ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಪೂರ್ವಾರ್ದ‌)

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಪೂರ್ವಾರ್ದ‌)

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ

 

”ನಿಜಕ್ಕೂ ಪ್ರಕೃತಿ ಮನಮೋಹಕ ಹಸಿರಿನ ಗಿಡಮರಗಳು ಬಣ್ಣ ಬಣ್ಣದ ಹೂಗಳು ಮೇಲಿನ ನೀಲಿಯ ಆಕಾಶ , ಹಸಿರನ್ನು ಹೊದ್ದ ನೆಲ ಬೆಟ್ಟಗುಡ್ಡಗಳು ಎಲ್ಲವೂ  ಇಲ್ಲಿ ಬರುವರನ್ನು ಮರುಳು ಮಾಡುತ್ತವೆ"  
ನನಗೆ ನಾನೇ ಎಂಬಂತೆ ನುಡಿದೆ.

"ಹೌದು ಹಾಗೆ ಇಂತಹ ವರ್ಣಪ್ರಪಂಚವನ್ನು ನೋಡಲು ಮನುಷ್ಯನ ಕಣ್ಣುಗಳಿಗೆ ಮಾತ್ರ ಶಕ್ತಿ ಕೊಟ್ಟಿರುವ ಆ ಪ್ರಕೃತಿಗೂ ವಂದಿಸಬೇಕು"

ನಾನು ಅವನನ್ನು ವಿಚಿತ್ರವಾಗಿ ನೋಡಿದೆ ಎದುರಿಗೆ ಕುಳಿತ ವ್ಯಕ್ತಿಯನ್ನು.

"ಅಲ್ಲ ಮನುಷ್ಯನು ಮಾತ್ರ ನೋಡುವದೇನು , ಎಲ್ಲ ಪ್ರಾಣಿಗಳು ಸಹ ಪ್ರಕೃತಿಯನ್ನು ನೋಡುತ್ತಲೇ ಇರುತ್ತವೆ ಅಲ್ಲವೆ ?. ಮನುಷ್ಯ ಅದನ್ನು ಅಸ್ವಾದಿಸಬಲ್ಲ, ವರ್ಣಿಸಬಲ್ಲ  ಅಷ್ಟೇ ವ್ಯೆತ್ಯಾಸ". ನನ್ನ ಮನದಲ್ಲಿ ಮೂಡಿದ ಭಾವ

ನನ್ನ ಮನಸ್ಸಿನ ಮಾತು ಅರಿತವನಂತೆ ಅವನು ಪುನಃ ನುಡಿದ.

’ಹಾಗೆ ಸುಮ್ಮನೆ ಅಂದೆ ಅಷ್ಟೆ. ಎಷ್ಟಾದರು ಮನುಷ್ಯನ ಕಣ್ಣುಗಳು ಮಾತ್ರ ಎದುರಿನ ಬಣ್ಣಗಳನ್ನು ಗುರುತಿಸಬಲ್ಲವು, ಎರಡು ಬಣ್ಣಗಳ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲವು, ಅಸ್ವಾದಿಸಬಲ್ಲವು. ಆದರೆ ಪ್ರಾಣಿಗಳು ಹಾಗಿಲ್ಲ ಅವಕ್ಕೆ ಪ್ರಪಂಚ ಕೇವಲ ಕಪ್ಪು ಬಿಳುಪು ಅಷ್ಟೆ ಅಲ್ಲವೇ ಅದಕ್ಕಾಗಿ ಹಾಗೆಂದೆ"

"ಅಂದರೇನು ಬೇರೆ ಯಾವ ಪ್ರಾಣಿಯು ಬಣ್ಣಗಳನ್ನು ಗುರುತಿಸಲಾಗದೆ" ನಾನು ಕೇಳಿದೆ

’ಹೌದು ಬಹುತೇಕ ಪ್ರಾಣಿ ಪ್ರಪಂಚದ ಕಣ್ಣಿನ ದೃಷ್ಟಿಗು ಮನುಷ್ಯನ ಕಣ್ಣಿನ ದೃಷ್ಟಿಗೂ ವ್ಯೆತ್ಯಾಸವಿದೆ ಅಲ್ಲವೆ. ಉದಾಹರಣೆ ನಾಯಿ , ಹಸು ಎತ್ತುಗಳನ್ನು ನೋಡಿ ಅವಕ್ಕೆಲ್ಲ ಎಲ್ಲವು ಕಪ್ಪು ಬಿಳುಪು ಅಷ್ಟೆ ಅಲ್ಲವೆ. ಇನ್ನು ಭಾವಲಿ,  ಹಲ್ಲಿಯಂತ ಜೀವಿಗಳಂತೂ ಪ್ರಪಂಚವನ್ನು ತಲೆಕೆಳಗಾಗಿ ಸಹ ನೋಡುತ್ತಿರುತ್ತವೆ’

ಎನ್ನುತ್ತ ಜೋರಾಗಿ ನಕ್ಕ.

"ನಿಜ ನಾಯಿಯಂತ ಪ್ರಾಣಿಗಳಿಗೆ ಈ ಗಿಡ ಮರ ಇತ್ಯಾದಿಗಳೆಲ್ಲವು ಬಣ್ಣವಿಲ್ಲದ ವಸ್ತುಗಳೇ ಬಿಡಿ. ಹಾಗೆನ್ನುವಾಗಲೆ ಒಂದು ಜಿಜ್ಝಾಸೆಯೂ ಮೂಡುವದಲ್ಲವೆ, ನಿಜವಾಗಿಯೂ ಈ ಬಣ್ಣ ಅನ್ನುವದೆಲ್ಲಿದೆ?. ವಿಜ್ಞಾನಿಗಳೇನೊ ಸಸ್ಯಗಳಲ್ಲಿರುವ ಕ್ಲೋರೋಫಿಲ್ ಗಳೊ ಎಂತವೋ ಸಸ್ಯಗಳಲ್ಲಿ ಹಸಿರನ್ನು ಉತ್ಪಾದಿಸುತ್ತವೆ ಎನ್ನುತ್ತಾರೆ ಆದರೆ ಅದೇ ಹಸಿರು ಬೇರೆ ಪ್ರಾಣಿಗಳಿಗೆ ಕಾಣಿಸದು" ನಾನೆಂದೆ.

