ಕಾಲದ ಕನ್ನಡಿ: ನಾವು ಮತ್ತು ನಮ್ಮ ಧರ್ಮ

ಕಾಲದ ಕನ್ನಡಿ: ನಾವು ಮತ್ತು ನಮ್ಮ ಧರ್ಮ

ಚಿತ್ರ

ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು ಪರ್ಯಾಯ ಚಿಂತನೆಗಳ ಒಂದು ಸ್ರೋತ ಅಥವಾ ಪ್ರವಾಹ ಎಂದು ಹೇಳಬಹುದು. ಎರಡನೆಯ ಲಕ್ಷಣವೆಂದರೆ, ಒಂದು ಧರ್ಮದ ಮೂಲದಲ್ಲಿ ಇರುವ ಈ ವ್ಯಕ್ತಿ ಅಥವಾ ಶಕ್ತಿ ಪ್ರತಿಪಾದಿಸಿದ ಆಧ್ಯಾತ್ಮಿಕ ಧಾರ್ಮಿಕ, ಸಾಮಾಜಿಕ ಸ್ವರೂಪದ ಮಾರ್ಗದರ್ಶಕ ತತ್ವಜ್ಞಾನ ಅಥವಾ ಬೋಧನೆಗಳನ್ನು ಒಳಗೊಂಡ ಗ್ರಂಥಗಳಿರುತ್ತವೆ. ನಿದರ್ಶನಕ್ಕೆ ಹೇಳುವುದಾದರೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಖುರಾನ್, ಹಿಂದೂಗಳಿಗೆ ಭಗವದ್ಗೀತೆ, ಬೌದ್ಧರಿಗೆ ತ್ರಿಪಿಟಕಗಳು, ವೀರಶೈವರಿಗೆ ವಚನಗಳು- ಸಿದ್ಧಾಂತ ಶಿಖಾಮಣಿ ಇವುಗಳನ್ನು ಹೆಸರಿಸಬಹುದು. ಮೂರನೆಯದು ಈ ಗ್ರಂಥಗಳನ್ನು ಕುರಿತು ಕಾಲದಿಂದ ಕಾಲಕ್ಕೆ ವ್ಯಾಖ್ಯಾನ ಬರೆದ ಆಚಾರ್ಯರಿದ್ದಾರೆ ಮತ್ತು ಬೋಧಕರಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರತಿಯೊಂದು ಧರ್ಮಕ್ಕೂ ಒಂದು ದೇವರ ಕಲ್ಪನೆ ಇರುತ್ತದೆ. ಅದನ್ನು ಸಾಕಾರಗೊಳಿಸುವ ಗುಡಿಗಳೂ, ಮಠಗಳೂ ಇವೆ. ಇವುಗಳನ್ನು ಆಶ್ರಯಿಸಿಕೊಂಡ ಪೂಜಾರಿಗಳೂ, ಪುರೋಹಿತರೂ, ಗುರುಗಳೂ, ಅವರು ಹುಟ್ಟುಹಾಕಿದ ಪೂಜಾವಿಧಾನಗಳೂ ಅಚರಣೆಗಳೂ, ಅವುಗಳ ಜತೆಗೆ ಬೆಸೆದುಕೊಂಡ ಐತಿಹ್ಯಗಳೂ ಮತ್ತು ಭಕ್ತಾದಿಗಳೂ ಇರುತ್ತಾರೆ. ಇದು ಧರ್ಮ ಎಂದ ಕೂಡಲೆ ಕಣ್ಣಿಗೆ ಕಟ್ಟುವ ವಿವಿಧ ಸಂಗತಿಗಳ ಒಂದು ಹೆಣಿಗೆ ಅಥವಾ Network. ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾದ ಮಾತೇನೆಂದರೆ, ಎಲ್ಲ ಧರ್ಮಗಳಿಗೂ ಒಂದು ದೇವರ ಕಲ್ಪನೆ ಇದೆ ಎಂಬ ಮಾತು ಜೈನ ಹಾಗೂ ಬೌದ್ಧಧರ್ಮಗಳಿಗೆ ಅನ್ವಯಿಸುವುದಿಲ್ಲ. ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ದೇವನಾಗುವ ಅಧಿಕಾರ ಮತ್ತು ಅವಕಾಶಗಳಿವೆ ಎಂಬುದನ್ನು ಎತ್ತಿ ಹಿಡಿದ ಹೆಗ್ಗಳಿಕೆ ಜೈನಧರ್ಮಕ್ಕೆ ಇದೆ. ಬುದ್ಧ ಸ್ಥಾಪಿಸಿದ ಧರ್ಮ ದೇವರಿಲ್ಲದ ಧರ್ಮವಾಗಿತ್ತು. ದೇವರ ಮೇಲಿನ ನಂಬಿಕೆಯು ಧರ್ಮಕ್ಕೆಅನಿವಾರ್ಯವಾದುದೇನಲ್ಲ; ಕಣ್ಣೆದುರಿಗೆ ದುಃಖಭೂಯಿಷ್ಠವಾದ ಜಗತ್ತು ಇರುವಾಗ, ಅದನ್ನು ನಿರ್ಲಕ್ಷಿಸಿ ದೇವರನ್ನು ಕುರಿತು ಯೋಚಿಸುವುದು ನಿಷ್ಪ್ರಯೋಜಕ ಎಂದು ಹೇಳಿದ. ದೇವರು- ಗುರು-ಶಾಸ್ತ್ರ ಇತ್ಯಾದಿಗಳ ನೆರವಿಲ್ಲದೆಯೇ ಮನುಷ್ಯ ತನ್ನ ಬಿಡುಗಡೆಯ ದಾರಿಯನ್ನು ತಾನೇ ಕಂಡುಕೊಳ್ಳಬಲ್ಲ- ಎಂಬ ಮಾತನ್ನು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಹೇಳಿದವನು ಬುದ್ಧ. ಜೈನ-ಬೌದ್ಧ ಧರ್ಮಗಳು ಮೂಲದಲ್ಲಿ ‘ದೇವರ’ ಬಗೆಗೆ ಏನೂ ಹೇಳದಿದ್ದರೂ, ಆಯಾ ಧರ್ಮಗಳವರಿಗೆ ತೀರ್ಥಂಕರರೂ, ಬುದ್ಧನೂ ದೇವತಾ ವಿಗ್ರಹಗಳಾಗಿ ಪರಿಣಮಿಸಿದರೆಂಬುದು ಬೇರೆಯ ಮಾತು.

