ಬನ್ನಿ ಪ್ರಾಮಾಣಿಕರಾಗೋಣ, ಕನ್ನಡಕ್ಕಾಗಿ ಕೈ ಜೋಡಿಸೋಣ...

ಬನ್ನಿ ಪ್ರಾಮಾಣಿಕರಾಗೋಣ, ಕನ್ನಡಕ್ಕಾಗಿ ಕೈ ಜೋಡಿಸೋಣ...

ಇತ್ತೀಚೆಗೆ ಬೆಂಗಳೂರಿನ ಖ್ಯಾತ ಶಿಕ್ಷಣ ಸಂಸ್ಥೆಯೊಂದರ ಕಡೆಯಿಂದ ಅಲ್ಲಿ ಕಲಿಯುತ್ತಿದ್ದ ಕೆಲವು ಸ್ನಾತಕ ಪದವೀಧರ, ವಿದ್ಯಾರ್ಥಿಗಳಿಗೆ ಕನ್ನಡ ಸಾಮಾನ್ಯ ವ್ಯಾಕರಣ ಪಾಠ ಮಾಡುವುದಕ್ಕಾಗಿ ಶಿಕ್ಷಕರು ಬೇಕಾಗಿದ್ದಾರೆ ಎನ್ನುವ ಸುದ್ದಿಯೊಂದು ನನಗೆ ತಿಳಿಯಿತು. ಆ ವಿದ್ಯಾರ್ತ್ಗಿಗಳು ಸ್ನಾತಕ ಪದವೀಧರರಾಗಿದ್ದೂ ಕನ್ನಡ ಪದಬಳಕೆ, ವಾಕ್ಯರಚನೆಯಂತಹಾ ಸಾಮಾನ್ಯ ವಿಚಾರಗಳಲ್ಲಿಯೂ ತಿಳುವಳಿಕೆ ಇಲ್ಲದಿರುವುದು ತಿಳಿದು ಬಹಳವೇ ಖೇದವೆನಿಸಿತು. ಇದೀಗ ಕನ್ನಡ ರಾಜ್ಯೋತ್ಸವ ಮತ್ತೆ ಬ0ದಿರುವ ಕಾರಣದಿಂದ ಕನ್ನಡ ಭಾಷೆಯ ಸ್ಥಿತಿಗತಿಗಳನ್ನು ಚರ್ಚಿಸಲು ಮತ್ತೊಮ್ಮೆ ಅವಕಾಶ ಒದಗಿದೆ. ಈ ಮೇಲಿನ ವಿಚಾರಗಳನ್ನೇ ಇಟ್ಟುಕೊಂಡು ನಾನಿಲ್ಲಿ ಕೆಲ ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

 

