ಕಥೆ: ಪರಿಭ್ರಮಣ..(63)

ಕಥೆ: ಪರಿಭ್ರಮಣ..(63)

( ಪರಿಭ್ರಮಣ..62ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

'ನಿಜ ಹೇಳಬೇಕೆಂದರೆ ಅವೆರಡು ಸರಳ ಭೌತಿಕ ಕಾಯಕಗಳಲ್ಲೂ ಅಷ್ಟೊಂದು ಗಹನ ತತ್ವಸಿದ್ದಾಂತದ ಕಸುವು ತಳುಕು ಹಾಕಿಕೊಂಡಿರುತ್ತದೆಂದು ನಾನು ಖಂಡಿತ ಊಹಿಸಿರಲಿಲ್ಲ ಮಾಸ್ಟರ.. ನನಗದೊಂದು ರೀತಿಯ ಕಣ್ಣು ತೆರೆಸಿದ ಅನುಭವವೆಂದರೂ ತಪ್ಪಾಗಲಾರದು...' ತನ್ನ ಕಸ ಗುಡಿಸಿದ ಮತ್ತು ಹೊಂಡಕ್ಕೆ ನೀರು ತುಂಬಿಸಿದ ಅನುಭವಗಳನ್ನು ನೆನೆಸಿಕೊಂಡು, ಮತ್ತೆ ಮೆಲುಕು ಹಾಕುತ್ತ ನುಡಿದ ಶ್ರೀನಾಥ.

' ಅದರಲ್ಲಿ ಅಚ್ಚರಿ ಪಡಲಾದರೂ ಏನಿದೆ ಕುನ್. ಶ್ರೀನಾಥ ? ನಿನಗರಿವಾದಂತೆ ಪ್ರತಿಯೊಂದು ಅಸ್ತಿತ್ವವೂ ಪಂಚಭೂತಗಳಿಂದಾದ ವಿವಿಧ ಸ್ವರೂಪಗಳೇ ತಾನೆ? ಅರ್ಥಾತ್ ಅವೆಲ್ಲವೂ ಶಕ್ತಿಯ ವಿವಿಧ ರೂಪಗಳೆ ಅಲ್ಲವೆ? ಆ ಶಕ್ತಿ ಪ್ರಕಟರೂಪದಲ್ಲಿರುವುದೊ, ಅಡಗಿಸಿಟ್ಟ ಜಡದೇಹಿಯಾಗಿ ಕೂತಿರುವುದೊ ಎನ್ನುವ ಅಪ್ರಸ್ತುತ ಜಿಜ್ಞಾಸೆಯನ್ನು ಬದಿಗಿಟ್ಟರೆ, ಒಟ್ಟಾರೆ ಅಲ್ಲಿ ಅಸ್ತಿತ್ವದಲ್ಲಿರುವ ಅಂತರ್ಗತ ಶಕ್ತಿಯಿರುವುದು ಖಚಿತವಾಗುವುದರಿಂದ, ಅದರ ಸಾಮರ್ಥ್ಯಕ್ಕೆ ಅಚ್ಚರಿ ಪಡುವಂತದ್ದೇನು ಇರುವುದಿಲ್ಲ...' ಅವನ ಅನಿಸಿಕೆಯನ್ನೆ ತುಸು ತಾತ್ವಿಕ ಮಟ್ಟಕ್ಕೇರಿಸಲು ಯತ್ನಿಸುತ್ತ ನುಡಿದರು ಮಾಂಕ್. ಸಾಕೇತ್

' ಆದರೆ ನನಗೀಗಲೂ ನೆನೆದರೆ ಸಂಕೋಚವಾಗುತ್ತದೆ, ಗುಪ್ಪೆ ಮಾಡಿಕೊಂಡು ಗುಡ್ಡೆ ಹಾಕುತ್ತ ಹೋದದ್ದಾಗಲಿ , ಹೊಳೆಯಿಂದ ತೊಟ್ಟಿಯಲ್ಲಿ ಮೊಗೆದು ತಂದು ಸುರಿದದ್ದಾಗಲಿ ಎಷ್ಟು ಮುರ್ಖತನದ್ದೆಂದು ನೆನೆಸಿಕೊಂಡಾಗ... ಅಗತ್ಯವೆ ಇರದಿದ್ದ ಅಸಾಧ್ಯದ ಹೊರೆಯನ್ನು ಹೊತ್ತು ಹೊತ್ತು ಬಳಲುವ ಮೂರ್ಖನ ಹಾಗೆ..'

ಅವನ ಮಾತಿಗೆ ತಕ್ಷಣ ಉತ್ತರಿಸದೆ ಒಂದರೆ ಗಳಿಗೆ ಅವನ ಮುಖವನ್ನೆ ದಿಟ್ಟಿಸಿ ನೋಡಿದರು ಮಾಂಕ್ ಸಾಕೇತ್. ನಂತರ ನಿಧಾನವಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, 'ಕುನ್. ಶ್ರೀನಾಥ, ಅರಿವಿದ್ದೊ, ಅರಿವಿಲ್ಲದೆಯೊ ಪ್ರತಿಯೊಬ್ಬರು ಅದನ್ನೆ ಅಲ್ಲವೆ ಮಾಡಿಕೊಂಡು ಹೋಗುತ್ತಿರುವುದು?' ಎಂದು ಕೇಳಿದರು.

'ಅಂದರೆ..?' ಅವರ ಮಾತಿನರ್ಥವಾಗದೆ ಕೇಳಿದ ಶ್ರೀನಾಥ..

' ಅಂದರೆ ಈ ಜಗತ್ತಿನ ಬಹುತೇಕ ಮಂದಿ ಮತ್ತು ವ್ಯವಸ್ಥೆಗಳು ಬೇಕಿದ್ದೊ, ಬೇಡದ್ದೊ ಎನ್ನುವ 'ನೈಜ' ವಿವೇಚನೆಯಿಲ್ಲದೆ ಬೇಡದ ಹೊರೆಯನ್ನೆ ಹೊತ್ತು ಮುಕ್ಕಾಲು ಪಾಲು ಸಮಯವನ್ನು ಅದರಲ್ಲೆ ವ್ಯಯಿಸಿಕೊಂಡು ಕಳೆಯುತ್ತಿದ್ದಾರೆಂದು ನಿನಗನಿಸುವುದಿಲ್ಲವೆ? ನಮ್ಮೀ ಮಾನವ-ಜನ್ಯ ವ್ಯವಸ್ಥೆಯಲ್ಲಿ, ಗಹನ-ಘನ-ಮಹತ್ವದ ಅಂತಿಮ ಫಲಿತಕ್ಕಿಂತ ಅದನ್ನು ತಲುಪುವ ವಿಧಿ-ವಿಧಾನಗಳೆ ವೈಭವೀಕರಿಸಲ್ಪಟ್ಟು, ನೈಜ ಗಮ್ಯವಾದ ಫಲಿತಾಂಶಗಳೆ ಎಷ್ಟೋ ಬಾರಿ ಗೌಣವಾಗಿಬಿಡುವುದಿಲ್ಲವೆ ? ನಿಜ ಹೇಳುವುದಾದರೆ ನಾವು ಯಾವುದೆ ಗುರಿ ಸಾಧನೆ  ಮಾಡಲು ಹೊರಟರು, ಅದಕ್ಕೆ ಏನೇನು ಕ್ರಿಯೆ-ಪ್ರಕ್ರಿಯೆಗಳನ್ನು ಮಾಡಿಕೊಂಡು ಹೋಗಬೇಕೆನ್ನುವುದರ ಜತೆಗೆ 'ಏನೇನು ಮಾಡಬಾರದು' ಅನ್ನುವುದನ್ನು ಗಮನದಲ್ಲಿರಿಸಿಕೊಂಡಿರಬೇಕು. ಆದರೆ ನಾವು ಮಾಡುವ ಪೂರ್ವ-ನಿರ್ಧಾರಿತ ವಿಧಾನ, ರೀತಿಯೆನ್ನುವುದು ಕಲ್ಲಿನಲ್ಲಿ ಕೊರೆದ ಸತ್ಯವೇನೊ, ಅದನ್ನು ಬದಲಿಸಲು ಸಾಧ್ಯವೇ ಇಲ್ಲವೇನೊ ಎನ್ನುವಂತೆ ಪ್ರಶ್ನಿಸದೆ ಅನುಸರಿಸಿಕೊಂಡು ಹೋಗುತ್ತೇವೆ.. ಜತೆಗೆ ಹೊಸ ಹೊಸ ವಿಧಾನಗಳನ್ನು ರೂಪಿಸುವಾಗಲೂ ಅದೇ ನೀತಿ ಅನುಸರಿಸಿ, ಹೊಸತರಲ್ಲು ಹಳೆಯ ವಾಸನೆ ಹೋಗದ ಹಾಗೆ ನೋಡಿಕೊಳ್ಳುತ್ತೇವೆ.. ಯಾರೂ ಅದನ್ನು ಬದಲಿಸಲು ಆಗದ ಹಾಗೆ ಅವನ್ನೆ 'ಕಟ್ಟಳೆ'ಯನ್ನಾಗಿಯೊ, 'ನಿಯಮಾವಳಿ'ಯನ್ನಾಗಿಯೊ ಮಾಡಿಬಿಡುತ್ತೇವೆ. ಅಲ್ಲಿಗೆ ಮುಗಿಯಿತಲ್ಲ ..? ಒಬ್ಬರನ್ನು ಅನುಕರಿಸುತ್ತ ಮತ್ತೊಬ್ಬರು, ಅವರಿಂದ ಮಗದೊಬ್ಬರು - ಹೀಗೆ ಆ ಪದ್ದತಿ ಸಾಂಘಿಕವಾಗಿ, ಸಾಂಸ್ಥಿಕವಾಗಿ, ಶಾಶ್ವತವಾಗಿ ಹೋಗುತ್ತದೆ - ಯಾರೂ ಪ್ರಶ್ನಿಸಲೂ ಹೋಗದ ಹಾಗೆ. ಹಾಗಾದಾಗ ಅದೇ ಪ್ರಭಾವ ಚಿಂತನೆಯ ಮೇಲೂ ಆಗಿ, ಪ್ರತಿ ಆಲೋಚನೆಯಲ್ಲೂ ಅವೆ ಮರು-ಪ್ರಕಟವಾಗುತ್ತವೆ ಅಂತರ್ಗತ ಸಿದ್ದಾಂತದ ರೂಪದಲ್ಲಿ... ನಿನ್ನ ವಿಷಯದಲ್ಲಿ ಆದುದ್ದಾದರೂ ಅದೇ ತಾನೆ?'

