ಅಂತಿಮ ಪರೀಕ್ಷೆ

ಅಂತಿಮ ಪರೀಕ್ಷೆ

ಭಾರತದ ಹಾಕಿ ತಂಡದ ನಾಯಕ ನಾಡಿ ಪಂದ್ಯದ ಕೊನೆಯ ಪೆನಾಲ್ಟಿ ಶಾಟ್ ತೊಗೊಳುವುದಕ್ಕಾಗಿ ತಯಾರಾದ. ಹಣೆಯ ಮೇಲಿನ ಬೆವರನ್ನು ಒರೆಸಿ ಒಮ್ಮೆ ಎದುರಾಳಿ ಗೋಲಿಯ ಕಡೆ ನೋಡಿದ. ಪ್ರೇಕ್ಷಕರೆಲ್ಲಾ, “ನಾಡೀ … ನಾಡಿ … ಡಬ್ ಡಬ್ ಡಬ್“, ಎಂದು ಚೀರುತ್ತಿದ್ದಾರೆ. ಮೋಡ ಮುರಿದು, ಗುಡುಗು ಸಿಡಿಲಿನ ಮಧ್ಯದಲ್ಲಿ, ಜೋರಾಗಿ ಮಳೆ ಬರಲು ಶುರುವಾಯಿತು. ನಾಡಿ ಬಗ್ಗಿಕೊಂಡು, ಗೋಲಿನ ಕಡೆ ನೋಡಿ, ಯೋಚಿಸಿದ, “ಎಡ? ಬಲ? ಎಡ? ಬಲ? ಎಡ?”. ಅವನ ಹೃದಯದಲ್ಲಿ ಉತ್ತರ ಹುಟ್ಟಿತು. ಹಾಕಿ ಸ್ಟಿಕ್ ಅನ್ನು ಹಿಂದಕ್ಕೆ ಎಳೆದು ರಭಸದಿಂದ ಚಂಡನ್ನು ಗೋಲಿನ ಸರಿ ಮಧ್ಯಕ್ಕೆ ಬಾರಿಸಿದ. ಗೋಲಿ ಅಡ್ಡೇಟೋ ಗುಡ್ಡೇಟೋ ಎಂಬಂತೆ ಎಡಗಡೆಗೆ ಜಿಗಿದ. ಚಂಡು ಗೋಲಿನ ಪರದೆಯೊಳಗೆ ಸಲೀಸಾಗಿ ಸೇರಿಕೊಂಡಿತು. ಜನರೆಲ್ಲಾ, “ಓ….“, ಎಂದು ಕೂಗುತ್ತಾ ಹುಚ್ಚೆದ್ದರು. ಭಾವೋತ್ಕರ್ಷತೆಯಿಂದ ನಾಡಿಯ ಕಾಲುಗಳು ಸೋತವು. ಮಂಡಿಯೂರಿ, ಬೂದುಬಣ್ಣದ ಆಕಾಶದ ಕಡೆ ನೋಡಿ, “ಆಹ್….”, ಎಂದು ಸಿಂಹದಂತೆ ಘರ್ಜಿಸಿದ.  

“ನಾಡಿ ! ಏನ್ ಮಾಡ್ತಿದ್ಯ ಅಲ್ಲಿ? ಓದ್ಕೊತಾಯ್ದ್ಯೇನೋ?”, ಅಮ್ಮ ಅಡುಗೆಮನೆಯಿಂದ ಕೂಗಿದರು. ನಾಡಿ ಕೆಳಗೆ ಬಿದ್ದ ಎರೇಸರ್ ಅನ್ನು ವಾಪಸ್ಸು ಮೇಜಿನ ಮೇಲಿಟ್ಟು ಅಲ್ಲಿ ಇಲ್ಲಿ ನೋಡಿದ. ಅಮ್ಮ ಅಡುಗೆಮನೆ ಬಿಟ್ಟು ಹಾಲಿಗೆ ಬರುವ ಸೂಚನೆ ಕಾಣಲಿಲ್ಲ. ಪೆನ್ಸಿಲ್ ಅನ್ನು ಪಕ್ಕಕ್ಕಿಟ್ಟು ಗೋಲ್ ಪೋಸ್ಟ್ ಆಗಿದ್ದ ತನ್ನ ಸೋಶಿಯಲ್ ಸ್ಟಡೀಸ್ ಪಠ್ಯಪುಸ್ತಕವನ್ನು ಓದುವುದಕ್ಕಾಗಿ ಉಲ್ಟಾ ತಿರುಗಿಸಿದ. 

ನಾಳೆ ನಾಡಿಗೆ ಬೇಸಿಗೆ ರಜೆಯ ಮುಂಚಿನ ಕಡೆಯ ಪರೀಕ್ಷೆ. ಇದು ಮುಗಿದರೆ ನಾಲ್ಕನೇ ಕ್ಲಾಸ್ ಫಿನಿಶ್…. ಎರಡು ತಿಂಗಳು ರಜೆ ! ನಾಡಿಯ ಬೇಸಿಗೆ ಮೋಜಿನ ವಿವರಪಟ್ಟಿ ಆಗಲೇ ರೆಡಿಯಾಗಿತ್ತು - ಇವತ್ತು ಪರೀಕ್ಷೆ ಮುಗಿಯುತ್ತಿದ್ದಂತೆಯೇ ಬೆಂಗಳೂರಿನ ಅಜ್ಜಿ ಮನೆಗೆ ಪಯಣ, ಅಲ್ಲಿ ಮೂರು ದಿವಸ ಕಳೆದು ನಂತರ ಒಂದು ವಾರ ಚಿಕ್ಕಮ್ಮನ ಮನೆಯಲ್ಲಿ ಪ್ರಾಣೇಶನ ಜೊತೆ ಕ್ರಿಕೆಟ್ ಮತ್ತು ಐಸ್ಪೈಸ್ ಆಟ. ಅದಾದ ಮೇಲೆ ಚಿಕ್ಕಮಗಳೂರಿನಲ್ಲಿ ರಶ್ಮಿ ಅಕ್ಕನ ಮದುವೆ, ಆಮೇಲೆ....... ಡಬ್. ಹಾಲಿನ ಕಿಟಕಿಯ ಮೇಲೆ ಟೆನಿಸ್ ಬಾಲ್ ಬಿದ್ದ ಸದ್ದು ಕೇಳಿಸಿತು. ನಾಡಿ ಓಡಿ ಹೋಗಿ, ದೀವಾನಿನ ಮೇಲೆ ನಿಂತು, ಕಿಟಕಿಯಲ್ಲಿ ಬಗ್ಗಿ ನೋಡಿದ. ರೋಹಿತ್ ಮತ್ತು ಧೀರಜ್ ಆಗಾಲೇ ಕ್ರಿಕೆಟ್ ಆಡಲು ಆರಂಭಿಸಿದ್ದರು. ಅವರ ಶಾಲೆಯ ಪರೀಕ್ಷೆ ನಿನ್ನೆಯೇ ಮುಗಿದ್ದಿತ್ತು. ನಾಡಿ ತನ್ನ ದುರಾದೃಷ್ಟವನ್ನು ನೆನೆಸಿಕೊಂಡು ಒಮ್ಮೆ ನಿಟ್ಟುಸಿರು ಬಿಟ್ಟ.

