್ತಿಯೊಬ್ಬ ಸೇಲ್ಸಿನ ಕೆಲಸಕ್ಕೆ ಹೆಚ್ಚು ಹೊಂದಿಕೆಯಾಗಬಹುದು ಅದಕ್ಕೆ ಬೇಕಾದ ಅಗ್ರೆಸ್ಸಿವ್ನೆಸ್ಸಿನಿಂದಾಗಿ. ಅಲ್ಲೇನಾದರೂ ತಾಮಸಿ ಪ್ರಧಾನ ಗುಣವಿದ್ದವನಾದರೆ ಸೂಕ್ತ ಗುಣವಿದ್ದರೂ ಮೋಸ, ಕೃತಿಮತೆಯ ಅಂಶಗಳು ಸೇರಿಕೊಂಡು ಪ್ರಾಮಾಣಿಕತೆಯನ್ನು ಪ್ರಶ್ನಾರ್ಹವಾಗಿಸಿಬಿಡಬಹುದು. ಅಂತೆಯೆ ಸಾತ್ವಿಕ ಗುಣವಿದ್ದರೆ ಸೇಲ್ಸಿನ ಕೆಲಸಕ್ಕೆ ಬೇಕಾದ 'ಪುಷ್' ಮಾಡುವ ಶಕ್ತಿಯೆ ತೋರದ ಕಾರಣ ಅಗ್ರೆಸ್ಸಿವ್ನೆಸ್ ಕಾಣಿಸಿಕೊಳ್ಳದೆ ಹೋಗಬಹುದು. ಅಂದರೆ  ಒಬ್ಬ ವ್ಯಕ್ತಿಯ ಕೆಲಸದ ಹೊಂದಾಣಿಕೆಯ ಸೂಕ್ತತೆಗೂ ಈ ತ್ರಿಶಕ್ತಿ, ತ್ರಿಗುಣ, ಅಂತಃಕರಣಗಳ ಜೋಡಣೆಯ ಜಾತಕವನ್ನು ಬಳಸಬಹುದೆ? ಮತ್ತೊಂದು ಸಂಶೋಧನೆಗೆ ತಕ್ಕ ಅರ್ಹ ವಿಷಯವೆಂದು ಕಾಣುತ್ತದೆ...! ಅದಿರಲಿ ಈ ಅಂತಃಕರಣಗಳು ತಮ್ಮ ಪ್ರಧಾನ ಶಕ್ತಿಯ ಮತ್ತು ಗುಣದ ಪ್ರಭಾವದಿಂದ ನಮ್ಮ ನಡುವಳಿಕೆ ನಿರ್ಧರಿಸುವುದಾದರೆ, ಅವು ಸರಿಯಾಗಿ ನಡುವಳಿಕೆ ತೋರುವಂತೆ ಪ್ರಭಾವಿಸುವುದು ಹೇಗೆ ? ಮೂಲತಃ ಅವುಗಳೂ ಶಕ್ತಿಯಿಂದಲೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಆ ಶಕ್ತಿಯಮೂಲವನ್ನು ಪ್ರಭಾವಿಸಿದರೆ ಅವು ತ್ರಿಗುಣಗಳನ್ನು ಪ್ರಭಾವಿಸುತ್ತವೆ ಮತ್ತು ನಂತರ ಅಂತಃಕರಣದ ತತ್ವಗಳನ್ನೂ ಸಹ. ಅಂದರೆ ಶಕ್ತಿಯ ಮೂರು ಮೂಲರೂಪಗಳಾದ ಇಚ್ಛಾ-ಜ್ಞಾನ-ಕ್ರಿಯಾ ಶಕ್ತಿಗಳನ್ನು ಪ್ರಚೋದಿಸುವ ವಿಧಾನ ಅವಿಷ್ಕರಿಸಿದರೆ ಸಾಕು ಎಂದರ್ಥವೆ ? ಅವುಗಳ ತುಣುಕುಗಳೆ ತಾನೆ ಮಿಕ್ಕೆಲ್ಲಕ್ಕು ಶಕ್ತಿ ಪೂರೈಸುವುದು? ಈ ತ್ರಿಶಕ್ತಿಯ ಮೂರರಲ್ಲಿ ಕ್ರಿಯೆಯನ್ನು ಹೊರಗಿಡಬೇಕು - ಯಾಕೆಂದರೆ ಕ್ರಿಯೆ ಫಲಿತವಾಗಿ ಬರುವಂತದ್ದು, ಚಲನಶಕ್ತಿಯ ರೂಪದ್ದು. ಅದನ್ನು ಹೊರಗಿನಿಂದ ಪ್ರಭಾವಿಸಲು ಆಗದು. ಬಹುಶಃ ಅದನ್ನು ಪ್ರಚೋದಿಸುವ ಇಚ್ಛಾಶಕ್ತಿಯನ್ನು ಪ್ರಭಾವಿಸಿದರೆ ಸಾಕು, ಅದನ್ನು ಗಮನಿಸಿಕೊಂಡ ಹಾಗಾಗುತ್ತದೆ. ಆದರೆ ಇಚ್ಚಾಶಕ್ತಿಯೂ ಬಾಹ್ಯದ ಹತೋಟಿ, ನಿಯಂತ್ರಣಕ್ಕೆ ಸುಲಭದಲ್ಲಿ ಸಿಗುವ ಹಾಗೆ ಕಾಣುವುದಿಲ್ಲ - ಹೊರಗಿನಿಂದಾಗುವ ಪ್ರಚೋದನೆಯಿಂದದು ಪ್ರೇರಿತವಾಗುವುದಾದರು. ಅದರ ಪ್ರಕ್ರಿಯೆಗಳೆಲ್ಲ ಅಂತರ್ಗತವಾಗಿಯೆ ನಡೆಯುವಂತಾದ್ದು. ಅದು ಬಹುಶಃ ಕಾರ್ಯಶಕ್ತಿಯಷ್ಟು ಚಲನಶೀಲವಲ್ಲವಾದರೂ, ಅದಿರಬಹುದಾದ ವೈವಿಧ್ಯತೆ, ವಿಕಲ್ಪಗಳ ಸಾಧ್ಯತೆಯಿಂದಾಗಿ ಅದೂ ಅಮೂರ್ತ ಚಲನಶಕ್ತಿಯೆನ್ನಲು ಅಡ್ಡಿಯಿಲ್ಲವೇನೊ...? ಇಚ್ಚಾ ಮತ್ತು ಕ್ರಿಯಾ ಎರಡೂ ಕೈಗೆ ಸಿಗದ ಚಲನ ರೂಪಿಗಳೆಂದಾದರೆ ಇನ್ನು ಮಿಕ್ಕ ಶಕ್ತಿ ಜ್ಞಾನದ್ದು. ಅದ್ಯಾವ ತರದ ಶಕ್ತಿರೂಪವಿರಬಹುದು ?

