ಕಥೆ: ಪರಿಭ್ರಮಣ..(65)
( ಪರಿಭ್ರಮಣ..64ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಹೀಗೆ ತನ್ನನುಭವದ ಪರಾಮರ್ಶೆಯಲ್ಲಿ, ತುಲನಾತ್ಮಕ ವಿಶ್ಲೇಷಣೆಯಲ್ಲಿ ಕಳೆದು ಹೋಗಿದ್ದ ಶ್ರೀನಾಥನಿಗೆ ಬಸ್ಸಿನ ಚಲನದಿಂದಾದ ಜೊಂಪಿನ ಮಂಪರು ಜತೆಗೆ ಸೇರಿಕೊಂಡು ತೂಕಡಿಸುವಂತಾಗಿ ಅವನ ಅರಿವಿಲ್ಲದೆಯೆ ನಿದಿರಾದೇವಿಯ ಮಡಿಲಿಗೆ ಜಾರಿಹೋಗಿದ್ದ. ಆ ನಿದಿರೆಯಲ್ಲೂ ಮನದಾಳದ ಆಧ್ಯಾತ್ಮವು ಸಂಪಾದಿಸಿಕೊಂಡಿದ್ದ ಪ್ರಶಾಂತ ಭಾವವೆ ಪ್ರಖರವಾಗಿ ಒಡಮೂಡಿ, ಯಾವುದೆ ತಾಕಲಾಟ, ತೊಳಲಾಟಗಳಿಲ್ಲದ ಸುಖಕರ ಪಯಣವನ್ನಾಗಿಸಿಬಿಟ್ಟಿತ್ತು. ಆ ಗಾಢತೆಯ ಪ್ರಭಾವದ ಮಂಪರಿನಿಂದ ಮತ್ತೆ ಹೊರಬಿದ್ದು ಪ್ರಾಪಂಚಿಕ ಜಗದ ಆವರಣಕ್ಕೆ ಮರಳಲು ಬಸ್ಸು ಬ್ಯಾಂಕಾಕಿನ ಬಸ್ ಸ್ಟ್ಯಾಂಡನ್ನು ತಲುಪಿ, ಬ್ರೇಕು ಹಾಕಿ ಪೂರ್ತಿ ನಿಲ್ಲಿಸಿದಾಗಷ್ಟೆ ಸಾಧ್ಯವಾಗಿತ್ತು. ತೆರೆಯಲೇ ಆಗದ ಭಾರವಾದ ಕಣ್ಣುಗಳನ್ನು ಬಲು ಕಷ್ಟದಿಂದ ತೆರೆಯುತ್ತ, ಆಕಳಿಸಿ ಮೈ ಮುರಿಯುತ್ತ ಮೇಲೆದ್ದ ಶ್ರೀನಾಥನಿಗೆ ಕೆಳಗಿಳಿಯುವ ಹೊತ್ತಲ್ಲಷ್ಟೆ ಅರಿವಾಗಿದ್ದು - ತಾನೆ ಬಸ್ಸಿನಿಂದಿಳಿಯುತಿರುವ ಕೊನೆಯ ಪ್ರಯಾಣಿಕ ಎಂದು. ತನ್ನ ಪುಟ್ಟ ಚೀಲವನ್ನು ಹೆಗಲಿಗೆರಿಸಿಕೊಂಡು ಅಲ್ಲೆ ಸಿಕ್ಕಿದ್ದ ಟ್ಯಾಕ್ಸಿಯನ್ನು ನಿಲ್ಲಿಸಿ ತನ್ನ ಸರ್ವೀಸ್ ಅಪಾರ್ಟ್ಮೆಂಟ್ ಸೇರಿಕೊಂಡಾಗ ಮತ್ತೆ ಏಕಾಂತದ, ಏಕಾಂಗಿತನದ ಗೂಡೊಳಕ್ಕೆ ಹೊಕ್ಕಿಕೊಳ್ಳುತ್ತಿರುವೆನೇನೊ ? ಎಂಬ ಅಳುಕಿನಿಂದಲೆ ಒಳಗೆ ಪ್ರವೇಶಿಸಿದರೂ, ಒಳ ನಡೆದು ದೀಪ ಹಾಕುತ್ತಿದ್ದಂತೆ ಏನೊ ಸಾತ್ವಿಕ ಭಾವ ತನ್ನ ಸುತ್ತಲೂ ಪಸರಿಸಿಕೊಂಡಿರುವುದರ ಅನುಭವವಾಗಿತ್ತು; ಆ ಗಳಿಗೆಯಲ್ಲಿ ಮೊದಲಿನ ಏಕಾಂಗಿತನದ ಭಾವ ಹತ್ತಿರ ಸುಳಿಯದೆ ಖೇದವೂ ಅಲ್ಲದ ಹರ್ಷವೂ ಅಲ್ಲದ ನಿರ್ಲಿಪ್ತಭಾವ ಮನೆ ಮಾಡಿಕೊಂಡಿರುವುದನ್ನು ಕಂಡು ಪೂರ್ತಿ ನಿರಾಳವಾಗಿತ್ತು ಶ್ರೀನಾಥನಿಗೆ. ಆ ಪ್ರಶಾಂತ ನಿರ್ಲಿಪ್ತತೆ ತಂದ ನಿರಾಳ ಭಾವದಲ್ಲೆ ಅಡಿಗೆ ಮನೆಯಲ್ಲಿದ್ದ ನೆಸ್ಟ್ ಲೆ ಥ್ರೀ-ಇನ್-ವನ್ ಕಾಫಿಯ ಸ್ಯಾಷೆ ಯನ್ನು ಕುದಿಯುವ ಬಿಸಿನೀರಿಗೆ ಬೆರೆಸಿ 'ಕ್ಷಿಪ್ರ ಕಾಫಿ' ತಯಾರಿಸಿ ಆ ಕಾಫಿ ಲೋಟವನ್ನು ಕೈಲಿಡಿದು ಬಾಲ್ಕನಿಗೆ ಬಂದು ನಿಂತ. ಆಗ ತಟ್ಟನೆ, 'ಅರೆರೆ... ಬಹುದಿನಗಳ ನಂತರ ಈ ಬಾಲ್ಕನಿಗೆ ಬಂದು ನಿಂತಿದ್ದಲ್ಲವೆ ?' ಎನಿಸಿತು. ಅದುವರೆವಿಗೆ ನೆನಪಿದ್ದಂತೆ ಆ ಅಪಾರ್ಟ್ಮೆಂಟಿಗೆ ಬಂದ ಹೊಸದರಲ್ಲಿ ಒಂದೆರಡು ಬಾರಿ ಅಲ್ಲಿಗೆ ಕಾಲಿಟ್ಟಿದ್ದು ಬಿಟ್ಟರೆ, ಮತ್ತೆ ಎಂದು ಅಲ್ಲಿಗೆ ಆ ರೀತಿ ಬಂದು ನಿಂತುಕೊಂಡಿದ್ದೆ ಇಲ್ಲ - ಕಾಫಿ ಕುಡಿಯುವಾಗಲೂ ಸಹ... ಯಾವಾವುದೊ ತಾಕಲಾಟ, ತೊಳಲಾಟಗಳಲ್ಲಿ ಮುಳುಗಿ ಪ್ರಕ್ಷುಬ್ದವಾಗಿ ಹೋದ ಮನಸು ತನ್ನ ಸುತ್ತಲ ಪರಿಸರಕ್ಕೆ ಮಿಡಿಯಬಲ್ಲ ಸ್ಪಂದನವನ್ನು ಕಳೆದುಕೊಂಡು ಕೊಂಡಿ ಕಳಚಿದ ನಿರ್ಜೀವ ಯಂತ್ರದಂತಾಗುವ ವಿಸ್ಮಯಕ್ಕೆ ಅಚ್ಚರಿಪಡುವಾಗಲೆ, ಅದೇ ಆಗಿನ ಪ್ರಶಾಂತ ಸ್ಥಿತಿಯಲ್ಲಿರುವ ಮನಸು ತನ್ನ ಬಾಹ್ಯದರಿವು, ಪ್ರಚೋದನೆಯಿರದೆಯೆ ಆಯಾಚಿತವಾಗಿ ಅಲ್ಲಿಗೆ ಹೋಗಿ ನಿಂತಿದ್ದು ನೆನೆದಾಗ, ಮನಸಿನ ವ್ಯಾಪಾರದ ಸ್ವಯಂಭುತ್ವವನ್ನು ಕುರಿತು ದಿಗ್ಭ್ರಮೆಯೂ ಆಗಿತ್ತು. ಬಹುಶಃ ಎಲ್ಲಾ ಅಂತರಾಳದ ತಾಮಸ-ಸಾತ್ವಿಕ-ರಾಜಸದ ಪ್ರಭಾವ ಮತ್ತದು ಸ್ಪುರಿಸುತ್ತಿರಬಹುದಾದ ರಾಸಾಯನಿಕ ವೈವಿಧ್ಯಗಳ ಪ್ರೇರಣೆಯೆನಿಸಿ, ಆ ಚಿಂತನೆಯನ್ನೆಲ್ಲ ಪಕ್ಕಕ್ಕೆ ಸರಿಸುತ್ತ ಎದುರಿನ ಕ್ಷಿತಿಜದ ಅಗಾಧ ಬಯಲಿನಲ್ಲಿ ಎದ್ದು ಕಾಣುತ್ತಿದ್ದ ರಸ್ತೆ ಮತ್ತು ಕಟ್ಟಡಗಳ ಕಾಂಕ್ರೀಟ್ ಕಾಡಿನತ್ತ ಮತ್ತೊಮ್ಮೆ ಆಳವಾಗಿ ದಿಟ್ಟಿಸಿ ನೋಡುತ್ತ ನಿಂತ ಶ್ರೀನಾಥ.