' ಹೌದು.. ಸಾಂಪ್ರದಾಯಿಕ ಚಿಂತನೆಯೆನ್ನುವುದು ಅಂತರ್ಗತವಾಗಿ ಹೋಗಿರುವುದರಿಂದ, ಕ್ರಿಯಾತ್ಮಕತೆಗಿಂತ 'ಗೊತ್ತಿರುವ ಸುರಕ್ಷಿತ ದಾರಿ' ಹಿಡಿಯುವ ಹವಣಿಕೆಯೆ ಹೆಚ್ಚಾಗಿ ಕಾಣುವುದು ನಿಜ...' ಶ್ರೀನಾಥನು ಸಮ್ಮತಿಸುತ್ತ ನುಡಿದ. 

'ವಿಪರ್ಯಾಸವೆಂದರೆ ಎಲ್ಲರೂ ಸರಿಯಾದ ದಾರಿಯೆಂದು ಹೊರಟಿದ್ದೆ, ಸರಿಯಾದ ವಿಧಾನವೆಂದು ಇಡೀ ಜಗವೆ ಅದರ ಹಿಂದೆ ಹೊರಡುತ್ತದೆ ; ಅದಕ್ಕೊಂದು ಸರಳ ಪ್ರತಿ-ಉಪಾಯ, ಪ್ರತಿ-ವಿಧಾನ ಸಾಧ್ಯವಿದೆಯೆಂದರು ನಂಬದೆ ಮುನ್ನಡೆಯುತ್ತದೆ . ಅದನ್ನು ಅವರ ಕಣ್ಣೆದುರೆ ಸಾಕ್ಷಿ ಸಮೇತ ಸಿದ್ದ ಮಾಡಿ, ಸಾಧಿಸಿ, ನಿರೂಪಿಸಿ ತೋರಿಸಿದರೂ ನಂಬದಷ್ಟು ಪ್ರಬಲವಾಗಿ ಬೇರೂರಿಬಿಟ್ಟಿರುತ್ತದೆ, ಅವರ ಬೇರೂರಿದ ಹಳೆಯ ನಂಬಿಕೆಗಳು.. ಕುನ್. ಶ್ರೀನಾಥ, ನಿನಗೊಂದು ಸತ್ಯವನ್ನು ಹೇಳುತ್ತೇನೆ, ಅದನ್ನು ನಂಬಿ ಅಳವಡಿಸಿಕೊಂಡು ಹೋಗುವಷ್ಟು ಕಾಲವೂ ನೀನು ಇದೇ ರೀತಿಯ ಅದ್ಭುತ ಫಲಿತವನ್ನು ಅತ್ಯಂತ ಸರಳ ಪರಿಹಾರಗಳ ಮೂಲಕ ಪಡೆಯಬಹುದು...'

' ಅಂದರೆ ನೀವು ಹೇಳುವುದು, ಎಲ್ಲಾ ರೀತಿಯ ಸಮಸ್ಯೆಗೂ ಒಂದೇ 'ಏಕ ರೀತಿಯ ಮೂಲ ಸತ್ವವುಳ್ಳ' ಸಿದ್ದಾಂತ - ತತ್ವ ಎಂದೆ ?'

' ಒಂದು ರೀತಿ ಹಾಗೆಯೆ ಅಂದುಕೊ... ಮೊದಲಿಗೆ ನೀನು ಇಲ್ಲಿ ಎರಡು ಅಂಶಗಳನ್ನು ಮನನ ಮಾಡಿಕೊಳ್ಳಬೇಕು.. ಒಂದು - ಯಾವುದೆ ಸಂಗತಿಯೂ ತನ್ನಷ್ಟಕ್ಕೆ ತಾನೆ ಏಕಾಕಿಯಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಅದು ಯಾವುದಾದರೂ ಮತ್ತೊಂದು ಅಂಶದ ಮೇಲೆ ಅವಲಂಬಿಸಿರಲೆ ಬೇಕು ಎನ್ನುವ ಅಂಶ... ಆಧ್ಯಾತ್ಮಿಕ ಪರಿಭಾಷೆಯಲ್ಲಿ ಹೇಳುವುದಾದರೆ ಶಿವ-ಶಕ್ತಿಯ ಅರ್ಧನಾರೀಶ್ವರ-ಅರ್ಧನಾರೀಶ್ವರಿ ತತ್ವದ ಹಾಗೆ.. ವೈಜ್ಞಾನಿಕವಾಗಿ ಹೇಳುವುದಾದರೆ ಒಂದೆ ವಸ್ತುವಿನೊಡಲಲ್ಲಿರುವ 'ಜಡ ಮತ್ತು ಚಲನ' ಶಕ್ತಿಯ ಹಾಗೆ.. ಈ ಸಿದ್ದಾಂತದ ಎಳೆ ಹಿಡಿದು ಹೋದರೆ ಅದು ಕೊಂಡಿಯಂತೆ ಕೆಲಸ ಮಾಡಿ ಮೂಲ ಸಮಸ್ಯೆಯತ್ತ ಕರೆದೊಯ್ಯಲು ನೆರವಾಗುತ್ತದೆ..'

'ಎರಡನೆಯದು..?'

' ಎರಡನೆಯದು ಮೊದಲನೆಯದರ ವಿಸ್ತರಿತ ಭಾಗ.. ಕೊಂಡಿ ಹಿಡಿದು ಹುಡುಕುತ್ತ ಮೂಲ ಸಮಸ್ಯೆಯನ್ನು ಶೋಧಿಸಿದರೆ, ಆಮೇಲೆ ಮಿಕ್ಕೆಲ್ಲವನ್ನು ಬದಿಗಿಟ್ಟು, ಬರಿಯ ಮೂಲ ಸಮಸ್ಯೆಯ ಪರಿಹಾರ ಕಂಡುಹಿಡಿದರೆ ಸಾಕು.. ಮೂಲ ಸಮಸ್ಯೆಯಲ್ಲದ ಮಿಕ್ಕೆಲ್ಲವನ್ನು ಬದಿಗಿಡುತ್ತ, ಮೂಲ ಸಮಸ್ಯೆಯ ಪರಿಹಾರದ ಕಾರ್ಯಗಳನ್ನು ಮಾತ್ರ ಅನುಷ್ಠಾನಗೊಳಿಸಿದರೆ ಸಾಕು - ಅದು ಇಡೀ ಕೊಂಡಿಯ ಮತ್ತು ಸರಪಳಿಯ ಮಿಕ್ಕೆಲ್ಲ ಸಮಸ್ಯೆಗೂ ಉತ್ತರವಾಗುತ್ತದೆ... ಇದೇ ಪ್ರಕ್ರಿಯೆಯನ್ನು ಸಮಸ್ಯೆಗಳ ಪೂರವಿರುವೆಡೆಯೆಲ್ಲ ಪುನರಾವರ್ತಿಸಿದರೆ ಸಾಕು... ಎಲ್ಲಾ ಸಂಕೀರ್ಣ ಸಮಸ್ಯೆಗೂ ಇದೊಂದೆ ಉತ್ತರ, ಇದೊಂದೆ ವಿಧಾನ, ತತ್ವ, ಸಿದ್ದಾಂತ - ಎಲ್ಲವು. ಇಷ್ಟನ್ನು ಮಾಡುವುದು ಹೇಗೆಂದು ಕಲಿತರೆ ಎಲ್ಲವನ್ನೂ ಕಲಿತಂತೆ ಲೆಕ್ಕ...'

'ಹಾಗಿದ್ದರೆ ಮೊದಲ ಮೂರು ದಿನದ ಧ್ಯಾನದಲ್ಲಿ ಮನ ಮಥನ ಜಿಜ್ಞಾಸೆಗಿಳಿದಾಗ, ನಾನು ಎಷ್ಟೆಲ್ಲಾ ಸುತ್ತಿ, ಬಳಸಿ, ಎಲ್ಲೆಲ್ಲೊ, ಹೇಗೇಗೊ ಅಲೆದಾಡಿ ಕೊನೆಯ ತೀರ್ಮಾನಕ್ಕೆ ಬಂದೆನಲ್ಲವೆ ? ಬೃಹತ್ ಸ್ಪೋಟ, ಕಾಲ, ಬೆಳಕು, ಇರುಳು, ವಿಶ್ವಸೃಷ್ಟಿ, ಮುವತ್ತಾರು-ತತ್ವ, ಕೋಶ ಎಂದೆಲ್ಲಾ ಸುತ್ತಾಡಿ ಬಂದೆನಲ್ಲಾ , ಅದೆಲ್ಲಾ ನಿಜದಲ್ಲಿ ಅನಗತ್ಯವಾಗಿತ್ತೆ ಮಾಸ್ಟರ...? '