ಮಿಕ್ಕೆರಡನ್ನು ಬಾಹ್ಯದಿಂದ ಪ್ರಚೋಧಿಸುವುದು ಕಷ್ಟಸಾಧ್ಯ ಎಂದಾಗ ಇನ್ನುಳಿದ ಈ ಜ್ಞಾನ ಶಕ್ತಿಯಲ್ಲೆನಡಗಿದೆ ಎಂದು ನೋಡುವ. ಮೂಲತಃ ಜ್ಞಾನ ಜಡವಲ್ಲ, ಚಲನಶೀಲ. ಆದ್ದರಿಂದಲೆ ಅದನ್ನು ಒಬ್ಬರಿಂದೊಬ್ಬರಿಗೆ ರವಾನಿಸಬಹುದು - ವಿದ್ಯಾ, ಕಲಿಕೆ, ಬೋಧನೆಯಂತಹ ಸೂಕ್ತ ವಿಧಾನಗಳ ಮೂಲಕ. ಆದರೆ ಜ್ಞಾನಶಕ್ತಿಗೆ ಹಾಗೆನ್ನಬಹುದೆ ? ಒಬ್ಬ ವ್ಯಕ್ತಿಯಲ್ಲಡಗಿರುವ ಜ್ಞಾನಶಕ್ತಿ ಒಂದು ರೀತಿ ಜಡ, ಸ್ಥಿರ ಶಕ್ತಿಯಂತಲ್ಲವೆ? ಅದು ಜ್ಞಾನ ಹೆಚ್ಚುತ್ತ ಹೋದಂತೆ ಇನ್ನೂ ಸುಧೃಢವಾಗುತ್ತ ಹೋಗುತ್ತದೆ. ಹಂಚಿಕೊಂಡರೂ ಕರಗದ ಅತಿಶಯದ ಶಕ್ತಿಯದು ಜ್ಞಾನ. ಆ ದೃಷ್ಟಿಯಲ್ಲಿ ನೋಡಿದರೆ ಜ್ಞಾನಶಕ್ತಿ ಒಂದು ರೀತಿ ಶಾಶ್ವತ ಅಸ್ತಿತ್ವವನ್ನು ಹೊಂದಿರುವಂತದ್ದು. ಅದೆ ಮಿಕ್ಕೆರಡಾದ ಇಚ್ಛಾ ಮತ್ತು ಕ್ರಿಯಾಶಕ್ತಿಗಳು ಚಲನೆಯ ಸತ್ವದೊಂದಿಗೆ ನಶ್ವರ ಅಸ್ತಿತ್ವವನ್ನು ಹೊಂದಿರುವಂತಾದ್ದು. ಇಚ್ಛೆ ಪೂರೈಕೆಯಾದ ಮೇಲೆ ಆ ಇಚ್ಛಾಶಕ್ತಿಯ ಕೆಲಸ ಮುಗಿದಂತೆಯೆ ಲೆಕ್ಕ. ಅದೇ ರೀತಿ ಕಾರ್ಯಶಕ್ತಿಯನ್ನು ಉದ್ದೀಪಿಸಿ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸಿದರೆ ಅದೂ ಮುಗಿದ ಹಾಗೆಯೆ ಲೆಕ್ಕ. ಆದರೆ ಜ್ಞಾನ ಮಾತ್ರ, ಯಾವ ಉದ್ದೇಶದಿಂದ ಪಡೆದರು ಆ ಉದ್ದೇಶ ಮುಗಿದ ಮೇಲೂ ನಶಿಸದೆ ಶಾಶ್ವತವಾಗಿ ನೆಲೆಸಿಬಿಟ್ಟಿರುತ್ತದೆ. ಇದೊಂದು ರೀತಿ ಜ್ಞಾನಶಕ್ತಿಯ ವಿಶೇಷ ಗುಣದಂತೆ ಕಾಣುವುದಿಲ್ಲವೆ? ಅಂತೆಯೆ ಮೂರರಲ್ಲಿ ಜ್ಞಾನಶಕ್ತಿಯ ಬಲವೆ ಹೆಚ್ಚಿನದಾಗಿರುವಂತೆ ತೋರುತ್ತಿದೆ. ಜ್ಞಾನವಿದ್ದರೆ ತಾನೆ ಇಚ್ಛೆಯಾಗಲಿಕ್ಕೆ ಸಾಧ್ಯ? ಆ ಇಚ್ಛೆ ಕ್ರಿಯಾಶಕ್ತಿಯಾಗಲಿಕ್ಕೆ ಪ್ರೇರೇಪಣೆಯೂ ಅ ಜ್ಞಾನದ ಅರಿವೆ ಅಲ್ಲವೆ? ಜ್ಞಾನಶಕ್ತಿ ಇಚ್ಛೆಯನ್ನು ಪ್ರೇರೇಪಿಸಿದಾಗ ಆ ಭಾಗ ಇಚ್ಛಾಶಕ್ತಿಯಾಗುತ್ತ, ಕ್ರಿಯೆಯನ್ನು ಪ್ರೇರೇಪಿಸಿದಾಗ ಕ್ರಿಯಾಶಕ್ತಿಯಾಗುತ್ತ ಪ್ರಭಾವಿಸುವುದನ್ನು ನೋಡಿದರೆ, ಈ ಎರಡು ಶಕ್ತಿಗಳು ಜ್ಞಾನದ ಮೂಲದಿಂದಲೆ ಮೊಳಕೆ ಹೊಡೆದಿರಬೇಕು. ಅಂದರೆ ಮಿಕ್ಕೆರಡು ಶಕ್ತಿಗಳ ಮೂಲವೂ ಜ್ಞಾನಶಕ್ತಿಯೆ ಎಂದಾಯ್ತು... ಅಂತೆಯೆ ಮೂಲದಲ್ಲಿ ಶುದ್ಧ ಸಾತ್ವಿಕ ಜ್ಞಾನಶಕ್ತಿಯಿದ್ದರೆ, ಅದು ಅದರಂತೆಯೆ ಸಾತ್ವಿಕ ಇಚ್ಛಾಶಕ್ತಿಯಾಗಿ ರೂಪಾಂತರವಾಗಿ ಕೊನೆಗದು ಸಾತ್ವಿಕ ಕ್ರಿಯಾಶಕ್ತಿಯಾಗಿ ಪ್ರಕಟವಾಗುತ್ತದೆ. ಅದೆ ಮೂಲದ ಜ್ಞಾನಶಕ್ತಿ ತಾಮಸ (ಮಾಯಾ) ಪ್ರೇರಿತವಾದದ್ದಾದರೆ ಅದು ತಾಮಸ ಇಚ್ಛಾಶಕ್ತಿಯಾಗಿ ರೂಪಾಂತರವಾಗಿ ಕಡೆಗೆ ತಾಮಸ ಕ್ರಿಯಾಶಕ್ತಿಯಾಗಿ ಪರ್ಯಾವಸಾನವಾಗುತ್ತದೆ. ಅಲ್ಲಿಗೆ ಒಟ್ಟಾರೆ ಅದೆಂತಾದರೂ ಸರಿ, ಜ್ಞಾನ ಇಚ್ಛೆಯಾಗುತ್ತದೆ ಮತ್ತು ಆ ಇಚ್ಛೆ ಕ್ರಿಯೆಗೆ ಪ್ರೇರಕವಾಗುತ್ತದೆ - ತ್ರಿಗುಣಗಳೊಂದರ ಪ್ರಭಾವಿ ರೂಪದಲ್ಲಿ.  ಸರಿಯಾದ ಜ್ಞಾನವಿದ್ದರೆ ಅದು ಸರಿಯಾದ ಇಚ್ಛೆಯಾಗಿ ತದನಂತರ ಸರಿಯಾದ ಕ್ರಿಯೆಯಾಗಿ ಮಾರ್ಪಾಡಾಗಲಿಕ್ಕೆ ಪ್ರೇರಣೆಯಾಗುತ್ತದೆ. ಅದೇ ಪ್ರೇರಕಶಕ್ತಿ ತಾಮಸಿ ಅಜ್ಞಾನವಿದ್ದರೆ ಅದು ಇಚ್ಛೆಯ ಮತ್ತು ಕ್ರಿಯೆಯ ರೂಪದಲ್ಲೂ ಅಜ್ಞಾನದ ಫಲನವಾಗಿಯೆ ಪ್ರತಿಫಲಿತವಾಗುತ್ತದೆ. ಇಚ್ಛೆಯೆ ಕಡೆಗೆ ಕಾರ್ಯರೂಪಕ್ಕೆ ಬರಬೇಕಾದ ಕಾರಣ ಕ್ರಿಯಾಶಕ್ತಿ ಇಚ್ಛಾಶಕ್ತಿಯನ್ನು ಅನುಕರಿಸುತ್ತದೆ. ಅಂದರೆ ಜ್ಞಾನಶಕ್ತಿಯನ್ನು ಸರಿಯಾಗಿ ಪ್ರೇರೇಪಿಸಿ ಸರಿಯಾದ ದಿಕ್ಕಿನಲ್ಲಿ ಪ್ರಚೋದಿಸಿದರೆ, ಮಿಕ್ಕೆರಡು ಶಕ್ತಿಗಳು ತಾವಾಗಿಯೆ ಸರಿಯಾದ ಹಾದಿ ಹಿಡಿಯುತ್ತವೆಂದು ಅರ್ಥವಾಯ್ತಲ್ಲವೆ ? ಅಲ್ಲಿಗೆ ನಾವು ಪ್ರಚೋದಿಸಲೆತ್ನಿಸಬೇಕಾದ ಶಕ್ತಿ ಜ್ಞಾನಶಕ್ತಿ ಮಾತ್ರವೆ? ಅರೆರೆ.. ಅಂದಹಾಗೆ ಜ್ಞಾನಶಕ್ತಿಯನ್ನು ಸುಲಭವಾಗಿ ಅನೇಕ ಭೌತಿಕ ವಿಧಾನಗಳಿಂದ ಹೊರಗಿನಿಂದ ಪ್ರಚೋದಿಸಲು ಸಾಧ್ಯವಿದೆಯಲ್ಲವೆ ? ನಮ್ಮ ಜ್ಞಾನೇಂದ್ರಿಯಗಳನ್ನೆ ಪರಿಕರಗಳಾಗಿ ಬಳಸಿ, ಅಂತಃಕರಣಗಳ ಮೂಲಕ ಗ್ರಹಿಸಿದ್ದೆಲ್ಲವನ್ನು ಜ್ಞಾನವಾಗಿ (ಅಥವಾ ಅಜ್ಞಾನವಾಗಿ) ತಾನೆ ಶೇಖರಿಸಿಡುವುದು? ಮನದೊಳಗೆ ಇಚ್ಛೆಯಾಗಲಿ ಕ್ರಿಯೆಯಾಗಲಿ ರೂಪುಗೊಳ್ಳುವ ಹವಣಿಕೆಗೆ ಬಾಹ್ಯದ ಯಾವುದಾದರೊಂದು ಪ್ರೇರಣೆ ಪ್ರಚೋದಕವಾಗಿರಲೆಬೇಕು, (ದೇಹದ ಆಂತರಿಕ ಜ್ಞಾನ ಪ್ರಚೋದನೆಯನ್ನು ಸದ್ಯಕ್ಕೆ ಹೊರಗಿಟ್ಟು ವಿಮರ್ಶಿಸಿದರೆ). ಉದಾಹರಣೆಗೆ ಬಾಹ್ಯಕರಣಗಳಿಂದ ತಟ್ಟೆಯಲ್ಲಿಟ್ಟಿರುವ ಸಿಹಿತಿಂಡಿಯೊಂದನ್ನು ಗ್ರಹಿಸಿ ಅದನ್ನು ತಿನ್ನಬೇಕೆನಿಸುವ ಇಚ್ಛಾಶಕ್ತಿಯನ್ನು ಮೂಡಿಸುವುದು - ಅದು ತಿನ್ನಲು ರುಚಿಯಾದ ಅಥವಾ ತಾನು ಇಷ್ಟಪಡುವ ಸಿಹಿಖಾದ್ಯವೆಂಬ 'ಜ್ಞಾನ'ಶಕ್ತಿ. ಆ ಜ್ಞಾನಶಕ್ತಿಯ ಒತ್ತಡ ಬಲವಾಗಿದ್ದಷ್ಟೂ ತಿನ್ನಲೆಬೇಕೆಂಬ ಇಚ್ಛಾಶಕ್ತಿಯೂ ಬಲವಾಗುತ್ತ ಹೋಗುತ್ತದೆ. ಆ ತಿನ್ನುವ ಇಚ್ಛೆ ಪ್ರಬಲವಾದಾಗಷ್ಟೆ ಕೊಳ್ಳಬೇಕೆಂಬ, ಕೊಂಡು ತಿನ್ನಬೇಕೆಂಬ ಕ್ರಿಯಾಶಕ್ತಿಗೆ ಚಾಲನೆ ದೊರಕುವುದು. ಅದೆ ಜ್ಞಾನಶಕ್ತಿಗೆ ತಾನು ನೋಡಿದ ತಿನಿಸಿನ ಕುರಿತು ಯಾವುದೆ ಮಾಹಿತಿ ಇರದಿದ್ದರೆ (ಉದಾಹರಣೆಗೆ ಯಾವುದೊ ಹೆಸರು ಕುಲ ಗೊತ್ತಿಲ್ಲದ ಚೈನೀಸ್ ಡಂಪ್ಲಿಂಗ್), ಆ ತಿನಿಸನ್ನು ನೋಡಿದರೂ ಪ್ರಲೋಭನೆಯಾಗದೆ ಇಚ್ಛಾಶಕ್ತಿ ಸುಮ್ಮನಿದ್ದುಬಿಡುತ್ತದೆ ತನ್ನ ಪಾಡಿಗೆ ತಾನು. ಅದರಂತೆ ಕ್ರಿಯಾಶಕ್ತಿಯೂ ಮಲಗಿಬಿಡುತ್ತದೆ ಈ ತಿನಿಸನ್ನು ಕೊಳ್ಳುವ ಅಗತ್ಯವಿಲ್ಲವೆಂದು. ಅಲ್ಲಿಗೆ ಜ್ಞಾನಶಕ್ತಿಯೊಂದನ್ನು ಮಾತ್ರವೆ ಹೊರಗಿನಿಂದ ಪ್ರಚೋದಿಸುವುದು ಸಾಧ್ಯ ಎಂದಾಯ್ತು - ಓದಿಯೊ, ಕೇಳಿಯೊ, ಮುಟ್ಟಿಯೊ, ಆಘ್ರಾಣಿಸೊ, ತಿಂದೊ - ಒಟ್ಟಾರೆ ಇಂದ್ರೀಯಗಳ ಸಹಯೋಗದಲ್ಲಿ. ಬಹುಶಃ ಇದಕ್ಕೆ ಇರಬೇಕು ನಮ್ಮ ಪುರಾತನ ಗ್ರಂಥಗಳೆಲ್ಲವೂ 'ಜ್ಞಾನ'ಕ್ಕೆ ಮಹತ್ವ ನೀಡಿ ಅದನ್ನು ವೈಭವೀಕರಿಸಿರುವುದು. ಅವರಿಗಾಗಲೆ ಈ ಸತ್ಯ ಗೊತ್ತಿತ್ತೆಂದು ಕಾಣುತ್ತದೆ ಜ್ಞಾನಶಕ್ತಿಯ ಕದ ತಟ್ಟಿ ಒಂದು ಸರಿ ಕೀಲಿಯಲ್ಲಿ ಆ ಬಾಗಿಲು ತೆರೆದರೆ, ಮಿಕ್ಕೆಲ್ಲ ಕದಗಳು ತಾನಾಗಿಯೆ ತೆರೆದುಕೊಂಡಂತೆ ಎಂದು. ಆ ಪುರಾತನ ಜ್ಞಾನವದೆಷ್ಟು ಸತ್ಯ? ಈಗಲೂ ಎಲ್ಲರೂ ವಿದ್ಯೆ, ವಿದ್ಯೆ ಎನ್ನುತ್ತ ದುಂಬಾಲು ಬೀಳುವುದು ಅದೆ ಜ್ಞಾನದ ತುಣುಕಿಗೆ ತಾನೆ ? ನಮ್ಮ ಪುರಾತನದಲ್ಲಿ ಸಮಗ್ರತೆ, ಸಮಷ್ಟಿ ಮುಖ್ಯ ದೃಷ್ಟಿಕೋನವಾದರೆ ಈಗ ತುಣುಕಿನ ಬಾಹ್ಯದಂಚುಗಳು ಪ್ರಮುಖ - ಎಷ್ಟು ದೂರ ಸಾಧ್ಯವೊ ಅಷ್ಟು ದೂರ ಅದರ ಜಾಡು ಹಿಡಿದು ಒಳಗೆ ಹೋಗುವ ಹುನ್ನಾರದಲ್ಲಿ. ಇರಲಿ, ಜ್ಞಾನಶಕ್ತಿಯನ್ನು ಬಾಹ್ಯದಿಂದ ಪ್ರೇರೇಪಿಸಿ ಒಳಗೆ ಪ್ರಭಾವ ಬೀರಲು ಸಾಧ್ಯ ಎಂದೇನೊ ಗ್ರಹಿಸಿದ್ದಾಯ್ತು, ಅದು ಹೇಗೆ ಸಾಧ್ಯ ಎಂಬುದರ ತಾಂತ್ರಿಕತೆ ಆಮೇಲಿಗಿರಲಿ. ಅಲ್ಲಿಗೆ ಜ್ಞಾನಶಕ್ತಿಯ ಜ್ಞಾನವೆ ತನ್ನಲ್ಲಿರುವ ಎಲ್ಲ ಸಂದಿಗ್ದ, ಗೊಂದಲ, ಸಂಶಯಗಳಿಗಿರುವ ಏಕಸಾಮಾನ್ಯ ಉತ್ತರವೆ ?