ದೂರದಲ್ಲಿ ಸಿಲೋಮ್ ರಸ್ತೆಯ ಎಡಭಾಗಕ್ಕೆ ಸರಿಯಾಗಿ ವಿಭಜಿಸಿದ್ದ ಕಟ್ಟಡಗಳ ನಡುವೆ ತಾನು ದಿನವೂ ಹೋಗಿ ಕೆಲಸ ಮಾಡುವ ಕಟ್ಟಡವೂ ಕಾಣಿಸುತ್ತಿತ್ತು... ರಸ್ತೆಯ ಅದೇ ಬಲ ಬದಿಯಲ್ಲಿ 'ಪಾಟ್ ಪೊಂಗ್' ರಸ್ತೆ ಮತ್ತದರ ಕರಾಳ ಚಟುವಟಿಕೆಗಳ, ಗುಟ್ಟೆ ಬಿಡದ, ಗರತಿಯ ಹಾಗೆ ಮೌನವನ್ನು ಹಡೆದು ಹಾಸಿಕೊಂಡು ಬಿದ್ದಿರುವ ಮುಗ್ದತೆಯ ಸೆರಗ್ಹೊದ್ದ ರಸ್ತೆಗಳು... ಅವು ತಮ್ಮ ಸೆರಗು ಬಿಚ್ಚಿದ ಮೆರುಗಿನವತಾರ ಕಾಣುವುದು ರಾತ್ರಿಯ ಜಗಮಗಿಸುವ ದೀಪಗಳು ಹೊತ್ತಿಕೊಂಡ ಮೇಲೆಯೆ.. 'ಅಬ್ಬಾ! ಈ ಆಧುನಿಕ, ಯಾಂತ್ರಿಕ ಜೀವನ ಸ್ತರದಲ್ಲೂ ಹಗಲೂ ಇರುಳಿನ ನಡುವೆ ಪ್ರಸ್ತುತಗೊಳ್ಳುವ ಎಂತಹ ಅದ್ಭುತ ದ್ವಂದ್ವ..! ಎರಡೂ ಹಗಲಿರುಳಿನಷ್ಟೆ ಸಹಜವಾಗಿ ಅದೆಷ್ಟು ಸೊಗಸಾದ ದ್ವಂದ್ವ-ಸಮತೋಲನದಲ್ಲಿ ತಮ್ಮನ್ನು ತಾವೆ ಅಸ್ತಿತ್ವದಲ್ಲಿರಿಸಿಕೊಂಡಿವೆ..? ತಮ್ಮನ್ನು ತಾವೆ ಎನ್ನುವುದು ನಿರ್ಜೀವಗಳ ಪರಿಭಾಷೆಯಾಗಿಬಿಡುವುದರಿಂದ ಕೊಂಚ ಅಪೂರ್ಣವಾಗಿಬಿಡುವುದೇನೊ..? ಅಂತರಾಳದಲ್ಲಿ ಅದನ್ನು ಹಾಗೆ ನಡೆಸುತ್ತಿರುವುದು, ಸುತ್ತಲ ಜೀವಿಗಳ ಬದುಕಿನ 'ಶಕ್ತಿ-ಸಮಷ್ಟಿತ' ಮೊತ್ತ ತಾನೆ ? ಆ ಜೀವ ಸಮಷ್ಟಿಯ ಸಾತ್ವಿಕಶಕ್ತಿಯೆಲ್ಲ ಒಟ್ಟಾಗಿ ಬೆಳಗಿನ ಹೊತ್ತಿನ ಪ್ರಖರ ಪ್ರಬಲತೆಯಾಗಿ, ಅದರ ಸಮತೋಲನವನ್ನು ಸಿಲೋಮ್ ರಸ್ತೆಯ ಎಡದ ಸಾತ್ವಿಕ ಬದುಕಿನತ್ತ ಜಗ್ಗಿದರೆ, ಅದೇ ಜೀವ ಸಮಷ್ಟಿಯ ತಾಮಸೀಶಕ್ತಿ ಇರುಳಿನಂಧಕಾರದಲ್ಲಿ ಪ್ರಬಲವಾಗಿ ಸಿಲೋಮ್ ರಸ್ತೆಯ ಬಲಕ್ಕೆ ಪಾಟ್ ಪೊಂಗ್ ರಸ್ತೆಯತ್ತ, ನಿಶಿಥದ ತಾಮಸೀ ಪ್ರವೃತ್ತಿಯಾಗಿಸುವತ್ತ ತುಯ್ಯುತ್ತಿರಬೇಕು.. ಎರಡೂ ಪರಸ್ಪರ ಸಮತೋಲನದಲ್ಲಿರುವವರೆಗೆ ಎರಡರ ಅಸ್ತಿತ್ವಕ್ಕು ಭಂಗ ಬರುವುದಿಲ್ಲ.. ಆದರದು ಎಂಥಾ ಅದ್ಭುತ ದ್ವಂದ್ವ...! ತನ್ನೆದುರಿಗೆ ಹಾಸಿಕೊಂಡು ಬಿದ್ದಿದ್ದ ಈ ದ್ವಂದ್ವದ ಸತ್ವವನ್ನರಿಯಲು ತಾನು ಆಶ್ರಮವಾಸದ ತನಕ ಹೋಗಬೇಕಾಗಿ ಬಂತು - ಅದರ ಸ್ಪಷ್ಟ, ಜೀವಂತ ನಿದರ್ಶನ ಕಣ್ಣೆದುರಿಗೆ ಇದ್ದರು... ಏನೇ, ಎಷ್ಟೇ ಎದುರಿಗಿದ್ದರು ಕನಿಷ್ಠ ಗುರುತಿಸಬಲ್ಲ ಸಾತ್ವಿಕ ತೇಜಸ್ಸಾದರು ಇರಬೇಕಲ್ಲ..? ಅದರ ತುಣುಕೆಲ್ಲೊ ಮೂಲೆಯಲ್ಲಿ ಜಾಗೃತವಿದ್ದುದರಿಂದಲೋ ಏನೊ ಕನಿಷ್ಠ ಈ ಹುಡುಕಾಟದ ಪ್ರೇರಣೆಯಾದರೂ ಆಯ್ತೆನ್ನಬೇಕೇನೊ...? ಇಲ್ಲವಾಗಿದ್ದರೆ ಈ ತೊಳಲಾಟ ಇನ್ನೆಷ್ಟು ದಿನ ಹೀಗೆ, ಬಿಡದೆ ಕಾಡುತ್ತಲೆ ಇರುತ್ತಿತ್ತೊ - ಬಲ್ಲವರಾರು? ಅದೇನೆ ಆಗಲಿ ಮತ್ತೆ ನಾಳಿನಿಂದ ಅದೇ ಕಟ್ಟಡದ, ಅದೇ ಜಾಗದಲ್ಲಿ ಮತ್ತೆ ತನ್ನ ದೈನಂದಿನ ಕೆಲಸ ಆರಂಭಿಸಬೇಕು - ಅದರದೆಷ್ಟೊಂದು ವ್ಯತ್ಯಾಸದ ಮನಸ್ಥಿತಿಯಲ್ಲಿ.....?!' ಆ ಭಾವ ಸಂಕ್ರಮಣದ ಕ್ಷಣದಲ್ಲೂ ಮರುದಿನ ಅದೇ ಕಟ್ಟಡದಲ್ಲಿ ಕೆಲಸ ಮಾಡಬೇಕು ಎನ್ನುತ್ತಿದ್ದಂತೆ ತಟ್ಟನೆ ನೆನಪಾಗಿತ್ತು ಶ್ರೀನಾಥನಿಗೆ - ಏನಾದರಾಗಲಿ ನಾಳೆ ಮೊದಲು ಮಾಡಬೇಕಾದ ಕೆಲಸ ಕುನ್. ಲಗ್ ಜತೆಗಿನ ಭೇಟಿ.. ಅವರ ಹತ್ತಿರ ಸಮಯವಿಲ್ಲವೆಂದರೆ ಕೊನೆಗೆ ಊಟದ ವೇಳೆಗಾದರೂ ಸರಿ.. ಒಟ್ಟಿಗೆ ಹೋಗಿ ಲಂಚ್ ಜತೆ ಈ ಕೆಲಸವನ್ನೂ ಮುಗಿಸಿಕೊಂಡುಬಿಡಬೇಕು...
ಎದುರುಗಡೆ ಕುಳಿತಿದ್ದ ಶ್ರೀನಾಥನನ್ನು ಯಾವುದೊ ವಿಚಿತ್ರ ಪ್ರಾಣಿಯೊಂದನ್ನು ದಿಟ್ಟಿಸುವಂತೆ ನೋಡಿದರು ಕುನ್. ಲಗ್... ಕಳೆದ ಹದಿನೈದು ನಿಮಿಷಗಳಿಂದ ಅವನ ಮಾತನ್ನು ಕೇಳುತ್ತ ಕುಳಿತಿದ್ದವರಿಗೆ ತಕ್ಷಣಕ್ಕೆ ಏನುತ್ತರ ಕೊಡಬೇಕೆಂದು ಹೊಳೆಯದೆ, ಮತ್ತೆ ಅವನಿತ್ತಿದ್ದ ಕವರಿನೊಳಗಿನಿಂದ ಅವನು ಬರೆದಿದ್ದ ಚೆಕ್ಕನ್ನು ಹೊರತೆಗೆದು ಅದರಲ್ಲಿದ್ದ ದೊಡ್ಡ ಮೊತ್ತದ ಮೊಬಲಗನ್ನು ಮತ್ತೆ ನೋಡಿದರು. ಅವನೇನು ಭಾವವೇಶಕ್ಕೆ ಸಿಕ್ಕಿಬಿದ್ದು ಆತುರದಲ್ಲಿ ಈ ಕೆಲಸ ಮಾಡುತ್ತಿದ್ದಾನೊ ಅಥವ ಚೆನ್ನಾಗಿ ಮುಂದಾಲೋಚಿಸಿ ಈ ಹೆಜ್ಜೆಯನ್ನಿಡುತ್ತಿರುವನೊ ಎಂದು ಅವರಿಗೆ ಅನುಮಾನವಾಗಲು ಶುರುವಾಗಿತ್ತೇನೊ? ಆದರೆ ಶ್ರೀನಾಥನ ಮುಖದಲ್ಲಾವ ಕಳವಳದ ಭಾವವಾಗಲಿ, ಗೊಂದಲವಾಗಲಿ ಕಾಣದೆ ಪ್ರಶಾಂತ ದೃಢನಿಶ್ಚಯದ ಛಾಯೆಯಿರುವುದು ಕಂಡು ಅವನು ಹುಡುಗಾಟಕ್ಕಾಗಲಿ, ಬೇಜವಾಬ್ದಾರಿಯಿಂದಾಗಲಿ ವರ್ತಿಸುತ್ತಿಲ್ಲವೆಂದು ಅರಿವಾಗಿ ಅವರ ಅಚ್ಚರಿ ಇನ್ನು ಹೆಚ್ಚಾಗಿತ್ತು. ಇದಾಗಲೆ ಮುಗಿದು ಹೋದ ಕಥೆಯಾದ ಕಾರಣ ಅವನೇನು ಈ ಹಾದಿ ಹಿಡಿಯಬೇಕಾದ ಅಗತ್ಯವಿರಲಿಲ್ಲ... ಅಲ್ಲದೆ ಹೇಗು ಪ್ರಾಜೆಕ್ಟು ಮುಗಿದಾಗಿ ವಾಪಸ್ಸು ಹೊರಡುವ ಹೊತ್ತಲ್ಲಿ ಸುಮ್ಮನೆ ಜಾಗ ಖಾಲಿ ಮಾಡಿದರೆ ಸಾಕಾಗುತ್ತಿತ್ತು. ಅದನ್ನು ಬಿಟ್ಟು ಒಂದು ಟ್ರಸ್ಟ್ ಮಾಡಿ ತಾನು ಕೊಟ್ಟ ಹಣವನ್ನು ಮೂಲ ಬಂಡವಾಳವಾಗಿ ಪರಿಗಣಿಸಿ ಅದನ್ನು ಕುನ್. ಸು ನೋಡಿಕೊಳ್ಳುತ್ತಿದ್ದ ಮಕ್ಕಳ ಯೋಗಕ್ಷೇಮ, ವಿದ್ಯಾಭ್ಯಾಸಾದಿ ವೆಚ್ಛಗಳಿಗೆ ಬಳಸಬೇಕೆಂಬ ಅವನ ಬಯಕೆ, ಕೇವಲ ತೋರಿಕೆಗಲ್ಲದ ನಿಜವಾದ ಕಾಳಜಿಯ ಪ್ರೇರಿತವಾದದ್ದೆಂದು ಅವರ ಅರಿವಿಗು ಬಂದಿತ್ತು.
ಆದರು ಪಟ್ಟುಬಿಡದೆ, ' ನೀನೇನು ಮಾಡುತ್ತಿರುವೆ ಎಂದು ನಿನಗೆ ಗೊತ್ತು ತಾನೆ..?' ಎಂದರು ಮತ್ತೊಮ್ಮೆ ಅವನ ಮನದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ.