ಕಿಟಕಿಯಿಂದ ವಾಪಸ್ಸು ಬಂದು ತನ್ನ ಪುಟ್ಟ ಖುರ್ಚಿಯಲ್ಲಿ ಕುಳಿತ. ಮೇಜಿನ ಮೇಲೆ ಗಲ್ಲವನ್ನು ಊರಿ, ಮುಂದೆ ಇದ್ದ ಸೋಶಿಯಲ್ ಸ್ಟಡೀಸ್ ಪಠ್ಯಪುಸ್ತಕವನ್ನು ನಿರಾಸಕ್ತಿಯಿಂದ ನೋಡಿದ. ಕಳೆದ ವರ್ಷದಿಂದ ಸೋಶಿಯಲ್ ಸ್ಟಡೀಸ್ ಅವನ ಪರಮ ಶತ್ರುವಾಗಿ ಹೋಗಿತ್ತು. ಈ ಕ್ಲಾಸಿನಲ್ಲಿ ಬೇಗಮ್ ಮೇಡಂ ನಾಡಿಯನ್ನು ಅನೇಕ ಬಾರಿ ಹೊರಗೆ ಓಡಿಸಿದ್ದರು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಹೊರಗೇ ನಿಂತು ಪಠ್ಯಪುಸ್ತಕದ ಒಂದು ಅಧ್ಯಾಯವನ್ನು ಬರೆದು ಕ್ಲಾಸು ಮುಗಿಯುವ ಮುಂಚೆ ತೋರಿಸಬೇಕು ಎಂದು ಗದರಿಸುತ್ತಿದ್ದರು. ಟೆಸ್ಟುಗಳಲ್ಲಂತೂ ನಾಡಿಯದೇ ಮೇಲುಗೈ, ಕಡಿಮೆ ಮಾರ್ಕ್ಸ್ ತೊಗೊಳುವುದರಲ್ಲಿ. ರಿಪೋರ್ಟ್ ಕಾರ್ಡ್ನಲ್ಲಿ ಸೋಶಿಯಲ್ ಸ್ಟಡೀಸ್ ಒಂದರಲ್ಲೇ ಕೆಂಪು ಇನ್ಕ್ ಅನ್ನು ನೋಡಿ, ನಾಡಿಯ ಕಂಡರೆ ತುಂಬಾ ಅಕ್ಕರೆ ತೋರಿಸುವ ಕ್ಲಾಸ್ ಟೀಚರ್ ಪಾರ್ವತಿ ಮೇಡಂ ಕೂಡ “ಯಾಕೆ ನಾಡಿ?”, ಎಂದು ಕೇಳಿಬಿಟ್ಟಿದ್ದರು. ಇವೆಲ್ಲದರ ಮೇಲೆ, ಕಳೆದ ತಿಂಗಳು ಸೋಶಿಯಲ್ ಸ್ಟಡೀಸ್ ರಿವಿಶನ್ ಕ್ಲಾಸಿನಲ್ಲಿ ಬೇಗಮ್ ಮೇಡಂ, “who is going to come first this time in claaas? Is it Adi? Is it Trupti? Or…. is it Naadi?”, ಎಂದು ವ್ಯಂಗ್ಯವಾಗಿ ಕೇಳಿದಾಗ ಇಡೀ ಕ್ಲಾಸ್ ನಕ್ಕಿತ್ತು. ನಾಡಿ ಎಲ್ಲರಗಿಂತ ಜೋರಾಗಿ, “ಊ ಹಾ ಹಾ ಹಾ”, ಎಂದು ರಾವಣನ ಹಾಗೆ ನಕ್ಕಿದ್ದ. ಐದು ನಿಮಿಷಗಳ ನಂತರ ಹೊರಗೆ ಕುಳಿತು ಒಂದು ಅಧ್ಯಾಯವನ್ನು ಬರೆಯತೊಡಗಿದ. 

ಕಳೆದ ವಾರದ ಐದು ಪರೀಕ್ಷೆಗಳಲ್ಲಿ ನಾಡಿ ಸುಮಾರಾಗಿ ಮಾಡಿದ್ದ. ಆದರೆ ಈ ದರಿದ್ರ ಸೋಶಿಯಲ್ ಸ್ಟಡೀಸ್ ಅಲ್ಲಿ ಮಾತ್ರ ಅವನಿಗೆ ಸ್ವಲ್ಪವೂ ಭರವಸೆ ಇರಲ್ಲಿಲ್ಲ. ಪಠ್ಯಪುಸ್ತಕದ ಹತ್ತು ಅಧ್ಯಾಯಗಳಲ್ಲಿ ಆರನ್ನು ತಕ್ಕ ಮಟ್ಟಿಗೆ ಓದಿಕೊಂಡಿದ್ದ. ಈ ಆರು ಅಧ್ಯಾಯಗಳು ಅವನು ಮೇಡಂನಿಂದ ಹೊರಗೆ ಓಡಿಸಿಕೊಂಡಾಗ ಬರೆದ ಅಧ್ಯಾಯಗಳು. ಇನ್ನೂ ಒಂದೆರಡು ಚೇಷ್ಟೆ ಮಾಡಿ ಹೊರಗೆ ಓಡಿಸಿಕೊಂಡಿದ್ದರೆ, ಎಲ್ಲಾ ಅಧ್ಯಾಯಗಳನ್ನು ಬರೆದು, ನಾನೇ ಫಸ್ಟ್ ಬಂದ್ಬಿಡ್ಬೋದಾಗಿತ್ತು - ನಾಡಿ ಯೋಚಿಸಿ ಮೆಲ್ಲನ್ನೆ ನಕ್ಕಿದ.   

ಮುಂದಿನ ಅರ್ಧ ಘಂಟೆಯಲ್ಲಿ ನಾಡಿ ಪುಸ್ತಕದ ಪುಟಗಳನ್ನು ಒಮ್ಮೆ ಮೊದಲಿನಿಂದ ಕೊನೆಯವರೆಗೆ ಇಸ್ಪೀಟ್ ಕಾರ್ಡುಗಳಂತೆ ತಿರುಗಿಸಿ, ಅದರಲ್ಲೇ ಸ್ವಲ್ಪ ಹೊತ್ತು ಒಬ್ಬನೇ ಬುಕ್ ಕ್ರಿಕೆಟ್ ಆಡಿದ. ಇದಾದ ನಂತರ, ಸಾಯಂಕಾಲದಿಂದ ಓದಿ ಓದಿ ತಲೆ ಭರ್ತಿಯಾಗಿದೆ, ಈಗ ಓದು ಮುಂದುವರೆಸಿ ಪ್ರಯೋಜನವಿಲ್ಲ, ಎಂಬ ಆತ್ಮಜಾಗೃತಿಯ ಅರಿವಿನಿಂದ ಒಂದು ನಿರ್ಧಾರಕ್ಕೆ ಬಂದು, “ಅಮ್ಮಾ…. ಊಟ ಎಷ್ಟೊತ್ಗೆ?”, ಎಂದು ಕೂಗಿದ. 

ರುಚಿಕರವಾದ ತೊವ್ವೆ ಮತ್ತು ಟೊಮೇಟೊ ಸಾರನ್ನು ಹೊಟ್ಟೆ ತುಂಬ ಉಂಡ ಬಳಿಕ, “ಯಾಕೋ ತುಂಬಾ ನಿದ್ದೆ ಬರ್ತಾಯ್ದ್ಯಲ್ಲಾ”, ಎಂದು ನಾಡಿ ಯೋಚನೆ ಮಾಡುತ್ತಾ, ಕಣ್ಣನ್ನು ನಾಜೂಕಾಗಿ ಉಜ್ಜಿಕೊಂಡು, ಕಷ್ಟ ಪಟ್ಟು ಮೇಜಿನ ಮುಂದೆ ಮತ್ತೆ ಕುಳಿತ. ಬೇಗಮ್ ಮೇಡಂ ಇಂಡಿಯಾ ಮ್ಯಾಪ್ ಅನ್ನು ನೋಡಿಕೊಂಡು ಬನ್ನಿ, ಅದರ ಮೇಲೆ ಒಂದು ಪ್ರಶ್ನೆ ಬರಬಹುದು ಎಂದು ನಿಗೂಢವಾಗಿ ಹೇಳಿದ್ದು, ಇದ್ದಕ್ಕಿದ್ದಂತೆ ನಾಡಿಯ ನೆನಪಿಗೆ ಬಂತು. ಬ್ಯಾಗಿನಲ್ಲಿರುವ ಇಂಡಿಯಾ ಮ್ಯಾಪನ್ನು ನೋಡಲು ತನ್ನ ಪುಟ್ಟ ಕೋಣೆಗೆ ಹೋದ. ಬ್ಯಾಗು ಹಾಸಿಗೆ ಮೇಲಿತ್ತು. ಬ್ಯಾಗಿನಲ್ಲಿದ ಇಂಡಿಯಾ ಮ್ಯಾಪನ್ನು ತೆಗೆದು, ದಿಂಬನ್ನು ಉದ್ದವಾಗಿ ಇಟ್ಟುಕೊಂಡು, ಅದರ ಮೇಲೆ ವರಗಿಕೊಂಡ. ಮ್ಯಾಪನ್ನು ಮುಖಕ್ಕೆ ನೇರವಾಗಿ ಹಿಡಿದು ಇಪ್ಪತ್ತು ನಿಮಿಷ ಅದನ್ನು ದಿಟ್ಟಿಸಿ ನೋಡಿದ. ನಂತರ ಮ್ಯಾಪ್ ಅನ್ನು ಪಕ್ಕಕ್ಕೆ ಇಟ್ಟು, ದೀಪ ಆರಿಸಿ ಮಲಗಿಕೊಂಡ. 

ಎಲ್ಲೋ ದೂರದಲ್ಲಿ ಸುಬ್ಬಲಕ್ಷ್ಮಿಯವರ ಸುಪ್ರಭಾತ ಕೇಳಿಸುತ್ತಿತ್ತು. ನಾಡಿ ನಿಧಾನವಾಗಿ ಕಣ್ತೆರೆದ. ಮೇಲಿದ್ದ ಫ್ಯಾನು ಕರ್ ಕರ್ ಎಂದು ಸದ್ದು ಮಾಡುತ್ತಾ ಸುತ್ತುತ್ತಿತ್ತು. ಫ್ಯಾನಿಗೆ ಮೂರು ಬ್ಲೇಡುಗಳೋ, ನಾಲ್ಕು ಬ್ಲೇಡುಗಳೋ? ನಾಡಿಗೆ ಇದ್ದಕ್ಕಿದ್ದಂತೆ ಸಂದೇಹ ಶುರುವಾಯಿತು. “ನಾಡಿ ಎದ್ದೇಳು. ಆಟೋ ಇನ್ ಇಪತ್ ನಿಮ್ಷಕ್ಕೆ ಬರುತ್ತೆ”, ಅಮ್ಮ ಎಲ್ಲೋ ದೂರದಲ್ಲಿ ನಾಡಿ ಎಂಬುವವರ ಜೊತೆ ಮಾತಾಡುತ್ತಿರುವುದು ಅವನ ಕಿವಿಗೆ ಬಿದ್ದಿತು. ಮುಸ್ಕ ತೆಗೆದು ಚಟ್ಟನೆ ಎದ್ದು ಕುಳಿತ. ಸುತ್ತಾ ಮುತ್ತಾ ನೋಡಿದ. ಅಮ್ಮ ಕೆಳಗೆ ಬಿದ್ದಿದ್ದ ಇಂಡಿಯಾ ಮ್ಯಾಪ್ ಅನ್ನು ಎತ್ತಿಡುತ್ತಿದ್ದರು. ನಾಡಿ ತಕ್ಷಣ ಬೆವೆತುಕೊಂಡ. ಇವತ್ತು ಸೋಶಿಯಲ್ ಸ್ಟಡೀಸ್ ಪರೀಕ್ಷೆ ಎಂಬ ಕಟೋರ ಸತ್ಯ ಅವನಿಗೆ ಭಾಸವಾಯಿತು. ಧಡ ಬಡ ಮಾಡಿಕೊಂಡು ಬಚ್ಚಲಿಗೆ ಹೋಗಿ ಕನ್ನಡಿಯಲ್ಲಿ ಮುಖ ನೋಡಿಕೊಂಡ. ಮಲಗಿದ್ದರಿಂದ ತಲೆ ಕೂದಲು ಸ್ಪೈಕ್ ಕೇಶವಿನ್ಯಾಸವಾಗಿ ಪರಿವರ್ತನೆಗೊಂಡಿತ್ತು. ಕೂದಲನ್ನು ಇನ್ನೂ ಸ್ವಲ್ಪ ಕೆದರಿಕೊಂಡ. “ನಾಡಿ ಏನ್ ಮಾಡ್ತಿದ್ಯ ಅಲ್ಲಿ? ಬೇಗ್ ರೆಡಿ ಆಗೋ!”, ಅಮ್ಮ ಬಚ್ಚಲಿನ ಬಾಗಿಲನ್ನು ತಟ್ಟಿದರು. ನಾಡಿ ಶೌಚಾಲಯದ ಕಾರ್ಯಗಳನ್ನೆಲ್ಲಾ ಮುಗಿಸಿ, ಅರ್ಧ ತಂಬ್ಗೆ ಸ್ನಾನ ಮಾಡಿ, ಅಪರೂಪಕ್ಕೆ ದೇವರ ಮನೆಗೆ ಹೋದ. ಅಣ್ಣ ಅಲ್ಲಿ ಪೂಜೆ ಮಾಡುತ್ತಿದ್ದರು. ಅವರ ಕೈಯಲ್ಲಿ ತುಳಸಿ ಎಲೆಗಳನ್ನು ತೆಗೆದುಕೊಂಡು ಕುಂಕುಮ ಹಚ್ಚಿಸಿಕೊಂಡ. ನಂತರ ತಿಂಡಿಗೆ ಕೂತು, ಕಳ್ಳನ ಹಾಗೆ ತನ್ನ ಮೇಜಿನ ಕಡೆ ನೋಡಿದ. ಸೋಶಿಯಲ್ ಸ್ಟಡೀಸ್ ಪುಸ್ತಕ ಅವನನ್ನು ಗುಮ್ಮನ ಹಾಗೆ ವಾಪಸ್ಸು ನೋಡಿ “ಗುರರ್” ಎಂದಿತು. ಸರಕ್ಕನೆ ಕಣ್ಣುಗಳನ್ನು ದೋಸೆಯ ಕಡೆ ಸೆಳೆದು, ಒಂದು ದೋಸೆಯ ತುಂಡನ್ನು ಒಳಗೆ ತುರುಕಿಕೊಂಡ. “ನಿಧಾನಕ್ಕೆ ತಿನ್ನು”, ಅಮ್ಮ ಆಕ್ಷೇಪಿಸಿದರು. ಅದೇ ಸಮಯಕ್ಕೆ ಹೊರಗೆ ಆಟೋವಿನ ಪಾಮ್ ಪಾಮ್ ಶಬ್ದ ಕೇಳಿಸಿತು. “ಬೇಗ್ ತಿನ್ನು ಬೇಗ್ ತಿನ್ನು”, ಅಮ್ಮ ನಾಡಿಗೆ ಅವಸರ ಮಾಡಿದರು. ನಾಡಿ ಇನ್ನೂ ದೋಸೆಯನ್ನು ಅಗಿಯುತ್ತಲೇ ಸಿಂಕಿನಲ್ಲಿ ಕೈ ತೊಳೆದಕೊಂಡ. ತನ್ನ ಎಕ್ಸಾಮ್ ಬ್ಯಾಗನ್ನು ತೆಗೆದುಕೊಂಡು ಗೇಟಿನ್ನತ್ತ ಓಡಿದ. ಅಮ್ಮ ಅವನ್ನನ್ನು ಹಿಂಬಾಲಿಸಿದರು. “ಬರ್ತಾ ಅಣ್ಣ ಕರ್ಕೊಂಡು ಬರ್ತಾರೆ! ಕೊಚ್ಚ ಪಿಚ್ಚಿ ಬರಿಬೇಡ ಆಯ್ತಾ? ಎಕ್ಸಾಮ್ ಮುಗ್ಸೋದಕ್ಕೆ ಅರ್ಜೆಂಟ್ ಮಾಡ್ಕೋಬೇಡ ಆಯ್ತಾ?”, ಅಮ್ಮ ಕೊನೆ ಗಳಿಗೆಯ ಮಾಹಿತಿ ಮತ್ತು ಸಲಹೆಗಳನ್ನು ನಾಡಿಯಲ್ಲಿ ತುಂಬಿದರು. ನಾಡಿ, “ಹೂಂ ಹೂಂ”, ಎಂದುಕೊಂಡು ಆಟೋ ಮಾಮನ ಪಕ್ಕ ಕುಳಿತುಕೊಳ್ಳುವಷ್ಟರಲ್ಲಿ ಆಟೋ ಮುಂದೆ ಚಲಿಸತೊಡಗಿತು.  