'ಅದು ಹಾಗಲ್ಲ ಕುನ್. ಶ್ರೀನಾಥ.. ನಾನೀಗ ತಾನೆ ವಿವರಿಸಿ ಹೇಳಿದೆನಲ್ಲಾ 'ಕೊಂಡಿ'ಗಳನ್ನು ಕುರಿತು..? ನೀನೀಗ ಹೇಳಿದ್ದೆಲ್ಲಾ ನಿನ್ನ ಸತ್ಯಾನ್ವೇಷಣೆಯಲ್ಲಿ ಕೊಂಡಿಗಳಾಗಿಯೆ ಅಲ್ಲವೆ ಕೆಲಸ ಮಾಡಿದ್ದು..? ಒಬ್ಬರ ಕೊಂಡಿ ಇನ್ನೊಬ್ಬರದರ ಹಾಗೆಯೆ ಇರಬೇಕೆಂದೇನೂ ಇಲ್ಲ.. ಆದರೆ, ಪ್ರತಿಯೊಬ್ಬರು ಬಳಸುವ ಕೊಂಡಿ ಯಾವುದಾದರೂ ಸರಿ, ಕೊನೆಯಲ್ಲಿ ತಲುಪುವ ಅಂತಿಮ ಫಲಿತ ಮಾತ್ರ ಭಿನ್ನವಾಗಿರುವುದಿಲ್ಲ - ಸರಿಯಾದ ಕೊಂಡಿಯ ಮೂಲಕ ನಡೆದುಹೋಗಿದ್ದರೆ.. ಹಾಗಾಗಿ, ನಿನ್ನ ವಿಧಾನ ಸರಿಯೆ, ತಪ್ಪೇ ಅನ್ನುವುದಲ್ಲ ಪ್ರಶ್ನೆ. ಅದು ಸರಿಯಾದ ಗುರಿ ತಲುಪಿಸಿತೆ ಇಲ್ಲವೆ ಎನ್ನುವುದು ಮುಖ್ಯ. ನೀನೀಗ ಕೊಂಡಿಯನ್ನು ಉದ್ದೀಪಿಸುವ 'ಧ್ಯಾನ'ದ ಹಾದಿಯಲ್ಲೂ ನಡೆದು ಬಂದಿದ್ದಿಯಾ ಮತ್ತು ಭೌತಿಕದ 'ಕಸ ಗುಡಿಸಿ - ನೀರು ತುಂಬಿಸುವ' ಲೌಕಿಕ ಹಾದಿಯಲ್ಲು ನಡೆದು ಬಂದಿದ್ದಿಯಾ... ಸಮಯಕ್ಕೆ ತಕ್ಕಂತೆ ಎರಡರಲ್ಲಿ ಯಾವುದು ಸೂಕ್ತವೊ ಅದನ್ನು ಬಳಸಿ ಸಮಸ್ಯೆಯ ಮೂಲರೂಪಕ್ಕೆ ತಲುಪಿಸಿಕೊ. ಅಲ್ಲಿಂದ ಮುಂದಕ್ಕೆ ಏನು ಮಾಡಬೇಕೆಂದು ನಿನಗೇ ಗೊತ್ತು..'

' ಅದೇನೆ ಆದರೂ ಮೊದಲ ಮೂರು ದಿನದ ಧ್ಯಾನಾನ್ವೇಷಣೆಯಲ್ಲಿ ಕೊಂಡಿಗಳನ್ನು ಹಿಡಿದು ಸುತ್ತಿ ಬಂದ ಹಾದಿ ಅದೆಷ್ಟು ಸಂಕೀರ್ಣವಾಗಿತ್ತೆಂದರೆ, ಕೆಲವೊಮ್ಮೆ ನನಗೇ ಅದರ ಕುರಿತು ಗೊಂದಲ ಹುಟ್ಟಿಸುವಂತಿದೆ ಮಾಸ್ಟರ.. ಅದನ್ನೊಮ್ಮೆ ನಿಮ್ಮ ಮಾತುಗಳಲ್ಲಿ, ಇದೇ ಕೊಂಡಿಗಳನ್ನು ಸಮಷ್ಟಿಸಿದ, ಸಮಗ್ರತೆಯ, ಸರಳ ಸಾರಾಂಶ ರೂಪದಲ್ಲಿ ವಿವರಿಸಿಬಿಡುತ್ತೀರಾ? ನಾನು ಕೇಳುತ್ತಿರುವುದು ಪ್ರತಿ ಪ್ರತ್ಯೇಕ ಕೊಂಡಿಯ ವಿವರವನ್ನಲ್ಲ, ಅಂತಿಮ ಫಲಿತದ ಗಹನ ಸಾರವನ್ನು..'

' ಅದಕ್ಕೇನಂತೆ ಕುನ್. ಶ್ರೀನಾಥ... ಖಂಡಿತ ಆಗಲಿ. ನೀನು ಕೇಳದಿದ್ದರೂ ಈ ಸಾರವನ್ನು ಕೊನೆಯ ದಿನವಾದ ಇಂದು ನಾನೇ ವಿವರಿಸಬೇಕೆಂದಿದ್ದೆ .... ಯಾಕೆಂದರೆ ನಿನಗೆ ನೀನೆ ಅನ್ವೇಷಿಸಿಕೊಂಡ ಉತ್ತರದ 'ಶಕ್ತಿ-ತ್ರಿಕೋನ'ದ ತ್ರಿಪುಟಿಯಲ್ಲಿ, ತ್ರಿಶಕ್ತಿ ಮತ್ತು ತ್ರಿಗುಣಗಳ ಎರಡು ಆಯಾಮಗಳು ಮಾತ್ರ ಸ್ಪಷ್ಟವಾಗಿ ದರ್ಶಿತವಾದರೂ, ಅದರ ಜತೆಯಲ್ಲಿರಬೇಕಾಗಿದ್ದ ಮತ್ತೊಂದು 'ಮೂರನೆಯ ಆಯಾಮದ ತ್ರಿಪುಟಿ' - ಪ್ರಕಟವಾಗಿ ಕಾಣಿಸಿಕೊಳ್ಳಲಿಲ್ಲ. ಅಂತಿಮ ಸಾರಾಂಶದ ಜತೆಗೆ ಅದರ ಕುರಿತು ತುಸು ಬೆಳಕ ಚೆಲ್ಲಬೇಕಿದೆ ಮತ್ತು ಅದನ್ನು ಇನ್ನಷ್ಟು ವಿವರಿಸಿ ಸ್ಪಷ್ಟಪಡಿಸಬೇಕಿದೆ.. ಇಲ್ಲವಾದರೆ ಈ ಮಹತ್ವದ 'ತ್ರಿಪುಟಿಗಳ ತ್ರಿಕೋನ' ಅದು ಹೇಗೆ ಸಮಗ್ರತೆಯಲ್ಲಿ ತನ್ನ ಕಾರ್ಯವನ್ನು ನಿಭಾಯಿಸುತ್ತಿದೆಯೆನ್ನುವ ಸ್ಪಷ್ಟ ಚಿತ್ರಣ ನಿನಗೆ ಸಿಗುವುದಿಲ್ಲ.. ಆದರೆ....'

' ಆದರೆ?' 

'ಗಾಬರಿಯಾಗಬೇಡ... ಸಮಯದತ್ತ ನೋಡು.. ಈಗಾಗಲೆ ಪ್ರಾರ್ಥನೆಗೆ ಹೋಗುವ ಹೊತ್ತಲ್ಲವೆ ? ತದ ನಂತರ ನಾನು ಭಿಕ್ಷಾಟನೆಗೂ ಹೋಗಿ ಬರಬೇಕು.... ಅವೆಲ್ಲ ಮುಗಿಸಿದ ಮೇಲೆ ಮತ್ತೆ ಸೇರೋಣ... ಈ ಬಾರಿಗದೆ ಕಡೆಯ ಭೇಟಿ... ಅದಾದ ನಂತರ ನೀನು ಮರುಪಯಣವನ್ನು ಆರಂಭಿಸಬಹುದು - ನಿನ್ನ ಲೌಕಿಕ ಜಗಕ್ಕೆ..' ಎಂದು ನಕ್ಕರು ಮಾಂಕ್. ಸಾಕೇತ್

ಅವರು ಅದನ್ನು ಹೇಳುವ ಹೊತ್ತಿನಲ್ಲು, ಶ್ರೀನಾಥನ ಮನದಲ್ಲಿ ಅನೇಕ ಬಾರಿ ಮೂಡಿ ಬಂದಿದ್ದ ಪ್ರಶ್ನೆ ಮತ್ತೆ ಮತ್ತೆ ಅನುರಣಿಸತೊಡಗಿತ್ತು - ಬೌದ್ಧ ಭಿಕ್ಷುಗಳಾದ ಮಾಂಕ್ ಸಾಕೇತರಲ್ಲಿ ಅದು ಹೇಗೆ ಇಷ್ಟರ ಮಟ್ಟಿನ ಆಧ್ಯಾತ್ಮಿಕ, ವೇದಾಂತಿಕ ಜ್ಞಾನ ಬರಲು ಸಾಧ್ಯವಾಯಿತು ?ಎಂದು. ಬರಿಯ ಆಸಕ್ತಿಗಾಗಿ ಓದಿ, ಜೀರ್ಣಿಸಿಕೊಂಡು ಇಷ್ಟರ ಮಟ್ಟಿನ ಗಹನತೆ ಸಾಧಿಸಲು ಸಾಧ್ಯವೆ ಎನ್ನುವ ಕುತೂಹಲವೂ ಕೊರೆಯುತ್ತಿತ್ತು.. 'ಒಮ್ಮೆ ಅವರನ್ನೆ ಕೇಳಿಬಿಡಬೇಕು' ಎಂದುಕೊಳ್ಳುತ್ತಿದ್ದಂತೆ ತಟ್ಟನೆ ಅವರ ಮಾತು ಕಿವಿಗೆ ಬಿದ್ದಿತ್ತು.. ' ಇನ್ನೆಂದೊ ಏಕೆ ಶ್ರೀನಾಥಾ..? ಇಕೋ ಈಗಲೆ ಹೇಳಿಬಿಡುವೆ.. ನಿನ್ನ ಅನುಮಾನ ಸಹಜವಾದದ್ದೆ, ಅಸಹಜವೇನಲ್ಲಾ..' 

