ಅನ್ವೇಷಣೆ ಭಾಗ ೧೭
ಇನ್ಸ್ಪೆಕ್ಟರ್ ತ್ರಿವಿಕ್ರಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎರಡು ದಿನ ಕಳೆದಿತ್ತು. ನಡುವಲ್ಲಿ ಶನಿವಾರ ಭಾನುವಾರ ಬಂದಿದ್ದರಿಂದ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಸುಮ್ಮನಾಗಿದ್ದೆ. ಒಮ್ಮೆ ಜಾನಕಿಯ ತಂದೆ ತಾಯಿಯರನ್ನು ಮಾತಾಡಿಸಿಕೊಂಡು ಬರೋಣ ಎಂದು ಅವರ ಮನೆಗೆ ಬಂದು ಅವರ ಕುಶಲ ಸಮಾಚಾರಗಳನ್ನು ವಿಚಾರಿಸಿಕೊಂಡು ವಾಪಸ್ ಮನೆಗೆ ಬರಬೇಕಾದರೆ, ವೀಣಾದೇವಿ ಅವರು ಕರೆ ಮಾಡಿದರು. ಇವರೇನು ಅಪರೂಪವಾಗಿ ನನಗೆ ಕರೆ ಮಾಡಿದ್ದಾರೆ ಎಂದು ಕರೆ ಸ್ವೀಕರಿಸಿ ಹಲೋ ಹೇಳಿ ಮೇಡಂ ಎಂದೆ.
ಏನಿಲ್ಲಪ್ಪ ಅರ್ಜುನ್, ಜಾನಕಿ ಹೋಗಿ ಇಂದಿಗೆ ಎರಡು ತಿಂಗಳಾಯಿತು.... ಯಾಕೋ ಅವಳ ನೆನಪು ಕಾಡುತ್ತಿತ್ತು. ಅದಕ್ಕೆ ಅವಳ ಕೇಸ್ ಏನಾಯಿತು ಎಂದು ವಿಚಾರಿಸಲು ಕರೆ ಮಾಡಿದೆ ಅಷ್ಟೇ. ಮತ್ತೆ ಎಲ್ಲಿಗೆ ಬಂತು ಅವಳ ಕೇಸಿನ ವಿಚಾರಣೆ. ಪಾತಕಿಗಳು ಸಿಕ್ಕರ?
ಇನ್ನೂ ಇಲ್ಲ ಮೇಡಂ... ಇನ್ನೇನು ಕೊನೆಯ ಹಂತದ ವಿಚಾರಣೆ ನಡೆಯುತ್ತಿದೆ. ಇಷ್ಟರಲ್ಲೇ ಜಾನಕಿಯನ್ನು ಕೊಂದವರನ್ನು ಕಂಡುಹಿಡಿಯುವುದು ಖಂಡಿತ. ಅವರಿಗೆ ಶಿಕ್ಷೆ ಕೊಡಿಸಿ ಜಾನಕಿಯ ಆತ್ಮಕ್ಕೆ ಶಾಂತಿ ದೊರೆಯುವ ಹಾಗೆ ಮಾಡುತ್ತೇನೆ ಮೇಡಂ.
ನಿನ್ನ ಕೆಲಸದಲ್ಲಿ ನಿನಗೆ ಯಶಸ್ಸು ದೊರಕಲಿ.... ಹಾ ಅರ್ಜುನ್, ನಿನಗೊಂದು ವಿಷಯ ಹೇಳಬೇಕಿತ್ತು. ಅವತ್ತು ನಮ್ಮ ಆಶ್ರಮಕ್ಕೆ ಗಣತಿಗೆ ಬಂದು ಕಡತಗಳನ್ನು ತೆಗೆದುಕೊಂಡು ಹೋದರು ಎಂದು ಹೇಳಿದೆನಲ್ಲ.... ಅವರಲ್ಲಿ ಒಬ್ಬನ ಶೂ ಸೈಜ್ಗಳು ವಿಚಿತ್ರವಾಗಿದ್ದವು. ಅವನು ಒಂದು ರೀತಿ ನಡೆಯುತ್ತಿದ್ದರಿಂದ ನಾನು ಅವನನ್ನು ಯಾಕೆ ಹೀಗೆ ಎಂದು ಕೇಳಿದ್ದಕ್ಕೆ, ಆತ ಹೇಳಿದ, ತನ್ನ ಒಂದು ಕಾಲಿನ ಶೂ ಸೈಜ್ 9 ಮತ್ತು ಇನ್ನೊಂದು ಕಾಲಿನ ಸೈಜ್ 10 ಎಂದು. ನೋಡು ಇದರಿಂದ ನಿನಗೇನಾದರೂ ಉಪಯೋಗ ಆಗುವುದ ಎಂದು.
ಮೇಡಂ ಏನು ನೀವು ಹೇಳುತ್ತಿರುವುದು ಒಂದು 9 ಮತ್ತೊಂದು 10!!! ಹಾಗೆಲ್ಲಾದರೂ ಇರಲು ಸಾಧ್ಯವೇ??