ನಾಡಿ ಎಕ್ಸಾಮ್ ಹಾಲಿಗೆ ಬರುವಷ್ಟರಲ್ಲಿ ಪರೀಕ್ಷೆ ಆಗತಾನೆ ಪ್ರಾರಂಭವಾಗಿತ್ತು. ಆತಂಕದಿಂದ ಬೆವರು ವರೆಸಿಕೊಳ್ಳುತ್ತಾ ಪ್ರಶ್ನೆ ಪತ್ರಿಕೆಯನ್ನು ಶಿಕ್ಷಕರಿಂದ ತೆಗೆದುಕೊಂಡು, ತನ್ನ ನಿಯಮಿತ ಬೆಂಚಿನಲ್ಲಿ ಕುಳಿತ. ಉತ್ತರ ಪತ್ರಿಕೆಯಲ್ಲಿ ಮೊದಲು ದಿನಾಂಕ ಬರೆದ: ೧೫/೦೩/೧೯೯೯. ನಂತರ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಕಣ್ಣಿಗೆ ಒತ್ತಿಕೊಂಡು, ತನಗೆ ಬರುವ ಒಂದು ಸ್ತೋತ್ರವನ್ನೇ ಮೂರು ಸಲ ಮನಸಿನ್ನಲ್ಲೇ ಹೇಳಿ, ನಿಧಾನವಾಗಿ ಪ್ರಶ್ನೆಗಳನ್ನು ಓದಿದ. ಪ್ರಶ್ನೆಪತ್ರಿಕೆಯಲ್ಲಿ ಮೂರು ಭಾಗಗಳಿದ್ದವು: ಸಿವಿಕ್ಸ್, ಹಿಸ್ಟರಿ, ಮತ್ತು ಜಿಯಾಗ್ರಫಿ. ಸಿವಿಕ್ಸ್ ಭಾಗದಿಂದ ಉತ್ತರಿಸಲು ಆರಂಭಿಸಿದ. ಈ ಭಾಗದ ಮೊದಲ ಪ್ರಶ್ನೆ: ಭಾರತದಲ್ಲಿ ಒಟ್ಟು ಎಷ್ಟು ರಾಜ್ಯಗಳಿವೆ? ನಾಡಿ ಒಳಗೊಳಗೆ ನಕ್ಕಿದ. “ಹ ಹ, ಎಂತ ಸರಳ ಪ್ರಶ್ನೆ, ಹ ಹ”, ಎಂದುಕೊಂಡು ಉತ್ತರ ಬರೆಯಲು ಮುಂದಾದ: ಇಪತ್ತು ಏಳು. ಉತ್ತರ ಬರೆದು ಒಮ್ಮೆ ತಲೆ ಎತ್ತಿ ಯೋಚಿಸಿದ, “ಇಪತ್ತು ಏಳೋ, ಇಪತ್ತು ಎಂಟೋ?”. ಹತ್ತು ನಿಮಿಷ ಇಪ್ಪತ್ತಿರಿಂದ ಮೂವತ್ತಿನ ನಡುವಿನ ಎಲ್ಲಾ ಸಂಖ್ಯೆಗಳ ಬಗ್ಗೆ ಗಂಭೀರವಾಗಿ ಯೋಚಿಸಿ, ಮುಂದಿನ ಪ್ರಶ್ನೆಗೆ ಹೋಗುವುದೇ ಸೂಕ್ತ ಎಂಬ ಭೌದ್ಧಿಕ ನಿರ್ಧಾರಕ್ಕೆ ಬಂದ. ಈ ಮೊದಲ ಗೊಂದಲದಿಂದ ನಾಡಿಯ ಎಕ್ಸಾಮ್ ಮೇಲಿನ ವಿಶ್ವಾಸ ಸ್ವಲ್ಪ ಕುಗ್ಗಿತು. ಮುಂದಿನ ಪ್ರಶ್ನೆ ಫಿಲ್ ಅಪ್ ದಿ ಬ್ಲಾಂಕ್ ಆಗಿತ್ತು: ಭಾರತದ ರಾಷ್ಟ್ರಪತಿ ಪದವಿಯ ಅವಧಿ ಡ್ಯಾಶ್ ವರ್ಷ. ನಾಡಿ ಈ ಬಾರಿ ಸ್ವಲ್ಪ ಕಡಿಮೆ ಹುಮ್ಮಸ್ಸಿನಿಂದ, “ಹ ಸರಳ ಪ್ರಶ್ನೆ”, ಎಂದುಕೊಂದು ೫ ಎಂದು ಡ್ಯಾಶ್ ನಲ್ಲಿ ತುಂಬಿದ. ತುಂಬಿ ಯೋಚಿಸಿದ, “ಹೇ ಒಂದ್ ನಿಮ್ಷ. ಯಾವ್ದಕ್ಕೋ ಉತ್ತರ ೪ ಇತ್ತಲ್ವ? ಪ್ರಧಾನಿ ಪದವಿಯದು ಐದು ಇರಬಹುದು. ರಾಷ್ಟ್ರಪತಿಗೆ ನಾಲ್ಕೋ, ಐದೋ?”. ನಾಡಿಗೆ ಸ್ವಲ್ಪ ಆತಂಕ ಪ್ರಾರಂಭವಾಯಿತು. ಮುಂದಿನ ಪ್ರಶ್ನೆಗಳನ್ನು ನೋಡಿದ. ಮುಂದಿನ ಸಿವಿಕ್ಸ್ ಪ್ರಶ್ನೆಗಳು ದೀರ್ಘ ಉತ್ತರಗಳನ್ನು ಬೇಡಿದವು. ನಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟ. ತಾನು ಈ ಉತ್ತರಗಳನ್ನು ಅಕ್ಷರಶಃ ಕಂಠ ಪಾಠ ಮಾಡಿದ್ದರಿಂದ, ಚಾಚೂ ತಪ್ಪದೆ ಆ ಉತ್ತರಗಳನ್ನು ಉತ್ತರ ಪತ್ರಿಕೆಯಲ್ಲಿ ಇಳಿಸಿದ. 

