ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೇಳು

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೇಳು

“ಮೊದಲು ನನ್ನ ಬೂಟು ಕಳಚಿದೆ. ಬರೀ ಕಾಲುಚೀಲ ಉಳಿಸಿಕೊಂಡೆ. ಸೋಫಾ ಹತ್ತಿರ ಹೋದೆ. ಗೋಡೆಯ ಮೇಲೆ ಗನ್ನುಗಳು, ಚಾಕು ಚೂರಿಗಳು ಇದ್ದವು. ವಕ್ರವಾದ ಡಮಾಸ್ಕಸ್ ಕಠಾರಿ ತೆಗೆದುಕೊಂಡೆ. ಯಾವತ್ತೂ ನಾವು ಅದನ್ನು ಬಳಸಿರಲಿಲ್ಲ. ತುಂಬ ಚೂಪಾಗಿತ್ತು. ಒರೆಯಿಂದ ಹೊರಕ್ಕೆ ಎಳೆದೆ. ಚರ್ಮದ ಒರೆ ಸೋಫಾದ ಹಿಂದೆ ಬಿತ್ತು. ‘ಆಮೇಲೆ ಅದನ್ನು ಎತ್ತಿಕೊಳ್ಳಬೇಕು, ಇಲ್ಲದಿದ್ದರೆ ಕಳೆದುಹೋಗುತ್ತದೆ’ ಅಂದುಕೊಂಡದ್ದು ನೆನಪಿದೆ. ಓವರ್ ಕೋಟು ತೆಗೆದೆ. ಕಾಲುಚೀಲದ ಪಾದಗಳನ್ನು ಶಬ್ದವಾಗದ ಹಾಗೆ ಊರುತ್ತಾ ಬಾಗಿಲ ಹತ್ತಿರ ಹೋದೆ.
‘ಕಳ್ಳನ ಹಾಗೆ ಬಾಗಿಲ ಹತ್ತಿರ ಹೋದೆ. ತಟ್ಟನೆ ಬಾಗಿಲು ದೂಡಿಬಿಟ್ಟೆ. ಅವರ ಮುಖ ಹೇಗಿತ್ತು ಅನ್ನುವುದು ಈಗಲೂ ಜ್ಞಾಪಕ ಇದೆ. ನನ್ನ ಕಂಡ ತಕ್ಷಣ ಅವರ ಮುಖದಲ್ಲಿ ಹತಾಶೆ ಕಾಣಿಸಿತು, ಭಯ ಕಾಣಿಸಿತು. ನನಗೆ ಬೇಕಾಗಿದ್ದದ್ದೂ ಅದೇ. ಸಾಯುವರೆಗೂ ಅವರ ಆ ಮುಖ ಮರೆಯುವುದಿಲ್ಲ. ಸಂತೋಷ ಆಯಿತು. ನೋವು ಕೂಡಾ. ಅವನು ಟೇಬಲ್ಲಿನ ಮೇಲೆ ಕೂತಿದ್ದ ಅಂತ ಕಾಣುತ್ತದೆ. ನನ್ನ ಕಂಡನೋ, ಶಬ್ದ ಕೇಳಿದನೋ, ತಟ್ಟನೆ ಹಾರಿ, ಬುಕ್‌ ಕೇಸಿಗೆ ಬೆನ್ನುಮಾಡಿ ನಿಂತುಕೊಂಡ. ಅವನ ಮುಖದ ತುಂಬಾ ಭಯ ಬಿಟ್ಟರೆ ಇನ್ನೇನೂ ಇಲ್ಲ. ಅವಳ ಮುಖದಲ್ಲೂ ಭಯ. ಭಯದ ಜೊತೆಗೆ ಇನ್ನೂ ಏನೋ ಇದ್ದ ಹಾಗೆ ಇತ್ತು. ಬರೀ ಭಯ ಅಷ್ಟೇ ಇದ್ದಿದ್ದರೆ ಮುಂದಿನದೆಲ್ಲ ನಡೆಯುತ್ತಲೇ ಇರಲಿಲ್ಲ. ಪ್ರೀತಿ ಮಾಡುತ್ತಾ ಸುಖಪಡುತ್ತಿರುವಾಗ ಅಡ್ಡಿಯಾಯಿತಲ್ಲ ಅನ್ನುವ ಬೇಸರ ಕೂಡ ಭಯದ ಜೊತೆ ಬೆರೆತುಕೊಂಡಿತ್ತು. ಅಥವಾ ಅವಳ ಮುಖ ನೋಡಿದ ಕ್ಷಣದಲ್ಲಿ ಹಾಗನ್ನಿಸಿತು. ಸುಖಪಡುವುದು ಬಿಟ್ಟು ಬೇರೇನೂ ಬೇಡ ಅಂದುಕೊಂಡಿದ್ದಾಗ ಅಡ್ಡಿಯಾದರೆ ಮುಖ ಕೆಡುತ್ತದಲ್ಲ ಹಾಗೆ. ಈ ಭಾವಗಳು ಅವರ ಮುಖದ ಮೇಲೆ ಒಂದು ಕ್ಷಣ ಮಾತ್ರ ಇದ್ದವು. ಅವನ ಮುಖದಲ್ಲಿದ್ದ ಭಯ ಪ್ರಶ್ನೆಯಾಗಿಬಿಟ್ಟಿತ್ತು. ‘ಸುಳ್ಳು ಹೇಳಲೋ ಬೇಡವೋ? ಹೇಳುವುದಾದರೆ ತಕ್ಷಣ ಹೇಳಬೇಕು. ಇಲ್ಲದಿದ್ದರೆ ಏನೋ ಆಗಿಬಿಡಬಹುದು. ಏನು ಆಗಬಹುದು?’ ಅನ್ನುವ ಪ್ರಶ್ನೆ ಅವನ ಮುಖದಲ್ಲಿ ಕಾಣಿಸಿತು. ಮುಖದಲ್ಲಿ ಅಂಥ ಪ್ರಶ್ನೆ ಇಟ್ಟುಕೊಂಡು ಅವಳ ಕಡೆಗೆ ನೋಡಿದ. ಅವಳ ಮುಖದಲ್ಲಿದ್ದ ಕಳವಳ, ಬೇಸರಗಳು ಅವನಿಗೆ ಏನಾದೀತೋ ಅನ್ನುವ ಆತಂಕವಾಗಿ ಬದಲಾದವು. ಅಥವಾ ನನಗೆ ಹಾಗನ್ನಿಸಿತು.
“ಒಂದು ಕ್ಷಣ ಬಾಗಿಲಲ್ಲಿ ನಿಂತೆ. ಕಠಾರಿ ನನ್ನ ಬೆನ್ನ ಹಿಂದೆ ಬಚ್ಚಿಟ್ಟುಕೊಂಡಿದ್ದೆ.
“ಆ ಕ್ಷಣ ಮುಗುಳ್ನಕ್ಕ ಅವನು. ಏನೂ ಆಗಿಲ್ಲ ಅನ್ನುವ ಹಾಗೆ, ಜ್ಞಾಪಿಸಿಕೊಂಡರೆ ನಗುಬರುವಂಥ ಧ್ವನಿಯಲ್ಲಿ ‘ಸಂಗೀತಾ ಪ್ರಾಕ್ಟೀಸು ಮಾಡುತ್ತಾ ಇದ್ದೆವೂ...’ ಅಂದ.
“ಓ, ಇದು..! ಅವಳೂ ಅವನ ಧ್ವನಿಯಲ್ಲೇ ಮಾತಾಡುವುದಕ್ಕೆ ಶುರುಮಾಡಿದಳು. ಆದರೆ ಇಬ್ಬರೂ ಮಾತು ಮುಗಿಸಲೇ ಇಲ್ಲ. ಕಳೆದವಾರ ನನ್ನ ಮನಸ್ಸಿನಲ್ಲಿ ಹುಟ್ಟಿದ್ದಂಥದ್ದೇ ಕೋಪ, ರೊಚ್ಚು, ಹುಟ್ಟಿತ್ತು. ಹೊಡೆಯಬೇಕು, ಹಾಳುಮಾಡಬೇಕು, ಕುಟ್ಟಿಪುಡಿಮಾಡಬೇಕು ಅನ್ನುವಂಥ ರೊಚ್ಚಿಗೆ ವಶವಾಗಿದ್ದೆ. ಅವರು ಮಾತು ಮುಗಿಸಲೇ ಇಲ್ಲ. ಏನು ಆಗಬಹುದು ಅಂತ ಅವನು ಭಯಪಟ್ಟಿದ್ದನೋ ಅದು ಆಗಿ ಅವನ ಮಾತನ್ನು ಕತ್ತರಿಸಿಬಿಟ್ಟಿತು. ಅವಳ ಕಡೆ ನುಗ್ಗಿದೆ. ಕಠಾರಿ ಇನ್ನೂ ಬೆನ್ನ ಹಿಂದೆ ಬಚ್ಚಿಟ್ಟುಕೊಂಡಿದ್ದೆ. ಅವನಿಗೆ ಕಾಣಬಾರದು, ಅವಳ ಎಡಗಡೆಯ ಮೊಲೆಯ ಕೆಳಗೆ ತಿವಿಯುವುದು ತಪ್ಪಿಸಿಬಿಟ್ಟಾನು ಅಂತ. ಅಲ್ಲಿಗೇ ಇರಿದು ಚುಚ್ಚಬೇಕು ಎಂದು ಮೊದಲಿನಿಂದಲೂ ಅಂದುಕೊಂಡಿದ್ದೆ. ಅವಳ ಕಡೆ ನುಗ್ಗಿದ್ದು ನೋಡಿದ. ತಟ್ಟನೆ ನನ್ನ ತೋಳು ಹಿಡಿದುಕೊಂಡ. ಹಾಗೆ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ‘ಏನು ಮಾಡುತ್ತಾ ಇದ್ದೀರಿ! ಹೆಲ್ಪ್’ ಅಂತ ಕೂಗಿಕೊಂಡ.
