ಕ್ರೂಟ್ಸರ್ ಸೊನಾಟಾ ಅಧ್ಯಾಯ ಹತ್ತೊಂಬತ್ತು

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹತ್ತೊಂಬತ್ತು

ಇದ್ದಕ್ಕಿದ್ದ ಹಾಗೆ ಎದ್ದು ಕಿಟಕಿಯ ಬಳಿಗೆ ಹೋಗಿ ಕೂತ. “ಸಾರಿ” ಎಂದು ಮೆಲ್ಲಗೆ ಹೇಳಿ, ಕಿಟಕಿಯಾಚೆಗೆ ನೋಡುತ್ತ ಒಂದೈದು ನಿಮಿಷ ಸುಮ್ಮನೆ ಇದ್ದ. ಉದ್ದವಾಗಿ ಉಸಿರುಗರೆದ. ಮತ್ತೆ ಎದ್ದು ಬಂದು ನನ್ನೆದುರಿನ ಸೀಟಿನಲ್ಲಿ ಕೂತ. ಅವನ ಮುಖ ಚೇಂಜಾಗಿತ್ತು. ಕಣ್ಣು ನೋಡಿದರೆ ಅಯ್ಯೋ ಅನ್ನಿಸುವಹಾಗೆ ಇತ್ತು. ತುಟಿ ಇಷ್ಟಿಷ್ಟೆ ನಡುಗುತ್ತಾ ನಗುವುದಕ್ಕೆ ಪ್ರಯತ್ನಪಡುತ್ತಿದ್ದವು.
“ಸಾಕಾಗಿದೆ. ಆದರೂ ಹೇಳ್ತೀನಿ. ಇನ್ನೂ ಟೈಮಿದೆ. ಬೆಳಗಾಗಿಲ್ಲ..” ಅನ್ನುತ್ತಾ ಸಿಗರೇಟು ಹಚ್ಚಿಕೊಂಡು ಶುರುಮಾಡಿದ. “ಮಕ್ಕಳಾಗುವುದು ನಿಂತಮೇಲೆ ಮೈಕೈ ತುಂಬಿಕೊಂಡಳು. ಅವಳ ಕಾಯಿಲೆ-ಅದೇ ಮಕ್ಕಳ ಬಗ್ಗೆ ಸದಾ ವರಿಮಾಡಿಕೊಳ್ಳುವುದು-ಬಹಳ ಕಡಮೆಯಾಯಿತು...ಪೂರ್ತಿ ಹೋಯಿತು ಅಂತಲ್ಲ, ಕಡಮೆ ಆಯಿತು. ಕುಡಿದು ತಲೆಗೇರಿದವರು ನಿಧಾನವಾಗಿ ಎಚ್ಚರವಾಗುವ ಹಾಗೆ ಅಯ್ಯೋ ಈ ಲೋಕ ಎಷ್ಟು ಚೆನ್ನಾಗಿದೆ, ಇಲ್ಲಿ ಹೇಗೆ ಬದುಕುವುದು ಗೊತ್ತೇ ಇಲ್ಲವಲ್ಲ, ಅರ್ಥವೇ ಆಗುವುದಿಲ್ಲವಲ್ಲ ಅನ್ನುವ ಥರ ಬದುಕನ್ನು ನೋಡಲು ಶುರುಮಾಡಿದಳು. ‘ಕಾಲ ಕಳೆಯುತ್ತಿದೆ, ಮಿಸ್ ಮಾಡಿಕೊಳ್ಳಬಾರದು!’ ಅಂತ ಅಂದುಕೊಂಡಳು. ಅಥವಾ ಹಾಗೆ ಫೀಲ್ ಮಾಡಿದಳು. ಬೇರೆ ಥರ ಅಂದುಕೊಳ್ಳುವುದಕ್ಕೆ, ಫೀಲ್ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಈ ಲೋಕದಲ್ಲಿ ಮುಖ್ಯವಾದ ಸಂಗತಿ ಎಂದರೆ ಪ್ರೀತಿ ಒಂದೇ ಎಂಬ ನಂಬಿಕೆಯಲ್ಲಿ ಬೆಳೆದವಳು ಅವಳು. ಮದುವೆಯಾಗಿ ಆ ಪ್ರೀತಿಯನ್ನು ಒಂದಿಷ್ಟು ರುಚಿ ನೋಡಿದ್ದಳು. ಆದರೆ ಆ ಪ್ರೀತಿ ಅವಳು ನಿರೀಕ್ಷಿಸಿದ ಹಾಗೆ, ಕಲ್ಪಿಸಿಕೊಂಡ ಹಾಗೆ ಇರಲಿಲ್ಲ. ಬರೀ ನಿರಾಸೆ, ನರಳಾಟ, ಮತ್ತೆ ಮಕ್ಕಳಿಂದ ಆಗುತ್ತಿದ್ದ ಅನಿರೀಕ್ಷಿತ ಹಿಂಸೆ ಇವೇ ಅವಳಿಗೆ ಸಿಕ್ಕಿದ್ದು. ನವೆದು ಹೋಗಿದ್ದಳು. ಡಾಕ್ಟರುಗಳ ಕರುಣೆಯಿಂದ ಮಕ್ಕಳಾಗದ ಹಾಗೆ ನೋಡಿಕೊಳ್ಳಬಹುದು ಎಂದು ಗೊತ್ತಾಗಿತ್ತು. ಪ್ರೀತಿಯನ್ನು ಪಡೆಯುವ ಆಸೆ ಮತ್ತೆ ಚಿಗುರಿತು. ಆದರೆ ಅಸೂಯೆ ತುಂಬಿದ, ಕೋಪಿಷ್ಠ ಗಂಡನ ಪ್ರೀತಿ ಅವಳಿಗೆ ಬೇಕಾಗಿರಲಿಲ್ಲ. ಶುದ್ಧವಾದ, ಹೊಸ ರೀತಿಯ ಪ್ರೀತಿಯ ಕನಸು ಕಾಣತೊಡಗಿದ್ದಳು. ನನಗಂತೂ ಹಾಗನ್ನಿಸಿತು. ಯಾರೋ ನನ್ನನ್ನು ಪ್ರೀತಿಸುವವರು ಇನ್ನೇನು ಬರಲಿದ್ದಾರೆ ಎಂಬಂಥ ಭಾವ ಅವಳಲ್ಲಿತ್ತು. ನನಗೆ ಕಳವಳ. ಮತ್ತೆ ಮತ್ತೆ ಹಾಗೇ ಆಗುತ್ತಿತ್ತು. ನನ್ನ ಜೊತೆ ಮಾತಾಡುವಾಗಲೆಲ್ಲ, ಅಂದರೆ ಬೇರೆಯವರ ಹತ್ತಿರ ಮಾತಾಡುತ್ತಿದ್ದರೂ ನನ್ನನ್ನೇ ಉದ್ದೇಶಿಸಿ ಮಾತಾಡುತ್ತಿದ್ದಳು ಅವಳು, ಅರ್ಧಗಂಟೆ ಮೊದಲು ತದ್ವಿರುದ್ಧವಾದ ಮಾತಾಡಿದ್ದೆ ಅನ್ನುವುದನ್ನೇ ಮರೆತು, ಬಹಳ ಬೋಲ್ಡಾಗಿ, ಆದರೆ ಜೋಕ್ ಮಾಡುವಳಂತೆ, ಮಕ್ಕಳ ಜವಾಬ್ದಾರಿಯನ್ನೆಲ್ಲ ತಾಯಿಯೇ ನೋಡಿಕೊಳ್ಳಬೇಕು ಅನ್ನುವುದು ಬರೀ ಮೋಸ, ಇನ್ನೂ ವಯಸ್ಸಿರುವಾಗ ಖುಷಿಯಾಗಿರುವುದು ಬಿಟ್ಟು ಮಕ್ಕಳಿಗಾಗಿಯೇ ಜೀವ ತೇಯುವುದರಲ್ಲಿ ಅರ್ಥವಿಲ್ಲ ಅನ್ನುತ್ತಿದ್ದಳು. ಮಕ್ಕಳಿಗೆ ಗಮನ ಕೊಡುವುದು ಕಡಮೆಯಾಯಿತು, ಕೊಟ್ಟರೂ ಮೊದಲಿನ ಹಾಗೆ ತಲೆ ಕೆಡಿಸಿಕೊಂಡು ಹುಚ್ಚಿಯ ಹಾಗೆ ಆಡುವುದು ಕಡಮೆಯಾಯಿತು, ಅಲಂಕಾರಕ್ಕೆ ಗಮನಕೊಡುವುದು ಹೆಚ್ಚಾಯಿತು. ಆದರೆ ಹಾಗೆ ಗಮನ ಕೊಡುತ್ತಿದ್ದೇನೆ ಅನ್ನುವುದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಸುಖದ ಆಸೆ ಹೆಚ್ಚಾಯಿತು. ಎಂದೋ ಬಿಟ್ಟುಬಿಟ್ಟಿದ್ದ ಪಿಯಾನೋ ಮತ್ತೆ ಕಲಿಯುವ ಉತ್ಸಾಹ ಹುಟ್ಟಿತು. ಮತ್ತೆ, ಆ ಪಿಯಾನೋ ಕ್ಲಾಸಿನಿಂದಲೇ ಇದೆಲ್ಲ ಶರುವಾಯಿತು..”
ಆಯಾಸಗೊಂಡಂತಿದ್ದ ಅವನ ಕಣ್ಣು ಕಿಟಕಿಯಾಚೆ ನೋಡಿದವು. ಮತ್ತೆ ತಟ್ಟನೆ ನನ್ನತ್ತ ತಿರುಗಿದ. ಬಲವಂತದಿಂದ ಎಂಬಂತೆ ಮಾತಾಡಿದ.
“ಹೂಂ. ಆಗಲೇ ಅವನು ಬಂದಿದ್ದು...” ಕನ್ಫ್ಯೂಸ್ ಆಗಿದ್ದ. ಒಂದೆರಡು ಬಾರಿ ಮೂಗಿನಲ್ಲಿ ವಿಚಿತ್ರವಾಗಿ ಸದ್ದು ಮಾಡಿದ. ಆ ಮನುಷ್ಯನನ್ನು ನೆನೆಯುವುದು, ಅವನ ಹೆಸರು ಹೇಳುವುದು, ಅವನ ಬಗ್ಗೆ ಮಾತಾಡುವುದು ಬಹಳ ಕಷ್ಟವಾಗುತ್ತಿತ್ತು ಎಂದು ಗೊತ್ತಾಯಿತು. ಅಡ್ಡಗೋಡೆಯನ್ನು ಛಿದ್ರಗೊಳಿಸುವವನಂತೆ ಹಟದಿಂದ ದೃಢವಾದ ದನಿಯಲ್ಲಿ ಹೇಳಿದ.
