ಅನ್ವೇಷಣೆ - ಭಾಗ ೧

ಅನ್ವೇಷಣೆ - ಭಾಗ ೧

ಅರ್ಜುನ್....ಅರ್ಜುನ್....

ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ ಅಪ್ಪ ಅಮ್ಮ ಕೂಡ ಬಂದು ಪೇದೆಯನ್ನು ನೋಡಿ ಅವರೂ ಗಾಭರಿಯಿಂದ ಯಾಕೆ ಸರ್? ನನ್ನ ಮಗನನ್ನು ಕೇಳುತ್ತಿದ್ದೀರಿ? ಯಾಕೆ ಏನಾಯ್ತು ಎಂದು ನನ್ನ ಕಡೆ ಪ್ರಶ್ನಾರ್ಥಕವಾಗಿ ನೋಡಿದರು.... ನಾನು ಏನೂ ಗೊತ್ತಿಲ್ಲ ಎಂಬಂತೆ ಸನ್ನೆ ಮಾಡಿ ಉತ್ತರಕ್ಕಾಗಿ ಪೇದೆಯ ಕಡೆ ತಿರುಗಿದೆ.

ನಮ್ಮ ಸಾಹೇಬರು ನಿಮ್ಮನ್ನು ಸ್ಟೇಷನ್ ಗೆ ಕರೆದುಕೊಂಡು ಬರಲು ಹೇಳಿದ್ದಾರೆ. ಅದೇ ಆ ಹುಡುಗಿ ಜಾನಕಿಯ ವಿಷಯ ಮಾತಾಡಲು...

ಜಾನಕಿಯ ಹೆಸರು ಕೇಳುತ್ತಿದ್ದಂತೆ ನನಗೆ ದುಃಖ ಉಮ್ಮಳಿಸಿ ಬಂದು ಅಲ್ಲೇ ಕುಸಿದು ಕುಳಿತೆ. ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದವನಿಗೆ ಅಪ್ಪ ಅಮ್ಮ ಸಮಾಧಾನ ಮಾಡಿ ಒಳಗೆ ಕರೆದುಕೊಂಡು, ಪೇದೆಯನ್ನು ಒಳಗೆ ಬರಲು ಹೇಳಿದರು.

ಒಳಗೆ ಬಂದ ಪೇದೆಗೆ ಅಮ್ಮ ಕಾಫಿ ಮಾಡಿಕೊಟ್ಟು, ನನ್ನನ್ನು ಸಮಾಧಾನ ಮಾಡುತ್ತಿದ್ದರು. ಎಲ್ಲವನ್ನೂ ಸುಮ್ಮನೆ ನೋಡುತ್ತಿದ್ದ ಪೇದೆ ಸ್ವಲ್ಪ ಹೊತ್ತಿನ ನಂತರ ಅಪ್ಪನ ಕಡೆ ತಿರುಗಿ, ಸರ್... ದಯವಿಟ್ಟು ಅವರು ಸಮಾಧಾನ ಆದಮೇಲೆ ಸ್ಟೇಷನ್ ಗೆ ಕರೆದುಕೊಂಡು ಬನ್ನಿ. ಸಾಹೇಬರು ಜಾನಕಿಯ ಬಗ್ಗೆ ವಿಚಾರಣೆ ನಡೆಸಬೇಕೆಂದು ಹೇಳಿ ಕಳಿಸಿದರು. ಅವರು ಸಮಾಧಾನ ಆದ ಕೂಡಲೇ ಕರೆದುಕೊಂಡು ಬನ್ನಿ ಸರ್ ಎಂದು ಹೇಳಿ ಹೊರಟ.

