ದೇವರಾಯನ‌ ದುರ್ಗದ‌ ಚಾರಣ 2014

ದೇವರಾಯನ‌ ದುರ್ಗದ‌ ಚಾರಣ 2014

ಚಿತ್ರ

 

ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು

ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷವೂ 25 December 14 ರಜಾ ದಿನವಾದ ಕಾರಣ ಅಂದು ನಡೆಯುವದೆಂದು ನಿರ್ಧಾರ. ಸಮಯದಲ್ಲಿ ಕೆಲವು ಬದಲಾವಣೆಗಳಾಯಿತು. ಪ್ರತಿ ವರ್ಷವಾದರೆ ಬೆಳಗಿನ ಆರು ಮೂವತ್ತರ ಹೊತ್ತಿಗೆ ಹೊರಟು, ಸಿದಗಂಗಾ ಮಠ ದಾಟಿದ ನಂತರ ದೇವರಾಯನ ದುರ್ಗದ ರಸ್ತೆ ಸೇರುವ ಜಾಗದಲ್ಲಿನ ಮಂಟಪದಂತಹ ಜಾಗದಲ್ಲಿ ಕುಳಿತು ಬೆಳಗಿನ ಉಪಹಾರ (ಅವರೇ ಕಾಳು ಉಪ್ಪಿಟ್ಟು) ಮುಗಿಸಿ , ಬೆಟ್ಟದ ಮೇಲೆ ಸೇರುವಾಗ ಸೂರ್ಯ ನೆತ್ತಿಯಲ್ಲಿರುತ್ತಿದ್ದ . ಈ ವರ್ಷ ಬೆಳಗಿನ ನಾಲಕ್ಕು ಘಂಟೆಗೆ ಹೊರಡುವದೆಂದು ತೀರ್ಮಾನವಾದಗ ಯಾರ ವಿರೋಧವೂ ಬರಲಿಲ್ಲ . ನನಗೆ ಮನದಲ್ಲಿಯೆ ಒಂದು ಭಯ ಅನುಮಾನವಿತ್ತು, ಎಲ್ಲಿ ನೋಡಿದರು ಕಾಡಾನೆಗಳ ದಾಳಿ, ಮನುಷ್ಯನನ್ನು ತಿನ್ನುವ ಹುಲಿ, ಚಿರತೆ, ಕರಡಿಗಳ ಸುದ್ದಿಯೇ, ಹಾಗಾಗಿ ನಮಗೆ ತೊಂದರೆಯಾದರೆ ಎನ್ನುವ ಅಳುಕು, ಆದರೆ ಅಂತಹ ಘಟನೆಗಳೇನು ನಡೆಯದೆ, ನೆನಪಿನಲ್ಲಿಡಬಹುದಾದ ಎರಡು ಬೇರೆಯೆ ಆದ ಘಟನೆಗಳು ನಡೆದವು.

 

ಯಾರವನು ಮುದುಕ:

ತುಮಕೂರಿನ ಜಯನಗರದಲ್ಲಿನ ತಮ್ಮನ ಮನೆಯಿಂದ ಹೊರಡುವಾಗ ಬೆಳಗಿನ ನಾಲಕ್ಕು ಘಂಟೆ ದಾಟಿತ್ತು. ಸರಿ ಸುಮಾರು ನಾಲಕ್ಕು ನಲವತ್ತರ ಹತ್ತಿರ ಸಮಯವಿರಬಹುದು, ನಾವು ಎಂಟು ಜನರು ಬೆಂಗಳೂರು ಹೊನ್ನಾವರ ರಸ್ತೆಯ , ಭಟವಾಡಿ ನಂತರದ ಅಂಡರ್ ಪಾಸ ದಾಟಬೇಕು ಅದಕ್ಕೆ ಮುಂಚೆ ವಯಸ್ಸಾಗಿರುವ ಮುದುಕನೊಬ್ಬ ರಸ್ತೆ ಪಕ್ಕದಲ್ಲಿ ಸಿಕ್ಕಿದರು. ಜನಸಂಚಾರವೆ ಇಲ್ಲದ ಆ ಸಮಯದಲ್ಲಿ ಒಂಟಿಯಾಗಿ ನಿಂತಿದ್ದ ಆತ ನಮ್ಮನ್ನು ಕಂಡೊಡನೆ, ತನ್ನ ಜೋಬಿನಿಂದ