“ಅವನು ಅಯೋಗ್ಯ, ದುಷ್ಟ. ನನ್ನ ಬದುಕಿನಲ್ಲಿ ಹೀಗೆಲ್ಲ ಮಾಡಿದ ಎಂದಲ್ಲ, ಅವನು ನಿಜವಾಗಿಯೂ ಅಯೋಗ್ಯ. ಅವನು ಅಯೋಗ್ಯ ಅನ್ನುವುದೇನೇ ಅವಳೆಷ್ಟು ಇರ್ರೆಸ್ಪಾನ್ಸಿಬಲ್‌ ಆಗಿದ್ದಳು ಅನ್ನುವುದನ್ನು ತೋರಿಸುತ್ತದೆ. ಅವನಲ್ಲದಿದ್ದರೆ ಮತ್ತೊಬ್ಬ ಯಾರೋ ಅವಳಿಗೆ ಸಿಗುತ್ತಿದ್ದ. ಹಾಗೇ ಆಗಲೇಬೇಕಾಗಿತ್ತು!” ಕೊಂಚ ಹೊತ್ತು ಮಾತು ನಿಲ್ಲಿಸಿದ. “ಸಂಗೀತಗಾರ. ವಯಲಿನ್ ನುಡಿಸುತ್ತಾ ಇದ್ದ. ವಿದ್ವಾಂಸ ಅಲ್ಲ, ಅರ್ಧ ವಿದ್ವಾಂಸ, ಅರ್ಧ ಶೋಕಿಲಾಲ. ಅವರಪ್ಪ ಜಮೀನುದಾರ, ನಮ್ಮಪ್ಪನ ನೆರೆಯವನು. ಆಸ್ತಿ ಎಲ್ಲಾ ಕಳೆದುಕೊಂಡ. ಮೂರು ಜನ ಮಕ್ಕಳಿದ್ದರು. ಇಬ್ಬರು ಯಾವಯಾವದೋ ಕೆಲಸಕ್ಕೆ ಸೇರಿದರು. ಇವನು, ಎಲ್ಲರಿಗಿಂತ ಚಿಕ್ಕವನು, ಪ್ಯಾರಿಸ್ಸಿನಲ್ಲಿ ಅಜ್ಜಿಮನೆಯಲ್ಲಿ ಬೆಳೆದ. ಸಂಗೀತದಲ್ಲಿ ಆಸಕ್ತಿ ಇದೆ ಅಂತ ಕನ್ಸರ್ವೇಟರಿಗೆ ಕಳಿಸಿದರು. ಅಲ್ಲಿ ವಯಲಿನ್ ಕಲಿತು ಪ್ರೋಗ್ರಾಮುಗಳನ್ನು ಕೊಡುತ್ತಿದ್ದ. ಮಹಾ...” ಅವನ ಬಗ್ಗೆ ಕೆಟ್ಟ ಮಾತು ನಾಲಗೆಯ ತುದಿಯವರೆಗೆ ಬಂದದ್ದನ್ನು ತಟ್ಟನೆ ತಡೆದು, “ಪ್ಯಾರಿಸ್ಸಿನಲ್ಲಿ ಹೇಗಿದ್ದನೋ ಗೊತ್ತಿಲ್ಲ. ರಶಿಯಾಕ್ಕೆ ವಾಪಸ್ಸು ಬಂದ ವರ್ಷವೇ ನಮ್ಮ ಮನೆಗೂ ಬಂದ.
