ಅನ್ವೇಷಣೆ ಭಾಗ ೨೭

ಅನ್ವೇಷಣೆ ಭಾಗ ೨೭

ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು  ಎಂದು ಬಾಗಿಲು ತೆರೆದಾಗ ತ್ರಿವಿಕ್ರಂ ಮತ್ತು ಭಾಸ್ಕರನ್ ನಿಂತಿದ್ದರು. ನಾನಿನ್ನು ಆಮೇಲೆ ಬರುತ್ತೇನೆ ಎಂದು ಭಾಸ್ಕರನ್ ಹೊರಟು ತ್ರಿವಿಕ್ರಂ ಒಳಬಂದರು.

ಜಾನಕಿಯನ್ನು ಅವರಿಗೆ ಪರಿಚಯ ಮಾಡಿಕೊಟ್ಟು ಮಾತಾಡಲು ಶುರುಮಾಡಿದೆವು.

ಅರ್ಜುನ್, ಅಂದು ಮುರುಗನ್ ನನ್ನು ಬಂಧಿಸಿದ ಮೇಲೆ ಮಧ್ಯಾಹ್ನದ ವೇಳೆಗೆ ನಾನು ನಿಮಗೆ ಕರೆ ಮಾಡಲು ಪ್ರಯತ್ನಿಸಿದರೆ ನಾಟ್ ರೀಚಬಲ್ ಎಂದು ಬರುತ್ತಿತ್ತು. ಏನೋ ಅನಾಹುತ ನಡೆದಿದೆ ಎಂದು ನನಗೆ ಅನುಮಾನ ಬಂದು ಮುರುಗನ್ ನನ್ನ ಕೇಳಿದ್ದಕ್ಕೆ,  ಇಲ್ಲ ಸರ್ ನನಗೆ ಇದಕ್ಕೂ ಏನೂ ಸಂಬಂಧವಿಲ್ಲ ಎಂದು ಹೇಳಿಬಿಟ್ಟ. ಅಸಲಿಗೆ ಅಂದು ಏನು ನಡೆಯಿತು?

ಅಂದು ನಡೆದ ವಿಷಯವನ್ನೆಲ್ಲಾ ತ್ರಿವಿಕ್ರಂಗೆ ತಿಳಿಸಿದ ಮೇಲೆ, ತ್ರಿವಿಕ್ರಂ ಜಾನಕಿಯ ಕಡೆ ತಿರುಗಿ ಜಾನಕಿ, ಅವರು ಯಾರೆಂದು ನಿಮಗೆ ಏನಾದರೂ ಸುಳಿವಿದೆಯ?

ಇಲ್ಲ ಸರ್, ಅವರು ಯಾರು ನನ್ನನ್ನು ಏತಕ್ಕೆ ಅಪಹರಿಸಿಕೊಂಡು ಬಂದರು ಒಂದೂ ಗೊತ್ತಿಲ್ಲ. ಬಂದ ದಿನದಿಂದ ಒಂದೇ ಕೊಠಡಿಯಲ್ಲಿ ಕೂಡಿ ಹಾಕಿದ್ದರು ಅಷ್ಟೇ. ಇವತ್ತು ಏನಾದರೂ ಅರ್ಜುನ್ ಅಲ್ಲಿಗೆ ಬರದಿದ್ದರೆ.... ಇನ್ನೆಷ್ಟು ದಿನ ನಾನು ಅಲ್ಲಿರುತ್ತಿದ್ದೇನೋ ಗೊತ್ತಿಲ್ಲ...

ತ್ರಿವಿಕ್ರಂ ತಮ್ಮ ಬಳಿಯಿದ್ದ ಫೈಲಿನಿಂದ ಸೆಲ್ವಂನ ತೆಗೆದು ತೋರಿಸಿ ಈ ವ್ಯಕ್ತಿ ಏನಾದರೂ ಅಲ್ಲಿಗೆ ಬಂದಿದ್ದನ?