ಸಿವಿಕ್ಸ್ ಉತ್ತರಗಳನ್ನು ಬರೆದು ಮುಗಿಸಿದ ನಾಡಿಗೆ ಸ್ವಲ್ಪ ಆಯಾಸವಾಗಿತ್ತು. ಹಿಂದೆ ವರಗಿಕೊಂಡು, “ಉಫ್ ಅಪ್ಪಾ…. ”, ಎಂದು ದೀರ್ಘ ಆಲಾಪನೆ ಹೊರಡಿಸಿದ. ಒಂದೆರಡು ಬಾರಿ ಎಲ್ಲರಿಗೂ ಕೇಳಿಸುವಂತೆ ನೆಟ್ಟಿಗೆ ಮುರಿದು, ತನ್ನ ಕ್ರಿಕೆಟ್ ಹೀರೋ ದ್ರಾವಿಡ್ ನಂತೆ ಭುಜಗಳನ್ನು ಒಮ್ಮೆ ಕುಲುಕಿ ಕತ್ತನ್ನು ವೃತ್ತಾಕಾರವಾಗಿ ತಿರುಗಿಸಿದ. ನಂತರ ತನ್ನ ಸುತ್ತ ಮುತ್ತಲಿನವರನ್ನು ಒಮ್ಮೆ ಗಮನಿಸಿದ. ಎಡಗಡೆಯಲ್ಲಿ ಪಕ್ಕದಲ್ಲ ಪಕ್ಕದ ಸಾಲಿನಲ್ಲಿ ಕೂತಿದ್ದ “ಬೆಸ್ಟ್ ಫ್ರೆಂಡ್” ಪೊನ್ನು, ಹಿಂದೆ ವರಗಿಕೊಂಡು, ಎರಡೂ ಕೈಯಗಳನ್ನು ತಲೆಯ ಮೇಲೆ ಜೋಡಿಸಿ, ಮಂಕು ಕವಿದವರ ಹಾಗೆ ಮುಂದೆಯೇ ನೋಡುತ್ತಾ ಕುಳಿತ್ತಿದ್ದ. ನಾಡಿ ತನ್ನ ನಟರಾಜ್ ಪೆನ್ಸಿಲ್ ನನ್ನು ಮೂರು ಬಾರಿ ಮೇಜಿನ ಮೇಲೆ ತಟ್ಟಿದ. ಈ ಗುಪ್ತ ಸಂದೇಶವನ್ನು ಗ್ರಹಿಸಿದ ಪೊನ್ನು, ನೆಟ್ಟಗೆ ಎದ್ದು ಕುಳಿತು, ನಾಡಿಯ ಕಡೆ ನೋಡಿ, ಪ್ರಶ್ನೆ ಪತ್ರಿಕೆಗೆ “ಶಂಭೋ” ಎಂಬುವಂತೆ ಕೈ ಮುಗಿದ. ನಾಡಿ ಮೆದುವಾಗಿ ನಕ್ಕಿದ. ನಂತರ ಮುಂದೆ ಕೂತಿದ್ದ ಕ್ಲಾಸ್ ಲೀಡರ್ಸ್ ಆದ ಆದಿ ಮತ್ತು ತ್ರುಪ್ತಿಯರ ಕಡೆ ನೋಡಿದ. ಇಬ್ಬರೂ ಪೆನ್ಸಿಲ್ ಪೇಪರ್ ಸೇರಿ ಇನ್ನೇನು ಕಿಚ್ಚು ಹಚ್ಚಿಕೊಳ್ಳುವುದೇನೋ ಎಂಬಂತೆ ರಭಸದಿಂದ ಬರೆಯುತ್ತಿದ್ದರು. ನಾಡಿ ವಾಪಸ್ಸು ತನ್ನ ಉತ್ತರ ಪತ್ರಿಕೆ ಎಡೆಗೆ ಕಣ್ಣು ಸೆಳೆದ.  

ಸಿವಿಕ್ಸ್ ನಂತರದ ಭಾಗ ಇತಿಹಾಸ. ಇತಿಹಾಸದ ಮೊದಲ ಪ್ರಶ್ನೆ: ಮುಘಲ್ ಚಕ್ರವರ್ತಿ ಜಹಂಗೀರ್ ಭಾಗವಹಿಸಿದ ಪ್ರಮುಖ ಯುದ್ಧಗಳ ಬಗ್ಗೆ ಬರೆಯಿರಿ (೫ ಮಾರ್ಕ್). ನಾಡಿ ಪ್ರಶ್ನೆಯನ್ನೇ ನೋಡುತ್ತಾ ಪಿಳಿಪಿಳಿ ಕಣ್ಣು ಮಿಟುಕಿಸಿದ. “ಈ ಜಹಂಗೀರ್ ಗೆ ಬೇರೆ ಏನು ಕೆಲ್ಸ ಇರ್ಲಿಲ್ವ? ಆರಾಮಕ್ಕೆ ಅರಮನೇಲಿ ಮಜ ಮಾಡ್ಕೊಂಡು ಇರೋದು ಬಿಟ್ಟು, ಯುದ್ಧ ಗಿದ್ದ ಅಂತ ಹೋಗಿ ಈಗ ನಮ್ ತಲೆ ತಿಂತಾಯ್ದಾನ್ನಲ್ಲಾ”, ಅಂದುಕೊಂಡ ನಾಡಿ. ಜಹಂಗೀರ್ ಬಗ್ಗೆ ಯೋಚನೆ ಮಾಡುತ್ತಾ ಮಾಡುತ್ತಾ ನಾಡಿಗೆ ಸ್ವಲ್ಪ ಹಸಿವು ಶುರುವಾಯಿತು. “ಮನೆಗೆ ಹೋದ್ಮೇಲೆ ಅಮ್ಮಂಗೆ ಜಹಂಗೀರ್ ಮಾಡೋಕೆ ಹೇಳ್ಬೇಕು”, ಎಂದು ಮನಸ್ಸಿನಲ್ಲಿ ನಿರ್ಣಯಿಸಿ ಇತಿಹಾಸದ ಉತ್ತರಗಳನ್ನು ಬರೆಯುವ ಸಾಹಾಸಕ್ಕೆ ಮುಂದಾದ.

