ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶ

ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶ

ನಮ್ಮ ದೇಶದಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದರಿಂದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ ೮ ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ೬ ರೂಪಾಯಿ ಕಡಿತ ಮಾಡಿವೆ. ಬೆಲೆಯಲ್ಲಿ ಈ ರೀತಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಇದುವರೆಗೆ ಯಾವುದೇ ಸಾರಿಗೆ ಸಂಸ್ಥೆಗಳು (ಸರ್ಕಾರೀ ಹಾಗೂ ಖಾಸಗಿ ಎರಡೂ) ಬಸ್ಸು ಪ್ರಯಾಣದರದಲ್ಲಿ ಒಂದು ನಯಾಪೈಸೆಯಷ್ಟೂ ಕಡಿಮೆ ಮಾಡಿಲ್ಲ. ಅದೇ ರೀತಿ ಆಟೋರಿಕ್ಷಾಗಳ ಪ್ರಯಾಣ ದರ, ಟ್ಯಾಕ್ಸಿಗಳ ಪ್ರಯಾಣ ದರ, ಟೂರಿಸ್ಟ್ ವಾಹನಗಳ ಬಾಡಿಗೆ, ಸರಕು ಸಾಗಣೆ ವಾಹನಗಳಾದ ಲಾರಿ, ಜೀಪು, ಪಿಕಪ್ ಇತ್ಯಾದಿಗಳ ಬಾಡಿಗೆಯಲ್ಲಿಯೂ ಏನೂ ಇಳಿಕೆ ಆಗಿಲ್ಲ. ಮಣ್ಣು ಅಗೆಯುವ ಜೆಸಿಬಿ ಇತ್ಯಾದಿಗಳ ದರದಲ್ಲಿಯೂ ಇಳಿಕೆ ಆಗಿಲ್ಲ. ಅದೇ ರೀತಿ ರೈಲು ಸರಕು ಸಾಗಣೆ ಹಾಗೂ ಪ್ರಯಾಣ ದರಗಳಲ್ಲಿ ಇಳಿಕೆ ಆಗಿಲ್ಲ. ಹಾಗಾದರೆ ಇವರೆಲ್ಲರಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶವಾಗಿದೆಯೇ ಎಂದರೆ ಆಗಿದೆ ಎಂಬುದೇ ಕಂಡುಬರುವ ಉತ್ತರ. ನಮ್ಮ ಜನರು ಪರಮ ದೈವಭಕ್ತರು. ಹೀಗಿದ್ದರೂ ತೈಲ ದರಗಳಲ್ಲಿ ಭಾರೀ ಇಳಿಕೆ ಆಗಿದ್ದರೂ ಬಾಡಿಗೆ ಹಾಗೂ ಪ್ರಯಾಣ ದರದಲ್ಲಿ ಇಳಿಕೆ ಮಾಡದೆ ಹಗಲುದರೋಡೆ ಮಾಡಲು ಇವರಿಗೆ ಯಾವ ಸಂಕೋಚವೂ ಇಲ್ಲ ಎಂಬುದು ವಿಚಿತ್ರವಾದರೂ ಸತ್ಯ. ಇದು ದೇವರು ಮೆಚ್ಚುವ ಕೆಲಸವೇ ಎಂದು ಇವರಲ್ಲಿ ಕೇಳಬೇಕಾಗಿದೆ. ಪರಮ ದೈವಭಕ್ತಿಯೂ ನಮ್ಮ ಜನರಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಬೆಳೆಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ಕಂಡುಬರುತ್ತಿದೆ.

ಸಾರಿಗೆ ಇಲಾಖೆ ತೈಲ ಬೆಲೆಗಳಲ್ಲಿ ಇಳಿಕೆ ಆದಾಗ ಅದನ್ನು ಬಳಸುವ ಸಾರ್ವಜನಿಕ ಸಾರಿಗೆ ವಾಹನಗಳು, ಸರಕು ಸಾಗಣೆ ವಾಹನಗಳು ತಮ್ಮ ದರಗಳಲ್ಲಿ ಇಳಿಕೆ ಮಾಡುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ. ಕೇಂದ್ರದ ಮೋದಿ ನೇತೃತ್ವದ ಸರಕಾರವು ಈ ವಿಷಯದ ಬಗ್ಗೆ ಗಮನ ಕೊಡದೆ ಇರುವುದು ಆಶ್ಚರ್ಯದ ವಿಚಾರವಾಗಿದೆ ಏಕೆಂದರೆ ಜನಸಾಮಾನ್ಯರಿಗೆ ಒಳ್ಳೆಯ ದಿನಗಳ ಭರವಸೆ ನೀಡಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಡುಬಂದ ತೈಲೋತ್ಪನ್ನಗಳ ಬೆಲೆ ಇಳಿಕೆಯ ಪ್ರಯೋಜನ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಹಿಂದಿದ್ದ ಕಾಂಗ್ರೆಸ್ ಸರಕಾರಕ್ಕೂ ಭಾರೀ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವೂ ಕಾಣಿಸುತ್ತಿಲ್ಲ.

ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಜಾಗೃತಿ ಮೂಡಿಸಬೇಕಾಗಿರುವ ಟಿವಿ ಮಾಧ್ಯಮ ಈ ವಿಚಾರದಲ್ಲಿ ಸಂಪೂರ್ಣ ಕರ್ತವ್ಯಲೋಪ ಎಸಗುತ್ತಿದೆ. ಈ ವಿಚಾರದಲ್ಲಿ ಪತ್ರಿಕೆಗಳು ತಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿವೆ. ಪತ್ರಿಕೆಗಳ ಈ ವಿಚಾರದಲ್ಲಿ ಸಾಕಷ್ಟು ಓದುಗರ ಪತ್ರಗಳನ್ನು ಪ್ರಕಟಿಸಿ ತಮ್ಮ ಇತಿಮಿತಿಯಲ್ಲಿ ಚೆನ್ನಾಗಿ ಕರ್ತವ್ಯ ನಿರ್ವಹಿಸಿರುವುದು ಶ್ಲಾಘನೀಯ. ಇವರಲ್ಲಿ ಇಷ್ಟಾದರೂ ನೈತಿಕ ಕರ್ತವ್ಯಪ್ರಜ್ಞೆ ಇನ್ನೂ ಉಳಿದಿದೆಯಲ್ಲ ಎಂಬುದೇ ಸಮಾಧಾನದ ವಿಷಯ. ಪತ್ರಿಕೆಗಳಿಗೆ ಹೋಲಿಸಿದರೆ ಹೆಚ್ಚು ಪ್ರಭಾವಶಾಲಿಯಾದ, ಜನತೆಯನ್ನು ಬೇಗನೆ ಹಳ್ಳಿ, ನಗರ ಎನ್ನದೆ ತಲುಪುವ ಸಾಮರ್ಥ್ಯ ಉಳ್ಳ ಟಿವಿ ಮಾಧ್ಯಮದಲ್ಲಿ ನೈತಿಕ ಕರ್ತವ್ಯ ಪ್ರಜ್ಞೆ ಎಂಬುದು ಸಂಪೂರ್ಣ ಆವಿಯಾಗಿ ಹೋಗಿದೆ.

Comments

Submitted by ಗಣೇಶ Tue, 11/18/2014 - 23:32

ಆನಂದರೆ, ನಿಮ್ಮ ಮಾತಿಗೆ ನನ್ನ ಪೂರ್ಣ ಸಹಮತವಿದೆ. ಒಂದು ರೂ ಪೆಟ್ರೋಲ್ ದರ ಏರಿತು ಎಂದ ಕೂಡಲೇ ಅದಕ್ಕೆ ಸಂಬಂಧಿಸಿರಲಿ, ಇಲ್ಲದಿರಲಿ ಎಲ್ಲದಕ್ಕೂ ...ಕೊನೆಗೆ ಕರೆಂಟು ಬಿಲ್ ಸಹ ಏರಿಸುವರು:)
ಇಳಿದಾಗ ತೆಪ್ಪಗೆ ಕೂತಿದ್ದಾರೆ! ಇಲ್ಲೊಂದು ವಿರೋಧಪಕ್ಷ ಎಂಬುದು ಇದೆಯೋ ಗೊತ್ತಿಲ್ಲ. ಬಸ್ ದರ ಇಳಿಸಲು ಪಟ್ಟು ಹಿಡಿಯುತ್ತಿದ್ದರೆ ಸಾರ್ವಜನಿಕರ ಬೆಂಬಲ ಆ ಪಕ್ಷಕ್ಕೆ ಸಿಗುತ್ತಿತ್ತು.
ಹಬ್ಬದ ದಿನಗಳಲ್ಲಿ, ದೂರ ಪ್ರಯಾಣದ ಬಸ್ ದರ ಏಕಾಏಕಿ ೨-೩ ಪಟ್ಟು ಜಾಸ್ತಿ ಏರಿಸಿದರೂ ಕೇಳುವವರಿಲ್ಲ.

