ಮಕ್ಕಳ ದಿನಾಚರಣೆ 

ಮಕ್ಕಳ ದಿನಾಚರಣೆ 

ನಾಳಿನ ಮಕ್ಕಳ ದಿನಾಚರಣೆಯ ನೆನಪುಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು 'ಜಗದೇಕ ವೀರ, ನಮ್ಮೀ ಕುಮಾರ' ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ 'ಟೀನೇಜಿನ ಮಗ' ಹೆಸರೆ ಹೇಳುವಂತೆ ದೈಹಿಕವಾಗಿ ಟೀನೇಜಿನತ್ತ ನಡೆದಾಗಿನ ಜತೆಗಿನ ಮಾನಸಿಕ ಸ್ಥಿತಿಯ ತುಣುಕು. 

ಎಲ್ಲ ಚಿಣ್ಣರಿಗೂ ಮಕ್ಕಳ ದಿನದ ಶುಭಾಶಯಗಳು !

01. ಜಗದೇಕ ವೀರ ನಮ್ಮೀ ಕುಮಾರಾ
_________________________

ಜಗದೇಕ ವೀರ ನಮ್ಮೀ ಕುಮಾರಾ
ಮುರಿದು ಒತ್ತಟ್ಟಿಡುವ ಅಸಹಾಯ ಶೂರ
ಸಿಕ್ಕಲೇನೇನೆಲ್ಲ ಯಾವುದೂ ಅಳವಲ್ಲ
ಮೂರೆ ಗಳಿಗೆಯಲೆಲ್ಲ ಮುರಿದ ಅಪಾರ ||

ಆಟಿಕೆಗಳೆಷ್ಟೊ ಅಗಣಿತ ಲೆಕ್ಕವೆಲ್ಲುಂಟು
ಚಿಕ್ಕ ದೊಡ್ಡ ಕಂಪನಿ ಲೆಕ್ಕಿಸದ ಎದೆಯುಂಟು
ಕೈಗೆ ಸಿಕ್ಕಾ ಮೇಲೆ ಮುಗಿದಂತೆ ವ್ಯಾಪಾರ
ಎಷ್ಟು ದಿನ ಬಾಳುವುದೊ? ಹೆತ್ತವರ ಲೆಕ್ಕಾಚಾರ ||

ಕೋಪದಲಿ ದೂರ್ವಾಸನಸಹನೆಯ ಮೂರ್ತಿ
ಇವನ ರಮಿಸಲು ಇಳೆಗೆ ಬರಬೇಕಲ್ಲ ತ್ರಿಮೂರ್ತಿ!
ಬಂದರೇನು ತರಲಾದೀತೆ ಮುರಿಯದ ವರ?
ಕೊಟ್ಟು ಹೋದವರ ಮಾನ ತೆಗೆದುಬಿಡುವ ಪ್ರವರ ||

ಪೋನಾಯ್ತು ಗೇಮಾಯ್ತು ಮರದಾಟಿಕೆ ಸೇರಿ
ಯಾವುದುಳಿದಿದೆ ಕಾಣೆ ಅವನೇರಬೇಕಿಹ ಸವಾರಿ
ಕೊಟ್ಟು ಕೊಟ್ಟು ಖಾಲಿ ಬೆತ್ತಲಾಗಿ ಬಯಲಲಿ
ತಲೆ ಕೆರೆದು ನಿಂತ ಜನ ಮುರಿಯದಿರುವುದಾದರು ಎಲ್ಲಿ? ||

ಅವನಾಟಿಕೆಯಿವನು ಪರಬ್ರಹ್ಮನ ಕುವರ ಬ್ರಹ್ಮ
ಲೌಕಿಕದ ಜೊಳ್ಳುಗಟ್ಟಿ ಪರೀಕ್ಷಿಸಲೆಂದೆ ಬಂದಿರುವವ
ಮುರಿದು ಸಹನೆಯ ಪರಿಯ ಕೆಣಕಿ ನೋಡುವವ
ಅದಕೆಂದೆ ಇರಬೇಕು ಮುರಿಯೆ ನಕ್ಕು ಜೋಡಿಸೊ ಭಾವ ||

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------

02. ಟೀನೇಜಿನ ಮಗ
___________________

ಟೀನೇಜಿನ ಮಗ
ಪ್ರಬುದ್ಧನಾಗಿದ್ದಾನೆ
ದೈಹಿಕವಾಗಿ. 
ಚಿಗುರು ಮೀಸೆ ತುಣುಕು
ವಯಸಿನ ಕೂದಲು
ಸೀಳು ಹೊಡೆದ ದನಿ
ಸಿಟ್ಟು ಸೆಡವು ಅಸಹನೆ
ಗೊಂದಲ ಸಂಶಯ 
ಕೆಟ್ಟ ಕುತೂಹಲ
ಎಲ್ಲ ಒಡೆದು ಕಾಣುತ್ತಿದೆ.

ಬಾಯ್ತೆರೆದುಕೊಂಡಿದೆ
ಅಷ್ಟು ದಿನವಿರದಿದ್ದ ಗುಟ್ಟು
ಹೇಳಬಹುದೊ ಬಾರದೊ ?
ಕೇಳುವುದೊ ಬಿಡುವುದೊ ?
ಸರಿಯೊ ತಪ್ಪೊ ?
ಏನೆಲ್ಲಾ ಚಿತ್ತದ ಗದ್ದಲ
ಮಾಗದ ಮೆದುಳಿನ ಫಲ
ಮಾಗುತ ಬರಿ ದೇಹ
ಉತ್ತು ಬಿತ್ತು ಬೆಳೆವ ಹೊಲ
ಹೊಂದಾಣಿಕೆ ಚಪಲ, ವಿಫಲ.