ಇತಿಹಾಸ ಭಾಗವನ್ನು ಮುಗಿಸುವ ಹೊತ್ತಿಗೆ ಸೋಶಿಯಲ್ ಸ್ಟಡೀಸ್ ಟೀಚರ್ ಬೇಗಮ್ ಮೇಡಂ ಪರೀಕ್ಷೆಯ ಬಗ್ಗೆ ವಿಚಾರಿಸಲು ಎಕ್ಸಾಮ್ ಹಾಲ್ ಗೆ ಬಂದರು. ನಾಡಿ ಬೇಗಮ್ ರನ್ನೇ ದಿಟ್ಟಿಸಿ ನೋಡಿದ. ಅವರ ರೂಪದಲ್ಲಿ ಏನೋ ಬದಲಾವಣೆ ಕಾಣುತ್ತಿತ್ತು. ಅವರ ಗುಂಗುರು ಕೂದಲಲ್ಲಿ ಸಾಮಾನ್ಯವಾಗಿ ಸಾಕಷ್ಟು ಬಿಳಿ ಕೂದಲು ಕಾಣಿಸುತ್ತಿದ್ದವು. ಆದರೆ ಈ ಬಾರಿ ಅವರ ಕೂದಲು ಇಜ್ಜಿಲಿನಷ್ಟು ಕಪ್ಪಾಗಿ ಕಾಣುತ್ತಿತ್ತು. “ಇದು ಹೇಗೆ ಸಾಧ್ಯ? ಏನಿದು ಮರ್ಮ?”, ನಾಡಿಯಲ್ಲಿ ಅನಿಯಂತ್ರಿತ ಕುತೂಹಲ ಹುಟ್ಟಿತು. “Is everything ok childreeen? Any questions?”, ಎಂದು ಬೇಗಮ್ ಕೇಳಿದರು. ನಾಡಿ ಅವರ ಕೂದಲಿನ ಬಗ್ಗೆ ಕೇಳುವುದೋ ಬೇಡವೋ ಎಂದು ನಿರ್ಧರಿಸುವಷ್ಟರಲ್ಲಿ, ಬೇಗಮ್ ಮುಂದಿನ ರೂಮಿಗೆ ಹೊರಟಿದ್ದರು. 

ಪ್ರಶ್ನೆ ಪತ್ರಿಕೆಯ ಕೊನೆಯ ಭಾಗ ಜಿಯಾಗ್ರಫಿ. ಇದರಲ್ಲಿ ಇದ್ದುದ್ದು ಹತ್ತು ಮಾರ್ಕಿನ ಒಂದೇ ಪ್ರಶ್ನೆ: ವಿಶ್ವದ ವಿವಿಧ ಖಂಡಗಳ ಸಸ್ಯವರ್ಗ ಮತ್ತು ಪ್ರಾಣಿವರ್ಗದ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ. “ಸಂಕ್ಷಿಪ್ತ ಬೇರೆ”, ನಾಡಿ ಪ್ರಶ್ನೆಯನ್ನು ನೋಡಿ ನಕ್ಕಿದ. “ನಮ್ಮ ಮನೆಯ ತೋಟದ ಸಸ್ಯವರ್ಗದ ಬಗ್ಗೆಯೇ ಸರಿಯಾಗಿ ಗೊತ್ತಿರದ ನಾನು, ಖಂಡಗಳ ವಿಷಯಕ್ಕೆ ಹೇಗೆ ಹೋಗಲಿ?”, ತನ್ನನ್ನೇ ಪ್ರಶ್ನಿಸಿಕೊಂಡ ನಾಡಿ. ಪ್ರಾಣಿವರ್ಗದ ಬಗ್ಗೆ ಆದರೂ ಬರೆಯೋಣ ಎಂದು ತನಗೆ ಗೊತ್ತಿರುವ ವಿವಿಧ ಪ್ರಾಣಿಗಳ ಬಗ್ಗೆ ಯೋಚಿಸಿದ. ಯೋಚಿಸುತ್ತಾ ಯೋಚಿಸುತ್ತಾ ನಾಡಿಯ ಮೆದುಳು ಯಾಕೊ ಸ್ವಲ್ಪ ಮಂಕಾಗಲು ಶುರುವಾಯಿತು. ತನ್ನ ಮನೆಬೀದಿ ಕೊನೆಯಲ್ಲಿ ಸದಾ ಕಾಲ ಮಲಗಿರುವ ಎಲ್ಲಾ ಮಕ್ಕಳ ಪ್ರೀತಿಯ ನಾಯಿಮರಿಯಾದ ಡುಂಡುಂ ಬಿಟ್ಟರೆ, ನಾಡಿಗೆ ಮತ್ಯಾವ ಪ್ರಾಣಿಯೂ ಸದ್ಯಕ್ಕೆ ತಲೆಗೆ ಬರಲಿಲ್ಲ. ಪಠ್ಯಪುಸ್ತಕದಲ್ಲಿ ಓದಿದ್ದ ಪ್ರಾಣಿಗಳೆಲ್ಲಾ ಇದ್ದಕ್ಕಿದ್ದಂತೆ ಪರಾರಿಯಾದವು. ನಾಡಿ ತನ್ನ ಸ್ನೇಹಿತ ಪೊನ್ನುವಿನ ಕಡೆ ನೋಡಿದ. ಪೊನ್ನು ಉತ್ತರ ಪತ್ರಿಕೆಯನ್ನು ಪಕ್ಕಕ್ಕೆ ಇಟ್ಟು, ತಲೆಯನ್ನು ಬೆಂಚಿನ ಮೇಲಿರಿಸಿ, ಡುಂಡುಂ ಹಾಗೆ ಬೆಚ್ಚಗೆ ಮಲಗಿಕೊಂಡಿದ್ದ. ಆದಿ ಮತ್ತು ತೃಪ್ತಿ ಎಲ್ಲಾ ಉತ್ತರಗಳನ್ನು ಮುಗಿಸಿ ಪುನರಾವರ್ತನೆ ಮಾಡುತ್ತಿದ್ದರು. ನಾಡಿ ತಾನು ಪ್ರಯತ್ನಿಸಿದ ಉತ್ತರಗಳು ಒಟ್ಟು ಎಷ್ಟು ಮಾರ್ಕುಗಳ ಮೌಲ್ಯ ಎಂದು ಲೆಕ್ಕ ಹಾಕಿದ. ಕಡಿಮೆ ಎಂದರೆ ಅರವತ್ತು ಮಾರ್ಕು ಬರಬಹುದು ಎಂದು ಊಹಿಸಿದ. “ಪಾಸ್ ಆಗೋಕೆ ಬರ್ದೀರೋಷ್ಟು ಸಾಕು”, ಎಂದುಕೊಂಡು ಕೊನೆಯ ಪ್ರಶ್ನೆಯನ್ನು ಉತ್ತರಿಸದೆ ಹಾಗೇ ಬಿಟ್ಟನು. 