ಕನ್ನಡ ನಾಡು ಏಕೀಕರಣ ಗೊಂಡು ಐವತ್ತೆಂಟು ವರ್ಷಗಳಾದವು. ಅದಕ್ಕೂ ಮುನ್ನವೇ ಸರಿಸುಮಾರು ಎರಡು ಸಾವಿರ ವರ್ಷಗಳಿಂದಲೂ ಕನ್ನಡ ಭಾಷೆ ಇಲ್ಲಿನ ಜನಗಳ ನಡವಣ ಸಂವಹನ ಭಾಷೆಯಾಗಿತ್ತು. ಆದರೆ ಇಂದಿಗೂ ನಮ್ಮ ಜನರಿಗೆ ಕನ್ನಡದಪದಬಳಕೆಯ ಜ್ಞಾನವೇ ಸರಿಯಾಗಿ ಇಲ್ಲವೆನ್ನುವುದು ವಿಪರ್ಯಾಸ. ಇನ್ನು ಕನ್ನಡ ಭಾಷೆಯ ಉಳಿವಿಗಾಗಿ ಇಂದು ಬೀದಿ ಹೋರಾಟ, ಮುಖಕ್ಕೆ ಮಸಿ ಬಳಿಯುವ ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರು ಖಂಡಿತ ಅಲ್ಲ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ ಹೊಳೆಯುವ ಸತ್ಯಸಂಗತಿ ಏನೆಂದರೆ ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ವೆಂದರೆ ಅದು ಖಂಡಿತಾ ತಪ್ಪಲ. ಇಂದು ನಾವು ಕನ್ನಡ ಜನರು ಆರೂವರೆ ಕೋಟಿಯಷ್ಟಿದ್ದೇವೆ ಇವರೆಲ್ಲರ ಮನೆಮಾತು ಕನ್ನಡ. ಆದರೆ ಇವರಲ್ಲಿ ಅದೆಷ್ಟು ಮಂದೆ ತಮ್ಮ ಭಾಷೆಯ ಬಗ್ಗೆ ಪ್ರಾಮಾಣಿಕ ಕಳಾಕಳಿ ಹೊಂದಿದ್ದಾರೆ? ಅದೆಷ್ಟು ಮಂದಿ ತಮ್ಮ ನಿತ್ಯ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಾರೆ? ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ? ಡ್ಯಾಡಿ, ಮಮ್ಮಿ ,ಅಂಕಲ್, ಆಂಟಿ, ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಲು ನಮ್ಮ ನಡುವಿನ ಅನ್ಯಭಾಷಿಗರು ಖಂಡಿತಾ ಕಾರಣರಲ್ಲ ನಮ್ಮ ಮಗು “ಮಮ್ಮಿ/ಡ್ಯಾಡಿ” ಎಂದಾಗ ಅದೇ ಕ್ಷಣ ಅಪ್ಪಿ ಮುದ್ದಾಡುವ ನಾವುಗಳು ಎಂದಿಗೂ ನಮ್ಮ ಮಕ್ಕಳಿಗೆ “ಅಮ್ಮ/ಅಪ್ಪ” ಎಂದು ಕರೆಯಲು ಹೇಖುವುದೇ ಇಲ್ಲ!

ಮಕ್ಕಳಿಗೆ ಎದೆ ಹಾಲು ಸರ್ವಶ್ರೇಷ್ಠ ಎಂಬುದು ಹಿಂದಿನಿಂದಲೂ ನಮ್ಮವರ ನಂಬಿಕೆ. ಈಗ ವಿಶ್ವ ಆರೋಗ್ಯ ಸಂಸ್ಥೆ (World Health organisation ) ಕೂಡ ಜಗತ್ತಿನಾದ್ಯಂತ ಇದೇ ಸಂದೇಶ ಸಾರುತ್ತಿದೆ. . ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಆ ಹಾಲು ಕುಡಿದರೆ ದೇಹ ಬಲಿಷ್ಠವಾಗುವುದಲ್ಲದೆ ಯಾವುದೇ ರೋಗರುಜಿನ ಬರುವುದಿಲ್ಲ. ಅದರಲ್ಲಿ ರೋಗ ನಿವಾರಕ ಶಕ್ತಿ ಇರುತ್ತದೆ ಹಾಗೆಯೇ ತಾಯ್ನುಡಿಯೂ ಸಹ ಸರ್ವಶ್ರೇಷ್ಠವಾದದ್ದು. ಬೇರೆಲ್ಲಾ ಭಾಷೆಗಳನ್ನು ಕಲಿತರೂ ಸಹ ತಮ್ಮ ಮಾತೃಭಾಷೆಯನ್ನೇ ಪ್ರೀತಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ನಾವುಗಳು ಏನು ಮಾಡುತ್ತಿದ್ದೇವೆ? ನಮ್ಮನ್ನು ಪರವೂರ/ಪರರಾಜ್ಯದ ವ್ಯಕ್ತಿಯೊಂದಿಗೆ ಮಾತನಾಡುವ ಸಂದರ್ಭ ಒದಗಿದಾಗ ಅವರ ಭಾಷೆಯನು ಕಷ್ಟ ಬಿದ್ದಾದರೂ ಸರಿ ನಾವು ಕಲಿತು ನಾವೂ ಅವರ ಭಾಷೆಯಲ್ಲಿ ಮಾತನಾಡುತ್ತೇವೆ! ಅದರ ಬದಲು ಅವರು ನಮ್ಮ ನಾಡಿಗೆ ಬಂದಿದ್ದಾರೆ ನಾವುಗಳು ಅವರಿಗೆ ಕನ್ನಡ ಭಾಷೆಯನ್ನು ಕಲಿಸಿಕೊಡೋಣ ಎಂದು ಯೊಚಿಸುವುದಿಲ್ಲ.

