ಮೋದಿ ಆಡಳಿತ ಹಾಗೂ ಹದಗೆಟ್ಟ ಬಿಎಸ್ಸೆನ್ನೆಲ್ ವ್ಯವಸ್ಥೆ

ಮೋದಿ ಆಡಳಿತ ಹಾಗೂ ಹದಗೆಟ್ಟ ಬಿಎಸ್ಸೆನ್ನೆಲ್ ವ್ಯವಸ್ಥೆ

ಬಿಎಸ್ಸೆನ್ನೆಲ್ ಎಂಬ ಸಾರ್ವಜನಿಕ ಹಾಗೂ ಸರ್ಕಾರೀ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ೨೦೧೩-೧೪ರಲ್ಲಿ ೬೯೩೩ ಕೋಟಿ ರೂಪಾಯಿಗಳ ನಷ್ಟವನ್ನನುಭವಿಸಿದೆ ಎಂದು ವರದಿಗಳು ಹೇಳುತ್ತವೆ.  ಬಿಎಸ್ಸೆನ್ನೆಲ್ ಕೇರಳ ವಲಯ ೩೯೬ ಕೋಟಿ, ಜಮ್ಮು ಕಾಶ್ಮೀರ ವಲಯ ೯ ಕೋಟಿ ಹಾಗೂ ಒರಿಸ್ಸಾ ವಲಯ ೫ ಕೋಟಿ ಲಾಭ ಗಳಿಸಿವೆ.  ಉಳಿದಂತೆ ಕರ್ನಾಟಕ ವಲಯ ಸೇರಿದಂತೆ ಎಲ್ಲ ಬಿಎಸ್ಸೆನ್ನೆಲ್ ವಲಯಗಳು ನಷ್ಟದಲ್ಲಿವೆ.  ಮೋದಿ ಸರ್ಕಾರ ಅಭಿವೃದ್ಧಿಯ ಹಾಗೂ ಒಳ್ಳೆಯ ದಿನಗಳ ಭರವಸೆ  ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಆದರೆ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳಾದರೂ ಬಿಎಸ್ಸೆನ್ನೆಲ್ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಬದಲಿಗೆ ಬಿಎಸ್ಸೆನ್ನೆಲ್ ಕರ್ನಾಟಕ ವಲಯದ ಅವಸ್ಥೆ ಮತ್ತಷ್ಟು ಹದಗೆಟ್ಟಿರುವಂತೆ ಕಂಡುಬರುತ್ತದೆ.  ಮೋದಿಯವರ ಸರ್ಕಾರ ಬರುವುದಕ್ಕೆ ಮುಂಚೆ ಬಿಎಸ್ಸೆನ್ನೆಲ್ ಸಂಸ್ಥೆಯ ಮೊಬೈಲ್, ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಸೇವೆ ಹಾಗೂ ಲ್ಯಾಂಡ್ಲೈನ್ ಫೋನುಗಳು ತಕ್ಕಮಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು.  ಈಗ ಮೋದಿ ಅಧಿಕಾರಕ್ಕೆ ಬಂದ ನಂತರ ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಸೇವೆ ಆಗಾಗ ಕೈಕೊಡುವುದು ನಡೆಯುತ್ತಿದೆ ಮತ್ತು  ಬೇಗನೆ ರಿಪೇರಿ ಕೂಡ ಆಗುವುದಿಲ್ಲ.  ಬಿಎಸ್ಸೆನ್ನೆಲ್ ಮೊಬೈಲ್ ಸೇವೆ ಮೊದಲಿಗಿಂತಲೂ ಕಳಪೆಯಾಗಿದೆ.  ಆಗಾಗ ಮೊಬೈಲ್ ಸಿಗ್ನಲ್ ಇಲ್ಲದೇ ಆಗುತ್ತದೆ ಅದರಲ್ಲೂ ಹಳ್ಳಿಗಳಲ್ಲಿ ಈ ರೀತಿ ಆಗುವುದು ಹೆಚ್ಚಾಗುತ್ತಿದೆ.  ಮೊಬೈಲ್ ಸೇವೆ ಅಗತ್ಯದ ಸಮಯದಲ್ಲಿ ಇರದಿದ್ದರೆ ಜನ ಯಾಕೆ ಅದನ್ನು ತೆಗೆದುಕೊಳ್ಳುತ್ತಾರೆ?  ಇದೇ ರೀತಿ ಮುಂದುವರಿದರೆ ಜನ ಬೇರೆ ಖಾಸಗಿ ಕಂಪನಿಗಳ ಮೊಬೈಲ್ ಸೇವೆಗೆ ಬದಲಾಗುತ್ತಾರೆ.  ಆಗ ಬಿಎಸ್ಸೆನ್ನೆಲ್ ನಷ್ಟದ ಪ್ರಮಾಣ ಹೆಚ್ಚಾಗಿ ಕೊನೆಗೆ ಸಂಸ್ಥೆಯ ಬಾಗಿಲು ಹಾಕುವ ದಿನವೂ ಬರಬಹುದು.

