ಶಿಕಾರಿ
ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಿ. ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ). ನಾನು ಓದಿದ್ದೂ ಅದೇ ಆವೃತ್ತಿಯನ್ನೇ. ಹಳೇ ಪುಸ್ತಕ, ಹೊಸ ಓದುಗ. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ ಕಾದಂಬರಿಯು ನನಗೆ ಅತ್ಯಂತ ಸುಖ ಸಮಾಧಾನ ತಂದ ಕೃತಿ” ಎಂದು ಹೇಳಿಕೊಂಡಿದ್ದಾರೆ. ಓದಿದ ಮೇಲೆ ಅದು ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುತ್ತದೆ ಎಂಬ ಭಾವನೆ ನಿಮಗೆ ಬರದಿದ್ದರೆ, ನಿಮಗೆ ಬಹುಶಃ ಸತ್ಯದ ಅಜೀರ್ಣ ಎಂದೂ ಆಗಿಲ್ಲವೆಂದೇ ಹೇಳಬಹುದು. ನಮ್ಮ ಮನಸ್ಸಿನ ಭಯಗಳನ್ನು, ದೌರ್ಬಲ್ಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಎಷ್ಟೆಲ್ಲಾ ರೀತಿಯಲ್ಲಿ ‘ಮರೆಮಾಚುವ’ ಕಲೆಯನ್ನು ನಾವು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳುತ್ತಾ ಬರುತ್ತೇವಲ್ಲವೇ? ಬೆಳೆಯುತ್ತಾ ಹೋದಂತೆ ಸತ್ಯವನ್ನು ಔಷಧಿಯ ರೂಪದಲ್ಲಿ ಮಾತ್ರ ಬಳಸಿಕೊಳ್ಳಲು ಕಲಿಯುತ್ತೇವೆ. ಒಮ್ಮೆ ಸತ್ಯವನ್ನು ಪಾಯಸವಾಗಿ, ತೊವ್ವೆಯಾಗಿ, ಗೊಜ್ಜಾಗಿ, ಹೋಳಿಗೆಯಾಗಿ, ಅನ್ನವಾಗಿ…ಇನ್ನೂ ಏನೆಲ್ಲಾ ರೂಪದಲ್ಲಿ ಸೇರದಿದ್ದರೂ ಬಾಯಿಗೆ ತುರುಕಿಕೊಂಡರೆ, ಅಥವಾ ಹೊಟ್ಟೆಗೆ ಸುರಿದುಕೊಂಡರೆ ಏನಾಗಬಹುದು? “ಶಿಕಾರಿ” ಕಾದಂಬರಿಯ ಕೇಂದ್ರ ಪಾತ್ರ ನಾಗಪ್ಪ (ಉರುಫ಼್ ಪ್ರೊಫ್. ನಾಗನಾಥ) ಅನುಭವಿಸುವ ಮೈಮನ ನವಿರೇಳಿಸುವ, ಮೃದುವಿರೇಚಕ ಸತ್ಯದ ಪರಿಚಯ (ಅಥವಾ ಶೋಧ) ಓದುಗನ ಮೇಲೂ ಗಾಢವಾದ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ.
ಕಾದಂಬರಿಯಲ್ಲಿ ಅನೇಕ ಬಾರಿ “ಶಿಕಾರಿ ಯಾರು/ಯಾವುದು?”, “ಶಿಕಾರಿಗೆ ಹೊರಟವರಾರು?ಹೊರತಾದವರಾರು?”, “ಶಿಕಾರಿ ಎಂದರೆ ಏನು?” ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಅವುಗಳಿಗೆ ಉತ್ತರವೂ ಸಿಕ್ಕಂತಾಗುವಷ್ಟರಲ್ಲೇ, ಅಧ್ಯಾಯದಿಂದ ಅಧ್ಯಾಯಕ್ಕೆ ಉತ್ತರಗಳು ಬದಲಾಗುತ್ತಾ ಹೋಗುತ್ತವೆ. ಈ ತೆರನಾದ ಬಿಗಿ, ಉತ್ಸುಕತೆಯನ್ನು ಕಾಯ್ದುಕೊಳ್ಳುವ ಉತೃಷ್ಟ ಕಾದಂಬರಿ ಚಿತ್ತಾಲರ “ಶಿಕಾರಿ”. ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ಹೇರಳವಾದ ಅವಕಾಶ ಒದಗಿಸುತ್ತಾ, ಅದರ ಜೊತೆ-ಜೊತೆಗೇ ಲೌಕಿಕ ಲೆಕ್ಕಾಚಾರಗಳ ಭ್ರಷ್ಟ ಅಂತರಂಗವನ್ನು ತೆರೆದಿಡುವ ಪ್ರಯತ್ನದಲ್ಲಿ “ಶಿಕಾರಿ” ಮತ್ತಷ್ಟು ಜಟಿಲವಾಗುತ್ತದೆ, ಅಷ್ಟೇ ಸ್ನೇಹ ಪೂರ್ವಕವಾಗಿ ಓದಿಸಿಕೊಳ್ಳುತ್ತದೆ.