ಹೌದು ಅರ್ಜುನ್, ಮೊದಲು ನನಗೂ ಆ ಅನುಮಾನ ಬಂದಿತ್ತು. ನಂತರ ಆತ ಒಳಗೆ ಬರುವಾಗ ಶೂ ಬಿಚ್ಚಿ ಬಂದಿದ್ದು ಹೋಗುವಾಗ ಶೂ ಹಾಕಿಕೊಳ್ಳಬೇಕಾದರೆ ನಾನೇ ನನ್ನ ಕಣ್ಣಾರೆ ನೋಡಿದಾಗ ಅವನು ಹೇಳಿದ್ದು ನಿಜ ಎಂದು ಗೊತ್ತಾಯಿತು. ನೀನು ಕಡತ ತೆಗೆದುಕೊಂಡು ಹೋದಾಗ ನನಗೆ ಈ ವಿಷಯ ನೆನಪಿಗೆ ಬಂದಿರಲಿಲ್ಲ. ಇವತ್ತು ನನ್ನ ಚಪ್ಪಲಿ ಕಿತ್ತು ಹೋಗಿ ಹೊಸತು ತೆಗೆದುಕೊಳ್ಳಲು ಹೋದಾಗ ಈ ವಿಷಯ ನೆನಪಿಗೆ ಬಂದು ನಿನಗೆ ಹೇಳೋಣ ಎಂದು ಕರೆ ಮಾಡಿದೆ.
ಮೇಡಂ... ಇದು ವಿಚಿತ್ರವಾದರೂ, ಆರೋಪಿಯನ್ನು ಕಂಡು ಹಿಡಿಯಲು ಇದೊಂದು ಅದ್ಭುತ ಸುಳಿವು ಆಗುವುದು ಎನಿಸುತ್ತಿದೆ.
ಮೇಡಂ ತುಂಬಾ ಥ್ಯಾಂಕ್ಸ್.... ನಾನು ಕೂಡಲೇ ಇನ್ಸ್ಪೆಕ್ಟರ್ ಗೆ ಈ ವಿಷಯವನ್ನು ತಿಳಿಸಿ ಮುಂದಿನ ತನಿಖೆ ಬಗ್ಗೆ ಹೇಗೆ ಪ್ಲಾನ್ ಮಾಡಬೇಕೆಂದು ಯೋಚಿಸುತ್ತೇವೆ. ನಾನು ಮತ್ತೆ ನಿಮಗೆ ಕರೆ ಮಾಡುತ್ತೇನೆ ಮೇಡಂ ಎಂದು ಹೇಳಿ ಕರೆ ಕಟ್ ಮಾಡಿ, ತ್ರಿವಿಕ್ರಂಗೆ ಕರೆ ಮಾಡಿ.... ಸರ್ ಒಂದು ಮುಖ್ಯವಾದ ಮಾಹಿತಿ ದೊರಕಿದೆ... ಆದರೆ ಇದು ನಮಗೆ ಎಷ್ಟು ಉಪಯೋಗ ಆಗುತ್ತದೆ ಎಂದು ತಿಳಿಯುತ್ತಿಲ್ಲ.
ಅರ್ಜುನ್... ಏನದು ಮಾಹಿತಿ?
ಸರ್... ಅಂದು ವೀಣಾದೇವಿ ಅವರ ಬಳಿ ದಾಖಲೆಗಳನ್ನು ತೆಗದುಕೊಂಡು ಹೋದ ವ್ಯಕ್ತಿಯ ಷೂ ಸೈಜ್ಗಳು ವಿಚಿತ್ರವಾಗಿರುವುದು. ಒಂದು ಕಾಲಿನ ಷೂ ಸೈಜ್ 9 ಮತ್ತು ಇನ್ನೊಂದು ಕಾಲಿನ ಸೈಜ್ 10. ಇದೆ ಸರ್ ವಿಚಿತ್ರ. ಆಮೇಲೆ ನನ್ನ ಅಂದಾಜಿನ ಪ್ರಕಾರ ಆತನೇ ಮೂಲ ವ್ಯಕ್ತಿ ಇರುತ್ತಾನೆ ಎನಿಸುತ್ತಿದೆ. ಏಕೆಂದರೆ, ಕೊಲೆ ಮಾಡಲು, ಮಾಟ ಮಾಡಲು ಬೇರೆಯವರನ್ನು ಉಪಯೋಗಿಸಿರಬಹುದು... ಆದರೆ ಜಾನಕಿಯ ಕುರಿತಾಗಿ ಮಾಹಿತಿ ಸಂಗ್ರಹಿಸಲು ಖಂಡಿತ ಅವನೇ ಬಂದಿರುತ್ತಾನೆ. ಏಕೆಂದರೆ, ಅದೇ ಆಶ್ರಮಕ್ಕೆ ಬಂದು ವಿಚಾರಿಸುತ್ತಿದ್ದಾನೆ ಎಂದರೆ ಖಂಡಿತ ಅವನೇ ಆ ಮಗುವನ್ನು ಆಶ್ರಮದ ಬಳಿ ಬಿಟ್ಟಿರುತ್ತಾನೆ. ಹಾಗಾಗಿ ಅವನೇ ಬಂದಿರುತ್ತಾನೆ ಎಂದು ನನ್ನ ಅನುಮಾನ.