ಅನೇಕ ಸಲದಂತೆ ಈ ಬಾರಿಯೂ ಅವನು ಪ್ರಶ್ನೆ ಕೇಳುವ ಮೊದಲೆ ಉತ್ತರಿಸಿದ ಪರಿ, ಶ್ರೀನಾಥನಿಗೆ ಇಷ್ಟು ಹೊತ್ತಿಗಾಗಲೆ ವಿಸ್ಮಯವೇ ಆಗದಷ್ಟು ಪರಿಚಿತ ಚರ್ಯೆಯಾಗಿ ಹೋಗಿತ್ತು. ಆದ ಕಾರಣ ಅವರ ಬಾಯಿಂದೇನು ವಿವರಣೆ ಬರುವುದೊ ಎಂದು ಮೈಯೆಲ್ಲಾ ಕಿವಿಯಾಗಿ ಕುಳಿತವನಿಗೆ ಕ್ಷಿಪ್ರವಾದ ಉತ್ತರವನ್ನು ಕೊಟ್ಟು ಅವನ ಸಂಶಯಾನುಮಾನವನ್ನು ಸಂಪೂರ್ಣವಾಗಿ ನಿವಾರಿಸಿದ್ದರು ಮಾಂಕ್ ಸಾಕೇತ್, 'ನಾನೀ ಭಿಕ್ಷುವಾಗುವ ಮೊದಲಿನ ನನ್ನ ಪೂರ್ವಾಶ್ರಮದಲ್ಲಿ ನನ್ನ ಹೆತ್ತವಳು ಥಾಯ್ ಹೆಣ್ಣಾದರೂ, ಅವಳು ವಿವಾಹವಾಗಿದ್ದ ನನ್ನ ಜನ್ಮಕಾರಣ ತಂದೆ ಓರ್ವ ಭಾರತೀಯ ಸಂಜಾತ... ಹೀಗಾಗಿ ನನ್ನ ಮನೆಯಲ್ಲಿ ಬೌದ್ಧ ಧರ್ಮವನ್ನು ಪಾಲಿಸಿದಷ್ಟೆ ಹಿಂದೂ ಧರ್ಮದ ಪಾಲನೆಯೂ ಆಗುತ್ತಿತ್ತು.. ಎರಡೂ ಧರ್ಮದ ಎಲ್ಲಾ ತರದ ಗ್ರಂಥಗಳು, ಹೊತ್ತಗೆಗಳು, ಪುಸ್ತಕಗಳು ಮನೆಯಲ್ಲಿ ಹೇರಳವಾಗಿ ಸಿಗುತ್ತಿದ್ದ ಕಾರಣ ಎರಡರ ಪೋಷಣೆಯೂ ಸಿಕ್ಕಿ, ನನ್ನರಿವಿಲ್ಲದೆಯೆಎರಡು ಧರ್ಮಗಳ ಹೂರಣವನ್ನರಿಯಲು ಸಹಕಾರಿಯಾಯ್ತಷ್ಟೆ ಹೊರತು ಅಲ್ಲಿ ಮತ್ತೇನು ಬ್ರಹ್ಮ ರಹಸ್ಯವಿಲ್ಲ..'

ಅವರ ಮಾತಿಗೆ ತನ್ನ ವಿಸ್ಮಯಪೂರ್ಣ ನಗುವನ್ನೆ ಪ್ರತಿಕ್ರಿಯೆಯಾಗಿಸಿ ತಾನೂ ಮೇಲೆದ್ದ ಶ್ರೀನಾಥ. ಈ ಬಾರಿ ಅವರು ' ಅಮಿತಾಭ ' ಎಂದು ಉದ್ಗರಿಸಿದ್ದು ಯಾಕೊ ಎಂದಿಗಿಂತ ಹೆಚ್ಚು ಗಹನತೆ, ಘನತೆಯಿಂದ ಕೂಡಿದ್ದಂತೆ ಅನಿಸಿತು ಶ್ರೀನಾಥನಿಗೆ. ಇನ್ನೂ ಬೆಳಕು ಹರಿಯದ ಮಬ್ಬಲ್ಲೆ ಪ್ರಾರ್ಥನಾ ಮಂದಿರದ ದಿಕ್ಕಿನಲ್ಲಿ ಅವರ ಜತೆಯಲ್ಲೆ, ಹೆಜ್ಜೆಗೆ ಹೆಜ್ಜೆ ಕೂಡಿಸುತ್ತ ಕತ್ತಲಲ್ಲಿ ಕರಗಿಹೋಗಿದ್ದ ಮಾಂಕ್ ಸಾಕೇತರ ಜತೆಗಿದ್ದ ಶ್ರೀನಾಥ. 

ಅಂದು ಎಂದಿನಂತೆ ಪ್ರಾರ್ಥನೆ, ದೈನಂದಿನ ಸಭೆ, ಸಮೂಹ ಶ್ರಮದಾನ, ಅಂದಿನ ದಿನಾಹಾರ ಇತ್ಯಾದಿಯೆಲ್ಲ ಮುಗಿದ ಮೇಲೆ ಮಾಂಕ್ ಸಾಕೇತರನ್ನು ಮತ್ತೆ ಭೇಟಿಯಾಗಿ ಚರ್ಚಿಸುವ ಯೋಜನೆ ಇದ್ದರು, ಮಿಕ್ಕೆಲ್ಲ ಮಾಂಕುಗಳ ಜತೆ ಅವರಾವುದೊ ಮತ್ತೊಂದು ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿ ಬಂದ ಕಾರಣ, ಮಧ್ಯಾಹ್ನದ ನಂತರ ದೊಡ್ಡಕಲ್ಲಿನ ಮಲಗಿರುವ ಬುದ್ಧನ ವಿಗ್ರಹದ ಬಳಿ ಸಂಧಿಸುವ ಸಲಹೆ ಕೊಟ್ಟರು. 'ಕುಟಿ'ಯ ವಾತಾವರಣಕ್ಕಿಂತ ಆ ಬಯಲಿನಲಿಟ್ಟ ಬೃಹತ್ ವಿಗ್ರಹದ ಸನ್ನಿಧಿಯಲ್ಲಿ ಕೂತು ಚರ್ಚಿಸುವುದು ಶ್ರೀನಾಥನಿಗೂ ಹಿತವೆನಿಸಿ, ಆಗಲೆಂದು ತಲೆಯಾಡಿಸಿ, ಅಲ್ಲಿಯತನಕ ಹೊತ್ತು ಕಳೆಯಲು ಇಡೀ ಧಾಮದ ಸುತ್ತ ಒಂದು ಸುತ್ತು ಹಾಕಿ ಬರಲು ಹೊರಟ - ಬ್ಯಾಂಕಾಕಿಗೆ ವಾಪಸ್ಸಾಗುವ ಮುನ್ನ ಆ ನಿಸರ್ಗ ಸೌಂದರ್ಯವನ್ನೆಲ್ಲ ಕಡೆಯ ಬಾರಿಗೊಮ್ಮೆ ಆಸ್ವಾದಿಸಿ ಕಣ್ತುಂಬಿಸಿಕೊಳ್ಳಲು. ದೊಡ್ಡದೊಂದು ಸುತ್ತು ಹಾಕಿ ನಡೆದ ಹೊತ್ತಲ್ಲಿ ಅದರ ಭಾಗವಾಗಿಯೆ ಎದುರಾದ ಬೃಹತ್ ಶಯನಬುದ್ಧನ ಕಪ್ಪುಶಿಲೆಯ ಪ್ರತಿಮೆಯಿರುವ ಜಾಗವನ್ನು ಕಂಡು, ಇನ್ನು ಮತ್ತೇಕೆ ಎಲ್ಲೆಲ್ಲೊ ಸುತ್ತು ಹಾಕುವುದೆಂದೆನಿಸಿ ಅಲ್ಲೆ ಕುಳಿತು, ಆ ಬೃಹತ್ಮೂರ್ತಿಯ ಭವ್ಯತೆಯನ್ನು ಮನಃಪಟಲದೊಳಗೆ ಆವಾಹಿಸಿ ಪ್ರತಿಷ್ಠಾಪಿಸಿಕೊಳ್ಳತೊಡಗಿದ. ಆ ಸುತ್ತಲ ಪ್ರಶಾಂತ ವಾತಾವರಣ, ಭವ್ಯಾಕೃತಿಯ ಸಾನಿಧ್ಯ, ಬಿಸಿಲಿನ ಬೇಗೆಯನ್ನು ಸವರಿ ಅದರರಿವೆ ಆಗದಂತೆ ತಂಪಾಗಿರಿಸಲ್ಹವಣಿಸುತ್ತಿರುವ ಸುತ್ತಲ ಗಾಳಿ - ಎಲ್ಲವು ಸೇರಿ ಅಂತರಂಗದ ಕರಣಗಳಲ್ಲೇನೊ ಪ್ರೇರೇಪಣೆಯಾದವನಂತೆ ಅಲ್ಲೆ ಕಣ್ಮುಚ್ಚಿ ಕುಳಿತು ಏಕಾಗ್ರ ಧ್ಯಾನದಲ್ಲಿ ತಲ್ಲೀನನಾಗಿ ಹೋದ, ಶ್ರೀನಾಥ. ವಿಚಿತ್ರವೆಂದರೆ ಆ ಹೊತ್ತಲ್ಲಿ ಬೇರಾವ ಗಹನ ಚಿಂತನೆ, ಆಲೋಚನೆಯೂ ನುಸುಳದೆ ಕೇವಲ ಆ ಬೃಹದ್ಮೂರ್ತಿಯ ಗಾತ್ರಾಕಾರ ವಿವರಗಳ ಗ್ರಹಿಕೆ ಮಾತ್ರವೆ ಮನದಲ್ಲಿ ಸುಳಿದಾಡುತ್ತ ಯಾವುದೊ ಮತ್ತೊಂದು ಲೋಕಕ್ಕೆ ಕೊಂಡೊಯ್ದುಬಿಟ್ಟಿದ್ದವು... ಹಾಗೆಯೆ ಮತ್ತೊಂದು ಲೋಕಸ್ತರದಲ್ಲಿ ಮತ್ತದೆಷ್ಟು ಹೊತ್ತು ಕೂತು, ಮೈಮರೆತು ವಿಹರಿಸುತ್ತಿದ್ದನೊ ಏನೊ - ಗಾಳಿಯಲ್ಲಿ ತೇಲಿಬಂದ ಮಾಂಕ್ ಸಾಕೇತರ ಕಂಚಿನ ಕಂಠದ ದನಿ ಬಡಿದೆಚ್ಚರಿಸದಿದ್ದರೆ...

