ಶ್ರೀ ರಾಮನಾಗುವ ಸಂಕಟ 

ಶ್ರೀ ರಾಮನಾಗುವ ಸಂಕಟ 

ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನಿಜಕ್ಕೂ ಆಹ್ಲಾದಕರ ಅನುಭೂತಿ ತರುವ ಪೇಯಗಳು. ಆದರೆ ಬರಿ ಹೊಟ್ಟೆ ತಂಪಾದರೆ ಸಾಲದು, ಆಧ್ಯಾತ್ಮಿಕ ಹಸಿವಿಗೆ ತಂಪೆರೆವ ದೇವನ್ನಾಮ ಸ್ಮರಣೆಯೂ ಆಗಬೇಕಲ್ಲ ? ಶ್ರೀರಾಮ ನವಮಿಗೆ ಅವನ ಸ್ಮರಣೆಗಿಂತ ಮಿಗಿಲಾದದ್ದು ಏನಿದ್ದೀತು ಅನಿಸಿ ರಾಮನ ಬಾಲ್ಯದ, ಮದುವೆಯಾಗುವವರೆಗಿನ ರಾಮ ಕಥಾ ಸಾರವನ್ನು ಈ ಕೆಳಗಿನ ಪದ್ಯಗಳಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ. 'ಶ್ರೀ ರಾಮನಾಗಿ ಬದುಕುವ ಸಂಕಟ' ಅನ್ನುವ ತಲೆ ಬರಹದೊಂದಿಗೆ ಆರಂಭಿಸಿದ ಈ 'ಫ್ರೀಸ್ಟೈಲ್ ರಾಮಾಯಣ' ಕೊನೆಯತನಕ ಹೊರಟರೆ ತುಂಬಾ ಉದ್ದದ ಸರಕಾಗುವ ಕಾರಣ ಬರಿ ಹದಿನೈದು ಪಂಕ್ತಿಗೆ ನಿಲ್ಲಿಸಿದ್ದೇನೆ. ದೇವರ ಸ್ಮರಣೆಯ ನೆಪಕ್ಕೆ ಉದ್ದ ಎಷ್ಟಾದರು ಸಾಲದು, ಬರಿ ಅಷ್ಟಿಷ್ಟಿದ್ದರೂ ಸಾಕು - ಎಲ್ಲವು ಮನಸಿನಂತೆ ಮಹಾದೇವ ಅನ್ನುವ ಲೆಕ್ಕ ಅಲ್ಲವೆ ? ಪಂಕ್ತಿಯ ವ್ಯಾಖ್ಯಾನ, ವಿವರಣೆಗೆ ಸಮಯದ ಅಭಾವ - ಮುಂದೆಂದಾದರು ಮತ್ತೆ ಪ್ರಯತ್ನಿಸುವೆ. ಹಿನ್ನಲೆ / ಮುನ್ನುಡಿಯ ರೂಪದ ಮೂರು ಪದ್ಯಗಳನ್ನು ಜತೆಗೆ ಸೇರಿಸಿದ್ದೇನೆ :-)

ಹಿನ್ನಲೆ / ಮುನ್ನುಡಿ
____________________________________________

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || 01 ||

ಸೇವಕರ ತಪ್ಪಿಗೆ ಮಾಲೀಕನೆ, ಹೊತ್ತಂತೆ ಹೊಣೆ ಯಾತನೆ
ಭೂಭಾರವಿಳಿಸೆ ಅವತಾರವನೆತ್ತೊ, ಅಪೂರ್ವ ಸಂಘಟನೆ
ದುಷ್ಟರಾದರು ಸರಿ ದೂರವಿರಲಾರೆವೆಂದಾ ಜಯ ವಿಜಯ
ಅವರ ಕರ್ಮಕೆ ಭೂಲೋಕದಲಿ ಜನಿಸಿದ ಅದ್ಬುತ ವಿಷಯ || 02 ||