ಇಲ್ಲ ಸರ್, ಅಲ್ಲಿ ಇದ್ದದ್ದು ಇಬ್ಬರಿಂದ ಮೂರು ಜನ ಅಷ್ಟೇ.... ಈ ವ್ಯಕ್ತಿ ನಾನಿರುವಷ್ಟು ದಿವಸ ಅಲ್ಲಿ ಬಂದಿರಲಿಲ್ಲ. ಅಥವಾ ಬಂದಿದ್ದನೋ ಗೊತ್ತಿಲ್ಲ, ಏಕೆಂದರೆ ನಾನಿದ್ದದ್ದು ಮೇಲಿನ ರೂಮಿನಲ್ಲಿ.

ಅರ್ಜುನ್,  ಇದೆಲ್ಲಾ ನೋಡಿದರೆ  ಇದರ ಹಿಂದೆ ಏನೋ ಭಾರೀ ಮಸಲತ್ತು ಇದೆ ಎಂದೆನಿಸುತ್ತಿದೆ. ಜಾನಕಿಯನ್ನು ಅಪಹರಿಸಿ ಏನೂ ತೊಂದರೆ ಮಾಡದೆ ಒಂದೇ ಕಡೆ ಕೂಡಿ ಹಾಕಿದ್ದಾರೆ, ಅಲ್ಲಿ ನೋಡಿದರೆ ಯಾವುದೋ ಶವಕ್ಕೆ ಜಾನಕಿಯ ಬಟ್ಟೆಗಳನ್ನು ಹಾಕಿದ್ದಾರೆ, ಆ ಶವವನ್ನು ಜಾನಕಿ ಶವ ಎಂದು ಡಾಕ್ಟರ್ ಸುಳ್ಳು DNA ದಾಖಲೆ ನೀಡಿದ್ದಾರೆ... ಎಲ್ಲೋ ಏನೋ ಲಿಂಕ್ ಮಿಸ್ ಆಗುತ್ತಿದೆ.... ಅರ್ಜುನ್ ನೀವು ಹೊಡೆದು ಬಂದ ವ್ಯಕ್ತಿಗಳ ಸ್ಥಿತಿ ಹೇಗಿತ್ತು? ಅಂದರೆ ಅವರು ಸುಮಾರು ಎಷ್ಟು ಗಂಟೆಯವರೆಗೂ ಮೂರ್ಛೆ ತಪ್ಪಿರಬಹುದು?

ಸರ್.... ನಾನೇನೂ ಅಷ್ಟು ಬಲವಾಗಿ ಹೊಡೆಯಲಿಲ್ಲ...ಅಬ್ಬಬ್ಬಾ ಎಂದರೆ ಒಂದರ್ಧ ಗಂಟೆಯ ಒಳಗೇ ಅವರಿಗೆ ಪ್ರಜ್ಞೆ ಬಂದಿರುತ್ತದೆ.

ಹಾ ಅರ್ಜುನ್,  ಮೊಬೈಲ್ ತಂದಿದ್ದೇನೆ ಎಂದು ಹೇಳಿದಿರಲ್ಲ... ಆ ಮೊಬೈಲ್ ಕೊಡಿ.

