ಆಗೋದೆಲ್ಲ ಒಳ್ಳೆಯದಕ್ಕೆ

ಆಗೋದೆಲ್ಲ ಒಳ್ಳೆಯದಕ್ಕೆ

ಒಂದು ಘಟನೆ

ಇಳಿಸಂಜೆ ಹೊತ್ತು.ಅರ್ಧಕಿಲೊಮೀಟರಿಗೆ ಒಂದರಂತೆ ತಿರುವಿರುವ ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದೆ.ರಸ್ತೆಯ ತಿರುವೊಂದರಲ್ಲಿ ನಾಯಿಯೊಂದು ಅಚಾನಕ್ ಆಗಿ ಅಡ್ಡಬಂತು ಅಥವಾ ನಾನೇ ಅದರ ದಾರಿಗೆ ಅಡ್ಡಲಾಗಿ ಹೋದೆನಾ..? ಗೊತ್ತಿಲ್ಲ.ನನ್ನ ಬೈಕ್ ರೈಡಿಂಗ್ ಕ್ಷಮತೆಯನ್ನು ಪರೀಕ್ಷಿಸಲೆಂದೇ ಬಂದಂತಿತ್ತು ಅ ಶ್ವಾನ.ಬ್ರೇಕ್ ಒತ್ತಿದ ರಭಸಕ್ಕೆ ಟಯರಿನ ಅಚ್ಚು ರಸ್ತೆಯ ಮೇಲೆ ಬರೆ ಎಳೆದಂತೆ ಬಿದ್ದಿತ್ತು.ಬೈಕ್ ಅಡ್ಡಬೀಳದಂತೆ ತಡೆಯುವ ನನ್ನೆಲ್ಲಾ ಪ್ರಯತ್ನವು ವಿಫಲವಾಗಿತ್ತು.ಅದೃಷ್ಟಕ್ಕೆ.. ನನಗೂ ಬೈಕಿಗು ಏನೂ ಆಗಿರಲಿಲ್ಲ.ಹಾಗೆಯೇ ನಾಯಿಗೂ.ಒಂದೆರಡು ನಿಮಿಷ ಸುಧಾರಿಸಿಕೊಂಡು ಅಲ್ಲಿಂದ ಹೊರಟೆ.ಮನಸ್ಸಿನಲ್ಲಿ ನಾಯಿಯ ಬಗ್ಗೆ ಸಣ್ಣದೊಂದು ಕೋಪ.ಅರ್ಧಕಿಲೊಮೀಟರಿನಷ್ಟು ದೂರ ಎಕ್ಸಲೇಟರ್ ತಿರುವಿದಿನಷ್ಟೆ ಅಷ್ಟೊತ್ತಿಗೆ ಎದುರಿಗೆ ಮತ್ತೊಂದು ತಿರುವು ಬಂದಿತ್ತು.ಅ ತಿರುವಿನಲ್ಲಿ ನಾಲ್ಕಾರು ಜನರು ರಸ್ತೆಗೆ ಅಡ್ಡಲಾಗಿ ನಿಂತಿದ್ದರು.ಅವರ ಮುಖದಲ್ಲಿ ಆತಂಕವಿತ್ತು.ಕಾರಣವೆಂದರೆ... ನಿಮಿಷದ ಹಿಂದೆಯಷ್ಟೆ ವಿದ್ಯುತ್ ತಂತಿಯೊಂದು ಕಡಿದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು.ನಾಯಿ ಅಡ್ಡಬಂದು ನಾನು ಒಂದು ನಿಮಿಷ ತಡವಾಗಿ ಈ ದಾರಿಯಲ್ಲಿ ಬರದಿದ್ದರೆ ಎಂತಹ ಅನಾಹುತವಾಗುತ್ತಿತ್ತೆಂದು ಮನಸ್ಸಿನಲ್ಲಿ ಅಂದುಕೊಂಡೆ.ನಾಯಿ ನನ್ನ ಪಾಲಿಗೆ ನಾರಾಯಣ ದೇವರಾಗಿತ್ತು.ಆಗೊದೆಲ್ಲ ಒಳ್ಳೆಯದಕ್ಕೆ ಅನ್ನೋದು ಎಷ್ಟು ಸತ್ಯವಲ್ಲವೇ ಅನ್ನಿಸಿತು.

-@ಯೆಸ್ಕೆ

Comments