ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ನೈತಿಕ ಪೋಲೀಸ್ಗಿರಿ ವಿರುದ್ಧ ಪ್ರತಿಭಟನೆಗಾಗಿ ಕೆಲವರು ಕಿಸ್ ಆಫ್ ಲವ್ ಆಯೋಜಿಸಲು ಮುಂದಾದಾಗ ಇದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ಈ ರೀತಿಯ ಪ್ರತಿಭಟನೆ ವ್ಯಕ್ತಪಡಿಸಿದ ಮಹಾನುಭಾವರೇ ಬೇರೆ ಹಲವು ವಿಷಯಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಎಗ್ಗಿಲ್ಲದೆ ತೊಡಗಿದ್ದಾರೆ. ಉದಾಹರಣೆಗೆ ಇಂದು ಗಂಡಸರು ತೊಡುವ ಪ್ಯಾಂಟ್ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲದೆ ಮತ್ತಿನ್ನೇನು? ಭಾರತೀಯ ಸಂಸ್ಕೃತಿಯಲ್ಲಿ ಗಂಡಸರು ಪಂಚೆ ಉಡುವುದು ರೂಢಿ ಆದರೆ ಇಂದು ಬಹುತೇಕ ಗಂಡಸರು ಪ್ಯಾಂಟ್ ಧರಿಸುತ್ತಾರೆ. ಅದೇ ರೀತಿ ಇಂದು ನಗರಗಳಲ್ಲಿ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಪೂರ್ವ ಪ್ರಾಥಮಿಕ ಹಂತದಿಂದಲೇ ಪಾಶ್ಚಾತ್ಯ ಸಂಸ್ಕೃತಿಯಾದ ಇಂಗ್ಲೀಷ್ ಮಾಧ್ಯಮದಲ್ಲಿಯೇ ಓದಿಸುತ್ತಾರೆ. ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಇದ್ದಿದ್ದರೆ ಈ ರೀತಿ ಇಂಗ್ಲೀಷ್ ಮಾಧ್ಯಮದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರೆ? ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಇರುವವರು ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಲ್ಲವೇ? ನೈತಿಕ ಪೋಲೀಸ್ಗಿರಿ ಮಾಡುವವರು ಇದೇ ರೀತಿ ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೇಲೆ ಧಾಳಿ ಏಕೆ ಮಾಡುವುದಿಲ್ಲ? ನಮ್ಮ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವವರು ಮೊದಲು ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೇಲೆ ಧಾಳಿ ಮಾಡಿ ಅಂಥ ಶಾಲೆಗಳನ್ನು ನಡೆಸದಂತೆ ತಡೆಯಬೇಕು. ಅಂಥ ತಾಕತ್ತು ನೈತಿಕ ಪೋಲೀಸ್ಗಿರಿ ಮಾಡುವವರಿಗೆ ಇದೆಯೇ?
ಇಂದು ಬೆಂಗಳೂರಿನಂಥ ನಗರಗಳಲ್ಲಿ ಕನ್ನಡಿಗರೂ ಇಂಗ್ಲೀಷಿನಲ್ಲಿ ಮಾತಾಡುವುದು ದೊಡ್ಡಸ್ತಿಕೆಯ ವಿಷಯ ಆಗಿದೆ. ಇದು ಯಾವ ಸಂಸ್ಕೃತಿ? ಇದರ ಬಗ್ಗೆ ನೈತಿಕ ಪೊಲೀಸರು ಏಕೆ ಮೌನವಾಗಿದ್ದಾರೆ? ಇಂಗ್ಲೀಷಿನಲ್ಲಿ ಮಾತಾಡುವವರ ಮೇಲೆ ಧಾಳಿ ಮಾಡುವ ಬೆದರಿಕೆ ಹಾಕಿ ಇದನ್ನು ನಿಲ್ಲಿಸಬಹುದಲ್ಲವೇ? ಅಂಥ ತಾಕತ್ತು ನೈತಿಕ ಪೊಲೀಸರಿಗೆ ಏಕೆ ಇಲ್ಲ? ಏಕೆ ಈ ವಿಷಯದಲ್ಲಿ ಇವರು ತಮ್ಮ ಪೌರುಷ ತೋರಿಸಿ ನಮ್ಮ ಭಾಷೆಯನ್ನು ಉಳಿಸಲು ಮುಂದಾಗುವುದಿಲ್ಲ?
ಭಾರತೀಯ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬ ಪ್ರಧಾನವಾದುದು. ಆದರೆ ಇಂದು ಎಲ್ಲರೂ ವಿಭಕ್ತ ಕುಟುಂಬದ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ತೊಡಗಿಲ್ಲವೇ? ತಂದೆ ತಾಯಿಯರನ್ನು ಹಳ್ಳಿಗಳಲ್ಲಿ ಏಕಾಂಗಿಯಾಗಿ ಬಿಟ್ಟು ಎಷ್ಟು ಜನ ಹಣದ ಬೆನ್ನ ಹಿಂದೆ ಬಿದ್ದು ಬೇರೆ ದೇಶಗಳಲ್ಲಿ, ಬೇರೆ ನಗರಗಳಲ್ಲಿ ಐಶಾರಾಮದ ಜೀವನದಲ್ಲಿ ಮುಳುಗಿಲ್ಲ? ಹಾಗೆ ನೋಡುವುದಾದರೆ ನಗರ ಜೀವನವು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ಆಗಿದೆ. ಪಾಶ್ಚಾತ್ಯ ದೇಶಗಳು ನಗರೀಕರಣದಲ್ಲಿ ಮೊದಲು ತೊಡಗಿದ್ದು ಈಗ ಭಾರತೀಯರೂ ತಮ್ಮ ಸಂಸ್ಕೃತಿಯಾದ ಹಳ್ಳಿ ಜೀವನವನ್ನು ತೊರೆದು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಗರೀಕರಣಕ್ಕೆ ಬಲಿಯಾಗುತ್ತಿಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆ ಕೂಡ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯೇ ಆಗಿದೆ ಏಕೆಂದರೆ ಭಾರತದಲ್ಲಿ ಪ್ರಜೆಗಳು ಮತ ಹಾಕಿ ನಾಯಕರನ್ನು, ಆಡಳಿತ ನಡೆಸುವವರನ್ನು ಆರಿಸುವ ವ್ಯವಸ್ಥೆ ಇರಲೇ ಇಲ್ಲ. ಇಲ್ಲಿ ಇದ್ದದ್ದು ಊಳಿಗಮಾನ್ಯ ಸ್ವರೂಪದ ರಾಜ, ಸಾಮಂತ, ಪಾಳೆಗಾರ ಇಂಥ ವ್ಯವಸ್ಥೆ ಮಾತ್ರ.