' ಇಲ್ಲಾ ಕುನ್. ಲಗ್..ನಾನು ಎಲ್ಲವನ್ನು ಚೆನ್ನಾಗಿ ಯೋಚಿಸಿಯೆ ಈ ನಿರ್ಧಾರಕ್ಕೆ ಬಂದಿದ್ದೇನೆ... ನಾನೀ ಕೆಲಸ ಮಾಡದಿದ್ದರೆ, ನನ್ನನ್ನು ಕಾಡುವ ಪಾಪಪ್ರಜ್ಞೆಯಿಂದ ನಾನು ಮಾನಸಿಕವಾಗಿ ಮುಕ್ತನಾಗದೆ ತೊಳಲಾಡುತ್ತಲೆ ಇರಬೇಕಾಗುತ್ತದೆ, ಇಲ್ಲಿಂದ ಹೋದ ಮೇಲೂ...' ತನ್ನಲ್ಲಿರಬಹುದಾದ ತಾಮಸೀ ರಾಸಾಯನಿಕ ಸತ್ವದ ಕರಗಿಸುವಿಕೆಗೆ ಇದು ಅನಿವಾರ್ಯವೆಂದು ಹೇಳಲು ಮನ ಪ್ರಲೋಭಿಸಿದರೂ, ತ್ರಿಶಕ್ತಿ-ತ್ರಿಗುಣಾದಿಗಳ ಹಿನ್ನಲೆ ಗೊತ್ತಿರದ ಕುನ್. ಲಗ್ ಜತೆಗೆ ಹೊಸದಾಗಿ ಅದರ ಪ್ರವರ ಆರಂಭಿಸುವ ಮನಸಿಲ್ಲದೆ ನುಡಿದಿದ್ದ ಶ್ರೀನಾಥ.
' ಅದರಲ್ಲೇನು ತಪ್ಪಿಲ್ಲವಾದರು ನೀನು ಕೊಡುತ್ತಿರುವ ಮೊತ್ತ ಎಷ್ಟು ದೊಡ್ಡದೆಂದು ನಿನಗೆ ಗೊತ್ತಿದೆಯೆ ಎಂದು ನನಗೆ ಅನುಮಾನ...ಇದರ ಬದಲು, ನಿನಗೆ ಕೊಡಲೇಬೇಕೆನಿಸಿದರೆ ಅವಳೀಗಷ್ಟಿಷ್ಟು ಹಣ ಕೊಟ್ಟುಬಿಟ್ಟರೂ ಸಾಕು. ಈ ಟ್ರಸ್ಟ್, ಇತ್ಯಾದಿಗಳ ತಲೆನೋವಿರುವುದಿಲ್ಲ.. ನಿಜ ಹೇಳಬೇಕೆಂದರೆ ಅವಳ ಈ ಕೆಲಸಕ್ಕೆ ಸಹಾಯವಾಗಲೆಂದೆ, ನಾವೆ ಅವಳ ಕಾಫಿ ಕ್ಲಬ್ಬಿನ ಆರಂಭವನ್ನು ಮಾಡಿಸಿದ್ದು - ನಮ್ಮಿಂದ ಹೀಗಾದರೂ ಆದಷ್ಟು ಅಳಿಲು ಸೇವೆ ಸಿಗಲೆಂದು... ಆ ಕೆಲಸದಲ್ಲಿ ನಾವು ಮೇಲ್ವಿಚಾರಣೆ ನಡೆಸಲಿ-ಬಿಡಲಿ ಲೆಕ್ಕಕ್ಕೆ ಬರುವುದಿಲ್ಲ.. ಏಕೆಂದರೆ ಅಲ್ಲಿ ಸೇರಬಹುದಾದ ಹಣವೆ ಅಲ್ಪ ಮಟ್ಟದ್ದು..ಅದೇ ನೀನೀಗ ಕೊಡಬಯಸುವ ವೆಚ್ಛ, ಹಾಗೆ ಕೊಟ್ಟು ಸುಮ್ಮನಿದ್ದು ಬಿಡುವಂತದ್ದಲ್ಲ. ಮತ್ತೆ ಒಂದೆರಡು ದಿನದ ವೆಚ್ಛದ ಖರ್ಚಲ್ಲಾ ಇದು...' ಅವನ ತಲೆಗೆ ಮತ್ತಷ್ಟು 'ವ್ಯವಹಾರ ಜ್ಞಾನ' ತುಂಬುವ ಪ್ರಯತ್ನ ಮಾಡುತ್ತ ನುಡಿದಿದ್ದರು, ಕುನ್. ಲಗ್
ಇದೆಲ್ಲವನ್ನು ಮೊದಲೆ ಆಲೋಚಿಸಿಕೊಂಡು ಗಟ್ಟಿಯಾಗಿ ನಿರ್ಧರಿಸಿದ್ದ ಶ್ರೀನಾಥ , ಇದರಿಂದ ವಿಚಲಿತಗೊಳ್ಳಲಿಲ್ಲ.. ಅಲ್ಲದೆ, ಕುನ್. ಲಗ್ ರಿಗೆ ಕೇವಲ ಅಂದಿನ ಘಟನೆಯ 'ಸ್ಥೂಲ' ವಿವರ ಗೊತ್ತಿತ್ತೆ ಹೊರತು, ತದನಂತರ ಅವಳು ಗರ್ಭಿಣಿಯಾಗಿದ್ದು, ನಂತರ 'ಚಿಂಗ್ಮಾಯ್' ಗೆ ಗುಟ್ಟಾಗಿ ಹೋಗಿ ಗರ್ಭ ತೆಗೆಸಿಕೊಂಡು ಬಂದಿದ್ದು ಇತ್ಯಾದಿಯಾಗಿ ಮಿಕ್ಕ ವಿಷಯಗಳೆಲ್ಲ ಗೊತ್ತಿರಲಿಲ್ಲ... ಅವೆಲ್ಲ ಗೊತ್ತಾಗಿದ್ದರೆ ಅವನ ಕುರಿತು ಇನ್ನಾವ ರೀತಿಯ ಕೀಳು ಭಾವನೆ ತಾಳುತ್ತಿದ್ದರೊ, ಏನೊ? ಶ್ರೀನಾಥನ ಅಂತರ್ಯಾತ್ರೆಯ ಮಥನದ ನಂತರ ಆ ದೋಷದ ಸೂಕ್ತ ಪರಿಹಾರವಾಗಬೇಕೆಂದರೆ ಅದು ಆ ಮಕ್ಕಳಿಗೆ ಸಂಬಂಧಪಟ್ಟಂತೆ ಏನಾದರೂ ಆಗಿರಬೇಕೆ ಹೊರತು, ಕೇವಲ ಕುನ್. ಸು ಗೆ ಮಾತ್ರ ಸಹಾಯಕವಾಗುವಂತಿದ್ದರೆ ಸಾಲದು ಎಂದು ಸ್ಪಷ್ಟವಾಗಿ ಅನಿಸಿತ್ತು. ಆದರೆ ಆ ವಿವರವನ್ನೆಲ್ಲ ಕುನ್. ಲಗ್ ಹತ್ತಿರ ಹೇಳಿಕೊಳ್ಳುವಂತಿರಲಿಲ್ಲ. ಅದನ್ನು ಯಾವ ರೀತಿ ಹೇಳಿದರೆ ಕುನ್. ಲಗ್ ಸುಲಭದಲ್ಲಿ ಒಪ್ಪಿಕೊಳ್ಳಬಹುದೆಂದು ಆಲೋಚಿಸುತ್ತಲೆ, ' ಇಲ್ಲಾ ಕುನ್. ಲಗ್.. ಇಂತದ್ದೊಂದು ಉಪಯುಕ್ತ ಕೆಲಸ ಮಾಡಬೇಕೆಂದು ನನಗೆ ಸದಾ ಅನಿಸುತ್ತಿದ್ದರು, ಈ ಪ್ರಾಜೆಕ್ಟಿನ ಸುತ್ತಾಟದಲ್ಲಿ ಒಂದೆಡೆ ನೆಲೆ ನಿಂತು ಖಚಿತವಾಗಿ ಏನೂ ಮಾಡಲಾಗುವುದಿಲ್ಲ.. ಅಲ್ಲದೆ ಕುನ್. ಸು ಮಾಡುತ್ತಿರುವ ಸೇವೆಯ ವಿಧಾನದಲ್ಲಿ ಅವಳಿಗೆ ಯಾವುದೆ ಸಂಘ ಸಂಸ್ಥೆಗಳ ಪ್ರಾಯೋಜಕತ್ವ, ಸಹಾಯ ಸಿಗುವುದು ಕಷ್ಟ... ಅದಕ್ಕೆಂದೆ ನಾನೀ ನಿರ್ಧಾರಕ್ಕೆ ಬಂದು ನಿಮ್ಮ ನಾಯಕತ್ವವಿರುವ ಟ್ರಸ್ಟ್ಯ ನೇತೃತ್ವದಲ್ಲಿ ಈ ಕೆಲಸ ಆಗಲೆಂದು ಬಯಸಿದ್ದು.. ನೇರ ಅವಳಿಗೆ ಕೊಡಬಹುದಾಗಿದ್ದರು, ಅದನ್ನು ಸೂಕ್ತವಾಗಿ ಬಳಸಿಕೊಳ್ಳಲು ಗೊತ್ತಾಗದೆ ಅವಳು ಏಮಾರುವುದು ಬೇಡ ಎಂದಷ್ಟೆ ನನ್ನ ಆಶಯ.. ನಿಮ್ಮ ಜತೆಗೆ ಕುನ್. ತಿರಾಧಾ ಸಹ ಸೇರಿಕೊಂಡು ಸಹಕರಿಸುತ್ತಾಳೆ ಮತ್ತು ಆಗಾಗ್ಗೆ ಮತ್ತಷ್ಟು ನಿರಂತರ ಧನಸಹಾಯ ಒದಗುವಂತೆ ನೋಡಿಕೊಳ್ಳುತ್ತಾಳೆ. ನೀವು ಬರಿಯ ಮೇಲುಸ್ತುವಾರಿಕೆಯ ಮಾಗದರ್ಶನ ನೀಡುತ್ತಿದ್ದರೆ ಸಾಕು.. ಹೀಗಾಗಿ ನಿಮಗೆ ದೊಡ್ಡ ಹೊರೆಯೇನೂ ಆಗದಿದ್ದರೂ, ಯಾವುದೇ ದುರ್ಬಳಕೆಯ ಸಾಧ್ಯತೆಯಿರದ ಒಂದು ನಿಯಂತ್ರಿತ ಕಡಿವಾಣವೂ ಇದ್ದಂತಾಗುತ್ತದೆ.....' ಎಂದ.
' ಸರಿ..ಇದರ ಮೇಲೆ ನಿನ್ನಿಷ್ಟ... ಅದರೆ ಇದನ್ನೆಲ್ಲ ನನ್ನ ಮೂಲಕ ಪರೋಕ್ಷವಾಗಿ ಮಾಡಿಸುವ ಬದಲು, ಈ ಚೆಕ್ಕನ್ನು ನೀನೆ ಅವಳ ಕೈಗೆ ನೇರ ಕೊಡಬಹುದಲ್ಲಾ? ಅದಕ್ಕೆ ಬೇಕಿದ್ದರೆ ನಾನು ವ್ಯವಸ್ಥೆ ಮಾಡುತ್ತೇನೆ.. ಅವಳೆ ಇಲ್ಲಿಗೆ ಬರುವ ಹಾಗೆ..' ಕಡೆಗೂ ಅವನ ಬೇಡಿಕೆಯನ್ನು ಒಪ್ಪಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತ ನುಡಿದಿದ್ದರು ಕುನ್. ಲಗ್
' ನನಗೆ ನೈತಿಕವಾಗಿ ಹಾಗೆ ಮಾಡುವ ಶಕ್ತಿಯಿನ್ನು ಒಗ್ಗೂಡಿಲ್ಲ ಕುನ್. ಲಗ್ .. ಆದರೆ ಅವಳ ಕೈಗೆ ನಾನು ಈ ಚೆಕ್ ಕೊಡಲೆಂದು ಅವಳನ್ನು ಇಲ್ಲಿಗೆ ಬರ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಮಟ್ಟದ ನಿರೀಕ್ಷೆಯ, ನನ್ನ ಮತ್ತೊಂದು ಬೇಡಿಕೆಯಿದೆ ಕುನ್. ಲಗ್..' ಒಂದೊಂದೆ ಪದವನ್ನು ನಿಧಾನವಾಗಿ ಎಚ್ಚರದಿಂದ ಜೋಡಿಸುತ್ತ ನುಡಿದ ಶ್ರೀನಾಥ..
