ಅನ್ವೇಷಣೆ ಭಾಗ ೨೬

ಅನ್ವೇಷಣೆ ಭಾಗ ೨೬

ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು. ಅಷ್ಟರಲ್ಲಿ ಆಟೋ ಸಿಟಿ ಪ್ರವೇಶಿಸಿತು. ಯಾಕೋ ಬಸ್ ಸ್ಟಾಂಡ್ಗೆ ಹೋಗುವುದು ಸೇಫ್ ಎನಿಸಲಿಲ್ಲ. ಬಸ್ ನಿಲ್ದಾಣಕ್ಕೆ ಮುಂಚೆಯೇ ಆಟೋದವನಿಗೆ ನಿಲ್ಲಿಸಲು ಹೇಳಿದೆ. ಅವನು ಇನ್ನು ಬಸ್ ಸ್ಟಾಂಡ್ ವರ್ಲೆಯೇ.... ಎಂಗೆ ಎರಂಗಿನಾಲು ನೂತ್ತಿ ಅಂಬದುದಾ ಎಂದ. ನಾನು ಪರ್ವಾಯಿಲ್ಲೇ ಎಂದು ಅಲ್ಲೇ ಇಳಿದು ಅವನಿಗೆ ನೂರಾ ಐವತ್ತು ಕೊಟ್ಟು ಅಲ್ಲೇ ಎದುರಿಗಿದ್ದ ಫೋನ್ ಬೂತಿಗೆ ಹೋಗಿ ತ್ರಿವಿಕ್ರಂಗೆ ಕರೆ ಮಾಡಿದೆ. ಮೊದಲನೇ ರಿಂಗಿಗೆ ಫೋನ್ ಎತ್ತಿದವರು ನನ್ನ ಧ್ವನಿ ಕೇಳಿದೊಡನೆ... ಅರ್ಜುನ್ ಎಲ್ಲಿದ್ದೀರಾ? ಏನಾಯ್ತು? ಫೋನ್ ಯಾಕೆ ನಾಟ್ ರೀಚಬಲ್ ಎಂದು ಬರುತ್ತಿದೆ ಎಂದು ಗಾಭರಿಯಿಂದ ಒಂದಾದ ಮೇಲೆ ಒಂದು ಪ್ರಶ್ನೆಗಳನ್ನು ಹಾಕಿದರು.

ಸರ್.... ನಾವೀಗ ಚೆನ್ನೈನಲ್ಲಿ ಇದ್ದೀವಿ.... ಸರ್.... ಇನ್ನೊಂದು ಆಶ್ಚರ್ಯಕರ ವಿಷಯ...

ಅರ್ಜುನ್... ನಾವು ಎನ್ನುತ್ತಿದ್ದೀರ, ಆಶ್ಚರ್ಯಕರ ವಿಷಯ ಎನ್ನುತ್ತಿದ್ದೀರ.... ನಿಮ್ಮ ಜೊತೆ ಬೇರೆ ಯಾರಿದ್ದಾರೆ? ಏನದು ವಿಷಯ?

ಸರ್.... ಜಾನಕಿ ಸತ್ತಿಲ್ಲ.... ಜೀವಂತವಾಗಿದ್ದಾಳೆ.... ನನ್ನ ಜೊತೆ ಇದ್ದಾಳೆ...

!!!ಅರ್ಜುನ್.... ಏನು ನೀವು ಹೇಳುತ್ತಿರುವುದು? ಜಾನಕಿ ಜೀವಂತವಾಗಿದ್ದಾಳ?

ಹೌದು ಸರ್.... ನನ್ನ ಜೊತೆಯೇ ಇದ್ದಾಳೆ....ಸರ್.... ಈಗ ನಿಮ್ಮಿಂದ ಒಂದು ಸಹಾಯ ಆಗಬೇಕು.... ಮೊದಲು ನನಗೊಂದು ಸೇಫ್ ಆದ ಜಾಗ ಬೇಕು.

ಸೇಫ್ ಆದ ಜಾಗ.... ಚೆನ್ನೈನಲ್ಲಿ.... ಅರ್ಜುನ್.... ಒಂದೈದು ನಿಮಿಷ ಬಿಟ್ಟು ಮತ್ತೆ ಫೋನ್ ಮಾಡಿ ನಾನು ಏನು ಮಾಡಬೇಕೆಂದು ಹೇಳುತ್ತೇನೆ ಎಂದು ಕರೆ ಕಟ್ ಮಾಡಿದರು. ಮತ್ತೆ ಐದು ನಿಮಿಷ ಬಿಟ್ಟು ಕರೆ ಮಾಡಿದರೆ, ಅರ್ಜುನ್...ನೀವೀಗ ಎಲ್ಲಿದ್ದೀರಾ?

