ದೇವರು: ಒಂದು ತರ್ಕವಿತರ್ಕ - 1

ದೇವರು: ಒಂದು ತರ್ಕವಿತರ್ಕ - 1

  'ಮಾಮಿ ಜೋತ ಮಾಡು ಪುಟ್ಟಾ'

     ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು 'ಮಾಮಿ ಜೋತ ಮಾಡು' ಎಂದಾಗಲೆಲ್ಲಾ ಕೈ ಜೋಡಿಸುತ್ತದೆ, ದೇವರ ಕೋಣೆಯ ಕಡೆಗೋ, ದೇವರ ಪಟವನ್ನೋ ನೋಡುತ್ತದೆ. ಮುಂದುವರೆದು ಹಣೆ ನೆಲಕ್ಕೆ ಮುಟ್ಟಿಸುತ್ತದೆ. ದೊಡ್ಡವರು ಅದನ್ನು ಕಂಡು ಸಂಭ್ರಮಿಸಿದಾಗ ಮಗುವೂ ಸಂತಸಪಡುತ್ತದೆ. ಸಾಮಾನ್ಯವಾಗಿ ಅವರವರ ಮನೆಯ ಪದ್ಧತಿ, ಸಂಸ್ಕಾರ, ರೀತಿ-ನೀತಿಗಳನ್ನು ಅನುಸರಿಸಿ ಮಕ್ಕಳಿಗೆ ಈ ರೀತಿಯ ಪಾಠ ಕಲಿಸಲಾಗುತ್ತದೆ. ಹೀಗೆ ಚಿಕ್ಕಂದಿನಿಂದ ಆಗುವ ಅಭ್ಯಾಸ ದೊಡ್ಡದಾದ ಮೇಲೂ ಮುಂದುವರೆಯುತ್ತದೆ. ಮಕ್ಕಳು ಹಟ ಮಾಡಿದಾಗ 'ಗುಮ್ಮ ಬರುತ್ತಾನೆ' ಎಂದು ಹೆದರಿಸುತ್ತಾರೆ. ಗುಮ್ಮ ಕೆಟ್ಟದರ ಸಂಕೇತವಾಗಿ, ಮಾಮಿ ಒಳಿತಿನ ಸಂಕೇತವಾಗಿ ಮಕ್ಕಳ ಮನಸ್ಸಿನಲ್ಲಿ ಕುಳಿತುಬಿಡುತ್ತದೆ.

ಬೈಬಲ್ಲು ಹೇಳುವುದು ಜಗ ಜೀವ ದೇವ

ಕುರಾನು ಸಾರುವುದು ಜಗ ಜೀವ ದೇವ |

ಸಕಲ ಮತಗಳ ಸಾರ ಜಗ ಜೀವ ದೇವ

ಒಂದಲದೆ ಹಲವುಂಟೆ ಕಾಣೆ ಮೂಢ ||

     ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆ, ಜಿಜ್ಞಾಸೆಗಳು ನಡೆದಷ್ಟು ಇತರ ವಿಷಯಗಳ ಕುರಿತು ನಡೆದಿರಲಾರವು.  ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ ಹಿಡಿದು, ದೇವರಿಗೆ ಹಲವಾರು ಹೆಸರುಗಳನ್ನು ನೀಡಿ ಪೂಜಿಸುವವರು, ನಾವು ಪೂಜಿಸುವ ದೇವರೊಬ್ಬರೇ ದೇವರು, ಆ ದೇವರನ್ನು ಪೂಜಿಸದವರೆಲ್ಲಾ ಪಾಖಂಡಿಗಳು/ಕಾಫಿರರು ಎಂದು ಹೇಳುವವರು, ತಮ್ಮ ನಂಬಿಕೆಯನ್ನು ಇತರರ ಮೇಲೆ ಬಲವಂತವಾಗಿ ಹೇರಬಯಸುವವರು, ತಮ್ಮ ಧರ್ಮ ಪ್ರಚಾರಕ್ಕಾಗಿ ಇತರರ ಬಡತನ, ಅನಾರೋಗ್ಯ, ತಿಳುವಳಿಕೆಯ ಕೊರತೆಯನ್ನು ಬಂಡವಾಳ ಮಾಡಿಕೊಳ್ಳುವವರು, ಅನೇಕ ಆಮಿಷಗಳನ್ನು ಒಡ್ಡಿ ಮತಾಂತರದ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿರುವವರು, ಧರ್ಮಯುದ್ಧದ ಹೆಸರಿನಲ್ಲಿ ನರಮೇಧ ಮಾಡುವವರು, ಇತ್ಯಾದಿ, ಇತ್ಯಾದಿ ಮಾನವರ ಸಮೂಹದಲ್ಲಿ ನಾವು ಬಾಳುತ್ತಿದ್ದೇವೆ. ಜಗತ್ತಿನ ಸೃಷ್ಟಿ ಹೇಗಾಯಿತು ಎಂಬ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ವಿವೇಚಿಸುವ, ವಿಶ್ಲೇಷಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಆದರೆ ಎಲ್ಲರೂ ಒಪ್ಪುವಂತಹ ವಿಚಾರವನ್ನು ಮುಂದಿಡಲು, ಆ ಅಗೋಚರ ಶಕ್ತಿಯ ಮೂಲವನ್ನು ತಿಳಿದು ಅರ್ಥೈಸುವ ಕಾರ್ಯ ಮಾಡಲು ಬಹಳ ಹಿಂದಿನ ಕಾಲದಿಂದಲೇ ನಿರಂತರ ಪ್ರಯತ್ನಗಳು, ಹುಡುಕಾಟಗಳು ಸಾಗಿವೆ, ಸಾಗುತ್ತಲೇ ಇವೆ, ಬಹುಷಃ ಸಾಗುತ್ತಲೇ ಇರುತ್ತದೆ.

ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ 

ನಿಲ್ವ ನೆಲ ಹರಿವ ಜಲ ಜೀವರಕ್ಷಕ ಗಾಳಿ |

ಅಚ್ಚರಿಯ ಆಕಾಶಗಳೆಲ್ಲದರ ಕಾರಕನು

ಪ್ರೇರಕನು ಅವನಲ್ಲವೇನು ಮೂಢ || 

     ಸಕಲ ಜೀವರಾಶಿಗಳಲ್ಲಿ ಮನುಷ್ಯ ಪ್ರಾಣಿ ಬಿಟ್ಟರೆ ಉಳಿದವು ದೇವರ ಬಗ್ಗೆ ತಲೆ ಕೆಡಿಸಿಕೊಂಡಿರಲಾರವು. ಮನುಷ್ಯ ಮಾತ್ರ ತಾನೂ ತಲೆ ಕೆಡಿಸಿಕೊಂಡು ಇತರರ ತಲೆಯನ್ನೂ ಕೆಡಿಸುತ್ತಿದ್ದಾನೆ. ಇದಕ್ಕೆ ಕಾರಣ ಅವನಿಗೆ ವಿವೇಚಿಸುವ ಶಕ್ತಿಯನ್ನು ದೇವರು ನೀಡಿರುವುದು. ಮನುಷ್ಯನಿಗೂ ಸಹ ಮೊದಲು ಈ ವಿಚಾರಗಳಿರಲಿಲ್ಲ. ವಿಕಾಸ ಹೊಂದುತ್ತಾ ಬಂದಂತೆ, ವಿಚಾರವಿಮರ್ಶೆ ಮಾಡುವ ಬುದ್ಧಿ ಬೆಳೆಯುತ್ತಾ ಹೋದಂತೆ, ತನ್ನನ್ನು ಮತ್ತು ಇತರ ಜೀವರಾಶಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಭಕ್ತಿಯಿಂದ, ಭಯದಿಂದ, ಗೌರವದಿಂದ ನೋಡುವ ಪ್ರವೃತ್ತಿ ಬೆಳೆದು ತನ್ನ ಕಲ್ಪನೆಯ ದೇವರುಗಳನ್ನು ಸೃಷ್ಟಿಸಿದ. ಮರ, ಗಿಡ, ಸೂರ್ಯ, ಚಂದ್ರ, ನಕ್ಷತ್ರ, ಗುಡುಗು, ಸಿಡಿಲು, ಮಿಂಚು, ಬೆಂಕಿ, ನೀರು, ಇತ್ಯಾದಿಗಳಲ್ಲಿ ದೇವರನ್ನು ಕಂಡು ಪೂಜಿಸತೊಡಗಿದ. ಇವುಗಳನ್ನೂ ಮೀರಿದ, ಇವುಗಳನ್ನೂ ನಿಯಂತ್ರಿಸುವ ಶಕ್ತಿಯೊಂದಿದೆ ಎಂದು ಅರಿತು ದೇವರ ಸಾಮ್ರಾಜ್ಯವನ್ನು ತನ್ನ ಕಲ್ಪನಾಶಕ್ತಿಯಲ್ಲಿ ಬೆಳೆಸತೊಡಗಿದ. ದೇವರ ಹೆಸರಿನಲ್ಲಿ ಕಥೆಗಳು, ಪುರಾಣಗಳು ಹುಟ್ಟಿಕೊಂಡವು. ದೇವರ ಮಹಿಮೆಯನ್ನು ಕೊಂಡಾಡಿದವು. ತಮ್ಮ ಕಲ್ಪನೆ, ನಂಬಿಕೆ, ಪ್ರದೇಶಗಳಿಗೆ ತಕ್ಕಂತೆ ಗುಂಪುಗಳಾಗಿ ಜಾತಿ, ಮತ, ಧರ್ಮಗಳು ಹುಟ್ಟಿಕೊಂಡವು. ನಂತರದಲ್ಲಿ ಹುಟ್ಟಿನ ಆಧಾರದಲ್ಲಿ ಮನುಷ್ಯನ ಜಾತಿ, ಧರ್ಮಗಳು ನಿಗದಿಸಲ್ಪಟ್ಟವು. ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ಹಲವು ದೇವರುಗಳನ್ನೇ ಸೃಷ್ಟಿಸಿದ.

ತಾಯಿಯು ಅವನೆ ತಂದೆಯು ಅವನೆ

ಬಂಧುವು ಅವನೆ ಬಳಗವು ಅವನೆ |

ವಿದ್ಯೆಯು ಅವನೆ ಸಕಲಸಿರಿಯವನೆ

ಸಕಲ ಸರ್ವನವನಲ್ಲದಿನ್ಯಾರು ಮೂಢ || 

     'ಸಂಕಟ ಬಂದಾಗ ವೆಂಕಟರಮಣ' ಎಂಬಂತೆ ನಾವು ಕಷ್ಟದ ಪರಿಸ್ಥಿತಿಯಲ್ಲಿ ದೇವರನ್ನು ನೆನೆಯುವುದೇ ಹೆಚ್ಚು. ತೊಂದರೆ, ತಾಪತ್ರಯಗಳಿಲ್ಲದವರು ಯಾರಿದ್ದಾರೆ? ಹೀಗಾಗಿ ಯಾರೂ ಸಹಾಯಕ್ಕೆ ಬಾರದಿದ್ದಾಗ ಸಹಾಯ ಮಾಡು ಎಂದು ದೇವರನ್ನು ಬಿಟ್ಟು ಇನ್ನು ಯಾರನ್ನು ಕೋರಬೇಕು? ಈ ಕಾರಣಕ್ಕಾಗಿಯಾದರೂ ದೇವರು ನಮಗೆ ಬೇಕು. ಒಂದೆರಡು ಉದಾಹರಣೆಗಳನ್ನು ಗಮನಿಸೋಣ. ರಸ್ತೆ ಅಪಘಾತದಲ್ಲಿ ಇರುವ ಒಬ್ಬನೇ ೬ ವರ್ಷದ ಮಗ ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಿದ ತಂದೆ-ತಾಯಿಯರ ಗೋಳು ಹೇಳತೀರದು. ತುಂಬಾ ರಕ್ತಸ್ರಾವವಾಗಿ ಮಗುವಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ತಂದೆ ನೀಡಿದ ರಕ್ತದ ಪ್ರಮಾಣ ಸಾಲದು. ಆಸ್ಪತ್ರೆಯಲ್ಲಿ ಮಗುವಿಗೆ ಬೇಕಾದ ವರ್ಗದ ರಕ್ತ ಇಲ್ಲ. ಬೇರೆಲ್ಲಾ ಕಡೆ ರಕ್ತ ಹೊಂದಿಸಲು ಪರದಾಡಿದರೂ ಫಲ ಸಿಗಲಿಲ್ಲ. ಏನು ಮಾಡಲೂ ತೋಚದ ಆ ಸಂದರ್ಭದಲ್ಲಿ ಅಕಾಸ್ಮಾತ್ತಾಗಿ ಅಲ್ಲಿಗೆ ಬಂದಿದ್ದವರೊಬ್ಬರಿಗೆ ವಿಷಯ ತಿಳಿದು ಅವರ ರಕ್ತದ ವರ್ಗವೂ ಮಗುವಿನ ರಕ್ತದ ವರ್ಗಕ್ಕೆ ಸೇರಿದ್ದು ಅವರು ರಕ್ತ ನೀಡಿದ್ದಲ್ಲದೇ ತಮ್ಮ ಸಹೋದರನನ್ನೂ ಕರೆಸಿ ಅವರಿಂದಲೂ ರಕ್ತದಾನ ಮಾಡಿಸಿದರು. ಮಗುವಿನ ಪ್ರಾಣ ಉಳಿಯಿತು. ಮಗುವಿನ ತಂದೆ, ತಾಯಿ ಆ ವ್ಯಕ್ತಿಯ ಕಾಲಿಗೆ ಬಿದ್ದು ಹೇಳಿದರು -'ನೀವೇ ನಮ್ಮ ಪಾಲಿನ ದೇವರು!'.