ಅರ್ಜುನ್.... ಸಮಾಧಾನ ಮಾಡಿಕೋ, ನೀನೆಷ್ಟು ಸಂಕಟ ಅನುಭವಿಸುತ್ತಿದ್ದೀಯ ಎಂದು ನಮಗೆ ಗೊತ್ತು... ಆದರೆ ಏನು ಮಾಡಲು ಆಗತ್ತೆ.... ವಿಧಿ ನಮ್ಮ ಜೊತೆ ಈ ರೀತಿ ಆಟ ಆಡತ್ತೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.... ಅದೂ ನಿನಗೇ ಹೀಗೇ ಆಗಬೇಕೆ? ನಿನ್ನಂಥ ಒಳ್ಳೆಯ ಮನಸಿನವರಿಗೆ ದೇವರು ಹೀಗೆ ನೋವಿನ ಮೇಲೆ ನೋವು ಕೊಡುತ್ತಾರೆ.... ಸಮಾಧಾನ ಮಾಡಿಕೋ.....

ನಡೀ.... ಸ್ಟೇಷನ್ ಬಳಿ ಹೋಗಿ, ಪೋಲಿಸ್ ಇನ್ಸ್ಪೆಕ್ಟರ್ ಬಳಿ ಮಾತಾಡಿ ಬರೋಣ.... ಅವರು ಮನೆಯ ತನಕ ಹೇಳಿ ಕಳುಹಿಸಿ ಹೋಗಿಲ್ಲ ಎಂದರೆ ಸರಿ ಇರುವುದಿಲ್ಲ... ಅದೂ ಅಲ್ಲದೆ ನಾವೇ ಕಾನೂನಿಗೆ ಸಹಕರಿಸದಿದ್ದರೆ ಹೇಗೆ... ನಡಿ ಹೋಗೋಣ ಎಂದು ಬಲವಂತವಾಗಿ ಎಬ್ಬಿಸಿ ಕರೆದುಕೊಂಡು ಹೊರಟರು.

ಹೆಚ್ಚು ಕಡಿಮೆ ಹದಿನೈದು ದಿನ ಕಳೆದಿತ್ತು... ಸರಿಯಾಗಿ ಊಟ, ತಿಂಡಿ, ನಿದ್ರೆ ಮಾಡಿ... ನಡೆಯುತ್ತಿದ್ದರೆ ಕಾಲುಗಳಲ್ಲಿ ಶಕ್ತಿಯೇ ಇಲ್ಲದೆ ಯಾವಾಗ ಬೀಳುವೆನೋ ಎನ್ನುವಂತಾಗಿತ್ತು. ಕಣ್ಣುಗಳು ಕತ್ತಲಿಡುತ್ತಿದ್ದವು. ಅಪ್ಪ.... ಒಂದು ನಿಮಿಷ ನಿಲ್ಲಿ ಎಂದು ಅಲ್ಲೇ ರಸ್ತೆ ಪಕ್ಕ ಫುಟ್ಪಾತ್ ಮೇಲೆ ಸ್ವಲ್ಪ ಹೊತ್ತು ಕೂತಿದ್ದು ಮತ್ತೆ ಎದ್ದು ಹೊರಟೆ.

ಸ್ಟೇಶನ್ ತಲುಪಿದಾಗ ಇನ್ಸ್ಪೆಕ್ಟರ್ ಎಲ್ಲೋ ಆಚೆ ಹೋಗಿದ್ದರು. ಒಂದು ಹತ್ತು ನಿಮಿಷದ ನಂತರ ಇನ್ಸ್ಪೆಕ್ಟರ್ ಬಂದರು. ಇಬ್ಬರನ್ನೂ ಕೋಣೆಯ ಒಳಗಡೆ ಕರೆದುಕೊಂಡು ಹೋದರು. ಪೇದೆಗೆ ಮೂರು ಕಾಫೀ ತರಲು ಹೇಳಿ ನಮ್ಮಿಬ್ಬರಿಗೆ ಕೂಡಲು ಹೇಳಿದರು. ಕಾಫಿ ಕುಡಿದ ಮೇಲೆ ಇನ್ಸ್ಪೆಕ್ಟರ್ ಮಾತು ಶುರು ಮಾಡಿದರು.