ಇಂಥ ಯಾವುದಾದರೊಂದು ಧರ್ಮವನ್ನು ಒಪ್ಪಿಕೊಂಡ ಹಾಗೂ ಆಚರಿಸುವ ವಿವಿಧ ಜನಸಮುದಾಯ ಅಥವಾ ಒಂದು ಸಮಾಜ ಆಯಾ ಧರ್ಮದ ನಿರ್ದೇಶನಕ್ಕೆ ಅನುಗುಣವಾದ ಜೀವನಕ್ರಮವೊಂದನ್ನು ಅಥವಾ ಸಂಸ್ಕೃತಿಯನ್ನು ಕಟ್ಟಿಕೊಳ್ಳುತ್ತದೆ. ಮನುಷ್ಯನ ಅಸ್ತಿತ್ವಕ್ಕೆ ಒಂದು ನಂಬಿಕೆಯ ನೆಲೆಯನ್ನೂ ಸಾಮಾಜಿಕ ಸ್ವಾಸ್ಥ ವನ್ನೂ ಕಲ್ಪಿಸುವ ಧರ್ಮ ಎನ್ನುವುದು ಮನುಷ್ಯನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆವಶ್ಯಕತೆಯ ಪರಿಣಾಮವಾಗಿದೆ. ಒಂದು ಕುಟುಂಬದ ವ್ಯಕ್ತಿಯಾಗಿ, ಒಂದು ಸಮಾಜದ ಸದಸ್ಯನಾಗಿ ಬದುಕಬೇಕಾದರೆ ಯಾವ ಯಾವ ಲೌಕಿಕ, ನೈತಿಕ, ಹಾಗೂ ಆಧ್ಯಾತ್ಮಿಕ ವಿಚಾರಗಳನ್ನೂ, ನಿಲುವುಗಳನ್ನೂ, ಮೌಲ್ಯಗಳನ್ನೂ ರೂಢಿಸುವುದರ ಮೂಲಕ ಒಂದು ಸಮಾಜದ ಎಲ್ಲರನ್ನೂ ಒಂದುಗೂಡಿಸುವ, ಒಂದು ವ್ಯವಸ್ಥೆಗೆ ತರುವ ವಿಧಾನವೇ ಧರ್ಮ. ‘ಯಾವುದು ಸಮಾಜಕ್ಕೆ ಒಂದು ಧಾರಣಶಕ್ತಿಯನ್ನು ತಂದುಕೊಡುತ್ತದೋ ಅದೇ ಧರ್ಮ’ ಎಂಬ ಸುಪ್ರಸಿದ್ಧ ಸಂಸ್ಕೃತೋಕ್ತಿಯ ಅರ್ಥವೇ ಇದು.