'ಅದೇನದು ಮತ್ತೊಂದು ಬೇಡಿಕೆ...?' ತುಸು ಆಶ್ಚರ್ಯ ಮತ್ತು ಕುತೂಹಲದಲ್ಲಿ ಅವನ ಮುಖ ನೋಡುತ್ತ ಕೇಳಿದರು ಕುನ್. ಲಗ್
'ಅದು.. ಮತ್ತೇನಿಲ್ಲಾ ಕುನ್. ಲಗ್... ಕುನ್. ಸು ಗೆ ಒದಗಿದ ಈ ಪರಿಸ್ಥಿತಿಗೆ ಮತ್ತು ಅವಳು ಕೆಲಸ ಕಳೆದುಕೊಳ್ಳಲಿಕ್ಕೆ ನೇರವಾಗಿಯೊ, ಪರೋಕ್ಷವಾಗಿಯೊ ನಾನೆ ಕಾರಣನಾದೆನೆಂದು ನನಗೆ ವಿಷಾದ ಮತ್ತು ಖೇದವಿದೆ... ಈಗ ತಕ್ಷಣಕ್ಕಲ್ಲದಿದ್ದರು ನಾನು ಹಿಂತಿರುಗಿ ವಾಪಸ್ಸು ಹೋದ ಮೇಲಾದರೂ ಅವಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಸಾಧ್ಯವೆ..? ಅದಾಗುವುದಾದರೆ, ನನ್ನ ಕೀಳರಿಮೆಯ ಅಪರಾಧಿ ಭಾವಕ್ಕೆ ತುಸು ಶಮನರೂಪ ಸಿಕ್ಕಂತಾಗಿ, ನಾನು ಯಾವುದೊ ಪಾಪ ಪ್ರಜ್ಞೆಯಲ್ಲಿ ಸದಾ ತೊಳಲಾಡುವುದು ತಪ್ಪುತ್ತದೆ..' ತಗ್ಗಿಸಿದ ತಲೆಯನ್ನು ಮೇಲೆತ್ತದೆ ತನ್ನಲ್ಲಿರುವ 'ಗಿಲ್ಟಿ' ಫೀಲಿಂಗನ್ನು ನೈಜದಲ್ಲೂ ಅನುಭವಿಸುತ್ತ ಮೆಲುವಾದ ದನಿಯಲ್ಲಿ ವಿನಂತಿಸಿಕೊಂಡ ಶ್ರೀನಾಥ..
ಮತ್ತೆ ಅವನನ್ನೆ ಅರೆಗಳಿಗೆ ದಿಟ್ಟಿಸಿ ನೋಡಿದ ಕುನ್. ಲಗ್ ರಿಗೆ ಒಂದೆಡೆ ಅವನ ಮೇಲೆ ಅನುಕಂಪ, ಮತ್ತೊಂದೆಡೆ ಇದನ್ನು ಇಷ್ಟು ಸಿರಿಯಸ್ಸಾಗಿ ಪರಿಗಣಿಸಿ, ಅಪಕ್ವನಂತೆ ಪೆದ್ದುಪೆದ್ದಾಗಿ ಒದ್ದಾಡುತ್ತಿರುವನಲ್ಲಾ ಎಂಬ ಕನಿಕರ ಭಾವ - ಎರಡೂ ಒಟ್ಟಾಗಿ ಮೂಡಿ ಬಂದಿತ್ತು. 'ಅದೇನೆ ಆಗಲಿ ಪ್ರಾಜೆಕ್ಟಿನಲ್ಲಿ ಅವನು ಕೊಟ್ಟಿದ್ದ ಫಲಿತ ಅಮೋಘವಾದದ್ದು. ಅದರ ಸಂಬಂಧಿತ ಪ್ರಾಜೆಕ್ಟ್ ಬೋನಸ್ಸು ಕೂಡ ಬೇಡವೆಂದುಬಿಟ್ಟವನಿಗೆ, ತಮ್ಮ ಕಡೆಯಿಂದ ಕೃತಜ್ಞತೆಯ ಕುರುಹಾಗಿ ಏನೂ ಮಾಡಲು ಸಾಧ್ಯವಾಗಿರಲಿಲ್ಲ.. ಈಗವನ ಬೇಡಿಕೆಯನ್ನು ಈಡೇರಿಸಿದರೆ ಆ ಕೊರತೆಯನ್ನು ನೀಗಿಸಿದಂತಾಗುವುದಲ್ಲವೆ ? ಅವಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ನಿರ್ಧಾರವಂತೂ ಹೇಗೂ ತಮ್ಮ ವ್ಯಾಪ್ತಿಯಲ್ಲೆ ಬರುವಂತದ್ದು.. ಕೊನೆಗೊಂದು ಎಚ್ಚರಿಕೆ ಕೊಟ್ಟು ಮತ್ತೆ ಬರುವಂತೆ ಹೇಳಿಬಿಟ್ಟರೆ ಸಾಕು... ಅದನ್ನು ಮಾಡಿಬಿಡುವುದೆ ವಾಸಿಯೆ? ಈತ ಇಷ್ಟೆಲ್ಲಾ ಹಣ ಖರ್ಚು ಮಾಡಿಕೊಂಡು ಒದ್ದಾಡುತ್ತಿರುವುದನ್ನು ನೋಡಿದರೆ ಮಾಡುವುದೆ ಸರಿಯೆನಿಸುತ್ತಿದೆ. ಜತೆಗೆ ಕುನ್. ಸೂ ಏನೂ ಬೇರೆಯವಳಲ್ಲ.. ನಮ್ಮವಳೆ ತಾನೆ ? ಒಬ್ಬಂಟಿತನದಲ್ಲಿ ಯಾವುದೊ ಆಕರ್ಷಣೆಗೆ ಸಿಲುಕಿ ಎಡವಿದಳೆಂದ ಮಾತ್ರಕ್ಕೆ, ಮತ್ತೆ ಚೇತರಿಸಿಕೊಂಡು ತಿದ್ದಿಕೊಳ್ಳುವ ಅವಕಾಶ ನೀಡದಿದ್ದರೆ ಅದೂ ಅವಳಿಗಾದ ಅನ್ಯಾಯದಂತೆ ಆಗುವುದಲ್ಲವೆ ? ಸರಿ, ಇದೂ ಒಂದು ಆಗಿ ಹೋಗಲಿ' ಎಂದುಕೊಂಡವರೆ ' ಆಯ್ತು ಕುನ್. ಶ್ರೀನಾಥ.. ನಿನ್ನಾಸೆಯಂತೆ ಆಗಲಿ... ಐ ವಿಲ್ ಹ್ಯಾಂಡಲ್ ಇಟ್.. ಅಲ್ಲಿಗೆ ನಿನ್ನ ಪಟ್ಟಿಯೆಲ್ಲ ಮುಗಿಯಿತೊ ಅಥವಾ ಇನ್ನೇನಾದರೂ ಇನ್ನು ಬಾಕಿಯಿದೆಯೊ..? ' ಎಂದು ಲಘುವಾಗಿ ಛೇಡಿಸುವ ದನಿಯಲ್ಲಿ ನುಡಿದರು ಕುನ್. ಲಗ್
ಅವರು ತನ್ನ ಬೇಡಿಕೆಗೆ ಒಪ್ಪಿ ಮಂಜೂರಾತಿ ನೀಡುತ್ತಿದ್ದಂತೆ, ಹೂವರಳಿದಂತೆ ಅರಳಿದ ಶ್ರೀನಾಥನ ಮುಖಭಾವದ ಪ್ರಕ್ಷೇಪ, ನೇರ ಮನದಾಳಕ್ಕಿಳಿದು ಪ್ರಪುಲ್ಲಿತವಾಗಿ ಹೋಗಿತ್ತು... ಅಷ್ಟು ಸುಲಭದಲ್ಲಿ ಒಪ್ಪದೆ, ತಾನೇನೇನು ವಾದ-ವಿವಾದ ಮಂಡಿಸಬೇಕಾಗುವುದೊ ಎಂದು ಚಿಂತೆಯಲಿದ್ದವನಿಗೆ ಈ ಕಾರ್ಯ ಹೂವೆತ್ತಿದಷ್ಟೆ ಸಲೀಸಾಗಿ ನಡೆದಾಗ ಒಳಗಿಂದ ಹರ್ಷದ ಬುಗ್ಗೆಯೆ ಉಕ್ಕುಕ್ಕಿಕೊಂಡು ಬಂದಂತಾಗಿತ್ತು. ಅದೇ ಹರ್ಷವುಕ್ಕಿಸಿದ ಉತ್ಸಾಹದಲ್ಲಿ. ' ಕೊನೆಯದಾಗಿ ಒಂದೆ ಒಂದು ಬೇಡಿಕೆ... ಇದೇನು ಕಷ್ಟದ್ದಲ್ಲ ಮತ್ತು ನ್ಯಾಯಯುತವಾದದ್ದು ಸಹ. ಕುನ್. ಸೋವಿ ಈ ಪ್ರಾಜೆಕ್ಟಿನಲ್ಲಿ ವಹಿಸಿದ ಪಾತ್ರ ಅಪಾರ ಮಹತ್ವದ್ದು. ಅವನಿಗೆ ಈ ಬಾರಿಯಾದರೂ...'