ಇನ್ನು ಭಾರತ ದೇಶ ಸ್ವತಂತ್ರಗೊಂಡ ಸಮಯದಲ್ಲಿ ದೇಶೀಯ ರಾಜರುಗಳ ಅಧಿಪತ್ಯವನ್ನೆಲ್ಲಾ ಕೊನೆಗೊಳಿಸಿ ಅವರ ಆಡಳಿತದಲ್ಲಿನ ಪ್ರದೇಶಗಳಾನ್ನು ಭಾರತದ ಸಂಯುಕ್ತ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು. ಅದಾದ ನಂತರದಲ್ಲಿ ಭಾಷಾವಾರು ಪ್ರಾಂತ ರಚನೆಯು ನಡೆಯಿತು. ನಿಜಕ್ಕೂ ಭಾಷಾವಾರು ಪ್ರಾಂತ ರಚನೆಯ ಹಿಂದಿದ್ದ ಉದ್ದೇಶವೇನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ನಾಡಿನ ಜನಜೀವನದ ಬದುಕಿನ ಅತ್ಯಗತ್ಯ ಅಂಗಗಳಾದ ಕಲಿಕೆ, ದುಡಿಮೆ, ಸಾರ್ವಜನಿಕ ಆಡಳಿತದ ಕೆಲಸ ಕಾರ್ಯಗಳ ಏರ್ಪಾಡುಗಳೆಲ್ಲವೂ ಜನರಿಗೆ ಹತ್ತಿರವಾಗಬೇಕು. ಅವರ ಕೈಗೆಟುಕಬೇಕು. ಇದು ಸಾಧ್ಯವಾಗಲು ಇರುವ ಒಂದೇ ಒಂದು ದಾರಿ ಆ ಜನರಾಡುವ ನುಡಿಯಲ್ಲಿ ನಾಡಿನ ವ್ಯವಸ್ಥೆಗಳನ್ನು ಕಟ್ಟುವುದು. ಹೀಗೆ ಎಲ್ಲಾ ವ್ಯವಸ್ಥೆಗಳೂ ಜನರನ್ನು ಒಳಗೊಂಡಾಗ ಜನರ ಮಾಡುಗತನ ಹೆಚ್ಚಬಲ್ಲದು, . ಒಂದು ನುಡಿಯಾಡುವ ಜನರಲ್ಲಿ ಆ ಕಾರಣದಿಂದಾಗಿ ಸಹಜವಾಗೇ ಇರುವ ಒಗ್ಗಟ್ಟು ಮತ್ತಷ್ಟು ಬಲಗೊಂಡು ಸಾಧನೆಯ ಹಾದಿಯತ್ತ ಇಡೀ ಜನಾಂಗ ಸಾಗುವುದು. ಹೀಗೆ ಕನ್ನಡದ ಮೂಲಕ ಕನ್ನಡಿಗರೂ, ತಮಿಳಿನ ಮೂಲಕ ತಮಿಳರೂ, ಹಿಂದಿಯ ಮೂಲಕ ಹಿಂದಿಯವರೂ ಏಳಿಗೆ ಸಾಧಿಸುವುದಾದರೆ ಭಾರತವೂ ಏಳಿಗೆ ಹೊಂದುತ್ತದೆ. ಆದರೆ ಇಂದಿನ ದಿನಗ್ಳಾಲ್ಲಿ ಈ ಉದ್ದೇಶ ಅದೆಶ್ಃಟು ಸಫಲವಾಗಿದೆ? ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡಾಗ ನಮ್ಮ ದಿನನಿತ್ಯದ ಆಡಳಿತಗಳಲ್ಲಿ ನಾವುಗಳು ಎಷ್ಟರ ಮಟ್ಟಿಗೆ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವನ್ನು ಬಳಸುತ್ತಿದ್ದೇವೆನ್ನುವುದನ್ನು ನೋಡಿದರೆ ನಿಜಕ್ಕೂ ನಿರಾಸೆಯಾಗುತ್ತದೆ. ಸರ್ಕಾರಿ ಕಚೇರಿಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ಏರ್ಪಾಟುಗಳಲ್ಲಿ ಕನ್ನಡದ ಜಾರಿಯನ್ನು ರಾಜ್ಯಸರ್ಕಾರ ಮಾಡುವುದರಲ್ಲೇ ಸಾಕಷ್ಟು ಕುಂದುಕೊರತೆ ಎದುರಿಸಿದೆ. ಇಂದು ಅವೆಲ್ಲವನ್ನೂ ಮಾಡಿದರೂ ಜನರೇ ಬಳಸಲು ಹಿಂದೇಟು ಹಾಕುತ್ತಿದ್ದೇವೆ. ಕನ್ನಡಿಗರು ಕನ್ನಡದ ಬಳಕೆಯಿಂದ ದೂರಾಗುತ್ತಿರುವುದು ಇಂತಹ ಪರಿಸ್ಥಿತಿಗೆ ಕಾರಣ. ಹೀಗಾದರೆ ಅನ್ನಡವು ದುಡಿಮೆಯ ಭಾಷೆಯಾಗುವುದು ಮರೀಚಿಕೆಯಾದೀತು.