ಚಾಕಲೇಟ್ ಗಳನ್ನು ತೆಗೆದುಕೊಡುತ್ತ

ತೆಗೆದುಕೊಳ್ಳಿ ಎಂದರು

ಇಬ್ಬರು ಮೂವರು ಅವರ ಬಳಿ ಚಾಕಲೇಟ್ ಪಡೆದರು.

ನನಗೆ ಎಂತದೋ ಅನುಮಾನ, ಈ ಸಮಯದಲ್ಲಿ, ಇಂತಹ ಜಾಗದಲ್ಲಿ ಕತ್ತಲು ಕತ್ತಲಿನಲ್ಲಿ , ಹೆದ್ದಾರಿಯಲ್ಲಿ ಒಬ್ಬನೇ ಮುದುಕ ನಿಂತು ಚಾಕಲೇಟ್ ಏಕೆ ಕೊಡುತ್ತಿರುವ ಎಂದು

ಇದೇನು ಎಂದು ಕೇಳಿದೆ

ಮಾಮೂಲಿ ಅಲ್ವ ಸ್ವಾಮಿ ಎಂದ ನಗುತ್ತ. ನನಗೆ ಅರ್ಥವಾಗಲೇ ಇಲ್ಲ,

ಸ್ಲಲ್ಪ ಮುಂದೆ ಬಂದು ಎಲ್ಲರಿಗೂ ಚಾಕಲೇಟ್ ತಿನ್ನ ಬೇಡಿ ಏಕೋ ಅನುಮಾನ ಎಂದೆ

ಆಗಲೇ ಬಾಯಿಗೆ ಹಾಕಿ ಅದರ ರುಚಿ ನೋಡಿದ್ದ ಇಬ್ಬರು ಹೆದರಿದರು ಅನ್ನಿಸುತ್ತೆ, ಒಬ್ಬ ನುಂಗದೇ ಉಗಿದ

ನಾವು ಸ್ವಲ್ಪ ಮುಂದೆ ನಡೆದಂತೆ , ನಮ್ಮ ಹಿಂದೆ ನಿಂತಿದ್ದ ಆ ಮುದುಕ, ವೇಗವಾಗಿ ನಡೆಯುತ್ತ, ನಮ್ಮ ನ್ನು ಹಾದು, ಅಂಡರ್ ಪಾಸ್ ನಂತರದ ಸಿದ್ದಗಂಗ ಮಠದ ಕಡೆಗಿನ ರಸ್ತೆಯಲ್ಲಿ ಕತ್ತಲೆಯಲ್ಲಿ ಹೊರಟುಹೋದ, ಅಷ್ಟು ಹಿರಿಯನಾದ ಆ ವ್ಯಕ್ತಿ ಪಂಚೆ ಮೇಲಿ ಎತ್ತಿ ಕಟ್ಟಿ ವೇಗವಾಗಿ ನಡೆಯುತ್ತ ಹೋಗಿದ್ದು, ಸ್ವಲ್ಪ ವಿಚಿತ್ರವಾಗಿಯೆ ಇತ್ತು. ನಂತರ ನಮ್ಮಲ್ಲಿ ಎಂತದೋ ಅನುಮಾನ, ಮುಂದೆ ಇರುವ ಕತ್ತಲ ರಸ್ತೆಯಲ್ಲಿ ತನ್ನ ಸಂಗಡಿಗರೊಡನೆ ಅವನು ನಿಂತಿದ್ದರೆ, ನಮಗೆ ಕೊಟ್ಟ ಚಾಕಲೇಟಿನಲ್ಲಿ ಎನನ್ನಾದರು ಬೆರೆಸಿದ್ದನಾ? ಎನ್ನುವ ಅನುಮಾನ. ಮನುಷ್ಯ ಯೋಚಿಸಬಹುದಾದ ಎಲ್ಲ ಕೆಟ್ಟ ಸಂಭವನೀಯತೆ ನಮ್ಮ ಎದುರಿನಲ್ಲಿ ಹಾದು ಹೋಗಿತ್ತು. ಸ್ವಲ್ಪ ನಿಧಾನವಾಗಿಯೆ ಅದೇ ರಸ್ತೆಯಲ್ಲಿ ನಡೆಯುತ್ತ ಹೊರಟೆವು. ಹಾಗೆ ಸಿದ್ದಗಂಗಾ ಮಠ ದೂರದಿಂದ ಕಾಣಿಸಿತು, ಧನುರ್ಮಾಸವಾದ್ದರಿಂದ ಅಲ್ಲಿ ಸಾಕಷ್ಟು ಜನ ಕಾಣಿಸಿದರು. ಆಗ ಬೆಳಗಿನ ಐದು ಘಂಟೆ ಇರಬಹುದೇನೊ, ನಂತರ ಮಠದ ಎದುರಿನ ರಸ್ತೆ ದಾಟುತ್ತ ಮುಂದೆ ಪ್ರಯಾಣ ಬೆಳೆಸಿದವು, ಕತ್ತಲೆಯ ರಸ್ತೆಯಲ್ಲಿಯೇ ನಡೆಯುತ್ತ ದೇವರಾಯನ ದುರ್ಗದ ರಸ್ತೆ ಸೇರಿದೆವು.
ಆ ಮುದುಕ ಆ ಸಮಯದಲ್ಲಿ , ಅಂತಹ ಸ್ಥಳದಲ್ಲಿ ನಿಂತು ದಾರಿಯಲ್ಲಿ ಹೋಗುತ್ತಿದ್ದ ನಮಗೆ ಚಾಕಲೇಟ್ ನೀಡಿದ್ದು ಸ್ವಲ್ಪ ವಿಸ್ಮಯವಾಗಿಯೇ ಕಾಣಿಸಿತು. ನಮಗೆ ಬಿಟ್ಟು ಅವನು ಮತ್ತಾರಿಗೂ ಚಾಕಲೇಟ್ ಕೊಡಲಿಲ್ಲ, ನಮಗೆ ಕೊಟ್ಟ ತಕ್ಷಣ ಅಲ್ಲಿಂದ ಹೊರಟು ಹೋಗಿದ್ದ.
ಮನೆಗೆ ವಾಪಸ್ ಬಂದ ನಂತರ ಆ ಚಾಕಲೇಟಿನಲ್ಲಿ ಮತ್ತು ಬರುವ ವಸ್ತುವಾಗಲಿ, ವಿಷವಾಗಲಿ ಇಲ್ಲವೆಂದೆ ಕನ್ ಫರ್ಮ್ ಆಯಿತು , ಎಲ್ಲರೂ ಅದನ್ನು ತಿಂದು ನೋಡಿದೆವು :-)

 