ಭಾರತದಲ್ಲಿ ಲೈಂಗಿಕ ವಿಷಯಗಳಲ್ಲಿ ಮಾತ್ರ ನೈತಿಕತೆಯ ಬಗ್ಗೆ ಭಾರೀ ದೊಡ್ಡ ದೊಡ್ಡ ಮಾತನ್ನು ಆಡಲಾಗುತ್ತದೆ ಹಾಗೂ ಭಾರೀ ಪ್ರತಿಭಟನೆ ನಡೆಯುತ್ತದೆ. ಉಳಿದ ವಿಷಯಗಳಲ್ಲಿ ನೈತಿಕತೆಯ ಬಗ್ಗೆ ಪ್ರತಿಭಟನೆ, ಪ್ರತಿರೋಧ ತೋರುವವರು ಯಾರೂ ಇಲ್ಲ. ಉದಾಹರಣೆಗೆ ಭ್ರಷ್ಟಾಚಾರ. ಭ್ರಷ್ಟಾಚಾರದ ವಿರುದ್ಧ ನೈತಿಕ ಪೋಲೀಸ್ಗಿರಿ ನಡೆಸುವವರು ಚಕಾರ ಎತ್ತುವುದಿಲ್ಲ ಹಾಗೂ ಭ್ರಷ್ಟರ ಮೇಲೆ ಧಾಳಿ ನಡೆಸುವ ಬೆದರಿಕೆ ಹಾಕುವುದಿಲ್ಲ. ಇವರು ಭ್ರಷ್ಟರ ಮೇಲೆ ಇದೇ ರೀತಿಯ ಅಬ್ಬರದ ಧಾಳಿ ಮಾಡಿದ್ದಿದ್ದರೆ ಭಾರತದಲ್ಲಿ ಲಂಚ ತೆಗೆದುಕೊಳ್ಳಲು ಯಾವನಿಗೆ ಧೈರ್ಯ ಬಂದೀತು? ನೈತಿಕ ಪೋಲೀಸ್ಗಿರಿ ಮಾಡುವವರು ತಾಕತ್ತು ಇದ್ದರೆ ಭ್ರಷ್ಟ ಅಧಿಕಾರಿಗಳ ಮೇಲೆ, ಭ್ರಷ್ಟ ರಾಜಕಾರಣಿಗಳ ಮೇಲೆ ಅಬ್ಬರದಿಂದ ಧಾಳಿ ಮಾಡಿ ತಮ್ಮ ಪೌರುಷ ತೋರಿಸಿದರೆ ಭ್ರಷ್ಟಾಚಾರವನ್ನು ಭಾರತದಿಂದ ಹೇಳಹೆಸರಿಲ್ಲದಂತೆ ತೊಲಗಿಸಬಹುದು. ಅಂಥ ಧೈರ್ಯ ಅವರಲ್ಲಿ ಇದೆಯೇ?
Comments
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಆನಂದರೆ ಲೇಖನವೇನೋ ಚೆನ್ನಾಗಿದೆ.
>>ನೈತಿಕ ಪೋಲೀಸ್ಗಿರಿ ಮಾಡುವವರು ತಾಕತ್ತು ಇದ್ದರೆ ಭ್ರಷ್ಟ ಅಧಿಕಾರಿಗಳ ಮೇಲೆ, ಭ್ರಷ್ಟ ರಾಜಕಾರಣಿಗಳ ಮೇಲೆ ಅಬ್ಬರದಿಂದ ಧಾಳಿ ಮಾಡಿ ತಮ್ಮ ಪೌರುಷ ತೋರಿಸಿದರೆ ಭ್ರಷ್ಟಾಚಾರವನ್ನು ಭಾರತದಿಂದ ಹೇಳಹೆಸರಿಲ್ಲದಂತೆ ತೊಲಗಿಸಬಹುದು.
-ಇದೆಲ್ಲಾ ಆಗುವಂತಹದಾ? ಅವರ ಕೈಯಲ್ಲೇ ಆಡಳಿತವಿರುವುದರಿಂದ ಎಳೆದುಕೊಂಡು ಹೋಗಿ ಬಳ್ಳಾರಿ ಜೈಲಲ್ಲಿ ಹಾಕುವರು. ಜಯಲಲಿತ ಏನೋ ಕೋಟಿಗಟ್ಟಲೆ ವಕೀಲರಿಗೆ ಖರ್ಚು ಮಾಡಿ ಜೈಲಿಂದ ಹೊರಬರಬಹುದು, ಈ ನೈತಿಕ ಪೋಲೀಸರಿಗೆ ಸಾಧ್ಯಾನಾ?