“ಶಿಕಾರಿ”ಯ ಪಾತ್ರಗಳು ಆಡುವ ಒಂದೊಂದು ಮಾತಿಗೂ ಇರುವ ಸಾಂದರ್ಭಿಕ ಹಿನ್ನೆಲೆ ಮತ್ತು ತಾರ್ಕಿಕ ನೆಲೆಯು ಕಾದಂಬರಿಯನ್ನು ಸಂಪೂರ್ಣವಾಗಿ ಓದಿ ಮುಗಿಸಿದ ಮೇಲೆ ನಮ್ಮ ಅರಿವಿಗೆ ಬರಲಾರಂಭಿಸುತ್ತವೆ. ಅದರಲ್ಲೂ ಮುಖ್ಯಪಾತ್ರ ನಾಗಪ್ಪನ ಮಾತುಗಳು ಮನಸ್ಸಿನಾಳದಲ್ಲಿ ಉಳಿಯುತ್ತವೆ. ಉದಾ: ನಾನು ಶೀರ್ಷಿಕೆಯಲ್ಲಿ ಬಳಸಿರುವ “ಸತ್ಯದ ಅಜೀರ್ಣ” ಎಂಬ ಪದಪುಂಜವೂ ನಾಗಪ್ಪನದೇ (ಪುಟ ೨೪೮). ನಾವು ನಮ್ಮ ಜೀವನದಲ್ಲಿ ತೆಗೆದುಕೊಳ್ಳುವ ಅನೇಕ ಪ್ರಮುಖ ನಿರ್ಧಾರಗಳ ಹಿಂದೆ ಸತತ ಧ್ಯಾನದ, ತಿಂಗಳುಗಟ್ಟಲೆ ಪಟ್ಟ ಶ್ರಮದಾಯಕ ತಯಾರಿಯ ಬಲ ಮತ್ತು ಛಲಗಳಿರುತ್ತವೆ. ಆ ನಿರ್ಧಾರದ ಆಕರ್ಷಣೆಯು ನಮ್ಮ ತಯಾರಿಗೆ ಯಾಗ ಸ್ವರೂಪವನ್ನು ತಂದುಕೊಡುತ್ತದೆ. ಆಗ ನಾವಾಡುವ ಒಂದೊಂದು ಮಾತಿಗೂ “ಮಂತ್ರೋಚ್ಚಾರದ ಧಾಟಿ” ಬರುತ್ತದೆ (ಪುಟ ೧೦೮). ನಾಗಪ್ಪನ ಮನಸ್ಸಿನ ಬೆಳವಣಿಗೆಗಳನ್ನು ವಿಶದಪಡಿಸುವಾಗ ಚಿತ್ತಾಲರು ಮಾಡುವ ಅಪೂರ್ವ ಭಾಷಾ ಪ್ರಯೋಗಗಳೂ, ಮಾನಸಿಕ ಅಧ್ಯಯನದ ಹೊಳಹುಗಳೂ “ಶಿಕಾರಿ”ಯನ್ನು ಉತ್ತಮದಿಂದ ಅತ್ಯುತ್ತಮದ ಸಾಲಿಗೆ ಒಯ್ಯುತ್ತವೆ.