ಎಕ್ಸಾಮ್ ಮುಗಿಯುವುದಕ್ಕೆ ಇನ್ನು ಅರ್ಧ ಘಂಟೆ ಇತ್ತು. ಹೊರಡುವ ಮುಂಚೆ ಒಂದು ಸಲ ಎಲ್ಲಾ ಉತ್ತರಗಳನ್ನು ಓದಿಬಿಡೋಣ ಎಂದು ನಾಡಿ ನಿರ್ಧರಿಸಿದ. ಮೊದಲ ಪ್ರಶ್ನೆಯ ತನ್ನ ಉತ್ತರವನ್ನು ಓದಲು ಆರಂಭಿಸಿದ. ಅದೇ ಸಮಯಕ್ಕೆ ಹೊರಗೆ ಕೆಲವು ಹುಡುಗರು ಎಕ್ಸಾಮ್ ಮುಗಿಸಿ ಮಾತಾಡಿಕೊಂಡು ಹೋಗುತ್ತಿದ್ದ ಸದ್ದು ಕೇಳಿಸಿತು. ನಾಡಿ ಕಿಟಕಿಯ ಕಡೆ ನೋಡಿದ. ಹೊರಗೆ ಸೂರ್ಯ ಪೂರ್ಣ ಹುಮ್ಮಸ್ಸಿನಿಂದ ಹೊಳೆಯುತ್ತಿದ್ದ. ಹಸಿರು ಮರಗಳಿಂದ ಸುತ್ತುವರೆದ ಶಾಲೆಯ ಮೈದಾನ ಸೂರ್ಯನ ಕಿರಣಗಳಿಂದ ಸುವರ್ಣ ಸರೋವರದಂತೆ ಕಾಣುತ್ತಿತ್ತು. ವರ್ಷದ ಕೊನೆಯ ಎಕ್ಸಾಮ್ ಮುಗಿದ ನಂತರದ ಆಶಾವಾದದ ಗಾಳಿ ನಾಡಿಯ ಕಡೆ ಬೀಸಿತು.

ಮುಂದಿನ ಬೆಂಚಿನಲ್ಲಿ ಕುಳಿತ ಕ್ಲಾಸ್ ನಾಯಕ ಆದಿ, ಎಲ್ಲರಗಿಂತ ಮೊದಲು ಪರೀಕ್ಷೆಯನ್ನು ಮುಗಿಸಿ ಶಿಕ್ಷಕರಿಗೆ ಉತ್ತರ ಪತ್ರಿಕೆಯನ್ನು ನೀಡಿದ. ಇದನ್ನು ನೋಡಿದ ನಾಡಿಗೆ ಅಂತಃಪ್ರಜ್ಞೆಯ ಒಂದು ಪ್ರಬಲ ಸಂದೇಶ ಕೇಳಿಸಿತು, “ಎಲೈ ನಾಡಿ! ಬಿಡು ಈ ನಿನ್ನ ಎಕ್ಸಾಮ್ ಮೇಲಿನ ವ್ಯಾಮೋಹ. ನಿನ್ನ ಕರ್ತವ್ಯ ಎಕ್ಸಾಮ್ ಬರೆದು ಮುಗಿಸಿದ ನಂತರ ಮುಗಿಯಿತು. ಪರೀಕ್ಷೆಯ ಫಲದ ಮೇಲೆ ನಿನ್ನ ಹಕ್ಕು ಇಲ್ಲ. ಎಕ್ಸಾಮ್ ಈಗ ಮುಗಿಸಿ ಆತ್ಮಾನಂದದ ಹಾದಿಯನ್ನು ಹಿಡಿ!”. ನಾಡಿ ಅಲೌಕಿಕ ಸುಖವನ್ನು ಪ್ರತಿಬಿಂಬಿಸುವ ಒಂದು ನಗೆಯನ್ನು ಮೆಲ್ಲನ್ನೇ ನಕ್ಕಿ, ಪುನರಾವರ್ತನೆಯನ್ನು ಮಧ್ಯದಲ್ಲೇ ನಿಲ್ಲಿಸಿದ.  ಉತ್ತರ ಪತ್ರಿಕೆಯನ್ನು ಶಾಂತವಾಗಿ ಕ್ರಮಪಡಿಸಿ ಅದನ್ನು ಶಿಕ್ಷಕರಿಗೆ ನೀಡಿದ. ಎಕ್ಸಾಮ್ ಹಾಲ್ ನಿಂದ ಹೊರಬಂದ ನಾಡಿಯ ಹೆಜ್ಜೆಯಲ್ಲಿ ಒಂದು ಹೊಸ ಚೈತನ್ಯ ತುಂಬಿತ್ತು. ಪರೀಕ್ಷೆ ತಾನು ಊಹಿಸಿದ್ದಕ್ಕಿಂತ ಚೆನ್ನಾಗಿಯೇ ಆಗಿತ್ತು. ಇವತ್ತು ಸಂಜೆ ಅಜ್ಜಿ ಮನೆಗೆ ಹೋಗಲು ಬೆಂಗಳೂರಿಗೆ ಪಯಣ! ನಂತರ ಒಂದು ವಾರ ಚಿಕ್ಕಮ್ಮನ ಮನೆಯಲ್ಲಿ ಪ್ರಾಣೇಶನ ಜೊತೆ ಕ್ರಿಕೆಟ್ ಮತ್ತು ಐಸ್ಪೈಸ್ ಆಟ, ಅದಾದ ಮೇಲೆ ಚಿಕ್ಕಮಗಳೂರಿನಲ್ಲಿ ರಶ್ಮಿ ಅಕ್ಕನ ಮದುವೆ, ಆಮೇಲೆ....... ಪಂಜರದಿಂದ ಬಿಡುಗಡೆಯಾದ ಗುಬ್ಬಚ್ಚಿಯಂತೆ ಇನ್ನೇನು ಹಾರಿಕೊಂಡೇ ಮನೆಗೆ ಹೋಗುವಷ್ಟು ನಾಡಿಗೆ ಖುಷಿಯಾಗಿತ್ತು. ಬೇಗನೆ ಓಡಿ ಶಾಲೆಯ ಕಟ್ಟಡದಿಂದ ಹೊರಬಂದ. 

ಎಕ್ಸಾಮ್ ಇನ್ನೂ ನಡೆಯುತ್ತಿದ್ದರಿಂದ, ಹೊರಗಡೆ ಹೆಚ್ಚು ವಿದ್ಯಾರ್ಥಿಗಳಿರಲಿಲ್ಲ. ಸ್ವಲ್ಪ ದೂರದಲ್ಲಿ ಕ್ಲಾಸ್ ಲೀಡರ್ ಆದಿ ಒಬ್ಬನೇ ಮೈದಾನದ ಒಂದು ಪುಟ್ಟ ಬಂಡೆಯ ಮೇಲೆ ಕುಳಿತು ತನ್ನ ಆಟೋಗಾಗಿ ಕಾಯುತ್ತಿದ್ದ. ನಾಡಿ ಹೋಗಿ ಆದಿ ಕುಳಿತ್ತಿದ್ದ ಪಕ್ಕದ ಕಿರುಬಂಡೆಯಲ್ಲಿ ಕುಳಿತನು. ಆದಿ ನೋಡುವುದಕ್ಕೆ ಫೋಟೋಗಳಲ್ಲಿ ಕಾಣಿಸುವ ಗೌತಮ ಬುಧ್ಧನ ಹಾಗೆ ಇದ್ದ. ಅದೇ ಮುಖಲಕ್ಷಣ, ಅದೇ ಶಾಂತ ಮನೋಭಾವ. ಇಬ್ಬರೂ ಸ್ವಲ್ಪ ಹೊತ್ತು ಸುಮ್ಮನೆ ಕುಳಿತರು. 