ಇನ್ನು ಪಂಚೆ ವಿಷಯ- ಸಂಸ್ಕೃತಿ ಎಂದು ಅಲ್ಲ, ನನಗೆ ಪಂಚೆ ಇಷ್ಟ. ಮನೆಯಲ್ಲಿ ಯಾವಾಗಲೂ ಬಿಳಿಪಂಚೆಯನ್ನೇ ಹಾಕಿಕೊಂಡಿರುವೆ. ಕೆಲಸಕ್ಕೆ ಹೋಗುವಾಗ ನೋಡುವವರಿಗೂ ನನಗೂ ಇರಿಸುಮುರಿಸು ಆಗದಿರಲಿ ಎಂದು ಪ್ಯಾಂಟು ಹಾಕಿಕೊಳ್ಳುವೆ. ನೈತಿಕ ಪೋಲೀಸರದ್ದೂ ಅದೇ ಕಾರಣವಿರಬಹುದು.
ಇನ್ನು ಕನ್ನಡ ವಿಷಯ- ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು, ಮನೆಯಲ್ಲಿ ಗೆಳೆಯರ ಜತೆಯೂ ಕನ್ನಡದಲ್ಲೇ ಮಾತನಾಡುವುದು. ಉಳಿದವರಿಗೆ ಕನ್ನಡದಲ್ಲೇ ಮಾತನಾಡಿ ಎಂದು ಆರ್ಡರ್ ಮಾಡಲು ಸಾಧ್ಯಾನಾ? ನನ್ನನ್ನು ಸುಮ್ಮನೆ ಬಿಟ್ಟಾರಾ? ಏಟು ತಿಂದು ಮಲಗಿದ ಫೋಟೋ ಏನಾದರೂ ಪತ್ರಿಕೆಯಲ್ಲಿ ಬಂದರೆ "ಈ ಗಣೇಶರಿಗೆ ಯಾಕೆ ಬೇಕಿತ್ತು...?" ಎಂದೆಲ್ಲಾ ನೀವೇ ಗೊಣಗುತ್ತೀರಿ. ಇದೇ ತಾಪತ್ರಯ ನೈತಿಕ ಪೋಲೀಸರದ್ದು ಆಗಿರಬಹುದು.
ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ನಡೆಸುವವರ ತಾಕತ್ತಿನ ಅರಿವು ಇತ್ತೀಚಿನ ಪ್ರಕರಣಗಳಿಂದ ನಿಮಗೆ ಗೊತ್ತಾಗಿರಬಹುದು.
ಲೈಂಗಿಕ ವಿಷಯದಲ್ಲಿ ತೀರಾ ಪಾಶ್ಚಾತ್ಯ ಸಂಸ್ಕೃತಿ ನಮ್ಮ ಕಾಲದಲ್ಲಿ ನಮ್ಮ ಪ್ರೀತಿಯ ದೇಶದಲ್ಲಿ ಬರುವುದು ಬೇಡ ಎಂದು ನಮ್ಮ ಆಶಯ.
ನೈತಿಕ ಪೋಲೀಸರದ್ದು- ಸ್ವಲ್ಪ ಅತಿ ಎನಿಸಿದರೂ ಇಂತಹ ಹುಚ್ಚಾಟಗಳಿಗೆ ಕಡಿವಾಣ ಹಾಕಲು ಅವರ ಅಗತ್ಯವಿದೆ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by ಗಣೇಶ
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ನಮ್ಮ ಸಿನೆಮಾಗಳಲ್ಲಿ ಬರುವ ಅಲಿಂಗನ, ಚುಂಬನ, ಅಪ್ಪಿ ಹೊರಳಾಡುವುದು, ಹೆಣ್ಣನ್ನು ಅರೆನಗ್ನವಾಗಿ ತೋರಿಸುವುದು ಇದನ್ನೆಲ್ಲಾ ನೈತಿಕ ಪೊಲೀಸರು ಸಹಿಸಿಕೊಂಡಿದ್ದಾರೆ. ನೈತಿಕ ಪೋಲೀಸ್ಗಿರಿ ವಿರುದ್ಧ ಕೆಲವರು ಒಂದು ದಿನ ಕಿಸ್ ಆಫ್ ಲವ್ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರೆ ಸಹಿಲಸಾಧ್ಯವಾಗುತ್ತದೆ. ಈ ದ್ವಂದ್ವಕ್ಕೆ ಏನೆಂದು ಹೇಳುವುದು? ಇವರಿಗೆ ನಿಜವಾಗಿ ದೇಶದ ಸಂಸ್ಕೃತಿಯ ಬಗ್ಗೆ ಕಾಳಜಿ ಇದ್ದಿದ್ದರೆ ಇಂಥ ಸಿನೆಮಾಗಳ ಚಿತ್ರೀಕರಣವನ್ನೇ ನಡೆಯಲು ಬಿಡಬಾರದು. ಚಿತ್ರೀಕರಣ ನಡೆಸುವಲ್ಲಿಗೆ ಧಾಳಿ ಮಾಡಬೇಕು, ಚಿತ್ರಗಳಲ್ಲಿ ಅರೆನಗ್ನವಾಗಿ ನಟಿಸುವ ನಟಿಯರ ಮೇಲೆ ಧಾಳಿ ಮಾಡಬೇಕು, ಚಿತ್ರಗಳಲ್ಲಿ ಅಪ್ಪಿ ಹೊರಳಾಡುವ ನಟನಟಿಯರ ಮೇಲೆ ಎರಗಬೇಕು. ಇಂಥ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಮೇಲೆ ಧಾಳಿ ಮಾಡಬೇಕು, ಚಿತ್ರ ಪ್ರದರ್ಶಿಸುವ ಟಿವಿ ವಾಹಿನಿಗಳ ಮೇಲೆ ಧಾಳಿ ಮಾದಬೆಕು. ಅಂಥ ಧೈರ್ಯ ಇವರಿಗೆ ಎಲ್ಲಿದೆ? ಎಲ್ಲೋ ಕೆಲವು ಬಡಪಾಯಿಗಳು ಪ್ರೀತಿಸಿದರೆ ಅವರ ಮೇಲೆ ಧಾಳಿ ಮಾಡಲು ಹೆಚ್ಚಿನ ಪೌರುಷ ಬೇಕಿಲ್ಲ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by ಗಣೇಶ