ಮೊಬೈಲ್ ಕೊಟ್ಟ ಕೂಡಲೇ ಮೊಬೈಲನ್ನು ಆನ್ ಮಾಡಿ ಅದರಿಂದ ತಮ್ಮ ಮೊಬೈಲ್ ಗೆ ಕರೆ ಮಾಡಿ ನಂಬರ್ ಬರೆದುಕೊಂಡು ಮತ್ತೆ ಮೊಬೈಲ್ ಆಫ್ ಮಾಡಿ, ಮತ್ತೆ ಯಾರಿಗೋ ಫೋನ್ ಮಾಡಿ ಆ ನಂಬರ್ ಕೊಟ್ಟು ಕಳೆದ ೨೪ ಗಂಟೆಗಳಲ್ಲಿ ಆ ನಂಬರಿಗೆ ಬಂದಿರುವ ಕರೆಗಳು ಎಲ್ಲಿಂದ ಬಂದಿರುವುದು ಎಂಬ ಮಾಹಿತಿ ಬೇಕೆಂದು ಹೇಳಿ ಕರೆ ಕಟ್ ಮಾಡಿ ಅರ್ಜುನ್ ಬನ್ನಿ ನನ್ನ ಜೊತೆ, ನನಗೆ ನೀವಿದ್ದ ಜಾಗವನ್ನು ತೋರಿಸಿ ಎಂದು ಆಚೆ ಬಂದು ಕಾರನ್ನು ಹತ್ತಿ ಹೊರಟೆವು. ದಾರಿಯಲ್ಲಿ ಹೋಗುತ್ತಿದ್ದ ಹಾಗೆ ತ್ರಿವಿಕ್ರಂ ಯಾರಿಗೋ ಫೋನ್ ಮಾಡಿ ನಾನು ಕೇಳಿದ ಮಾಹಿತಿ ಏನಾಯ್ತು ಎಂದು ಕೇಳಿ ಐದು ನಿಮಿಷ ಮಾತಾಡಿ ಕರೆ ಕಟ್ ಮಾಡಿ ನನ್ನ ಕಡೆ ನೋಡಿ ಅರ್ಜುನ್, ಸೆಲ್ವಂ ನಂಬರಿಂದ ಬಂದಿರುವ ಕಾಲ್ ಗಳು ಮೈಲಾಪೂರ್ ಎಂಬಲ್ಲಿಂದ ಬಂದಿದೆ. ಮತ್ತೆ ಈಗ ಅವನು ಕೋವಲಂ ಕಡೆ ಹೋಗುತ್ತಿದ್ದಾನೆ... ಅಂದ ಹಾಗೆ ನಿಮ್ಮನ್ನು ಕೂಡಿ ಹಾಕಿದ್ದು ಎಲ್ಲಿ?

ಸರ್ ನಮಗೆ ಸರಿಯಾಗಿ ಅಡ್ರೆಸ್ ಗೊತ್ತಿಲ್ಲ, ಆದರೆ ಆ ಮನೆಗೆ ಹೊಂದಿಕೊಂಡಂತೆ ಸಮುದ್ರ ಮತ್ತು ಪಕ್ಕದಲ್ಲೇ ಒಂದು ಲೈಟ್ ಹೌಸ್ ಇತ್ತು. ಅದು ಬಿಟ್ಟರೆ ಸುತ್ತಲೂ ಬೇರೇನೂ ಕಾಣುತ್ತಿರಲಿಲ್ಲ.

ಅರ್ಜುನ್.... ಹಾಗಿದ್ದರೆ ಅವನು ಖಂಡಿತ ನಿಮ್ಮನ್ನು ಕೂಡಿ ಹಾಕಿದ್ದ ಮನೆಯ ಕಡೆಗೇ ಹೋಗುತ್ತಿದ್ದಾನೆ ಎನಿಸುತ್ತದೆ. ಒಂದು ನಿಮಿಷ ಇರಿ ಎಂದು ಕೂಡಲೇ ಗಾಡಿ ಪಕ್ಕಕ್ಕೆ ನಿಲ್ಲಿಸಿ ಮತ್ತೆ ಯಾರಿಗೋ ಕರೆ ಮಾಡಿದರು. ಅವರು ಮಾತಾಡುತ್ತಿದ್ದ ಶೈಲಿ ನೋಡಿದರೆ ಚೆನ್ನೈ ಪೋಲಿಸ್ ಡಿಪಾರ್ಟ್ಮೆಂಟ್ ಜೊತೆ ಮಾತಾಡುತ್ತಿದ್ದರು ಎಂದು ತಿಳಿದು ಬಂತು. ಕೂಡಲೇ ಕೋವಲಂ ಬಳಿ ಇರುವ ಲೈಟ್ ಹೌಸ್ ಹತ್ತಿರ ಪೋಲಿಸ್ ಪಡೆಯನ್ನು ಕಳಿಸಬೇಕೆಂದು ಹೇಳಿ ಕರೆ ಕಟ್ ಮಾಡಿ ನಡೆಯಿರಿ ಹೊರಡೋಣ ಎಂದು ಕೋವಲಂ ಕಡೆ ಹೊರಟರು. ಸರಿಯಾಗಿ ಒಂದು ಗಂಟೆಯ ನಂತರ ಕೋವಲಂ ತಲುಪಿದೆವು. ಇನ್ನೂ ಪೋಲಿಸ್ ಪಡೆ ಬಂದಿರಲಿಲ್ಲ. ಗಾಡಿಯನ್ನು ಹೈವೇ ಪಕ್ಕದಲ್ಲಿ ಒಂದು ಕಡೆ ನಿಲ್ಲಿಸಿ ಲೈಟ್ ಹೌಸ್ ಕಡೆ ಯಾರಾದರೂ ಹೋಗುತ್ತಾರ ಎಂದು ಗಮನಿಸುತ್ತಿದ್ದೆವು. ಅಷ್ಟರಲ್ಲಿ ಕತ್ತಲಾವರಿಸುತ್ತಿತ್ತು, ಹೈವೇ ಆದ್ದರಿಂದ ಬೀದಿ ದೀಪಗಳೂ ಇರಲಿಲ್ಲ, ಆಗೊಂದು ಈಗೊಂದು ಬರುವ ಗಾಡಿಯ ಬೆಳಕು ಮಾತ್ರ ಇದ್ದದ್ದು.