"ನಿಮ್ಮ ಮಾತು ನಿಜ ನೋಡಿ, ನೋಡುವ ನೋಟ ಎನ್ನುವ ಮಾತಿನಲ್ಲಿ ಎಷ್ಟು ಸತ್ಯವಿದೆ. ಅದೇ ಸಸ್ಯ ಅದೇ ಹಸಿರುಬಣ್ಣ ಅದೇ ಸೂರ್ಯನ ಬಿಸಿಲಿನಲ್ಲಿ ಕಾಣುವ ಸತ್ಯ.  ವಿಜ್ಞಾನಿಗಳು  ಹೇಳುವದೇನು?.  ಹಸಿರು ಬಣ್ಣ ಎಂದರೆ  ಯಾವುದೇ  ವಸ್ತುವು ತನ್ನ ಮೇಲೆ ಬೀಳುವ ಬೆಳಕಿನ ಎಲ್ಲ ತರಂಗ ಅಥವ ವರ್ಣಗಳನ್ನು ಹೀರಿಕೊಂಡು ಹಸಿರು ವರ್ಣವನ್ನು ಮಾತ್ರ ಪ್ರತಿಫಲಿಸುತ್ತದೆ ಎನ್ನುವರಲ್ಲವೆ. ಬಣ್ಣ ಅನ್ನುವುದು ಸೂರ್ಯನ ಬಿಸಿಲಿನದೋ, ಸಸ್ಯದ್ದೊ ಅಥವ ಅದನ್ನು ಗುರುತಿಸುವ ನಮ್ಮ ಕಣ್ಣಿನದೋ"   ಅವನು ತನ್ನ ಮಾತನ್ನು ಸ್ವಲ್ಪ ನಿಲ್ಲಿಸಿ ಮತ್ತೆ ಹೇಳಿದ

’ತರ್ಕವನ್ನು ಆದರಿಸಿ ಹೇಳುವದಾದರೆ ಗಿಡದಲ್ಲಿ ಕಾಣುವ ಹಸಿರು ಎನ್ನುವ ವರ್ಣ ಇರುವುದು ನೋಡುವ ಗುರುತಿಸುವ ಕಣ್ಣಿನಲ್ಲಿ ಮಾತ್ರ , ಇಲ್ಲದಿದ್ದಲ್ಲಿ ಅದು ಕೇವಲ ಕಪ್ಪು ಬಿಳುಪು. ಅದನ್ನು ವಿಜ್ಞಾನಿಗಳು ನಂಬುತ್ತಾರೆ ಒಪ್ಪುತ್ತಾರೆ. ಆದರೂ ಅದೇ ವಿಜ್ಞಾನಿಗಳು ಕಣ್ಣಿನ ಕುರಿತಾಗಿ ಮತ್ತೊಂದು ಮಾತು ಒಪ್ಪುವದಿಲ್ಲ ಅನ್ನುವುದು ಆಶ್ಚರ್ಯ’  .

’ಯಾವ ಮಾತು ಕಣ್ಣಿನ ಕುರಿತಾಗಿ ಅದರ ನೋಟವನ್ನು ಕುರಿತಾಗಿ ನಂಬುವದಿಲ್ಲ ಎಂದು ನೀವು ಹೇಳುವುದು’  ನನಗೆ ಆಶ್ಚರ್ಯ.

’ನೋಡಿ ಕಣ್ಣಿನ ವ್ಯೆತ್ಯಾಸ ಮಾತ್ರದಿಂದ ತಾನೆ ಮನುಷ್ಯನು ಹಾಗು ನಾಯಿ ಒಂದು ವಸ್ತುವನ್ನು ವರ್ಣವನ್ನು ಭಿನ್ನವಾಗಿ ಕಾಣುವುದು, ಹಾಗಿರುವಾಗ ಕೆಲವರು ಹೇಳುತ್ತಾರಲ್ಲ ನಾಯಿಗಳಿಗೆ ದೆವ್ವ ಭೂತಗಳು ಪ್ರೇತಾತ್ಮಗಳು ಕಾಣುತ್ತವೆ ಎಂದು ಅದನ್ನು ವಿಜ್ಞಾನಿಗಳು ಹಾಗು ನಿಮ್ಮಂತಹ ಓದಿದವರು ಏಕೆ ನಂಬುವದಿಲ್ಲ’

ನನಗೆ ಮುಜುಗರ, ಹಾಗು ಗಲಿಬಿಲಿಯಾಯಿತು. ಇವರು ತಮ್ಮ ಮಾತನ್ನು ಎಲ್ಲಿಗೆ ಹೋಲಿಸುತ್ತಿದ್ದಾರೆ.

ನಾನು ಹೇಳಿದೆ

’ಏನು ನೀವು ಹೇಳುತ್ತಿರುವುದು , ಎಲ್ಲಿಂದ ಎಲ್ಲಿಗೆ ಹೋಲಿಕೆ, ಬಣ್ಣಗಳನ್ನು ನಾವು ನೋಡುವದಕ್ಕು , ದೆವ್ವಗಳನ್ನು ನಾಯಿಗಳು ಮಾತ್ರ ಕಾಣುತ್ತವೆ ಅನ್ನುವದಕ್ಕೂ ಹೇಗೆ ಹೋಲಿಸುತ್ತೀರಿ’

ಅವನು ನಗುತ್ತ ಹೇಳಿದ.

’ನೋಡಿದಿರ ನಿಮ್ಮ ಮನಸನ್ನು. ಈಗ ತಾನೆ ಒಪ್ಪಿದಿರಿ, ಮನುಷ್ಯ ಹಾಗು ನಾಯಿಗಳ ಕಣ್ಣು ಹಾಗು ಅವುಗಳಿಗಿರುವ ಶಕ್ತಿ ಬೇರೆ ಬೇರೆ ಎಂದು. ಪ್ರಕೃತಿಯಲ್ಲಿನ ವರ್ಣಗಳನ್ನು ಗುರುತಿಸುವ ಶಕ್ತಿ ಮನುಷ್ಯನಿಗೆ ಮಾತ್ರವಿದೆ ನಾಯಿಗಳಿಗಿಲ್ಲ ಎಂದು ನಂಬುವಿರಿ. ಅದಕ್ಕೆ ಕಾರಣ ಬೆಳಕಿನಲ್ಲಿಯ ಕೆಲವು ವಕ್ರತೆಗಳು ತರಂಗವ್ಯೆತ್ಯಾಸಗಳು ಮನುಷ್ಯನ ಕಣ್ಣಿಗೆ ಮಾತ್ರ ಗೋಚರಿಸುತ್ತವೆ ಹಾಗಿದ್ದಲ್ಲಿ ಮನುಷ್ಯನಿಗೆ ಗೋಚರಿಸದ ವರ್ಣಗಳು , ಆಕಾರಗಳು , ವಸ್ತುಗಳು ನಾಯಿಗೆ ಏಕೆ ಕಾಣಬಾರದು. ಮನುಷ್ಯನ ಕಣ್ಣಿಗೆ ಇಲ್ಲದ ಅಂತಹ ಗುರುತಿಸುವ ಶಕ್ತಿ ನಾಯಿಗಳಿಗೆ ಏಕೆ ಇರಬಾರದು?’

