ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..
ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..
ಇವತ್ತು ನಾವು ಸಮಾನಮನಸ್ಕರೆಲ್ಲ ಸೇರಿ ಒಂದು ಊರಿನ ಬೀದಿಯನ್ನು ಸ್ವಚ್ಛಗೊಳಿಸಲು ತಿರ್ಮಾನಿಸಿದೆವು.ಅದರಂತೆ ಅ ಊರಿನ ಕೆಲವು ಯುವಕರು ಮತ್ತು ಮಕ್ಕಳ ಗುಂಪು ಕಟ್ಟಿಕ್ಕೊಂಡು ಸಕಲ ಸಲಕರಣೆಯೊಂದಿಗೆ ಬೀದಿಗಿಳಿದೆವು.ನಮ್ಮ ತಂಡ ಬೀದಿಯ ಎರಡೂ ಬದಿಯನ್ನು ಸ್ವಚ್ಛತೆ ಮಾಡುತ್ತ ಮುಂದೆ ಮುಂದೆ ಸಾಗಬೇಕಾದರೆ ಎದುರಿಗೆ ಗೂಡಂಗಡಿಯೊಂದು ಸಿಕ್ಕಿತು.ಗೂಡಂಗಡಿಯೆಂದರೆ ಕೇಳಬೇಕೆ. .ಅದರ ಸುತ್ತ ಹುತ್ತದಷ್ಟು ಎತ್ತರ ಕಸ ತುಂಬಿರುತ್ತದೆ.ಗುಟ್ಕಾ, ಪ್ಲಾಸ್ಟಿಕ್ ಟಿ ಲೋಟ, ಚಾಕಲೇಟ್ ಕವರ್ ಗಳು ನಮ್ಮನ್ನು ಅಣಕಿಸುವ ರೀತಿಯಲ್ಲಿ ನೋಡುತ್ತಿದ್ದವು.ನಾವು ಸೊಳ್ಳೆಯ ಸಂತಾನದವರು ನೀವು ಎಷ್ಟೇ ಹೊಡೆದು ಹಾಕಿದರು ನಾವು ಮತ್ತೆ ಹುಟ್ಟಿ ಬರುತ್ತೇವೆ ಅನ್ನೋ ಧಿಮಾಕಿನಲ್ಲಿ ಅವು ಅಲ್ಲಿ ಬಿದ್ದಿರುವಂತೆ ಕಂಡಿತು.ನಾವು ಅಂಗಡಿಯವನಿಗೆ ಏನು ಹೇಳದೆ ಕಸ ತೆಗೆಯುವಲ್ಲಿ ಮಗ್ನರಾದೆವು.ಅಷ್ಟೊತ್ತಿಗೆ ಅವನು, ನೀವೇನು ಮಾಡುತ್ತಿದ್ದೀರಿ?'ಎಂದು ಕೇಳಿದ.ನಾವು ನಿಮ್ಮೂರ ಬೀದಿ ಸ್ವಚ್ಛ ಮಾಡುತ್ತಿದ್ದೇವೆ..ಇದು ಸ್ವಚ್ಛ ಭಾರತ ಕಾರ್ಯಕ್ರಮ ಅಂತ ಹೇಳಿದೆವು.ಅಷ್ಟಕ್ಕೆ ಸುಮ್ಮನಾಗದ ಅವನು,ನಿಮಗೇನಾದರು ಬುದ್ಧಿ ಕೆಟ್ಟಿದೆಯೇ. .? ಯಾವನೋ ಎಂಜಲು ತಾಗಿಸಿದ ಹೊಲಸು ಮಾಡಿದ ಕಸವನ್ನು ನೀವು ತೆಗೆಯುತ್ತಿದ್ದಿರಲ್ಲ..ಯಾವುದೋ ಮೈ ಮುಟ್ಟಿಸಿಕೊಳ್ಳಬಾರದ ಕೆಳಜಾತಿಯವನೂ ಹಾಕಿರುವ ಕಸ ಇದರಲ್ಲಿ ಇದ್ದಿರಬಹುದು..ಅಂತವರು ಮಾಡಿದ ಕಸ ತೆಗೆಯಲು ನಿಮಗೆ ಮುಜುಗರವಾಗಲ್ಲವೇ..? ಎಂದು ಕೇಳಿದ.ನಾವು ಅವನ ಮಾತುಗಳನ್ನು ಕೇಳಿ ಅಕ್ಷರಶಃ ಮೂಕರಾಗಿ ಹೋದೆವು.ಕಸದಲ್ಲೂ ಅಸ್ಪೃಶ್ಯತೆಯ ಪ್ರಜ್ಞೆಯನ್ನು ಬೆಳೆಸಿಕೊಂಡವನಿಗೆ ಏನು ಹೇಳಬೇಕು ಎಂದು ತಿಳಿಯದಾದೆವು.ಈ ಘಟನೆಯನ್ನು ನೋಡಿದ ನಂತರ ಕಸಮುಕ್ತ ಭಾರತವನ್ನಾದರು ಕಟ್ಟಬಹುದು ಆದರೆ ಜಾತಿಮುಕ್ತ ಭಾರತ ಕಟ್ಟಲು ಸಾಧ್ಯವಿಲ್ಲ ಎಂಬ ಯೋಚನೆ ನನ್ನ ತಲೆಯಲ್ಲಿ ಹಾಗೆ ಬಂದು ಹೋಯಿತು.
-@ಯೆಸ್ಕೆ
Comments
ಉ: ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..
>>ಕಸಮುಕ್ತ ಭಾರತವನ್ನಾದರು ಕಟ್ಟಬಹುದು ಆದರೆ ಜಾತಿಮುಕ್ತ ಭಾರತ ಕಟ್ಟಲು ಸಾಧ್ಯವಿಲ್ಲ ಎಂಬ ಯೋಚನೆ ನನ್ನ ತಲೆಯಲ್ಲಿ ಹಾಗೆ ಬಂದು ಹೋಯಿತು.
-ಸಾಧ್ಯವಿದೆ.ನೀವು ಬಾಹ್ಯ ಕಸವನ್ನು ತೆಗೆಯುವಲ್ಲಿ ತೋರಿದ ಆಸಕ್ತಿಯಂತೆ, ಆತನ ತಲೆಯಲ್ಲಿ ತುಂಬಿದ ಕಸವನ್ನೂ ಹತ್ತು ನಿಮಿಷ ವಿವರವಾಗಿ ಮಾತನಾಡಿ ಕ್ಲೀನ್ ಮಾಡಬಹುದಿತ್ತು...
In reply to ಉ: ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. .. by ಗಣೇಶ
ಉ: ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..
ನಾನೂ ಗಣೇಶರು ಹೇಳಿರುವುದನ್ನೇ ಹೇಳಬಯಸುವೆ.