ಸ್ವಲ್ಪ ಹೊತ್ತು ಯಾವುದೇ ಗಾಡಿಗಳು ಬರಲಿಲ್ಲ....ಅಷ್ಟರಲ್ಲಿ ಒಂದು ಪೋಲಿಸ್ ಪಡೆ ಅಲ್ಲಿಗೆ ಬಂದಿತು.... ಅವರಿಗೆ ಆ ಮನೆಯನ್ನು ಸುತ್ತುವರಿಯಲು ತ್ರಿವಿಕ್ರಂ ಸೂಚನೆ ಕೊಡುತ್ತಿದ್ದ ಹಾಗೆ ಅಲ್ಲಿಯವರೆಗೂ ಬಂದ ಒಂದು ಕಾರು ಸಡನ್ನಾಗಿ ಬ್ರೇಕ್ ಹಾಕಿ ವಾಪಸ್ ಬಂದ ದಾರಿಯಲ್ಲೇ ತಿರುಗಿತು. ತಕ್ಷಣ ನನಗೆ ಮತ್ತು ಜಾನಕಿಗೆ ಕಾರಿನಲ್ಲಿ ಕೂಡಲು ಹೇಳಿ ಒಬ್ಬ ಪೇದೆಗೆ ನಮ್ಮನ್ನು ಮತ್ತೆ ತಾಂಬರಂಗೆ ಕರೆದುಕೊಂಡು ಹೇಳಿ ತಾವು ಬಂದಿದ್ದ ಪೋಲಿಸ್ ಪಡೆಯ ಜೊತೆ ಆ ಕಾರನ್ನು ಹಿಂಬಾಲಿಸಿದರು. ನಾವು ಮತ್ತೆ ತಾಂಬರಂ ಸೇರಿದ ಐದೇ ನಿಮಿಷಕ್ಕೆ ಭಾಸ್ಕರನ್ ಬಂದು ಅರ್ಜುನ್, ತಗೋಳಿ ತ್ರಿವಿಕ್ರಂ ಫೋನ್ ಮಾಡಿದ್ದಾರೆ ಮಾತಾಡಿ ಎಂದು ಫೋನ್ ಕೊಟ್ಟರು.