ಅವನ ತರ್ಕಕ್ಕೆ ಉತ್ತರಿಸಲು ನನ್ನ ಬಳಿ ಸರಿಯಾದ ಕಾರಣಗಳಿರಲಿಲ್ಲ. ಒಂದು ಕ್ಷಣ ಅವನು ಹೇಳುತ್ತಿರುವ ಮಾತಿನಲ್ಲಿ ಸತ್ಯ ಇರಬಹುದೆಂದು ಅನ್ನಿಸಿತು. ಹೌದು ನಾಯಿಗಳು ನಮಗೆ ಕಾಣದ ಶಕ್ತಿಗಳನ್ನು ಕಾಣುತ್ತವೆ ಅಂದಾಗ ನಮಗೆ ಏಕೆ ನಂಬಿಕೆ ಬರುವದಿಲ್ಲ. ಏಕೆಂದರೆ ನಾಯಿಗೆ ಮಾತನಾಡುವ ಶಕ್ತಿ ಇಲ್ಲ, ಅವು ಕಂಡಿದ್ದನ್ನು ಮನಷ್ಯ ಬಳಿ ವರ್ಣಿಸಲಾರವು. ನಿಜಕ್ಕೂ ಪ್ರಕೃತಿಯ ನಿಯಮಗಳು ನಿಗೂಡ ಅನ್ನಿಸಿತು.

ನನಗೆ ಈಗ  ನೆನಪಿಗೆ ಬಂದಿತು. ಹಾಗು ತುಸು ನಾಚಿಕೆ ಅನ್ನಿಸಿತು.

ಇಷ್ಟು ಕಾಲ ನಾನು ಅಪರಿಚಿತ ವ್ಯಕ್ತಿ ಒಬ್ಬರೊಡನೆ ಗಹನವಾದ ವಿಷಯ ಚರ್ಚಿಸಲು ಪ್ರಾರಂಭಿಸಿದ್ದೆ. ಅವರ ಪರಿಚಯ ಸಹ ಮಾಡಿಕೊಳ್ಳದೆ ಅವರೊಡನೆ ಬಹಳ ಕಾಲದ ಗೆಳೆಯನೊಡನೆ ಚರ್ಚಿಸುವಂತೆ ಮಾತನಾಡಿದ್ದೆ. ಹಾಗಾಗಿ ನುಡಿದೆ.

’ಕ್ಷಮಿಸಿ, ನಿಮ್ಮಪರಿಚಯ ಮಾಡಿಕೊಳ್ಳಲೇ ಇಲ್ಲ ನೋಡಿ’ ಎನ್ನುತ್ತ

ನನ್ನ ಹೆಸರು, ಊರು ತಿಳಿಸಿ

’ಹೀಗೆ ನಾನು ಬೆಂಗಳೂರಿನಿಂದ ಬಂದವನು. ನೀವು ಎಲ್ಲಿಯವರು ತಿಳಿಯಲಿಲ್ಲ’ ಎಂದೆ.

ಅವನು ಒಂದು ಕ್ಷಣ ಮಾತು ನಿಲ್ಲಿಸಿದ. ನಾವು ಆಡುತ್ತಿದ್ದ ಮಾತಿನ ಓಘಕ್ಕೆ ತಡೆ ಬಂದಿದ್ದರಿಂದ ಅವನಿಗೆ ಸ್ವಲ್ಪ ಇರುಸುಮುರುಸಾಯಿತು ಅನ್ನಿಸುತ್ತೆ. ಒಂದು ಕ್ಷಣ ಬಿಟ್ಟು ನುಡಿದ

’ನಮ್ಮ ಜ್ಞಾನ ಅನುಭವ ಹಂಚಿಕೊಳ್ಳಲು ಪರಿಚಯದ ಅವಶ್ಯಕತೆ  ಬರುವದಿಲ್ಲ ಅಲ್ಲವೆ? . ನೋಡಿ ನಾವಿಬ್ಬರು ಎಷ್ಟೊತ್ತು ಮಾತನಾಡಿದ ಮೇಲೆ ನಮ್ಮ ಪರಿಚಯದ ಮಾತುಗಳತ್ತ ಬರುತ್ತಿದ್ದೇವೆ. ನನ್ನ ಹೆಸರು ವೆಂಕಟಾದ್ರಿ  ಎಂದು. ಇಲ್ಲಿಯೆ ಪಕ್ಕದ ಹಳ್ಳಿ ಮರಸಳ್ಳಿಯವನು. ನಾನು ನಿಮ್ಮಂತೆ ಈ ಜಾಗಕ್ಕೆ ಟೂರಿಷ್ಟ್ ಅಲ್ಲ. ಹೀಗೆ ತಿಂಗಳಿಗೆ ಒಮ್ಮೆ ಅಥವ ಎರಡು ಸಾರಿ ಎಂದು ಇಲ್ಲಿಗೆ ಬರುವವನು, ನಮಗೆ ಬೇಕಾದ ಮನೆ ಸಾಮಾನು ಇತರ ಸಾಮಾಗ್ರಿಗಳನ್ನು ಕೊಳ್ಳುವದಕ್ಕೆ. ಅಂಗಡಿಯ ಹತ್ತಿರ ಸ್ವಲ್ಪ ಕಾಯುವದಿತ್ತು, ಅದಕ್ಕೆ ಹೀಗೆ ಇಲ್ಲಿ ಬಂದು ಕುಳಿತಿದ್ದೆ ನೀವು ಸಿಕ್ಕಿದಿರಿ. ನಿಮ್ಮ ಪರಿಚಯವಾಗಿದ್ದು ಸಂತಸವಾಯಿತು ’

ಎಂದು ಕೈ ಮುಗಿದರು.

ಎಷ್ಟೋ ವರ್ಷಗಳ ಕೆಳಗೆ ಒಮ್ಮೆ ಎಲ್ಲರೊಡನೆ ಸಾಗರಕ್ಕೆ ಬಂದಿದ್ದು ನೆನಪಿತ್ತು. ಅದೇಕೊ ಮತ್ತೆ ಹೋಗಬೇಕೆನ್ನುವ ಇಚ್ಚೆ ಮೂಡಿತು. ಹಾಗಾಗಿ ಪತ್ನಿಯ ಜೊತೆ ಬೆಂಗಳೂರಿನಿಂದ ಸಾಗರಕ್ಕೆ ಬಂದು ಅಲ್ಲಿಯ ಊರ ಹೊರಬಾಗದಲ್ಲಿರುವ ಹೋಟೆಲ್ ಒಂದರಲ್ಲಿ ನೆಲೆಸಿದ್ದೆ.