     ಸುಮಾರು 35 ವರ್ಷಗಳ ಹಿಂದಿನ ನನ್ನ ಸ್ವಂತದ ಒಂದು ಅನುಭವ ಹೇಳುವೆ. ನಾನು ಹಾಸನ ಜಿಲ್ಲೆಯ ಹಳ್ಳಿಮೈಸೂರಿನಲ್ಲಿ ಉಪತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಬ್ಬ ಸುಮಾರು 50 ವರ್ಷದ ಸುಬ್ಬಯ್ಯ ಎಂಬ ವ್ಯಕ್ತಿ ಕಛೇರಿಗೆ ಬಂದ. ಅಂದು ಹೆಚ್ಚಿನ ಕೆಲಸವಿಲ್ಲದ್ದರಿಂದ ಅವನೊಂದಿಗೆ ಕುಶಲೋಪರಿ ಮಾತನಾಡುತ್ತಿದ್ದೆ. ತೊಗಲು ಗೊಂಬೆ ಆಡಿಸುವ ವೃತ್ತಿಯ ಆತ ಹಲವಾರು ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ರಾಗವಾಗಿ ಜಾನಪದ ಧಾಟಿಯಲ್ಲಿ ಹಾಡಿದ ಕುಶಲತೆಗೆ ಬೆರಗಾದೆ. ಅನಕ್ಷರಸ್ತನಾದರೂ ಅದ್ಭುತ ಕಲಾವಿದ ಅವನಲ್ಲಿ ನನಗೆ ಕಂಡ. ಸರ್ಕಾರ ಅವನಿಗೆ ಮಂಜೂರು ಮಾಡಿದ್ದ 4 ಎಕರೆ ಜಮೀನನ್ನು ಗ್ರಾಮದ ಬಲಾಢ್ಯರೊಬ್ಬರು ಆಕ್ರಮಿಸಿಕೊಂಡು ಅನುಭವಿಸುತ್ತಿದ್ದರು. ವಂಶದ ಕಾಯಕವಾಗಿ ತೊಗಲು ಗೊಂಬೆ ಆಡಿಸಿಕೊಂಡು ಊರೂರು ಅಲೆಯುತ್ತಿದ್ದರಿಂದ ಜಮೀನು ಉಳಿಸಿಕೊಳ್ಳಲು ಅವನಿಗೆ ಆಗಿರಲಿಲ್ಲ. ಈ ಸಮಸ್ಯೆಯ ಸಲುವಾಗಿಯೇ ಆತ ನನ್ನನ್ನು ಭೇಟಿ ಮಾಡಲು ಬಂದಿದ್ದ. ವಿವರ ಪಡೆದು ನಾನೇ ಖುದ್ದು ಗ್ರಾಮಕ್ಕೆ ಹೋಗಿ ಜಮೀನನ್ನು ಅವನಿಗೆ ಬಿಡಿಸಿಕೊಟ್ಟೆ. ನನ್ನ ಪ್ರಯತ್ನದಿಂದ ಆ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೊಂಬೆಸುಬ್ಬಯ್ಯನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ನಾನೇ ಆಗಿದ್ದರಿಂದ ಸಂಘಗಳ ವತಿಯಿಂದಲೂ ತೊಗಲು ಗೊಂಬೆ ಆಡಿಸಲು ಅಗತ್ಯವಾಧ ಉತ್ತಮ ಗುಣಮಟ್ಟದ ಪರದೆ, ಗ್ಯಾಸ್ ಲೈಟು, ತಬಲ, ಮುಂತಾದ ವಾದ್ಯ ಪರಿಕರಗಳೊಂದಿಗೆ ಧನಸಹಾಯವನ್ನೂ ಸಹ ಮಾಡಿಸಿದೆ. ಆ ಸಂದರ್ಭದಲ್ಲಿ ಆತ ನನಗೆ ಕೈ ಮುಗಿದು ಹೇಳಿದ್ದು: 'ಯಪ್ಪಾ, ನೀವೇ ನಮ್ಮ ದ್ಯಾವರು!'.