ಸರ್.... ಒಂದು ನಿಮಿಷ ಎಂದು ಸುತ್ತಲೂ ನೋಡಿ, ಸರ್ ಸೇಲಾಯೂರ್ ಎಂಬಲ್ಲಿದ್ದೀನೆ...

ಅರ್ಜುನ್, ಹಾಗಿದ್ದರೆ ಒಂದು ಕೆಲಸ ಮಾಡಿ... ಈಗ ನೀವು ಇರುವ ಜಾಗದಲ್ಲೇ ಒಂದು ಅರ್ಧ ಗಂಟೆ ಇರಿ, ನನ್ನ ಸ್ನೇಹಿತನೊಬ್ಬ ಅಲ್ಲಿಗೆ ಬಂದು ನಿಮ್ಮನ್ನು ಕರೆದೊಯ್ಯುತ್ತಾನೆ. ಅವನ ಹೆಸರು ಭಾಸ್ಕರನ್ ಎಂದು, ಅವನು ಕಪ್ಪು scorpio ಕಾರಿನಲ್ಲಿ ಬರುತ್ತಾನೆ. ಅವನ ಕಾರಿನ ನಂಬರ್ TN-೧೧-೩೪೭೮. ಅವನ ಜೊತೆ ಹೋಗಿ, ಅವನು ನಿಮ್ಮನ್ನು ಸೇಫ್ ಆದ ಜಾಗಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಹೋದ ಮೇಲೆ ನೀವು ನನಗೆ ಫೋನ್ ಮಾಡಿ.

ಸರ್...ok, ತುಂಬಾ ಥ್ಯಾಂಕ್ಸ್ ಸರ್.

 

ಸರಿಯಾಗಿ ಅರ್ಧ ಗಂಟೆಯ ನಂತರ ತ್ರಿವಿಕ್ರಂ ಹೇಳಿದ ಕಾರು ನಾವಿದ್ದ ಜಾಗಕ್ಕೆ ಬಂದು ನಮ್ಮನ್ನು ಕರೆದುಕೊಂಡು ಹೊರಟಿತು.

ಸೇಲಾಯುರ್ ನಿಂದ ಹೊರಟ ಕಾರು ಇಪ್ಪತ್ತು ನಿಮಿಷದ ನಂತರ ತಾಂಬರಂ  ಎಂಬಲ್ಲಿಗೆ ಬಂದು ಒಂದು ಮನೆಯ ಮುಂದೆ ನಿಂತಿತು. ನಮ್ಮಿಬ್ಬರನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ, ನೋಡಿ ನೀವಿಲ್ಲಿ ಆರಾಮಾಗಿ ರೆಸ್ಟ್ ತೆಗೆದುಕೊಳ್ಳಿ. ಈಗಾಗಲೇ ತ್ರಿವಿಕ್ರಂ ಅಲ್ಲಿಂದ ಹೊರಟಿದ್ದಾನೆ. ಸಂಜೆಯ ವೇಳೆಗೆ ಬಂದುಬಿಡುತ್ತಾನೆ. ನೀವು ಸ್ನಾನ ಮಾಡಿ ರೆಡಿ ಆಗಿ. ಅಷ್ಟರಲ್ಲಿ ತಿಂಡಿ ಬರುತ್ತದೆ. ತಿಂಡಿ ತಿಂದು ಸ್ವಲ್ಪ ಹೊತ್ತು ಮಲಗಿಕೊಳ್ಳಿ. ನಂತರ ಊಟ ಬರುತ್ತದೆ. ನಿಮಗೆ ಬೇರೆ ಏನಾದರೂ ಸಹಾಯ ಬೇಕಿದ್ದರೆ ನನ್ನ ಫೋನ್ ನಂಬರ್ ಕೊಟ್ಟಿರುತ್ತೇನೆ. ಫೋನ್ ಮಾಡಿ ಐದು ನಿಮಿಷದಲ್ಲಿ ಬಂದು ಬಿಡುತ್ತೇನೆ. ನಮ್ಮ ಮನೆ ಇಲ್ಲೇ ಪಕ್ಕದಲ್ಲಿ ಇದೆ. ನೀವೇನೂ ಮುಜುಗರ ಪಟ್ಟುಕೊಳ್ಳಬೇಡಿ. ನಾನಿನ್ನು ಹೊರಡುತ್ತೇನೆ.