“ಬಾದಾಮಿ ಥರ, ಒದ್ದೆ ಕಣ್ಣು. ಕೆಂಪು ತುಟಿ. ಸದಾ ನಗು. ಚಿಕ್ಕ ವ್ಯಾಕ್ಸು ಮಾಡಿದ ಮೀಸೆ. ಇತ್ತೀಚಿನ ಫ್ಯಾಷನ್ನಿನ ಹೇರ್‌ಸ್ಟೈಲು. ಡಲ್ಲಾಗಿದ್ದರೂ ಚಂದ ಕಾಣುವ ಮುಖ. ಹೆಂಗಸರು “ನೋಡೋದಕ್ಕೆ ಪರವಾಗಿಲ್ಲ” ಎಂದು ವಿವರಿಸುತ್ತಾರಲ್ಲ ಹಾಗಿದ್ದ. ತೆಳ್ಳಗಿದ್ದ, ಆದರೆ ಆಕಾರಕೆಟ್ಟಿರಲಿಲ್ಲ. ಹೆಂಗಸರ ಮೈಕಟ್ಟಿನ ಹಾಗೆ, ಅಥವಾ (ಸೌತ್ವೆಸ್ಟ್‌ ಆಫ್ರಿಕಾದ) ಹಿಟೆನ್‌ಟೋಟ್ಸ್‌ ಥರ ಹಿಂಬದಿ ಉಬ್ಬಿತ್ತು. ಅವರೂ ಒಳ್ಳೆಯ ಸಂಗೀತಗಾರರಂತಲ್ಲ. ಸಾಧ್ಯವಾದಷ್ಟೂ ಸಲುಗೆ ತೋರಿಸಲು ಬರುತ್ತಿದ್ದ. ಸ್ವಲ್ಪ ವಿರೋಧ ತೋರಿಸಿದರೂ ಮರ್ಯಾದಸ್ಥನ ಹಾಗೆ ನಟಿಸುವಷ್ಟು ಸೂಕ್ಷ್ಮವಾಗಿಯೂ ಇದ್ದ. ಪ್ಯಾರಿಸ್ಸಿಗೆ ಹೋದ ಪ್ರವಾಸಿಗಳು ಕೊಂಡುಕೊಳ್ಳುತ್ತಾರಲ್ಲ, ಇದು ಹೊಸದು ಎಂದು ಹೆಂಗಸರ ಕಣ್ಣಿಗೆ ಎದ್ದು ಕಾಣುತ್ತದಲ್ಲ, ಅಂಥ ಬಟನ್ ಷೂ ಹಾಕಿಕೊಂಡು, ಗಾಢ ಬಣ್ಣಗಳ ಟೈ ಕಟ್ಟಿಕೊಂಡಿರುತ್ತಿದ್ದ. ಖುಷಿಯಾಗಿರುವವನ ಹಾಗೆ ತೋರಿಸಿಕೊಳ್ಳುತ್ತಿದ್ದ. ಏನೇನೋ ಸೂಚಿಸುವ ಹಾಗೆ, ಅರ್ಧರ್ಧ ವಾಕ್ಯಗಳಲ್ಲಿ ಮಾತಾಡುತ್ತಿದ್ದ-ನಾನು ಹೇಳುತ್ತಿರುವುದು ಕೇಳುವವರಿಗೆ ಅರ್ಥವಾಗುತ್ತದೆ, ತಮ್ಮ ಮನಸ್ಸಿನಲ್ಲೇ ವಾಕ್ಯ ಪೂರ್ತಿ ಮಾಡಿಕೊಳ್ಳುತ್ತಾರೆ ಅನ್ನುವಹಾಗೆ.
“ಅವನ ಸಂಗೀತದಿಂದಲೇ ಎಲ್ಲವೂ ಆದದ್ದು. ಕೋರ್ಟಿನಲ್ಲಿ ಮಾತ್ರ ನನ್ನ ಅಸೂಯೆಯಿಂದ ಆಯಿತು ಅನ್ನುವಹಾಗೆ ವಾದಮಾಡಿದರು. ಅಂಥದೇನೂ ಇರಲಿಲ್ಲ. ಅಂದರೆ ಅಂಥದೇನೂ ಇರಲಿಲ್ಲ ಅಂತಲ್ಲ, ಅದಲ್ಲ. ನಾನು ಅನ್ಯಾಯಕ್ಕೆ ಒಳಗಾದ ಗಂಡ, ನನ್ನ ಘನತೆ ಗೌರವಗಳನ್ನು ಕಾಪಾಡಿಕೊಳ್ಳುವ ಸಲುವಾಗಿ, ಕೋರ್ಟುಗಳು ಮಾತಾಡುವ ರೀತಿ ಗೊತ್ತಲ್ಲ ನಿಮಗೆ, ಏನೋ ಮಾಡಲು ಹೋಗಿ ಹೆಂಡತಿಯನ್ನು ಕೊಂದೆ ಎಂದು ನನ್ನ ಖುಲಾಸೆಮಾಡಿದರು. ಕೋರ್ಟಿನಲ್ಲಿ ನಿಜ ಹೇಳಲು ಪ್ರಯತ್ನಮಾಡಿದೆ. ನನ್ನ ಹೆಂಡತಿಯ ಗೌರವ ಕಾಪಾಡುವುದಕ್ಕೆ ಹೀಗೆಲ್ಲ ಹೇಳುತ್ತಿದ್ದೇನೆ ಅಂದುಕೊಂಡರು.