ಏಕೊ ಸುತ್ತಮುತ್ತಲ ಸ್ಥಳ ನೋಡಲು ಹೋಗಬೇಕೆನ್ನುವ ಉತ್ಸಾಹ ಇನ್ನು ಬಂದಿರಲಿಲ್ಲ. ನಾಳೆ ಅಥವ ನಾಡಿದ್ದು ಹೋದರಾಯಿತು ಎನ್ನುವ ಮನಸ್ಸು. ಸಾಗರ ಹಾಗು ಅಲ್ಲಿಯ ಹಸಿರು ಸಿರಿ ನನಗೆ ಇಷ್ಟವಾಗಿತ್ತು. ರೂಮಿನಲ್ಲಿ ಕಾಲ ಕಳೆಯುವುದು ಬೇಕೆನಿಸಿದಾಗ ಹತ್ತಿರವೆ ಇರುವ ಕೆರೆ, ಸುತ್ತಲಿನ ಪ್ರದೇಶ ಸುತ್ತುತ್ತ ಎಲ್ಲಿಯಾದರು ಕುಳಿತು ಹಸಿರು ಗಾಳಿಯನ್ನು ಸೇವಿಸುವುದು ನನಗೆ ಇಷ್ಟವಾಗಿತ್ತು. ಹಾಗೆ ಸಂಜೆ ಬಂದು ಕುಳಿತಾಗ , ಎಲ್ಲಿಂದಲೋ ಬಂದ ಈ ವ್ಯಕ್ತಿ ಸಹ ಸ್ವಲ್ಪ ದೂರ ಅನ್ನುವಂತೆ ಕುಳಿತಿದ್ದ. ಮಾತು ಪ್ರಾರಂಭವಾದ ನಂತರ ಸ್ವಲ್ಪ ಹತ್ತಿರ ಬಂದು  ಹಸಿರು ಹುಲ್ಲಿನ ಹಾಸಿನ ಮೇಲೆ ಕುಳಿತಿದ್ದ.

’ನಾನು ನಿಮ್ಮ ಹಾಗೆ ಇಲ್ಲಿ ಪದೆ ಪದೆ ಬರುವನಲ್ಲ, ಹೀಗೆ ಪತ್ನಿ ಜೊತೆ ಒಂದಿಷ್ಟು ಸುತ್ತೋಣ ಎಂದು ಬಂದೆ. ಇಲ್ಲಿಯೆ ರೂಮು ಮಾಡಿರುವೆ. ಆಕೆ ರೂಮಿನಲ್ಲಿಯೆ ಇದ್ದಾಳೆ ಅರಾಮ್ ಮಾಡುತ್ತ. ನನಗೆ ಒಂದು ಕಡೆ ಕುಳಿತಿದ್ದಾರಾಗದು ನೋಡಿ ಹೀಗೆ, ಸುತ್ತುತ್ತ ಇಲ್ಲಿ ಬಂದು ಕುಳಿತೆ. ನಿಮ್ಮಂತಹವರ ಪರಿಚಯವಾಯಿತು’ ಎಂದು ನುಡಿದೆ.

’ಒಳ್ಳೆಯದಾಯಿತು ಬಿಡಿ ಹೇಗೊ ನಾವಿಬ್ಬರು ಪರಸ್ಪರ ಬೇಟಿಯಾಗುವಂತಾಯಿತು ಅನ್ನುವುದೆ ಸಂತಸ. ನೀವು ತಪ್ಪು ತಿಳಿಯುವದಿಲ್ಲ ಎಂದರೆ ನೆನಪಿಸುವೆ , ನನ್ನ ಮಾತಿಗೆ ನೀವು ಉತ್ತರಿಸಿಲಿಲ್ಲ’ ಎಂದರು ವೆಂಕಟಾದ್ರಿ.

ನನಗೆ ನೆನಪಾಯಿತು, ಅವರ ತರ್ಕಕ್ಕೆ ನಾನು ಸರಿಯಾದ ಉತ್ತರವನ್ನು ಕೊಟ್ಟಿರಲಿಲ್ಲ. ಯೋಚಿಸುತ್ತ ನುಡಿದೆ ,

’ನಿಮ್ಮ ಮಾತು ತರ್ಕಬದ್ದವಾಗಿದೆ ಸರ್. ನಾಯಿಯ ಕಣ್ಣಿಗೆ ಕಾಣದ ವರ್ಣ ಮನುಷ್ಯನಿಗೆ ಕಾಣುತ್ತದೆ ಅನ್ನುವಾಗ ಮನುಷ್ಯನ ಕಣ್ಣಿಗೆ ಕಾಣದ ಆಕಾರ, ವರ್ಣ ಅಥವ ಮತ್ತೇನೊ ನಾಯಿಯ ಕಣ್ಣಿಗೆ ಕಾಣುವ ಸಾದ್ಯತೆ ತಳ್ಳಿಹಾಕಲಾಗುವದಿಲ್ಲ. ಆದರೆ ಮನುಷ್ಯ ಚಿಂತನಾ ಶೀಲ ನೋಡಿ. ತನ್ನ ಅನುಭವಕ್ಕೆ ಬರದ ಯಾವುದೇ ಸಂಗತಿಯನ್ನು ಅವನು ನಂಬುವದಿಲ್ಲ ಅಲ್ಲವೆ . ಹಾಗಿರುವಾಗ ಎಂದಿಗೂ ತಾನು ಕಾಣದ, ಕೇಳದ ಸಂಗತಿಗಳನ್ನು ಅಸಾಮಾನ್ಯ ಅಲೌಕಿಕ ಎನ್ನುವಾಗ ಅದನ್ನು ನಾವು ಮೂಡನಂಬಿಕೆ ಎಂದು ಬಿಡುವುದು ಸಹಜ. ಅಲ್ಲವೇ. ನಮ್ಮ ಭಾರತದಲ್ಲಂತೂ ಇಂತಹ ಘಟನೆಗಳು , ಜನಗಳು ಬೇಕಷ್ಟು ಸಿಗುತ್ತವೆ. ಯಾರೊ ಹೇಳಿದ್ದನ್ನು ನಂಬಿ ಅದಕ್ಕಿಷ್ಟು ಬಣ್ಣ ಹಚ್ಚಿ , ದೆವ್ವ ಭೂತ ಎಂದೆಲ್ಲ ಪುಕಾರು ಹಬ್ಬಿಸಿಬಿಡುತ್ತಾರೆ. ಅಷ್ಟಕ್ಕೂ ಅದನ್ನು ಕಂಡವರು ಯಾರು ಇಲ್ಲ ಅನ್ನುವುದು ಅಷ್ಟೇ ಸತ್ಯ ಅಲ್ಲವೇ"