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಗಣೇಶರ ಅಭಿಪ್ರಾಯಕ್ಕೆ ಸಹಮತನಿದ್ದೇನೆ. ಅನೈತಿಕ ಪೋಲಿಗಿರಿ ಎಂದಿಗೂ ಸಮರ್ಥನೀಯವಲ್ಲ - ಅದನ್ನು ಯಾರೇ ಮಾಡಲಿ, ಯಾವುದೇ ಕಾರಣಕ್ಕೆ ಮಾಡಲಿ, ಖಂಡನೀಯ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by kavinagaraj
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಇಂದು ಮೊಬೈಲ್ ಹಾಗೂ ಇಂಟರ್ನೆಟ್ ಮಾಧ್ಯಮದ ಮೂಲಕ ಯುವಜನಾಂಗ ಹೈಸ್ಕೂಲ್ ಮಟ್ಟದಲ್ಲಿಯೇ ಬ್ಲೂ ಫಿಲಂ ನೋಡಿರುತ್ತಾರೆ. ಹೀಗಿರುವಾಗ ಒಂದು ಕಿಸ್ ಆಫ್ ಲವ್ ಎಂಬ ಪ್ರತಿಭಟನೆಯ ಬಗ್ಗೆ ಮಾತ್ರ ಭಾರೀ ಪ್ರತಿಭಟನೆಯ ಆಕ್ರೋಶ ನೋಡುವಾಗ ನಮ್ಮ ಸಮಾಜಕ್ಕೆ ವಸ್ತು ಸ್ಥಿತಿಯ ಅರಿವಿಲ್ಲ ಎಂದೇ ಹೇಳಬೇಕಾಗುತ್ತದೆ. ಇದನ್ನೆಲ್ಲಾ ನಿಷೇಧಿಸುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಇಂದು ಬ್ಲೂ ಫಿಲಂ ದೊರಕದಂತೆ ಮಾಡುವುದು ತಂತ್ರಜ್ಞಾನದ ಯುಗದಲ್ಲಿ ಸಾಧ್ಯವಿಲ್ಲ. ಸರಕಾರ ಇದನ್ನೆಲ್ಲಾ ನಿಷೇಧಿಸಿದರೂ ಅದನ್ನು ನಿಷ್ಫಲಗೊಳಿಸಿ ರಂಗೋಲಿಯ ಕೆಳಗೆ ತೂರುವ ತಂತ್ರಜ್ಞಾನ ಅದಾಗಲೇ ಲಭ್ಯವಿದೆ. ಅಲ್ಲದೆ ಶೀತ ಆಗುತ್ತದೆ ಎಂದು ಮೂಗು ಕೊಯ್ಯುವುದು ಪರಿಹಾರವೇ ಅಲ್ಲ. ಇಂದು ಯುವಜನಾಂಗ ಮೊಬೈಲ್ ಹೊಂದುವುದನ್ನು ನಿಷೇಧಿಸಲು ಸಾಧ್ಯವೇ? ಇದು ಖಂಡಿತ ಸಾಧ್ಯವಿಲ್ಲ. ಮೊಬೈಲಿನಲ್ಲಿ ಬ್ಲೂ ಫಿಲಂ ನೋಡಲು ಸಾಧ್ಯವಿರುವಾಗ ಮತ್ತು ಒಂದು ಮೊಬೈಲಿನಿಂದ ಇನ್ನೊಂದು ಮೊಬೈಲಿಗೆ ವೀಡಿಯೊ ವರ್ಗಾವಣೆ ಸುಲಭವಾಗಿ ಸಾಧ್ಯವಿರುವ ಕಾರಣ ಇಂದು ಯುವಜನಾಂಗ ಬ್ಲೂ ಫಿಲಂಗಳನ್ನು ನೋಡುವುದನ್ನು ತಡೆಯುವುದು ಸಾಧ್ಯವಿಲ್ಲದ ಮಾತು. ಸರ್ಕಾರ ಚಾಪೆ ಕೆಳಗೆ ತೂರಿದರೆ ಯುವಜನಾಂಗ ರಂಗೋಲಿ ಕೆಳಗೆ ತೂರುವುದನ್ನು ಕಲಿತಿರುತ್ತದೆ. ಯುವಜನಾಂಗದ ಲೈಂಗಿಕತೆಯ ಮೇಲಿನ ಸಹಜ ಕುತೂಹಲವನ್ನು ನೈತಿಕತೆಯ ಹೆಸರಿನಲ್ಲಿ ಹತ್ತಿಕ್ಕುವುದು ಸಾಧ್ಯವಾಗದ ಮಾತು. ಯುವಜನಾಂಗ ಕದ್ದುಮುಚ್ಚಿ ತಂತ್ರಜ್ಞಾನದ ಮೂಲಕ ಎಲ್ಲವನ್ನೂ ನೋಡಿರುತ್ತಾರೆ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by anand33
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಅನೈತಿಕತೆಯನ್ನು ಬಹಿರಂಗವಾಗಿ ಪ್ರದರ್ಶಿಸಬೇಕೆಂಬುದು ನಿಮ್ಮ ಇಚ್ಛೆಯೇ? ಅದಕ್ಕಾಗಿ ಹೋರಾಟ ಮುಂದುವರೆಸಿರಿ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by kavinagaraj