' ಏನು ಕುನ್. ಶ್ರೀನಾಥ... ಇಲ್ಲಿನ ಒಂದು ವಾರದ ಧ್ಯಾನದ ಅಭ್ಯಾಸ ಬಲ ಚೆನ್ನಾಗಿ ಒಗ್ಗಿಕೊಂಡುಬಿಟ್ಟಂತೆ ಕಾಣುತ್ತಿದೆ..? ಸಿಕ್ಕಸಿಕ್ಕಲ್ಲಿ, ಬೇಕಾದಾಗ ಧ್ಯಾನಕ್ಕಿಳಿಯುವ ಏಕಾಗ್ರತೆಯು ಸಿದ್ದಿಸಿಕೊಂಡಂತಿದೆ...?' ಎಂದರು. 

ಅವರ ಮಾತಿಗೆ ಮುಗುಳ್ನಗುವಿನಲ್ಲೆ ಕಣ್ತೆರೆಯುತ್ತ, ' ಇನ್ನು ವಾಪಸ್ಸು ಹೋದ ಮೇಲೆ ಸಂತೆಯಲ್ಲಿಯೂ ಕೂತು ಧ್ಯಾನಿಸುವ ಅಭ್ಯಾಸವಾಗಬೇಕಲ್ಲಾ ಮಾಸ್ಟರ ? ಅದಕ್ಕೊಂದು ಪೂರ್ವಸಿದ್ದತೆಯಾಗಬೇಡವೆ ?' ಎಂದ.

'ಅಂದರೆ ಹೊರ ಜಗತ್ತಿನ ಗದ್ದಲದಲ್ಲು ಕಳಚಿಕೊಂಡು ಹೋಗದಿರುವ ಹಾಗೆ ಕೊಂಡಿಯನ್ನು ಉಳಿಸಿಕೊಳ್ಳುವುದು ಹೇಗೆಂದು, ಈಗಿನಿಂದಲೆ ಅಭ್ಯಾಸ ಮಾಡಿಕೊಳ್ಳುತ್ತಿರುವೆ ಎಂದಾಯ್ತು..' ಎಂದು ನಕ್ಕರು ಮಾಂಕ್ ಸಾಕೇತ್.

ಬೆಳಗಿನ ಸಂವಾದದಲ್ಲಿ ತಾವಾಡುತ್ತಿದ್ದ 'ಕೊಂಡಿ'ಯ ವಿಷಯಕ್ಕೆ ನೇರ ಬಂದ ಅವರ ಮಾತಿನ ಚತುರತೆಗೆ ಮನದಲ್ಲೆ ಮೆಚ್ಚುತ್ತ, 'ಕೊಂಡಿಯ ಮಾತು ಬಂದರೆ, ಬೆಳಿಗ್ಗೆ ಅಲ್ಲಿಗೆ ತಾನೆ ನಮ್ಮ ಸಂವಾದ ಕೊನೆಯಾಗಿದ್ದು ? ನೂರೆಂಟು ಕಡೆ ಸುತ್ತು ಹಾಕಿ, ಎಲ್ಲೆಲ್ಲೊ ಅಲೆದಾಡಿ, ಏನೇನೆಲ್ಲ ಕೆದಕಿ, ಕೊನೆಗೇನೊ ತೀರ್ಮಾನಕ್ಕೆಳೆ ತಂದ ಆ ಕೊಂಡಿಗಳೆಲ್ಲ, ಈಗ ನೆನೆದರೆ ನನಗೆ ಗೊಂದಲ ಹುಟ್ಟಿಸುವಷ್ಟು ಅಯೋಮಯವಾಗಿ ಕಾಣಿಸುತ್ತಿವೆ.. ಅದಕ್ಕೊಂದು ಸರಳ ಸಾರಾಂಶ ರೂಪದ ವ್ಯಾಖ್ಯಾನ ನೀಡಿದರೆ, ನನ್ನಲ್ಲೂ ಇರಬಹುದಾದ ಕೆಲವು ಗೊಂದಲಗಳು ಪರಿಹಾರವಾಗಬಹುದೆಂದು ಕಾಣುತ್ತದೆ..' ನೇರವಾಗಿ ಆ ಹಿಂದಿನ ಸಂವಾದಕ್ಕೆಳೆಯುತ್ತ ನುಡಿದ ಶ್ರೀನಾಥ. 

'' ಸರಿ.. ಅದೂ ಆಗಿ ಹೋಗಲಿ. ಎಲ್ಲಿಂದ ಆರಂಭಿಸೋಣ?' ಎಂದು ಅವನನ್ನೆ ಮತ್ತೆ ಪ್ರಚೋದಿಸಿದರು ಮಾಂಕ್ ಸಾಕೇತ್.

' ಮಾಸ್ಟರ.. ನನ್ನೆಲ್ಲ ಜಿಜ್ಞಾಸೆ ಆರಂಭವಾಗಿದ್ದು ದ್ವಂದ್ವ ಸಿದ್ದಾಂತದ ಮೂಲಕ, ತ್ರಿಗುಣಗಳಾದ ತಾಮಸ-ರಾಜಸ-ಸಾತ್ವಿಕಗಳ ತಿಕ್ಕಾಟದಲ್ಲಿ...' ತನ್ನ ಆರಂಭವೆ ಯಾವುದೆ ಅನುಕ್ರಮಣತೆಯಲ್ಲಿರಲಿಲ್ಲವೆನ್ನುವುದರ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸುತ್ತ ನುಡಿದ ಶ್ರೀನಾಥ.. 

'ಸರಿ.. ನಿನ್ನ ಆ ಕ್ರಮಬದ್ಧವಲ್ಲದ ಚಿಂತನಾಕ್ರಮದಿಂದಲೆ ನನ್ನ ವಿವರಣೆಯ ಮೂಲವನ್ನು ಎತ್ತಿಕೊಳ್ಳುತ್ತೇನೆ.. ನಿನ್ನೆಲ್ಲಾ ಜಿಜ್ಞಾಸೆಯ ಮೂಸೆಯಲ್ಲಿ ಪ್ರಮುಖವಾಗಿ ತೋರಿಕೊಂಡಿದ್ದು ಯಾವುದೊ ಪ್ರಬಲ ಶಕ್ತಿಯ ಅಕರ, ಮತ್ತದರ ನೈಜ ಮೂಲ ತಾನೆ ?' 

'ಹೌದು.. ಎಲ್ಲಾ ಅಸ್ತಿತ್ವದ ಹುಟ್ಟಿಗೆ ಕಾರಣವಾದ ಯಾವುದೊ ಪ್ರಬಲ ಮೂಲಶಕ್ತಿಯೊಂದರ ಕೈವಾಡವೆ ಎಲ್ಲದರ ಹಿಂದೆ ಇರಬೇಕೆಂಬ ಊಹೆಯ ಆಧಾರದ ಮೇಲೆ..'

'ಸರಿ.. ಆ ಮೂಲಶಕ್ತಿಯನ್ನೆ ಆರಂಭವಾಗಿಟ್ಟುಕೊಂಡು, ನೀನದರ ಮೂಲರೂಪದ ಅನ್ವೇಷಣೆಗೆ ಹೊರಟೆ - ಅದರಲ್ಲಿರಬಹುದಾದ ಮೂಲ ಜಡ ಸ್ಥಿರಶಕ್ತಿಯೆ (ಪೊಟೆಂಶಿಯಲ್ ಎನರ್ಜಿ)  ರೂಪಾಂತರಗೊಂಡ ಚಲನಶಕ್ತಿಯಾಗಿ (ಕೈನೆಟಿಕ್ ಎನರ್ಜಿ) ಶಬ್ದ, ಬೆಳಕು, ತರಂಗಗಳಂತಹ ಶಕ್ತಿಯ ವಿವಿಧ ರೂಪ ತಾಳುತ್ತದೆಂದು ವಾದ ಸರಣಿಯನ್ನು ಮುಂದಿಟ್ಟೆ... ಆ ಮೂಲಶಕ್ತಿಯನ್ನೆ ಆಧ್ಯಾತ್ಮಿಕ ಸ್ತರದಲ್ಲಿ ಜ್ಞಾನ-ಇಚ್ಛಾ-ಕ್ರಿಯಾಶಕ್ತಿಗಳೆಂಬ 'ತ್ರಿಶಕ್ತಿ'ಗಳನ್ನುಂಟು ಮಾಡುವ ಅಕರ ರೂಪವೆಂದು ತೀರ್ಮಾನಿಸಿದೆ..' ಅವನ ಗ್ರಹಿಕೆಗೊಂದು ಸಾರಾಂಶದ ರೂಪ ಕೊಡುತ್ತಲೆ, ಅವನು ಗ್ರಹಿಸಿದ್ದು ಸರಿಯಾಗಿದೆಯೆಂಬುದನ್ನು ದೃಢೀಕರಿಸುವಂತೆ ಅವನ ಮನನವಾಗಿದ್ದ ಅಂಶಗಳನ್ನು ಸರಳವಾಗಿ ಪುನರಾವರ್ತಿಸುತ್ತಾ ಹೋದರು ಮಾಂಕ್ ಸಾಕೇತ್ 

'ಹೌದು... ಆ ಅಕರಶಕ್ತಿಯೆ ರೂಪಾಂತರವಾದಾಗ ಜ್ಞಾನದಂತಹ ಜಡಶಕ್ತಿಯಾಗಿ, ಇಚ್ಛೆಯಂತಹ ತರಂಗಶಕ್ತಿಯಾಗಿ, ಕೊನೆಗೆ ಕ್ರಿಯೆಯಂತಹ ಚಲನಶಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತದೆಂದು ವಿಸ್ತರಿಸಿದ್ದೆ, ಅದೇ ಮೂಲ ಊಹೆಯನ್ನು..'

'ಆ ಮೂಲ ಶುದ್ಧಶಕ್ತಿಯ ಮತ್ತೊಂದು ರೂಪಾಂತರವೆ ತಾಮಸ-ಸಾತ್ವಿಕ-ರಾಜಸಗಳ 'ತ್ರಿಗುಣ'ವೆಂದು, ಶಕ್ತಿಯ ಮೂರು (ಜ್ಞಾನ-ಇಚ್ಛಾ-ಕ್ರಿಯಾ) ರೂಪಗಳು - ಈ ಮೂರು (ತಾಮಸ-ಸಾತ್ವಿಕ-ರಾಜಸ) ಗುಣಗಳ ಜತೆ ಸೇರಿಕೊಂಡಾಗ, ಹೊಂದಿಕೊಂಡ ಸಂಯೋಜನೆಗನುಗುಣವಾಗಿ ಆ ಗುಣಕ್ಕೆ ತಕ್ಕ ಸ್ವಭಾವವನ್ನು ಹೊಂದುತ್ತದೆಂದು ತರ್ಕಿಸಿದ್ದೆ. ಬೃಹತ್ ಸ್ಪೋಟದಿಂದ ಆರಂಭವಾಗಿ, ಬ್ರಹ್ಮಾಂಡದ ಪ್ರತಿ ಅಸ್ತಿತ್ವವೂ ಈ 'ಮೂಲಶಕ್ತಿ ಮತ್ತು ಗುಣದ' ವಿಭಜಿತ ತುಣುಕಾಗಿ ಸಕಲ ಭೌತಿಕ, ಜೈವಿಕ ಚರಾಚರಗಳಾಗಿ ಉತ್ಪನ್ನವಾಗಿರಬೇಕೆಂದು ನಿಷ್ಪತ್ತಿಸಿದ್ದೆ. ಹಾಗೆಯೆ ಮುಂದುವರೆದು ಅವೇ 'ಗುಣ-ಶಕ್ತಿ'ಗಳ ಸಂಯುಕ್ತ ಗಣವೆ ಜೀವಕೋಶದಂತಹ ಸೂಕ್ಷ್ಮ ಸ್ತರದಲ್ಲೂ, ಸೂಕ್ಷ್ಮಾತಿಸೂಕ್ಷ್ಮ ಬೀಜಾಕ್ಷರ ರೂಪದಲ್ಲಿ ಪ್ರಸ್ತುತವಿರಬೇಕು ಎಂದೂ ಗ್ರಹಿಸಿದ್ದೆ..' ಮಾಂಕ್ ಸಾಕೇತರು ಹೇಳಿದ ಮಾತಿನ ಕೊಂಡಿಯನ್ನೆ ಹಿಡಿದು ತಾನು ನಡೆದ ಚಿಂತನೆಯ ಹಾದಿಯ ನೆನಪು ಮಾಡಿಕೊಳ್ಳುತ್ತ ನುಡಿದ ಶ್ರೀನಾಥ..

'ಆ ಬೀಜಾಕ್ಷರ ಸ್ವರೂಪಗಳೆ ಇಪ್ಪತ್ತನಾಲ್ಕು ತತ್ವಗಳ ಪ್ರಕಟ ರೂಪವಿರಬಹುದೆಂಬ ಅನುಮಾನವನ್ನು ವ್ಯಕ್ತಪಡಿಸಿ ಆಧ್ಯಾತ್ಮಿಕದ ತಾತ್ವಿಕತೆಯನ್ನು, ಜೈವಿಕ ಭೌತಿಕಕ್ಕೆ ಜೋಡಿಸಿದ್ದು ಮುಂದಿನ ಹೆಜ್ಜೆ... ಮಾತ್ರವಲ್ಲದೆ ಅವು ಆ ರೂಪದಲ್ಲಿ ಹೇಗೆ ಕಾರ್ಖಾನೆಯ ಹಾಗೆ ಕಾರ್ಯ ನಿರ್ವಹಿಸುತ್ತವೆ, ಹೇಗೆ ಪರಸ್ಪರ ಸಂವಹಿಸುತ್ತವೆ, ಮತ್ತದು ಹೇಗೆ ಸೂಕ್ಷ್ಮರೂಪದ ಮಟ್ಟದಿಂದ ಸ್ಥೂಲರೂಪಕ್ಕೆ ರೂಪಾಂತರಿಸಿಕೊಳ್ಳುತ್ತದೆ ಎಂದೂ ವಿಮರ್ಶಿಸಿದ್ದೆ....' ಅವನ ವಾದ ಸರಣಿಗೆ 'ತತ್ವ'ದ ಆಯಾಮವನ್ನು ಕೊಂಡಿಯಾಗಿ ಸೇರಿಸುತ್ತ ನುಡಿದರು ಮಾಂಕ್ ಸಾಕೇತ್. 

'ಆ ವಿಮರ್ಶೆಯಲ್ಲಿ ತಾನೆ 'ತ್ರಿಶಕ್ತಿ-ತ್ರಿಗುಣ' ಜೋಡಿಯ ಮತ್ತು 'ತತ್ವಗಳ' ಜೋಡಣೆಯ ಭೌತಿಕ ಸೂಕ್ಷ್ಮರೂಪವು, ವೈಜ್ಞಾನಿಕ ಪರಿಭಾಷೆಯಲ್ಲಿ ಹೇಳಲ್ಪಡುವ ಪ್ರೋಟೀನುಗಳಂತಹ ರಾಸಾಯನಿಕ ರೂಪದಲ್ಲಿರಬೇಕೆಂದು ತರ್ಕಿಸಿದ್ದು? ಅವುಗಳೆ ಮೂಲಶಕ್ತಿಯ ತುಣುಕುಗಳಾದ ಕಾರಣ, ತಮ್ಮನ್ನು ತಾವೆ ವಿಭಜಿಸಿ ಮರುಸೃಷ್ಟಿಸಿಕೊಂಡು ಸ್ವಯಂಚಾಲಿತ ಯಂತ್ರದಂತೆ ದೇಹವನ್ನು ನಡೆಸುತ್ತಿದೆ ಎಂದು ಅದೇ ತರ್ಕವನ್ನು ಮುಂದುವರೆಸಿದ್ದೆ... ಜತೆಗೆ, ಸಂವಹನದಂತಹ ಕಾರ್ಯಗಳಿಗು ರಾಸಾಯನಿಕ ಅಥವಾ ತರಂಗಾಂತರ ಪ್ರಚೋದನೆಯೆ ಕಾರಣಕರ್ತವಾಗಿರಬಹುದೆಂದು ಅದರ ವೈಜ್ಞಾನಿಕ ವಿವರಣೆಗೆ ಯತ್ನಿಸಿದ್ದೆ...ಅಷ್ಟೇಕೆ? ಡಿ.ಎನ್.ಏ, ಕ್ರೋಮೋಸೋಮು, ಜೀನ್ಸುಗಳೆಂದು ಕರೆಯಲ್ಪಡುವ ವೈಜ್ಞಾನಿಕ ಸಂಶೋಧನೆಯ ವಿಷಯಗಳನ್ನೆಲ್ಲ ತತ್ತ್ವಗಳ ಬೀಜಾಕ್ಷರಕ್ಕೆ ಹೋಲಿಸುವ ಸಾಹಸಕ್ಕೂ ಇಳಿದುಬಿಟ್ಟೆ...' ಮತ್ತದೆ ಲಹರಿಯಲ್ಲಿ ಅವರ ವಾದ ಸರಣಿಯನ್ನು ಮುಂದುವರೆಸುತ್ತ ನುಡಿದಿದ್ದ ಶ್ರೀನಾಥ . ' ಒಮ್ಮೊಮ್ಮೆ ಹಾಗೆ ಆಲೋಚಿಸಿದ ರೀತಿಯನ್ನು ವಿಮರ್ಶಿಸಿದರೆ, ವಾಸ್ತವದಲ್ಲಿ ಆ ವಾದದ ತರ್ಕ ಯಾವುದನ್ನು ಹೊರತಾಗಿಸದೆ ಎಲ್ಲಾ ಕಡೆಗು ಹೊಂದಿಕೆಯಾಗುತ್ತದೆಯೆ ಎಂಬ ಅನುಮಾನ ಆಗಾಗೆ ಕಾಡಿದ್ದರು ಬಹುತೇಕ ಹೊಂದುತ್ತದೆಂಬ ನಂಬಿಕೆಯಲ್ಲಿ ಮುಂದುವರೆದಿದ್ದೆ.. ಮಾಸ್ಟರ, ಬಹುಶಃ ಇಲ್ಲಿ ನೀವೊಂದು ಸೂಕ್ತ ವಿವರಣೆ ನೀಡಿ ಆ ಸಂಶಯವನ್ನು ಸಹ ದೂರಾಗಿಸಬಹುದೇನೊ ಎನಿಸುತ್ತಿದೆ..'

' ನಿನ್ನ ಸಂಶಯವೇನೆಂದು ಸ್ಪಷ್ಟವಾಗಿ ಕೇಳು, ವಿವರಿಸುತ್ತೇನೆ...'

' ಸ್ಥೂಲವಾಗಿ ಹೇಳುವುದಾದರೆ, ಈ ಇಪ್ಪತ್ನಾಲ್ಕು ತತ್ವಗಳ ಮೂಲ ಕಲ್ಪನೆಯೆ ಪ್ರತಿಯೊಂದು ಜೀವಕೋಶದಲ್ಲಿ - ಅದು ಹೊರಗಿನ ತೊಗಲಿನದಿರಲಿ, ಒಳಗಿನ ಕರುಳಿನದಿರಲಿ - ಸಕ್ರಿಯವಾಗಿದ್ದುಕೊಂಡು ತನ್ನ ತತ್ವ ಸಂಬಂಧಿ ಕ್ರಿಯೆಯನ್ನು ನಡೆಸುತ್ತಿದೆಯೆನ್ನುವ ವಿಚಾರ..'

'ನಿನ್ನ ಅನುಮಾನ ಅರ್ಥವಾಯಿತು ಕುನ್. ಶ್ರೀನಾಥ.. ಅದನ್ನು ವಿವರಿಸಲು ಎಲ್ಲಾ ತತ್ವಗಳನ್ನು ಎತ್ತಿ ವಿಮರ್ಶಿಸಿ ನೋಡುವ ಬದಲು ಒಂದು ಉದಾಹರಣೆಯ ಮೂಲಕ ಪ್ರಯತ್ನಿಸೋಣ.. ಇದೀಗ ನೀನು ಕೋಶ ತನ್ನನ್ನೆ ವಿಭಜಿಸಿಕೊಂಡು ಮರುಸೃಷ್ಟಿಯಾಗುವ ಕುರಿತು ಮಾತನಾಡಿದೆಯಲ್ಲವೆ..?'