ಗಮನಿಸಬೇಕಾದ ಸಂಗತಿ ಎಂದರೆ ಜಗತ್ತಿನ ಎಲ್ಲ ಧರ್ಮಗಳೂ ಮನುಷ್ಯನು ತನಗಿಂತ ದೊಡ್ಡದಾದ ಆ ಪರಾತ್ಪರ ಅಥವಾ ದೇವರು ಒಬ್ಬನೇ  ಎಂದು ಹೇಳುತ್ತವೆ. ಮನುಷ್ಯರೆಲ್ಲರೂ ಸಮಾನರು ಎಂದು ಹೇಳುತ್ತವೆ. ಶಾಂತಿಯನ್ನು- ಕರುಣೆಯನ್ನು- ಪ್ರೀತಿಯನ್ನು ಒತ್ತಿ ಹೇಳುತ್ತವೆ. ಯಾವ ಧರ್ಮವೂ ಸಹಜೀವಿಗಳನ್ನು ಹಿಂಸಿಸಬೇಕೆಂದಾಗಲೀ ದ್ವೇಷಿಸಬೇಕೆಂದಾಗಲೀ ಹೇಳುವುದಿಲ್ಲ. ಬದಲು ಎಲ್ಲರನ್ನೂ ಪ್ರೀತಿಸಬೇಕೆಂದು ಹೇಳುತ್ತವೆ.

ಕಾರಣ, ಮನುಷ್ಯನ ಸ್ವಾರ್ಥ ಹಾಗೂ ಅವೈಚಾರಿಕತೆಗಳೇ. ಹಾಗೂ ಆ ಮೂಲಕ ಧರ್ಮದ ಸ್ವರೂಪವನ್ನು ಕುರಿತ ಹ್ರಸ್ವಬುದ್ಧಿಯ ಅಪವ್ಯಾಖ್ಯಾನಗಳೇ. ಈ ಪೂರ್ವಪೀಠಿಕೆಯ ಹಿನ್ನೆಲೆಯಲ್ಲಿ ಒಂದು ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ಕೆಲವು ಸಂಗತಿಗಳನ್ನು ಪ್ರಸ್ತಾಪಿಸೋಣ:

ದೇವರಾಗಲಿ, ದೇವಸ್ಥಾನಗಳಾಗಲಿ, ಧರ್ಮವಾಗಲಿ ಇರುವುದು ಮನುಷ್ಯರಿಂದ ಮನುಷ್ಯರಿಗಾಗಿ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಯಾವುದೇ ಒಂದು ಧರ್ಮ ಸಮುದಾಯದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಅದು ತನ್ನ ಸಮಾಜದ ಎಲ್ಲ ವರ್ಗದವರನ್ನೂ ಸಮಾನರೆಂದು ಪರಿಗಣಿಸುವುದು ಅದರ ಸಾಮಾಜಿಕ ಜವಾಬ್ದಾರಿಯಾಗಿದೆ. ಯಾಕೆಂದರೆ ನಿಜವಾದ ಧಾರ್ಮಿಕ ಮನಃಸ್ಥಿತಿ ಎಂದರೆ ಮನುಷ್ಯರೆಲ್ಲರ ಏಕತೆ ಹಾಗೂ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ನಿಲುವು.