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ರಿಚರ್ಡ್ ಗೇರ್ ನಟಿ ಶಿಲ್ಪಾ ಶೆಟ್ಟಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಅಪ್ಪಿಕೊಂಡು ಚುಂಬಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಇದು ಶಿಕ್ಷಾರ್ಹ ಅಪರಾಧ ಅಲ್ಲ ಎಂದು ಹೇಳಿದೆ. ಹೀಗಾಗಿ ಕಿಸ್ ಆಫ್ ಲವ್ ಪ್ರತಿಭಟನೆ ಕೂಡ ಕಾನೂನುಬಾಹಿರವಲ್ಲ. ಇನ್ನು ಅನೈತಿಕತೆ ಪ್ರಶ್ನೆ. ಇದು ಅನೈತಿಕವೆಂದಾದರೆ ನಾವು ನೀವು ಸಿನೆಮಾದಲ್ಲಿ ತೋರಿಸುವ ಇದನ್ನು ಟಿವಿಯಲ್ಲಿ ನೋಡುವುದಿಲ್ಲವೇ? ಇದು ಅನೈತಿಕವಲ್ಲವೇ? ಬೆಡ್ರೂಮಿನಲ್ಲಿ ನಡೆಯಬೇಕಾದ ಇದನ್ನು ಸಿನೆಮಾದಲ್ಲಿ ಹಾಗೂ ಟಿವಿಯಲ್ಲಿ ಸಾರ್ವಜನಿಕವಾಗಿ ತೋರಿಸುವುದು ಕೂಡ ಅನೈತಿಕವೇ ಆಗುತ್ತದೆ. ಈ ಬಗ್ಗೆ ಚಕಾರವೆತ್ತದ ನಾವು ಒಂದು ದಿವಸ ನೈತಿಕ ಪೋಲೀಸ್ಗಿರಿ ವಿರುದ್ಧ ಕೆಲವರು ಕಿಸ್ ಆಫ್ ಲವ್ ರೂಪದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದ ಕೂಡಲೇ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಹಾಹಾಕಾರ ಎಬ್ಬಿಸುವುದು, ತನ್ಮೂಲಕ ಸಂವಿಧಾನದತ್ತ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುವುದು ಎಷ್ಟರ ಮಟ್ಟಿಗೆ ಸಮಂಜಸ? ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವೇ?
ಖಾಜುರಾಹೊದಲ್ಲಿ (ಮಧ್ಯಪ್ರದೇಶ) ದೇವಾಲಯದಲ್ಲಿ ಕಂಡುಬರುವ ಮಿಥುನ ಶಿಲ್ಪಗಳು ಹಾಗಾದರೆ ಅನೈತಿಕವೇ? ಇದು ಅನೈತಿಕವೆಂದಾದರೆ ಇದನ್ನು ನೈತಿಕ ಪೊಲೀಸರು ಏಕೆ ಇದನ್ನು ಸರ್ವನಾಶ ಮಾಡಿಲ್ಲ?
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by anand33
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಆನಂದ್ ಅವರೆ, ಸ್ವಲ್ಪ ಸಮಾಧಾನದಿಂದ ಯೋಚಿಸಿ- >>"...ಚಿತ್ರೀಕರಣವನ್ನೇ ನಡೆಯಲು ಬಿಡಬಾರದು....ಚಿತ್ರೀಕರಣ ನಡೆಸುವಲ್ಲಿಗೆ ಧಾಳಿ ಮಾಡಬೇಕು,...ನಟಿಯರ ಮೇಲೆ ಧಾಳಿ ಮಾಡಬೇಕು,..ನಟನಟಿಯರ ಮೇಲೆ ಎರಗಬೇಕು...ಚಿತ್ರಮಂದಿರಗಳ ಮೇಲೆ ಧಾಳಿ ಮಾಡಬೇಕು,..ಟಿವಿ ವಾಹಿನಿಗಳ ಮೇಲೆ ಧಾಳಿ ಮಾಡಬೇಕು..."
-ಏನಿದೆಲ್ಲಾ!? ಸೆನ್ಸಾರ್ ಬೋರ್ಡ್ ಇದೆ, ಕೋರ್ಟ್ ಇದೆ ಅಲ್ಲಿ ಹೋರಾಟ ಮಾಡುವರು. ಅಸಲಿಗೆ ಅಂತಹ ಸಿನೆಮಾಗಳು ಒಂದು ವಾರನೂ ಓಡುವುದಿಲ್ಲ- ಹೋರಾಟವಾದರೆ ಪ್ರಚಾರದಿಂದ ಜಾಸ್ತಿ ಓಡುವುದು. :) ಸಿನೆಮಾದಲ್ಲಿ ಪಾತ್ರಕ್ಕನುಸಾರವಾಗಿ ಕಿಸ್ ಕೊಟ್ಟ ನಟ-ನಟಿಯರು ರಸ್ತೆಯಲ್ಲೂ ಕಿಸ್ ಕೊಡುವುದಿಲ್ಲ.