ಒಟ್ಟಿರುವ ಎಲ್ಲಾ ಮೂರು ಶಕ್ತಿರೂಪಗಳಲ್ಲಿ, ಜ್ಞಾನಶಕ್ತಿಯನ್ನು ಮಾತ್ರವೆ ಬಾಹ್ಯಕರಣಗಳಾದ ಜ್ಞಾನೇಂದ್ರಿಯಗಳ ಮತ್ತು ಕರ್ಮೇಂದ್ರಿಯಗಳ ಸಹಯೋಗದಿಂದ ಪ್ರೇರೇಪಿಸಿ, ಉದ್ದೇಪಿಸಬಹುದಾದ ಕಾರಣ, ಇದು ಸರಿಯಾದ ಉತ್ತರವೆ ಇರಬೇಕು. ಒಂದು ರೀತಿ ಜ್ಞಾನ ಹೊರಗಿನ ಬಾಹ್ಯಕ್ಕೆ ಮತ್ತು ಒಳಗಿನ ಅಂತರಂಗಕ್ಕೆ ಹಾಕಿದ ಸೇತುವೆಯ ಹಾಗೆ. ಹೊರಗಿನಿಂದ ಒಳಕ್ಕೆ ಸೂಕ್ತವಾದ ಜ್ಞಾನ ಹರಿಸಿದರೆ ಅದು ಸರಿಯಾದ, ಪ್ರಶಸ್ತವಾದ ಜ್ಞಾನಶಕ್ತಿಯಾಗಿ ಬಲಿಷ್ಠವಾಗುತ್ತ ಹೋಗಿ ಇಡೀ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಆದರೆ....ಜ್ಞಾನಶಕ್ತಿಯಲ್ಲು ತ್ರಿಗುಣಗಳ ಸ್ವಭಾವದ ಪ್ರಭಾವ ಇರಬೇಕಲ್ಲವೆ ? ಮೂಲ ತ್ರಿಶಕ್ತಿಯೆ ತ್ರಿಗುಣಗಳ ಹುಟ್ಟಿನ ಮೂಲವಾದರೂ ಸಹ, ಅಸ್ತಿತ್ವಕ್ಕೆ ಬಂದ ಮೇಲೆ ಅವು ಬೇರೆಯೆ ಆದ ಸ್ವತಂತ್ರ ಅಸ್ತಿತ್ವವಾಗಿ ಪ್ರಬಲವಾಗಿ ವ್ಯವಸ್ಥೆಯನ್ನು ನಿಯಂತ್ರಿಸುವುದಲ್ಲವೆ? ಉದಾಹರಣೆಗೆ ಜ್ಞಾನಶಕ್ತಿಯಲ್ಲೂ ಸಾತ್ವಿಕ-ರಾಜಸ-ತಾಮಸಗಳ ಮೂರು ಗಣಗಳಿರಬೇಕಲ್ಲವೆ - ಒಂದು ಸಮತೋಲನದಲ್ಲಿ ? ಅಲ್ಲಿ ತಾಮಸಿ ಪ್ರಭಾವವೆ ಪ್ರಬಲವಿದ್ದರೆ ಆ ಜ್ಞಾನ ದುಷ್ಕೃತ್ಯಗಳ ಪ್ರೇರಕವಾಗಿ ಸರ್ವನಾಶಕ್ಕೆ ಅಡಿಪಾಯ ಹಾಕುವ ಅಡಿಗಲ್ಲಾಗಿಬಿಡುವುದು. ಅದೇ ಸಾತ್ವಿಕ ಪ್ರಭಾವಿ ಜ್ಞಾನಶಕ್ತಿಯಾದರೆ ತಾಮಸದ ವಿರುದ್ಧದ ಸತ್ಕಾರ್ಯವನ್ನೆ ಪ್ರಕ್ಷೇಪಿಸಿ, ಪ್ರೇರೇಪಿಸುವುದು. ಅಲ್ಲಿಗೆ ಜ್ಞಾನಶಕ್ತಿಯನ್ನು ಬಾಹ್ಯದಿಂದ ಪ್ರೇರೇಪಿಸಿ ಪ್ರಚೋದಿಸುವುದು ಸಾಧ್ಯವೆಂದು ಕಂಡುಕೊಂಡರೂ, ಮತ್ತೊಂದು ಹೊಸ ಸಮಸ್ಯೆ - ಅದನ್ನು 'ಸರಿಯಾದ ಗುಣದ' ಜ್ಞಾನವಾಗಿರುವಂತೆ ನೋಡಿಕೊಳ್ಳುವುದು ಹೇಗೆಂದು ಮತ್ತೊಂದು ಪ್ರಶ್ನೆ ಉದ್ಭವಿಸಿಬಿಡುತ್ತದೆ. ಆದರೆ ಇದನ್ನು ಕೂಡ ಬಾಹ್ಯ ಪ್ರಚೋದನೆಯಿಂದ ನಿಯಂತ್ರಿಸಬಹುದಲ್ಲ ? ನಾವು ಬಾಹ್ಯಕರಣಗಳಿಂದ ಗ್ರಹಿಸುವ ಜ್ಞಾನ ಸರಿಯಾದ ಸಾತ್ವಿಕವಾದುದಾದರೆ, ಅಂತಃಕರಣದಲ್ಲು ಅದೆ ಪ್ರತಿಬಿಂಬಿತವಾಗಿ, ಅದೇ ಸಾತ್ವಿಕತ್ವವೆ ಅಂತರಂಗದಲ್ಲೂ ಶೇಖರವಾಗುವುದಲ್ಲವೆ ? ಅದು ನಿಜವೆಂದೆ ಅಂದುಕೊಂಡರೆ ಅಲ್ಲಿ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ -  ಈ ವಿಧಾನ ಮುಂದೆ ಗ್ರಹಿಸಲ್ಪಡುವ ಜ್ಞಾನಕ್ಕೆ ಮಾರ್ಗದರ್ಶಿ ವೇದಿಕೆಯಾಗಬಹುದಾದರು, ಈಗಾಗಲೆ ತನ್ನದೆ ಆದ ಯಾವುದೊ ಸಮತೋಲನದ ಸ್ತಿತಿಯನ್ನು ಆಯೋಜಿಸಿಕೊಂಡು ಸ್ವಸ್ಥವಾಗಿ ಕುಳಿತಿರುವ 'ಹಳೆಯ ತ್ರಿಗುಣ ಪರಿಸ್ಥಿತಿಯನ್ನು' ನಿಭಾಯಿಸುವುದು ಹೇಗೆ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಅದರಲ್ಲಿ ಅದೆಷ್ಟು ತಾಮಸಿ-ರಾಜಸ-ಸಾತ್ವಿಕದ ಹಚ್ಚಡ, ಯಾವ ಅನುಪಾತದಲ್ಲಿ ಹಾಸಿಕೊಂಡು ಕೂತಿದೆಯೊ ಎಂತೊ? ಈಗಾಗಲೆ ಬರಿ ತಾಮಸೀ ಜ್ಞಾನವೆ ಹೆಚ್ಚಾಗಿ ತುಂಬಿಕೊಂಡಿದ್ದರೆ ಅದನ್ನು ಅಳಿಸುವುದು ಅಥವಾ ಕುಗ್ಗಿಸುವುದು ಹೇಗೆಂದು ಅರಿಯಬೇಕಲ್ಲ? ಆಗ ತಾನೆ ಹುಟ್ಟಿದ ಮಗು ಅಥವಾ ಮಕ್ಕಳಲ್ಲಾದರೆ ತಾಮಸವೆಂಬುದು ಸೊನ್ನೆಯಿಂದ ಶುರುವಾದ ಲೆಕ್ಕ ಎನ್ನಬಹುದಾದರೂ ದೊಡ್ಡವರಲ್ಲಿ ಹಾಗೆನ್ನುವಂತಿಲ್ಲ... ಮಾಯೆಯ ಸಾಂಗತ್ಯದಲ್ಲಿ, ಕಲ್ಮಷಗಳ ಒಡನಾಟದಲ್ಲಿ ಕಲುಷಿತವಾಗಿಬಿಟ್ಟಿರುವ ಕಾರಣ ಒಂದಷ್ಟು ತಾಮಸ ಇದ್ದೇ ಇರುತ್ತದೆ. ಅದಕ್ಕೆ ಇರಬೇಕು ಮಕ್ಕಳನ್ನು ದೇವರಿಗೆ ಹೋಲಿಸುವುದು - ಎಲ್ಲಾ ಶಕ್ತಿ ಇನ್ನು ತನ್ನ ಪರಿಶುದ್ಧ ರೂಪದಲ್ಲೆ ಇರುವುದರಿಂದಾಗಿ. ಅದಂತಿರಲಿ ಒಟ್ಟಾರೆ ಜ್ಞಾನಶಕ್ತಿಯನ್ನು ಸೂಕ್ತವಾಗಿ ಹೊರಗಿನಿಂದ ಪ್ರಚೋದಿಸಿದರೆ ಅದಕ್ಕೆ ತಕ್ಕಂತೆ ಒಳಗಿನೆಲ್ಲ ವ್ಯವಸ್ಥೆಯನ್ನು ನಿಭಾಯಿಸಬಹುದು ಎನ್ನುವುದನ್ನಂತು ಗ್ರಹಿಸಿಕೊಂಡಂತಾಯಿತು. ಬಾಹ್ಯಕರಣಗಳ ಮೂಲಕ ಪಡೆದ ವಿದ್ಯಾ-ಜ್ಞಾನದ ರೂಪದಲ್ಲಿ ಜ್ಞಾನಶಕ್ತಿಗೆ ಸೇರಿಕೊಂಡ ಈ 'ಸಂದೇಶ ಪ್ರಚೋದಕ'ಗಳು ಜ್ಞಾನದ ಶಕ್ತಿ ಪ್ರಸ್ತುತವಾಗಿರುವ ಒಳಗಿನ ಎಲ್ಲಾ ಒಂಭತ್ತು ತುಣುಕುಗಳಲ್ಲೂ ಆವರಿಸಿ ಪ್ರಸರಣಗೊಂಡು ಅಲ್ಲಿರುವ ಇಚ್ಛಾ ಮತ್ತು ಕ್ರಿಯಾಶಕ್ತಿ ತುಣುಕುಗಳನ್ನು ಸಮಾನವಾಗಿ ಪ್ರಚೋದಿಸುವುದರಿಂದ, ಒಟ್ಟಾರೆ ವ್ಯವಸ್ಥೆಯೆ ಶಿಸ್ತುಬದ್ಧವಾಗಿ ಒಂದೆ ರೀತಿಯಾಗಿ ವರ್ತಿಸುತ್ತದೆ. ಅಂದರೆ ಈ ಸಂಕೀರ್ಣ ವ್ಯವಸ್ಥೆಯನ್ನು ಸೃಷ್ಟಿಸಿದ ಪ್ರಕೃತಿ ಅದನ್ನು ನಿಭಾಯಿಸುವ ಏಕೈಕ ಬೀಗದ ಕೀಲಿಯನ್ನು ಜ್ಞಾನಶಕ್ತಿಯ ರೂಪದ ಬಾಹ್ಯ ಸಂವಹನದ ಮೂಲಕ ಈಗಾಗಲೆ ನಮ್ಮ ಕೈಗಿತ್ತುಬಿಟ್ಟಿದೆಯೆ ? ಕೇವಲ ಅದರ ಗುಟ್ಟನ್ನು ಸರಿಯಾಗಿ ಅರಿಯದೆ, ಅದನ್ನು ಸರಿಯಾಗಿ ಬಿಡಿಸದೆ ನಾವೆಲ್ಲ ಒದ್ದಾಡುತ್ತಿದ್ದೇವೆಯೆ? ನಮ್ಮೆಲ್ಲ ಪುರಾತನ ಗ್ರಂಥಗಳು ಅಜ್ಞಾನದ ಮೌಢ್ಯ ಸರಿಸಿ ಜ್ಞಾನ ಗಳಿಸಬೇಕು ಎಂದು ಸಿಕ್ಕಸಿಕ್ಕಲೆಲ್ಲ ಶಂಖ ಬಾರಿಸುವುದರ ಹಿನ್ನಲೆ ಈ ಸಿದ್ದಾಂತದ ಸ್ಪಷ್ಟ ಅರಿವಿದ್ದ ಕಾರಣದಿಂದ ಪ್ರೇರಿತವಾದದ್ದಾ? ಒಂದು ವೇಳೆ ಇದು ಸತ್ಯವೆ ಆದರೆ ಹಾಗೆ ನಾವು ಗ್ರಹಿಸಿದ ಜ್ಞಾನವೆ, ಶಕ್ತಿಯಾಗಿ ಒಳಗೆಲ್ಲ ಪ್ರಭಾವಿಸಿ ನಿಯಂತ್ರಿಸುವುದೆಂದು ತಾರ್ಕಿಕವಾಗಿ ನಿರೂಪಿಸಿ ತೋರಿಸುವುದು ಹೇಗೆ ? ಬಹುಶಃ ಮುಂದಿನ ಜಿಜ್ಞಾಸೆ ಅದರ ಕುರಿತೆ ನಡೆಯಬೇಕೇನೊ ?

ಅರೆರೆ... ಈ ಜಿಜ್ಞಾಸೆಗೆ ಮತ್ತೆ ತತ್ವಗಳ ಸೈದ್ದಾಂತಿಕತೆಯ ಮೊರೆ ಹೋಗಬೇಕಾಗುವಂತೆ ಅನಿಸುತ್ತಿದೆಯಲ್ಲ? ಅನಿಸಿಕೆಯ ಅನಿಸಿದ ದಾರಿಯಲ್ಲಿ ನಡೆಯುತ್ತಿರು ಎಂದು ತಾನೆ ಮಾಂಕ್ ಸಾಕೇತರ ಆದೇಶ ? ಸರಿ..ಅದೂ ನಡೆದುಹೋಗಲಿ... ಇಲ್ಲಿ ಸ್ಥೂಲವಾಗಿ ಸೂಕ್ಷ್ಮವಾಗಿ ಗಮನಿಸಿದರೆ, ಈ ಶಕ್ತಿ ತತ್ವಾಂಶಗಳಲ್ಲೂ  ಮೂರು ಪ್ರಮುಖ ಡಿಪಾರ್ಟುಮೆಂಟುಗಳಂತೆ, ವಿಭಾಗವಾಗಿರುವುದು ಕಾಣುತ್ತದಲ್ಲ? ಹತ್ತು ಪೂರ್ಣ ಭೌತಿಕ ತತ್ವಗಳು ಒಂದು ರೀತಿ ಜಡಶಕ್ತಿಯನ್ಹೊತ್ತು ಕುಳಿತ ಯಂತ್ರಗಳ ಹಾಗೆ - ಕೈ, ಕಾಲು, ಕಣ್ಣು, ಇತ್ಯಾದಿ (ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳು). ಅವುಗಳಿಗೆ ವಹಿಸಿದ ಕಾರ್ಯ ನಿರ್ವಹಿಸುವ ಕಾರ್ಯಭಾರದಲ್ಲಿ ಸಹಕರಿಸುವ ಸಹಚರರ ರೂಪದಲ್ಲಿರುವ ತನ್ಮಾತ್ರ (ರೂಪ, ರಸ, ಗಂಧ, ಶಬ್ದ, ಸ್ಪರ್ಷ) ಮತ್ತು ಪಂಚಮಹಾಭೂತ ಪ್ರೇರಿತ ಕರ್ಮೇಂದ್ರಿಯಗಳ ಕಾರ್ಯ ನಿರ್ವಹಿಸಲು ಸಹಕರಿಸುವ - ಹಿಡಿತ, ಚಲನೆ, ಮಾತು (ಕಮ್ಯೂನಿಕೇಶನ್ - ಸಂವಹನ), ವಿಸರ್ಜನೆ ಮತ್ತು ಸಂತಾನೋತ್ಪತ್ತಿಗಳ ಮತ್ತಿತರ ಹತ್ತು ಅಂಶಗಳ ಗುಂಪು ಎರಡನೆ ವಿಭಾಗವೆನ್ನಬಹುದಾದದ್ದು. 'ಕಣ್ಣಿನ ಯಂತ್ರ'ದ ಕೆಲಸ 'ನೋಟ'ವನ್ನು ತಯಾರಿಸುವ ಹಾಗೆ, 'ಕಿವಿಯ ತತ್ವಾಂಶ'ದ ಯಂತ್ರ 'ಶಬ್ದ'ವನ್ನು ತಯಾರಿಸುವ ರೀತಿ. 