ಮಿ.ಅರ್ಜುನ್, ಸಾರಿ ನಿಮ್ಮನ್ನು ಈ ಪರಿಸ್ಥಿತಿಯಲ್ಲಿ ಇಲ್ಲಿ ಕರೆಸಬೇಕಾಯಿತು. ಆದರೆ ಏನು ಮಾಡುವುದು, ನಮ್ಮ ಕೆಲಸ ನಾವು ಮಾಡಲೇಬೇಕಲ್ಲ... ನೀವು ಸ್ವಲ್ಪ ಸಹಕರಿಸಿದರೆ ನಮಗೆ ಅನುಕೂಲವಾಗುತ್ತದೆ.

ಸಾರ್... ಈಗಷ್ಟೇ ಅವನು ಸುಧಾರಿಸಿಕೊಳ್ಳುತ್ತಿದ್ದಾನೆ... ಇನ್ನೊಂದು ವಾರ ಆದ ಮೇಲೆ ವಿಚಾರಣೆ ನಡೆಸಿದರೆ ಹೇಗೆ ಎಂದು ಅಪ್ಪ ಅವರನ್ನು ಕೇಳಿದಾಗ, ಇನ್ಸ್ಪೆಕ್ಟರ್ ನನ್ನ ಕಡೆ ನೋಡಿ, ಅಪ್ಪನ ಕಡೆ ನೋಡಿ... ಸರ್.... ಅಸಲಿಗೆ ನಾವು ಹಾಗೆಲ್ಲ ನಿಧಾನ ಮಾಡುವ ಹಾಗಿಲ್ಲ... ಆದರೆ ನಿಮ್ಮ ಮಗನನ್ನು ನೋಡಿದರೆ....ನನಗೂ ಸಂಕಟ ಆಗುತ್ತಿದೆ. ಹಾಗೆ ಆಗಲಿ, ಮುಂದಿನ ವಾರ ಶುರು ಮಾಡೋಣ... ಆದರೆ ಮತ್ತೆ ಮುಂದೂಡದಂತೆ ನೋಡಿಕೊಳ್ಳಿ.... I think you can understand the Consequence.

ಖಂಡಿತ ಸರ್... ಮುಂದಿನ ವಾರ ತಪ್ಪದೆ ಬರುತ್ತೇವೆ ಎಂದು ಅಲ್ಲಿಂದ ಹೊರಟು ಮನೆಗೆ ಬಂದೆವು.

ಮನೆಗೆ ಬರುವಷ್ಟರಲ್ಲಿ ಜಾನಕಿಯ ಅಪ್ಪ ಮತ್ತು ಅಮ್ಮ ಮನೆಗೆ ಬಂದಿದ್ದರು. ಜಾನಕಿಯ ಅಮ್ಮ ಯಶೋದಮ್ಮನವರು ಅಮ್ಮನ ಬಳಿ ಕುಳಿತು ಅಳುತ್ತಿದ್ದರು. ಜಾನಕಿಯ ತಂದೆ ಯಶೋದಮ್ಮನವರನ್ನು ಸಮಾಧಾನ ಪಡಿಸುತ್ತಿದ್ದರು. ನಮ್ಮನ್ನು ನೋಡಿ ಯಶೋದಮ್ಮನವರು ಅಳುವುದನ್ನು ನಿಲ್ಲಿಸಿ ಸುಮ್ಮನಾದರು. ಅಮ್ಮ ನಮ್ಮ ಕಡೆ ನೋಡಿ, ಏನ್ರೀ ಏನಂತೆ? ಏನು ವಿಚಾರಣೆ ಮಾಡಬೇಕಂತೆ? ಈಗಲೇ ಅವನು ಅರ್ಧ ಆಗಿ ಹೋಗಿದ್ದಾನೆ...ಅಷ್ಟರಲ್ಲೇ ಮತ್ತೆ ವಿಚಾರಣೆ ಎಂದರೆ ಅವನ ಕಥೆ ಏನಾಗಬೇಕು? ಈಗ ಅದೆಲ್ಲಾ ಏನು ಬೇಡ ಎಂದು ಹೇಳಬೇಕಿತ್ತು..