ಮಾನವ ಸ೦ಘ ಜೀವಿ. ಸಮಾಜದಲ್ಲಿ ತಾನೂ ಒಬ್ಬ ಸದಸ್ಯನಾಗಿ, ಸಮಾಜವಾದಿಯಾಗಿ , ಈ ಜಗತ್ತಿನ ಸಹಜೀವಿಗಳ ದುಃಖಕ್ಕೆ ಸ್ಪಂದಿಸುತ್ತ ಅವರ ನೋವನ್ನು, ಅಜ್ಞಾನವನ್ನು ನಿವಾರಿಸುತ್ತ ‘ಬಹುಜನಹಿತ’ಕ್ಕಾಗಿ ಶ್ರಮಿಸುವುದು ಆತನ ಸಾಮಾಜಿಕ ಜವಾಬ್ದಾರಿಯಾಗಿದೆ. ‘ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನವನ್ನು ನೀಡಲಾರದ, ವಿಧವೆಯ ಕಣ್ಣೀರನ್ನು ಒರೆಸಲಾಗದ ಧರ್ಮದಲ್ಲಾಗಲೀ, ದೇವರಲ್ಲಾಗಲೀ ನನಗೆ ನಂಬಿಕೆಯಿಲ್ಲ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಈ ಅರ್ಥದಲ್ಲಿ. ಭಗವಾನ್ ಬುದ್ಧನ ಜೀವಕಾರುಣ್ಯದ ಹಾಗೂ ಏಸುಕ್ರಿಸ್ತನು ಬೋಧಿಸಿದ ಹಾಗೂ ಬದುಕಿದ ಧರ್ಮದ ಸ್ವರೂಪ ಈ ಬಗೆಯದೇ. ಧರ್ಮ ಎಂದರೆ ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ ಮಾನವ ಪ್ರೇಮವನ್ನು ವಿಸ್ತರಿಸುತ್ತ, ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವ ಒಂದು ಸತ್ವವೇ ಸರಿ.

ಧರ್ಮ ಎಂದರೆ Man making ಎಂದು ಸ್ವಾಮಿ ವಿವೇಕಾನಂದರು ಸೂತ್ರೀಕರಿಸುತ್ತಾರೆ. ಒಬ್ಬ “ವ್ಯಕ್ತಿಯನ್ನು ಸೃಷ್ಟಿಸುವುದು “ ಯಾ “ತಯಾರುಗೊಳಿಸುವುದು”  ಎ೦ದು ಆ Man making ಪದದ ಅರ್ಥ. ಜನನದೊ೦ದಿಗೆ ಸಾವು ಕೂಡಾ ನಿಶ್ಚೈಸಲ್ಪಡುತ್ತದಾದರೂ ಅ ಎರಡರ ನಡುವಿನ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು  ನಾವೇ. ಆ ಅರ್ಥದಲ್ಲಿ ಪರೋಪಕಾರಿಯಾಗಿ ಮಾನವ ಬದುಕಬೇಕಾದ “ ವಸುದೈವ ಕುಟು೦ಬಕ೦“ ಎ೦ಬ ಉಕ್ತಿಯನ್ನು ಅನುಸರಿಸಬೇಕಾದ ಜೀವನೋಕ್ತಿಯನ್ನು ಧರ್ಮ ನೀಡುತ್ತದೆ.

 ಧರ್ಮ ಪದದ ಅರ್ಥವ್ಯಾಖ್ಯಾನ ಸುಲಭ ಸಾಧುವಲ್ಲ “ ಎತ್ತಿಹಿಡಿ“ ಎ೦ಬ ಬಹು ಸರಳ ಅರ್ಥವನ್ನೇ ಉಲ್ಲೇಖಿಸುವುದಾದರೆ ಇಲ್ಲಿಯೂ ಅದು ಹೇಳುವುದು ನಿರ೦ತರ ಒಳಿತಿನ ಹಾದಿಯನ್ನು- ಪರೋಪಕಾರದ ಹಾದಿಯನ್ನು ಎತ್ತಿಹಿಡಿಯಬೇಕಾದ ಯಾ ಅನುಸರಿಸಬೇಕಾದ ಮಾರ್ಗಸೂಚಿಯನ್ನೇ ವಿನ: ಒತ್ತಾಯಪೂರ್ವಕ ಅಭಿಪ್ರಾಯ ಹೇರಿಕೆಯಲ್ಲ. ವ್ಯಕ್ತಿಯ ಬದುಕಿನ ತು೦ಬೆಲ್ಲಾ ಥರ-ಥರದ ಧರ್ಮಗಳು ಹಾಸು ಹೊಕ್ಕಾಗಿವೆ. ಮಾನವ ಬೆಳೆದ೦ತೆಲ್ಲಾ , ಸಮಾಜವನ್ನು ಅರ್ಥೈಸಿಕೊ೦ಡತೆಲ್ಲಾ ಅವನ ಬದುಕಿನ ಹಾದಿಗಳು ತೆರೆಯಲ್ಪಡುತ್ತವೆ. ಆಯಾಯ ಜವಾಬ್ದಾರಿಗಳನ್ನು ಹೊತ್ತುಕೊ೦ಡಾಗ ಅವುಗಳ ನೂರು ಪ್ರತಿಶತದ ಪಾಲನೆಯೂ ಧರ್ಮವೇ.