“ಆ ಸಂಗೀದವನ ಜೊತೆ ಅವಳಿಗೆ ಯಾವ ಸಂಬಂಧ ಇತ್ತೋ ಅದು ನನಗೆ ಮುಖ್ಯವಲ್ಲ. ಅವಳಿಗೂ ಮುಖ್ಯ ಆಗಿರಲಿಲ್ಲ. ಮುಖ್ಯ ಆಗಿದ್ದದ್ದು ಆಗಲೇ ಹೇಳಿದೆನಲ್ಲ ನನ್ನೊಳಗಿದ್ದ ಮೃಗೀಯತೆ. ನನ್ನೊಳಗಿದ್ದ ಹಂದಿಗುಣ. ನಮ್ಮಿಬ್ಬರ ನಡುವೆ ಭಯಂಕರವಾದ ದ್ವೇಷದ ಕಂದಕ ಇತ್ತಲ್ಲ ಅದು ಎಂಥಾ ಟೆನ್ಷನ್ ಹುಟ್ಟಿಸಿತ್ತೆಂದರೆ ಸಣ್ಣ ನೆಪವೊಂದು ಸಿಕ್ಕ ಕೂಡಲೆ ಬಿಕ್ಕಟ್ಟು ತಲೆ ಎತ್ತಿಬಿಡುತ್ತಿತ್ತು. ಜೋರಾಗಿ ಜಗಳ ಆಡುತ್ತಿದ್ದೆವು, ಆಮೇಲೆ ಅಷ್ಟೇ ಜೋರಾಗಿ ಮೃಗಗಳ ಹಾಗೆ ಪ್ರೀತಿಮಾಡುತ್ತಿದ್ದೆವು. ತಬ್ಬಿಬ್ಬಾಗುತ್ತಿತ್ತು.
“ಅವನಲ್ಲದಿದ್ದರೆ ಇನ್ನೊಬ್ಬ ಯಾರೋ ಸಿಕ್ಕಿರುತ್ತಿದ್ದ. ಅಸೂಯೆ ಅಲ್ಲದಿದ್ದರೆ ಇನ್ಯಾವುದೋ ಕಾರಣ ಸಿಕ್ಕಿರುತ್ತಿತ್ತು. ನನ್ನ ಹಾಗೆ ಬದುಕುವ ಗಂಡಂದಿರು ಪೂರಾ ಭ್ರಷ್ಟರಾಗಬೇಕು, ಅಥವಾ ಹೆಂಡತಿಯರನ್ನು ಬಿಟ್ಟುಬಿಡಬೇಕು, ಅಥವಾ ಆತ್ಮಹತ್ಯೆಮಾಡಿಕೊಳ್ಳಬೇಕು, ಅಥವಾ ನಾನು ಮಾಡಿದ ಹಾಗೆ ಹೆಂಡತಿಯನ್ನು ಕೊಲ್ಲಬೇಕು. ಅವಳನ್ನು ಮುಗಿಸುವುದಕ್ಕೆ ಮೊದಲು ನಾನು ಆತ್ಮಹತ್ಯೆಗೆ ಪ್ರಯತ್ನಮಾಡಿದ್ದೆ. ಅವಳೂ ಎಷ್ಟೋ ಸಾರಿ ವಿಷ ತೆಗೆದುಕೊಳಳುವುದಕ್ಕೆ ಟ್ರೈಮಾಡಿದ್ದಳು.”
(ಮುಂದುವರೆಯುವುದು)

Rating
No votes yet