ಭಾಸ್ಕರನ್ ಹೋದ ಮೇಲೆ ಜಾನಕಿ ನನ್ನನ್ನು ಅಪ್ಪಿಕೊಂಡು ಅರ್ಜುನ್, ನನಗೆ ಇದು ಇನ್ನೂ ಕನಸೋ ನನಸೋ ಗೊತ್ತಾಗುತ್ತಿಲ್ಲ. ನಿಮ್ಮನ್ನೆಲ್ಲ ನೋಡದೆಯೇ ಸತ್ತು ಹೋಗುತ್ತೆನೇನೋ ಎಂದುಕೊಂಡಿದ್ದೆ.

ಜಾನು, ನನಗೂ ಅಷ್ಟೇ ಇದು ಕನಸೋ ನನಸೋ ತಿಳಿಯುತ್ತಿಲ್ಲ.... ಒಂದು ನಿಮಿಷ ಇರು ಮೊದಲು ಮನೆಗೆ ಫೋನ್ ಮಾಡಿ ವಿಷಯ ತಿಳಿಸೋಣ ಎಂದುಕೊಂಡವನೆ ಮತ್ತೆ ಒಂದು ನಿಮಿಷ ಎಂದು ಅಲ್ಲಿದ್ದ ಲ್ಯಾಂಡ್ ಲೈನ್ ನಿಂದ ತ್ರಿವಿಕ್ರಂಗೆ ಕರೆ ಮಾಡಿ, ಸರ್ ಹೀಗೆ ನಾನು ಅಲ್ಲಿಂದ ಬರುವಾಗ ಅಲ್ಲಿದ್ದ ಇಬ್ಬರ ಮೊಬೈಲ್ ಗಳನ್ನು ತಂದಿದ್ದೇನೆ. ಅದರಲ್ಲಿ ಒಂದು ಮೊಬೈಲ್ಗೆ ಸೆಲ್ವಂ ಎರಡು ಸಲ ಫೋನ್ ಮಾಡಿದ್ದ. ಆದರೆ ನಾನೇನೂ ತೆಗೆಯಲಿಲ್ಲ. ಮತ್ತೆ ಯಾವುದೇ ಕರೆ ಬಂದಿಲ್ಲ...

ಅರ್ಜುನ್... ಈ ವಿಷಯ ಮೊದಲೇ ಏಕೆ ನನಗೆ ಹೇಳಲಿಲ್ಲ. ಈ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ, ಇಲ್ಲದಿದ್ದರೆ ನೀವು ಎಲ್ಲಿದ್ದೀರ ಎಂದು ಅವನು ಟ್ರೇಸ್ ಮಾಡುವ ಸಾಧ್ಯತೆ ಇದೆ. ಮೊದಲು ಫೋನ್ ಸ್ವಿಚ್ ಆಫ್ ಮಾಡಿ. ಆಮೇಲೆ ಯಾವುದೇ ಕಾರಣಕ್ಕೂ ನೀವು ಮನೆಯಿಂದ ಆಚೆ ಬರಬೇಡಿ, ನಿಮಗೆ ಏನೇ ಬೇಕಿದ್ದರೂ ಭಾಸ್ಕರ್ ಗೆ ಕರೆ ಮಾಡಿ ಅವನು ನಿಮ್ಮ ಬಳಿ ಬರುತ್ತಾನೆ. ಹುಷಾರು....