ನಾಯಿಯ ರಕ್ಷಣೆಯಲ್ಲಿ ನಮ್ಮ ಚಾರಣ:
ಹಾಗೆ ನಡೆಯುತ್ತ ನಾಮದ ತೀರ್ಥ ಸ್ಥಳ ಸೇರುವಾಗಲೆ ಬೆಳಗಿನ ಏಳು ಮೂವತ್ತರ ಸಮಯ. ಅಲ್ಲಿ ಯಾರು ಇರಲಿಲ್ಲ. ಮುಂದೆ ಹೊರಟೆವು, ಮನಸಿಗೆ ಉಲ್ಲಾಸವನ್ನು ಕೊಡುವ ಕಾಡಿನ ಹಾದಿ. ಆಗ ಎಲ್ಲಿಂದಲೋ ಒಂದು ನಾಯಿ ಪ್ರತ್ಯಕ್ಷವಾಗಿತ್ತು ನಮ್ಮ ಮುಂದೆ. ದೂರದಿಂದ ನೋಡಲು ಚಿರತೆಯಂತೆ ಚರ್ಮ ಕಾಣುತ್ತಿತ್ತು. ಅದು ನಮ್ಮನ್ನು ಅನುಸರಿಸಲು ಪ್ರಾರಂಭಿಸಿತು. ಸುಮಾರು ಕಾಲ ನಡೆದರು ನಮ್ಮ ಹಿಂದೆಯೆ ಬರುತ್ತಿದ್ದ ಅದನ್ನು ಕಂಡು. ಇರಲಿ ಎಂದು ನಮ್ಮಲ್ಲಿದ್ದ ಬಿಸ್ಕತ್ ತೆಗೆದು ಅದರ ಮುಂದೆ ಹಾಕಿದೆವು. ಸಾಮಾನ್ಯ ನಾಯಿ ಅದನ್ನು ಮೂಸಿಯಾದರು ನೋಡುತ್ತದೆ. ಆದರೆ ಅದು ಬಿಸ್ಕತ್ತಿನ ಕಡೆ ನೋಡದೆ ನಮ್ಮನ್ನೆ ನೋಡುತ್ತಿತ್ತು. ಸರಿ ಎಂದು ಮುಂದೆ ಹೊರಟೆವು. ಅದು ನಮ್ಮ ಹಿಂದೆ ಬರುತ್ತಿತ್ತು. ಹಾಗೆ ನಡೆಯುತ್ತ ಕಾಡು ಹಾಗು ಬೆಟ್ಟದ ಸುಮಾರು ಆರು ಕಿ.ಮೀ ದೂರವನ್ನು ಕ್ರಮಿಸಿ ನಮ್ಮೊಡನೆ ದೇವರಾಯನ ದುರ್ಗಕ್ಕೂ ಬಂದಿತು.

ನಾವೆಲ್ಲ ಹೊರಗಿನ ನಲ್ಲಿಯಲ್ಲಿ ಕಾಲು ತೊಳೆದು ದೇವಾಲಯದ ಒಳಗೆ ಹೋದೆವು.

 

ಹೊರಗೆ ಬಂದು ಹತ್ತಿರವಿದ್ದ ಅಂಗಡಿಯತ್ತ ನಡೆದರೆ ಅದು ಪುನಃ ಹಿಂದೆ ಕಾಣಿಸಿತು. ಸರಿ ಎಂದು ಅಲ್ಲಿದ್ದ ಬನ್ ಖರೀದಿಸಿ ಅದರ ಮುಂದೆ ಹಾಕಿದರೆ, ಅದು ಅದನ್ನು ತಿನ್ನಲಿಲ್ಲ. ಅದಕ್ಕೆ ತಿನ್ನುವ ಮನಸಿರಲಿಲ್ಲ ಅನ್ನಿಸುತ್ತೆ. ಅಲ್ಲಿದ್ದ ಚಿಕ್ಕ ಹೋಟೆಲಿನಲ್ಲಿ ನಾವೆಲ್ಲ ಇಡ್ಲಿ ತಿಂದೆವು, ಆದರೆ ಆ ನಾಯಿ ಇಡ್ಲಿ ಸಹ ತಿನ್ನಲೂ ನಿರಾಕರಿಸಿತು.