ವೆಂಕಟಾದ್ರಿ ನಗುತ್ತ ನುಡಿದರು,

’ಭಾರತೀಯರೇ ಏಕೆ, ಎಲ್ಲ ದೇಶಗಳನ್ನು ಇಂತಹ ನಂಬಿಕೆಗಳು, ಹಾಸುಹೊಕ್ಕಾಗಿವೆ, ಅಮೇರಿಕ ದೇಶದ ಅಧ್ಯಕ್ಷರ ಮನೆಯಲ್ಲಿಯೆ ನಾಲಕ್ಕು ನಾಲಕ್ಕು ದೆವ್ವಗಳು ಮೊಕ್ಕಾಂ ಹೂಡಿವೆ ಎಂದು ನೀವು ಸಹ ಓದಿರುತ್ತೀರಿ ಅಲ್ಲವೆ. ಅವು ಅಧ್ಯಕ್ಷರ ಪತ್ನಿಯ ಕಣ್ಣಿಗೆ ಮಾತ್ರ ಗೋಚರವಂತೆ. ಹಾಗೆ ಇಂಗ್ಲೇಂಡ್ ನಂತಹ ದೇಶದಲ್ಲು ದೆವ್ವ ಭೂತಗಳು ಆತ್ಮಗಳು, ಮಂತ್ರವಾದಿಗಳು , ಹಂಟೆಡ್ ಹೌಸ್ ಇಂತಹುದೆಲ್ಲ ಸಾಮಾನ್ಯ. ಅಲ್ಲಿ ಕರಿಬೆಕ್ಕನ್ನು ಕಂಡರೆ ಇಂದಿಗೂ ದೆವ್ವವೆಂದೆ ನಂಬುವರಲ್ಲವೆ"

’ನಿಜ, ಇಂತಹ ಮೂಡ ನಂಬಿಕೆಗೆ ದೇಶಗಳ ವ್ಯೆತ್ಯಾಸವೇನಿಲ್ಲ, ಎಲ್ಲ ದೇಶದಲ್ಲಿಯೂ ಇರುವುದೆ. ಹಾಗೆ ಓದಿಕೊಂಡವರು , ವಿದ್ಯಾವಂತರು ಅಂದುಕೊಳ್ಳುವವರು ಸಹ ಬಲಿಯಾಗಿಬಿಡುವರು. ನಮ್ಮ ದೇಶದಲ್ಲಿಯಂತು ಅಂತಹ ಹಂಟೆಡ್ ಹೌಸ್ ಅಂದರೆ ದೆವ್ವದ ಮನೆಗಳನ್ನು ನಾನು ಎಲ್ಲಿಯೂ ಕಾಣಲಿಲ್ಲ’  ನಾನು ನುಡಿದೆ.

ಆತ ಆಶ್ಚರ್ಯದಿಂದ ಎಂಬಂತೆ ನುಡಿದರು

’ಏಕೆ ಭಾರತದಲ್ಲಿ ನೀವು ಎಲ್ಲಿಯೂ ದೆವ್ವದ ಮನೆಗಳನ್ನು ಕಾಣಲಿಲ್ಲವೆ?"

"ನೋಡಿರುವೆ, ಈಚೆಗೆ ಬಂದಿತ್ತಲ್ಲ ಸಿನಿಮಾ ಆಪ್ತಮಿತ್ರ ದ ಮನೆ ಅಂತಹ ಸಿನಿಮಾಗಳಲ್ಲಿ ಮಾತ್ರ ’

ನಾನು ಜೋರಾಗಿ ನಗುತ್ತ ಹೇಳಿದೆ, ಮತ್ತೆ ಕೇಳಿದೆ

’ಅಂದ ಹಾಗೆ ನೀವು ಯಾವುದಾದರು ದೆವ್ವದ ಮನೆಗಳ ಬಗ್ಗೆ ಕೇಳಿರುವಿರಾ, ನೋಡಿದ್ದೀರಾ"

'ನೋಡದೆ ಏನು , ನಮ್ಮ ಹಳ್ಳಿಯಲ್ಲಿಯೆ ಇದೆಯಲ್ಲ , ದಿನವೂ ಅದರ ಎದುರಿಗೆ ಓಡಾಡುತ್ತಿರುತ್ತೇವೆ" ಅವರು ನುಡಿದರು

’ಏನು ನಿಮ್ಮ ಊರಿನಲ್ಲಿ ದೆವ್ವದ ಮನೆ ಎಂಬುವುದು ಇದೆಯ ಅದರಲ್ಲಿ ದೆವ್ವ ಎನ್ನುವದನ್ನು ಎಂದಾದರು ಕಂಡಿರುವಿರಾ, ನಾನು ಒಮ್ಮೆ ನೋಡಬೇಕು ಅಂತಹ ಮನೆಯನ್ನು’

ನಾನು ಉತ್ಸಾಹದಲ್ಲಿ ನುಡಿದೆ . ಅವರು ನನ್ನ ಮುಖವನ್ನೆ ನೋಡಿದರು.

’ಹೌದೇ ನೋಡುವ ಆಸಕ್ತಿ ಇದ್ದಲ್ಲಿ ಬನ್ನಿ ತೋರಿಸುವೆ, ಈಗ ನನ್ನ ಜೊತೆಯೆ ಬರಬಹುದಲ್ಲ’ ಅವರು ಅಹ್ವಾನ ನೀಡಿದರು.

ನನ್ನ ಮನ ಉತ್ಸಾಹ ತಾಳಿತಾದರು, ಸಮಯ ಸಂದರ್ಭ ಅನ್ನುವುದು ತಡೆಯುತ್ತಿತ್ತು. ಮೊದಲೆನೆಯದಾಗಿ ಅವರೊಬ್ಬರು ಅಪರಿಚಿತ ವ್ಯಕ್ತಿ. ಜೀವನದಲ್ಲಿ ಮೊದಲ ಬಾರಿಗೆ ನೋಡುತ್ತಿರುವುದು. ಎರಡನೆಯದಾಗಿ ನಾನು ಒಬ್ಬನೆ ಬಂದಿಲ್ಲ. ಹೀಗೆ ಟೂರ್ ಅಂತ ಹೇಳಿ ಪತ್ನಿಯ ಜೊತೆ ಬಂದಿರುವುದು. ಆಕೆ ಹೋಟೆಲಿನ ರೂಮಿನಲ್ಲಿ ರೆಸ್ಟ್ ಮಾಡುತ್ತಿದ್ದಾಳೆ. ಅಲ್ಲದೆ ಇವರ ಹಳ್ಳಿ ಎಲ್ಲಿದೆಯೋ ನನಗೆ ತಿಳಿದಿಲ್ಲ. ಆಗಲೆ ಸಂಜೆಗೆ ಹತ್ತಿರದ ಸಮಯ ಈಗ ಇವರ ಜೊತೆ ಹೋಗಿ ಮತ್ತೆ ಹಿಂದೆ ಬರುವುದು ಹೇಗೆ?