ಸ್ಥಿತಿಕರ್ತನ ತಪ್ಪೇನಿಲ್ಲಿ, ಕರುಣೆಯ ಕ್ಷೀರಸಾಗರ ಹೊನಲು
ಭಕ್ತರಂತೆ ಕೈಂಕರ್ಯದವರಿಗು ಹೃದಯವೈಶಾಲ್ಯ ಕಡಲು
ಮುಕ್ತರನಾಗಿಸಲವರನೆ ಪಡಬಾರದ ಪಾಡು ಭೂಲೋಕದೆ
ಭುವಿ ಮನುಜರ ಹಾಗೆ ನೋವು,ಬವಣೆ,ವಿಷಾದ,ಬೇಸರದೆ || 03 ||

ಶ್ರೀ ರಾಮನಾಗುವ ಸಂಕಟ 
_____________________________________________

ದುಃಖವೆ ಬದುಕಾಯ್ತೆ ಸೀತೆ, ಶ್ರೀ ರಾಮನದೇನು ಕಡಿಮೆ ಮಾತೆ?
ರಾಮನಾಗಿ ಬದುಕುವ ಸಂಕಟ, ಮರ್ಯಾದಾಪುರುಷೋತ್ತಮ ವ್ಯಥೆ || 01 ||

ಏಕ ಪತ್ನಿ ವ್ರತಸ್ತನ ಘನತೆ, ಸತಿ ದೂರವಿದ್ದರೂ ವಿರಹವಷ್ಟೆ ಜತೆ
ಹಿರಿಯ ಮಗನಾಗಿ ಹೊಣೆ ಹೆಗಲೇರಿತ್ತೆ, ರಾಜ ಮುಕುಟವೆ ಮಿತ್ತೆ? || 02 ||

ದಶರಥನಾಗುತ ಮುಪ್ಪು, ಮಕ್ಕಳಿಲ್ಲದ ಸಂಕಟ ಮನಸಿಗೆ ಹೆಪ್ಪು
ಯಜ್ಞಯಾಗದ ಫಲವೆ ತಂದಿತ್ತು, ಹಿರಿ ಮಗ ರಾಮನಾದ ತೀರ್ಪು || 03 ||

ತಪ ಜಪ ಯೋಗಿ ವಿಶ್ವಾಮಿತ್ರ, ಹನ್ನೆರಡರ ಬಾಲ ಸಹಪಾತ್ರ
ಯಜ್ಞ ಭಂಜಕರ ಸೊಕ್ಕಡಗಿಸಲೆ, ರಕ್ಕಸರ ಕಾಯುವ ನಿಮಂತ್ರ || 04 ||

ಸರಿ ಕಾದವನ ರೋಷಾವೇಷ, ದಮನಕೆ ಯಜ್ಞ ನಿರ್ವಿಘ್ನ ಹರ್ಷ
ಮುನಿವರ ಒಯ್ಯಲವರ ಮಿಥಿಲೆ, ಹಾದಿಯಹಲ್ಯೆ ಶಾಪನಾಶ || 05 ||

ಕಲ್ಲಾದವಳ ಪಾಡೆನೊ ಮುಕ್ತಿ, ಗೌತಮನ ಶಾಪದ ಸಮಾಪ್ತಿ
ಅವರಿವರುದ್ದಾರದ ಆಸಕ್ತಿ, ಮಾಡಲಿಲ್ಲೇಕೊ ಸ್ವಾರ್ಥಕೆ ಸ್ವಸ್ತಿ || 06 ||

ಮಿಥಿಲೆಗೆ ರಾಮ ಬರದೆ, ಶಿವಧನುಸನು ಸೀತಾ ಸ್ವಯಂವರದೆ
ಮುರಿದೆತ್ತದಿರೆ ಪ್ರಕರಣ, ವಿಶ್ವಾಮಿತ್ರನೆ ರಾಮಾಯಣ ಕಾರಣ || 07 ||

ಸ್ವಯಂವರಕೊಯ್ದವನವನು, ಬಿಲ್ಮುರಿಸಿ ಸೀತೆಯ ಕಟ್ಟಿದವನು
ನಿಮಿತ್ತವಾಗಿತ್ತೆ ಮಹರ್ಷಿ ಪಾತ್ರ, ಶ್ರೀಹರಿ-ಲಕ್ಷ್ಮಿಯ ಭೂಸಾಂಗತ್ಯ || 08 ||