ಫೋನ್ ಕಟ್ ಮಾಡಿ ತ್ರಿವಿಕ್ರಂ ಹೇಳಿದಂತೆ ಮೊದಲು ಎರಡೂ ಫೋನನ್ನು ಸ್ವಿಚ್ ಆಫ್ ಮಾಡಿ ನಂತರ ಮನೆಗೆ ಕರೆಮಾಡಿ ವಿಷಯ ತಿಳಿಸಿದಾಗ ಅವರು ಸಂತೋಷದಲ್ಲಿ ತೇಲಿ ಹೋದರು. ಅಪ್ಪ ಒಂದು ವಿಷಯ ನಾವು ಇಲ್ಲಿಂದ ಬರುವವರೆಗೂ ನೀನು ಅಮ್ಮ ಮತ್ತು ಜಾನಕಿಯ ಅಪ್ಪ ಅಮ್ಮ ಯಾವುದಾದರೂ ಒಂದು ರಹಸ್ಯವಾದ ಜಾಗದಲ್ಲಿ ಆಶ್ರಯ ಪಡೆದುಕೊಂಡಿರಿ. ನಾನು ಬಂದ ಮೇಲೆ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸುತ್ತೇನೆ. ಈ ಕೂಡಲೇ ಮನೆ ಖಾಲಿ ಮಾಡಿ ಹೊರಡಿ.

ಅರ್ಜುನ್, ನೀನು ಹೋಗಿದ್ದು ಆಫೀಸ್ ಕೆಲಸದ ಮೇಲೆ ಎಂದು ಹೇಳಿ ತಾನೇ,  ಜಾನಕಿ ಸಿಕ್ಕಿದ್ದಾಳೆ ಎನ್ನುತ್ತಿದ್ದೀಯ, ನಮ್ಮನ್ನು ರಹಸ್ಯವಾದ ಜಾಗಕ್ಕೆ ಹೋಗು ಎನ್ನುತ್ತಿದ್ದೀಯ.... ನಮಗೊಂದೂ ಅರ್ಥವಾಗುತ್ತಿಲ್ಲ. ಆದರೂ ಪರವಾಗಿಲ್ಲ, ಜಾನಕಿ ಜೀವಂತವಾಗಿದ್ದಾಳೆ ಎಂದು ಹೇಳಿದೆಯಲ್ಲ... ಅಷ್ಟು ಸಾಕು ನೀನು ಹೇಳಿದ ಹಾಗೆ ಮಾಡುತ್ತೇನೆ. ಆದರೆ ನೀನು ಹುಷಾರು ಅರ್ಜುನ್....

 

ಅಪ್ಪ ನೀವೇನೂ ಚಿಂತಿಸಬೇಡಿ, ಇನ್ನೊಂದು ವಾರದಲ್ಲಿ ನಾನು ಜಾನಕಿಯ ಜೊತೆ ಊರಿಗೆ ವಾಪಸ್ ಬರುತ್ತೇನೆ. ಅಲ್ಲಿಯವರೆಗೂ ನೀವು ಯಾರ ಜೊತೆಯೂ ಸಂಪರ್ಕದಲ್ಲಿರಬೇಡಿ ಅಷ್ಟೇ.... ಸರಿ ನಾನು ಸರಿಯಾಗಿ ಇನ್ನೊಂದು ವಾರದ ನಂತರ ಬೆಂಗಳೂರಿಗೆ ಬರುತ್ತೇನೆ. ಆಗ ನೀವು ನಿಮ್ಮ ಮೊಬೈಲ್ ಆನ್ ಮಾಡಿ.

ಕರೆ ಕಟ್ ಮಾಡಿದ ನಂತರ ಜಾನಕಿಯ ಎದುರು ಕುಳಿತು, ಜಾನೂ ಏನಿದೆಲ್ಲ.... ನನಗೊಂದೂ ಅರ್ಥವಾಗುತ್ತಿಲ್ಲ. ನೀನು ಎಷ್ಟು ದಿನದಿಂದ ಆ ಮನೆಯಲ್ಲಿ ಬಂಧಿಯಾಗಿದ್ದೆ? ಯಾರು ನಿನ್ನನ್ನು ಅಪಹರಿಸಿಕೊಂಡು ಬಂದಿದ್ದು? ಏತಕ್ಕಾಗಿ ಅಪಹರಿಸಿಕೊಂಡು ಬಂದಿದ್ದು?