ಹಾಗಾಗಿ ನಾನು ಸಂಕೋಚದಿಂದ ನುಡಿದೆ.

’ಇಲ್ಲ ಈಗ ಸರಿಯಾಗದು. ಹೋಟೆಲಿನಲ್ಲಿ ನನ್ನ ಪತ್ನಿ ಇದ್ದಾಳೆ, ಆಗಲೇ ಸಂಜೆಯಾಗುತ್ತಿದೆ, ನಿಮ್ಮ ಹಳ್ಳಿಗೆ ಬಂದು ಮತ್ತೆ ವಾಪಸ್ ಬರುವುದು ಅಂದರೆ ರಾತ್ರಿಯಾಗಿಬಿಡುತ್ತೆ ಅನ್ನಿಸುತ್ತೆ. ಅಷ್ಟಕ್ಕು ಬಸ್ ಎಲ್ಲ ಸಿಗಬೇಕಲ್ಲ’  

’ಅಯ್ಯೋ ಬಸ್ ಎಂತದು ಸಾರ್, ನಾನು ಕಾರಿನಲ್ಲಿ ಬಂದಿರುವೆ. ನಿಮ್ಮ ಪತ್ನಿಯನ್ನು ಜೊತೆಗೆ ಕರೆದುಕೊಳ್ಳಿ ಒಬ್ಬರನ್ನೆ ಏಕೆ ಬಿಟ್ಟುಬರುವಿರಿ. ಇನ್ನು ಸಂಜೆ ವಾಪಸ್ ಬರುವ ಚಿಂತೆಯೇ ಬೇಡ. ರಾತ್ರಿ ಅಲ್ಲಿಯೆ ನಮ್ಮ ಮನೆಯಲ್ಲಿ ತಂಗಿರಿ, ಬೆಳೆಗ್ಗೆ ಎದ್ದು ತಿಂಡಿ ಊಟ ಮುಗಿಸಿ ವಾಪಸ್ ಇಲ್ಲಿಯ ಹೋಟೆಲಿಗೆ ಬಂದರಾಯಿತು’

ಅವರು ನಿರಾಳವಾಗಿ ನುಡಿದರು.

’ಛೇ ಛೇ ಅದೆಲ್ಲ ಸರಿಹೋಗುವದಿಲ್ಲ. ನಿಮಗೆ ಹೇಗೆ ತೊಂದರೆ ಕೊಡುವುದು. ನಿಮ್ಮ ಮನೆಯಲ್ಲಿ ಯಾರೆಲ್ಲ ಇರುತ್ತಾರೆ ಅವರು ನಮ್ಮ ಬಗ್ಗೆ ಏನೆಂದು ತಿಳಿಯುವದಿಲ್ಲ. ಬೇಡ ಬಿಡಿ ಏನೊ ಸುಮ್ಮನೆ ಕುತೂಹಲಕ್ಕೆ ಹಾಗೆಂದೆ ಅಷ್ಟೆ ದೆವ್ವದ ಮನೆ ನೋಡಬೇಕು ಎಂದು’

ನಾನು ಸಂಕೋಚದಿಂದ ನುಡಿದೆ.

’ಅಯ್ಯೋ ನಿಮ್ಮದೊಳ್ಳೆ ಸಂಕೋಚವಾಯಿತಲ್ಲ. ನಿಮ್ಮ ಬೆಂಗಳೂರಿನವರಂತಲ್ಲ ಇಲ್ಲಿಯವರು, ನಮಗೆ ಯಾರಾದರು ಬಂದುಗಳು ಬರುವರು ಅಂದರೆ ಸಂತಸ. ಅಷ್ಟಕ್ಕೂ ಮನೆಯಲ್ಲಿ ಯಾರಿದ್ದಾರೆ ನಾನು ಹಾಗು ನನ್ನ ಪತ್ನಿ ಅಷ್ಟೆ. ಅವಳಿಗು ಯಾರಾದರು ಮಾತಿಗೆ ಅಂತ ಜನ ಸಿಕ್ಕಿ ತುಂಬಾ ದಿನವಾಯಿತು. ನಿಮ್ಮ ಪತ್ನಿಯೂ ಜೊತೆಗೆ ಬಂದರೆ ತುಂಬಾ ಖುಷಿ ಪಡುತ್ತಾಳೆ, ನೀವು ಇಲ್ಲ ಅನ್ನಲಾಗದು’

ಆ ಮನುಷ್ಯ ಜಿಗಣೆಯಂತೆ ಹಿಡಿದುಬಿಟ್ಟರು. ಹೇಗೆ ಅಂದರೆ ಕಡೆಗೊಮ್ಮೆ ನನ್ನ ಬಾಯಲ್ಲಿ ಆಗಲಿ ಅನ್ನಿಸಿಬಿಟ್ಟರು.

ತಕ್ಷಣ ನುಡಿದರು

’ಈಗ ನೀವೊಂದು ಕೆಲಸ ಮಾಡಿ. ಸೀದಾ ನಿಮ್ಮ ಹೋಟೆಲಿಗೆ ಹೋಗಿಬಿಡಿ. ನಾನು ಊರೊಳಗೆ ಹೋಗಿ, ಅಂಗಡಿಯಲ್ಲಿ ಸಿದ್ದಪಡಿಸಿರುವ ಕೆಲವು ಸಾಮಾಗ್ರಿಗಳು, ದಿನಸಿಗಳು ಎಲ್ಲವನ್ನು ಕಾರಿಗೆ ಹಾಕಿಕೊಂಡು ಬಂದುಬಿಡುತ್ತೇನೆ. ನಾನು ನನ್ನ ಮರಸಳ್ಳಿಗೆ ಹೋಗಲು ಹೇಗೂ ನಿಮ್ಮ ಹೋಟೆಲಿನ ಮುಂದೆಯೆ ಹೋಗಬೇಕು. ಈಗ ಸಮಯ ಐದಲ್ಲವೆ? ನೀವು ಸರಿಸುಮಾರು ಐದು ಮುಕ್ಕಾಲರ ಹೊತ್ತಿಗೆ , ನಿಮ್ಮ ಪತ್ನಿ ಜೊತೆಗೂಡಿ ಕೆಳಗೆ ಬಂದು ಹೋಟೆಲಿನ ಮುಂದೆ ರಸ್ತೆಯಲ್ಲಿ ನಿಂತಿರಿ. ನಾನು ಬಂದು ನಿಮ್ಮನ್ನು ಕರೆದೊಯ್ಯುವೆ. ನನ್ನ ಕಾರಿನ ನಂಬರ್ ನೆನಪಿಡಿ KA 51 ME5291 , ಅಲ್ಟೋ ಕಾರು . ಎಲ್ಲ ತೀರ್ಮಾನವಾಯಿತಲ್ಲ ಹೊರಡಿ’ ಎಂದು ಅವರೇ ತೀರ್ಮಾನಿಸಿ ಹೊರಟು ಬಿಟ್ಟರು

ಈಗ ನನಗೆ ವಿದಿಯಿಲ್ಲ ಅನ್ನುವಂತೆ ಆಯಿತು.