“ತೋಳು ಕೊಡವಿಕೊಂಡೆ. ಮಾತಿಲ್ಲದೆ ಅವನ ಕಡೆ ನುಗ್ಗಿದೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಮುಖದ ರಕ್ತವೆಲ್ಲ ಬಸಿದು ಹೋದ ಹಾಗೆ ಬಿಳಿಚಿಕೊಂಡ. ಕಣ್ಣು ವಿಚಿತ್ರವಾಗಿ ಹೊಳೆದವು. ಹಾಗೆ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ತಟಕ್ಕನೆ ಪಿಯಾನೋ ಕೆಳಗೆ ನುಸಿದು ಬಾಗಿಲ ಕಡೆ ಓಡಿದ. ಅವನ ಹಿಂದೆ ಅಟ್ಟಿಸಿಕೊಂಡು ಹೋಗಬೇಕಾಗಿತ್ತು. ನನ್ನ ಎಡಗಡೆ ತೋಳು ಭಾರವಾಗಿತ್ತು. ಅವಳು ನನ್ನ ತೋಳಿಗೆ ಜೋತುಬಿದ್ದಿದ್ದಳು. ಬಿಡಲೇ ಇಲ್ಲ. ಹೀಗೆ ಅಡ್ಡಿ ಆಗಿದ್ದು, ಅವಳ ಭಾರ, ಅಸಹ್ಯ ಅನ್ನಿಸುತ್ತಿದ್ದ ಅವಳ ಸ್ಪರ್ಶ ಎಲ್ಲ ಸೇರಿಕೊಂಡು ಕೋಪ ಹೆಚ್ಚಾಯಿತು. ಹುಚ್ಚನಾಗಿದ್ದೆ. ನನ್ನ ಮುಖ ಭಯಂಕರವಾಗಿ ಕಾಣುತ್ತಿರಬೇಕು ಅನ್ನಿಸಿ ಸಂತೋಷವಾಯಿತು. ಶಕ್ತಿಯೆಲ್ಲಾ ಬಿಟ್ಟು ಎಡಗೈಯನ್ನು ಕೊಡವಿ ಬಿಡಿಸಿಕೊಂಡೆ. ಆಗ ನನ್ನ ಮೊಳಕೈ ಅವಳ ಮುಖಕ್ಕೆ ಬಲವಾಗಿ ತಾಗಿತು. ಜೋರಾಗಿ ಕಿರುಚುತ್ತಾ ನನ್ನ ಕೈ ಬಿಟ್ಟಳು. ಅವನ ಹಿಂದೆ ಹೋಗಬೇಕಾಗಿತ್ತು. ಆದರೆ ಬರೀ ಕಾಲುಚೀಲ ಹಾಕಿಕೊಂಡು ಹೆಂಡತಿಯ ಲವರನ್ನು ಅಟ್ಟಿಸಿಕೊಂಡು ಹೋದರೆ ಹಾಸ್ಯಾಸ್ಪದವಾಗಿರುತ್ತದೆ ಅನ್ನಿಸಿತು. ಭಯಂಕರವಾಗಿ ಕಾಣಬೇಕಾಗಿತ್ತು, ಹಾಸ್ಯಾಸ್ಪದವಾಗಿ ಕಾಣುವುದಕ್ಕೆ ನನಗೆ ಇಷ್ಟ ಇರಲಿಲ್ಲ. ಅಂಥಾ ಕೋಪದ ಆವೇಶದಲ್ಲೂ ನಾನು ಏನು ಮಾಡಿದರೆ ಅವರ ಮನಸ್ಸಿನ ಮೇಲೆ ಏನು ಪರಿಣಾಮ ಆಗುತ್ತದೆ ಎಂದು ಗಮನಿಸುತ್ತಲೇ ಇದ್ದೆ. ಸ್ವಲ್ಪಮಟ್ಟಿಗೆ ನಾನು ಮಾಡಿದ್ದನ್ನೆಲ್ಲ ಅಂಥ ಪರಿಣಾಮದ ಆಸೆಯಿಂದಲೂ ಮಾಡುತ್ತಾ ಇದ್ದೆ. ಅವಳ ಕಡೆ ತಿರುಗಿದೆ. ಅವಳು ಸೋಫಾ ಮೇಲೆ ಬಿದ್ದಿದ್ದಳು. ಏಟು ಬಿದ್ದಿದ್ದ ಒಂದು ಕಣ್ಣಿಗೆ ಕೈ ಅಡ್ಡ ಇಟ್ಟುಕೊಂಡಿದ್ದಳು. ನನ್ನನ್ನೇ ನೋಡುತ್ತಾ ಇದ್ದಳು. ನಾನು, ಅವಳ ಶತ್ರು, ನನ್ನ ಬಗ್ಗೆ ದ್ವೇಷ ಇತ್ತು, ಭಯ ಇತ್ತು. ಬೋನನ್ನು ಎತ್ತಿ ಹಿಡಿದುಕೊಂಡಾಗ ಸಿಕ್ಕಿಬಿದ್ದ ಇಲಿ ನಮ್ಮನ್ನು ನೋಡುತ್ತದಲ್ಲಾ, ಹಾಗೆ ನೋಡುತ್ತಿದ್ದಳು. ಬರೀ ಭಯ, ಬರೀ ದ್ವೇಷ. ಮತ್ತೆ ಯಾವನಮೇಲೋ ಪ್ರೀತಿ ಹುಟ್ಟಿ ನನ್ನ ಬಗ್ಗೆ ಭಯ, ದ್ವೇಷ. ಅವಳು ಸುಮ್ಮನೆ ಇದ್ದಿದ್ದರೆ ಕೋಪ ತಡೆದುಕೊಳ್ಳುತ್ತಿದ್ದೆನೋ ಏನೋ. ಇದ್ದಕ್ಕಿದ್ದ ಹಾಗೆ ಮಾತಾಡಿದಳು. ಕಠಾರಿ ಬಚ್ಚಿಟ್ಟುಕೊಂಡಿದ್ದ ಕೈ ಹಿಡಿದುಕೊಂಡು, ‘ಏನು ಮಾಡುತ್ತಾ ಇದ್ದೀರಿ? ಇಲ್ಲಿ ನೋಡಿ, ಏನಾಗಿದೆ ನಿಮಗೆ? ಎಂಥಾದ್ದೂ ಆಗಿಲ್ಲ, ಏನೂ ನಡೆದಿಲ್ಲ, ಏನೂ ನಡೆದಿಲ್ಲ, ನನ್ನ ಮೇಲೆ ಆಣೆ’ ಅಂದಳು.
“ಆದರೂ ಹಿಂಜರಿಯುತ್ತಿದ್ದೆನೋ ಏನೋ. ಅವಳ ಕೊನೆಯ ಮಾತುಗಳು ಏನೋ ಆಗಿದೆ, ಎಲ್ಲಾ ಆಗಿ ಹೋಗಿದೆ ಅನ್ನುವ ವಿರುದ್ಧವಾದ ಅರ್ಥವನ್ನೇ ಹೊಳೆಸಿದವು. ಅದಕ್ಕೆ ಉತ್ತರ ಕೊಡಲೇಬೇಕಾಗಿತ್ತು. ನನಗೆ ಇದ್ದ ಕೋಪಕ್ಕೆ ತಕ್ಕ ಉತ್ತರ. ಕೋಪ ಹೆಚ್ಚುತ್ತಲೇ ಇತ್ತು. ತುಟ್ಟತುದಿ ಮುಟ್ಟುವವರೆಗೆ ಹೆಚ್ಚುತ್ತಲೇ ಇರಬೇಕು ಕೋಪ. ಕೋಪಕ್ಕೂ ನಿಯಮಗಳಿವೆಯಲ್ಲ.
“ಸುಳ್ಳು ಬೊಗಳಬೇಡ, ಸೂಳೆ! ಅಂತ ಚೀರಿದೆ. ಎಡಗೈಯಲ್ಲಿ ಅವಳ ತೋಳು ಹಿಡಿದು ತಿರುಚಿದೆ. ತಪ್ಪಿಸಿಕೊಂಡಳು. ಕಠಾರಿಯನ್ನು ಬಿಡದೆ, ಎಡಗೈಯಲ್ಲಿ ಅವಳ ಕೊರಳು ಹಿಡಿದು, ಹಿಂದಕ್ಕೆ ಬಗ್ಗಿಸಿ, ಕತ್ತು ಹಿಸುಕಲು ಶುರುಮಾಡಿದೆ. ಪುಷ್ಟವಾದ ಕತ್ತು ಅವಳದು! ಎರಡೂ ಕೈಯಲ್ಲಿ ನನ್ನ ಮುಂಗೈ ಹಿಡಿದು ಕೊರಳು ಬಿಡಿಸಿಕೊಳ್ಳುವುದಕ್ಕೆ ಒದ್ದಾಡಿದಳು. ಆ ಕ್ಷಣಕ್ಕೇ ಕಾಯುತ್ತಿದ್ದವನ ಹಾಗೆ ನನ್ನ ಎಲ್ಲ ಶಕ್ತಿಬಿಟ್ಟು ಅವಳ ಎಡಗಡೆಯ ಪಕ್ಕೆಗೆ ಕಠಾರಿಯಿಂದ ತಿವಿದೆ.