ಅವನ ಮಾತಿಗೆ ಅದು ಪೂರ್ತಿಯಾಗುವ ಮೊದಲೆ ಗಹಿಗಹಿಸಿ ನಗುತ್ತ ಕುನ್.ಲಗ್, ' ಆ ಚಿಂತೆ ಬಿಡು..ನಾವೀಗಾಗಲೆ ಆ ಬಗ್ಗೆ ಚರ್ಚಿಸಿಯಾಗಿದೆ.. ಈ ಬಾರಿ ಅವನಿಗೆ ಪ್ರಮೋಶನ್ ಸಿಗುವಂತೆ ನೋಡಿಕೊಳ್ಳುವ ಹೊಣೆ ನನಗಿರಲಿ.. ಆಯಿತಾ? ಬೇರೆಯವರದೆಲ್ಲ ಬಿಟ್ಟು ನಿನಗಾಗಿ ಕೇಳುವುದು ಏನೂ ಇಲ್ಲವೆ ನಿನ್ನ ಪಟ್ಟಿಯಲ್ಲಿ..?' ಎಂದರು
' ಇಷ್ಟೆಲ್ಲಾ ನಡೆದ ಮೇಲೂ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸದೆ ಕ್ಷಮಿಸಿ ಬಿಟ್ಟುಬಿಟ್ಟಿದ್ದೀರ.. ಇದಕ್ಕಿಂತೆ ಹೆಚ್ಚೇನು ತಾನೆ ನಿರೀಕ್ಷಿಸಲಿ ಕುನ್. ಲಗ್ ? ನಿಮಗೆ ಹಾಗೂ ಏನಾದರೂ ಮಾಡಲೆ ಬೇಕೆಂದರೆ, ನನ್ನ ಪರವಾಗಿ ಕುನ್. ಸೌರಭ ದೇವನಿಗೆ ಏನಾದರೂ ಮಾಡಿ.. ಪ್ರಾಜೆಕ್ಟಿನಲ್ಲಿ ಅವನಿಲ್ಲದೆ ಹೋಗಿದ್ದರೆ, ನಾನೀ ತರಹದ ಫಲಿತಾಂಶ ಕೊಡುವುದು ಸುಲಭದಲ್ಲಿ ಸಾಧ್ಯವಾಗುತ್ತಿರಲಿಲ್ಲ.. ಅದು ಗೊತ್ತಿದ್ದರೂ, ನಾನು ನನ್ನ ಕಡೆಯಿಂದ ಏನೂ ಪುರಸ್ಕಾರ ಮಾಡಲಾಗುವುದಿಲ್ಲ - ನೂರೆಂಟು ನೀತಿ, ನಿಯಮಾವಳಿ, ಅಡೆತಡೆಗಳ ನೆಪ ತೋರಿಸುತ್ತಾರೆ ಆಫೀಸಿನಲ್ಲಿ.. ನೀವವನ ಕೆಲಸ ಮತ್ತು ಕಾಣಿಕೆಯನ್ನು ನೋಡಿದ್ದೀರ.. ಅವನೂ ಇನ್ನೇನು ವಾಪಸ್ಸು ಹೊರಡುವ ಸಿದ್ದತೆಯಲ್ಲಿದ್ದಾನೆ.. ನಿಮಗೇನಾದರೂ ಮಾಡಬೇಕೆನಿಸಿದರೆ ಅವನಿಗೆ ಮಾಡಿ. ಇನ್ನು ಚಿಕ್ಕ ಹುಡುಗ - ಜೀವನ ಪೂರ್ತಿ ನೆನಪಲ್ಲಿಟ್ಟುಕೊಂಡು ಕಂಪನಿಗೆ ಬದ್ಧನಾಗಿರಲು ಪ್ರೋತ್ಸಾಹಿಸುವಂತೆ ಸಹಾಯವಾದರೂ ಆಗಬಹುದು...' ಎಂದ
ಮತ್ತೆ ಕಿರುನಗೆ ನಕ್ಕ ಕುನ್ ಲಗ್, ' ಆಲ್ ರೈಟ್.ಅದೂ ಆಗಿಹೋಗಲಿ ಬಿಡು ..' ಎಂದವರೆ ಮಾತು ಮುಗಿಸಿ ಮೇಲೆದ್ದರು. ಎಂದಿಲ್ಲದ ಅತೀವ ಸಮಾಧಾನ, ನೆಮ್ಮದಿಯ ಭಾವದಲ್ಲಿ ತಾನೂ ಮೇಲೆದ್ದಿದ್ದ ಶ್ರೀನಾಥನ ಮನದಲ್ಲಿ ದೊಡ್ಡದೊಂದು ಹೊರೆಯಿಳಿದ ಭಾವದ ಪ್ರತೀಕವಾಗಿ, ನೆಮ್ಮದಿಯ ನಿಟ್ಟುಸಿರೊಂದು ತಾನಾಗಿ ಹೊರಬಿದ್ದಿತ್ತು. ಯುದ್ಧದ ಮೊದಲಿನೊಂದೆರಡು ಪುಟ್ಟ ಕದನಗಳನ್ನು ಗೆದ್ದಾಗುಂಟಾಗುವ ಸಂತೃಪ್ತ ಭಾವವದು.
ಆದರೆ ಅದೆ ಹೊತ್ತಿನಲ್ಲಿ , ಅಲ್ಲಿಂದ ಮತ್ತೊಂದೆಡೆ ದೂರದಲೆಲ್ಲೊ, ಮತ್ತಿಬ್ಬರ ನಡುವೆ ನಡೆಯುತ್ತಿರುವ ಮತ್ತೊಂದು ಸಂಭಾಷಣೆ, ತನ್ನ ಸುತ್ತಲೆ ಹೆಣೆಯುತ್ತಿರುವ ಮತ್ತೊಂದು ಕುಟಿಲ-ಕುತಂತ್ರ ಕಾರಾಸ್ಥಾನಕ್ಕೆ, ಮತ್ತೊಂದು ಅಭೂತಪೂರ್ವ ಪಂಥಕ್ಕೆ ನಾಂದಿ ಹಾಡುತ್ತಿದೆಯೆಂದು ಶ್ರೀನಾಥನಿಗೆ ಆಗಿನ್ನೂ ಗೊತ್ತಾಗಿರಲಿಲ್ಲ...!
ಏಕೆಂದರೆ, ಕುನ್. ಲಗ್ ಮತ್ತು ಶ್ರೀನಾಥನ ನಡುವಿನ ಸಂಭಾಷಣೆ ನಡೆಯುತ್ತಿದ್ದ ಅದೇ ಹೊತ್ತಿನಲ್ಲಿ, ಸಿಂಗಪುರ ಮತ್ತು ಭಾರತದ ನಡುವೆ ನಡೆಯುತ್ತಿದ್ದ ಆ ಮತ್ತೊಂದು ಸಂಭಾಷಣೆ, ಹಿನ್ನಲೆಯಲ್ಲಿ ಮತ್ತೊಂದು ಹೊಸ ಕಥಾನಕಕ್ಕೆ ಮುನ್ನುಡಿಯಾಗಿ ರೂಪುಗೊಳ್ಳುತ್ತಿತ್ತು ಶ್ರೀನಾಥನ ಅರಿವಿಗೆ ಬರದಂತೆಯೆ... ಆ ಸಂಭಾಷಣೆ ನಡೆಯುತ್ತಿದ್ದುದು ಸಿಂಗಪುರದ ಆಫೀಸಿನಲಿದ್ದ ಶ್ರೀನಿವಾಸ ಪ್ರಭು ಮತ್ತು ಭಾರತದಲ್ಲಿದ್ದ ದೊಡ್ಡ ಬಾಸ್ ಸುಬ್ರಮಣ್ಯಂ ನಡುವೆ... ಚರ್ಚೆಯ ವಿಷಯ ಮುಂದಿನದೊಂದು ಪ್ರಾಜೆಕ್ಟ್ ನಿಭಾಯಿಸುವಿಕೆಯ ಕುರಿತಾದದ್ದು..
' ಮುಂದಿನ ಪ್ರಾಜೆಕ್ಟ್ ಇಂಡೋನೇಶೀಯಾದ ಜಕಾರ್ತದಲ್ಲಿ ಅನ್ನೋದು ಈಗ ಕನ್ಫರ್ಮ್ ಆಯ್ತಾ...?' ಖಚಿತಪಡಿಸಿಕೊಳ್ಳುವಂತೆ ಕೇಳಿದ್ದರು ಸುಬ್ರಮಣ್ಯಂ..
'ನೂರಕ್ಕೆ ನೂರು ಕನ್ಫರ್ಮ್ ಮಣಿ ಸಾರ್.. ಆ ಎಂಡಿ ಜತೆಗಿನ ಮೀಟಿಂಗಿನಲ್ಲಿ ನಾನೇ ಇದ್ದೆನಲ್ಲಾ..? ಮೊದಲಿಗೆ ಇಂಡೋನೇಶಿಯಾ ಮುಗಿಸಿ ಆ ನಂತರ ಫಿಲಿಫೈನ್ಸ್, ವಿಯೆಟ್ನಾಮುಗಳನ್ನ ತೆಗೆದುಕೊಳ್ಳಬೇಕು ಅಂತ ಅವರಾಗಲೆ ಡೈರೆಕ್ಷನ್ ಕೊಟ್ಟು ಬಿಟ್ಟಿದ್ದಾರೆ.. ಬಿಜಿನೆಸ್ ಪ್ಲಾನಿನಲ್ಲಿ ಇವೆಲ್ಲ ಬಡ್ಜೆಟ್ ಮಾಡಿ ಕೂಡಾ ಆಗಿದೆ...' - ಅದು ಶ್ರೀನಿವಾಸ ಪ್ರಭುವಿನ ದನಿ.
' ಆದರೆ ಆ ಮೂರಕ್ಕೆ ಹೋಲಿಸಿದರೆ ಇಂಡೋನೇಶಿಯಾ ಪ್ರಾಜೆಕ್ಟ್ ಚಿಕ್ಕದಲ್ಲವಾ? ಅಲ್ಲಿ ಆಫೀಸು ತೆಗೆದು ತುಂಬಾ ವರ್ಷಗಳೇನೂ ಆಗಿಲ್ಲ ಎಂದು ನೀನೆ ಹೇಳಿದ್ದೆ..? ಅದಕ್ಕಿಂತ ದೊಡ್ಡ ಫಿಲಿಫೈನ್ಸ್ ಅಥವಾ ವಿಯಟ್ನಾಂ ಪ್ರಾಜೆಕ್ಟು ಮೊದಲು ಮಾಡದೆ ಇಂಡೋನೇಶಿಯಾಕ್ಕೆ ಯಾಕೆ ಮೊದಲ ಪ್ರಿಯಾರಿಟಿ ಕೊಡುತ್ತಿದ್ದಾರೆ..?' ಅರ್ಥವಾಗದ ಗೊಂದಲದಲ್ಲಿ ಕೇಳಿದ್ದರು ಸುಬ್ರಮಣ್ಯಂ.
ಇದೆಲ್ಲಾ ಪ್ರಶ್ನೆಗಳನ್ನು ಮೊದಲೆ ಊಹಿಸಿದ್ದವನಂತೆ ಶ್ರೀನಿವಾಸ ಪ್ರಭುವಿನ ಉತ್ತರ ಆಗಲೆ ಸಿದ್ದವಾಗಿತ್ತು ' ಬಹುಶಃ ಅದೇ ಆಗುತ್ತಿತ್ತೇನೊ..? ಆಡಿಟ್ಟಿನಲ್ಲಿ ಇಂಡೋನೇಶಿಯಾದ ಆಫೀಸಿನಿಂದ ದೊಡ್ಡ ದೊಡ್ಡ ತೊಂದರೆಗಳು ಬರದಿದ್ದ ಪಕ್ಷದಲ್ಲಿ... ಅಲ್ಲಿನ ಲೋಕಲ್ ಮ್ಯಾನೇಜ್ಮೆಂಟು ಸರಿಯಾದ ಸಿಸ್ಟಮ್ ಇಲ್ಲದ ಕಾರಣ ಯಾವ ಆಳದ ನಿಯಂತ್ರಣ-ಹತೋಟಿ ಸಾಧ್ಯವಿಲ್ಲವೆಂದು, ಆಡಿಟ್ ಫೈಂಡಿಂಗ್ಸಿನಲ್ಲಿರುವ ವಿಷಮ ತರ ದೋಷಗಳಿಗೆಲ್ಲ ಅದೇ ಮೂಲ ಕಾರಣವೆಂದು ಕೈ ತೊಳೆದುಕೊಳ್ಳುವ ಹವಣಿಕೆಯಲ್ಲಿದೆ.. ಇದೆಲ್ಲಾ ಒಂದೇ ಬಾರಿಗೆ ಶಂಕಾತೀತವಾಗಿ ಪರಿಹಾರ ಕಾಣಬೇಕೆಂದರೆ, ಈ ಪ್ರಾಜೆಕ್ಟನ್ನು ಬೇರೆಯದಕ್ಕಿಂತ ಮೊದಲೆ ಮಾಡಿ ಮುಗಿಸಬೇಕೆಂದು ನಿಷ್ಕರ್ಷಿಸಿ, ಅದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ...'