ಸಾಮಾನ್ಯ ನಾಯಿಗಳು ಮನುಷ್ಯರ ಹಿಂದೆ ಬಂದರೆ ತಿನ್ನುವದಕ್ಕಾಗಿ , ಏನಾದರು ಹಾಕುತ್ತಾರೆ ಎನ್ನುವದಕ್ಕಾಗಿ ಎನ್ನುವ ನನ್ನ ಅಭಿಪ್ರಾಯವನ್ನು ನಾಯಿ ಸುಳ್ಳು ಮಾಡಿತ್ತು. ನಾವೆಲ್ಲ ಅಲ್ಲಿದ್ದ ಮೆಟ್ಟಿಲ ಮೇಲೆ ಕುಳಿತ್ತಿದ್ದರೆ, ಅದು ಸಹ ಪಕ್ಕದಲ್ಲಿ ಬಂದು ಮಲಗಿತ್ತು. ಬಸ್ಸು ಬರುವ ಸಮಯಾವಾಗಿತ್ತು ನಾವು ಎದ್ದೆವು, ಅದು ನಮ್ಮ ಹಿಂದೆ ಓಡಿ ಬಂದಿತ್ತು. ಬಸ್ ಹತ್ತಿ ನಾವು ಕುಳಿತಂತೆ ಅದು ಹೊರಗೆ ಕಿಟಿಕಿಯ ಬಳಿ ಇದ್ದಿತು. ಕಡೆಗೊಮ್ಮೆ ಬಸ್ ಹೊರಟಂತೆ ಬಸ್ಸಿನ ಹಿಂದೆಯೆ ಬರುವುದು ಕೆಲಸಮಯ ಕಾಣಿಸುತ್ತ ಇತ್ತು. ಆ ನಾಯಿ ಯಾವುದು , ನಮ್ಮನೇಕೊ ಅನುಸರಿಸಿತು ಎನ್ನುವುದು ಸ್ವಲ್ಪ ವಿಸ್ಮಯವಾಗಿಯೆ ಕಾಣಿಸಿತು

 

Rating
No votes yet

Comments

Submitted by H A Patil Sat, 12/27/2014 - 20:44

ಪಾರ್ಥಸಾರಥಿ ಯವರಿಗೆ ವಂದನೆಗಳು
ಈ ವರ್ಷದ ಕೊನೆಯ ಅವಧಿಯಲ್ಲಿ ತಾವು ಮಾಡಿದ ದೇವರಾಯನ ದುರ್ಗದ ಚಾರಣದ ವರದಿ ಮತ್ತು ಚಿತ್ರಗಳು ಮುದ ನೀಡಿದವು. ತಮ್ಮ ಪಯಣದ ವೇಳೆ ತಮಗೆ ದೊರೆತ ಅ ಮುದುಕರು ಅವರು ತಮಗೆ ಕೊಟ್ಟ ಚಾಕಲೇಟ್, ಅಗ ತಮ್ಮ ಮನದಲ್ಲಿ ಮೂಡಿದ ಭಾವಗಳು ಅದನ್ನು ಪ್ರಾಮಾಣಿಕವಾಗಿ ನಿರೂಪಿಸಿದ್ದು, ಜೊತೆಗೆ ಆ ನಾಯಿಯ ಗುಣ ಸ್ವಭಾವದ ವರ್ಣನೆ ನನ್ನ ಮನ ತಟ್ಟಿತು.ಮನ ಮುಟ್ಟುವ ಬರಹ ಧನ್ಯವಾದಗಳು.

Submitted by partha1059 Sun, 12/28/2014 - 09:48

In reply to by H A Patil

ಪಾಟೀಲರಿಗೆ ನಮಸ್ಕಾರ‌
ಬಹಳ‌ ದಿನಗಳಾಯಿತು ತಮ್ಮ‌ ಜೊತೆ ಹೀಗೆ ಮಾತನಾಡಿ. ಚಾರಣ‌ ತುಂಬ‌ ಸುಗಮವಾಗಿದ್ದು ಯಾವುದೇ ತೊಂದರೆ ಆಗಲಿಲ್ಲ‌, ಹಾಗಾಗಿ ಅದರ‌ ಬಗ್ಗೆ ಬರೆಯದೆ ನಡೆದ‌ ಈ ಎರಡು ಘಟನೆಗಳನ್ನು ಉಲ್ಲೇಖಿಸಿದೆ.
ತಮ್ಮ‌ ಮೆಚ್ಚುಗೆ ಗೆ ಮತ್ತೊಮ್ಮೆ ವಂದನೆಗಳೊಡನೆ
ಪಾರ್ಥಸಾರಥಿ