ಕಂಪ್ಯೂಟರ್/ಮೊಬೈಲ್‌ನಿಂದಾಗಿ ಇಡೀ ಲೋಕವೇ ಕೈಬೆರಳಿಗೆ ಸಿಕ್ಕಿದೆ. ಯುವಜನತೆ ಇವುಗಳಿಂದ ಜಗತ್ತಿಗೆ ಉಪಕಾರವಾಗುವ ಏನನ್ನಾದರೂ ಸಾಧಿಸುವತ್ತ ಗಮನಿಸಬೇಕು. ಅದುಬಿಟ್ಟು ಬೆರಳೆಣಿಕೆಯ ಕೆಲವರ ಅತಿರೇಕಗಳಿಗೆ(ಹುಚ್ಚಾಟ ಅನ್ನಬಹುದು) ನೀವೂ ಬೆಂಬಲಿಸುವಿರಲ್ಲಾ...ಛೇ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by ಗಣೇಶ
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಗಣೇಶರೇ, ಸಿನೆಮಾಕ್ಕೆ ಸೆನ್ಸಾರ್ ಬೋರ್ಡ್, ಕೋರ್ಟ್ ಇದೆ ಹೇಳಿದ್ದೀರಿ. ಅದೇ ರೀತಿ ಸಮಾಜದಲ್ಲಿ ಏನಾದರೂ ಅನ್ಯಾಯ, ಅತಿರೇಕ ಆದರೆ ಅದನ್ನು ನಿಯಂತ್ರಿಸಲು ಪೋಲೀಸ್ ವ್ಯವಸ್ಥೆ, ಕೋರ್ಟುಗಳು ಇವೆ. ನಿರ್ದಿಷ್ಟ ಸಿದ್ಧಾಂತದ ಜನರು ಗುಂಪು ಕಟ್ಟಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋಗುವುದು, ಧಾಳಿ ಮಾಡುವುದು ಹೇಗೆ ಸಮರ್ಥನೀಯವಾದೀತು? ಹಾಗೆ ಮಾಡಿದರೆ ನಕ್ಸಲರಿಗೂ ಇವರಿಗೂ ಏನು ವ್ಯತ್ಯಾಸ?
ಅಂಗೈಯಲ್ಲಿ ಕಂಪ್ಯೂಟರ್/ಮೊಬೈಲ್ ಬಂದು ಇಡೀ ಮಾನವ ಜನಾಂಗಕ್ಕೆ ಭಾರೀ ಪ್ರಯೋಜನ ಆಗಿದೆ. ಇದನ್ನೆಲ್ಲಾ ಅನ್ವೇಷಿಸಿ ಅಭಿವೃದ್ಧಿಪಡಿಸಿದವರು ನಾವು ನೀವು ಹುಚ್ಚಾಟ ಆಡುವವರು ಎಂದು ಜರೆಯುವ ಪಾಶ್ಚಾತ್ಯರೇ ಹೊರತು ಗಂಭೀರ ನೈತಿಕ ಮಡಿವಂತರಾದ ಭಾರತೀಯರಲ್ಲ ಎಂಬುದು ಸತ್ಯ. ಲೈಂಗಿಕತೆಯೇ ಕೀಳು, ಕೆಟ್ಟದ್ದು ಎಂಬ ನಮ್ಮ ಧೋರಣೆಯಲ್ಲಿಯೇ ದೋಷವಿದೆ. ಪ್ರಕೃತಿ ಸಹಜವಾದ ಲೈಂಗಿಕತೆಯನ್ನು ಹತ್ತಿಕ್ಕುವುದೇ ಶ್ರೇಷ್ಠ ಎಂಬ ಧೋರಣೆಯೇ ಪ್ರಕೃತಿ ವಿರೋಧವಾದದ್ದು.
ಕಿಸ್ ಆಫ್ ಲವ್ ಎಂಬ ಕಾರ್ಯಕ್ರಮ ಆಯೋಜಿಸುವವರು ಯಾವಾಗಲೂ ಬೀದಿಯಲ್ಲಿ ಕಿಸ್ ಕೊಡಲು ಹೋಗುವುದಿಲ್ಲ. ಅವರು ನೈತಿಕ ಪೋಲೀಸ್ಗಿರಿಯ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಅಷ್ಟೇ ಮಾಡುತ್ತಾರೆ. ಈಗಾಗಲೇ ಇಂಥ ಪ್ರತಿಭಟನೆ ಬೇರೆ ಕೆಲವು ರಾಜ್ಯಗಳಲ್ಲಿ ಆಗಿದೆ. ಅದರಿಂದ ಅಲ್ಲಿ ಸ್ವೇಚ್ಚಾಚಾರ/ಹುಚ್ಚಾಟ ಇತ್ಯಾದಿ ಹೆಚ್ಚಾಗಿರುವ ಬಗ್ಗೆ ಕೇಳಿಬಂದಿಲ್ಲ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by anand33
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
>> ನಿರ್ದಿಷ್ಟ ಸಿದ್ಧಾಂತದ ಜನರು ಗುಂಪು ಕಟ್ಟಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋಗುವುದು, ಧಾಳಿ ಮಾಡುವುದು ಹೇಗೆ ಸಮರ್ಥನೀಯವಾದೀತು?
-ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪೇ ತಪ್ಪು. ಆದರೆ ಕ್ರಮಕೈಗೊಳ್ಳಬೇಕಾದ ಸರಕಾರ ಹಾಗೂ ಪೋಲೀಸರು ಕೈಕಟ್ಟಿ ಕುಳಿತಾಗ, ತಮ್ಮ ನೆರೆಕರೆಯ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿರುವುದನ್ನು ಕಂಡೂ ಸುಮ್ಮನಿರಲಾಗದೇ ಕೆಲವರು ಕಾನೂನು ಕೈಗೆ ತೆಗೆದುಕೊಂಡಿರಬಹುದು. ತಾವುಪುತ್ತೂರಿನವರೇ ಆಗಿದ್ದು ತಮಗಿದೆಲ್ಲಾ ಗೊತ್ತಿಲ್ಲ ಎಂದಾದರೆ ಸ್ವಲ್ಪ ಇಲ್ಲಿ ಓದಿ- http://www.epapervijayavani.in/Details.aspx?id=17389&boxid=151532119 ಇದನ್ನು ಹೇಳಿದ ಡಾ. ಬಾಳೇಕುಂದ್ರಿಯವರ ಬಗ್ಗೆ ತಮಗೆ ಗೊತ್ತಿರಲಿಕ್ಕಿಲ್ಲ- http://bit.ly/1tyunZL ಇನ್ನು ಅವರ ಬಗ್ಗೆ ಜಾತೀವಾದಿ ಎಂದೆಲ್ಲ ಕೆಟ್ಟದಾಗಿ ಬರೆಯಬೇಡಿ.
>>ಅಂಗೈಯಲ್ಲಿ ಕಂಪ್ಯೂಟರ್/ಮೊಬೈಲ್ ಬಂದು ಇಡೀ ಮಾನವ ಜನಾಂಗಕ್ಕೆ ಭಾರೀ ಪ್ರಯೋಜನ ಆಗಿದೆ. ಇದನ್ನೆಲ್ಲಾ ಅನ್ವೇಷಿಸಿ ಅಭಿವೃದ್ಧಿಪಡಿಸಿದವರು ನಾವು ನೀವು ಹುಚ್ಚಾಟ ಆಡುವವರು ಎಂದು ಜರೆಯುವ ಪಾಶ್ಚಾತ್ಯರೇ ಹೊರತು ಗಂಭೀರ ನೈತಿಕ ಮಡಿವಂತರಾದ ಭಾರತೀಯರಲ್ಲ ಎಂಬುದು ಸತ್ಯ.
-ಆನಂದರೆ ಕೋಪದಲ್ಲಿ ಬರೆಯಲು ಕುಳಿತರೆ ಯೋಚಿಸುವ ಶಕ್ತಿ ಕಮ್ಮಿಯಾಗುವುದು. ನಾವು ಎಂದೂ ಪಾಶ್ಚಾತ್ಯರನ್ನು ಹುಚ್ಚಾಟ ಆಡುವವರು ಎಂದಿಲ್ಲ. ಆದರೆ ಅವರನ್ನು ಹೊಗಳುವ ಭರದಲ್ಲಿ ಭಾರತೀಯರ ಸಾಧನೆಯನ್ನು ಕಡೆಗಣಿಸುತ್ತೀರಲ್ಲಾ..ಇದು ಬಹಳ ಬೇಸರದ ಸಂಗತಿ. ಒಂದೇ ಒಂದು ಉದಾಹರಣೆ ಕೊಡುವೆ. ಸ್ವಲ್ಪ ಸಮಾಧಾನದಿಂದ ಓದಿ- http://www.epapervijayavani.in/Details.aspx?id=17208&boxid=195323421
>>ಲೈಂಗಿಕತೆಯೇ ಕೀಳು, ಕೆಟ್ಟದ್ದು ಎಂಬ ನಮ್ಮ ಧೋರಣೆಯಲ್ಲಿಯೇ ದೋಷವಿದೆ. ಪ್ರಕೃತಿ ಸಹಜವಾದ ಲೈಂಗಿಕತೆಯನ್ನು ಹತ್ತಿಕ್ಕುವುದೇ ಶ್ರೇಷ್ಠ ಎಂಬ ಧೋರಣೆಯೇ ಪ್ರಕೃತಿ ವಿರೋಧವಾದದ್ದು.
- ಲೈಂಗಿಕತೆ ಕೀಳು ಎಂದಿದ್ದರೆ ಮೇಲೆ ನೀವು ಪ್ರತಿಕ್ರಿಯೆ ಕೊಟ್ಟ ದೇವಾಲಯಗಳಲ್ಲಿ ಅದನ್ನು ತೋರಿಸುತ್ತಿದ್ದರಾ? ಸಹಜ ಯಾವುದು ಅಸಹಜ ಯಾವುದು ಇದು ನಿಮಗೂ ತಿಳಿದಿದೆ. ಅನಗತ್ಯ ವಾದ ಮಾಡುತ್ತಿರುವಿರಿ.
http://www.epapervijayavani.in/Details.aspx?id=17366&boxid=151843641
>>ಕಿಸ್ ಆಫ್ ಲವ್ ಎಂಬ ಕಾರ್ಯಕ್ರಮ ಆಯೋಜಿಸುವವರು ಯಾವಾಗಲೂ ಬೀದಿಯಲ್ಲಿ ಕಿಸ್ ಕೊಡಲು ಹೋಗುವುದಿಲ್ಲ.
!:) ಈಗ ಬಿಟ್ಟರೆ ಒಂದಿಲ್ಲೊಂದು ನೆವ ಹೇಳಿ ಕೊಡುವುದಿಲ್ಲ ಎಂದು ಏನು ಗ್ಯಾರಂಟಿ? ಪ್ರತಿಭಟನೆಗೆ ಬೇರೆ ಅನೇಕ ದಾರಿಯಿದೆ.