' ಆದರೆ ಪ್ರಭು, ದಿಸ್ ಇಸ್ ಗೋಯಿಂಗ್ ಟು ಬಿ ಯೆ ವೆರಿ ಸ್ಮಾಲ್ ಪ್ರಾಜೆಕ್ಟ್ ಫಾರ್ ಅಸ್... ನಿನಗೆ ಗೊತ್ತಿರುವ ಹಾಗೆ ಈ ಪ್ರಾಜೆಕ್ಟುಗಳಿಂದ ವೀ ಆರ್ ನಾಟ್ ಮೇಕಿಂಗ್ ಮನಿ.. ದಿ ರೇಟ್ಸ್ ವಿ ಗೆಟ್ ಅಂಡ್ ಪ್ರಾಫಿಟ್ ವೀ ಅರ್ನ್ ಆರ್ ಪೀ ನಟ್ಸ್... ಕೈಲಿರುವ ಕಸ್ಟಮರನ್ನ ಬಿಡಬಾರದು ಮತ್ತೆ, ನಿನ್ನನ್ನಲ್ಲಿರಿಸಲೊಂದು ದಾರಿ ಸಿಗುತ್ತದೆನ್ನುವ ಕಾರಣ ಬಿಟ್ಟರೆ ಮತ್ಯಾವ ಇನ್ಸೆಂಟೀವ್ ಕೂಡ ಅಲ್ಲಿ ಕಾಣುವುದಿಲ್ಲ.. ಸಾಲದ್ದಕ್ಕೆ ಕಾಂಪ್ಲೆಕ್ಸಿಟಿ, ಸ್ಕೋಪು, ಡ್ಯೂರೇಶನ್ನಿನ ಕ್ಲಾರಿಟಿ ಬೇರೆ ಗೊತ್ತಿಲ್ಲ.. ಅದರ ಬಗೆ ಏನಾದರೂ ಸುದ್ದಿ ಇದೆಯೆ...?'
'ಮಣಿ ಸಾರ್, ಈಗೆಲ್ಲಾ ವಿವರವೂ ಗೊತ್ತಾಗಿದೆ.. ಆದರೆ ಅದಕ್ಕೆ ಮೊದಲು ನನ್ನ ಆರ್ಗ್ಯುಮೆಂಟ್ ಸ್ವಲ್ಪ ಕೇಳಿ.. ಇದುವರೆವಿಗೆ ನಾವು ಬರಿ ಬಾಡಿ ಶಾಪಿಂಗಿನ ಮಾಡಲ್ಲಿನಲ್ಲಿ ಬಿಜಿನೆಸ್ ಮಾಡುತ್ತಿರುವುದು - ಈಗ ತಾನೆ ಮುಗಿದ ಥಾಯ್ಲ್ಯಾಂಡ್ ಪ್ರಾಜೆಕ್ಟ್ ಸೇರಿದ ಹಾಗೆ.. ಅದರಲ್ಲಿ ನಮಗೆ ಹೆಚ್ಚು ಲಾಭ ಸಾಧ್ಯವಿಲ್ಲ... ಬರಿ ರಿಸೋರ್ಸ್ ಬಿಲ್ಲಿಂಗ್ ಅಂದರೆ - ಮಾನವ ಸಂಪನ್ಮೂಲ ಬಾಡಿಗೆಗೆ ಕೊಟ್ಟು 'ಪರ್ಸನ್-ಮಂತ್' ಬಿಲ್ಲಿಂಗ್ ಮಾಡುವುದು ಬಿಟ್ಟರೆ ಮತ್ತೇನು ಆದಾಯ ಸಾಧ್ಯವಿಲ್ಲ.. ಆದೇ ಈ ಥಾಯ್ಲ್ಯಾಂಡ್ ಪ್ರಾಜೆಕ್ಟಿನ ಯಶಸ್ಸನ್ನು ಆಧಾರವಾಗಿಟ್ಟುಕೊಂಡು, ಇಂಡೋನೇಶಿಯಾದ ಪ್ರಾಜೆಕ್ಟ್ ಪೂರ್ತಿ ನಮಗೆ ಕೊಡಿ ಎಂದರೆ ನಮ್ಮ ಕೈಗೆ ಸುಲಭವಾಗಿ ಸಿಕ್ಕಿಬಿಡುತ್ತದೆ - ಈಗ ನಮ್ಮಲ್ಲಿ ಅಷ್ಟು ನಂಬಿಕೆಯಿದೆ ಅವರಿಗೆ... ಈಗವರು ಆಡಿಟ್ ತೊಡಕಿನಲ್ಲಿರುವುದರಿಂದ, ಈ ಪ್ರಾಜೆಕ್ಟು ಕೂಡ ಅರ್ಜೆಂಟಿನಲ್ಲಿಯೆ ಆಗಬೇಕು.. ನಿಧಾನವಾಗಿ ಬೇರಾರನ್ನೊ ಹುಡುಕಿ ಮಾಡುವಷ್ಟು ಸಮಯವೂ ಇಲ್ಲಾ.. ಸೋ ಇಟ್ ಇಸ್ ಎನ್ ಆಪರ್ಚುನಿಟೀ ಫಾರ್ ಅಸ್.. ಇದಾಗ ನಮ್ಮ ಮೊಟ್ಟಮೊದಲ ಅಧಿಕೃತ ಪ್ರಾಜೆಕ್ಟ್ ಆಗುತ್ತದೆ, ಈ ಪ್ರಾಜೆಕ್ಟ್ ಬಿಲ್ಲಿಂಗ್ ಮಾಡೆಲ್ ನಲ್ಲಿ.. ಈ ಇಂಡೋನೇಶಿಯಾ ಪ್ರಾಜೆಕ್ಟ್ ಸಕ್ಸಸ್ ಆಯ್ತೆಂದರೆ, ಇನ್ನು ಮುಂದೆ ಯಾವುದೆ ಪ್ರಾಜೆಕ್ಟ್ ಆದರೂ ಅದು ನಮ್ಮ ಕೈಗೆ ಸಿಗುವುದು ಗ್ಯಾರಂಟಿ.. ಫಿಲಿಫೈನ್ಸ್, ವಿಯಟ್ನಾಂ ಸೇರಿದಂತೆ. ಜತೆಗೆ ಬಿಜಿನೆಸ್ ವಿಸ್ತರಣೆಯ ಭವಿಷ್ಯದ ಪ್ಲಾನ್ಸ್ ನೋಡಿದರೆ, ಇನ್ನೊಂದು ಹತ್ತು ವರ್ಷ ಒಂದಲ್ಲ ಒಂದು ಪ್ರಾಜೆಕ್ಟ್ ನಡೆದೆ ಇರುತ್ತದೇನೊ..' ಎಚ್ಚರಿಕೆಯಿಂದ ನಿಧಾನವಾಗಿ ಕೇಸ್ ಬಿಲ್ಡ್ ಮಾಡುತ್ತ ಹೋದ ಶ್ರೀನಿವಾಸ ಪ್ರಭು ಮಧ್ಯದಲ್ಲಿಯೆ ಮಾತು ನಿಲ್ಲಿಸಿದ್ದ, ಅದರ ಪರಿಣಾಮ ಎಷ್ಟಾಗಿದೆಯೆಂದು ನೋಡಲು...
'ಪ್ರಾಜೆಕ್ಟ್ ಬೇಸಿಸ್' ಎಂದ ತಕ್ಷಣ ಸುಬ್ರಮಣ್ಯಂ ಕಿವಿ ಚುರುಕಾಗಿತ್ತು... ಕಂಪನಿಯ ಸ್ಟ್ರಾಟೆಜಿ ಮೀಟಿಂಗುಗಳಲ್ಲಿ ಆ ದಿಶೆಯತ್ತ ಗಮನ ಹರಿಸಬೇಕೆಂದು ಈಗಾಗಲೆ ಮಾತು ಶುರುವಾಗಿತ್ತಾಗಿ, ಆ ಬಗೆಯ ಅವಕಾಶ ಸಿಕ್ಕಿದರೆ ಅದನ್ನು ಬಿಡುವಷ್ಟು ಮೂರ್ಖರಾಗಿರಲಿಲ್ಲ ಅವರು. ಅದರ ಸುಳಿವರಿತೆ ಆ 'ಪ್ರಾಜೆಕ್ಟ್ ಬಿಲ್ಲಿಂಗ್ ಉಪಾಯದ ಹುಳು' ಬಿಟ್ಟಿದ್ದ ಶ್ರೀನಿವಾಸ ಪ್ರಭು..
' ದಟ್ ಇಸ್ ನಾಟ್ ಎ ಬ್ಯಾಡ್ ಐಡಿಯಾ... ಆದರೆ ಆಲ್ ಡಿಪೆಂಡ್ಸ್ ಆನ್ ಬಾಟಮ್ ಲೈನ್ ಅಂಡ್ ಟಾಪ್ ಲೈನ್... ಹೌ ಬಿಗ್ ಇಸ್ ದ ಮನಿ ವೀ ಆರ್ ಟಾಕಿಂಗ್ ಅಬೌಟ್..?' ಕೇಳಿದ್ದರು ಸುಬ್ರಮಣ್ಯಂ..
'ಮಣಿ ಸಾರ್... ನಾವೇನಾದರೂ ಇಲ್ಲಿ ಟಾಪ್ ಲೈನ್ (ಟರ್ನೋವರ) ಲೆಕ್ಕಾಚಾರಕ್ಕೆ ಹೋದರೆ ನಮ್ಮ ಕೈಗೆ ಪ್ರಾಜೆಕ್ಟೆ ಸಿಗುವುದಿಲ್ಲ ಅಷ್ಟೆ.. ಇಲ್ಲೇನಿದ್ದರೂ 'ರೆಫರೆನ್ಸ್ ಕೇಸ್' ಆಗುವ ಹಾಗೆ ಮೊದಲ ಯಶಸ್ವಿ ಪ್ರಾಜೆಕ್ಟ್ ಆಗಿಸುವ ಗುರಿಯಿಟ್ಟುಕೊಳ್ಳಬೇಕು.. ಗಾತ್ರ, ಉದ್ದ, ಅಗಲ ಎಲ್ಲವನ್ನು ಒತ್ತಟ್ಟಿಗಿಟ್ಟು.. ಅಫ್ ಕೋರ್ಸ್ ಪ್ರಾಜೆಕ್ಟ್ ನಷ್ಟದಲ್ಲಿ ಮಾಡಬೇಕು ಅಂದಲ್ಲ ಅದರರ್ಥ.. ವೀ ಶುಡ್ ಸ್ಟಿಲ್ ಅರ್ನ್ ಪ್ರಾಫಿಟ್ ಲೈಕ್ ಎ ಪ್ರಾಜೆಕ್ಟ್... ನನ್ನ ಪ್ರಕಾರ ನಾಟ್ ಲೆಸ್ ದೆನ್ ಟ್ವೆಂಟಿ ಪರ್ಸೆಂಟ್ ಅಟ್ಲೀಸ್ಟ್ - ಕನಿಷ್ಠ ಶೇಕಡ ಇಪ್ಪತ್ತು ಪರ್ಸೆಂಟ್ ಪ್ರಾಫಿಟ್ ನಮ್ಮ ಗುರಿಯಾಗಿರಬೇಕು.. ಆ ರೀತಿ ನಿಭಾಯಿಸಬೇಕು..'