     ಮೇಲೆ ತಿಳಿಸಿದಂತಹ ಅನೇಕ ಉದಾಹರಣೆಗಳು ನಿಮ್ಮ ಗಮನಕ್ಕೂ ಬಂದಿರಬಹುದು. ನಮ್ಮ ನಿಮ್ಮೆಲ್ಲರ ಅನುಭವದಂತೆ ಕಷ್ಟದಲ್ಲಿದ್ದಾಗ, ಬೇರೆ ಯಾವುದೇ ಸಹಾಯ ದೊರಕದಿದ್ದಾಗ ಅನಿರೀಕ್ಷಿತ ನೆರವು ನೀಡುವವರನ್ನು ದೇವರು ಎಂತಲೋ ಅಥವಾ ದೇವರೇ ಅವರ ಮೂಲಕ ಮಾಡಿಸಿದ ಸಹಾಯ ಎಂತಲೋ ಭಾವಿಸುವುದು ಸುಳ್ಳಲ್ಲ. ಹಸಿವಿನಿಂದ ಕಂಗೆಟ್ಟು ಹಪಹಪ ಪಡುತ್ತಿರುವವರಿಗೆ ತಿನ್ನಲು ಏನಾದರೂ ಕೊಡುವವರೇ ದೇವರು. ಅಂದರೆ ದೇವರು ಆಪದ್ಭಾಂದವನೆಂದು ಎಲ್ಲರೂ ಒಪ್ಪುತ್ತೇವಲ್ಲವೇ?

     ಗಂಭೀರವಾದ ವಿಷಯದಲ್ಲಿ ಆಸಕ್ತಿ ಉಳಿಸುವ ಸಲುವಾಗಿ ಒಂದು ತಮಾಷೆಯ ಪ್ರಸಂಗ ಹೇಳುವೆ. ಒಬ್ಬ ಭಕ್ತ ದೇವರಲ್ಲಿ ಪ್ರಾರ್ಥಿಸುತ್ತಾನೆ: "ದೇವರೇ, ನನ್ನ ಪಕ್ಕದ ಮನೆಯವನು ನನಗೆ ಬಹಳ ತೊಂದರೆ ಕೊಡುತ್ತಿದ್ದಾನೆ. ಅವನ ಎರಡೂ ಕಣ್ಣುಗಳನ್ನು ಇಂಗಿಸಿಬಿಡು." ಆ ಪಕ್ಕದ ಮನೆಯವನೂ ಅದೇ ದೇವರಲ್ಲಿ ಬೇಡಿಕೆ ಇಡುತ್ತಾನೆ: "ದೇವರೇ, ಪಕ್ಕದ ಮನೆಯವನು ನನ್ನ ಎಲ್ಲಾ ಕೆಲಸಗಳಲ್ಲಿ ಅಡ್ಡಗಾಲು ಹಾಕುತ್ತಾನೆ. ಅವನ ಎರಡೂ ಕಾಲುಗಳನ್ನು ಸೇದಿಸಿಬಿಡು." ದೇವರಿಗೆ ಫಜೀತಿ! ಯಾರ ಮಾತು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಸಿಟ್ಟು, ಇವನ ಮಾತು ಕೇಳಿದರೆ ಅವನಿಗೆ ಸಿಟ್ಟು. ದೇವರು, "ಏನು ಬೇಕಾದರೂ ಮಾಡಿಕೊಂಡು ಹಾಳಾಗಿ ಹೋಗಿ. ನಾನು ಇಬ್ಬರ ಮಾತೂ ಕೇಳಲ್ಲ. ನೀವು ಮಾಡಿದ್ದರ ಫಲ ನೀವೇ ಅನುಭವಿಸಿ" ಎಂದುಬಿಡುತ್ತಾನೆ. ಇದು ತಮಾಷೆಗೆ ಹೇಳಿದ್ದಾದರೂ, ಎಲ್ಲಾ ಧರ್ಮಗ್ರಂಥಗಳ ಸಾರವೂ ಇದೇ ಆಗಿದೆ. 'ಮಾಡಿದ್ದುಣ್ಣೋ ಮಹರಾಯ' ಎಂಬುದೇ ಆ ಸಾರ.