ನಾನು ಐದು ನಿಮಿಷದಲ್ಲಿ ಅಲ್ಲಿಂದ ಹೊರಟು ಹೋಟೆಲಿನ ರೂಮು ತಲುಪಿದೆ. ನಿದ್ದೆ ಮುಗಿಸಿ ಎದ್ದಿದ್ದ ಪತ್ನಿ ಕನ್ನಡಿಯ ಎದುರಿಗೆ ಕುಳಿತು ತಲೆ ಬಾಚುತ್ತ ಇದ್ದಳು.

’ಆಯಿತ ನಿಮ್ಮ ಸುತ್ತಾಟ, ಮದ್ಯಾನ್ಹವಾದರು ಒಂದು ಕ್ಷಣ ವಿಶ್ರಾಂತಿ ಪಡೆಯಬಾರದ ಅದೇನು ಹುಚ್ಚೋ ’ ಎಂದಳು.

ನಾನು ಇವಳಿಗೆ ಹೇಗೆ ತಿಳಿಸುವುದು.ಇನ್ನು ಅಪರಿಚಿತರು ಅಂದರೆ ಇವಳು ಏನೆಲ್ಲ ಮಾತನಾಡುವಳೊ ಎಂದು ಯೋಚಿಸುತ್ತ,

’ಇಲ್ಲವೇ , ಹೊರಗೆ ಸುಮ್ಮನೆ ಸುತ್ತಾಡಲು ಹೋಗಿದ್ದೆ. ನೋಡು ಹೋಗಿದ್ದು ಒಳ್ಳೆಯದಾಯಿತು. ಅಲ್ಲಿ ಪಾರ್ಕಿನ ಸಮೀಪ ನನ್ನ ಹಳೆಯ ಗೆಳೆಯನೊಬ್ಬ ಸಿಕ್ಕಿದ ವೆಂಕಟಾದ್ರಿ ಎಂದು. ಹೀಗೆ ದಿಡೀರ್ ಅಂತ ಸಿಕ್ಕಿದು ಅವನಿಗು ಖುಷಿ. ಈಗ ನನ್ನನ್ನು ಅವನ ಜೊತೆ ಬಾ ಅಂತಿದ್ದಾನೆ, ನೀನು ಬರಬೇಕೆಂದು ತುಂಬಾನೆ ಬಲವಂತ. ನಾನು ಒಪ್ಪಿದ್ದೇನೆ. ಇನ್ನು ಅರ್ದ ಮುಕ್ಕಾಲು ಗಂಟೆಯಲ್ಲಿ ಅವನು ಕೆಳಗೆ ಕಾರು ತರುತ್ತಾನೆ ನೀನು ಸಿದ್ದವಾಗು’ ಎಂದೆ

ಅವಳಿಗೆ ಎಂತದೋ ಅನುಮಾನ,

’ವೆಂಕಟಾದ್ರಿ ಎಂದೆ , ನಿಮ್ಮ ಸ್ನೇಹಿತನೆ ? , ಇಷ್ಟು ವರ್ಷಗಳಲ್ಲಿ ನಿಮ್ಮ ಬಾಯಲ್ಲಿ ಒಮ್ಮೆಯೂ ಅವರ ಹೆಸರು ಕೇಳಲಿಲ್ಲ , ಈಗ ಇದ್ದಕ್ಕಿದಂತೆ ಎಲ್ಲಿಂದ ಬಂದರು ?’

ಹೀಗೆ ಹಲವಾರು ಪ್ರಶ್ನೆ ಕೇಳಿದಳು. ನಾನು ಎಲ್ಲಕ್ಕು ಒಂದು ಸುಳ್ಳು ಉತ್ತರ ಕೊಡುತ್ತ, ಹೇಗೋ ಒಪ್ಪಿಸಿ ಕೆಳಗೆ ಬರುವಾಗ ಐದೂವರೆ. ಹೋಟೆಲಿನ ರಿಸೆಪ್ಷನ್ನಿನಲ್ಲಿ  ರಾತ್ರಿ ನಾವಿರುವದಿಲ್ಲ ಬೆಳಗ್ಗೆ ಬರುತ್ತೇವೆ ಎಂದು ತಿಳಿಸಿ , ಹೊರಗೆ ಬಂದು ರಸ್ತೆಯಲ್ಲಿ ನಿಲ್ಲುವಂತಿಲ್ಲ, ಆಗಲೆ ರಸ್ತೆಯ  ಕೊನೆಯಲ್ಲಿ ಕಾರು ಕಾಣಿಸಿತು,ಹತ್ತಿರ ಬರುವಾಗಲೆ ಗಮನಿಸಿದೆ ಅದೇ ನಂಬರ್ . ಕಾರು ನಮ್ಮ ಮುಂದೆ ನಿಂತಿತು. ಡ್ರೈವರ್ ಸೀಟಿನಲ್ಲಿ ವೆಂಕಟಾದ್ರಿ ಕುಳಿತಿದ್ದರು.

ಮುಂದಿನ ಬಾಗಿಲು ತೆರೆಯುತ್ತ

’ಹತ್ತಿ ಹತ್ತಿ ಬಹಳ ಕಾಲ ನಿಲ್ಲುವಂತಿಲ್ಲ. ಹಿಂದೆ ಬಸ್ಸು ಬಂದರೆ ಕಷ್ಟ ಎನ್ನುತ್ತ, ಹಿಂದಿನ ಬಾಗಿಲ ಲಾಕ್ ತೆಗೆಯುತ್ತ, ಬನ್ನಿ ಅಮ್ಮ ನಮಸ್ಕಾರ , ಹತ್ತಿ ’ ಎಂದು ನಮ್ಮಿಬ್ಬರನ್ನು ಹತ್ತಿಸಿಕೊಳ್ಳುತ್ತ ಕಾರ್ ಮುಂದೆ ಹೊರಟೆ ಬಿಟ್ಟಿತು.

’ಏ ಇಲ್ಲಿಂದ ಅರ್ದ ಮುಕ್ಕಾಲು ಗಂಟೆ ಅಷ್ಟೆ. ಏಳೂವರೆವಳಗೆ ಮನೆಯಲ್ಲಿರಬಹುದು. ನಿಮ್ಮ ಮನೆಯವರ ಕಾಫಿ ,ತಿಂಡಿ ಆಗಿಲ್ಲ ಅಂದರೆ ತಿಳಿಸಿ, ಯಾವುದಾದರು ಹೊಟೆಲ್ ಮುಂದೆ ನಿಲ್ಲಿಸುತ್ತೇನೆ, ಇಲ್ಲ ಸೀದಾ ಮನೆಗೆ’ ಎಂದರು.