Submitted by venkatb83 Mon, 12/29/2014 - 18:53

In reply to by partha1059

ಗುರುಗಳೇ -ನೀವು ಹಿಂದೆಯೂ ಆ ಚಾರಣದ ಬಗ್ಗೆ ಬರೆದ ನೆನಪು... ಕಾಕತಾಳೀಯ ಎಂದರೆ ಇದೆ ಭಾನುವಾರದ ವಿಜಯವಾಣಿ ಸಂಚಿಕೆಯಲ್ಲಿ ದೇವರಾಯನದುರ್ಗದ ಪ್ರವಾಸಿ ತಾಣದ ಬಗ್ಗೆ ಮಾಹಿತಿ ಬರಹ ಒಂದು ಪ್ರಕಟ ಆಗಿದೆ ..!!
ಲಿಂಕ್ ಇಲ್ಲಿದೆ..http://epapervijayavani.in/epaperimages/28122014/28122014-md-hr-26/14153...
ನಾವೂ ಅಲ್ಲಿಗೆ ಹೋಗಲು ಬಯಸಿರುವೆವು..
ಆಗಂತುಕ ಮುದುಕ-ಶ್ವಾನ ನಿಮ್ಮ ಹಾಗೆ ನಮಗೂ ಕುತೂಹಲ ಮೂಡಿಸಿವೆ...ಆ ಮುದುಕ -ವೇಷ ಹಾಕಿದ -ನಂ ಗಣೇಶ್ ಅಣ್ಣಾ ಅವರು ಅಲ್ಲವ ಸ್ಟೇ ????
ನನ್ನಿ
ಶುಭವಾಗಲಿ
\|/

Submitted by partha1059 Mon, 12/29/2014 - 22:30

In reply to by venkatb83

ಹೌದು ಪ್ರತಿವರ್ಷ ಡಿಸೆಂಬರ್ ಸುಮಾರಿನಲ್ಲಿ ಹೋಗುತ್ತೇವೆ ,
ನೀವು ಹೇಳಿದ್ದು ನಿಜ ಅನ್ನಿಸುತ್ತಿದೆ, ಗಣೇಶರೆ ಇರಬಹುದೇ
ಸಾದ್ಯವಿಲ್ಲ ಅನ್ನಿಸುತ್ತೆ, ಆ ಮುದುಕರು ಉದ್ದಕ್ಕೆ ಸಣ್ಣಗಿದ್ದರು, ನಡೆದ ವೇಗ ನಮ್ಮೆಲ್ಲರ ನಡಿಗೆಯನ್ನು ಮೀರಿಸಿತ್ತು :‍)
ವಂದನೆಗಳು

Submitted by swara kamath Mon, 12/29/2014 - 20:34

ಪಾರ್ಥರಿಗೆ ನಮಸ್ಕಾರ
ಈ ಹಿಂದೆ ನೀವು ಕುಟುಂಬಸಮೇತರಾಗಿ ದುರ್ಗದ ಚಾರಣಕ್ಕೆ ಹೋದದ್ದು ನೆನಪು. ಈ ಬಾರಿ ಸ್ನೇಹಿತರೊಡಗೂಡಿ ಚಾರಣ ಮಾಡಿದಿರಿ. ಚಾರಣ ಸಮಯದ ಎರಡು ಸಂದರ್ಭಗಳು ಒದಲು ಮೋಜೆನಿಸಿತು.ಮುದುಕ ಕೊಟ್ಟ ಚಾಕ್ಲೇಟನ್ನು ನೀವು ಅನುಮಾನಿಸಿದಿರಿ ಅಂತೇಯೆ ನಾಯಿ ನೀವು ಹಾಕಿದ ಬಿಸ್ಕತ್ ,ಬನ್ ಅನುಮಾನಿಸಿತೊ ಎನೊ? ಆಹ್ಹಾ :))
ನನಗೂ ಸಹ 1968ರ ಸಮಯದಲ್ಲಿ ತುಮಕೂರಿನ S I T ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ನೇಹಿತರೊಡಗೂಡಿ ದೇವರಾಯನದುರ್ಗಕ್ಕೆ ಸೈಕಲ್ ಸವಾರಿಮಾಡಿ ಸಂತೋಷಪಟ್ಟ ದಿನಗಳ ನೆನಪು ಮರುಕಳಿಸುವಂತೆ ಈ ನಿಮ್ಮ ಲೇಖನ ಮಾಡಿತು......... ರಮೇಶ ಕಾಮತ್