ಹೆದೆಯೇರದೆ ಮುರಿದಾ ಬಿಲ್ಲು, ಜಾನಕಿಯ ವರಮಾಲೆ ಕೊರಳು
ಸೇರಿತಲ್ಲ ಅಪೂರ್ವಜೋಡಿ, ಭೂಲೋಕಕಿಳಿದ ವೈಕುಂಠಗಾರುಡಿ || 09 ||

ಸಂಭ್ರಮಕೆಣೆಯುಂಟೆ ಅಗಣಿತ, ವಿವಾಹಮಹೋತ್ಸವಕೆ ಸ್ವಾಗತ
ಅದ್ದೂರಿಯ ಸೀತಾಕಲ್ಯಾಣ, ಅಯೋಧ್ಯೆಯೆಲ್ಲ ಮಿಥಿಲಾ ಠಿಕಾಣ || 10 ||

ವೈಭವ ಕೇಳರಿಯದ ಮಾತ, ನ ಭೂತೋ ನ ಭವಿಷ್ಯದ ಚರಿತ
ರಾಜಕುವರಿ ವರಿಸಿದ ಶ್ರೀಕರ, ಅಗ್ನಿಸಾಕ್ಷಿ ಕಾಪಿಡುವ ಅಧಿಕಾರ || 11 ||

ಸಪ್ತಪದಿ ದಾಟಿದ ಸೀತೆ, ಶ್ರೀ ರಾಮನ ಜತೆಯಾದಳೆ ಪುನೀತೆ
ಹಿಗ್ಗು ಕುಗ್ಗಲೆಲ್ಲ ಜತೆಯಿರುವೆ, ಎಂದವರಿಗಿತ್ತೆ ಭವಿತದ ಅರಿವೆ? || 12 ||

ಸಂತಸ ಗಳಿಗೆಗಳೆ ಕ್ಷಣಿಕ, ಅವುಗಳಲೊಂದೀ ಮದುವೆಯ ಲೆಕ್ಕ
ಪಾಡುಪಟ್ಟ ಬಾಳಿನ ನಡುವೆ, ಸತಿಪತಿಗಳು ಪಡೆದದ್ದು ಕೊಂಚವೆ || 13 ||

ಸೋದರರಿಗು ಜತೆಯಲೆ ಮದುವೆ, ಮಾಡಿ ಮುಗಿಸಿ ಒಂದಾದುವೆ
ಲಕ್ಷ್ಮಣ ಶತೃಘ್ನ ಭರತ ಚತುರ್ಭುಜ, ಊರ್ಮಿಳಾದಿ ಬಳಗ ಸಹಜ || 14 ||

ಜಕ್ಕವಕ್ಕಿ ಜೋಡಿಯ ತೆರದೆ, ವಿಹರಿಸಿ ನವ ವಧುವರ ಕೂಡದೆ
ಹಾರಡುವ ಸಂಭ್ರಮ ಸುನೀತ, ನೋಡುತೆ ಮಹರಾಜನು ತೃಪ್ತ || 15 ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by H A Patil Sun, 03/29/2015 - 14:52

ನಾಗೇಶ ಮೈಸೂರುರವರಿಗೆ ವಂದನೆಗಳು
ಶ್ರೀ ರಾಮನಾಗುವ ಸಂಕಟವನ್ನು ಆತನ ಜನ್ಮ ದಿನದ ಶುಭ ದಿನದಂದು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ, ಸೊಗಸಾದ ಕವನ ದನ್ಯವಾದಗಳು.

Submitted by nageshamysore Sun, 03/29/2015 - 18:26

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಬರೆಯ ಹೊರಟಿದ್ದು ಸಂಕ್ಷಿಪ್ತವಾಗಿಯೆ ಆದರು, ಅದು ನೂರಾರು ಪಂಕ್ತಿಗಳನ್ನು ದಾಟತೊಡಗಿದಾಗ ತಾತ್ಕಲಿಕವಾಗಿ ನಿಲುಗಡೆ ಕೊಡಬೇಕಾಗಿ ಬಂತು. ಅದರಲ್ಲೆ ಮೊದಲ ಹದಿನೈದು ಪಂಕ್ತಿಗಳನ್ನು ಮಾತ್ರ ಶ್ರೀರಾಮನವಮಿಯ ಈ ಸಂಧರ್ಭಕ್ಕೆ ಸೂಕ್ತವೆನಿಸಿ ಪ್ರಕಟಿಸುದೆ. ತಮ್ಮ ಎಂದಿನ ಪ್ರೋತ್ಸಾಹಕರ ಮೆಚ್ಚುಗೆಗೆ ಅನಂತ ಧನ್ಯವಾದಗಳು :-)