'ಹೌದು.. ಹೇಗೆ ಜೀವಕೋಶಗಳು ತಾವೆ ಡಿ.ಎನ್.ಏ ಯಿಂದ ಆರಂಭಿಸಿ 'ಕ್ರಿಕ್-ವ್ಯಾಟ್ಸನ್' ಮಾದರಿಯ ಏಣಿಯಾಕರವನ್ನು ವಿಭಜಿಸಿಕೊಳ್ಳುತ್ತ ಹೋಗಿ ಅಂತಿಮವಾಗಿ ಎರಡು ಕೋಶವಾಗುವ, ಎರಡು ನಾಲ್ಕಾಗುವ ಪ್ರಕ್ರಿಯೆಯನ್ನು ಮನದಲ್ಲಿರಿಸಿಕೊಂಡು ಅದನ್ನು ಹೇಳಿದ್ದೆ..'

' ಸರಿ.. ಆ ಸೃಷ್ಟಿಯಾಗುವ ಪ್ರಕ್ರಿಯೆ ಎಲ್ಲಾ ಕೋಶಗಳಲ್ಲೂ ಇರಬೇಕೆಂದೂ ಒಪ್ಪುತ್ತೀಯಾ?'

'ಹೌದು.. ಎಲ್ಲಿಯತನಕ ಹೀಗೆ ಕೋಶಗಳು ವಿಭಜಿಸಿಕೊಳ್ಳುತ್ತ ಹೊಸತರ ನಿಯಂತ್ರಿತ ಸೃಷ್ಟಿ ಮಾಡಿಕೊಳ್ಳುವವೊ ಅಲ್ಲಿಯತನಕ ಅವು ಆ ಜೀವಿಯ ಅಥವಾ ಅಂಗದ ಜೀವಂತ ಕಾರ್ಯಕ್ಕೆ ಪ್ರೇರಕಶಕ್ತಿಯಾಗಿರುತ್ತವೆ..'

'ನಿಯಂತ್ರಿತ - ಸೃಷ್ಟಿ : ಎರಡು ಸರಳವಾದರೂ ಮಹತ್ವದ ಪದಗಳು. ಇರಲಿ ಈಗ ಸೃಷ್ಟಿಯತ್ತ ನೋಡೋಣ.. ಸೃಷ್ಟಿಯ ಸಿದ್ದಾಂತಕ್ಕೆ  ಸಂಬಂಧಿಸಿದ ತತ್ವ ಯಾವುದೆಂದು ನೆನಪಿದೆಯೆ..?' ಎಂದರು.

ಶ್ರೀನಾಥನ ಮನಸು ತಟ್ಟನೆ ಆಲೋಚನೆಗಿಳಿದಿತ್ತು ತತ್ವಗಳ ಪರಾಮರ್ಶೆಯಲ್ಲಿ. ಸೃಷ್ಟಿ ಭೌತಿಕವಾದ ಕಾರಣ ಅದು ಅಂತಃಕರಣವಾಗಿರಲು ಸಾಧ್ಯವಿಲ್ಲ.. ಇನ್ನು ಜ್ಞಾನೇಂದ್ರಿಯಗಳೂ ಮತ್ತದರ ಸಂಬಂಧಿ ತನ್ಮಾತ್ರೆಗಳೂ ಆಗಲಿಕ್ಕೆ ಸಾಧ್ಯವಿಲ್ಲ... ಅಲ್ಲಿಗೆ ಇಪ್ಪತ್ನಾಲ್ಕರಲ್ಲಿ ಹದಿನಾಲ್ಕು ತತ್ವಗಳನ್ನು ಪಕ್ಕಕ್ಕಿಡಬಹುದು. ಇನ್ನು ಮಿಕ್ಕ ಹತ್ತರಲ್ಲಿ ಐದು ಕರ್ಮೇಂದ್ರಿಯಗಳು - 'ಕೈ-ಕಾಲು-ಬಾಯಿ-ಜನನಾಂಗ-ವಿಸರ್ಜನಾಂಗ'... ಹಾಂ.. ಸೃಷ್ಟಿಗೆ ಸಂಬಂಧಿಸಿದ್ದು 'ಜನನಾಂಗ'ವಲ್ಲವೆ? ಇನ್ನು ಮಿಕ್ಕ ಐದು ತತ್ವಗಳು ಕರ್ಮೇಂದ್ರಿಯಗಳ ಕಾರ್ಯಕಾರಕ ತತ್ವಗಳು - 'ಹಿಡಿತ-ಚಲನೆ-ಶಬ್ದ-ಸಂತಾನ-ವಿಸರ್ಜನೆ'. ಅದರಲ್ಲಿ ಸಂತಾನವೆ ಸೃಷ್ಟಿಯ ಸಂಕೇತವಲ್ಲವೆ ? ಅಲ್ಲಿಗೆ 'ಜನನಾಂಗ-ಸಂತಾನ'ಗಳ ತತ್ವ ಜೋಡಿಯೆ ಸೃಷ್ಟಿ ಪಾಠಶಾಲೆಯ ನೇತಾರರಾಗಿರಬೇಕಲ್ಲವೆ..? 

' ಮಾಸ್ಟರ, ಕರ್ಮೇಂದ್ರಿಯದ 'ಜನನಾಂಗ ತತ್ವ' ಸೃಷ್ಟಿ-ಯಂತ್ರದ ತತ್ವಾಂಶವಿಟ್ಟುಕೊಂಡಿದ್ದರೆ, ಸೃಷ್ಟಿಗೆ ಪ್ರೇರೇಪಿಸುವ, ಪ್ರಚೋದಿಸುವ 'ಸಂತಾನ ತತ್ವ' ಸೃಷ್ಟಿಯನ್ನು ಹತೋಟಿಯಲ್ಲಿರುವಂತೆ ನೋಡಿಕೊಳ್ಳುತ್ತಿದೆ ಅನಿಸುತ್ತಿದೆ.. ' ತನ್ನ ಜಿಜ್ಞಾಸೆಯ ತಾರ್ಕಿಕ ಅಂತ್ಯಕ್ಕೆ ಪದಗಳ ರೂಪ ನೀಡುತ್ತ ನುಡಿದ ಶ್ರೀನಾಥ.. 

' ಇದೀಗ ನೀನೆ ನುಡಿದಂತೆ ಹೊಸಹುಟ್ಟಿಗೆ ಚಾಲನೆ ನೀಡಲು ಮತ್ತು ಅದು ಮಿತಿಮೀರದಂತೆ ನಿಯಂತ್ರಿಸಲು 'ಜನನಾಂಗ ತತ್ವ' ಹಾಗು 'ಸಂತಾನ ತತ್ವ' ಗಳೆಂಬ ರಾಸಾಯನಿಕಗಳು ಎಲ್ಲಾ ಕೋಶಗಳಲ್ಲೂ ಕಾರ್ಯ ನಿರ್ವಹಿಸಲೆಬೇಕಲ್ಲವೆ..? ಉದಾಹರಣೆಗೆ ಪಿತ್ತಕೋಶದಲ್ಲಿ ನಿಯಂತ್ರಣವಿಲ್ಲದ ಕೋಶದ 'ಮಿತಿಮೀರಿದ' ಹುಟ್ಟಾದರೆ 'ಪಿತ್ತ ಜನಕದ ಅರ್ಬುಧ' ಎಂದುಬಿಡುತ್ತೇವೆ.. ಅದೇ ರಕ್ತದಲ್ಲಾದರೆ ಅದನ್ನೆ ರಕ್ತದ ಕ್ಯಾನ್ಸರ ಎನ್ನುತ್ತೇವೆ.. ಅದು ಎಷ್ಟು ಬೇಕೊ ಅಷ್ಟೇ ಮಾಮೂಲಿನಷ್ಟಿದ್ದರೆ, ಅದನ್ನು ಸಹಜ ಬೆಳವಣಿಗೆಯೆಂದು ಪರಿಗಣಿಸುತ್ತೇವೆ. 
ಅರ್ಥಾತ್ ಎಲ್ಲಾ ಕಡೆಯೂ ಈ ಸೃಷ್ಟಿ ಮತ್ತದರ ನಿಯಂತ್ರಣ ಮಾಡುವ ತತ್ವಗಳು ಯಾವುದಾದರೊಂದು ರೂಪದಲ್ಲಿ ಅಸ್ತಿತ್ವದಲ್ಲಿರಲೆ ಬೇಕಲ್ಲವೆ ? ರಾಸಾಯನಿಕವೆನ್ನು, ಪ್ರೋಟೀನ್ ಎನ್ನು, ಹಾರ್ಮೋನ್ ಎನ್ನು, ಆಧ್ಯಾತ್ಮಿಕ ತತ್ವವೆನ್ನು - ಒಟ್ಟಾರೆ ಅದು ಎಲ್ಲೆಡೆಯು ಇರುವುದು ಸತ್ಯ.. ಯಾವ ಹೆಸರಲ್ಲಿ ಕರೆದರೂ ಸರಿ.. ಅದೇ ರೀತಿ ನೀನು ಕೇಳಬಹುದು ಜೀವಕೋಶದಲ್ಲಿ 'ಕೈ ತತ್ವ' ಎಲ್ಲಿ ಬರುತ್ತದೆ ಎಂದು. ಕೈಯೆಂದರೆ ಹಿಡಿತದ ಸಂಕೇತ - ಅದನ್ನು ಗ್ರಹಿಸಿದರೆ ಎಲ್ಲೆಲ್ಲಿ ಹಿಡಿತದ ಅವಶ್ಯಕತೆಯಿದೆಯೊ ಅಲ್ಲೆಲ್ಲ 'ಕೈ ಮತ್ತು ಹಿಡಿತ'ದ ತತ್ವಗಳು ಸಕ್ರೀಯವಾಗಿರಬೇಕು ಎಂದಾಗುವುದಲ್ಲವೆ ? ಉದಾಹರಣೆಗೆ ಒಂದು ಕೋಶ ಮತ್ತೊಂದು ಕೋಶಕ್ಕೆ ಅಂಟಿದಂತಿರಲು,  ಕೈ ತತ್ವದ ಹಿಡಿತವನ್ನೆ ಬಳಸಬೇಕಲ್ಲವೆ - ಅದನ್ನು ಸಾಧ್ಯವಾಗಿಸುವ ರಾಸಾಯನಿಕದ ರೂಪದಲ್ಲಿ ? .. ಅದೇ ರೀತಿ ಕಾಲಿನಂಶ-ಚಲನೆಯ ತತ್ವಗಳು ಸಹ; ಮಾತಿನ ಅಥವ ಶಬ್ದದ ತರಂಗಗಳ ಮೂಲಕ ಸಕ್ರಿಯವಾಗುವ ಬಾಯಿ-ಮಾತಿನ ತತ್ವಗಳ ಸಂಕೇತಕ್ಕು ಅದೇ ರೀತಿಯ ಹಿನ್ನಲೆ. ಕೊನೆಗೆ ಬೇಡವಾದ ತ್ಯಾಜ್ಯದ ವಿಸರ್ಜನೆಗು ಅದೇ ಮೂಲ ಮಂತ್ರ... ಗೊತ್ತಾಯಿತೆ ಕುನ್. ಶ್ರೀನಾಥ..?'