ಹಿ೦ದೆಲ್ಲಾ ಹಿರಿಯರಿಗೆ ನಮಸ್ಕರಿಸಿದಾಗ ಅವರು ಮೊದಲು ಆಶೀರ್ವಾದ ಮಾಡುತ್ತಿದ್ದುದು ಇದನ್ನೇ .. “ ಧರ್ಮವನ್ನು ಎತ್ತಿಹಿಡಿ“ ಅಥವಾ “ಧರ್ಮವನ್ನು ಪಾಲಿಸು“  . ಹಾಗಾದರೆ ಯಾವ ಧರ್ಮವನ್ನು ಪಾಲಿಸಬೇಕು ಅಥವಾ ಎತ್ತಿಹಿಡಿಯಬೇಕು? ಎ೦ಬ ಮನದಲ್ಲಿನ ಪ್ರಶ್ನೆಗೆ ಉತ್ತರವೇನು? ಎ೦ದರೆ ಮೊದಲು ಮನುಷ್ಯ ಧರ್ಮ, ಆನ೦ತರ ನಮ್ಮ ಕರ್ತವ್ಯ ವೆ೦ಬ ಧರ್ಮದ ಪಾಲನೆ. ಮನುಷ್ಯ ಧರ್ಮವೇನು? ಪರರಿಗೆ ಒಳಿತನ್ನು ಬಯಸುತ್ತಾ, ಪರರಿಗೆ ಅಪಕಾರಿಯಾಗದೇ ಬದುಕುವ ರೀತಿಯೇ ಮನುಷ್ಯ ಧರ್ಮದ ಅಥವಾ ಮಾನವ ಧರ್ಮದ ಪರಿಪಾಲನೆಯಾಗಿದೆ. ಈ ನಿಟ್ಟಿನಲ್ಲಿಯೇ  ಒ೦ದು ಸುಪ್ರಸಿಧ್ದ ಉಕ್ತಿ ನೆನಪಾಗುತ್ತದೆ! ಅದು “ ಧರ್ಮೋ ರಕ್ಷತಿ ರಕ್ಷಿತ:“ ಎ೦ಬುದು. ನಾವು ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ಧರ್ಮವು ಕಾಪಾಡುತ್ತದೆ‘ ಎ೦ಬುದು ಈ ಉಕ್ತಿಯ ಅರ್ಥ ಸಾರಾ೦ಶ. ಅದನ್ನೇ ಹಿರಿಯರು ಯಾವನೇ ಒಬ್ಬ ಒಳ್ಳೆಯ ವ್ಯಕ್ತಿ ದುರದೃಷ್ಟದಿ೦ದ ಪಾರಾಗಿಬ೦ದಾಗ ಹೇಳುವ ರೀತಿ ಇದು “ ಅವನ ಒಳ್ಳೆಯತನವೇ ಅವನನ್ನು ಕಾಪಾಡಿತು“ ಈ ಮಾತಿನಲ್ಲಿ ಅಡಗಿರುವ ಮನುಷ್ಯ ಧರ್ಮ ಪಾಲನೆಯೇ ನಿಜವಾದ ಧರ್ಮ. ಇದರ ಅರ್ಥೈಸುವಿಕೆ ಹಾಗೂ ಪರಿಪಾಲಿಸುವಿಕೆ ನಿರ೦ತರ ನಮ್ಮ ಬಾಳಿನಲ್ಲಿ ನಡೆಯುತ್ತದ್ದಾಗ ಯಾವ ದುರಾದೃಷ್ಟವೂ ನಮ್ಮನ್ನು ಕಾಡದು. “ ಏನಾದರೂ ಆಗು ಮೊದಲು ಮಾನವನಾಗು“ ಎ೦ಬ ಉಕ್ತಿ ತನ್ನ ಶ್ರೇಷ್ಟತೆಯನ್ನು ಈ ಸ೦ದರ್ಭದಲ್ಲಿ ಮೆರೆಯುತ್ತದೆ.

 (ಕೆಲವನ್ನು ಕೆಲವು ಕಡೆಯಿ೦ದ ಆಯ್ದಿದ್ದೇನೆ)

Rating
No votes yet