' ಪ್ರಭು ನಿನ್ನ ಮಾತಿನ್ನು ಪೂರ್ತಿಯಾಗಿ ನನಗರ್ಥವಾಗುತ್ತಿಲ್ಲಾ.. ಹೋಗಲಿ ಮೊದಲು ಇದೆಷ್ಟು ಬಡ್ಜೆಟ್, ಏನು ಸ್ಕೋಪಿನ ಪ್ರಾಜೆಕ್ಟ್ ಅನ್ನುವುದು ಹೇಳು..'
' ಮಣಿ ಸಾರ್.. ಇಂಡೋನೇಶಿಯ ಆಫೀಸ್ ಹೊಸದು ಮತ್ತು ಚಿಕ್ಕದು.. ಸೋ ಡೋಂಟ್ ಎಕ್ಸ್ ಪೆಕ್ಟ್ ಬಿಗ್ ಬಡ್ಜೆಟ್... ಆದರೆ ನೀವು ನನ್ನ ಐಡಿಯಾ ಫಾಲೊ ಮಾಡಿದರೆ ಮಾಮೂಲಿ 'ಕಾಸ್ಟ್ ಪ್ಲಸ್' ವಿಧಾನದಲ್ಲಿ ಬರುವ ಬಿಲ್ಲಿಂಗಿಗಿಂತ ನಾಲ್ಕು ಪಟ್ಟು ಲಾಭ ಅಷ್ಟೆ ಸಮಯದಲ್ಲಿ ಪಡೆಯಬಹುದು...!'
'ಸ್ಟಿಲ್ ಐಯಾಂ ಅಟ್ ಲಾಸ್.. ಪ್ಲೀಸ್ ಎಕ್ಸ್ ಪ್ಲೇನ್..'
' ಸರಿ.. ಗೊತ್ತಿರುವ ವಿವರಗಳನ್ನು ಹೇಳಿಯೆಬಿಡುತ್ತೇನೆ ನೋಡಿ... ಇಲ್ಲಿ ಟೈಂ ಪ್ರೆಷರ್ ಇರುವುದರಿಂದ ಪ್ರಾಜೆಕ್ಟನ್ನ ಐದೆ ತಿಂಗಳಲ್ಲಿ ಮುಗಿಸಬೇಕೆಂದು ಕೇಳುತ್ತಿದ್ದಾರೆ.. ಅದು ಮೊದಲ ಕಂಡೀಷನ್.. '
' ವಾಟ್...? ಆರ್ ಯೂ ಜೋಕಿಂಗ್ ? ಸಿಂಗಪುರ, ಮಲೇಶಿಯಾಕ್ಕೆ ಮೂರು ವರ್ಷ, ಥಾಯ್ಲ್ಯಾಂಡಿಗೆ ಎರಡು ವರ್ಷ ಮಾಡಿದ ಪ್ರಾಜೆಕ್ಟ್ ಇಂಡೋನೇಶಿಯಾಗೆ ಐದೆ ತಿಂಗಳಲ್ಲಿ ಮುಗಿಸಬೇಕಾ... ? ಇಸ್ ಇಟ್ ನಾಟ್ ಎ ಬಿಗ್ ರಿಸ್ಕ್..?'
'ಹೌದು ಮಣಿ ಸಾರ್..ಬಿಗ್ ರಿಸ್ಕ್ ಅಂಡ್ ಬಿಗ್ ಆಪರ್ಚುನಿಟಿ ಇಫ್ ವೀ ಕ್ಯಾನ್ ಪುಲ್ ಥ್ರೂ... ಅದು ಹೇಗೆ ಸಾಧ್ಯ ಅನ್ನೊ ಐಡಿಯಾ ನನ್ನ ಹತ್ತಿರ ಇದೆ.. ಮೊದಲು ಪೂರ್ತಿ ಕೇಳಿ.. ಇದು ಚಿಕ್ಕ ಪ್ರಾಜೆಕ್ಟ್ ಮತ್ತು ಕಾನೂನಿಗೆ ಸಂಬಂಧಿಸಿದ ಲೀಗಲ್ ಗ್ಯಾಪ್ಸ್ ಬಿಟ್ಟರೆ ಮತ್ತಾವ ಡೆವಲಪ್ಮೆಂಟ್ ವರ್ಕ್ ಸ್ಕೋಪಿನಲ್ಲಿರುವುದಿಲ್ಲ.. ಅಲ್ಲದೆ ಎಲ್ಲಾ ಪ್ರೋಸೆಸ್ಸುಗಳು ಈಗಾಗಲೆ ಸಿಂಗಾಪುರದಲ್ಲೊ, ಥಾಯ್ಲ್ಯಾಂಡಿನಲ್ಲೊ ಮಾಡಿ ಆಗಿರುವ ಪ್ರೊಸೆಸ್ಸುಗಳಾಗಿರಬೇಕೆ ಹೊರತು ಹೊಸದಾಗಿ ಮಾಡುವ ಅಗತ್ಯ ಮತ್ತು ಅವಕಾಶವಿರುವುದಿಲ್ಲ.. ಅಂದರೆ ಇದೊಂದು ದೊಡ್ಡ 'ಇಂಪ್ಲಿಮೇಂಟೇಷನ್' ಪ್ರಾಜೆಕ್ಟಾಗುವ ಬದಲು ಕೇವಲ ' ಸಲ್ಯೂಷನ್ ರೋಲ್ ಔಟ್' ಪ್ರಾಜೆಕ್ಟ್ ಆಗುವಂತೆ ಮಾಡಬೇಕಷ್ಟೆ... ಸರಳ ಭಾಷೆಯಲ್ಲಿ ಹೇಳುವುದಾದರೆ ಇಂಟೆಲಿಜೆಂಟು 'ಕಾಪಿ ಅಂಡ್ ಪೇಸ್ಟ್' ಮಾಡಿದರೆ ಸಾಕು... ಕಾಂಪ್ಲೆಕ್ಸಿಟಿಯ ವಿಷಯಕ್ಕೆ ಬಂದರೆ ಹೆಚ್ಚು ಕಡಿಮೆ ಥಾಯ್ಲ್ಯಾಂಡಿನ ಪ್ರೊಸೆಸ್ ಹೋಲಿಕೆಗೆ ಹತ್ತಿರವಿರುವ ಕಾರಣ ಅದನ್ನೆ ಟೆಂಪ್ಲೇಟ್ ತರ ಬಳಸಿಕೊಳ್ಳಬಹುದು.. '
' ಹೌ ಮಚ್ ಮನಿ ವೀ ಆರ್ ಟಾಕಿಂಗ್ ಅಬೌಟ್...? ಪ್ರಾಜೆಕ್ಟ್ ಬಡ್ಜೆಟ್ ಎಷ್ಟು..?' ಅವನಿನ್ನು ಹಣಕ್ಕೆ ಸಂಬಂಧಿಸಿದ ವಿಷಯ ಮಾತಾಡದೆ ಬರಿ ಅತ್ತಿತ್ತಲೆ ಗಿರಕಿ ಹೊಡೆಯುತ್ತಿರುವುದನ್ನು ಕಂಡು ರೋಸಿದ ದನಿಯಲ್ಲಿ ನುಡಿದಿದ್ದರು ಸುಬ್ರಮಣ್ಯಂ..
' ಸೆವೆಂಟಿ ಥೌಸಂಡ್ ಡಾಲರ್ಸ್.. ಎಪ್ಪತ್ತು ಸಾವಿರ...ಐದು ತಿಂಗಳಿಗೆ...'
ಅದನ್ನು ಕೇಳಿ ಅತ್ತ ಕಡೆ ಬೆಚ್ಚಿ ಬಿದ್ದಿದ್ದರು ಸುಬ್ರಮಣ್ಯಂ, ' ಈ ಥಾಯ್ಲ್ಯಾಂಡ್ ಪ್ರಾಜೆಕ್ಟಿನಲ್ಲಿ ಎರಡು ವರ್ಷ ಆರು ಜನಕ್ಕೆ ಬಿಲ್ಲಿಂಗ್ ಮಾಡಿದ್ದು.. ಒಟ್ಟು ಬಡ್ಜೆಟ್ಟೆ ಹತ್ತಿರ ಹತ್ತಿರ ಆರುನೂರು ಸಾವಿರ ಡಾಲರು..ನಮ್ಮ ಬಿಲ್ಲಿಂಗಿನಲ್ಲೆ ತಿಂಗಳಿಗೆ ಕಡಿಮೆಯೆಂದರೂ ಖರ್ಚೆಲ್ಲಾ ಕಳೆದು, ಆರು ಸಾವಿರ ಲಾಭ ಸಿಗುತ್ತಿತ್ತು.. ಆಂದರೆ ವರ್ಷಕ್ಕೆ ಎಪ್ಪತ್ತು ಸಾವಿರ ಲಾಭವೆ ಇರುತ್ತಿತ್ತು, ಗೊತ್ತಾ?' ಎಂದರು.
' ಅದು ಆರು ಜನ - ಹನ್ನೆರಡು ತಿಂಗಳು - ಎಪ್ಪತ್ತೆರಡು ಸಾವಿರ.. ಅಂದರೆ ತಿಂಗಳಿಗೆ ಒಬ್ಬನಿಗೊಂದು ಸಾವಿರ ಲಾಭದ ಲೆಕ್ಕ.. ಆದರಿಲ್ಲಿ ನಾನು ಹೇಳುತ್ತಿರುವುದು ಮೂರು ಜನ, ಐದೊ ಆರೊ ತಿಂಗಳು, ಒಟ್ಟು ಲಾಭ ಮೂವತ್ತಾರು ಸಾವಿರ, ಅಂದರೆ ಒಬ್ಬನಿಗೆ ತಿಂಗಳಿಗೆ ಎರಡು ಸಾವಿರ.. ಈಗಿರುವ ಸಾವಿರದ ಡಬಲ್..ಮೂರು ಜನರ ಬದಲು ಇಬ್ಬರು ಅಥವ ಎರಡೂವರೆಯಲ್ಲೆ ಮ್ಯಾನೇಜ್ ಮಾಡಿದರೆ ಇನ್ನೂ ಲಾಭ... ಅಲ್ಲದೆ ಇಲ್ಲಿ ನಮ್ಮ ವೆಚ್ಚ ತಗ್ಗಿಸಿಕೊಳ್ಳುವ ಇನ್ನೊಂದು ಅವಕಾಶವೂ ಇದೆ.. ಅದನ್ನು ಬಳಸಿಕೊಂಡರೆ ಅಲ್ಲಿ ಉಳಿದ ಹಣವೂ ನೇರ ಲಾಭಕ್ಕೆ ಸೇರಿಕೊಳ್ಳುತ್ತದೆ...'
'ಅದ್ಯಾವ ವೆಚ್ಚಾ..?'
' ಮಂತ್ಲೀ ರಿಸೋರ್ಸ್ ಕಾಸ್ಟ್.. ನಾವು ಪ್ರಾಜೆಕ್ಟ್ ಬೇಸಿಸ್ ಮೇಲೆ ಆರ್ಡರ ತೆಗೆದುಕೊಂಡರೂ, ನಮ್ಮ ತಂಡದವರಿಗೆ ಕೊಡುವುದು ಮಾಮೂಲಿ ತಿಂಗಳ ಲೆಕ್ಕಾಚಾರದಲ್ಲೆ ತಾನೆ..?'