'ಕೈ ತತ್ವಾಂಶ'ದ ಯಂತ್ರ 'ಹಿಡಿತ'ವನ್ನು ಉತ್ಪಾದಿಸಿದರೆ 'ಕಾಲಿನ ತತ್ವಾಂಶ'ವಿರುವ ಯಂತ್ರ 'ಚಲನೆ'ಯನ್ನುತ್ಪಾದಿಸಿ ಅದರ ಸಹಾಯದಿಂದ ಆ ಹಿಡಿತವನ್ನು ಬೇಕಾದೆಡೆಗೆ ವರ್ಗಾಯಿಸುವ ಕೆಲಸ ಮಾಡುವಂತೆ. ಕಾರ್ಖಾನೆಯ ಕೆಲಸ ಅಂದ ಮೇಲೆ ತ್ಯಾಜ್ಯಗಳು ಇರಲೇಬೇಕಲ್ಲ ? ಅದನ್ನು ನಿಭಾಯಿಸಿ ಹೊರಹಾಕಲು 'ವಿಸರ್ಜನಾ ಶಕ್ತಿಯ' ತತ್ವಾಂಶ. ಇದೆಲ್ಲ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲು ಇದೆಲ್ಲಾ ಶಕ್ತಿ ತತ್ವಾಂಶಗಳೂ ನಿರಂತರವಾಗಿ 'ಅಸ್ತಿತ್ವ'ದಲ್ಲಿ ಇರಬೇಕಲ್ಲ? ಆ ಯಂತ್ರಗಳನ್ನೊ, ಅದಕ್ಕೆ ಬೇಕಾಗುವ ಆಹಾರದ ಮೂಲಸರಕಿನ ಸಂಸ್ಕರಣೆಯನ್ನೊ ಅಥವಾ ತನ್ನನ್ನೆ ವಿಭಜಿಸಿಕೊಂಡು ಎರಡಾಗಿಸಿಕೊಳ್ಳುವ ಪ್ರಕ್ರಿಯೆಗೊ - 'ಸೃಷ್ಟಿಯ ತತ್ವಾಂಶ'ದ ಅಗತ್ಯ ಇರಲೇಬೇಕಲ್ಲ? ಅದಕ್ಕೆಂದೆ ಜನನಾಂಗ ಮತ್ತು ಸೃಷ್ಟಿಯ ತತ್ವಾಂಶಗಳ ಸಹಯೋಗ. ಅದೆಲ್ಲ ಕಾರ್ಯಗಳು ಎಲ್ಲಾ ತತ್ವಾಂಶಗಳ ವತಿಯಲ್ಲಿ ಸರಿಯಾಗಿ ನಡೆಯಲು ಕೋಶದೊಳಗಿನ ಪರಸ್ಪರ ಅಂತರಿಕ 'ಸಂವಹನ' (ಕಮ್ಯೂನಿಕೇಷನ್) ಬಲು ಮುಖ್ಯ. ಮಾತಿಗಿಂತ ಬಲವಾದ ಸಂವಹನ ಯಂತ್ರ ಇನ್ಯಾವುದು ಬೇಕು? ಅದಕ್ಕೆಂದೆ 'ಬಾಯಿಯ' ಯಂತ್ರದ ತತ್ವಾಂಶಗಳು 'ಮಾತನ್ನು (ಸಂವಹನವನ್ನು ಅರ್ಥಾತ್ ಅದನ್ನು ಸಾಧ್ಯವಾಗಿಸುವ ರಾಸಾಯನಿಕವನ್ನು)' ತಯಾರಿಸಿ ಆ ಜವಾಬ್ದಾರಿ ನಿರ್ವಹಿಸುತ್ತಿವೆ. ಅಂದರೆ ಇಲ್ಲಿ ಹತ್ತು ಭೌತಿಕ ಯಂತ್ರಗಳು ಹತ್ತು ಭೌತಿಕ ಕಾರ್ಯಗಳಲ್ಲಿ - ಹತ್ತು ಫಲಿತಗಳನ್ನು ತಯಾರಿಸಿಕೊಂಡು ತಮ್ಮ ಬಳಕೆಗೆ ಬಳಸಿಕೊಳ್ಳುವ ಕೆಲಸದಲ್ಲಿ ನಿರತವಾಗಿವೆ. ಅಲ್ಲಿಗೆ ಹತ್ತರ ಒಂದು ಗುಂಪು ಯಂತ್ರಗಳಿರುವ ಉತ್ಪಾದನಾ ವಿಭಾಗದವಾದರೆ, ಮಿಕ್ಕ ಹತ್ತು ಮೂಲಸರಕೊ ಅಥವಾ ಉತ್ಪಾದನೆಯೊ ಆಗಿ ತಾತ್ಕಾಲಿಕ ಉಗ್ರಾಣದಂತೆ ಕಾರ್ಯ ನಿರ್ವಹಿಸುವ ವಿಭಾಗಕ್ಕೆ ಸೇರಿವೆ. ಆಸಕ್ತಿದಾಯಕ ಅಂಶವೆಂದರೆ ಇವೆಲ್ಲದರ ನಡುವೆ ಪರಸ್ಪರ ಸಂವಹನ ಹೇಗೆ ನಡೆಯುತ್ತದೆ ಎಂಬುದು. ಮೇಲ್ನೋಟಕ್ಕೆ ಅರಿವಾಗುವ ಹಾಗೆ ನಾವು ಲೌಕಿಕದಲ್ಲಿ ಬಳಸುವ ಸಂವಹನ ಪರಿಕರಗಳು ಅಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಈ ಪ್ರಶ್ನೆಗೆ ನಮ್ಮ ವಿಜ್ಞಾನ ಹೆಚ್ಚು ಕಡಿಮೆ ಉತ್ತರ ಕಂಡುಕೊಂಡಿದೆಯೆಂದೆ ಹೇಳಬಹುದು. ಪ್ರತಿ ಕೋಶವೂ ತನ್ನ ಕಾರ್ಯ ನೀತಿ ನಿಯಮಕ್ಕನುಸಾರವಾಗಿ ತಯಾರಿಸುವ ಯಾವುದೊ ಸೂಕ್ತ ಪ್ರೋಟೀನ್ ತನ್ನ ನಿಗದಿತ ಕಾರ್ಯವನ್ನೊ, ಪ್ರಚೋದನೆಯನ್ನೊ ನಿರ್ವಹಿಸುವ ಹಾಗೆ ಈ ಕೋಶ ಭಾಗಾಂಶಗಳ ನಡುವೆ ಸಂವಹನೆಯಲ್ಲಿ ಸಹಾಯಕ್ಕೆ ಬರುವುದು ರಸಾಯನ ಶಾಸ್ತ್ರ... ಅರ್ಥಾತ್ ಅಲ್ಲಿ ಬಿಡುಗಡೆಯಾಗುವ ಪ್ರತಿ 'ರಾಸಾಯನಿಕ'ವು ತನ್ನದೇ ಆದ ಸಂದೇಶಕ್ಕೆಂದೆ ನಿಗದಿಯಾಗಿಬಿಟ್ಟಿರುತ್ತದೆ. ಪ್ರತಿ ಬಾರಿ ಉತ್ಪಾದನೆಯಾಗಿ ಬಂದ 'ಕೆಮಿಕಲ್ಸ್' ತನ್ನ ಸಂದೇಶವನ್ನು ಸ್ವಯಂ ತನ್ನ ಸ್ವರೂಪದಿಂದಲೆ ರವಾನಿಸಿಬಿಡುತ್ತದೆ! ಹಾಗೆ ಒಟ್ಟಾರೆ ನೋಡಿದರೆ ಇಡೀ ಜೀವಕೋಶವೆ ಒಂದು ರಾಸಾಯನಿಕ ಕಾರ್ಖಾನೆ ಎಂದು ಹೇಳಬಹುದು. ಆ ಕಾರ್ಖಾನೆಯ ದಕ್ಷತೆ ಕಾರಕ್ಷಮತೆಯ ಮಟ್ಟವನ್ನು ನಿಜ ಜೀವನದ ಕಾರ್ಖಾನೆಗಳಲ್ಲಿ ನಾವಿನ್ನು ಮುಟ್ಟಲೂ ಆಗಿಲ್ಲವಷ್ಟೆ...!

ಈ ಭೌತಿಕ ಸ್ತರದಲ್ಲೇನೊ ಭೌತಿಕ ಶಕ್ತಿ ತತ್ವಾಂಶಗಳ ಕಾರ್ಯಾಚರಣೆ ಮತ್ತು ರಾಸಾಯನಿಕ ಸಂವಹನದ ದೆಸೆಯಿಂದ ಕಾರ್ಯ ನಿರ್ವಹಿಸಲ್ಪಡುತ್ತಿದೆ ಎಂದು ಹೇಳಿಬಿಡಬಹುದು. ಆದರೆ ಇವುಗಳೆಲ್ಲದರ 'ಮ್ಯಾನೇಜ್ಮೆಂಟ್' ಜವಾಬ್ದಾರಿ ನಿರ್ವಹಿಸುತ್ತಿರುವ ಮೂರನೆಯ ವಿಭಾಗವೆನಿಸಿಕೊಂಡ, ಮೇಲುಸ್ತುವಾರಿಯ ಅಭೌತಿಕ ತತ್ವಶಕ್ತಿಗಳಾದ ಅಂತಃಕರಣಗಳಾದ ಮನಸು, ಬುದ್ಧಿ, ಚಿತ್ತ, ಅಹಂಕಾರಗಳ ಸಂವಹನದ ಬಗೆಯೆಂತು? ಇವು ಭೌತಿಕವಾಗಿರದ ಕಾರಣ ಯಂತ್ರಗಳಾಗಿಯಂತು ಇರಲಾಗದು. ಅಂದರೆ ಅಭೌತಿಕ ಸ್ತರದ ಅಥವ ಚಲನೆಯಿರದ ಜಡಶಕ್ತಿಯ ಅದೃಶ್ಯರೂಪದಲ್ಲಿರುವ ಅಸ್ತಿತ್ವವೆಂದೆ ಇಟ್ಟುಕೊಂಡರು, ಇವು ಮೇಲುಸ್ತುವಾರಿ ನಿಭಾಯಿಸಲಾದರೂ ಸಂವಹನವನ್ನಂತೂ ನಡೆಸಲೆಬೇಕಲ್ಲಾ ? ಅದು ಹೇಗೆ ಸಾಧ್ಯವಾಗುತ್ತದೆ - ತಾತ್ವಿಕವಾಗಿ ಹಾಗೂ ವೈಜ್ಞಾನಿಕವಾಗಿಯು ಒಪ್ಪಿಗೆಯಾಗುವ ತರದಲ್ಲಿ ? ಅದರಲ್ಲಿ ಶಕ್ತಿಮೂಲವಂತೂ ತುಣುಕಿನ ರೂಪದಲ್ಲಿ (ಪ್ರಾಯಶಃ ಜಡಪ್ರಕಾಶದಂತೆ) ಇದೆಯೆಂದು ಆರಂಭದ ಅನಿಸಿಕೆಯಲ್ಲೆ ಸ್ಪಷ್ಟಗೊಳಿಸಿಕೊಂಡಿರುವುದರಿಂದ, ಅದು ಹೇಗೆ ರೂಪಾಂತರಗೊಂಡು ಆದೇಶಗಳಾಗಿ, ಸಂದೇಶಗಳಾಗಿ, ಸಂವಹನಗಳಾಗಿ ರೂಪಾಂತರಗೊಳ್ಳುತ್ತವೆ ಎನ್ನುವುದೆ ಮೂಲಪ್ರಶ್ನೆ. ಇಲ್ಲಿ ಮೂಲ ತೊಡಕಿರುವುದು ಸಂವಹನ ಆಗುವುದೊ, ಬಿಡುವುದೊ ಎನ್ನುವ ವಿಷಯದಲ್ಲಲ್ಲ. ಭೌತಿಕ ಮತ್ತು ಅಭೌತಿಕ ಸ್ತರದ ನಡುವೆ ಹೇಗೆ ಆಗುತ್ತದೆ ಎನ್ನುವುದು. ಅದು ಗೊತ್ತಾದರೆ, ನಮ್ಮಲ್ಲಿ ಮೂಡುವ ಆಲೋಚನೆಗಳು ಅದು ಹೇಗೆ ಭೌತಿಕ ಕಾರ್ಯವಾಗಿ ಬದಲಾಗುತ್ತವೆ ಎನ್ನುವ ಸುಳಿವೂ ಸಿಕ್ಕೀತು - ಏಕೆಂದರೆ ಇಡೀ ದೇಹವೆ ಇಂತಹ ಅಗಣಿತ ಕೋಶಗಳ ಮೊತ್ತ ತಾನೆ ? ಈ ನಾಲ್ಕು ಅಂತಃಕರಣಗಳ ಮಟ್ಟದ ಒಂದು ಚಿಂತನೆ ಅದು ಹೇಗೆ ಈ ಯಂತ್ರಗಳ ಮೆದುಳಿಗೆ ಭೌತಿಕ ಸುದ್ದಿಯ ರೂಪದಲ್ಲಿ ರವಾನೆಯಾಗುತ್ತದೆ ? ಸಂದೇಶ ಸರಳವಾದುದೆ ಆದರೂ ಅದನ್ನು ರವಾನಿಸುವ ವಿಧಾನವಂತೂ ಇರಲೇಬೇಕಲ್ಲ ? ಉದಾಹರಣೆಗೆ 'ಉತ್ಪಾದನೆ ಆರಂಭಿಸು' ಎನ್ನುವ ಸಂದೇಶ 'ಉತ್ಪಾದನೆ ಸಾಕು, ನಿಲ್ಲಿಸು' ಎನ್ನುವ ಸಂದೇಶಕ್ಕಿಂತ ವಿಭಿನ್ನವಾಗಿರುವಂತೆ ರವಾನೆಯಾಗಬೇಕು. ಮತ್ತು ಅದೇ ಫಲಿತದಲ್ಲಿ ಕೊನೆಯಾಗುವಂತೆ ನಿಖರವಾಗಿ ಕಳಿಸಬೇಕು. ಅರ್ಥಾತ್ ಇಲ್ಲಿ ಅಭೌತಿಕ ಸ್ತರದ ಚಿಂತನೆಯ ಅಲೆಯೊಂದು ತನ್ನನ್ನೆ ಭೌತಿಕ ರೂಪದ ಕ್ರಿಯೆಯಾಗಿ ಪರಿವರ್ತಿಸಿಕೊಳ್ಳಬೇಕು - ಅಂತಿಮ ಫಲಿತದಲ್ಲಿ. ಆರಂಭದಲ್ಲಿ ಅಭೌತಿಕ, ಅಂತಿಮದಲ್ಲಿ ಭೌತಿಕ - ಅದು ಹೇಗೆ ಸಾಧ್ಯ? ಭೌತಿಕ ರೂಪದ ಅಲೆಯೊಂದನ್ನೆ ಉದಾಹರಣೆಗೆ ತೆಗೆದುಕೊಂಡರೆ ಅದು ಹರಿದುಕೊಂಡು ಹೋಗುತ್ತಲೆ ಶಕ್ತಿಯ ರವಾನೆ ಮಾಡುತ್ತದಾದರೂ ಅಲ್ಲಿ ಎಲ್ಲವೂ ಒಂದೆ ಭೌತಿಕ ರೂಪದ್ದು, ಮೊದಲಿಂದ ಕಡೆಯ ತನಕ. ಅಲೆ..ಅಲೆ..ಅಲಲೆಯಾಗಿ..ಸಂವಹನ..ಅರೆರೆ, ಹೌದಲ್ಲಾ ? ಶಕ್ತಿ ಅಲೆಯ ರೂಪದಲ್ಲಿ ಅದೃಶ್ಯವಾಗಿಯೂ ಸಂವಹಿಸಬಹುದಲ್ಲಾ ? ನಮಗೆ ಕಣ್ಣಿಗೆ ಕಾಣದಿದ್ದರೂ ಅದೆಷ್ಟೊ ಬಗೆಯ ಶಕ್ತಿ ತರಂಗಗಳು ನಮ್ಮ ಸುತ್ತಲೆ ಇಲ್ಲವೆ ? ಅಷ್ಟೇಕೆ - ನಾವು ವೈಜ್ಞಾನಿಕವಾಗಿ ಸಂದೇಶ ಕಳಿಸುವ ಕೃತಕ ಉಪಗ್ರಹಗಳು ಮೊದಲಿಗೆ ಭೌತಿಕವಾದರೂ ನಂತರ ಅವು ಜತೆಗೊಯ್ಯುವ ಸುದ್ಧಿವಾಹಕಗಳು, ರೇಡಿಯೊ ಅಲೆಗಳೊ, ಶಬ್ದದಲೆಗಳೊ, ವಿದ್ಯುತ್ಕಾಂತೀಯ ಶಕ್ತಿಯಲೆಗಳೊ ಆಗಿ ಮಿಲಿಯಗಟ್ಟಲೆ ಮೈಲುಗಳ ದೂರ ಮುಟ್ಟುವುದಿಲ್ಲವೆ ? ಅಲ್ಲಿಂದ ವ್ಯೋಮದಲ್ಲಿ ತೆಗೆದ ಚಿತ್ರಗಳನ್ನು ಅಲ್ಲಿಂದ ಮತ್ತೆ ವಾಪಸ್ಸು ತಂದು ತಲುಪಿಸುವುದಿಲ್ಲವೆ? ಭೌತಿಕದಿಂದ ಅಭೌತಿಕ ಮತ್ತೆ ಭೌತಿಕವಾಗುವ ಈ ಕ್ರಿಯೆಯಲ್ಲಿ ಎಲ್ಲವು ನಿಶ್ಚಿತ ರೂಪದಲ್ಲೆ ನಡೆಯುತ್ತಿದ್ದರೂ ನಮಗದನ್ನು ಕಾಣಲಾಗದು, ಕಾಣುವ ಶಕ್ತಿ ಭೌತಿಕಾಂಗಗಳಿಗಿಲ್ಲ ಎಂದ ಮಾತ್ರಕ್ಕೆ ಅದು ನಡೆಯದು ಎನ್ನಲಾಗದು. ಅಂದರೆ ಕೋಶದೊಳಗಿನ ಅಂತಃಕರಣದ ಶಕ್ತಿ ತುಣುಕುಗಳು ತರಂಗ ರೂಪದಲ್ಲಿ ಪ್ರವಹಿಸಿ 'ಕಂಪನ'ಗಳನ್ನೆಬ್ಬಿಸಿ ಅದನ್ನೆ ಸಂವಹನದ ರೂಪದಲ್ಲಿ ಬಳಸುತ್ತಿರಬೇಕು. ಯಂತ್ರ ಆರಂಭಿಸಲೊಂದು ಬಗೆಯ ಕಂಪನ, ನಿಲಿಸಲೊಂದು ಬಗೆಯ ಕಂಪನ ಇತ್ಯಾದಿ...