ಕನ್ನಡಿಗರಾದ ನಾವೇ ಕನ್ನಡವನ್ನು ಪ್ರೌಡಶಾಲಾ ಶಿಕ್ಷಣಾಕ್ಕೆ ಸೀಮಿತಗೊಳಿಸಿಕೊಂಡಿದ್ದೇವೆ. ಉನ್ನತ ಪದವಿ ವ್ಯಾಸಂಗ, ಸಂಶೋಧನೆ, ತರಬೇತಿ ಎಲ್ಲವೂ ಆಂಗ್ಲಭಾಷೆಯಲ್ಲಿಯೇ ಆಗಬೇಕು ಎನ್ನುವುದು ನಮ್ಮ ಜನಗಳ ಬಯಕೆಯಾಗಿದೆ. ಅಷ್ಟೇಕೆ ನಮ್ಮ ಪುಟ್ಟ ಮಗುವನ್ನೂ ಸಹ ಇನ್ನೂ ಮನೆಯಲ್ಲಿ ತಾಯಿ ತಂದೆಯೊಂದಿಗೆ ಬೆರೆಯಬೇಕಾದ ವಯಸ್ಸಿನಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಆ ಮಗುವಿನ ತಲೆಯೊಳಗೆ ಪ್ರಯತ್ನ ಪೂರ್ವಕವಾಗಿ ಪರಭಾಷೆಯನ್ನು ತುರುಕುತ್ತಿದ್ದೇವಲ್ಲ ಇದು ಯಾರೋ ಬೇರೆ ಭಾಷಿಗರು ನಮ್ಮ ನಡುವೆ ಅಂದು ಮಾಡುತ್ತಿರುವ ಕೆಲಸವಲ್ಲ ನಾವುಗಳೇ ನಮ್ಮ ಸ್ವ ಪ್ರತಿಷ್ಠೆಗಾಗಿ ಮಾಡಿಕೊಳ್ಳುತ್ತಿರುವುದಾಗಿದೆ. ತನ್ಮೂಲಕ ಸಂಸ್ಕೃತಿಯ ದ್ಯೋತಕವಾದ ಮಾತೃಭಾಷೆಯಿಂದ  ನಮ್ಮ ಮಕ್ಕಳನ್ನು ದೂರ ಸರಿಯುವಂತೆ ಮಾಡುತ್ತಿದ್ದೇವೆ. ಆಮುಖೇನ ಮುಂದಿನ ತಲೆಮಾರಿನವರಿಗೆ ನಾಡಿನ ಸಮೃದ್ದ ಭಾಷೆಯಾದ ಕನ್ನಡದ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲದಂತೆ ಮಾಡುತ್ತಿದ್ದೇವೆ.