ಅದಕ್ಕೆ ನಾನು

’ಇಲ್ಲ ಎಲ್ಲ ಆಗಿದೆ, ಇನ್ನು ಕಾಫಿ ತಿಂಡಿಯ ಮಾತೆ ಇಲ್ಲ , ಏನಿದ್ದರು ರಾತ್ರಿಯ ಊಟವೇ’ ಎಂದೆ ನಗುತ್ತ.

ಸರಿ ಕಾರು ತನ್ನ ವೇಗವನ್ನು ಪಡೆದುಕೊಂಡಿತು. ಅಕ್ಕ ಪಕ್ಕದ ಹಸಿರನ್ನು ದಾಟುತ್ತ ಕಾರು ಸ್ವಲ್ಪ ಕಾಲದಲ್ಲಿಯೆ ಮುಖ್ಯರಸ್ತೆ ಬಿಟ್ಟು, ಒಳ ರಸ್ತೆಯನ್ನು ಸೇರುತ್ತಿರುವಂತೆ ಕಾರಿನ ವೇಗ ಸ್ವಲ್ಪ ತಗ್ಗಿತು.

’ನಿಮ್ಮ ಮನೆಯಲ್ಲಿ ಯಾರಾರೆಲ್ಲ ಇದ್ದಾರೆ’ ನನ್ನ ಪತ್ನಿ ,

ಈಗ ವೆಂಕಟಾದ್ರಿಯನ್ನು ಕೇಳಿದಳು

’ಯಾರೇನಮ್ಮ, ಇರೋದು ಇಬ್ಬರು, ನಾನು ಹಾಗು ನನ್ನ ಪತ್ನಿ ಅಷ್ಟೆ. ನೀವು ಬಂದರೆ ನಾಲಕ್ಕಾಯಿತು ಅಷ್ಟೆ ’

ಅನ್ನುತ್ತ ಜೋರಾಗಿ ನಕ್ಕು.

’ನೀವು ಬರುತ್ತಿರುವುದು ನಮ್ಮವಳಿಗೆ ಒಳ್ಳೆಯ ಖುಷಿಯಾಗುತ್ತೆ ಬಿಡಿ’ ಎಂದರು.

’ಮತ್ತೆ ಮಕ್ಕಳು’ ನನ್ನಾಕೆ ಪ್ರಶ್ನಿಸಿದಳು.

ಕಾರಿನಲ್ಲಿ  ದೀರ್ಘ ಮೌನ ಆವರಿಸಿತು.

’ಇಲ್ಲಮ್ಮ ಮಕ್ಕಳಿಬ್ಬರೂ ನಮ್ಮ ಜೊತೆ ಇಲ್ಲ, ಹೀಗೆ ಬೆಳೆದು ದೊಡ್ದವರಾದ ನಂತರ ಅವರು ಸ್ವತಂತ್ರರಲ್ಲವೆ, ಓದು ಎಂದು ವಿದೇಶಕ್ಕೆ ಹೋದರು, ಮದುವೆಯಾಗಿ ಅಲ್ಲಿಯೆ ನೆಲಸಿದರು, ಹಿಂದೆ ಬರಲಿಲ್ಲ, ಆದರೆ ನಿಮ್ಮಲ್ಲಿ ಒಂದು ಬೇಡಿಕೆ ಇದೆ. ನೀವು ನನ್ನ ಪತ್ನಿಯ ಎದುರಿಗೆ ಹೀಗೆ ಮಕ್ಕಳ ವಿಷಯ ಎತ್ತ ಬೇಡಿ, ಬಹಳ ಬೇಗ ಡಿಸ್ಟರ್ಬ್ ಆಗ್ತಾಳೆ. ಇದು ನನ್ನ ಬೇಡಿಕೆ’ ಎಂದ.

ನಾನು ಹಾಗು ನನ್ನ ಪತ್ನಿ ಮಾತನಾಡಲಿಲ್ಲ.

ಕಾರಿನ ಶಬ್ದ ಒಂದೇ ಸಮ ಬೇಸರ ಅನ್ನಿಸುತ್ತಿತ್ತು. ಆಗಲೆ ಹೊರಗೆ ಕತ್ತಲಾವರಿಸಿತ್ತು. ಹಾಗಿರುವಾಗ ಚಲಿಸುತ್ತಿದ್ದ ಕಾರು ನಿಂತಿತು. ಆದರೆ ಅದರ ಇಂಜಿನ್ ಬಂದ್ ಮಾಡಿಲಿಲ್ಲ ಆತ.

’ಬನ್ನಿ ಕೆಳಗೆ ಇಳಿಯೋಣ ಒಂದು ಕ್ಷಣದ ಅರ್ಜೆಂಟ್ ಕೆಲಸ’ ಎಂದರು ನಗುತ್ತ.

ನನಗೆ ಅರ್ಥವಾಯಿತು. ಪ್ರಕೃತಿಯ ಕರೆ ಆತನಿಗೆ. ಪತ್ನಿಯತ್ತ ತಿರುಗಿನೊಡಿದೆ, ಕಾರಿನ ಬೆಳಕಲ್ಲಿ ಆಕೆ ಮುಖ ಸಿಂಡರಿಸಿದಳು. ನಾನು ನಗುತ್ತ ಕೆಳಗಿಳಿದೆ.

ಕಾರಿನ ಹಿಂಬಾಗಕ್ಕೆ ಬಂದೆವು ಮರದ ಕೆಳಗೆ ನಿಂತಿರುವಂತೆ ಆತ ಸಣ್ಣ ದ್ವನಿಯಲ್ಲಿ ಹೇಳಿದ.

’ನೋಡಿ ನೀವು ಕೇಳುತ್ತ ಇದ್ದಿರಲ್ಲ ದೆವ್ವದ ಮನೆ, ಕಾಣಿಸುತ್ತಿದೆಯ ?"

ನನ್ನಗೆ ಬೆನ್ನಲ್ಲಿ ಸಣ್ಣಗೆ ಚಳಿ ಹುಟ್ಟಿತು!

.. ಮುಂದುವರೆಯುವುದು.

 

Comments

Submitted by partha1059 Sun, 03/15/2015 - 21:02

In reply to by nageshamysore

ನಾಗೇಶ ಸಾರ್,
ನಿಮ್ಮ ಹೆಚ್ಚು ಕಾಯಿಸಿದೆ, ಈಗ ಮುಂದಿನ ಬಾಗ ಓದಿ ಹೇಗಿದೆ ಎಂದು ತಿಳಿಸಿ.
ವಂದನೆಗಳೊಡನೆ
ಪಾರ್ಥಸಾರಥಿ