     ಆಪದ್ಭಾಂಧವನೆಂದು ಭಾವಿಸುವ ದೇವರನ್ನು ತಲುಪುವ ಅಥವ ಅರಿಯುವ ಸಾಧನವೆಂದು ಭಾವಿಸಲಾಗುವ ಭಕ್ತಿಯ ಒಂದು ದೊಡ್ಡ ಅನುಕೂಲವೆಂದರೆ ಅದು ಇರುವುದರಲ್ಲಿ ಅತಿ ಸುಲಭವಾದ ಮತ್ತು ಅತ್ಯಂತ ಸಹಜವಾದ ದಿವ್ಯತ್ವವನ್ನು ತಲುಪುವ ಮಾರ್ಗ. ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ಇಳಿಯುತ್ತದೆ. ಹಿಂದುತ್ವದ, ಮಹಮದೀಯತ್ವ ಅಥವ ಕ್ರಿಶ್ಚಿಯಾನಿಟಿಯ ಮತಭ್ರಾಂತದ ಮಂದಿ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ಪ್ರೀತಿಯ ವಸ್ತುವಿಗೆ ಏಕನಿಷ್ಠೆ ಇಲ್ಲದಿದ್ದರೆ ನಿಜವಾದ ಪ್ರೀತಿ ಬೆಳೆಯಲಾರದು. ಆದರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಇತರ ಎಲ್ಲವನ್ನೂ ತಿರಸ್ಕರಿಸುವ ಕಾರಣವೂ ಆಗುತ್ತದೆ. ಪ್ರತಿ ಧರ್ಮದ ಅಥವ ದೇಶದ ಎಲ್ಲಾ ದುರ್ಬಲ ಮತ್ತು ಅವಿಕಸಿತ ಮನಸ್ಸುಗಳು ಅವರ ತಮ್ಮದೇ ಆದರ್ಶವನ್ನು ಪ್ರೀತಿಸುವ ಒಂದೇ ರೀತಿಯನ್ನು ಹೊಂದಿರುತ್ತವೆ, ಅದೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ತನ್ನ ದೇವರನ್ನು, ಆದರ್ಶಧ್ಯೇಯವನ್ನು ಉತ್ಕಟವಾಗಿ ಪ್ರೀತಿಸುವ, ತನ್ನ ಧರ್ಮದ ಆದರ್ಶಗಳಿಗೆ ಅಷ್ಟೊಂದು ಅಂಟಿಕೊಂಡಿರುವ ಅದೇ ವ್ಯಕ್ತಿ ಹೇಗೆ ಬೇರೆ ಯಾವುದೇ ಧರ್ಮದ, ಆದರ್ಶದ ಕುರಿತು ನೋಡಿದರೆ ಅಥವ ಕೇಳಿದರೆ ಊಳಿಡುವ ಮತಭ್ರಾಂತನಾಗುತ್ತಾನೆ, ಕೆರಳುತ್ತಾನೆ ಎಂಬುದಕ್ಕೆ ಇಲ್ಲಿ ಕಾರಣ ಸಿಗುತ್ತದೆ. ಭಕ್ತಿಯ ಉನ್ನತ ಸ್ತರದಲ್ಲಿರುವವರು ಕರುಣಾಮಯಿ ದೇವರಂತೆ ಇತರ ಆದರ್ಶಗಳ, ಧರ್ಮಗಳ ಬಗ್ಗೆ ಸಹಿಷ್ಣುತೆ ಹೊಂದಿರುತ್ತಾರೆ. ಕೆಳಸ್ತರದವರ ಹುಚ್ಚಾಟಗಳು ಮತ್ತು ಅದರಿಂದ ಉತ್ಪನ್ನವಾಗುವ ಭಯೋತ್ಪಾದಕತೆ, ರಕ್ತಪಾತ, ಹಿಂಸೆಗಳನ್ನು ತಡೆಗಟ್ಟಲು ಉನ್ನತ ಸ್ತರದವರು ಗಂಭೀರವಾಗಿ ಯೋಚಿಸದಿದ್ದಲ್ಲಿ ವಿಶ್ವ ಅಶಾಂತಿಯ ಗೂಡಾಗುತ್ತದೆ, ಹಿಂಸೆಯ ನೆಲೆವೀಡಾಗುತ್ತದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಅಕೃತ್ಯಗಳನ್ನು ತಡೆಯಲು ದೇವರೇ ಬರಬೇಕೇನೋ! ಯಾರೇ ಆಗಲಿ, ಇಂತಹ ಅಶಾಂತಿ, ತಳಮಳ, ತುಮುಲಗಳನ್ನು ತಡೆದು ಸಾಮರಸ್ಯ ಮೂಡಿಸಲು ಸಮರ್ಥರಾದರೆ ಅವರೇ ಜಗತ್ತಿನ ಪಾಲಿಗೆ ದೇವರಾಗುತ್ತಾರೆ!

-ಕ.ವೆಂ.ನಾಗರಾಜ್.

. . . . (ಮುಂದುವರೆದಿದೆ).

