"ಸೋಲಿಸಬೇಡ ಗೆಲಿಸಯ್ಯ"

"ಸೋಲಿಸಬೇಡ ಗೆಲಿಸಯ್ಯ"

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರೇಮಾ ಕಾರಂತ
ಪ್ರಕಾಶಕರು
ಮನೋಹರ ಗ್ರಂಥಮಾಲೆ
ಪುಸ್ತಕದ ಬೆಲೆ
೧೫೦

ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ ಅಂಚೆಯ ಮೂಲಕ ವರ್ಷಗಳ ಹಿಂದೆಯೇ ನನಗೆ ಈ ಪುಸ್ತಕ ತಲುಪಿತ್ತು. ಆದರೆ ಸರಿಯಾಗಿ ಓದಲು ಆಗಿರಲಿಲ್ಲ. ನಿನ್ನೆಯಷ್ಟೆ ಬೇಸರ ಕಳೆಯಲು ॑ಹಂಸಗೀತೆ॑ಯ ಹಾಡುಗಳನ್ನು ಕೇಳುತ್ತ ಕುಳಿತಿದ್ದ ನನಗೆ ಅದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಬಿ ವಿ ಕಾರಂತ ನೆನಪಾಗಿದ್ದರು. ಆ ಚಿತ್ರದಲ್ಲಿನ ವಸ್ತ್ರ ವಿನ್ಯಾಸ ಪ್ರೇಮಾ ಕಾರಂತರದ್ದು.

ಪ್ರೇಮಾ ಕಾರಂತರು ಏನು ಬರೆದಿರಬಹುದು ಎಂಬ ಕುತೂಹಲದಿಂದ ಓದಲು ಪ್ರಾರಂಭಿಸಿದ ಪುಸ್ತಕ ಓದು ಮುಗಿಸುವವರೆಗೂ ತೆಗೆದಿಡಲು ಮನಸ್ಸಾಗಲೇ ಇಲ್ಲ. ಸಾಧನೆಯ ಜೀವನ ನಡೆಸಿದ ಪ್ರೇಮಾ ಕಾರಂತರು ಅದರ ಹಿಂದಿದ್ದ ಕಷ್ಟಗಳು, ಅದು ತಂದಿತ್ತ ನೋವುಗಳ ಬಗ್ಗೆ ಬಹು ಧೈರ್ಯದಿಂದ ಮುಚ್ಚುಮರೆಯಿಲ್ಲದಂತೆ ನೇರ ಬರೆದಿದ್ದಾರೆ. ಅದೊಂದು ದಿನ ಪ್ರೇಮಾ ಕಾರಂತರ ಮನಸ್ಸಿನಲ್ಲಿ ಆಲೋಚನೆಗಳು, ನೋವು, ಖಿನ್ನತೆ ಪ್ರವಹಿಸುತ್ತಿರುವಂತೆಯೇ ಪ್ರಮುಖ ಸಾಹಿತಿಯೊಬ್ಬರು "ಏನು ಗಟ್ಟಿ ಹೆಂಗಸರೀ ನೀವು" ಎಂದೆಲ್ಲ ಹೊಗಳಿದ್ದರ ಪ್ರಸ್ತಾಪವಿದೆ. ಆಗ ಅವರನ್ನು ಹೊಗಳಿದ ಆ ಸಾಹಿತಿಯೂ ಅವರಿಗೆ "stupid man" ಅನ್ನಿಸುವುದರಲ್ಲಿ ಬದುಕಿನ ವಾಸ್ತವದ ಅರಿವಿನ ಚಹರೆಯಿದೆ. ಅವರು ಅನುಭವಿಸಿದ ನೋವುಗಳ ಹಿಂದೆ ಕಷ್ಟಗಳ ಸರಮಾಲೆಯಿದ್ದರೂ ಅದನ್ನು ಹೆಚ್ಚು ಎಳೆಯದೆ ಧೈರ್ಯದಿಂದ ಮುನ್ನುಗ್ಗಿದುದರ ಕುರಿತು ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ. ಪುಸ್ತಕ ಓದುವಾಗ ಈ ವಿಷಯ ನನಗೆ ಬಹಳ ಇಷ್ಟವಾಯಿತು.

ಬಿ ವಿ ಕಾರಂತರ ಸಾಧನೆಯ ಜೀವನದಲ್ಲಿ ಪ್ರೇಮಾ ಕಾರಂತರು ವಹಿಸಿದ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ಪ್ರೇಮಾ ಕಾರಂತರು ಹೇಳಿಕೊಳ್ಳುವ ಗೋಜಿಗೆ ಹೋಗದಿದ್ದರೂ ಅದರ ಅರಿವು ಓದುಗರಿಗಾಗುತ್ತದೆ. ಪುಸ್ತಕವೊಂದು ಪಟ್ಟ ಪಾಡಿನ ವ್ಯಾಖ್ಯಾನವಷ್ಟೇ ಆಗದೆ ಕಷ್ಟಗಳನ್ನೆದುರಿಸುವ, ಧೈರ್ಯ ತುಂಬುವ ಅಪೂರ್ವ ಅನುಭವವಾಗುವುದು ಈ ಕೃತಿಯ ವೈಶಿಷ್ಟ್ಯತೆ.

ಈ ಪುಸ್ತಕವನ್ನು ಧಾರವಾಡದ ಮನೋಹರ ಗ್ರಂಥಮಾಲೆ ಹೊರತಂದಿದೆ. ಓದಿ.