ಅಲ್ಲಿಗೆ ಮೂಲಶಕ್ತಿಯ ತುಣುಕು ಅಂತಃಕರಣಗಳಂತಹ ಅಭೌತಿಕ ರೂಪದಲ್ಲಿ ಅಸ್ತಿತ್ವದಲ್ಲಿದ್ದರು ಸಹ ತರಂಗಗಳ ಮತ್ತು ತರಾಂಗಾಂತರಗಳ ಮುಖೇನ ತಮ್ಮ ಅಭೌತಿಕ ಶಕ್ತಿಯನ್ನು ಭೌತಿಕವಾಗಿ ಸಂವಹಿಸಲು ಮತ್ತು ರೂಪಾಂತರಿಸಿಕೊಳ್ಳಲು ಸಾಧ್ಯವಾಗುತ್ತದೆನ್ನಬೇಕು. ಅಂದರೆ ಭೌತಿಕಾಭೌತಿಕದ ನಡುವೆ ಸಂವಹನ, ಸಂದೇಶವೇನು ಅಸಾಧ್ಯದ ಪ್ರಕ್ರಿಯೆಯೇನಲ್ಲ. ಬರಿ ನಾವು ನಮ್ಮ ಜ್ಞಾನೇಂದ್ರಿಯಗಳ ಗ್ರಹಿಕೆಯಲ್ಲಿ ಅದನ್ನು ಸುಲಭದಲ್ಲಿ ಗ್ರಹಿಸಲು, ಕಾಣಲು ಸಾಧ್ಯವಿಲ್ಲವಷ್ಟೆ. ಹಾಗೆ ನೋಡುವುದಾದರೆ ಮಂಜುಗಡ್ಡೆಯಂತಹ ಘನ ಭೌತಿಕ ವಸ್ತು ಕಣ್ಣಿಗೆ ಬಿಳಿಯ ಹತ್ತಿಯ ಹಾಗೆ ಸ್ವಚ್ಛವಾಗಿ ಕಾಣುವ ಅನುಭವ ನೀಡುತ್ತಿದ್ದರೂ, ಕರಗಿ ನೀರಾಗುತ್ತಿದ್ದಂತೆ ಅಚ್ಚ ಬಿಳಿಯೆಲ್ಲ ಮಾಯವಾದ ಸ್ವಚ್ಛ ತಿಳಿ ದ್ರವರೂಪಿ ನೀರಾಗಿಬಿಡುತ್ತದೆ. ಆದರೂ ಭೌತಿಕ ರೂಪಿನ ಕಾರಣ, ಕಣ್ಣಿಗೆ ಕಾಣಲು ಸಾಧ್ಯ. ಅದೇ ನೀರು ಶಾಖದಡಿ ವಾಯುರೂಪಿ ಹಬೆಯಾಗಿ ಮಾರ್ಪಾಡಾದರೆ ಕಣ್ಣಿಗೆ ಕಾಣದ ಕಾರಣ ಅಭೌತಿಕವೆನಿಸಿಬಿಡುತ್ತದೆ. ಆದರೆ ಅದು ಮಾಯವಾಯ್ತೆಂದಲ್ಲ ಲೆಕ್ಕ, ಕಣ್ಣಿಗೆ ಕಾಣಿಸದಂತಾಯ್ತು ಎಂದಷ್ಟೆ. ಜತೆಗೆ ಭೌತಿಕವಾಗಿ ಅದು ಆವರಿಸಿಕೊಂಡ ವಿಸ್ತಾರವು ಮೊದಲಿನಂತೆ ಅಳವಿಗೆ ಸಿಗುವುದಿಲ್ಲ. ಇದನ್ನೆ ವಿಸ್ತರಿಸಿ ಪಂಚಭೂತಗಳ ಮೂಸೆಯಲ್ಲಿ ನೋಡಿದರೆ, ಈ ಅಭೌತಿಕ ಗಾಳಿಯ ವಾಸ್ತವ್ಯಕ್ಕೆ ವಿಶಾಲ ವ್ಯೋಮ ರೂಪಿ 'ಆಕಾಶ (ಅವಕಾಶ)' ಬೇಕು ಮತ್ತು ರೂಪಾಂತರವನ್ನು ಸಾಧ್ಯವಾಗಿಸುವ ಶಾಖಶಕ್ತಿ ನೀಡುವ ಬೆಂಕಿಯ ಸಹಯೋಗವೂ ಇರಬೇಕು - ಅದರಿಂದಲೆ ಘನರೂಪಿ ಭೂಮಿ, ದ್ರವರೂಪಿ ಜಲ, ಗಾಳಿಯಾಕಾರದ ಅನಿಲದ ಜತೆಗೆ ಆಕಾಶ ಮತ್ತು ಬೆಳಕೀವ ಬೆಂಕಿಗಳು ಸೇರಿದ ಮೊತ್ತ ಪಂಚಭೂತಗಳೆನಿಸಿಕೊಳ್ಳುವುದು. ಯಾವುದೊ ಶಕ್ತಿ ಬಳಸಿ ಅದರೊಳಗಿನವುಗಳನ್ನೆಲ್ಲ ಸಮಷ್ಟಿಸಿ ಭೌತಿಕ ರೂಪವನ್ನು ಆರೋಪಿಸಬಹುದು ಅಥವಾ ಅಭೌತಿಕವನ್ನಾಗಿಸಲೂಬಹುದು. ಗ್ರಹಿಸಲಾಗದ ವೀಕ್ಷಕ ನೋಟಕ್ಕೆ ಅವು ಮಂತ್ರವೊ, ಜಾದುವೊ, ಬೂಟಾಟಿಕೆಯ ಮಾಯಾಜಾಲವೊ ಅನಿಸಬಹುದಷ್ಟೆ. ಹಾಗೆ ಮಾಡಬಲ್ಲ ತರಂಗ ಮತ್ತು ತರಂಗಾಂತರ ಶಕ್ತಿ ಇರಬೇಕಷ್ಟೆ ರೂಪಾಂತರದ ಸಾಧ್ಯತೆಗೆ. ಯಾರಿಗೆ ಗೊತ್ತು ? ನಾವು ಮಂತ್ರೋಚ್ಛಾರದಲ್ಲಿ ಸಂವಹಿಸಿ ಏನಾದರೂ ಅಸಾಧಾರಣ ಪವಾಡ ಸದೃಶ್ಯ ಪ್ರಕ್ರಿಯೆಯನ್ನುಂಟು ಮಾಡಬಹುದೆಂದು ವಾದಕ್ಕಿಳಿದವರನ್ನು ಅವಹೇಳನ ಮಾಡಿ ಸುಲಭದಲ್ಲಿ ಹೀಗಳೆದುಬಿಡಬಹುದು. ಆದರೆ ಪ್ರಾಯಶಃ ಅಲ್ಲೂ ವೈಜ್ಞಾನಿಕವಾಗಿ ಚಿಂತಿಸಿದರೆ, ಮಂತ್ರೋಚ್ಚಾರವೆನ್ನುವುದು ಶಕ್ತಿಯ ಶಬ್ದರೂಪ. ಶಬ್ದ ತರಂಗವಾಗಿ ಪ್ರವಹಿಸುವುದು ಗೊತ್ತಿರುವ ವಿಷಯವೆ ಆದ ಕಾರಣ ಈ ಶಕ್ತಿತರಂಗ ಸರಿಯಾದ ಗಾತ್ರ, ತರಂಗಾಂತರ ಮತ್ತು ಸ್ಥಾಯಿ ಶಕ್ತಿಯ ಮೊತ್ತವೆ ಆಗಿದ್ದರೆ ಚೆದುರಿ ಹೋಗಿರುವ ಪಂಚಭೂತ ರೂಪಿಗಳನ್ನು ಒಗ್ಗೂಡಿಸಿಯೊ, ಅಥವಾ ಪ್ರಚೋದಿಸಿಯೊ ಕಣ್ಣಿಗೆ ಕಾಣದ್ದನ್ನು ಕಾಣುವಂತೆಯೊ ಅಥವಾ ಕಾಣುತ್ತಿರುವುದನ್ನು ಕಾಣದಂತೆಯೊ ಪವಾಡರೂಪಿಗೆ ರೂಪಾಂತರಿಸುವುದು ತಾಂತ್ರಿಕ ಅಸಾಧ್ಯತೆಯೇನಲ್ಲವೆನಿಸುತ್ತದೆ. ಇದು ಸಾಧ್ಯವಿದ್ದರೂ ಅಂತಹ ತರಂಗಳನ್ನೆಬ್ಬಿಸುವ ಶಕ್ತಿ, ನಿಖರತೆ, ಕರಾರುವಾಕ್ಕಿನ ಸ್ಪಷ್ಟತೆ ಮಂತ್ರಗಳಲ್ಲಿನ ಆ ಶಬ್ದಕ್ಕೆ ತುಂಬಿದೆಯೆ, ಇಲ್ಲವೆ ಎನ್ನುವುದು, ಬರಿಯ ಢೋಂಗಿಗಳ ಪ್ರಪಂಚದಲ್ಲಿ  ಬೂಟಾಟಿಕೆಯಾಗಿ ಪರಿಗಣಿತವಾಗುವುದೆ ಹೆಚ್ಚು. ನಮ್ಮ ಪುರಾತನ ಗ್ರಂಥದ ಉಪದೇಶ ಬೋಧನೆಗಳಲ್ಲಿ ಮಂತ್ರಗಳು ಪೂರ್ಣ ಫಲಕಾರಿಯಾಗಬೇಕೆಂದರೆ ನಿಖರವಾಗಿ, ಸ್ಪಷ್ಟವಾಗಿ, ಸ್ಪುಟವಾಗಿ ಇರಬೇಕೆನ್ನುವುದು ಈ ಕಾರಣಕ್ಕೆ ಇರಬೇಕು. ಇಲ್ಲದಿದ್ದರೆ ಸುಸೃಷ್ಟಿಯ ಬದಲು ಕುಸೃಷ್ಟಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲವಲ್ಲ ?

(ಇನ್ನೂ ಇದೆ)
__________