“ಕೋಪಾವೇಶ ಇದ್ದಾಗ ಏನು ಮಾಡುತ್ತೇವೆ ಅನ್ನುವುದೇ ತಿಳಿದಿರುವುದಿಲ್ಲ ಅನ್ನುತ್ತಾರೆ. ಶುದ್ಧ ಸುಳ್ಳು. ಆ ಒಂದೊಂದು ಕ್ಷಣವೂ ನಾನು ಏನೇನು ಮಾಡಿದೆನೋ ಅದೆಲ್ಲ ನೆನಪಿದೆ. ಕೋಪ ಜ್ವಲಿಸಿದ ಹಾಗೆಲ್ಲ ನನ್ನ ಪ್ರಜ್ಞೆಯೂ ಬೆಳಗುತ್ತ ಹೋಯಿತು. ನಾನು ಮಾಡಿದ್ದನ್ನೆಲ್ಲ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಒಂದೊಂದು ಕ್ಷಣವೂ ನೆನಪಿದೆ. ಮುಂದಿನ ಕ್ಷಣ ಏನು ಮಾಡುತ್ತೇನೆ ಅನ್ನುವುದೂ ಹೊಳೆಯುತ್ತಿತ್ತೋ ಇಲ್ಲವೋ ಹೇಳಲಾರೆ. ಆದರೆ ಮಾಡುತಿದ್ದ ಕ್ಷಣದಲ್ಲಿ ಏನೇನು ಮಾಡುತ್ತಿದ್ದೆ ಎಲ್ಲ ಗೊತ್ತಿತ್ತು. ಆಮೇಲೆ ಪಶ್ಚಾತ್ತಾಪ ಪಡುವುದಕ್ಕೆ, ನಾನು ಹಾಗೆ ಮಾಡದೆ ಇರಬಹುದಾಗಿತ್ತು ಅಂದುಕೊಳ್ಳುವುದಕ್ಕೆ ಆಯಾ ಕ್ಷಣ ಮನಸ್ಸಿನಲ್ಲಿ ಮೂಡುತ್ತಿದ್ದ ಯೋಚನೆಗಳೂ ನೆನಪಿನಲ್ಲಿ ಉಳಿಯುತ್ತಿದ್ದವು. ಅವಳ ಎಡಗಡೆಯ ಪಕ್ಕೆಗೆ ತಿವಿಯುತ್ತಾ ಇದ್ದೇನೆ, ಕಠಾರಿ ಅವಳ ಎದೆಯನ್ನು ಬಗೆಯುತ್ತದೆ ಅಂತ ಗೊತ್ತಿತ್ತು. ಆ ಕ್ಷಣದಲ್ಲಿ ನಾನು ಎಂದೂ ಮಾಡಿರದಂಥ ಭಯಂಕರ ಕೆಲಸ ಮಾಡುತ್ತಿದ್ದೇನೆ, ಪರಿಣಾಮವೂ ಭಯಂಕರವಾಗಿರುತ್ತದೆ ಅನ್ನುವ ಅರಿವು ಮಿಂಚಿನ ಹಾಗೆ ಸುಳಿದು ಹೋಯಿತು. ಹಾಗನ್ನಿಸಿದ ಅರ್ಧ ಕ್ಷಣದಲ್ಲೇ ಕೆಲಸ ಮುಗಿದಿತ್ತು. ನಾನು ಮಾಡಿದ ಕೃತ್ಯದ ಅರಿವು ಅತ್ಯಂತ ಸ್ಪಷ್ಟವಾಗಿತ್ತು. ಅವಳುಟ್ಟ ಬಟ್ಟೆ ಕಠಾರಿಗೆ ಎದುರಾದದ್ದು, ಮತ್ತೇನೋ ಗಟ್ಟಿಯಾದದ್ದು ಸಿಕ್ಕಿದ್ದು, ಆಮೇಲೆ ಮೃದು ಮಾಂಸದೊಳಕ್ಕೆ ಕಠಾರಿ ಮೊನೆ ಇಳಿದದ್ದು ಎಲ್ಲ ನೆನಪಿದೆ. ಎರಡೂ ಕೈಯಲ್ಲಿ ಕಠಾರಿ ಹಿಡಿದುಕೊಂಡಳು. ಅಂಗೈ ಕತ್ತರಿಸಿಹೋಯಿತು, ಆದರೆ ಕಠಾರಿ ಒಳಕ್ಕೆ ಇಳಿದುಬಿಟ್ಟಿತ್ತು.