Submitted by anand33 Wed, 11/19/2014 - 09:12

In reply to by ಗಣೇಶ

'ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು' ಎಂಬುದು ಪ್ರಕೃತಿ ನಿಯಮ. ಅದೇ ರೀತಿ ಯಾವುದನ್ನೂ ಪ್ರಶ್ನಿಸದೆ ಮೂಕ ಪಶುಗಳಂತೆ ಎಲ್ಲವನ್ನೂ ಸಹಿಸುತ್ತಾ ಹೋದರೆ ನಮ್ಮ ಮೇಲೆ ಬೇರೆಬೇರೆ ರೀತಿಯ ದಬ್ಬಾಳಿಕೆಗಳು ಹೆಚ್ಚುತ್ತಲೇ ಹೋಗುತ್ತವೆ. ಈಗ ಪೆಟ್ರೋಲ್,ಡೀಸೆಲ್ ಬೆಲೆ ಇಳಿಕೆ ಆದಾಗ ದರ ಇಳಿಸದೆ ಇರುವುದರ ಕುರಿತು ಮಾಧ್ಯಮಗಳು ತೆಪ್ಪಗೆ ಕೂತಿರುವ ಕಾರಣ ಜನಸಾಮಾನ್ಯರ ಶೋಷಣೆ ನಡೆಯುತ್ತಿದೆ. ಇದೆಲ್ಲ ಸಣ್ಣ ವಿಷಯ ಅನ್ನಿಸಬಹುದು ಆದರೆ 'ಹನಿಗೂಡಿ ಹಳ್ಳ' ಎಂಬಂತೆ ಇಡೀ ದೇಶದ ತೈಲ ಬಳಕೆ ನೋಡಿದಾಗ ಇದರಿಂದ ಕೆಲವರಿಗೆ ಭಾರೀ ಲಾಭ ಆಗುತ್ತದೆ. ಉದಾಹರಣೆಗೆ ಇಡೀ ದೇಶದ ಡೀಸೆಲ್ ಬಳಕೆದ ದಿನವೊಂದರ ೨೦ ಕೋಟಿ ಲೀಟರ್. ಒಂದು ಲೀಟರಿಗೆ ೬ ರೂಪಾಯಿಯಂತೆ ಬೆಲೆ ಇಳಿಕೆಯಿಂದ ದಿನಕ್ಕೆ ಆಗುವ ಲಾಭ ೧೨೦ ಕೋಟಿ ರೂಪಾಯಿಗಳು, ತಿಂಗಳಿಗೆ ೩೬೦೦ ಕೋಟಿ ಹಾಗೂ ವರ್ಷಕ್ಕೆ ೪೩,೦೦೦ ಕೋಟಿ ರೂಪಾಯಿಗಳು. ಡೀಸೆಲ್ ಬಳಕೆಯಲ್ಲಿ ಖಾಸಗಿ ವಾಹನಗಳ ಪಾಲು ಹೆಚ್ಚೇನೂ ಇಲ್ಲ. ಡೀಸೆಲ್ ಹೆಚ್ಚು ಬಳಕೆ ಆಗುವುದು ಸರಕು ಸಾಗಣೆ ವಾಹನ, ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಹಾಗೂ ರೈಲುಗಳಲ್ಲಿ. ಹೀಗಾಗಿ ಇದನ್ನೊಂದು ಸಣ್ಣ ವಿಷಯ ಪರಿಗಣಿಸುವಂತಿಲ್ಲ.

Submitted by kavinagaraj Wed, 11/19/2014 - 15:44

ಎಂತಹ ದೊಡ್ಡ ಪ್ರತಿಭಟನೆ ಮಾಡಿದರೂ ಹಣ, ಅಧಿಕಾರ, ತೋಳ್ಬಲಗಳಿಂದ ಹತ್ತಿಕ್ಕಬಹುದೆಂಬುದು ಅಣ್ಣಾ ಹಜಾರೆಯವರ ಹೋರಾಟವನ್ನು ಮೂಲೆಗೆ ಸರಿಸಿದ ರೀತಿಯಿಂದ ತೋರಿಸಿಕೊಟ್ಟಿದ್ದಾರೆ. ಜನರು ಸಿನಿಕರಾಗುತ್ತಿದ್ದಾರೆ. ಮಾಧ್ಯಮಗಳು ನೀವು ಹೇಳಿದಂತೆ ನೈತಿಕ ಪ್ರಜ್ಞೆ ಕಳೆದುಕೊಂಡಿವೆ.