ಅರ್ಜುನ್, ನಮ್ಮ ಮದುವೆಯ ಹಿಂದಿನ ದಿನ ನಾನು ನಿಮ್ಮ ಮನೆಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಆಚೆ ಬಂದೆ. ಬಸ್ ನಿಲ್ದಾಣಕ್ಕೆ ಬರುತ್ತಿದ್ದಾಗ ಹಿಂದೆ ಯಾರೋ ಹಿಂಬಾಲಿಸಿಕೊಂದು ಬರುತ್ತಿದ್ದಾರೆ ಎಂದೆನಿಸಿತು. ಕೂಡಲೇ ಚಕಚಕನೆ ಹೆಜ್ಜೆ ಹಾಕಿದೆ. ಅವರು ಕೂಡ ಅಷ್ಟೇ ವೇಗದಲ್ಲಿ ಹಿಂಬಾಲಿಸತೊಡಗಿದರು. ನನಗೆ ಭಯವಾಗಿ ನಿನಗೆ ಫೋನ್ ಮಾಡೋಣ ಎಂದು ಮೊಬೈಲ್ ತೆಗೆಯುವಷ್ಟರಲ್ಲಿ ನನ್ನ ಪಕ್ಕ ಒಂದು ಕಾರ್ ಬಂದು ಅದರಲ್ಲಿದ್ದ ವ್ಯಕ್ತಿ ನನ್ನನ್ನು ಬಲವಂತವಾಗಿ ಕಾರಿನಲ್ಲಿ ಎಳೆದುಕೊಂಡ, ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಇಬ್ಬರು ವ್ಯಕ್ತಿಗಳೂ ಕಾರನ್ನು ಏರಿದರು. ನಾನು ಕಿರುಚಾಡದಂತೆ ನನ್ನ ಬಾಯಿಗೆ ಗಟ್ಟಿಯಾಗಿ ಬಟ್ಟೆ ತುರುಕಿದರು. ನಾನು ಎಷ್ಟೇ ಕೊಸರಾಡಿದರೂ ಅವರ ಕೈಯಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ಆ ನಂತರ ನನ್ನನ್ನು ಆ ಮನೆಯಲ್ಲಿ ತಂದು ಕೂಡಿ ಹಾಕಿದರು. ಅಂದಿನಿಂದ ಇಂದಿನವರೆಗೂ ನಾನು ಆ ಕೊಠಡಿಯಲ್ಲೇ ಇದ್ದೇನೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಎಲ್ಲಾ ತಂದುಕೊಡುತ್ತಿದ್ದರು. ಮೊದಲು ಒಂದೆರೆಡು ದಿನ ಬೇಡ ಎಂದು ಹಠ ಮಾಡಿದೆ... ಆದರೆ ಮತ್ತೆ ನಿನ್ನನ್ನು ನೋಡಬೇಕೆಂಬ ಹಂಬಲವೇ ನನ್ನನ್ನು ಊಟ ಮಾಡಲು ಪ್ರೇರೇಪಿಸಿತು. ನಾನು ಎಷ್ಟೇ ಕೇಳಿದರೂ ನನ್ನನ್ನು ಯಾಕೆ ಕರೆದುಕೊಂಡು ಬಂದಿದ್ದಾರೆ ಎಂದು ಯಾರೂ ಹೇಳಲಿಲ್ಲ. ಇಷ್ಟೇ ಅರ್ಜುನ್ ನನಗೆ ತಿಳಿದಿರುವುದು.... ಅವರು ಯಾರು,ಯಾಕೆ ನನ್ನನ್ನು ಕರೆದುಕೊಂಡು ಬಂದಿದ್ದಾರೆ, ಒಂದೂ ಗೊತ್ತಿಲ್ಲ.....ಅದು ಸರಿ ನೀನು ಹೇಗೆ ಇಲ್ಲಿ? ನಿನಗೆ ಹೇಗೆ ತಿಳಿಯಿತು ನನ್ನನ್ನು ಇಲ್ಲಿ ಬಂಧಿಸಿದ್ದಾರೆ ಎಂದು...

ಜಾನೂ, ನಿನಗೊಂದು ವಿಷಯ ಹೇಳುತ್ತೇನೆ... ದಯವಿಟ್ಟು ಬೇಸರ ಮಾಡಿಕೊಳ್ಳಬೇಡ.... ನೆನ್ನೆಯವರೆಗೂ ನಾವೆಲ್ಲಾ ನೀನು ಜೀವಂತವಾಗಿಲ್ಲ ಎಂದೇ ಭಾವಿಸಿದ್ದೆವು ಎಂದು ಅವಳು ಕಾಣೆಯಾಗಿದ್ದಾಗಿನಿಂದ ಅವಳು ಸಿಗುವವರೆಗೂ ನಡೆದ ಎಲ್ಲಾ ವಿಷಯಗಳನ್ನು ತಿಳಿಸಿದಾಗ ಜಾನಕಿಗೆ ದುಃಖ ಒತ್ತರಿಸಿಕೊಂಡು ಬಂದು ಅರ್ಜುನ್..... ನೀನು ನನ್ನನ್ನು ಅಷ್ಟೊಂದು ಪ್ರೀತಿಸುತ್ತೀಯ ಎಂದು ಗಟ್ಟಿಯಾಗಿ ತಬ್ಬಿಕೊಂಡಳು. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಾಯಿತು. ಹೋಗಿ ಬಾಗಿಲು ತೆರೆದಾಗ ಒಬ್ಬ ಹುಡುಗ ತಿಂಡಿ ತಂದಿದ್ದ.