“ನಾನು ಜೈಲಿನಲ್ಲಿದ್ದಾಗ, ನನ್ನ ಮನಸ್ಸು ಬದಲಾದಮೇಲೆ, ಆ ಕ್ಷಣದ ವಿವರಗಳನ್ನು ಮತ್ತೆ ಮತ್ತೆ ಸಾಧ್ಯ ಇರುವಷ್ಟೂ ನೆನಪುಮಾಡಿಕೊಂಡಿದ್ದೇನೆ. ಅಸಹಾಯಕಳಾದ ಹೆಂಗಸನ್ನು, ನನ್ನ ಹೆಂಡತಿಯನ್ನು, ಕೊಲ್ಲುತ್ತಿದ್ದೇನೆ, ಕೊಂದೇಬಿಟ್ಟೆ ಅನ್ನುವ ಭಯಂಕತ ಅರಿವು ಮೂಡಿ, ಆಗಿ ಹೋದ ಕೆಲಸ ಆಗಬಾರದಿತ್ತು ಎಂಬಂತೆ ಚುಚ್ಚಿದ್ದ ಕಠಾರಿಯನ್ನು ತಟ್ಟನೆ ಹೊರಗೆ ಎಳೆದದ್ದು ಅಸ್ಪಷ್ಟವಾಗಿ ನೆನಪಿದೆ. ಆಗಿ ಹೋಯಿತು ಅಂತ ನಿಶ್ಚಲವಾಗಿ ನಿಂತುಕೊಂಡೆ. ಅವಳೇನು ಮಾಡುತ್ತಾಳೋ ನೋಡುತ್ತಿದ್ದೆ.
“ತಟ್ಟನೆ ಎದ್ದು ನಿಂತಳು. ‘ಆಯಾ, ಆಯಾ, ನನ್ನ ಕೊಂದುಬಿಟ್ಟ!’ ಅಂತ ಕೂಗಿದಳು.
“ಶಬ್ದ ಕೇಳಿ ಆಯಾ ಬಾಗಿಲಿಗೆ ಬಂದು ನಿಂತಿದ್ದಳು. ನಡೆದದ್ದನ್ನು ನಂಬದೆ ಸುಮ್ಮನೆ ನೋಡುತ್ತಾ ಇದ್ದೆ. ರಕ್ತ ನುಗ್ಗಿ ಬಂದು ಅವಳ ಬಟ್ಟೆಯ ಮೇಲೆಲ್ಲ ಹರಡುತ್ತಿತ್ತು. ಆಗಷ್ಟೇ ತಿಳಿಯಿತು. ಆದದ್ದು ಆಗಿ ಹೋಯಿತು, ತಪ್ಪಿಸುವುದಕ್ಕೆ ಸಾಧ್ಯವಿಲ್ಲ, ಹೀಗೆ ಆಗಬೇಕೆಂದು ಬಯಸಿದ್ದೆ, ಹೀಗೆ ಆಗಲೇಬೇಕಾಗಿತ್ತು. ಅವಳು ಬೀಳುವವರೆಗೆ, ‘ದೇವರೇ, ಅಯ್ಯೋ’ ಅಂತ ಕೂಗುತ್ತಾ ಆಯಾ ಅವಳನ್ನು ಹಿಡಿದುಕೊಳ್ಳಲು ಓಡಿ ಬರುವವರೆಗೆ ಹಾಗೇ ನಿಂತಿದ್ದೆ. ಆಮೇಲೆ ಕಠಾರಿ ಕೆಳಗೆ ಎಸೆದು ರೂಮಿನಿಂದ ಹೊರಟು ಬಂದೆ.
“ಎಗ್ಸೈಟ್ ಆಗಬಾರದು. ಮಾಡುವುದನ್ನೆಲ್ಲ ಸರಿಯಾಗಿ ಮಾಡಬೇಕು ಎಂದು ನನಗೇ ಹೇಳಿಕೊಂಡೆ. ಅವಳನ್ನೂ ನೋಡಲಿಲ್ಲ, ಆಯಾನೂ ನೋಡಲಿಲ್ಲ. ಆಯಾ ಕೂಗುತ್ತಿದ್ದಳು. ಕೆಲಸದವಳನ್ನು ಕರೆಯುತ್ತಿದ್ದಳು. ನಾನು ಪ್ಯಾಸೇಜಿಗೆ ಹೋದೆ. ಕೆಲಸದವಳನ್ನು ಕಳಿಸಿದೆ. ನನ್ನ ಓದುವ ರೂಮಿಗೆ ಹೋದೆ. ‘ಈಗೇನು ಮಾಡಲಿ?’ ಅನ್ನುವ ಪ್ರಶ್ನೆ ಬಂತು. ಏನು ಮಾಡಬೇಕೆಂದು ತಕ್ಷಣವೇ ಹೊಳೆಯಿತು. ಸೀದಾ ಗೋಡೆಯ ಹತ್ತಿರ ಹೋಗಿ ರಿವಾಲ್ವಾರು ತೆಗೆದುಕೊಂಡೆ. ಲೋಡ್ ಆಗಿತ್ತು. ಟೇಬಲ್ಲಿನ ಮೇಲೆ ಇಟ್ಟೆ. ಸೋಫಾದ ಹಿಂದೆ ಬಿದ್ದಿದ್ದ ಕಠಾರಿಯ ಒರೆ ಎತ್ತಿಕೊಂಡೆ.