ಇಷ್ಟೆಲ್ಲಾ ಹೇಳಿದಾಕ್ಷಣ ಆಂಗ್ಲಭಾಷೆ ಸೇರಿದಂತೆ ಇತರೇ ಭಾಷೆಗಳೆಲ್ಲಾ ಕನ್ನಡದ ನಾಶ್ಕ್ಕಾಗಿಯೇ ಇದೆ ಎಂದೂ ಅರ್ಥವಲ್ಲ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಆಂಗ್ಲಭಾಷೆ ಸೇರಿದಂತೆ ಇತರೆ ಭಾಷೆಗಳ ಅಗತ್ಯ ಖಂಡಿತಾ ಇದೆ. ಆದರೆ ಅವುಗಳನ್ನು ಎಷ್ಟು ಬೇಕೋ ಅಷ್ಟೇ ಬಳಸೋಣ. ಅದಕ್ಕಾಗಿ ಒಂದು ಪರಿಧಿ.ಹಾಕೋಣ.

ಭಾರತದಂಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್‌ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದಾರಾಬಾದ್‌ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ.  ಹೀಹಾಗಿ ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಇತರೆ ಭಾಷೆಗಳನ್ನು ದ್ವೇಷಿಸಬೇಕಾಗಿಲ್ಲ. ಬದಲಾಗಿ ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಭಾಷೆಯ ಬಗೆಗೆ ದುರಭಿಮಾನ ಬೆಳೆಸಿಕೊಳ್ಳದೇ ಆರೋಗ್ಯವಂತ ಚೌಕಟ್ಟಿನಲ್ಲಿ ಕನ್ನಡ ಭಾಷೆಯ ಅರಿವಿನ ಜಾಗೃತಿ ಬರಬೇಕು I ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ.

ಇಂದು ನಮ್ಮ ಜೀವನದ ವಿಧಾನ ಬದಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಮಾನವನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಈ ಕ್ಷೇತ್ರವನ್ನು ನಮ್ಮ ಕನ್ನಡ ನಾಡು, ನುಡಿ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳಬೇಕಾಗಿದೆ. ಇಂದಿನ ಅತಿ ವೇಗದ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳೂ, ಮಿಂಚಂಚೆಗಳೂ ನಮ್ಮಗಳ ಪ್ರಮುಖ ಸಂಪರ್ಕ ಕೊಂಡಿಗಳಾಗಿವೆ. ಇಂತಹಾ ಸನ್ನಿವೇಶಗಳಲ್ಲಿ ಆಧುನಿಕ ತಂತ್ರಕ್ಞಾನದ ಕೊಡುಗೆಗಳಾದ ಈ ಸಂಪರ್ಕ ಸಾಧನಗಳನ್ನೇ ಕನ್ನಡ ಬಳಕೆ ಹಾಗೂ ಮೇಲ್ಮೆಗಾಗಿ ಬಳಸಿಕೊಂಡಲ್ಲಿ ಮುಂಬರುವ ದಿನಗಳಲ್ಲಿ ಕನ್ನಡವು ನಿಜಕ್ಕೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರಾಜಿಸುವುದನ್ನು ನೋಡಬಹುದಾಗಿದೆ. ಇಂದು ಒಟ್ಟು ಎಂಟು ಜ್ಞಾನಪೀಠ ಪುರಸ್ಕಾರಗಳನ್ನು ಪಡೆದ ಭಾಷೆಯಾಗಿರುವ ಶ್ರೇಷ್ಠ ಭಾಷೆ ಕನ್ನಡವನ್ನು ಉಳಿಸಿಕೊಳ್ಳುವುದೂ, ಇನ್ನಷ್ಟೂ ಸಮೃದ್ದವಾಗಿಸುವುದೂ ಯುವಕರಾದ ನಮ್ಮ ಕೈಯಲ್ಲಿದೆ. ಕನ್ನಡ ಪ್ರೇಮ ನವೆಂಬರ್ 1ರಂದು ಮಾತ್ರ ಸೀಮಿತಗೊಳದ್ದೆ ಇಡೀ ವರುಷ ಇರಬೇಕು ಆಗಲೇ ಕನ್ನಡದ ನೈಜ ಏಳಿಗೆ ಸಾಧ್ಯವಿದೆ. ಈ ದಿಶೆಯಲಿ ವ್ಯವಸ್ಥೆಯಲ್ಲಿ ಭಾಷಾ ಕೀಳರಿಮೆಯನ್ನು ಬಿಟ್ಟು ಕನ್ನಡದ ಉಳಿವಿಗೆ ಪ್ರಯತ್ನವಾಗಬೇಕು, ಕನ್ನಡ ಭಾಷೆಯ ಪ್ರಗತಿಗೆ ಪೂರಕವಾದ ಚಟುವಟಿಕೆಗಳು ರಚನಾತ್ಮಕವಾಗಿ ಅನುಷ್ಠಾನಗೊಳ್ಳಬೇಕು.ಕನ್ನಡ ನಾಡಿನಲ್ಲಿ ಕನ್ನಡದ ಉಳಿವಿಗೆ, ಪ್ರಾದಿಕಾರ, ಕಾವಲು ಸಮಿತಿ ಮಾಡ ಬೇಕಾಗಿ ಬಂದಿರುವುದು ದುರ್ದೈವದ ಸಂಗತಿಕನ್ನಡ ಭಾಷೆ ಮಾತನಾಡಲು ಅಂಜುವ ಸ್ಥಿತಿ ವರ್ತಮಾನದ ಮನಸ್ಸುಗಳಲಿದೆ, ಜಾಗತಿಕವಾಗಿ ತೆರೆದುಕೊಳ್ಳುವ ಮತ್ತು ಗ್ರಹಿಕೆಗೆ ಆಂಗ್ಲಭಾಷೆಯೇ ಅಂತಿಮವಲ್ಲ ಕನ್ನಡ ಭಾಷೆಗೂ ಅಂತಹ ಸಾಮಥ್ರ್ಯವಿದೆ ಎಂಬುದನ್ನು ‘ನಾವು ಯುವ ಜನರು ಅರಿಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿಷಯಗಳನ್ನು ಕನ್ನಡದಲ್ಲಿ ಅರ್ಥೈಸಿಕೊಂಡಾಗ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಿದೆ ಈ ದಿಸೆಯಲ್ಲಿ ‘ನಾವು ಚಿಂತಿಸಬೇಕು