Submitted by partha1059 Mon, 12/29/2014 - 22:32

In reply to by swara kamath

ನಮಸ್ಕಾರ ಕಾಮತರವರಿಗೆ
ನಿಜ ಪ್ರತಿ ವರ್ಷವೂ ಹೋಗುತ್ತೇವೆ. ಈ ವರ್ಷ ಹೆಂಗಸರಾರು ಹೊರಡಲಿಲ್ಲ
ನಿಮ್ಮ ಮಾತು ನಿಜ ಅನ್ನಿಸುತ್ತಿದೆ
ನಾವು ಮುದುಕನನ್ನು ಅನುಮಾನಿಸಿದೆವು
ನಾಯಿ ನಮ್ಮನ್ನು ಅನುಮಾನಿಸಿತು
ಎಂತಹ ಸತ್ಯ !!!!
ನಿಮಗೆ ಹಿಂದಿನ ನೆನಪು ತಂದಿದ್ದಕ್ಕೆ ನನಗೆ ಸಂತಸ
... ಪಾರ್ಥಸಾರಥಿ

Submitted by ಗಣೇಶ Mon, 12/29/2014 - 23:59

ಪಾರ್ಥರೆ,
ಮೊದಲಿಗೆ ನಾಯಿಯ ವಿಷಯ-
ನನ್ನ ಮಗಳು ಸ್ಕೂಲ್‌ಗೆ ಹೋಗುವಾಗ, ಕೆಲ ಸಮಯ ಹೀಗೇ ಒಂದು ನಾಯಿ ಸ್ಕೂಲ್‌ನವರೆಗೆ ಹೋಗಿ, ಸಂಜೆ ಸ್ಕೂಲ್‌ನಿಂದ ಮನೆಯವರೆಗೆ ಬಂದು ಬಿಟ್ಟು ಹೋಗುತ್ತಿತ್ತು. ಏನೂ ತಿನ್ನುತ್ತಿರಲಿಲ್ಲ! ಯಾರಾದರು ಓಡಿಸಿದರೆ, ಅಡಗಿ ಕುಳಿತಿದ್ದು ಮತ್ತೆ ಪುನಃ ಹಿಂದೆ ಹೋಗುತ್ತಿತ್ತು. ಯಾರೋ ಸಾಕಿದ ನಾಯಿ, ಮನೆ ಬದಲಿಸುವಾಗ ಬಿಟ್ಟು ಹೋಗಿರಬೇಕು-ನನ್ನ ಮಗಳಂತೆ ಅವರಲ್ಲೂ ಹುಡುಗಿಯೊಬ್ಬಳಿದ್ದಿರಬಹುದು. ಅದಕ್ಕೆ ಹಿಂದೆ ಬರುತ್ತಿರಬಹುದು ಎಂದಿದ್ದೆ. ಕೆಲದಿನದ ನಂತರ ನಾಯಿ ಕಾಣಿಸಲಿಲ್ಲ.(ಕಾರ್ಪೋರೇಷನ್‌ನವರು ಹಿಡಕೊಂಡು ಹೋಗಿರಬಹುದು).
ನಿಮ್ಮ ಹಿಂದೆ ಬಂದ ನಾಯನ್ನೂ ಯಾರೋ ಟೂರ್ ಬಂದವರು ಅಲ್ಲಿ ಬಿಟ್ಟು ಹೋಗಿರಬಹುದು. ಪಾಪ.. ನೀವು ಅದನ್ನು ಕರಕೊಂಡು ಹೋಗುವಿರೋ ಎಂದು ಕಾದಿತ್ತು. ನೀವು ಅದರ ಹೊಟ್ಟೆ ಬಗ್ಗೆ ಮಾತ್ರ ಆಲೋಚಿಸಿದಿರಿ- ಮನಸ್ಸನ್ನು ಅರ್ಥಮಾಡಿಕೊಳ್ಳಲಿಲ್ಲ :(
ಎರಡನೆಯದು ಮುದುಕ-
ನನಗೂ ಸಪ್ತಗಿರಿಯಂತೆ ಮಾರುವೇಶದಲ್ಲಿ ಗಣೇಶ ಇರಬಹುದೇ ಅಂತ ಓದುವಾಗ ಡೌಟ್ ಆಯಿತು. ಮತ್ತೆ ನಿಮ್ಮ ಪ್ರತಿಕ್ರಿಯೆ ನೋಡುವಾಗ ಅಲ್ಲ ಅಂತ ಗ್ಯಾರಂಟಿಯಾಯಿತು. :) ಏನೇ ಆಗಲಿ ಚಾಕಲೇಟ್ ತಿನ್ನದಂತೆ ನೀವು ಸೂಚಿಸಿದ್ದು ಸರಿ. ಈ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ಮೊದಲಿಗೆ ಒಳ್ಳೆಯ ಚಾಕ್ಲೇಟೇ ನೀಡಿ, ನಿಮ್ಮ ಗೆಳೆತನ ಮಾಡಿ ನಂತರ ಮತ್ತಿನ ಚಾಕ್ಲೇಟ್ ಕೊಟ್ಟು ದೋಚಲೂಬಹುದು.
ಮೂರ್ನೆಯದು ಫಾಸ್ಟ್ ಫಾರ್ವರ್ಡ್-
2015ರ ಡಿಸೆಂಬರ್....ಪಾರ್ಥರು, ಸಪ್ತಗಿರಿವಾಸಿ, ಕವಿನಾಗರಾಜರು, ಜಯಂತ್, ಚಿಕ್ಕು, ನಾಗೇಶ್, ಶ್ರೀಧರ್, ಶ್ರೀನಾಥ್, ಕಾಮತ್, ಪಾಟೀಲರು, ಮೂರ್ತಿ..... ಎಲ್ಲಾ ಬೆಟ್ಟ ಹತ್ತುವುದು.....ಹೇಗಿರಬಹುದು.. :)