ಕೊಡದಿದ್ದರೆಂತು ಅವಕಾಶ
ಕೂಡೆ ಎರಡರ ಗಣಿತ
ಪಕ್ವತೆ ಮೈ ಮನ ಸಮೇತ
ಆಗುವತನಕ ಪೆಡಂಭೂತ
ಆದಮೇಲದೆ ಅವಧೂತ.
ಎಂದೆಲ್ಲ ಉಸುರಿ ಕಿವಿಗೆ
ಅಪ್ಪನದಲ್ಲ ಕೆಳೆಯ ಮಾತು
ಬಿತ್ತೇನು ಕಿವಿಗೆ ದನಿಯಾಗೊಳಗೆ?
ಹಿಚುಕಿ ಕಾಯಿ ಹಣ್ಣಾದೀತೆ ?
ಕಾಯುವ ಸಹನೆ ಹೆಣ್ಣಾದೀತೆ ?

ಅಂದೊಂದು ಮುಂಜಾನೆ
ಅವನೆ ತನ್ನಂತಾನೆ
ಎದ್ದ ಮುಂಜಾನೆ ಹೊದ್ದು
ಪಕ್ಕದಲಿ ಕೂತವ
ಭುಜಕೊರಗಿಸಿದ ತಲೆಯ
ಮತ್ತದೆ ನಿದ್ರೆಯ ಜಗಕೆ
ಎಬ್ಬಿಸಿದ್ದನೆ ಮರೆತ
ಮಂಪರಿನ ಗದ್ದೆಗೆ
ಕಾಯುತ್ತಿದ್ದೇನೆ ಎಚ್ಚರಕೆ
ಪ್ರಬುದ್ಧ ಪಕ್ವತೆಯ ಫಸಲಿಗೆ. 

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------

Comments

Submitted by kavinagaraj Fri, 11/14/2014 - 20:42

ತಮಾಷೆಗಾಗಿ ಈ ಪ್ರತಿಕ್ರಿಯೆ:
ನಮ್ಮ ಹಾಸನದ ಗೌಡರೂ ತಮ್ಮ ಮಗನನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದಾಗಲೂ ಹೇಳಿದ್ದೇ ಇದು: 'ಜಗದೇಕ ವೀರ ನಮ್ಮೀ ಕುಮಾರಾ'.
ಇದು ತಮಾಷೆಯ ಪ್ರತಿಕ್ರಿಯೆ ಅಲ್ಲ:
ನಿಮ್ಮ ಎರಡು ರಚನೆಗಳೂ ಸೊಗಸಾಗಿವೆ.

Submitted by nageshamysore Sat, 11/15/2014 - 04:57

In reply to by kavinagaraj

ಕವಿಗಳೆ ನಮಸ್ಕಾರ. ಅಲ್ಲಿಗೆ ಹೇಗೆ ಇರಲಿ, ಎಂತೆ ಇರಲಿ - ಪ್ರತಿ ತಂದೆ(ತಾಯಿಗು) ತಂತಮ್ಮ ಮಗನೆ 'ಜಗದೇಕವೀರ' ಎಂದು ಸಾರಿದಂತಾಯ್ತು. 'ಕುಮಾರ'ನ ಬದಲು 'ಕುಮಾರಿ'ಯಾಗಿದ್ದರೆ ಹೇಗೆ ವರ್ಣಿಸಬಹುದಿತ್ತೆನ್ನುವ ಕುತೂಹಲವು ಸೇರಿಕೊಂಡಿದೆ (ಸ್ವಾನುಭವವಿಲ್ಲದ ಕಾರಣ)! ಪ್ರತಿಕ್ರಿಯೆಗೆ ಧನ್ಯವಾದಗಳು :-)

Submitted by ಗಣೇಶ Sat, 11/15/2014 - 00:01

ನಾಗೇಶರೆ, ಎರಡೂ ಕವನ ಸೂಪರ್. ನಮ್ಮ ಕವಿನಾಗರಾಜರ ಪ್ರತಿಕ್ರಿಯೆ ನೋಡಿದ ಮೇಲೆ "ದೇವೇಗೌಡರ ಕುಮಾರಾ.."ನ ಗಮನದಲ್ಲಿಟ್ಟು ನಿಮ್ಮ ಮೊದಲ ಕವನ ಪುನಃ ಓದಿದೆ.ಸ್ವಲ್ಪ.. ಹೆಚ್ಚು ಕಮ್ಮಿ ಅವರಿಗೂ ಹೊಂದುವುದು :)

Submitted by nageshamysore Sat, 11/15/2014 - 05:10

In reply to by ಗಣೇಶ

ಗಣೇಶ್ ಜಿ ನಮಸ್ಕಾರ. ಇದೀಗ ತಾನೆ ಮತ್ತೊಂದು ಅನಾಮಿಕ ಪ್ರತಿಕ್ರಿಯೆಯೂ ಬಂದಿದೆಯಂತೆ, ಮೊದಲಿನದರ ಜತೆಗೆ ಎರಡನೆಯದು ಸೂಕ್ತವಾಗಿಯೆ ಹೊಂದುತ್ತದೆ ಅಂತ!  :-)