Comments

Submitted by ಗಣೇಶ Fri, 11/14/2014 - 23:56

ಕವಿನಾಗರಾಜರೆ,
ಇದೊಂದು ವಿತರ್ಕ:)->>ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ಇಳಿಯುತ್ತದೆ. ಹಿಂದುತ್ವದ, ಮಹಮದೀಯತ್ವ ಅಥವ ಕ್ರಿಶ್ಚಿಯಾನಿಟಿಯ ಮತಭ್ರಾಂತದ ಮಂದಿ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ...
ಇಲ್ಲಿ "ಕೆಳಸ್ತರ" ಅಂದರೆ ಯಾರು? ಮೇಲ್ಸ್ತರ ಬ್ರಾಹ್ಮಣರಾ? ಇನ್ನಷ್ಟು ವಿವರ ಬೇಕು..

Submitted by kavinagaraj Sat, 11/15/2014 - 09:06

In reply to by ಗಣೇಶ

ನಮಸ್ತೆ, ಗಣೇಶರೇ. ಇಲ್ಲಿ ಕೆಳಸ್ತರ ಎಂಬುದನ್ನು ಯಾವುದೇ ಜಾತಿಯ ಮಾನದಂಡದಿಂದ ಬಳಸಿಲ್ಲ. ಯಾವುದೇ ವಿಷಯವನ್ನು ಹೆಚ್ಚು ತಿಳಿದವರು, ಕಡಿಮೆ ತಿಳಿದವರು ಎಂದು ವಿಂಗಡಿಸಿದಲ್ಲಿ ಕಡಿಮೆ ತಿಳಿದವರು ಕೆಳಸ್ತರದವರು ಎಂದು ಭಾವಿಸಬಹುದು. ಕ್ರಿಶ್ಚಿಯನರು, ಮಹಮದೀಯರು ಎಂಬ ಪದಗಳನ್ನೂ ಬಳಿಸಿರುವೆ. ಅವರಲ್ಲೂ ಬ್ರಾಹ್ಮಣ ಅನ್ನುವ ಹುಟ್ಟಿನ ಜಾತಿಯನ್ನು ಕಾಣಲು ಸಾಧ್ಯವಿದೆಯೇ?

Submitted by ಗಣೇಶ Sun, 11/16/2014 - 22:42

In reply to by kavinagaraj

>>ಯಾವುದೇ ವಿಷಯವನ್ನು ಹೆಚ್ಚು ತಿಳಿದವರು, ಕಡಿಮೆ ತಿಳಿದವರು ಎಂದು ವಿಂಗಡಿಸಿದಲ್ಲಿ ಕಡಿಮೆ ತಿಳಿದವರು ಕೆಳಸ್ತರದವರು ಎಂದು ಭಾವಿಸಬಹುದು..
-ಅದೇ..ಅಳಿಯ ಅಲ್ಲ, ಮಗಳ ಗಂಡ- ಹೆಚ್ಚು ತಿಳಿದವರು ಬ್ರಾಹ್ಮಣರು,ಉಳಿದವರು ಕೆಳಸ್ತರದವರು ಅಂತಲ್ವಾ? ಬುದ್ಧಿಜೀವಿ, ವಿಚಾರವಂತ, ಜಾತ್ಯಾತೀತರಾದ ನಮ್ಮಂತಹವರು ನಿಮ್ಮ ಲೇಖನದಲ್ಲಿ ಹುಡುಕುವುದೇ ಇದನ್ನು.:)
ಕವಿನಾಗರಾಜರೆ, ದೇವರು ಧರ್ಮ ಇತ್ಯಾದಿ ಅಧ್ಯಯನ ಮಾಡದೇ ಇದ್ದರೂ, ಜನಸಾಮಾನ್ಯರು ತಮ್ಮ ಪಾಡಿಗೆ ತಮ್ಮ ನಂಬಿಕೆಯಂತೆ ಆಚರಣೆ ಮಾಡಿಕೊಂಡಿರುತ್ತಾರೆ. ಅವರಿಗೆ ಇನ್ನೊಂದು ಧರ್ಮದ ಬಗ್ಗೆ ಅಸಹಿಷ್ಣುತೆ ಇಲ್ಲ. ನೀವು ತಿಳಿಸಿದ ಮೇಲ್‌ಸ್ತರದ ಜನರಿಗೂ ದೇವರು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅರೆಬರೆ ಧರ್ಮರಕ್ಷಕ ಎಡಬಿಡಂಗಿಗಳೇ ಸಮಸ್ಯೆಯ ಮೂಲ.