'ಸಂದೇಹ ನಿವಾರಣೆಯಾಯಿತು ಮಾಸ್ಟರ.. ನೀವು ಮತ್ತೆ ಜೀವಕೋಶದ ಸಂವಹನ ಸ್ತರದ ವಿವರಣೆಯನ್ನು ಮುಂದುವರೆಸಿ..'

' ಮತ್ತೆ ಸಂವಹನದ ವಿಷಯಕ್ಕೆ ಬಂದರೆ, ಅದೆ ಸಂವಹನದ ರಾಸಾಯನಿಕ ಅಥವಾ ತರಂಗ ಪ್ರಕ್ರಿಯೆಗಳು ಬರಿ ಭೌತಿಕ - ಭೌತಿಕದ ನಡುವೆ ಮಾತ್ರವಲ್ಲದೆ, ಭೌತಿಕ - ಅಭೌತಿಕದ ನಡುವೆಯೂ ನಡೆಯುತ್ತಿರಬಹುದೆಂದು ಜ್ಞಾನೇಂದ್ರಿಯ ಮತ್ತು ಅಂತಃಕರಣಗಳ ನಡುವಿನ ಸಂಭಾಷಣೆಯ ಮೂಲಕ ಸಾಬೀತು ಪಡಿಸಲೆತ್ನಿಸಿದ್ದು ಮುಂದಿನ ಹಂತ... ದೇಹದ ಒಳಭಾಗಕ್ಕೆ ಅನ್ವಯಿಸಿದಂತೆ, ಅದೇ ಸಾಧ್ಯತೆಯನ್ನೆ ದೇಹದ 'ಹೊರಗಿಂದ ಒಳಗಿನ' ಸಂವಹನಕ್ಕೂ ಪ್ರಕ್ಷೇಪಿಸಿ ಈ ರೀತಿಯ ಸಂಭಾಷಣೆ-ಸಂವಾದ ಸುತ್ತಲ ಪರಿಸರದ ಅಂಶಗಳ ಮತ್ತು ಅಂತಃಕರಣ ಮುಖೇನ ದೇಹದ ಒಳಾಂಗಗಳ ಜತೆ ಕೂಡ ನಡೆಯುತ್ತಿರಬೇಕೆಂದುದು ಅದೆ ಪ್ರಕ್ಷೇಪದ ಉಪ-ಉತ್ಪನ್ನ. ಹಾಗೆ ಹೊರಗಿನಿಂದ ಬರುವ ಶಕ್ತಿ, 'ಜ್ಞಾನ-ಅಜ್ಞಾನದ' ಮಾಹಿತಿಯ ರೂಪದಲ್ಲಿರುವ ಶಕ್ತಿಯಾಗಿದ್ದು , ಅದರ ಜತೆಗಿರುವ ತ್ರಿಗುಣದಂಶದನುಸಾರ ಸಕಾರಾತ್ಮಕ ಅಥವಾ ನಕಾರಾತ್ಮಕ ರೂಪದಲ್ಲಿ ದೇಹದೊಳಗೆ ಸಂಗ್ರಹವಾಗುತ್ತದೆ ಎನ್ನುವುದು ಅದರ ಮತ್ತೂ ಮುಂದುವರೆದ ಪ್ರಕ್ಷೇಪಿತ ಭಾಗ ...'

ಅವರು ತಾವೆ ಕಣ್ಣಿನಿಂದ ಕಂಡವರ ಹಾಗೆ ಸರಳ-ಸಾರವಾಗಿ ವಿವರಿಸುತ್ತಿರುವ ರೀತಿಯಿಂದ ವಿಸ್ಮಯಗೊಳ್ಳದಿರಲು ಸಾಧ್ಯವಾಗಲಿಲ್ಲ ಶ್ರೀನಾಥನಿಗೆ. ಅವರೆ ಅವನೊಳಗ್ಹೊಕ್ಕು ಎಲ್ಲವನ್ನು ಕಣ್ಣಾರೆ ಕಂಡು ಬಂದವರ ಹಾಗೆ ವರ್ಣಿಸುತ್ತಿದ್ದರೆ ತನಗಾದ ಅನುಭವವೆ ಮತ್ತೊಮ್ಮೆ ಕಣ್ಮುಂದೆ ಹಾದುಹೋದ ಭಾವವುಂಟಾಗುತ್ತಿತ್ತು. ಆ ವಿಸ್ಮಯ ಪ್ರೇರಿಸಿದ ಉತ್ಸಾಹದಲ್ಲೆ, '... ಆ ಮಾಹಿತಿ ಶಕ್ತಿಗಳೆ ಮತ್ತೆ ಒಳಗೆ ಪ್ರವಹಿಸುವಾಗ ತನ್ನ ಶಕ್ತಿಗುಣದ ಅನುಪಾತದನುಸಾರ, ತ್ರಿಗುಣಗಳಲ್ಲೊಂದನ್ನು ಪ್ರತಿನಿಧಿಸುವ ರಾಸಾಯನಿಕದ ರೂಪದಲ್ಲಿ ಸಂಗ್ರಹವಾಗುತ್ತದೆಂದು, ಅವೇ ಪಾಪ-ಪುಣ್ಯಗಳೆಂಬ ನಂಬಿಕೆಯ ಭೌತಿಕ ಪ್ರಕಟರೂಪವೆಂದು, ಅವುಗಳ ಆ ಇರುವಿಕೆಯಿಂದಲೆ ವ್ಯಕ್ತಿಯ ಗುಣ, ನಡತೆಗಳ ಮೇಲೆ ಪ್ರಭಾವವುಂಟಾಗಿ ಅವನ ನಡುವಳಿಕೆ, ನಡತೆಯನ್ನು ನಿರ್ಧರಿಸುವುದೆಂದು ತರ್ಕಿಸಿದ್ದೆ..' ಎಂದ. ಹಾಗೆ ಅದೇ ಎಳೆಯನ್ನು ಹಿಡಿದು ಮುಂದುವರೆಯುತ್ತ 'ಅಂದ ಹಾಗೆ, ಮೂರ್ತ-ಅಮೂರ್ತಕ್ಕೂ, ಭೌತಿಕ-ಅಭೌತಿಕಕ್ಕೂ, ಲೌಕಿಕ-ಅಲೌಕಿಕಕ್ಕೂ ನಡುವಿನ ಈ ಸಂವಹನದ ಸಾಧ್ಯತೆ ಮತ್ತು ಕಲ್ಪನೆಗಳು ನನ್ನಲ್ಲಿ ಹೊಳೆದದ್ದಾದರು ಹೇಗೆ ಮಾಸ್ಟರ..? ನನಗೀ ವಿಷಯಗಳ ಕುರಿತಾದ ಯಾವ ಆಳವಾದ ಜ್ಞಾನವಾಗಲಿ, ಮಾಹಿತಿಯಾಗಲಿ ಇಲ್ಲ.. ಆದರು ಅದು ಹೇಗೆ ನನಗೀ ರೀತಿಯ ಹೊಳಹುಗಳೆಲ್ಲ ಹೊಳೆದು ಕಲ್ಪನೆಯ ಸಾಕಾರ ರೂಪಾಗಲಿಕ್ಕೆ ಸಾಧ್ಯವಾಯಿತೊ ಎನ್ನುವುದು ಇನ್ನು ವಿವರಿಸಲಾಗದ ಅಚ್ಚರಿಯೆ..!'

ಅವನ ಮಾತಿಗೆ ನಕ್ಕ ಮಾಂಕ್ ಸಾಕೇತ್, ' ಅದರಲ್ಲಿ ನಿನ್ನ ಬಾಹ್ಯ ಜ್ಞಾನಶಕ್ತಿಗಿಂತ, ತಲಾಂತರದಿಂದ ಪಾರಂಪರಿಕವಾಗಿ ಬೀಜಾಕ್ಷರ ರೂಪದಲ್ಲಿ ಬಂದಿರುವ ಅವ್ಯಕ್ತ ಪ್ರಜ್ಞಾಶಕ್ತಿಯೆ ಹೆಚ್ಚು ಕಾರಣ ಕುನ್. ಶ್ರೀನಾಥ...' ಎಂದರು.

'ನನಗದರ ಸೂಕ್ಷ್ಮ ಅರ್ಥವಾಗಲಿಲ್ಲ ಮಾಸ್ಟರ..ಇನ್ನು ಸ್ವಲ್ಪ ಬಿಡಿಸಿ ಹೇಳಿ..' ಅವರು ಹೇಳಿದ್ದರ ಅರ್ಥವನ್ನು ಗ್ರಹಿಸಲಾಗದೆ ಕೇಳಿದ ಶ್ರೀನಾಥ.
(ಇನ್ನೂ ಇದೆ) 
__________