ಸ್ನೇಹಿತರೇ, ಇನ್ನಾದರೂ ನಿಜಾರ್ಥದಲ್ಲಿ ಕನ್ನಡ ಭಾಷೆಗಾಗಿ ದುಡಿಯೋಣ. ಈಗಿನ ತಲೆಮಾರಿನ ಮಾಹಿತಿ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಕನ್ನಡದಲ್ಲಿಯೂ ಸಹ ಹೊಸ ಪದಗಳನ್ನು ರಚಿಸಿ ಸೇರ್ಪಡಿಸುವ ಮುಖೇನ ಕನ್ನಡ, ನಮ್ಮ ತಾಯ್ಮುಡಿಯನ್ನು ಇನ್ನಷ್ಟು ಸಮೃದ್ದಗೊಳಿಸೋಣ. ಹೀಗೆ ಮಾಡಿದ್ದೇ ಆದಲ್ಲಿ ಕನ್ನಡಕ್ಕೆ ಎಂದಿಗೂ ಅಳಿವೆಂಬುದಿರುವುದಿಲ್ಲ. ಕನ್ನಡ ಅಳಿವಿನಂಚಿನಲ್ಲಿರುವ ಭಾಷೆಯಾಗುವುದೂ ಸಾಧ್ಯವಿಲ್ಲ.

ಬನ್ನಿ ಸ್ನೇಹಿತರೆ ಪ್ರಾಮಾಣಿಕರಾಗೋಣ

ಕನ್ನಡಕ್ಕಾಗಿ ಕೈ ಜೋಡಿಸೋಣ

ಕನ್ನಡ ಧ್ವಜವನ್ನು ವಿಶ್ವ ಮಟ್ತದಲ್ಲಿ ಹಾರಾಡುವಂತೆ ಮಾಡೋಣ.

ನಮಸ್ಕಾರ,

‘’ಜಗತ್ತಿನೆಲ್ಲೆಡೆಯ ಸರ್ವ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು’’ .

ಜೈ ಹಿಂದ್...!

ಜೈ ಕರ್ನಾಟಕ!