“ತುಂಬ ಹೊತ್ತು ಸುಮ್ಮನೆ ಕೂತಿದ್ದೆ. ಏನೂ ಯೋಚನೆ ಮಾಡುತ್ತಿರಲಿಲ್ಲ. ಮನಸ್ಸಿಗೆ ಏನೂ ಬರುತ್ತಿರಲಿಲ್ಲ. ಹೊರಗೆ ಏನೇನೋ ಶಬ್ದ ಕೇಳುತ್ತಿತ್ತು. ಯಾವುದೋ ಗಾಡಿ ಬಂದ ಶಬ್ದ. ಯಾರೋ ಬಂದ ಶಬ್ದ. ಯಗೋರ್ ಬಂದ. ನನ್ನ ಲಗೇಜು ತಂದಿದ್ದ. ನನಗೆ ಅದು ತಕ್ಷಣ ಬೇಕೋ ಏನೋ ಅನ್ನುವ ಹಾಗೆ!
“ಏನಾಗಿದೆ ಗೊತ್ತಾಯಿತಾ? ಪೋಲೀಸಿನವರಿಗೆ ಹೇಳಬೇಕಂತೆ ಅಂತ ಹೋಗಿ ಆಳಿಗೆ ಹೇಳು-ಅಂದೆ. ಅವನು ಮಾತಾಡದೆ ಹೊರಟು ಹೋದ. ಎದ್ದೆ. ಬಾಗಿಲು ಹಾಕಿಕೊಂಡು ಬಂದೆ. ಸಿಗರೇಟು ತೆಗೆದೆ. ಬೆಂಕಿಪಟ್ಟಣ ಹುಡುಕಿ ಹಚ್ಚಿಕೊಂಡೆ. ಸಿಗರೇಟು ಮುಗಿಯುವುದರೊಳಗೇ ನಿದ್ರೆ ಬಂತು. ಒಂದೆರಡು ಗಂಟೆ ಮಲಗಿದ್ದೆನೋ ಏನೋ. ನಾನೂ ಅವಳೂ ಜಗಳ ಆಡಿ ರಾಜಿ ಆಗಿ ಫ್ರೆಂಡ್ಸ್ ಆಗಿದ್ದೆವು ಅಂತ ಕನಸು ಬಿತ್ತು. ಯಾರೋ ಬಾಗಿಲು ಬಡಿಯುತ್ತಿದ್ದರು. ಎಚ್ಚರವಾಗುತ್ತಾ ಪೋಲೀಸ್ ಅಂದುಕೊಂಡೆ. ಕೊಲೆ ಮಾಡಿದ್ದೇನೆ ಅಂತ ಕಾಣುತ್ತೆ. ಇಲ್ಲ ಅವಳೇ ಬಂದು ಬಾಗಿಲು ಬಡಿಯುತ್ತಿರಬೇಕು. ಏನೂ ಆಗಿಲ್ಲ ಅನ್ನಿಸಿತು. ಮತ್ತೆ ಬಾಗಿಲು ಬಡಿಯುವ ಶಬ್ದ. ಕೊಲೆ ಮಾಡಿದ್ದೇನೋ ಇಲ್ಲವೋ, ಬಗೆಹರಿಯಬೇಕಾಗಿತ್ತು. ಸುಮ್ಮನೆ ಕೂತೆ. ಕೊಲೆ ಆಗಿದೆ. ಅವಳು ಕಠಾರಿ ಹಿಡಿದುಕೊಂಡಿದ್ದು, ಅವಳ ಬಟ್ಟೆ ಒಂದು ಕ್ಷಣ ಅಡ್ಡಿ ಮಾಡಿದ್ದು, ನನ್ನ ಮೈ ತಣ್ಣಗಿತ್ತು, ಸಣ್ಣಗೆ ನಡುಗಿತು. ಸರಿ, ಈಗ ನನ್ನ ಕಥೆ. ಮುಗಿಸಿಕೊಂಡುಬಿಡಬೇಕು ಅಂದುಕೊಂಡೆ. ನಾನು ಕೊಂದುಕೊಳ್ಳುವುದಿಲ್ಲ ಅಂತ ಗೊತ್ತಿದ್ದರೂ ರಿವಾಲ್ವರ್ ಕೈಗೆತ್ತಿಕೊಂಡೆ. ಎಷ್ಟೊಂದು ಬಾರಿ ಆತ್ಮಹತ್ಯೆಯ ಯೋಚನೆ ಮಾಡಿದ್ದೆ, ಅವತ್ತು ರೈಲಿನಲ್ಲಿ ಬರುತ್ತಿರುವಾಗ ಕೂಡ ಆತ್ಮಹತ್ಯೆ ಸುಲಭ ಅನ್ನಿಸಿತ್ತು. ನಾನು ಸತ್ತರೆ ಅವಳಿಗೆ ಹಿಂಸೆಯಾಗುತ್ತದೆ ಅನ್ನುವ ಕಾರಣಕ್ಕೆ ಸುಲಭ ಅನ್ನಿಸಿತ್ತು. ಈಗ ಆತ್ಮಹತ್ಯೆ ಮಾಡಿಕೊಳ್ಳುವುದಿರಲಿ ಆ ಬಗ್ಗೆ ಯೋಚನೆ ಕೂಡ ಬರಲಿಲ್ಲ. ‘ಆತ್ಮಹತ್ಯೆ ಯಾಕೆ ಮಾಡಿಕೊಳ್ಳಬೇಕು?’ ಅಂತ ಕೇಳಿಕೊಂಡೆ. ಯಾವ ಉತ್ತರವೂ ಮನಸ್ಸಿಗೆ ಹೊಳೆಯಲಿಲ್ಲ. ಯಾರು ಬಾಗಿಲು ಬಡಿಯುತ್ತಿದ್ದಾರೋ ಅದನ್ನು ಮೊದಲು ನೋಡೋಣ ಆತ್ಮಹತ್ಯೆ ವಿಷಯ ಆಮೇಲೆ ನೋಡಿದರಾಯಿತು ಅಂದುಕೊಂಡೆ. ರಿವಾಲ್ವಾರ್ ಮೇಜಿನ ಮೇಲೆ ಇಟ್ಟು, ಅದರ ಮೇಲೆ ನ್ಯೂಸ್ ಪೇಪರು ಮುಚ್ಚಿದೆ. ಹೋಗಿ ಬಾಗಿಲು ತೆಗೆದೆ. ನನ್ನ ಹೆಂಡತಿಯ ಅಕ್ಕ ಬಂದಿದ್ದಳು. ಗಂಡ ಇಲ್ಲದವಳು, ಪೆದ್ದಿ, ಒಳ್ಳೆಯವಳು. ‘ಏನಾಯ್ತು? ಯಾಕೆ?’ ಅಂತ ಕೇಳಿದಳು. ಅಳುತ್ತಿದ್ದಳು. ‘ಏನು ಅಂದರೆ? ಏನಾಗಬೇಕಾಗಿತ್ತು?’ ಅಂತ ಗದರಿಸಿದೆ. ಹಾಗೆ ಗದರಿಸಬೇಕಾಗಿರಲಿಲ್ಲ. ಆದರೂ ಬೇರೆ ಹೇಗೆ ಮಾತಾಡಬೇಕೋ ತಿಳಿಯಲಿಲ್ಲ.
“ಅವಳು ಸಾಯ್ತಾ ಇದಾಳೆ! ಝಕರಯ್ಯಾ ಹೇಳಿದರು, ಅಂದಳು. ಝಕರಯ್ಯಾ ಅವಳ ಡಾಕ್ಟರು, ಸಲಹೆಗಾರ. ‘ಅವನೂ ಬಂದಿದ್ದಾನಾ?’ ಅಂದೆ. ಅವನ ಬಗ್ಗೆ ಮೊದಲಿಂದಲೂ ದ್ವೇಷ. ‘ಅದಕ್ಕೇನಂತೆ?’ ಅಂದೆ. ‘ಅವಳನ್ನ ಹೋಗಿ ನೋಡು. ನೋಡಕ್ಕೆ ಆಗಲ್ಲ, ಅಯ್ಯೋ’ ಅಂದಳು.
“ಅವಳನ್ನು ನೋಡಬೇಕಾ ಎಂದು ಕೇಳಿಕೊಂಡೆ. ಅವಳನ್ನ ನೋಡಬೇಕು ಅಂತ ತಕ್ಷಣ ತೀರ್ಮಾನ ಮಾಡಿದೆ. ಹೆಂಡತಿ ಸಾಯುತ್ತಾ ಇರುವಾಗ, ಅದರಲ್ಲೂ ನನ್ನ ಹಾಗೆ ಹೆಂಡತಿಯ ಕೊಲೆಮಾಡಿರುವಾಗ, ಗಂಡ ಆದವನು ಹೋಗಿ ನೋಡಬೇಕಾದದ್ದು ಕರ್ತವ್ಯ ಅಂದುಕೊಂಡೆ. ‘ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಬೇಕಾದಷ್ಟು ಟೈಮಿದೆ’ ಅಂದುಕೊಂಡು ಅವಳನ್ನು ನೋಡಲು ಹೋದೆ. ಇನ್ನು ಏನೇನೋ ಮಾತು, ಕತೆ, ಮುಖ ಗಂಟಿಕ್ಕಿಕೊಳ್ಳುವುದು ಎಲ್ಲಾ ಇರುತ್ತದೆ. ಏನಾದರೂ ನನ್ನ ಯಾರು ತಾನೇ ಏನು ಮಾಡುತ್ತಾರೆ ಅಂದುಕೊಂಡೆ.
“ಸ್ವಲ್ಪ ಇರಿ. ಚಪ್ಪಲಿ ಹಾಕಿಕೊಂಡು ಬರುತ್ತೇನೆ. ಬರೀ ಕಾಲುಚೀಲದಲ್ಲಿ ಹೇಗೆ ಬರಲಿ?-ಅಂತ ಹೆಂಡತಿಯ ಅಕ್ಕನಿಗೆ ಹೇಳಿದೆ.
(ಮುಂದುವರೆಯುವುದು)

Rating
No votes yet