 

ಹಲೋ ಅರ್ಜುನ್, ಒಂದ್ ಗುಡ್ ನ್ಯೂಸ್...ಸೆಲ್ವಂನನ್ನು ಬಂಧಿಸಿದ್ದೇವೆ. ನಾವು ಇವತ್ತು ರಾತ್ರಿ ಮೈಲಾಪುರ್ ನಲ್ಲಿರುವ ಪೋಲಿಸ್ ಹೆಡ್ ಕ್ವಾರ್ಟರ್ಸ್ ಗೆ ಕರೆದೊಯ್ಯುತ್ತಿದ್ದೇವೆ. ನಾಳೆ ಇಲ್ಲಿ ವಿಚಾರಣೆ ನಡೆಸಿದ ಮೇಲೆ ಅವನನ್ನು ಕರ್ನಾಟಕಕ್ಕೆ ಹಸ್ತಾಂತರದ ಬಗ್ಗೆ ತೀರ್ಮಾನವಾಗುತ್ತದೆ. ನೀನು ಮತ್ತೆ ಜಾನಕಿ ಇಂದು ರಾತ್ರಿಯೇ ಬೆಂಗಳೂರಿಗೆ ಹೊರಟುಬಿಡಿ... ನಾಳೆ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ನನಗೆ ಒಂದು ಕರೆ ಮಾಡು... ನಾನು ನಿನಗೆ ಇಲ್ಲಿನ ವಿಚಾರ ತಿಳಿಸುತ್ತೇನೆ.

ಸರ್, ಹಾಗೆ ಆಗಲಿ ಸರ್.... ಅಂತೂ ಆ ಕ್ರಿಮಿನಲ್ ನನ್ನು ಬಂಧಿಸಿದಿರಲ್ಲ... ನಿಮಗೆ ಯಾವ ರೀತಿ ಕೃತಜ್ಞತೆ ತಿಳಿಸಬೇಕೋ ಗೊತ್ತಾಗುತ್ತಿಲ್ಲ... ನಾನು ಮತ್ತು ನನ್ನ ಕುಟುಂಬ ನಿಮಗೆ ಸದಾಕಾಲ ಋಣಿಯಾಗಿರುತ್ತೇವೆ ಸರ್.

ಅರ್ಜುನ್.... ಇದರಲ್ಲಿ ನಾನು ಮಾಡಿದ್ದು ಏನಿಲ್ಲ... ನನ್ನ ಕರ್ತವ್ಯ ನಾನು ಮಾಡಿದ್ದೇನೆ ಅಷ್ಟೇ. ನನ್ನ ಕೆಲಸವೇ ಇದಲ್ಲವೇ....

ಆದರೂ ನಿಮ್ಮ ಸಹಾಯ ನಾನು ಜನ್ಮದಲ್ಲಿ ಮರೆಯುವುದಿಲ್ಲ ಸರ್....ಆದಷ್ಟೂ ಬೇಗ ಅವನಿಗೆ ಶಿಕ್ಷೆ ಆಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ... ಸರಿ ಸರ್ ನಾವು ಇಂದು ರಾತ್ರಿ ಹೊರಡುತ್ತೇವೆ,ಬೆಳಿಗ್ಗೆ ನಿಮ್ಮ ಕರೆಗೆ ಕಾಯುತ್ತಿರುತ್ತೇನೆ. ಬೈ ಸರ್....

ಭಾಸ್ಕರನ್ ಸರ್, ನಾವು ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಸಮಯಕ್ಕೆ ನೀವೇನಾದರೂ ಇರದಿದ್ದರೆ ನಮ್ಮ ಗತಿ ಏನಾಗುತ್ತಿತ್ತೋ...

ಅರ್ಜುನ್, ಅಷ್ಟೊಂದು ಸೆಂಟಿಮೆಂಟ್ ಆಗಬೇಡಿ..... ನೀವು ಬಂದ ಕೆಲಸ ಯಶಸ್ವಿಯಾಗಿ ಮುಗಿಯಿತಲ್ಲ ಅಷ್ಟೇ ಸಂತೋಷ ....ನಿಮ್ಮ ಮದುವೆಗೆ ಕರೆಯುವುದು ಮರೆಯಬೇಡಿ ಅಷ್ಟೇ ಎಂದು ನಕ್ಕರು...

ಸರ್.... ಖಂಡಿತ ಎಂದು ಅಲ್ಲಿಂದ ಬೆಂಗಳೂರಿಗೆ ಹೊರಟೆವು.

Rating
No votes yet

Comments