ಹಾ... ಹೌದು ಕಣೇ, ನಾನೂ ಅದನ್ನೇ ಹೇಳಿ ಬಂದಿದ್ದೇನೆ. ಮುಂದಿನ ವಾರ ವಿಚಾರಣೆ ಮಾಡಿ ಎಂದು ಕೇಳಿಕೊಂಡಿದ್ದೇನೆ. ಅವರೂ ಹಾಗೇ ಆಗಲಿ ಎಂದು ಒಪ್ಪಿಕೊಂಡರು.

ನನಗೆ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮ ಇರಲಿಲ್ಲ. ನನ್ನ ಪಾಡಿಗೆ ನಾನು ರೂಮಿಗೆ ಬಂದು ಸಿಸ್ಟಂ ಆನ್ ಮಾಡಿ ಅದರಲ್ಲಿದ್ದ ಜಾನಕಿಯ ಫೋಟೋಗಳನ್ನು ಒಂದಾದ ಮೇಲೊಂದು ನೋಡುತ್ತಿದ್ದೆ. ಕಳೆದ ಹದಿನೈದು ದಿನಗಳಲ್ಲಿ ಹೆಚ್ಚುಕಡಿಮೆ ನನ್ನ ಹೆಚ್ಚು ಸಮಯ ಸಿಸ್ಟಂ ನಲ್ಲಿ ಜಾನಕಿಯ ಫೋಟೋಗಳನ್ನು ನೋಡುವುದರಲ್ಲೇ ಕಳೆದಿದ್ದೆ.

ಕಾರಣ.... ಜಾನಕಿ ನನ್ನಿಂದ ದೂರವಾಗಿ ಇಂದಿಗೆ ಹದಿನೈದು ದಿನಗಳು ಕಳೆದಿದ್ದವು. 

Rating
No votes yet

Comments

Submitted by H A Patil Thu, 12/11/2014 - 19:21

ಜಯಂತ ರಾಮಾಚಾರ ರವರಿಗೆ ವಂದನೆಗಳು
'ಅನ್ವೇಷಣೆ'ಯ ಪ್ರಾರಂಭ ಕುತೂಹಲಕರವಾಗಿದೆ ಯಾರು ಈ ಜಾನಕಿ ಅರ್ಜುನ ಏಕೆ ಠಾಣೆ ಹೋಗಬೇಕು ? ಮುಂದಿನ ಕಂತುಗಳಲ್ಲಿ ಉತ್ತರ ಸಿಗಬಹುದು, ಬಹಳ ದಿನಗಳ ನಂತರ ಕುತೂಹಲಕರ ಕಥಾನಕದೊಂದಿಗೆ ಸಂಪದಕ್ಕೆ ಮರಳಿದ್ದೀರಿ ಧನ್ಯವಾದಗಳು.

Submitted by Jayanth Ramachar Fri, 12/12/2014 - 15:52

In reply to by H A Patil

ಪಾಟೀಲರಿಗೆ ನಮಸ್ಕಾರಗಳು.
ಹೌದು ಬಹಳ‌ ದಿನದ‌ ನಂತರ‌ ಮತ್ತೆ ಸಂಪದದಲ್ಲಿ ಕಥೆ ಪ್ರಕಟಿಸುತ್ತಿದ್ದೇನೆ. ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by ಗಣೇಶ Fri, 12/12/2014 - 00:13

ಜಯಂತ್, ವಿಚಾರಣೆ ಮುಂದಿನವಾರ ..ಭಾಗ-೨ ಕ್ಕೆ ಮುಂದಿನವಾರದವರೆಗೆ ಕಾಯಿಸಬೇಡಿ..
ಕತೆ ಚೆನ್ನಾಗಿದೆ.