Submitted by partha1059 Tue, 12/30/2014 - 22:26

In reply to by ಗಣೇಶ

ಗಣೇಶರೆ ನಮಸ್ಕಾರ‌
ನಾಯಿಯ‌ ವಿಚಾರ‌ ಮುದುಕರ‌ ವಿಚಾರ‌ ಸರಿಯಾಯಿತು ನೀವು ಹೇಳಿದ್ದು,
ಆದರೆ ಮೂರನೆಯದು ಎಲ್ಲಾ ಬೆಟ್ಟ‌ ಹತ್ತುವುದು ಅನ್ನುವದರಲ್ಲಿ ಗಣೇಶರ‌ ಹೆಸರು ಮಾತ್ರ‌ ಇಲ್ಲ‌ :‍(
ಎಲ್ಲ‌ ಜೊತೆಗೆ ಹತ್ತೋಣ‌ ಬಿಡಿ
ವಂದನೆಗಳೊಡನೆ
ಪಾರ್ಥಸಾರಥಿ

Submitted by kavinagaraj Tue, 12/30/2014 - 17:01

ಪಾರ್ಥರೇ, ಸಂತಸವಾಯಿತು. ಮುದುಕ ಚಾಕೊಲೇಟ್ ಕೊಟ್ಟ ಬಗ್ಗೆ ನೀವು ಒಂದು ಸುಂದರ ಕಥೆ ಹೆಣೆಯಬಲ್ಲಿರಿ. (ನೀವುಗಳು ಮುದುಕನನ್ನು ಹಿಂಬಾಲಿಸಿದಂತೆ, ನಂತರದಲ್ಲಿ ಅನಾವರಣಗೊಳ್ಳುವ ಸಂಗತಿಗಳಂತೆ. . . . . .)
ನಾಯಿ ಯಾತ್ರಿಕರು ಸುರಕ್ಷಿತವಾಗಿ ಗಮ್ಯ ತಲುಪಲು ಸಹಕಾರಿಯಾಗುವ (ವಿಶೇಷವಾಗಿ ಬೆಟ್ಟ ಗುಡ್ಡಗಳಲ್ಲಿ) ನಿದರ್ಶನಗಳಿವೆ.