ಅರ್ಜುನ್....ಇದೇನಿದು ಒಳ್ಳೆ Yaadon ki Baaraat ಹಿಂದಿ ಸಿನೆಮಾದಲ್ಲಿ ವಿಲನ್ ಗೆ ಇದ್ದ ಹಾಗಿದೆ..... ಒಳ್ಳೆಯ ಮಾಹಿತಿ.... ನೋಡೋಣ remand ಅಲ್ಲಿ ಇರುವವನನ್ನು ಒಮ್ಮೆ ವಿಚಾರಿಸಿದ ಮೇಲೆ ಅವನ ಹೇಳಿಕೆಯನ್ನೂ ಗಮನಿಸಿ ನಂತರ ಮುಂದುವರಿಯೋಣ.
ಅರ್ಜುನ್, ಇನ್ನೊಂದು ವಿಷಯ.... ಇನ್ನು ನೀವು ಆದಷ್ಟು ಹುಷಾರಾಗಿರುವುದು ಒಳ್ಳೆಯದು. ಏಕೆಂದರೆ ಆರೋಪಿಗೆ ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳು ಗೊತ್ತಾಗಿರುತ್ತದೆ ಮತ್ತು ಅವನು ನಿಮ್ಮ ಮೇಲೆ ಖಂಡಿತ ಕಣ್ಣಿಟ್ಟಿರುತ್ತಾನೆ. ನೀವು ಜಾಗ್ರತೆಯಲ್ಲಿರುತ್ತೀರೋ ಅಷ್ಟು ಒಳ್ಳೆಯದು. ಇನ್ನು ಮುಂದೆ ನೀವು ಯಾವುದೇ ಕೆಲಸಕ್ಕೆ ಮುಂದುವರಿಯಬೇಕಾದರೆ ಮೊದಲು ನನಗೊಂದು ವಿಷಯ ತಿಳಿಸಿ ನಂತರ ಮುಂದುವರೆಯಿರಿ. ಅವನು ಯಾವ ಸಮಯದಲ್ಲಿ ಬೇಕಾದರೂ ನಿಮ್ಮನ್ನು ಟಾರ್ಗೆಟ್ ಮಾಡಬಹುದು.
ಸರ್... ಖಂಡಿತ, ಇನ್ನೇನಿದ್ದರೂ ಅವನನ್ನು ಹಿಡಿಯುವುದೊಂದೇ ಬಾಕಿ. ಅದು ನನ್ನೊಬ್ಬನ ಕೈಯಲ್ಲಂತೂ ಖಂಡಿತ ಸಾಧ್ಯವಿಲ್ಲ....ನಿಮ್ಮ ಸಹಾಯ ಬೇಕೇ ಬೇಕು. ಹಾಗಾಗಿ ನಾನೊಬ್ಬನೇ ಮುಂದುವರೆಯುವುದಿಲ್ಲ. ಏನಿದ್ದರೂ ನಿಮಗೆ ತಿಳಿಸೇ ಮುಂದುವರಿಯುತ್ತೇನೆ.
ಸರ್.... ಇನ್ನೊಂದು ವಿಷಯ, ಒಂದು ವೇಳೆ ಆರೋಪಿ ಏನಾದರೂ ಸಿಕ್ಕರೆ ನೀವು ನನಗೆ ಮಾತು ಕೊಟ್ಟಿರುವ ಹಾಗೆ ಅವನನ್ನು ಒಂದು ಹತ್ತು ನಿಮಿಷ ನನಗೆ ಒಪ್ಪಿಸಬೇಕು.
ಹ್ಹ... ಹ್ಹ... ಅಷ್ಟೇ ತಾನೇ, ಖಂಡಿತ ಅರ್ಜುನ್....
Comments
ಉ: ಅನ್ವೇಷಣೆ ಭಾಗ ೧೭
ಕೊನೆಯಲ್ಲಿನ ಅರ್ಜುನನ ಕೋರಿಕೆ ಬಾಲಿಶವೆನಿಸುತ್ತದೆ. ಇದನ್ನು ಬಿಟ್ಟು ಉಳಿದುದು ಸರಿಯೆಂಬುದು ನನ್ನ ವೈಯಕ್ತಿಕ ಅನಿಸಿಕೆ. ಬೇಗ ಕೊಲೆಗಾರರನ್ನು ಹಿಡಿಯಿರಿ, ಜಯಂತರೇ.