ನಾಡಿ ಮೊದಲು ಮಾತಾಡಿದ, “ಹೇಗೆ ಮಾಡ್ದಿ ಆದಿ?”. ಆದಿ ಪ್ರಶ್ನೆಯ ಬಗ್ಗೆ ಸ್ವಲ್ಪ ಅವಲೋಕಿಸಿ ನಿಧಾನವಾಗಿ ಉತ್ತರಿಸಿದ, “ಪರವಾಗಿಲ್ಲ. ಸಿವಿಕ್ಸ್ ಮತ್ತೆ ಹಿಸ್ಟರಿ ಸ್ವಲ್ಪ ಕಷ್ಟ ಎನಿಸಿತು”, ಒಂದು ಬಾರಿ ವಿರಾಮಿಸಿ ಮುಂದುವರೆದ, “ಜಿಯಾಗ್ರಫಿ ತುಂಬಾ ಟೈಮ್ ತೊಗೋತು. ಇಂಡಿಯಾ ಮ್ಯಾಪ್ ಪ್ರಶ್ನೆ ಸುಲಭವಾದ್ದರಿಂದ ಸಲೀಸಾಗಿ ಹತ್ತು ಮಾರ್ಕ್ಸ್ ಗಳಿಸಬಹುದಾಗಿತ್ತು”. ನಾಡಿ ಸ್ವಲ್ಪ ಗೊಂದಲದಿಂದ, “ಇಂಡಿಯಾ ಮ್ಯಾಪ್ ಬಗ್ಗೆ ಕೇಳಿರ್ಲಿಲ್ವಲ್ಲಾ. ಪ್ರಶ್ನೆಪತ್ರಿಕೆ ಇದ್ದಿದ್ದು ಮೂರೇ ಪೇಜ್ ತಾನೆ?”, ಎಂದು ಕೇಳುತ್ತಲೇ ತನ್ನ ಬ್ಯಾಗ್ ಅನ್ನು ತೆಗೆದು ಪ್ರಶ್ನೆಪತ್ರಿಕೆಗಾಗಿ ಗಾಬರಿಯಿಂದ ಹುಡುಕಿದ. ಮಡಚಿ ಹೋದ ಪ್ರಶ್ನೆ ಪತ್ರಿಕೆಯನ್ನು ತೆಗೆದೇಟಿಗೆ ಆದಿ ಅದನ್ನು ಕಸಿದುಕೊಂಡು, “ಹಿಸ್ಟರಿಯ ಮೂರನೇ ಪ್ರಶ್ನೆಗೆ ಏನು ಉತ್ತರ ಬರ್ದಿ?”, ಎಂದು ಇದ್ದಕ್ಕಿದ್ದಂತೆ ಕೇಳಿದ. ಆದಿಯ ಈ ಆಕಸ್ಮಿಕ ಒರಟು ವರ್ತನೆಯಿಂದ ಸ್ವಲ್ಪ ಬೆರಗಾದ ನಾಡಿ, “ಆ…. ಇಬ್ರಾಹಿಂ ಲೋಧಿ”, ಎಂದ. ಆದಿ, “ಅಬ್ಬಾ… ಸರಿಯಾದ ಉತ್ತರ. ಅದರ ಬಗ್ಗೆ ಸ್ವಲ್ಪ ಡೌಟ್ ಇತ್ತು ನಂಗೆ”, ಎಂದು ನಿಟ್ಟುಸಿರು ಬಿಟ್ಟ. ನಾಡಿ ಪ್ರಶ್ನೆಪತ್ರಿಕೆಯನ್ನು ಹಿಂತೆಗೆದುಕೊಂಡು ಅದನ್ನು ತಿರುವಿ ನೋಡಿದ. ಇದ್ದಿದ್ದು ಮೂರೇ ಪೇಜು. “ಇಂಡಿಯಾ ಮ್ಯಾಪ್ ಪ್ರಶ್ನೆ ಇಲ್ವಲಾ?”, ನಾಡಿ ಆತಂಕದಿಂದ ಕೇಳಿದ. ಬೇರೇನೋ ಯೋಚಿಸುತ್ತಿದ್ದ ಆದಿ ಉತ್ತರಿಸಿದ, “ಹಾ? ಅಲ್ಲಾ, ಇಂಡಿಯಾ ಮ್ಯಾಪ್ ಬಗ್ಗೆ ಕೇಳಿದ್ರೆ ಹತ್ತು ಮಾರ್ಕ್ ಸಲೀಸಾಗಿ ಬರ್ತಾಯ್ತು ಅಂದೆ”. ನಿಮಿಷಾರ್ಧದಲ್ಲಿ ಮೋಡ ಕವಿದ ನಾಡಿಯ ಮುಖದಲ್ಲಿ ನಗುವಿನ ಕಿರಣ ಮರಳಿ ಬಂತು. ದೀರ್ಘ ಉಸಿರು ತೆಗೆದುಕೊಂಡು ಮುಂದೆ ತಿರುಗಿದ. ಎಲ್ಲೋ ದೂರದಲ್ಲಿ ಸ್ಕೂಟರ್ ಸದ್ದು ಕೇಳಿಸಿತು. ಇಬ್ಬರೂ ಹಿಂದೆ ತಿರುಗಿದರು. ಅಣ್ಣ ನಾಡಿಯನ್ನು ಕರೆದುಕೊಂಡು ಹೋಗಲು ಸ್ಕೂಟರ್ ನಲ್ಲಿ ಬಂದಿದ್ದರು. ನಾಡಿ ಆದಿಗೆ ವಿದಾಯ ಹೇಳಿ, “ಹ್ಯಾಪಿ ಹಾಲಿಡೇಸ್”, ಎಂದು ವಿಶ್ ಮಾಡಿ, ಅಣ್ಣ ಸ್ಕೂಟರ್ ನಿಲ್ಲಿಸಿ ಕಾಯುತ್ತಿದ್ದ ಜಾಗಕ್ಕೆ ನಗು ನಗುತ್ತಾ ಓಡಿ ಹೋದನು. ಸ್ಕೂಟರ್ನಲ್ಲಿ ಕುಳಿತ ನಂತರ ಅಣ್ಣ ಕಿಕ್ ಸ್ಟಾರ್ಟ್ ಮಾಡಿ, ಸ್ಕೂಟರ್ ಅನ್ನು ಮುಂದೆ ಚಲಿಸಿದರು. ಆದಿ ದೂರ ದೂರಕ್ಕೆ ಚಲಿಸುತ್ತಿದ್ದ ಸ್ಕೂಟರ್ ನ ನೋಡುತ್ತಾ ಕೈಯಲ್ಲಿದ್ದ ಹರಿದ ಪೇಜನ್ನು ತನ್ನ ಚೀಲದಲ್ಲಿ ಹಾಕಿಕೊಂಡನು.

Comments