ಹೆಚ್ಚು ಕಡಿಮೆ ಎರಡು ದಿನದಿಂದ ಹೊಟ್ಟೆಯಲ್ಲಿ ಏನೂ ಇರಲಿಲ್ಲ, ಹುಡುಗ ತಂದಿದ್ದ ತಿಂಡಿ ತಿಂದು ಇಬ್ಬರೂ ಸ್ವಲ್ಪ ಹೊತ್ತು ಮಲಗಿದೆವು. ದೇಹ ಬಹಳ ದಣಿದಿದ್ದರಿಂದ ಇಬ್ಬರಿಗೂ ಗಾಢವಾದ ನಿದ್ರೆ ಹತ್ತಿತ್ತು. ಮತ್ತೆ ಕಾಲಿಂಗ್ ಬೆಲ್ ಸದ್ದಾಗಲೇ ಎದ್ದಿದ್ದು. ಹೋಗಿ ಬಾಗಿಲು ತೆರೆದಾಗ ಎದುರುಗಡೆ ಭಾಸ್ಕರನ್ ಊಟದ ಕ್ಯಾರಿಯರ್ ತಂದಿದ್ದರು. ಸರ್ ನಿಮಗೆ ಬಹಳ ತೊಂದರೆ ಕೊಡುತ್ತಿದ್ದೇವೆ, ದಯವಿಟ್ಟು ನಮ್ಮನ್ನು ಕ್ಷಮಿಸಿ...

ಅರ್ಜುನ್, ತ್ರಿವಿಕ್ರಂ ಸ್ನೇಹಿತರು ಎಂದ ಮೇಲೆ ಅಷ್ಟೂ ಮಾಡದಿದ್ದರೆ ಹೇಗೆ? ನಾನೂ ತ್ರಿವಿಕ್ರಂ ಚಿಕ್ಕಂದಿನಿಂದಲೂ ಸ್ನೇಹಿತರು... ಇಬ್ಬರೂ ಒಟ್ಟಿಗೆ ಒಂದೇ ಸ್ಕೂಲ್, ಕಾಲೇಜ್ ಎಂದು ಇದ್ದವರು, ಆಮೇಲೆ ಅವನು ಪೋಲಿಸ್ ಡಿಪಾರ್ಟ್ಮೆಂಟ್ ಗೆ ಹೋದ, ನಾನು ಅಪ್ಪನ ಜಮೀನು ನೋಡಿಕೊಂಡಿರಲು ಇಲ್ಲಿಗೆ ಬಂದುಬಿಟ್ಟೆ.... ಈಗಲೂ ವರ್ಷಕ್ಕೆ ಒಂದು ಬಾರಿ ಎರಡು ಬಾರಿ ಭೇಟಿ ಆಗುತ್ತಲೇ ಇರುತ್ತೇವೆ... ಹ್ಮ್.... ತಗೋಳಿ ಊಟ ಮಾಡಿ....ಇನ್ನೇನು ಒಂದೆರೆಡು ಗಂಟೆಯಲ್ಲಿ ತ್ರಿವಿಕ್ರಂ ಬರುತ್ತಾನೆ....

ತುಂಬಾ ಥ್ಯಾಂಕ್ಸ್ ಸರ್, ನಿಮ್ಮ ಸಹಾಯವನ್ನು ನಾವು ಎಂದಿಗೂ ಮರೆಯುವುದಿಲ್ಲ.  

Rating
No votes yet

Comments

Submitted by kavinagaraj Fri, 02/27/2015 - 20:26

ಮುಂದಿನ ಕಂತಿನಲ್ಲಿ ಮುಗಿಯಬಹುದು, ರಹಸ್ಯ ಸ್ಫೋಟವಾಗಬಹುದು, ಅಲ್ಲವೇ?