Submitted by kavinagaraj Mon, 11/17/2014 - 08:58

In reply to by ಗಣೇಶ

ಮಿತ್ರ ಗಣೇಶರೇ, ಹುಡುಕಿ ಬರೆಯುವವರ ಬಗ್ಗೆ ನನಗೆ ಬೇಸರವಿಲ್ಲ. ಹೆಚ್ಚು ತಿಳಿದವರು ಬ್ರಾಹ್ಮಣರು (ಜಾತಿಯಲ್ಲ, ಹುಟ್ಟಿನ ಬ್ರಾಹ್ಮಣರೂ ಅಲ್ಲ) ಎಂದುಕೊಂಡರೆ ಅದರಲ್ಲೂ ತಪ್ಪಿಲ್ಲ, ಬೇರೆ ಇನ್ನು ಯಾವುದೇ ಲೇಬಲ್ ಹಚ್ಚಿದರೂ ಅಭ್ಯಂತರವಿಲ್ಲ. ನೀವು ಹೇಳಿದ 'ಅರೆಬರೆ ಧರ್ಮರಕ್ಷಕ ಎಡಬಿಡಂಗಿಗಳೇ ಸಮಸ್ಯೆಯ ಮೂಲ' ಎಂಬುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ವಂದನೆಗಳು.

Submitted by nageshamysore Sat, 11/15/2014 - 04:48

ದೇವರ ಅಸ್ತಿತ್ವದ ತರ್ಕ / ಕುತರ್ಕ ಪ್ರತಿ ಪೀಳಿಗೆಯನ್ನು ಎಡಬಿಡದೆ ಕಾಡುವ ವಸ್ತು. ಪರವಾಗಿಯೊ, ವಿರೋಧವಾಗಿಯೊ, ನಡುವಿನ ನಿರ್ಲಿಪ್ತವಾಗಿಯೊ - ಯಾವುದಾದರೊಂದು ಗುಂಪುನಲ್ಲಿ ಗುರುತಿಸಿಕೊಂಡು ನಿರಂತರ ಜಿಜ್ಞಾಸೆಗೆ ಕಾರಣವಾಗುತ್ತದೆ. ನಿನ್ನೆ ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳನ್ನು ಓದಿದಾಗ ಈ ವಸ್ತು ಡೀವಿಜಿಯವರನ್ನು ಕಾಡುತ್ತಿದ್ದ ಬಗ್ಗೆಯ ಒಂದು ಸೂಕ್ಷ್ಮ ಒಳನೋಟವೂ ಸಿಕ್ಕಿದಂತಾಗಿತ್ತು. ಕಾಕತಾಳೀಯವಾಗಿ ನಿಮ್ಮ ಲೇಖನ ಸರಣಿಯ ವಸ್ತುವು ದೇವರ ಕುರಿತದ್ದೆ ಆಗಿದೆ. ಸರಣಿ ಮುಂದುವರೆಯಲಿ :-)

Submitted by swara kamath Sat, 11/15/2014 - 19:46

ಕವಿ ನಾಗರಾಜರಿಗೆ ನಮಸ್ಕಾರ
ಅನೇಕ ದಿನಗಳಿಂದ "ಸಂಪದ" ದಲ್ಲಿ ತಮ್ಮ ಲೇಖನಗಳು ಕಾಣದೆ ಬೇಸರವಾಗಿತ್ತು. ಕಾರಣ ತಿಳಿದು ಮನಸ್ಸಿಗೆ ಆತಂಕವಾಗಿತ್ತು.
ಈಗ ತಮ್ಮ ಆರೋಗ್ಯ ಸುಧಾರಣೆ ಆಗಿರುವುದಾಗಿ ನಂಬಿದ್ದೇನೆ.
'ದೇವರು'ಕುರಿತ ವಾದ ,ವಿವಾದ, ವಿತಂಡವಾದಗಳು ನಡೆಯುತ್ತಲೇ ಇರುತ್ತವೆ.ಮನುಷ್ಯಪ್ರಾಣಿ ತನ್ನದೇ ಆದ ನಂಬಿಕೆಗಳಿಗೆ ಬದ್ಧನಾಗಿ
ಅನೇಕ ಜಾತಿಮತಗಳಿಗೆ ಒಳಪಟ್ಟು ತನ್ನ ಪರಿದಿಯನ್ನು ವಿಸ್ತಾರ ಗೋಳಿಸುವ ಯೋಚನೆಯಲ್ಲೆ ಇರುತ್ತಾನೆ.ಈ ಸಂಘರ್ಷ ನಡೆಯುತ್ತಲೇ ಇರುತ್ತದೆ. ಒಳ್ಳೆಯ ಲೇಖನ ಬರೆದಿರುವಿರಿ .ವಂದನೆಗಳು.............ರಮೇಶ ಕಾಮತ್