>>>ಈಗಾಗಲೇ ಇಂಥ ಪ್ರತಿಭಟನೆ ಬೇರೆ ಕೆಲವು ರಾಜ್ಯಗಳಲ್ಲಿ ಆಗಿದೆ...
-ಟಿ.ವಿ.ಯಲ್ಲಿ ಅನೇಕ ಬಾರಿ ಅನಿವಾರ್ಯವಾಗಿ ನೋಡಿರುವೆ :(
>>>ಸ್ವೇಚ್ಚಾಚಾರ/ಹುಚ್ಚಾಟ ಇತ್ಯಾದಿ ಹೆಚ್ಚಾಗಿರುವ ಬಗ್ಗೆ ಕೇಳಿಬಂದಿಲ್ಲ.
:) ಅಂದರೆ ಇದು ಸ್ವೇಚ್ಚಾಚಾರ/ಹುಚ್ಚಾಟ ಎಂದು ನೀವೇ ಒಪ್ಪಿದಹಾಗೆ ಆಯಿತಲ್ಲ :)
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by ಗಣೇಶ
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಕಾನೂನನ್ನು ಕೈಗೆ ತೆಗೆದುಕೊಳ್ಳುವ ನಕ್ಸಲರದ್ದೂ ಇದೇ ರೀತಿಯ ಸಮರ್ಥನೆ. ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ಪೊಲೀಸರು ಅನ್ಯಾಯದ ವಿರುದ್ಧ ತಕ್ಕ ಕ್ರಮ ಕೈಗೊಳ್ಳುತ್ತಿಲ್ಲ ಹೀಗಾಗಿ ತಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದು. ಹೀಗಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಎಲ್ಲರ ಮೇಲೂ ಸರ್ಕಾರ ಹಾಗೂ ಪೊಲೀಸರು ಒಂದೇ ರೀತಿಯ ಕ್ರಮ ಕೈಗೊಳ್ಳಬೇಕು. ನಕ್ಸಲರ ಮೇಲೆ ಕ್ರಮ ಕೈಗೊಳ್ಳುವಷ್ಟು ತೀವ್ರವಾಗಿ ನೈತಿಕ ಪೋಲೀಸರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಇನ್ನು ಲವ್ ಜಿಹಾದ್ ಬಗ್ಗೆ ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮಾಡಲು ಸಾಧ್ಯವಿರುವುದಾದರೆ ಮುಸ್ಲಿಂ ಹೆಣ್ಣು ಮಕ್ಕಳನ್ನೂ ಇದೇ ರೀತಿ ಲವ್ ಜಿಹಾದ್ ಮಾಡಲು ಸಾಧ್ಯವಾಗಬೇಕಲ್ಲವೆ? ನೈತಿಕ ಪೊಲೀಸರು ಹಿಂದೂ ಯುವಕರನ್ನು ಈ ರೀತಿಯ ಲವ್ ಜಿಹಾದಿಗೆ ತರಬೇತಿ ಕೊಟ್ಟು ಮುಸ್ಲಿಂ ಹೆಣ್ಣು ಮಕ್ಕಳನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿಸಬಹುದಲ್ಲವೇ? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಈ ವಿಧಾನವನ್ನು ನೈತಿಕ ಪೊಲೀಸರು ಅಳವಡಿಸಿಕೊಳ್ಳುವುದು ಉತ್ತಮ. ಆಗ ಸಂಖ್ಯೆ (ಮತಾಂತರಗೊಂಡವರ ಜನಸಂಖ್ಯೆ) ಸಮತೋಲನಕ್ಕೆ ಬರುತ್ತದೆ.
In reply to ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ by anand33
ಉ: ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ
ಕೊನೆಯ ಪ್ಯಾರಾ ಬಿಟ್ಟು ಹೋಯಿತು-
>>>ಕಿಸ್ ಆಫ್ ಲವ್ ಎಂಬ ಕಾರ್ಯಕ್ರಮ ಆಯೋಜಿಸುವವರು ಯಾವಾಗಲೂ ಬೀದಿಯಲ್ಲಿ ಕಿಸ್ ಕೊಡಲು ಹೋಗುವುದಿಲ್ಲ.
-ಬೇರೆ ಬೇರೆ ಕಾರಣ ಹುಡುಕಿ ಪುನಃ ಮಾಡುವುದಿಲ್ಲ ಅನ್ನುವ ಗ್ಯಾರಂಟಿ ಇದೆಯಾ ನಿಮಗೆ?
>>>ಈಗಾಗಲೇ ಇಂಥ ಪ್ರತಿಭಟನೆ ಬೇರೆ ಕೆಲವು ರಾಜ್ಯಗಳಲ್ಲಿ ಆಗಿದೆ.
-ಟಿ.ವಿ.ಯಲ್ಲಿ ಅನೇಕ ಬಾರಿ ಅನಿವಾರ್ಯವಾಗಿ ನೋಡಿರುವೆ :(
>>ಅದರಿಂದ ಅಲ್ಲಿ ಸ್ವೇಚ್ಚಾಚಾರ/ಹುಚ್ಚಾಟ ಇತ್ಯಾದಿ ಹೆಚ್ಚಾಗಿರುವ ಬಗ್ಗೆ ಕೇಳಿಬಂದಿಲ್ಲ.
-:) ಅಂದರೆ ಇವರದ್ದು "ಸ್ವೇಚ್ಚಾಚಾರ/ಹುಚ್ಚಾಟ ಎಂದು ನೀವೇ ಹೇಳುತ್ತಿರುವಿರಲ್ಲಾ! :)