ವಿಜ್ಞಾನದಲ್ಲಿ ಒಲವಿರುವವರಿಗೆ “ಶಿಕಾರಿ” ನಿಜವಾಗಿಯೂ ಒಳ್ಳೆಯ ಓದು. ಜೀವ ವಿಕಾಸವಾದ, ರಸಾಯನ ವಿಜ್ಞಾನದ ಹಿನ್ನೆಲೆ ಅಲ್ಲಲ್ಲೇ ಇಣುಕು ಹಾಕುತ್ತವೆ, ಆದರೆ ಅವೇ ಕಾದಂಬರಿಯ ಕೇಂದ್ರವಾಗುವುದಿಲ್ಲ. ಚಿತ್ತಾಲರು ಅಲ್ಲಲ್ಲೇ ಅನೇಕ ಪಾಶ್ಚಿಮಾತ್ಯ ಲೇಖಕರ, ಚಿಂತಕರ ವಿಚಾರಧಾರೆಗಳನ್ನು ಓದುಗನಿಗೆ ಎಲ್ಲೂ ತತ್ವಬೋಧೆಯ ಅಜೀರ್ಣ ಆಗದ ಹಾಗೆ ಉಪಯೋಗಿಸಿಕೊಳ್ಳುವುದು ಅದ್ಭುತವಾಗಿದೆ. ಓದುಗರಿಗೆ ಆ ಲೇಖಕರಲ್ಲಿ ಯಾರ ಪರಿಚಯವಾಗಲೀ ಅಥವಾ ಅವರ ಬರವಣಿಗೆಗಳ ಓದಾಗಲೀ ಬೇಕಾಗಿಲ್ಲ (ನಾನೂ ಯಾರನ್ನೂ ಓದಿಲ್ಲ). “ಶಿಕಾರಿ” ಯಾವುದನ್ನೂ ಬೋಧಿಸುವುದಿಲ್ಲ, ಯಾರನ್ನೂ ಅನುಮೋದಿಸುವುದಿಲ್ಲ, ಅಥವಾ ಯಾವುದನ್ನೂ ಕಟ್ಟಾಗಿ ಪ್ರತಿಪಾದಿಸುವುದಿಲ್ಲ. ಮನುಷ್ಯನ ಮನಸ್ಸಿನ ನಾಗಾಲೋಟಗಳ ಮಧ್ಯೆ ಅಲ್ಲಲ್ಲಿ ನಿಂತು, ಸುಧಾರಿಸಿಕೊಳ್ಳುವಂತೆ ಮಾಡಿ, ಆ ಕ್ಷಣದಲ್ಲಿ ಓಟದ ಆಯಾಸ ಮರೆತಂತೆ ಮಾಡಿಸಿ, ಮರುಕ್ಷಣದಲ್ಲಿ ಲಕ್ಷ-ಲಕ್ಷ ಜ್ಯೋತಿರ್ವರ್ಷಗಳನ್ನು ಕ್ರಮಿಸುವ ಅಪ್ರತಿಮ ಬರವಣಿಗೆ ಚಿತ್ತಾಲರ “ಶಿಕಾರಿ”.
ನಾನು “ಶಿಕಾರಿ”ಯ ಪರಿಚಯ ಮಾಡುವ ಭರದಲ್ಲಿ ಅದರ ಕಥಾ ಸ್ವಾರಸ್ಯವನ್ನೋ ಅಥವಾ ಪಾತ್ರ ಸೂಕ್ಷ್ಮಗಳನ್ನೋ ಹೇಳುವ ಅಪಾಯವಿದೆ. ಅದು ನನಗೆ ಬೇಕಿಲ್ಲ. ಅದನ್ನು ನೀವೇ ಓದಿ ತಿಳಿದುಕೊಳ್ಳಿ. ನನ್ನ ಮೇಲಿರುವ ಎಲ್ಲಾ ಒತ್ತಡಗಳ ನಡುವೆಯೂ (ನಿಮಗೆ ಇನ್ನಷ್ಟು ಹೇಳಬೇಕೆಂಬ ಆತುರದ ನಡುವೆಯೂ) ನನ್ನ ನಿಲುವಿಗೆ ಅಂಟಿಕೊಳ್ಳುವ ಶಿಕಾರಿ ನಾನಾಗುವ ಪ್ರಯತ್ನ ಮಾಡುತ್ತಾ ಇಲ್ಲಿಗೆ ನನ್ನ ಬರಹವನ್ನು ಮುಗಿಸುತ್ತೇನೆ (ಪುಟ ೯೬ ನೋಡಿ).
Comments
ಉ: ಶಿಕಾರಿ
ಉತ್ತಮ ವಿಮರ್ಶೆ(ಶಿಕಾರಿಯ ಶಿಕಾರಿ?) ಪುಸ್ತಕವನ್ನು ಓದಲು ಪ್ರೇರಿಸುತ್ತಿದೆ. ಧನ್ಯವಾದಗಳು.