ಖಾಸಗಿ ಮೊಬೈಲ್ ಕಂಪನಿಗಳ ಸ್ಪರ್ಧೆಯನ್ನು ಎದುರಿಸಲು ಬಿಎಸ್ಸೆನ್ನೆಲ್ ಸಂಸ್ಥೆಯ ನೆಟ್ವರ್ಕ್ ಅನ್ನು ಸುಧಾರಿಸದೆ ಇದ್ದಲ್ಲಿ ಹಾಗೂ ಆಧುನಿಕ ೩ಜಿ ಸೇವೆಗಳನ್ನು ನೀಡಲು ಮುಂದಾಗದೆ ಇದ್ದಲ್ಲಿ ಸಂಸ್ಥೆ ಮುಂದಿನ ದಿನಗಳಲ್ಲಿಯೂ ಸುಧಾರಿಸುವ ಸಾಧ್ಯತೆ ಇಲ್ಲ.  ಕೇರಳದ ಬಿಎಸ್ಸೆನ್ನೆಲ್ ಸಂಸ್ಥೆ ಖಾಸಗಿ ಮೊಬೈಲ್ ಸಂಸ್ಥೆಗಳ ಸ್ಪರ್ಧೆಯನ್ನೆದುರಿಸಿ ಲಾಭ ಗಳಿಸಲು ಸಾಧ್ಯವಾಗಿರುವಾಗ ಕರ್ನಾಟಕದ ಬಿಎಸ್ಸೆನ್ನೆಲ್ ವಲಯಕ್ಕೆ ಏಕೆ ಸಾಧ್ಯವಾಗುವುದಿಲ್ಲ?  ಕರ್ನಾಟಕದ ಬಿಎಸ್ಸೆನ್ನೆಲ್ ಆಡಳಿತದ ಜಡತ್ವ ಇದಕ್ಕೆ ಕಾರಣ.  ಜನರಿಗೆ ಅಗತ್ಯವಾದ ಸೇವೆಗಳನ್ನು ಹಾಗೂ ಆಧುನಿಕ ತಂತ್ರಜ್ಞಾನದ ಸೇವೆಗಳನ್ನು ನೀಡದೆ ಸಂಸ್ಥೆ ಹಿನ್ನಡೆ ಕಾಣುತ್ತಿದೆ.  ಕೇರಳದಲ್ಲಿ ಬಿಎಸ್ಸೆನ್ನೆಲ್ ಎಲ್ಲ ಜಿಲ್ಲೆಗಳಲ್ಲಿಯೂ ವೈಮ್ಯಾಕ್ಸ್ (WiMAX) ಎಂಬ ತಂತಿರಹಿತ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಆರಂಭಿಸಿದೆ.  ಇದು ಕೇರಳದ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಲಭ್ಯವಿದೆ.  ಕರ್ನಾಟಕದ ತಾಲೂಕುಗಳಲ್ಲಿ ಇಂಥ ವೈಮ್ಯಾಕ್ಸ್ ವೈರ್ಲೆಸ್ಸ್ ಬ್ರಾಡ್ಬ್ಯಾಂಡ್ ಸೇವೆಯನ್ನು ಬಿಎಸ್ಸೆನ್ನೆಲ್ ಒದಗಿಸಲು ಮುಂದಾಗಿಲ್ಲ ಏಕೆ?  ಕರ್ನಾಟಕದ ಜನಪ್ರತಿನಿಧಿಗಳ, ಸಂಸದರ ನಿರ್ಲಕ್ಷ್ಯವೇ ಇದಕ್ಕೆ ಕಾರಣ.  ಈ ವೈಮ್ಯಾಕ್ಸ್ ಇಂಟರ್ನೆಟ್ ಸೇವೆಯ ವಿಶೇಷ ಎಂದರೆ ವೈಮ್ಯಾಕ್ಸ್ ಟವರಿನ ವ್ಯಾಪ್ತಿ ಮೊಬೈಲ್ ಟವರ್ ವ್ಯಾಪ್ತಿಗಿಂಥ ಹೆಚ್ಚು ಇರುತ್ತದೆ ಏಕೆಂದರೆ ಗ್ರಾಹಕರಿಗೆ ನೀಡುವ ವೈಮ್ಯಾಕ್ಸ್ ಉಪಕರಣದಲ್ಲಿ ಬಾಹ್ಯ ಆಂಟೆನಾ ಇರುತ್ತದೆ.  ಹೀಗಾಗಿ ಇದು ದೂರದ ವೈಮ್ಯಾಕ್ಸ್ ಟವರಿನಿಂದ ಸಿಗ್ನಲ್ ಪಡೆಯುವ ಸಾಮರ್ಥ್ಯ ಹೊಂದಿರುತ್ತದೆ.  ಹೀಗಾಗಿ ಇದು ದೂರದ ಹಳ್ಳಿಗಾಡಿನ ಪ್ರದೇಶಗಳಿಗೂ ವಯರ್ಲೆಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಪಡೆಯಲು ಸಹಕಾರಿಯಾಗಿದೆ.

ಒಂದು ಜೋರಾದ ಸಿಡಿಲು ಬಂದರೆ ಬಿಎಸ್ಸೆನ್ನೆಲ್ ದೂರವಾಣಿ ಕೇಂದ್ರದ ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್, ಮೊಬೈಲ್ ಸೇವೆ, ಲ್ಯಾಂಡ್ಲೈನ್ ಫೋನ್ ಎಲ್ಲವೂ ಕೆಟ್ಟು ಹೋಗುತ್ತವೆ ಮತ್ತು ರಿಪೇರಿಯಾಗಲು ಎರಡು ಮೂರು ದಿನಗಳೇ ಆಗುತ್ತವೆ.  ಹೀಗಾದರೆ ಈ ಸಂಸ್ಥೆಯ ಮೊಬೈಲ್ ಹಾಗೂ ದೂರವಾಣಿಯನ್ನು ಜನ ನಂಬುವುದು ಹೇಗೆ?  ಖಾಸಗಿ ಮೊಬೈಲ್ ಸಂಸ್ಥೆಗಳ ಟವರುಗಳು ಎಂಥ ಭೀಕರ ಸಿಡಿಲಿಗೂ ಏನೂ ಆಗುವುದಿಲ್ಲ.  ಖಾಸಗಿ ಮೊಬೈಲ್ ಸಂಸ್ಥೆಗಳು ಅಳವಡಿಸುವ ಸಿಡಿಲುನಿರೋಧಕ ತಂತ್ರಜ್ಞಾನ ಅಳವಡಿಸಲು ಏಕೆ ಬಿಎಸ್ಸೆನ್ನೆಲ್ ಮುಂದಾಗುವುದಿಲ್ಲ?  ಆಧುನಿಕ ತಂತ್ರಜ್ಞಾನ ಅಳವಡಿಸಿ ಖಾಸಗಿ ಮೊಬೈಲ್ ಸಂಸ್ಥೆಗಳಿಗೆ ಬಿಎಸ್ಸೆನ್ನೆಲ್ ಸ್ಪರ್ಧೆ ನೀಡಲು ಮುಂದಾಗದೆ ಇದ್ದರೆ ಸಂಸ್ಥೆಯು ನಷ್ಟದಿಂದ ಬಾಗಿಲು ಮುಚ್ಚಬೇಕಾದೀತು.  ಬಿಎಸ್ಸೆನ್ನೆಲ್ ತನ್ನ ಜಡತೆಯನ್ನು ಬಿಟ್ಟು ಆಧುನಿಕ ಯುಗದ ಅನಿವಾರ್ಯತೆಗಳಿಗೆ ತೆರೆದುಕೊಳ್ಳುವುದು ಉಳಿವಿನ ದೃಷ್ಟಿಯಿಂದ ಅಗತ್ಯ ಹಾಗೂ ಅನಿವಾರ್ಯ.

ಬಿಎಸ್ಸೆನ್ನೆಲ್ ನಷ್ಟದಲ್ಲಿ ಮುಚ್ಚಿದರೆ ಅದರಿಂದ ಖಾಸಗಿ ಮೊಬೈಲ್ ಸಂಸ್ಥೆಗಳ ಹಗಲುದರೋಡೆಗೆ ಅನುಕೂಲ ಆಗಬಹುದು.  ಹೀಗಾಗಿ ಜನತೆಯ ಹಿತದೃಷ್ಟಿಯಿಂದ ಬಿಎಸ್ಸೆನ್ನೆಲ್ ಸಂಸ್ಥೆಯ ಅಸ್ತಿತ್ವ ಅತೀ ಅಗತ್ಯ.  ಅದೂ ಅಲ್ಲದೆ ಖಾಸಗಿ ಸಂಸ್ಥೆಗಳು ಬರದ ಹಳ್ಳಿ ಪ್ರದೇಶಗಳಿಗೆ ಬಿಎಸ್ಸೆನ್ನೆಲ್ ದೂರಸಂಪರ್ಕ ಸಂಸ್ಥೆಯ ಅಗತ್ಯ ಇದೆ.