Submitted by kavinagaraj Mon, 03/30/2015 - 08:21

ಸುಂದರವಾಗಿದೆ. ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಕಾಪಿ ಪುಸ್ತಕದಲ್ಲಿ 'ಶುದ್ಧ ಬ್ರಹ್ಮ ಪರಾತ್ಪರ ರಾಮ'ದಿಂದ ಆರಂಭವಾಗುವ ರಾಮಚರಿತ್ರೆಯನ್ನು ಅಕ್ಷರ ದುಂಡಾಗಲಿ ಎಂದು ಬರೆಯಿಸುತ್ತಿದ್ದುದು ನೆನಪಾಯಿತು. ಸಿರ್ಕಾಳಿ ಗೋವಿಂದರಾಜನ್ ಹಾಡಿದ 'ರಾಮನ ಅವತಾರ, ರಘುಕುಲ ಸೋಮನ ಅವತಾರ' ಎಂಬ ಚಿರನೂತನ ಹಾಡು ಸಹ ನೆನಪಿಗೆ ಬಂತು. ಧನ್ಯವಾದಗಳು.

Submitted by nageshamysore Tue, 03/31/2015 - 03:49

In reply to by kavinagaraj

ಕವಿಗಳೆ ನಮಸ್ಕಾರ. ಶೀರ್ಕಾಳಿ ಗೋವಿಂದರಾಜರ 'ರಾಮನ ಅವತಾರ, ರಘುಕುಲ ಸೋಮನ ಅವತಾರ' ನನ್ನ ನೆನಪಲ್ಲೂ ಸದಾ ಹಸಿರು - ಬಾಲ್ಯದಲ್ಲಿ ಮೈಕುಗಳಲ್ಲಿ, ರೇಡಿಯೊಗಳಲ್ಲಿ ಪದೇ ಪದೆ ಕೇಳುತ್ತಿದ್ದ ಹಾಡದು. ನನ್ನ ಸಂಬಂಧಿಕರೊಬ್ಬರು ನೋಟ್ ಪುಸ್ತಕದಲ್ಲಿ ರಾಮ ಕೋಟಿ ಬರೆಯಲು ಹೊರಟಿದ್ದು ಕಂಡು, ನಾನು ಬರೆಯಹೊರಟ ಸಾಹಸವೂ ನೆನಪಿಗೆ ಬರುತ್ತಿದೆ (ಅದು ಅಲ್ಲೆ ಎಲ್ಲೊ ನಿಂತುಹೋಯ್ತೆನ್ನುವುದು ಬೇರೆ ವಿಷಯ). ಮಾನವನ ಅವತಾರವೆತ್ತಿ ಸಾಮಾನ್ಯನಂತೆ ಬದುಕಿದ ಕಾರಣಕ್ಕೊ ಏನೊ, ರಾಮನ ಪ್ರಭಾವ ಒಂದಲ್ಲ ಒಂದು ರೀತಿ ನಮಗಾಗುತ್ತಲೆ ಇತ್ತು - ರಾಮ ಮಂದಿರಗಳ ಮೂಲಕವೊ, ರಾಮಾಯಣ ಪುಸ್ತಕಗಳಿಂದಲೊ, ಮನೆಯಲ್ಲಿಟ್ಟ ದೇವರ ಪೋಟೊಗಳಿಂದಲೊ... ನಿಮ್ಮ ಪ್ರತಿಕ್ರಿಯೆ, ಅದೆಲ್ಲ ನೆನಪನ್ನು ಮರುಕಳಿಸುವಂತೆ ಮಾಡಿತು. ಧನ್ಯವಾದಗಳು! :-)