ಒಂಟಿ ಕೋಣೆ

ಒಂಟಿ ಕೋಣೆ

ನನ್ನ ಒಂಟಿ ಕೋಣೆಯ
ಕೂಗು ಇಂದು ನಿನ್ನೆಯದಲ್ಲ,
ಅದು ಸಾಯಲು ಹಂಬಲಿಸಿ
ವರ್ಷಗಳೇ ಆದವು,
ಆದರೂ ಅದಕ್ಕಿನ್ನೂ ಸಾವು ಬಂದಿಲ್ಲ,,,,

ಅದರ ಕಿಟಕಿಯಾಚೆಗಿನ ದೃಶ್ಯಗಳು,
ಅದಕ್ಕೆಂದೂ ಸತ್ಯವಾಗಿಲ್ಲ,
ಕಿಟಕಿಯ ಬಾಗಿಲುಗಳ
ಸಂದಿಯಲಿ ಹಾದು ಬರುವ
ಬಿಳಿಯ ಬೆಳಕು ಕೊಂಡು ತರುವ
ಏಕತಾನತೆ,
ನನ್ನ ಕೋಣೆಗೆ ಇನ್ನಷ್ಟು
ನೋವನ್ನಿಡುತ್ತದೆ.

ಪಕ್ಕದ ಮನೆಯ ನಾರಿ ಸಿಡಿಸುವ
ಒಗ್ಗರಣೆ ಪರಿಮಳ,
ಗೋಡೆಗಳಿಗೆ ಡಿಕ್ಕಿ ಹೊಡೆದು
ಹಿಂತಿರುಗಿ ಹೋದಾಗ
ನನ್ನ ಕೋಣೆಯ ಗೋಡೆಯ
ಬಣ್ಣ ಕಳಚಿ ಕೆಳಗೆ ಬೀಳುತ್ತದೆ.
ತೃಪ್ತವಾಗುವ ಕನಸಿನಲ್ಲಿ,

ನನ್ನ ಕೋಣೆಗೆ ಬಾಗಿಲುಗಳಿಲ್ಲ,
ನಾ ಕಳ್ಳನೇನೊ ಎಂಬ
ಭಯದಲ್ಲಿ ಬಾಗಿಲನೇ
ನಾನು ಮಾಡಿಸಿಲ್ಲ,,,,
ಈ ಕೋಣೆಯ ಒಳಗೆ ಬಂದಿಯಾದ
ನನ್ನ ಜೀವಂತ
ಕನಸುಗಳ ಬೆನ್ನೇರಿ ಹೊರಟರೆ
ಸಿಗುವುದು,
ಕಾಲಿ ಶೀಶೆಯ ಮುಚ್ಚಳ.

ನನ್ನ ಕೋಣೆಯ ಗೋಡೆಗಳು
ಸತ್ಯ ನುಡಿಯ ಹತ್ತಿದರೆ.
ನನ್ನ ಸಂಸ್ಕೃತಿ ಹೊರಗೆದ್ದು
ಬಂದು. ಕುಣಿದುಬಿಡುತ್ತದೆ

ಕೋಣೆಯ ಗೋಡೆಯ ಮೇಲೆ
ತೂಗುಹಾಕಿದ ಚಿತ್ರಪಟ
ಆಗಾಗ ಎದ್ದು ಬಂದು
ನನ್ನೊಂದಿಗೆ ಸುಖ್ಹಿಸುವುದುಂಟು
ಆದರೆ ಗೋಡೆಗೇನು ಬೇಸರವಿಲ್ಲ!

ನನ್ನ ಒಂಟಿ ಕೋಣೆ
ಸಾಯುವುದು ಯಾವಾಗ,,,,?
ಎದುರು ನೋಡುತ್ತಿದೆ ಕಿಟಕಿಯಂಚಿನ
ಸತ್ತ ಜೇಡ,,

– ಜೀ ಕೇ ನ