' ಅದು ಸರಿ.. ಆದರೆ ಅದರಲ್ಲಿ ಕಡಿತವೆಲ್ಲಿ ಬಂತು? ಕೊಡುವಷ್ಟು ಕೊಡಲೆ ಬೇಕಲ್ಲಾ?'
' ಇಲ್ಲಾ ಮಣಿ ಸಾರ್.. ಅಲ್ಲೆ ಕ್ಯಾಚ್ ಇರುವುದು... ಇಂಡೋನೇಶಿಯ ಲೋ ಕಾಸ್ಟ್ ಕಂಟ್ರಿ... ಅರ್ಥಾತ್ ಅಲ್ಲಿನ ಖರ್ಚು ವೆಚ್ಚಗಳು, ಜೀವನ ನಿರ್ವಹಣಾ ಮೊತ್ತ ಇಲ್ಲಿಗಿಂತ ಕಡಿಮೆ.. ಅದರ ಆಧಾರದ ಮೇಲೆ ನಾವು ಕೊಡುವ ಅಲೋವೆನ್ಸನ್ನು ಸುಮಾರು ನಲ್ವತ್ತು ಪರ್ಸೆಂಟ್ ಕಡಿಮೆ ಮಾಡಿಬಿಡಬಹುದು...'
' ನಲವತ್ತು ಪರ್ಸೆಂಟ್..! ಅಷ್ಟೊಂದು ಸಾಧ್ಯವೆ..?' ಚಕಿತ ದನಿಯಲ್ಲಿ ಕೇಳಿದ್ದರೂ, ಅದು ಸಾಧ್ಯವಾದರೆ ಲಾಭವೇನು ಕಡೆಗಣಿಸುವಂತಿರುವುದಿಲ್ಲ ಎಂದಾಗಲೆ ಅನಿಸತೊಡಗಿತ್ತು ಅವರ ಮನದಾಳದಲ್ಲಿ..
' ನಲವತ್ತು ಕನ್ಸರ್ವೇಟಿವ್ ಎಸ್ಟಿಮೇಟ್ .. ನನ್ನ ಪ್ರಕಾರ ಐವತ್ತರ ತನಕವೂ ಸಾಧ್ಯವಿರಬಹುದೇನೊ..?'
' ಬಟ್ ಪ್ರಭು.. ಡು ಯೂ ಥಿಂಕ್ ಇಟ್ ವರ್ಕ್ಸ್..? ಇ ಹ್ಯಾವ್ ಮೈ ವೋನ್ ಡೌಟ್ಸ್...' ಸುಬ್ರಮಣ್ಯಂಗಿನ್ನು ನಂಬಿಕೆ ಬಂದಿರಲಿಲ್ಲ ಇದು ಆಗುವ ಮಾತೆಂದು.. ಅಷ್ಟು ಕಡಿಮೆ ಬಡ್ಜೆಟ್ಟಿನ ಪ್ರಾಜೆಕ್ಟಿನ ಬಗ್ಗೆ ಅವರೆಂದೂ ಕೇಳಿರಲಿಲ್ಲ.. ಇದು ಪ್ರಾಜೆಕ್ಟ್ ಬಿಲ್ಲಿಂಗಿನ ಮೊದಲ ಅವಕಾಶ ಎನ್ನುವುದು ಬಿಟ್ಟರೆ ಮತ್ತಾವ ಆಕರ್ಷಣೆಯೂ ಅದರಲ್ಲಿ ಕಾಣಿಸಿರಲಿಲ್ಲ ಅವರಿಗೆ. ಎಲ್ಲಾ ಆಗುವುದೆಂದೆ ಇಟ್ಟುಕೊಂಡರೂ ನೀಡಲಾಗುತ್ತಿರುವ ಕಡಿಮೆ ಅವಧಿ, ಮಾಡಬೇಕಾಗಿರುವ ಒಟ್ಟಾರೆ ಕೆಲಸದ ಸ್ಕೋಪಿನ ಸಂಕೀರ್ಣತೆ, ಬಳಸಬೇಕಿದ್ದ ಮಾನವ ಸಂಪನ್ಮೂಲದ ಮಿತಿ - ಇವೆಲ್ಲವೂ ಸೇರಿ ಅದು ಕಾರ್ಯಸಾಧುವಲ್ಲವೇನೊ? ಎಂದು ಅನುಮಾನ ಹುಟ್ಟಿಸಲು ಆರಂಭಿಸಿತ್ತು..
' ಮೀಟೂ ಹ್ಯಾವ್ ಡೌಟ್ಸ್ ಮಣಿ ಸಾರ್... ಬಟ್ ಓನ್ಲಿ ವನ್ ಪರ್ಸನ್ ಕ್ಯಾನ್ ಮೇಕಿಟ್ ಹ್ಯಾಪೆನ್... ಇದು ಸಾಧ್ಯ ಅನ್ನುವುದಾದರೆ ಕೇವಲ ಒಬ್ಬನಿಂದ ಮಾತ್ರ ಸಾಧ್ಯ... ಅವನಿದನ್ನು ಒಪ್ಪುತ್ತಾನೊ ಇಲ್ಲವೊ ಗೊತ್ತಿಲ್ಲ.. ಆದರೂ ನೀವವನನ್ನ ಬಲವಂತ ಮಾಡಿಯಾದರೂ ಒಪ್ಪಿಸಬೇಕು.. ಹೀ ಈಸ್ ಕೇಪಬಲ್ ಆಫ್ ಡೂಯಿಂಗ್ ಇಟ್.. ಅವನಿಗೆ ಕೇವಲ ಒಬ್ಬ ಮಾತ್ರ ಜತೆಯ ರಿಸೋರ್ಸ್ ಸಿಗುವುದು ಎಂದು ಹೇಳಿ.. ಇನ್ನೊಂದು ಬ್ಯಾಕಪ್ಪಾಗಿರಲಿ... ಬರಿ ಕಾಪಿ ಪೇಸ್ಟಿನ ವ್ಯವಹಾರ ಎಂದು ಮನವರಿಕೆ ಮಾಡಿಸಿದರೆ ಅವನಿಂದ ಇದು ಖಂಡಿತ ಸಾಧ್ಯವಾಗುತ್ತದೆ.. ಅವನಿಂದಾಗುವ ಯಶಸ್ಸನ್ನೆ ಮಾನದಂಡವಾಗಿ ಬಳಸಿ ಮುಂದಿನ ಪ್ರಾಜೆಕ್ಟುಗಳನ್ನು ಗಿಟ್ಟಿಸಬಹುದು ನಾವು...'
' ಯಾರದು..?'
'ಇನ್ನಾರು..? ನಮ್ಮ ಥಾಯ್ಲ್ಯಾಂಡ್ ಹೀರೋ ಶ್ರೀನಾಥ.. ! ಅವನಿಗೊಂದು ಜ್ಯೂನಿಯರ್ ಲೋ ಕಾಸ್ಟ್ ರಿಸೋರ್ಸ್ ಜತೆಗೆ ಕೊಟ್ಟರು ಸಾಕು, ಮೂರೆ ತಿಂಗಳಲ್ಲಿ ಚಿಟಿಕೆ ಹೊಡೆದ ಹಾಗೆ ಮುಗಿಸಿಬಿಡುತ್ತಾನೆ ಪ್ರಾಜೆಕ್ಟನ್ನ ... ಅವನ ಹೆಸರು ಹೇಳಿದರೆ ಸಾಕು ಕಸ್ಟಮರೂ ಸುಲಭದಲ್ಲಿ ಒಪ್ಪುತ್ತಾರೆ..!'
ಶ್ರೀನಾಥನ ಹೆಸರು ಕೇಳುತ್ತಿದ್ದಂತೆ 'ಮಣಿ ಸಾರು' ಸ್ವಲ್ಪ ಮೆತ್ತಗಾದರು.. ಯಾಕಾಗಬಾರದು? ಎಂದು ಅವರ ಮನದಲ್ಲೂ ಆಲೋಚನೆ ಮೂಡತೊಡಗಿತ್ತು.. ಅವನ ನಾಯಕತ್ವದಲ್ಲಿ ಪ್ರಾಜೆಕ್ಟ್ ಅಂತೂ ಸೋಲುವುದಿಲ್ಲ.. 'ಇಸ್ ಇಟ್ ಎನ್ ಐಡಿಯಾ?' ಅಂದುಕೊಳ್ಳುತ್ತಲೆ 'ಪ್ರಾಜೆಕ್ಟ್ ಶುರುವಾಗುವುದು ಯಾವಾಗ..?' ಎಂದು ಕೇಳಿದರು .
' ನಾವು 'ಹೂಂ' ಅಂದರೆ ಒಂದೆರಡೆ ತಿಂಗಳಲ್ಲಿ ಆರಂಭಿಸಬಹುದೇನೊ.. ಇಲ್ಲಿ ಮುಖ್ಯ ವಿಷಯ, ನೀವು ಶ್ರೀನಾಥನ ಜತೆ ನೇರ ಮಾತಾಡಿ, ಅವನ ಸಾಮರ್ಥ್ಯವನ್ನು ಸ್ವಲ್ಪ ಚೆನ್ನಾಗಿ ಹೊಗಳಿಯಾದರೂ ಸರಿ, ಒಪ್ಪಿಸಿಬಿಡಬೇಕು... ಅಲ್ಲಿಗೆ ಮಿಕ್ಕಿದ್ದೆಲ್ಲ ಆದಂತೆ.. ಆ ಮಿಕ್ಕಿದ್ದೆಲ್ಲವನ್ನು ನಿಭಾಯಿಸುವ ಹೊಣೆಯನ್ನು ನನಗೆ ಬಿಟ್ಟು ಬಿಡಿ..' ಎಂದ ಶ್ರೀನಿವಾಸ ಪ್ರಭು.
ಅಲ್ಲಿಂದ ಮುಂದೆಲ್ಲ ಚಕಚಕನೆ ನಡೆದುಹೋಗಿತ್ತು.. ತಮಗೆ ಬೇಕಾದ ಮತ್ತೊಂದಿಷ್ಟು ವಿವರ ಪಡೆದವರೆ , ತಕ್ಷಣವೆ ಶ್ರೀನಾಥನ ಹತ್ತಿರ ಮಾತಾಡಿ ಒಪ್ಪಿಸುವುದಾಗಿ ವಾಗ್ದಾನ ಮಾಡಿ ಪೋನಿಟ್ಟಿದ್ದರು ಸುಬ್ರಮಣ್ಯಂ.
ಶ್ರೀನಾಥ ಕುನ್. ಲಗ್ ಜತೆಗಿನ ಭೇಟಿ ಮುಗಿಸಿ ತನ್ನ ಸೀಟಿಗೆ ವಾಪಸ್ಸು ಬಂದ ಕೆಲವೆ ಕ್ಷಣಗಳಲ್ಲಿ ಅವನ ಪೋನ್ ಗುಣುಗುಣಿಸತೊಡಗಿತ್ತು, ಅದೇ ತಾನೆ ಪ್ರಭುವಿನೊಡನೆ ಮಾತು ಮುಗಿಸಿ ಶ್ರೀನಾಥನನ್ನು ಪೋನಿನ ಮೂಲಕ ಸಂಪರ್ಕಿಸಲು ಯತ್ನಿಸುತ್ತಿದ್ದ ' ಸುಬ್ರಮಣ್ಯಂ' ಕರೆಯಿಂದಾಗಿ...!
( ಇನ್ನೂ ಇದೆ )
__________